ಮಕ್ಕಳ ಕೈಯಲ್ಲಿ ಮೊಬೈಲ್ ಎಷ್ಟು ಸುರಕ್ಷಿತ ?

ಮಕ್ಕಳ ಕೈಯಲ್ಲಿ ಮೊಬೈಲ್ ಎಷ್ಟು ಸುರಕ್ಷಿತ ?

ನವಂಬರ ತಿಂಗಳು ಬಂದಾಗ ನಮಗೆಲ್ಲ ನೆನಪಾಗುವುದು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಆಚರಣೆಗಳು, ನಮ್ಮ ಸನಾತನ ಸಂಸ್ಕೃತಿಯಲ್ಲಿ ಆದಿ ಅನಾದಿ ಕಾಲದಿಂದಲೂ ಹಬ್ಬ ಹರಿದಿನಗಳನ್ನು ಮಾಡುವುದು, ಜಯಂತಿಗಳು, ಉತ್ಸವಗಳು, ಆ ತಿಂಗಳುಗಳಿಗೆ ಸಂಬಂಧಿಸಿದಂತೆ ನಡೆಸಿಕೊಂಡು ಬಂದಿರುವ ಆಚರಣೆಗಳು ಸ್ಮರಣಾರ್ಥವಾಗಿರುತ್ತವೆ,

ನವೆಂಬರ್ 14 ಎಂದಾಗ ನಮೆಗೆಲ್ಲ ಥಟ್ ಅಂತ ನೆನಪಾಗುವುದು ಮಕ್ಕಳ ದಿನಾಚರಣೆ, ಜವಾಹರ ಲಾಲ್ ನೆಹರುರವರು ತಮ್ಮ ಹುಟ್ಟು ಹಬ್ಬದ ಆಚರಣೆಯನ್ನು ಆಚರಿಸುವ ಬದಲು ಅವರು ತಮ್ಮ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವಂತೆ ಘೋಷಣೆ ಮಾಡಿರುವುದು ನಿಜಕ್ಕೂ ಅವಿಸ್ಮರಣೀಯ ಮತ್ತು ಶ್ಲಾಘನೀಯವಾಗಿದೆ.

