ನರಿಯ ಮದುವೆ

ಕತೆ-೫

ನರಿಯ ಮದುವೆ

ಲೇಖಕರು-ಗುಂಡುರಾವ್ ದೇಸಾಯಿ ಮಸ್ಕಿ

“ಅಜ್ಜ ಅಜ್ಜ ಒಂದು ಕಥೆ ಹೇಳು” ಎಂದು ಮಕ್ಕಳು ಓಡೋಡಿ ಬಂದು ಕುಳಿತರು
“ಯಾವ ಕಥೆ ಹೇಳಲಿ ಮಕ್ಕಳೆ?”
“ಯಾವುದಾದರೂ ಒಂದು” ಎಂದ ಗಿರಿ
“ನೀವೇ ಹೇಳಿ ಯಾವುದರ ಬಗ್ಗೆ?”
“ನರಿಯ ಬಗ್ಗೆ ಹೇಳು ಅಜ್ಜ” ಎಂದಳು ಗೀತಾ
“ಹಾಂ….ಅಜ್ಜ ಬಿಸಿಲಲ್ಲಿ ಮಳೆಬಂದಾಗ ನರಿಯ ಮದುವೆಯಾಯಿತು ಅಂತ ಹೇಳ್ತಿವಲ್ಲ ಅದರ ಬಗ್ಗೆ ಹೇಳು ಕಥೆ ಅಜ್ಜ” ಎಂದಳು ಅನು
“ಓ……! ಅದಾ ನರಿಯ ಮದುವೆ ಬಗ್ಗೆ ಹೇಳುವೆ ಕೇಳ್ತಿರಾ?”
“ಹ್ಞುಂ ಅಜ್ಜಾ” ಎಂದು ಎಲ್ಲರೂ ತಲೆ ಅಲ್ಲಾಡಿಸಿದರು.
“ಹಿಂದೆ ನರಿಗಳು ನಾಯಿಗಳೊಂದಿಗೆ ಊರೊಳಗೆ ವಾಸಮಾಡತಿದ್ವು…”
“ನರಿಗಳು…….ಊರೊಳಗಾ……..!” ಆಶ್ವರ್ಯದಿಂದ ಕೇಳಿದಳು ಅನು
“ಹೌದಮ..ಊರೊಳಗೆ”
“ಅವು ಏನು ಮಾಡತಿರಲಿಲ್ಲವಾ?” ಎಂದ ಸಮು
“ನಾಯಿ ಏನಾದರೂ ಮಾಡತಾವಾ ಹಾಗೆ ಅವು ಇದ್ದವು. ಆದರ ಅದರ ಮೆದಳು ಶಾರ್ಪ ಗೊತ್ತಲ್ಲ?”
“ಹೌದಜ್ಜ ನರಿ ಬುದ್ಧಿವಂತಿಕೆಗೆ ಹೆಸರಾದ ಪ್ರಾಣಿ” ಎಂದಳು ಗೀತಾ
“ಅದರಲ್ಲಿ ಒಂದು ತುಂಬಾ ಶಾರ್ಪ ಆದ ನರಿ……ಈಗ ಕಥೆ ಸ್ಟಾರ್ಟ ಮಾಡತಿನಿ. ಅಡ್ಡ ಮಾತಾಡಬಾರದು”
“ಓ.ಕೆ ಅಜ್ಜ” ಎಂದರು ಎಲ್ಲರೂ
ಆ ನರಿ ಊರಲ್ಲಿ ನಡೆಯುತ್ತಿದ್ದ ಜನರ ಮದುವೆ ನೋಡುತ್ತಿತ್ತು. ಅದ್ಯಾಕ ಹುಚ್ಚ ಬಂತೋ ಆ ಮದುವೆ ವೈಭವ ನೋಡಿ ಅದೇ ರೀತಿ ತಾನು ಆಗಬೇಕೆಂದು ಬಯಸಿತು. ಅದನ್ನು ಯಾರ ಮುಂದ ಹೇಳೊದು….? ತನ್ನ ಕುಲಬಾಂಧವರಿಗೆಲ್ಲ ಹೇಳಿತು. ಅವರೆಲ್ಲ “ಎಂತಹ ಹುಚ್ಚಯ್ಯ ನಿಂದು. ಆಸೆ ಈಡೇರೋ ಕನಸು ಕಾಣಬೇಕು ಅದು ಬಿಟ್ಟು ಇಂತಹ ಕನಸೆಲ್ಲ ಕಾಣೊದಾ?” ಅಂತ ಹಿರಿಯ ನರಿಗಳು ಬೈದವು. ಉಳಿದ ಗೆಳೆಯರು ಗೇಲಿ ಮಾಡಿದವು. ಮನುಷ್ಯರಂಗ ಲಗ್ನ ಮಾಡಿಕೊ ಬೇಕಂತ ಮಾಡ್ಯಾನ ಅಂತ. ಕಂಡಕAಡಲ್ಲೆ ಚುಡಾಯಿಸಕತ್ತಿದ್ವು. ಆದರೂ ಪಟ್ಟುಬಿಡದ ನರಿ ಹಿರಿಯ ನರಿಯ ಹತ್ತಿರ ಹೋಗಿ “ಇಲ್ಲ ನರಿಯಜ್ಜ ನಾನು ಮನುಷ್ಯರ ತರಹನ ಲಗ್ನ ಆಗಬೇಕಂತ ಮಾಡಿನಿ” ಎಂದು ಗೋಗರೆದಾಗ “ನೋಡು ಮಗುವೆ, ನಿನ್ನ ಕನಸ್ಸು ಅಸಾಧ್ಯವಾದದ್ದು. ನಮ್ಮಲ್ಲಿ ಇಂತಹ ಯೋಚನೇನೆ ಬಂದಿರಲಿಲ್ಲ. ನಿನಗೇಕೆ ಅಂತಹ ಯೋಚನೆ ಬಂತೋ ……? ಆದರೆ ದೇವರ ಹತ್ತಿರ ಹೋಗಿ ಪ್ರಾರ್ಥಿಸು ಬೇಕಾದರೆ ಸಾಧ್ಯವಾಗಬಹುದೇನೊ?” ಎಂದಿತು. ಅದನ್ನು ಗಂಭೀರವಾಗಿ ಸ್ವೀಕರಿಸಿದ ನರಿ ಕಾಡ ಮಧ್ಯದಲ್ಲಿರುವ ಗುಡಿಯ ಮುಂದೆ ಮನುಷ್ಯರು ಕೈಮುಗಿದು ಬೇಡಿಕೊಳ್ಳುವ ಭಂಗಿಯಲ್ಲಿ ಕುಳಿತಿ ಧೀರ್ಘ ತಪಸ್ಸು ಮಾಡತೊಡಗಿತು. ದೇವರನ್ನು ಒಲಿಸಿಕೊಳ್ಳುವ ಭರದಲ್ಲಿ ಊಟವನ್ನೆ ಮರೆಯಿತು. ಹಲವು ದಿನಗಳವರೆಗೆ ಮಂಡೆಯೂರಿ ಕುಳಿತ ನರಿಯನ್ನು ನೋಡಿ ದೇವರಿÀಗೆ ಆಶ್ವರ್ಯವಾಯಿತು. ‘ಆಸೆಬುರುಕ ಮನುಷ್ಯರು ಇಂತಹ ಕಾರ್ಯ ಮಾಡೋದು ನೋಡಿದ್ದೆ ಅವರಿಗಿಂತಲೂ ಸುಖವಾಗಿರುವ ಪ್ರಾಣಿಗಳೇಕೆ ತಪಸ್ಸು ಮಾಡುತ್ತಿವೆ, ಇದಕ್ಕೆನಾಯಿತು?’ ಅಂತ ಅರ್ಜಂಟಾಗಿ ಕುತೂಹಲ ತಡಿಯಲಾಗದೆ ಪ್ರತ್ಯಕ್ಷನಾದ. ದೇವರನ್ನು ನೋಡಿದ ನರಿ ಮನುಷ್ಯರು ಪ್ರಾರ್ಥಿಸುವ ರೀತಿಯಲ್ಲಿ ಏನೇನೊ ಹೇಳಕ ಪ್ರಯತ್ನಿಸಿತು. ಆದರೆ ದೇವರು “ಅಯ್ಯೋ ಮೂಕ ಪ್ರಾಣಿಯೇ. ಮನುಷ್ಯರು ನಾಟಕ ಮಾಡತಾರೆ. ಅವರ ಅನುಕರಣೆ ಮಾಡಕ ಹೋಗಬೇಡ. ಹೌದು…! ನೀನು ನನ್ನನ್ನು ಕುರಿತು ತಪಸ್ಸು ಮಾಡಿದ್ದು ಯಾಕೆ?” ಎಂದು ಪ್ರಶ್ನಿಸಿದ. “ ಎಲ್ಲವನ್ನು ಬಲ್ಲ ನಿನಗೆ ನನ್ನ ಮನದಾಳದ ಆಸೆ ಗೊತ್ತಿಲ್ಲವೇ..? ನನಗೂ ಮನುಷ್ಯರಂತೆ ಮದುವೆ ಮಾಡಿಕೊಳ್ಳುವ ಆಸೆ. ದಯವಿಟ್ಟು ಈಡೇರಿಸುವೆಯಾ?”
