ನೀಲಮ್ಮನ ದೃಷ್ಟಿಯಲ್ಲಿ ಲಿಂಗಾಚಾರ
ನೀಲಾಂಬಿಕೆ, ಬಸವಣ್ಣ ಕಲ್ಯಾಣದಲ್ಲಿ ಕಟ್ಟಿದ ಎರಡು ಮುಖ್ಯ ಸಂಸ್ಥೆಗಳಲ್ಲೊಂದಾದ ಮಹಾಮನೆಯ ಮಹಾತಾಯಿ; ಬಸವಣ್ಣನವರ ವಿಚಾರ ಪತ್ನಿ;ತಾನು ಹೆಣ್ಣೆಂಬುದನ್ನೇ ಅಳಿದ ದಿವ್ಯ ಚೇತನ….! ಹೀಗೆಯೇ….ಕಲ್ಯಾಣದ ಶರಣರಲ್ಲಿ ‘ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವನಳಿದ ಚಿದ್ಬೆಳಗಿನ ಸಂಗಮನ ಸ್ವರೂಪ…..
ಬಸವಣ್ಣನವರು ಕಟ್ಟಿದ ಕಲ್ಯಾಣದ ಅನುಭವ ಮಂಟಪದಲ್ಲಿ ನೆರೆದ ಸಕಲ ಶರಣ ಶರಣೆಯರ ರೂಪದಲ್ಲಿ ಇಂಥ ಬೆಳಕು ಚೆಲ್ಲವರಿಯಲು ಕಾರಣ, ಬಸವಣ್ಣನು ಶರಣಶರಣೆಯರೊಡಗೂಡಿ ಕಟ್ಟಿದ, ವಿಶ್ವಕಲ್ಯರ‍್ಥವಾಗಿ ನಿರೂಪಿಸಿದ ‘ಲಿಂಗಾಯತ ಧರ‍್ಮ’.!
ಈ ಧರ‍್ಮವು ನಿರೂಪಿಸಿದ ಅಷ್ಟಾವರಣ,ಪಂಚಾಚಾರ ಮತ್ತು ಷಟ್ ಸ್ಥಲ ಗಳೆಂಬ ಮೂರು ಆಯಾಮಗಳೇ ಇಲ್ಲಿನ ಶರಣಗಣವನ್ನು ಲೋಕದ ಮನುಷ್ಯರಿಗಿಂತ ವಿಭಿನ್ನವಾಗಿಸಿತು.ಈ ಶರಣರು ಮನುಷ್ಯತ್ವದ ಪರಿಪೂರ್ಣತೆಗಾಗಿ ಮಾನವ ಬದುಕಿನ ಮೂರು ನೆಲೆಗಳನ್ನು ಗುರುತಿಸಿ, ಮನುಷ್ಯ ಆ ಮೂರೂ ನೆಲೆಗಳಲ್ಲಿ ಸಾಧನೆಗೈದಾಗಲೇ ಬದುಕು ಪೂರ್ಣಗೊಳ್ಳುತ್ತದೆ.
ಈ ಹಿನ್ನೆಲೆಯಲ್ಲಿ ವ್ಯಕ್ತಿಯ ಧಾರ‍್ಮಿಕ ಸಾಧನೆಗಾಗಿ ಅಷ್ಟಾವರಣಗಳನ್ನು, ಸಾಮಾಜಿಕ ಸಾಧನೆಗಾಗಿ ಪಂಚಾಚಾರಗಳನ್ನು ಹಾಗೂ ಆಧ್ಯಾತ್ಮಿಕ ಸಾಧನೆಗಾಗಿ ಷಟಸ್ಥಲಗಳನ್ನು ನಿರೂಪಿಸಿದ್ದಾರೆ. ಶರಣರ ಈ ಲಿಂಗಾಯತ ಧರ್ಮಕ್ಕೆ ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ ಹಾಗೂ ಷಟಸ್ಥಲಗಳೇ ಆತ್ಮವೆನಿಸಿವೆ.
ಅನುಭವ ಮಂಟಪದಲ್ಲಿ ನೆರೆದ ಎಲ್ಲಾ ಶರಣ ಶರಣೆಯರು ಇವುಗಳ ಸಾಧನೆಗೈದು ಅದರಿಂದಾದ ಅನುಭವಗಳನ್ನೇ ವಚನ ರೂಪದಲ್ಲಿ ನಿರೂಪಿಸಿ ಲೋಕದ ಮುಂದೆ ಮಾದರಿಯಾಗಿ ನಿಂತಿದ್ದಾರೆ.ಲೋಕವೇ ಯಾವತ್ತೂ ಬೆರಗಾಗುವಂಥ ಸಿದ್ಧಾಂತವೇ ಮೈವೆತ್ತ ಇವರ ಬದುಕಿನ ಪರಿಯನ್ನು ನಾವು ಅವರು ಕೊಟ್ಟಿರುವ ವಚನಗಳ ಮೂಲಕ ಮನಗಾಣಬಹುದಾಗಿದೆ. ಈಹಿನ್ನೆಲೆಯಲ್ಲಿ ನಾನು ಈಗ ಶರಣೆ ನೀಲಾಂಬಿಕೆ ತಾಯಿಯ’ ಲಿಂಗ’ ತತ್ವದ ಕುರಿತು ನಿರೂಪಿಸಿ ಬಯಸುತ್ತೇನೆ.
‘ಲಿಂಗ’ ತತ್ವವು ಶರಣರು ಕೊಟ್ಟ ಧಾರ‍್ಮಿಕ ಸಿದ್ಧಾಂತ ವಾದ ಅಷ್ಟಾವರಣಗಳಿಗೆ ಸೇರಿದ ಒಂದು ತತ್ವ.ಯಾವದೇ ಧರ‍್ಮ ಲೋಕದಲ್ಲಿ ಪ್ರಕಟಗೊಳ್ಳಲು ಮತ್ತು ಅಸ್ತಿತ್ವದಲ್ಲಿರಲು ಅದರ ಆಚರಣೆಗಳೇ ಮುಖ್ಯ ವಾಗುತ್ತವೆ. ಹಾಗಾಗಿ ಲಿಂಗಾಯತ ಧರ‍್ಮಾನುಯಾಯಿಯು ತನ್ನನ್ನು ಈ ನೆಲೆಯಲ್ಲಿ ಗುರುತಿಸಿಕೊಳ್ಳಲು ಅಷ್ಟಾವರಣಗಳ ಪಾಲಕನಾಗುತ್ತಾನೆ. ಈ ಅಷ್ಟಾವರಣಗಳೆಂದರೆ ಗುರು, ಲಿಂಗ,ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ,ಪಾದೋದಕ ಮತ್ತು ಪ್ರಸಾದ.ಇವುಗಳಲ್ಲಿ ಗುರು ಲಿಂಗ ಜಂಗಮ ಸಾಧಕನು ಉಪಾಸನೆ ಮಾಡಬೇಕಾದ ಮೂರು ಪೂಜ್ಯ ತತ್ವಗಳು. ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರಗಳು ಉಪಾಸನೆಗಾಗಿ ಬೇಕಾದ ಸಾಧನಗಳು;ಪಾದೋದಕ ಮತ್ತು ಪ್ರಸಾದಗಳು ಆ ಮೂರು ತತ್ವಗಳನ್ನು ಈ ಮೂರು ಸಾಧನಗಳಿಂದ ಉಪಾಸಿಸಿದಾಗ ದೊರೆಯುವ ಪ್ರತಿಫಲಗಳು. ಯಾವಾಗಲೂ ಈ ಜಗತ್ತಿನಲ್ಲಿ ಕಾರಣವಿಲ್ಲದೆ ಕರ‍್ಯವಿಲ್ಲ,ಪ್ರತಿಫಲವಿಲ್ಲದೆ ಕರ‍್ಯಕ್ಕೆ ಅರ‍್ಥ ಮತ್ತು ಸಾರ‍್ಥಕತೆ ಇಲ್ಲ. ಹಾಗಾಗಿ ಶರಣರು ‘…ಮಾ ಫಲೇಷು ಕದಾಚನ’ ಎಂಬ ಮಾತನ್ನು ನಿರಾಕರಿಸಿ, ಪ್ರತಿಫಲವಿಲ್ಲದ ಕರ‍್ಯಕ್ಕೆ ಅರ‍್ಥವಿಲ್ಲ ವೆಂದು ಪ್ರತಿಪಾದಿಸಿದರು.