ನೆಹರು ಅವರಿಗೆ ಮಕ್ಕಳೆಂದರಿರೆ ಬಹಳ ಪ್ರೀತಿ,ಎಲ್ಲಿಲ್ಲದ ಮಮತೆ ಮತ್ತು ವಾತ್ಸಲ್ಯ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಕ್ಕಳನ್ನು ದೇವರ ಸಮಾನರು ಎನ್ನುವ ವಾಡಿಕೆ ಇದೆ, ಮಕ್ಕಳ ಮನಸ್ಸು ಶುಭ್ರ, ನಿರ್ಮಲ, ಮೃದು, ನಯ ನಾಜುಕಾಗಿರುತ್ತದೆ. ಅದಕ್ಕಾಗಿ ಹೇಳುವುದು ಮಕ್ಕಳ ಲಾಲನೆ – ಪಾಲನೆ – ಪೋಷಣೆಯಲ್ಲಿ ಎಲ್ಲಾ ತಂದೆ -ತಾಯಿಯರ ಪಾತ್ರ ಬಹು ಮುಖ್ಯವಾಗಿರುತ್ತದೆ, ಏಕೆಂದರೆ ನಾವು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಬಗ್ಗೆ ಅರಿವನ್ನು ಮೂಡಿಸುತ್ತಾ ಬಂದಿದ್ದೇ ಆದರೆ ನಮ್ಮ ಮಕ್ಕಳು ಮುಂದೆ ತಮ್ಮ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವುದರಲ್ಲಿ ಯಾವುದೇ ಎರಡು ಮಾತಿಲ್ಲ, ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ. ನಮ್ಮ ಭಾರತ ದೇಶ ಸಂಸ್ಕಾರ ಮತ್ತು ಸಂಸ್ಕೃತಿಗೆ ಹೆಸರಾಂದಂತ ರಾಷ್ಟ್ರ. ಇಡೀ ಜಗತ್ತಿನಲ್ಲಿ ಯಾವ ರಾಷ್ಟ್ರಗಳಲ್ಲಿಯೂ ನಮ್ಮ ದೇಶದಲ್ಲಿ ಇರುವಂತ ಸಂಸ್ಕೃತಿ, ಪದ್ಧತಿಗಳನ್ನು ಅಷ್ಟಾಗಿ ಕಾಣುವುದಿಲ್ಲ, ಇಂತಹ ಭವ್ಯ ಪರಂಪರೆ ಹೊಂದಿರುವಂತ ದೇಶದಲ್ಲಿ ನಾವು ಜನ್ಮ ಪಡೆದುಕೊಂಡಿದ್ದೇವೆ ಎಂದರೆ ನಿಜಕ್ಕೂ ನಾವು ಪುಣ್ಯವಂತರು, ಧನ್ಯರು, ಏಕೆಂದರೆ ಭರತ ಭೂಮಿಯ ಮಣ್ಣಿನಲ್ಲಿ ಅಷ್ಟೊಂದು ಶಕ್ತಿ ಇದೆ, ಭಾರತಾಂಭೇಯ ಮಡಿಲಲ್ಲಿ ಇರುವಂತ ನಾವೆಲ್ಲರೂ ನಮ್ಮ ಮಕ್ಕಳ ಬೆಳೆವಣಿಗೆಯ ಕಡೆಗೆ ಹೆಚ್ಚು ಆದ್ಯತೆ ನೀಡಬೇಕು, ನಮ್ಮ ದೇಶ ಕುಟುಂಬ ಪರಂಪರೆ ಹೊಂದಿದೆ,ಬಂಧುತ್ವ ಭಾಂದವ್ಯ, ಹಿರಿಯರು ಕಿರಿಯರು ಎನ್ನುವಂತ ಚೌಕಟ್ಟಿನಲ್ಲಿ ನಾವು ಜೀವನವನ್ನು ಸಾಗಿಸುತ್ತಿದ್ದೇವೆ, ಅಂದ ಮೇಲೆ ನಮ್ಮ ಮಕ್ಕಳಿಗೆ ತಕ್ಕ ಮಟ್ಟಿಗಾದರು ಆಗಾಗ ಮನೆ, ಬೆಳೆಯುವಂತ ಪರಿಸರ, ನೈತಿಕ ಮೌಲ್ಯಗಳ ಬಗ್ಗೆ ತಿಳಿಸಬೇಕು, ಜೀವನದ ಮೌಲ್ಯಗಳ ಬಗ್ಗೆ ಅರ್ಥೈಸ ಬೇಕಾಗುತ್ತದೆ, ಅಂದಾಗ ಮಾತ್ರ ನಮ್ಮ ಮಕ್ಕಳು ತಪ್ಪು ದಾರಿಯಿಡಿವುದಿಲ್ಲ, ಒಳ್ಳೆಯ ಮಾರ್ಗದಲ್ಲಿ ಸಾಗುತ್ತಾರೆ, ಇತ್ತೀಚಿನ ದಿನಗಳಲ್ಲಿ ಆಧುನೀಕರಣದ ಪ್ರಭಾವದಿಂದಾಗಿ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಯಾಂತ್ರಿಕ ಉಪಕರಣಗಳ ಬಳಕೆಯಿಂದ, ಪಾಲಕರು ತಮ್ಮ ಕೆಲಸ ಒತ್ತಡಗಳಿಂದಾಗಿ ಮಕ್ಕಳ ಕಡೆಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ, ಇದರ ಪರಿಣಾಮವಾಗಿ ಮಕ್ಕಳು ಮೊಬೈಲ್ ಬಳಕೆಯಲ್ಲಿ ಹೆಚ್ಚು ತಲ್ಲೀ ನರಾಗಿ ಬಿಟ್ಟಿರುತ್ತಾರೆ,

 