ದೇವರು ನಕ್ಕು “ನಿನಗೂ ಊರಲ್ಲಿ ಇದ್ದು ಇದ್ದು ಅವರ ಬುದ್ಧಿ ಬರತೊಡಗಿದೆ. ಮನುಷ್ಯ ಬುದ್ಧಿ ಕಂತ್ರಿ ಬುದ್ದಿ, ಆಸೆ ಪಡೋ ದೃಷ್ಟ ಬುದ್ದಿ. ಅವರ ಚಾಳಿನೂ ನಿನಗೇಕೆ ಬಂತೋ?”
“ಇಲ್ಲ..ಇಲ್ಲ..ಗೊತ್ತಿಲ್ಲ…ನನಗೆ ಆ ರೀತಿ ಮದುವೆ ಆಗಲೇಬೇಕು” ಎಂದಿತು.
“ಬೇಡ ಅಂತಹ ಹಠ ಬೇಡ. ನಿನ್ನ ಏಕೆ , ನಿಮ್ಮ ಇಡಿ ಕುಲದ ಮದುವೆನೆ ನಾನೆ ನಿಂತು ಬೇರೆ ರೀತಿ ಮಾಡಿಸುವೆ”
“ಹೇಗೆ ತಂದೆ?”
“.ಬಿಸಿಲಿರಲು ಮಳೆಬರಲು ಆಗ ನಿನ್ನ ಮದುವೆ ನಡಿಯುವುದು. ಮಳೆ ಹನಿಗಳೆ ಅಕ್ಷತೆಕಾಳು. ಕಾಮನ ಬಿಲ್ಲೆ ನಿಮಗೆ ಹೊದಿಸುವ ಹಾರ. ಬಿಸಿಲಿರಲು ಮಳೆಬರಲು ಜನರು, ಮಕ್ಕಳೆಲ್ಲರೂ ‘ನರಿ ಮದುವೆಯಾಯಿತು ಎಂದು ಸಂತಸಪಡುವರು, ಕುಣಿದಾಡುವರು’ ಇಷ್ಟು ಸಾಕಲ್ಲವೆ?” ಎಂದನು
ತಪ್ಪಿನ ಅರಿವಾಗಿ “ಧನ್ಯ ತಂದೆ…ನನ್ನ ಮನಸ್ಸಿನ ಮುಂದೆ ಮೂಡಿದ್ದ ಮಾಯೆ ಕರಗಿತು. ಇನ್ನು ಮುಂದೆ ಇಂತಹ ಆಸೆ ಪಡುವುದಿಲ್ಲ. ನಿನ್ನ ಈ ವರವೆ ನಮ್ಮ ದೊಡ್ಡ ಕೊಡುಗೆ. ಇನ್ನುಮುಂದೆ ನಾವು ಊರೊಳಕ್ಕೆ ವಾಸಿಸದಿರುವಂತೆ ನಮ್ಮ ಮನಸ್ಸನ್ನು ಬದಲಿಸು” ಎಂದಿತು.
ದೇವರು ‘ಹೌದು, ಪ್ರಾಣಿ ಕುಲದಲ್ಲೆ ನಿಮಗೆ ಬುದ್ಧಿ ಶಕ್ತಿ ಬಲಿಯುತ್ತಿದೆ. ಈಗ ಮನುಷ್ಯರ ಉಪಟಳವೆ ತಡೆದುಕೊಳ್ಳಲಾಗುತ್ತಿಲ್ಲ. ನೀವು ಅವರಂತಾದರೆ ಕಷ್ಟ’ ಎಂದು ಮನದಲ್ಲಿ ಅಂದುಕೊಂಡು “ಅಸ್ತು..ತಥಾಸ್ತು” ಎಂದು ಅದೃಶ್ಯನಾದ.
“ಓಹೊ…..ಅಂದಿನಿಂದ ನರಿಗಳು ಊರನ್ನು ಬಿಟ್ವಾ?” ಎಂದ ಗಿರಿ
“ಹೌದು ಮಕ್ಕಳೆ, ನಾವು ಮಳೆಬಂದಾಗ ‘ನರಿ ಮದುವೆ ನಡೆದಿದೆ’ ಎಂದು ಸಂಭ್ರಮಿಸೋದು ಅವುಕ್ಕೆಲ್ಲ ಖುಷಿ ಕೊಡುತ್ತಂತೆ” ಎಂದು ಕಥೆ ಮುಗಿಸಿದ.
“ಅಜ್ಜ ಸೂಪರ್ ಇತ್ತು” ಎಂದು ಎಲ್ಲರೂ ಚಪ್ಪಾಳೆ ಹಾಕಿ “ಅಜ್ಜಾ..ಅಜ್ಜಾ….ಮತ್ತೊಂದು…” ಎಂದು ಪೀಠಿಕೆ ಹಾಕಿದರು

Don`t copy text!