ಈ ಹಿನ್ನೆಲೆಯಲ್ಲಿ ನಾನೀಗ ಶರಣೆ ನೀಲಮ್ಮ ಸಾಧಕಿಯಾಗಿ ಲಿಂಗವನ್ನು ಉಪಾಸಿಸಿ,ಅದರಿಂದಾದ ಆಕೆಯ ಅನುಭವದ ಕುರಿತಾಗಿ ತಿಳಿದುಕೊಳ್ಳಬಯಸುತ್ತೇನೆ.
ಸಾಧಕನ ಪೂಜ್ಯ ವಸ್ತುಗಳಲ್ಲೊಂದಾದ ‘ಗುರು’ ಸಾಧಕನಲ್ಲಿ ಅರಿವಿನ ಬೀಜವಾದರೆ, ‘ಲಿಂಗ’ ಅದರ ಬೆಳವಣಿಗೆಯ ರೂಪ; ಜಂಗಮ ಜಂಗಮ ಅರಿವನ ವಿಸ್ತಾರದ ರೂಪವೆಂದು ನಾನು ಭಾವಿಸುತ್ತೇನೆ. ಈ ಹಿನ್ನೆಲೆಯಲ್ಲಿ ಬಸವಣ್ಣನವರು ಕೊಟ್ಟ ಈ ‘ಲಿಂಗ’ ಈ ದೇಶದ ದೈವೀ ನಂಬಿಕೆಯ ನೆಲೆಯಲ್ಲಿ ಹೊಸಬಗೆಯ ಕ್ರಾಂತಿ ಕಾರಕವಾದ ಸಂಚಲನವನ್ನುಂಟು ಮಾಡಿದೆ.
ಸಂಪ್ರದಾಯಬದ್ಧವಾದ,ಅಂಧಾನುಕರಣೆ ರೂಪದ, ಯಾವುದೋ ಜೀವಿಯ ಸ್ವರೂಪದ ದೈವೀ ಆರಾಧನೆಯನ್ನು ನಿರಾಕರಿಸಿ, ವಿಶ್ವ ತತ್ವದ ಸಾಕಾರ ರೂಪವಾಗಿ, ಎಲ್ಲಾ ಅಸಮಾನತೆ ಮತ್ತು ತಾರತಮ್ಯಗಳಿಂದ ಮನುಷ್ಯನನ್ನು ಮುಕ್ತ ಗೊಳಿಸಿದ ಅದಮ್ಯವಾದ ಒಂದು ಶಕ್ತಿಯಾಗಿ ಈ ‘ಲಿಂಗ'(ಇಷ್ಟ ಲಿಂಗ) ತತ್ವ ರೂಪುಗೊಂಡಿದೆ.ಅಗಪ್ಯ, ಅಗಮ್ಯ, ಅಪ್ರತಿಮ,ಅಪ್ರಮಾಣವಾದ ಪರಮಾತ್ಮನ ರೂಪವು ಗೋಲಾಕಾರವಾಗಿ ಭಕ್ತನಲ್ಲಿ ಭೇದವನರಿಯದೇ, ಆತನ ಕರಸ್ಥಲವನ್ನೇ ಆಲಯವಾಗಿಸಿಕೊಂಡು,ಭಕ್ತನಿಗೆ ಅರಿವಿನ ಸಾಕ್ಷಾತ್ಕಾರ ದ ಸಾಧನವಾಗಿ’ಲಿಂಗ’ ರೂಪುಗೊಂಡಿತು.ಇಂಥ ಲಿಂಗದ ಬಗ್ಗೆ ಶರಣರೆಲ್ಲರೂ ತಮ್ಮ ಅಭಿಪ್ರಾಯ ಮತ್ತು ಅನುಭವಗಳನ್ನು ವ್ಯಕ್ತಪಡಿಸಿದ್ದಾರೆ.ಇಂಥವರಲ್ಲಿ ನೀಲಾಂಬಿಕೆಯೂ ವಿಶೇಷವಾಗಿ ‘ಲಿಂಗ’ವನ್ನು ಕುರಿತಾಗಿ ನಿರೂಪಿಸುತ್ತಾಳೆ.