ಮನುಷ್ಯ ಇಂದು ತಂತ್ರಜ್ಞಾನ ಬೆಳೆದಂತೆ ತನ್ನ ಅಸಾಮಾನ್ಯವಾದ ಬುದ್ಧಿಮತ್ತೆಯಲ್ಲಿ ಉಳಿದೆಲ್ಲ ಜೀವರಾಶಿಗಳಿಗಿಂತ ಭಿನ್ನವಾಗಿದ್ದಾನೆ. ಬಹಳ ಹಿಂದೆ ಒಂದು ಮಾತಿತ್ತು, ಅದೇನೆಂದರೆ “ಆಡು ಮುಟ್ಟದ ಸೊಪ್ಪಿಲ್ಲ “ಅಂತ ಆದರೆ ಈಗ ಅದನ್ನು “ಮೊಬೈಲ್ ಬಳಸದ ಜನರಿಲ್ಲ ” ಎಂದು ಬದಲಾಯಿಸುವ ಕಾಲ ಬಂದಿದೆ ಎಂದರೆ ತಪ್ಪಾಗಲಾರದು.ಈ ಮೊದಲು ಸಮಯ ಕಳೆಯಲು ನಾವೆಲ್ಲ ದೂರದರ್ಶನ, ರೇಡಿಯೋ, ಕಥೆ , ಕಾದಂಬರಿಗಳನ್ನು ಓದುವ, ನೋಡಲು ಮೊರೆ ಹೋಗುತ್ತಿದ್ದ ಜನರು ಇಂದು ಮಕ್ಕಳು ಸಹ ಊಟ, ತಿಂಡಿಯನ್ನು ಬೇಕಾದರೂ ಬಿಡಬಲ್ಲರು ಆದರೆ ಮೊಬೈಲ್ ಇಲ್ಲದೆ ಹತ್ತು ನಿಮಿಷ ಕೂಡ ಇರಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ನಾಣ್ಯಕ್ಕೆ ಯಾವತ್ತಿಗೂ ಎರಡು ಮುಖವಿರುತ್ತದೆ, ಹಾಗೆಯೇ ಮನುಷ್ಯ ಎಷ್ಟೇ ಬುದ್ಧಿವಂತಿಕೆಯಿಂದ ಹೊಸ ಆವಿಷ್ಕಾರಗಳನ್ನು ಮಾಡಿದರು ಸಹ ಅದರಲ್ಲಿ ಯಾವುದಾದರೂ ಕುಂದುಕೊರತೆ ಇದ್ದೇ ಇರುತ್ತದೆ, ಆದರೆ ಅದರ ಪರಿಣಾಮ ಮಾತ್ರ ನಮಗೆ ಕಂಡುಬರುವುದು ತಡವಾಗಿಯೇ ,ಈ ಮೊಬೈಲ್ ಎಂಬ ಮಾಹೆ ನಮ್ಮನ್ನು ಕ್ಷಣದಲ್ಲಿಯೇ ಯಾರಿಗೆ ಬೇಕೋ ಅವರಿಗೆ ತಕ್ಷಣವೇ ಸಂಪರ್ಕಿಸುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಲಿವೆ. ಇದಕ್ಕೆಲ್ಲ ಕಾರಣ ಮೊಬೈಲ್ ಎಂಬ ಉಪಕರಣ, ಮಕ್ಕಳು ಯಾರನ್ನು ಹೇಗೆ ಮಾತನಾಡಿಸಬೇಕು, ಹೇಗೆ ವರ್ತಿಸಬೇಕು, ಹೇಗೆ ಸಂಯಮದಿಂದ ನಡೆದುಕೊಳ್ಳಬೇಕು, ಹಿರಿಯರಿಗೆ ಹೇಗೆ ಗೌರವವನ್ನು ಸಲ್ಲಿಸಬೇಕು,ಎನ್ನುವುದನ್ನು ಇಂದಿನ ಮಕ್ಕಳಲ್ಲಿ ಕಾಣುವುದು ವಿರಳವಾಗಿರುತ್ತದೆ. ಈ ಎಲೆಕ್ಟ್ರಾನಿಕ್ ಯುಗದಲ್ಲಿ ಮೊಬೈಲ್ ಕ್ರಾಂತಿಯನ್ನೇ ಉಂಟುಮಾಡಿದೆ.

:ಮೊಬೈಲನಿಂದ ಬರುವ ತರಂಗಗಳಿಂದ ಹೃದಯಸಂಬಂಧಿ ಕಾಯಿಲೆ, ದೃಷ್ಟಿದೋಷ ಹಾಗು ಮಿದುಳಿನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿರುತ್ತದೆ. ಇದರಿಂದ ಮಕ್ಕಳಲ್ಲಿ ಓದಿನಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಮಕ್ಕಳು ಕೆಲವು ಅಪಾಯಕಾರಿ ಗೇಮ್ಗಳನ್ನು ಆಡುತ್ತಾ ತಮ್ಮ ಪ್ರಾಣವನ್ನು ಸಹ ಕಳೆದುಕೊಳ್ಳುತ್ತಲಿರುವ ಮಕ್ಕಳ ಸಂಖ್ಯೆ ದೊಡ್ಡದಾಗಿದೆ,” ತಲೆ ತಗ್ಗಿಸಿ ನನ್ನ ನೋಡು, ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ “ಎಂದು ಪುಸ್ತಕ ಹೇಳಿದರೆ,” ತಲೆ ತಗ್ಗಿಸಿ ನನ್ನ ನೋಡು, ಮತ್ತೆ ತಲೆ ಎತ್ತದಂತೆ ಮಾಡುತ್ತೇನೆ “ಎಂದು ಮೊಬೈಲ್ ಹೇಳುತ್ತದೆ. ಇದೇ ನಮಗೆ ಇಂದು ವಿಪರ್ಯಾಸವಾಗಿರುತ್ತದೆ. ಅದಕ್ಕಾಗಿ ಮೊದಲು ದೊಡ್ಡವರು ಮಕ್ಕಳ ಮುಂದೆ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಬೇಕು, ನಾವು ಏನನ್ನು ಮಾಡುತ್ತೇವೊ ಅದನ್ನು ಮಕ್ಕಳು ಅನುಕರಣೆ ಮಾಡುತ್ತಾರೆ, ಮಕ್ಕಳಿಗೆ ಚಿತ್ರಬಿಡಿಸುವ, ಹಾಡು ಹಾಡುವ, ಓದುವ, ಬರೆಯುವುದರಲ್ಲಿ ಆಸಕ್ತಿ ಮೂಡಿಸಬೇಕು, ಮನೋರಂಜನೆಗಾಗಿ ಪಾರ್ಕ್, ಕ್ರೀಡೆ, ಆಟೋಟಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪ್ರೇರೇಪಿಸಬೇಕು.