ಆಕೆಯ ನಿರೂಪಣೆ ಹೀಗಿದೆ…
“ಅಂಗವನರಿದು ಹಿಂಗಿದೆ ಪ್ರಾಣವ,
ಅಂಗ ಲಿಂಗವನುಂಡು
ಪರಮ ಪರಿಣಾಮದೊಳೋಲಾಡುತರ‍್ದೆನಯ್ಯ,
ದಿನಮಣಿ ದಿನಪ್ರಕಾಶ ಸಾಧ್ಯವಾಯಿತ್ತಯ್ಯ,
ದಿನಮಣಿ ದಿನಪ್ರಕಾಶದ ಕೂಟದಿಂದ
ಆನು ಬದುಕಿದೆನಯ್ಯ ಸಂಗಯ್ಯ.. ( ವ.ಸಂ.೮೦೫)
ಈ ವಚನದಲ್ಲಿ ಅಂಗ ಮತ್ತು ಲಿಂಗ ಎಂಬ ಪದಗಳಿವೆ.ಅಂಗವೆಂದರೆ ಭೌತಿಕ ರೂಪ,ಲಿಂಗವು ಅದರ ಚಲನಶೀಲತೆಗೆ ಕಾರಣವಾದ ಶಕ್ತಿ ಎಂದೂ ಪ್ರಾಥಮಿಕವಾಗಿ ಹೇಳಬಹುದು.ಈ ಶರೀರಕ್ಕೆ ಹಸಿವು, ತೃಷೆ,ನಿದ್ರೆಯೇ ಮೊದಲಾದ ದಾಹಗಳಿರುತ್ತವೆ.ಈ ದಾಹ ಲೌಕಿಕವಾಗಿ ಬಲಗೊಂಡರೆ ದೇಹ ಮತ್ತು ಜೀವಗಳೆರಡಕ್ಕೂ ಆಪತ್ತು ಖಂಡಿತ. ಹಾಗಾಗಿ ಸಾಧಕರಾದವರು ಅಥವ ಭಕ್ತರಾದವರು ಮಾತ್ರ ಇದನ್ನು ಮನಗಂಡು ಆ ದಾಹದಿಂದ ದೂರವಾಗಿ ಪರಮಾತ್ಮನ ಮೋಹಿಗಳಾಗುತ್ತಾರೆ.ಈ ಮೋಹ ಅರಿವಿನಿಂದ ಮಾತ್ರ ಬಲಗೊಳ್ಳುತ್ತದೆ.ಈ ಅರಿವೇ ಗುರು;ಅಂದರೆ ಪರಮಾತ್ಮನ ಕುರಿತ ತಿಳುವಳಿಕೆಯ ಬೀಜ.ಇದು ಸಾಧಕನ ಭಾವದ ನೆಲದಲ್ಲಿ ಬಿದ್ದಾಗ ಅದು ಮೊಳೆತು ಬೆಳೆಯತೊಡಗುತ್ತದೆ.ಅದರ ಬೆಳವಣಿಗೆ ಅರಿವಿನ ರೂಪದಿಂದಲೇ ಕಂಡುಬರುತ್ತದೆ.