ಮೊಬೈಲ್ ಬಳಕೆ ಯಥೇಚ್ಚವಾಗಿದುದ್ದರಿಂದ ಜನರು ಪ್ರಯಾಣಿಸುವ ಸಂಧರ್ಭದಲ್ಲಿಯು ಕೂಡ ಮೊಬೈಲ್ ಬಳಸುವುದರಿಂದ ಇಂದು ಹೆಚ್ಚು ಅಪಘಾತಗಳು ಉಂಟಾಗಲು ಕಾರಣವಾಗಿದೆ, ಇಂತಹ ಸಮಯದಲ್ಲಿ ಮೊಬೈಲ್ ಬಳಕೆಯನ್ನು ಸರ್ಕಾರ ಕಟ್ಟುನಿಟ್ಟಾಗಿ ನಿಷೇದಧಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ, ಅಲ್ಲದೇ ಮಕ್ಕಳು ತಮಗೆ ಬೇಕಾದ ವಿಷಯಗಳ ಬಗ್ಗೆ ಸಂದೇಹ, ಮಾಹಿತಿ ಬೇಕಾದಲ್ಲಿ ಮೊದಲು ಹಿರಿಯರನ್ನು, ಗುರಗಳನ್ನು, ಅನುಭವಿಗಳನ್ನು, ಮಹಾನ್ ಜ್ಞಾನಿಗಳನ್ನು ಕೇಳಿ ತಿಳಿದುಕೊಳ್ಳುವ ಅವಶ್ಯಕತೆ ಆಗಿತ್ತು, ಈಗ ಕ್ಷಣಾರ್ಧದಲ್ಲಿ ಗೂಗಲ್ ಮುಖಾಂತರ ಮಾಹಿತಿಯನ್ನು ಪಡೆದುಕೊಳ್ಳುತ್ತಾಲ್ಲಿದ್ದಾರೆ ಇಂದಿನ ಆಧುನಿಕ ಯುಗದ ಮಕ್ಕಳು, ಅಂದರೆ ಬಹಳ ಚಾಣಾಕ್ಷರು, ಹಾಗು ಚತುರರಾಗಿದ್ದಾರೆ. ಮೊಬೈಲ್ ಬಂದ ನಂತರ ಲ್ಯಾಂಡ್ಲೈನ್ ಜಂಗಮ ವಾಣಿ ಸೇವೆ ಮತ್ತು ಅಂಚೆ ಸೇವೆಗಳು ಗಣನೀಯವಾಗಿ ಕಡಿಮೆಯಾಗಿವೆ. ನಿಮಿಷಗಳಲ್ಲಿ ವಿಷಯಗಳು ಒಬ್ಬರಿಂದ ಒಬ್ಬರಿಗೆ ಕ್ಷಣಾರ್ಧದಲ್ಲಿ ಅತೀ ವೇಗವಾಗಿ ಸಂದೇಶಗಳು ತಲುಪಿಬಿಡುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ ಮೊಬೈಲ್ ಬಂದು ಎಲ್ಲರನ್ನು ಒಟ್ಟು ಕೂಡಿಸಿದರೆ, ಇನ್ನೊಂದು ಕಡೆ ಬೇರೆ ಬೇರೆ ಮಾಡಲು ಸಹ ಸಾಧ್ಯವಾಗಿರುತ್ತದೆ, ಇದು ಒಂದು ಸಾಮಾಜಿಕ ಸಂಪರ್ಕ ಸಾಧನವಾಗಿ ಹೇಗೆ ಕಾರ್ಯ ನಿರ್ವಹಿಸುತ್ತಿದೆಯೋ ಅಷ್ಟೇ ಮನುಷ್ಯನ ಮಾನಸಿಕ, ಭೌದ್ಧಿಕ ಹಾಗು ಅರೋಗ್ಯದ ಮೇಲು ಅಷ್ಟೇ ಪರಿಣಾಮಕಾರಿಯಾಗಿರುತ್ತದೆ, ಆದ್ದರಿಂದ ನಾವು ವಿದ್ಯುತ್ ಇಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲವೊ, ಅದೇ ರೀತಿ ಮೊಬೈಲ್ ಇಲ್ಲದೇ ಜೀವನ ನಡೆಸಲು ಸಾಧ್ಯವಿಲ್ಲ, ಸಂವಹನಕ್ಕೆ ಅತ್ಯಂತ ಅವಶ್ಯಕ ಮತ್ತು ಅನಿವಾರ್ಯವೂ ಕೂಡ, ಅದಕ್ಕಾಗಿ ಮೊಬೈಲ್ ಮಕ್ಕಳು ಉಪಯೋಗಿಸುವಿಕೆ ಹಿತವಾಗಿರಬೇಕು, ಮಿತವಾರಬೇಕು, ಮಾದರಿಯಾಗಿರಬೇಕು, ಅಂದಾಗ ನಮ್ಮ ಮಕ್ಕಳು ಸಮಾಜದಲ್ಲಿ ಶ್ರೇಷ್ಠ ಆದರ್ಶ ವ್ಯಕ್ತಿತ್ವವನ್ನು ರೂಢಿಸಿ ಕೊಳ್ಳುವಲ್ಲಿ ಸಾಧ್ಯವಾಗುತ್ತದೆ.

ಶ್ರೀಮತಿ ರೇಖಾ ಶಿವಯೋಗಿ ವಡಕಣ್ಣವರ್ ಲಕ್ಷ್ಮೇಶ್ವರ

Don`t copy text!