ಇದನ್ನು ನೀಲಮ್ಮ ಸರ‍್ಯನ ಉಪಮೆಯ ಮೂಲಕವಿವರಿಸುತ್ತಾಳೆ.ಸರ‍್ಯ ಬಹು ಬೆಳಕಿನ ಮೊತ್ತ; ಆತನ ಬೆಳಕು ಭೂಮಿಗೆ ಅಸಂಖ್ಯಾತ ಕಿರಣಗಳ ರೂಪದಲ್ಲಿ ವ್ಯಾಪಕವಾಗಿ ಪಸರಿಸಿಕೊಳ್ಳುತ್ತದೆ.ಅದರಂತೆ ಪರಮಾತ್ಮ ಎಂದರೆ ‘ಬೆಳಕು’; ಇದನ್ನು ‘ಚಿದ್ಬೆಳಕು’
ಎನ್ನುತ್ತಾರೆ.ಪೈಗಂಬರ ಅವರು ಕೂಡ ‘ಅಲ್ಲಾಹು ನೂರ್ ಹೈ’ ಎನ್ನುತ್ತಾರೆ.ಈ ಬೆಳಕು ನಮ್ಮ ಮೆದುಳಿನ ಎಡಭಾಗ (ಪಶ್ಚಿಮ ಚಕ್ರ)ದಲ್ಲಿರುತ್ತದೆ.ಇದು ಬ್ರಹ್ಮಾಂಡದಿಂದತ್ತತ್ತಲಾದ ಘನವೆಂದು ತೋಂಟದ ಸಿದ್ಧಲಿಂಗರು ಹೇಳುತ್ತಾರೆ.ಅಷ್ಟೇ ಅಲ್ಲ ಇದನ್ನು ‘ವಿದ್ಯರ‍್ಲತೆ’ ಎಂದೂ ಕರೆಯುತ್ತಾರೆ.ಅಂದಾಗ ಇಲ್ಲಿ ಪರಮಾತ್ಮ ಬೆಳಕಿನ ಸ್ವರೂಪವಾಗಿದ್ದಾನೆ ಎಂಬುದು ಖಚಿತವಾಗುತ್ತದೆ.
ಹೀಗಾಗಿ ನೀಲಮ್ಮ ತನ್ನಲ್ಲಿ ಅರಿವು ತನ್ನ ಕಾಯದ ಹಸಿವನ್ನು ಆಹಾರವಾಯಿತಷ್ಟೇ ಅಲ್ಲ,ಅಜ್ಞಾನದಿಂದ ಆವರಿಸಲ್ಪಟ್ಟ ದೇಹದಲ್ಲಿ ಅರಿವಿನ ಬೆಳಕನ್ನು ತುಂಬಿತು; ಆರಂಭದಲ್ಲಿ ಆ ಬೆಳಕು ಒಂದು ದಿನಮಣಿ ಅಂದರೆ ಸರ‍್ಯನ ಒಂದು ಕಿರಣವಾಗಿ ಅಂಕುರಿಸಿ, ಮುಂದೆ ಅದು ಸರ‍್ಯನ ಪ್ರಕಾಶದಲ್ಲೇ ಸೇರುವಂತೆ ತನ್ನೊಳಗೆ ಬೆಳೆದು ಆವರಿಸಿಕೊಂಡಿತು.ಹಾಗಾಗಿ ತಾನು ಬದುಕಿದೆ ಅಂದರೆ ಅರಿವಿನ ಕಾರಣವಾಗಿ ಬದುಕು ಸಾರ‍್ಥಕವಾಯಿತು ಎನ್ನುತ್ತಾಳೆ.ಇಲ್ಲಿ ಶರಣರೆಲ್ಲರೂ ಬಳಸಿದಂತೆ ‘ಅಯ್ಯ’ ಎಂಬ ಪದವನ್ನು ಈಕೆಯೂ ಬಳಸುತ್ತಾಳೆ. ಬಸವಯ್ಯ, ಸಂಗಯ್ಯ ಎಂಬಲ್ಲಿ ಈ ‘ಅಯ್ಯ’ ಪದ ಬಳಕೆಗೆ ಕಾರಣವನ್ನು ಆಲೋಚಿಸುವುದಾದರೆ,ಲಿಂಗೋಪಾಸನೆಯಿಂದ ಪರಿಪೂರ‍್ಣಗೊಂಡು ಅರಿವಿನ ಪಕ್ವತೆಗೆ ತಲುಪಿದ ಅಂದರೆ ಶರಣ ಸ್ಥಲಕ್ಕೇರಿದವರಿಗೆ ಅಂದರೆ ಗುರು ಸ್ವರೂಪರಾದವರನ್ನೇ ನಮ್ಮ ಶರಣರು’ ಅಯ್ಯ’ ಎಂದು ಕರೆಯುತ್ತಾರೆ. ಹಾಗಾಗಿ ಈ ‘ಅಯ್ಯ’ ಎಂಬುದು ಅರಿವಿನ ಪರಿಪರ‍್ಣತೆಯನ್ನು ಸಂಬೋಧಿಸುವ ಪದ ಎಂಬುದು ನನ್ನ ವಿಚಾರವಾಗಿದೆ.
ಹೀಗೆ ಅರಿವನ್ನು ಹಿಡಿದು ಲಿಂಗವನ್ನಾರಾಧಿಸತೊಡಗಿದ ನೀಲಮ್ಮ ಮುಂದುವರಿದು….
“ಆಡಲಿಲ್ಲವಯ್ಯ ನಾನು ಹೆಣ್ಣು ರೂಪ ಧರಿಸಿ,
ನುಡಿಮಲಿಲ್ಲವಯ್ಯ ನಾನು ಹೆಣ್ಣು ರೂಪ ಧರಿಸಿ,
ನಾನು ಹೆಣ್ಣಲ್ಲದ ಕಾರಣ
ನಾನು ಇಹಪರ ನಾಸ್ತಿಯಾದವಳಯ್ಯ
ನಾನು ಉಭಯದ ಸಂಗವ ಕಂಡು ಕಾಣದಂತಿದ್ದೆನಯ್ಯ
ಸಂಗಯ್ಯ ಬಸವ ಬಯಲು ಕಂಡು ಕಾರಣ”( ವ.ಸಂ.೮೩೯)
ಇಲ್ಲಿ ನೀಲಮ್ಮಳಲ್ಲಿ ಅರಿವು ಪಕ್ವಗೊಂಡಿರಿವದು ನಮಗೆ ಸ್ಪಷ್ಟವಾಗುತ್ತದೆ.ಈ ದೇಶದಲ್ಲಿ ಪರಮಾತ್ಮನ ಪೂಜೆ ಮತ್ತು ಮುಕ್ತಿಗಳಿಗೆ ಹೆಣ್ಣು ಬಾಧ್ಯಳಲ್ಲ ಎಂಬುದು ಶಾಸನವಾಗಿದ್ದಂಥ ಸಮಾಜದಲ್ಲಿ ಈಕೆ ಅರಿವನ್ನು ಹಿಡಿದು ಪರಮಾತ್ಮನನ್ನು ಕಾಣುವ ಶರಣ ಸಿದ್ಧಾಂತಿಯಾಗಿದ್ದರಿಂದ ತಾನು ಹೆಣ್ಣು ಗಂಡೆಂಬ ಲಿಂಗಭೇದವನ್ನು ಅಳಿದುಕೊಂಡೇ ಆದರೆ ‘ಲಿಂಗ’ ಅಂದರೆ ಅರಿವನ್ನು ಕುರಿತು ಆಡುತ್ತಾಳೆ,ನುಡಿಯುತ್ತಾಳೆ. ಈ ಮೂಲಕ ಮುಕ್ತಿಯ ಕುರಿತ ತಾರತಮ್ಯತೆಯ ತಿಳುವಳಿಕೆಯನ್ನು ಅಳಿದು ಹಾಕುತ್ತಾಳೆ. ಇದಕ್ಕೆ ಕಾರಣವೆಂದರೆ ಅರಿವಿನ ರೂಪವೇ ಆದ ಬಸವಯ್ಯ ಎಂದು ಹೇಳುತ್ತಾಳೆ.ಅಂದರೆ ಬಸವಣ್ಣನನ್ನು ಈಕೆಯೂ ಕೂಡ ಲಿಂಗದ ರೂಪದಲ್ಲೇ ಕಾಣುತ್ತಾಳೆ.ಇದಕ್ಕೆ ಕಾರಣವೆಂದರೆ ಇಷ್ಟಲಿಂಗವನ್ನು ರೂಪಿಸಿಕೊಟ್ಟಾತ ಬಸವಣ್ಣ.ಅದು ಆತನ ಅರಿವಿನಿಂದ ಸಾಕಾರಗೊಂಡಂಥ ವಿಶೇಷವಾದ ಉಪಾಸನಾ ವಸ್ತು.ಹಾಗಾಗಿ ಅದರ ಸಾಕಾರಕ್ಕೆ ಬಸವಣ್ಣನೇ ಕಾರಣವಾದ್ದರಿಂದ ಎಲ್ಲಾ ಶರಣರು ಬಸವಣ್ಣನನ್ನು ‘ಲಿಂಗ’ವೆಂದೇ ಗುರುತಿಸಿದರು.ಹಾಗಾಗಿಯೇ “ಶ್ರೀ ಗುರುಬಸವ ಲಿಂಗಾಯನಮ:” ಎಂಬ ಮಂತ್ರ ಶರಣ ಸಂಸ್ಕೃತಿ ಯಲ್ಲಿ ಮೈದಳೆಯಿತು.ಅದಕ್ಕಾಗಿಯೇ ಈಕೆಯೂ ಕೂಡ ಬಸವಣ್ಣನನ್ನು ಲಿಂಗವೆಂದೇ ಕರೆಯುತ್ತಾಳೆ. ಇನ್ನೂ ಮುಂದುವರೆದು.…
“ಎಡೆಯಿಲ್ಲ,ಕಡೆಯಿಲ್ಲ ಎನಗೆ ಎಲೆ ಅಯ್ಯ,
ಪ್ರಾಣಲಿಂಗದ ಸಂಬಂಧದ ನೆಲೆಯ ಕಂಡಿಹೆನೆಂದರೆ,
ಆ ಪ್ರಾಣಲಿಂಗ ಸಂಬಂಧ ಸಮರಸದಿಂದ ನಾನೆತ್ತ ಬಲ್ಲೆನಯ್ಯ?
ಮರುಳು ಹೆಣ್ಣು ಪ್ರಣವ ಪ್ರಕಾಶದಿರವನರಿದು
ಪರಮ ಸುಖ ಮರ‍್ತಿಯಾದೆನಯ್ಯ ಸಂಗಯ್ಯ..”(ವ.ಸಂ.೮೬೪)
ಅಂದರೆ ನೀಲಮ್ಮ ಲಿಂಗವನು ಹಿಡಿದು ಅರಿವಿನ ಪರ‍್ಣಾವಸ್ಥೆಗೆ ತಲುಪಿದ್ದಾಳೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ.ಪರಮಾತ್ಮ ಅಪರಿಮಿತ,ಅಪ್ರಮಾಣ ವೆಂಬುದು ಅರಿವಾದಾಗ ಆತನ ಅಂಶವಾದ ಜೀವಾತ್ಮನೂ ಕೂಡ ಸೀಮಾತೀತನೇ ಆಗುತ್ತಾನೆ.ಈ ಜೀವಾತ್ಮನಲ್ಲಿ ಇಂಥ ಅರಿವು ನೆಲೆಯಾಗಿದೆ ಎಂದರೆ ಅದು ಪರಮಾತ್ಮನೊಂದಿಗಿನ ಸಮರಸತನದಿಂದ ಮಾತ್ರ ಸಾಧ್ಯ.ಅದೂ ಈ ಜಗದ ದೃಷ್ಟಿಯಲ್ಲಿ ಪರಮಾತ್ಮನ ಸಾಕ್ಷಾತ್ಕಾರಕ್ಕೆ, ಮುಕ್ತಿಗೆ ಅಯೋಗ್ಯಳಾದ (ಮರುಳು) ಹೆಣ್ಣು ತಾನಲ್ಲವಾದ್ದರಿಂದಲೇ ತನಗೆ ಇದು ಸಾಧ್ಯವಾಗಿ ಪ್ರಸಾದ ಭಾವದಿಂದ ಬದುಕನ್ನು ಸರ‍್ಥಕ ಪಡಿಸಿಕೊಂಡಿದ್ದಾಳೆ.ಅಂದಾಗ ಈ ಮೂರೂ ವಚನಗಳಿಂದ ಆಕೆಯಲ್ಲಿನ ಇಷ್ಟಲಿಂಗಾನುಭವಕ್ಕೆ ನಾವು ಬೆರಗಾಗುತ್ತೇವೆ.ಆದರೆ ಈಕೆಯ ಇಂಥ ಪಕ್ವತೆಗೆ ಕಾರಣವೇನು? ಎಂಬ ಪ್ರಶ್ನೆಯೂ ನಮ್ಮ ಮುಂದೆ ಬಂದಾಗ ಆಕೆಯ ಇನ್ನೊಂದು ವಚನ ನಮಗೆ ಉತ್ತರವಾಗಿ ನಿಲ್ಲುತ್ತದೆ.ಅದು ಹೀಗಿದೆ….
“ಎನಗೆ ಲಿಂಗವು ನೀವೆ ಬಸವಯ್ಯ,
ಎನಗೆ ಸಂಗವು ನೀವೆ ಬಸವಯ್ಯ,
ಎನಗೆ ಪ್ರಾಣವು ನೀವೆ ಬಸವಯ್ಯ,
ಎನಗೆ ಪ್ರಸಾದ ನೀವೆ ಬಸವಯ್ಯ,
ಎನಗೆ ಪ್ರಭೆಯ ಮರ‍್ತಿ ಯು ನೀನೇ ಬಸವಯ್ಯ,
ಎನಗೆ ಸಂಗಯ್ಯನು ನೀನೇ ಬಸವಯ್ಯ”(ವ.ಸಂ.೮೩೬)
ಎನ್ನುವಲ್ಲಿ ಬಸವಣ್ಢನ ‘ವಿಚಾರ ಪತ್ನಿ’ ಎಂದೆನಿಸಿ, ಆತನಿಂದ ‘ಪೃಥ್ವಿಗಗ್ಗಳ ಚೆಲುವೆ’ ಎಂದೆನಿಸಿಕೊಂಡು ಆತನ ಮಹಾಮನೆಯ ಸರ‍್ಥಕತೆಯ ಶಕ್ತಿಯಾದ ಈಕೆಗೆ ಬಸವಣ್ಣನೇ ಅರಿವಿನ ಕುರುಹಾಗಿ, ಸಂಗಯ್ಯನಾಗಿ ತನ್ನ ತನ್ನ ಲಿಂಗಾನುಭವದ ಎಲ್ಲಾ ನೆಲೆಗಳಿಗೆ ಕಾರಣರ‍್ತನಾಗಿದ್ದಾನೆ ಎಂದು ಹೇಳುವಲ್ಲಿ, ತಾನು ಸಾಧನೆಯ ಪರಮಾವಸ್ಥೆಗೆ ತಲುಪಿದ ಶರಣೆಯಾಗಿ,ಆ ಸ್ಥಲದ ಅನುಭವದ ಅರಿವೇ ಪತಿಯಾಗಿ ತಾವಿಬ್ಬರೂ ಲೌಕಿಕವಾಗಿಯಷ್ಟೇ ಅಲ್ಲ ಲಿಂಗಾಯತದ ಸಿದ್ಧಾಂತಕ್ಕನುಗುಣವಾಗಿಯೂ ‘ಶರಣ ಸತಿ,ಲಿಂಗ ಪತಿ’ಯಾಗಿ ಈ ಧರ್ಮ ಪ್ರಾಯೋಗಿಕ ಅನುಭವಕ್ಕೆ ಸಾಕ್ಷಿಭೂತರಾಗುತ್ತಾರೆ.
ಈ ಹಿನ್ನೆಲೆಯಲ್ಲಿ ಶರಣೆ ನೀಲಮ್ಮನ ಲಿಂಗದ ನಿಲುವು ನಮಗೆ ವಿಶಿಷ್ಟ ವಾಗುತ್ತದೆ.
-ಕೆ.ಶಶಿಕಾಂತ.
ಲಿಂಗಸೂಗೂರು.