ಕತೆ-೬
ಕತ್ತರಿಯ ಕ್ಯಾತೆ
ಲೇಖಕರು-ಗುಂಡುರಾವ್ ದೇಸಾಯಿ
ಕತ್ತರಿ ಯಾವತ್ತಿಗೂ ಸೂಜಿಯ ಸಂಗಡ ಸುಮ್ಮಸುಮ್ಮನೆ ಜಗಳ ತೆಗೆಯುತ್ತಿತ್ತು. ಬೇಸತ್ತ ಸೂಜಿ “ಆಯ್ತಪ್ಪ ನೀನೆ ದೊಡ್ಡವ, ಶ್ರೇಷ್ಠ. ಎಲ್ಲಾ ಕಾರ್ಯಗಳಿಗೂ ನೀನು ಅನಿವಾರ್ಯ. ದೊಡ್ಡದೊಡ್ಡವರೆಲ್ಲ ಉದ್ಘಾಟನೆಗಾಗಿ ಬಳಸ್ತಾರೆ. ನೀನೆ ಗ್ರೇಟು” ಅಂದಿತು ಸೂಜಿ
“ಅಷ್ಟೆ ಅಲ್ಲಲೆ, ಆಪರೇಷನ್ ಮಾಡಕ, ಬಟ್ಟೆ, ಕೂದಲ ಕತ್ತರಸಾಕ, ಡಿಸೈನ್ ಮಾಡಾಕ, ನರ್ಸರಿಯಲ್ಲಿ. ಒಂದ ಎರಡ…. ನೀನು…? ಯೂಜಲೆಸ್ ಫೆಲೊ” ಅಂತು ಕತ್ತರಿ
“ಹೌದಣ್ಣ, ನಾನು ಯೂಜಲೆಸ್ಸು , ಆದರ ನನ್ನಿಂದ ಎಷ್ಟು ಆಗುತ್ತೋ ಅಷ್ಟು ಕಾರ್ಯ ಮಾಡ್ತೀನಿ”
“ಹಾಂ! ಮತ್ತೆ ಎದುರು ಉತ್ತರ ಕೊಡತಿ. ಚೋಟ ನನ್ಮಗನೆ. ಪಂಚಾಯತಿ ಸೇರಸ್ತೀನಿ. ಯಾರೂ ಶ್ರೇಷ್ಠ ಅಂತ ಜನ ನಿರ್ಣಯಿಸಿ ಮುಖಕ್ಕ ಉಗಿಯೊ ಹಾಂಗ ಮಾಡ್ತೀನಿ”
“ಬೇಡಣ್ಣ ಯಾಕ ಹಾಗೆಲ್ಲ ಮಾಡ್ತಿ. ನೀನೆ ದೊಡ್ಡವ ಅಂತ ಹೇಳಿದ್ದಿನಲ್ಲ. ಕೈಮುಗಿತಿನಿ. ಬದುಕಾಕ ಬಿಡಪ”
“ಮತ್ತೆ ಎದುರಾಡತಿ. ಬದುಕಾಕ ಬಿಡು ಅಂತ ಲೇವಡಿ ಮಾಡ್ತಿ. ಇಲ್ಲ ನಿನ್ನ ಹಾಂಗ ಬಿಡಲ್ಲ. ತಿರುಗಿ ಮಾತೆತ್ತಿರಬಾರದು ಹಾಂಗ ಮಾಡತಿನಿ” ಎಂದು ಕತ್ತರಿ ಪಂಚಾಯತಿ ಸೇರಸ್ತು.
ದೈವದ ಕಟ್ಟೆ ಮೇಲೆ ಪಂಚರು. ಸುತ್ತಲೂ ಜನರು. ಒಂದು ಕಡೆ ದರ್ಪದಿಂದ ಕತ್ತರಿ ನಿಂತಿತ್ತು. ಮೂಲೆಯಲ್ಲಿ ಸಪ್ಪೆ ಮೊರೆ ಹಾಕಿ ಸೂಜಿ ನಿಂತಿತ್ತು ಅಪರಾಧ ಮಾಡಿದವರ ತರಹ. ಕತ್ತರಿ ಸೊಕ್ಕಿನಿಂದ “ಚೋಟ ಸೂಜಿ ನನ್ನ ಬಗ್ಗೆ ಇಲ್ಲ ಸಲ್ಲದ ಮಾತನಾಡಿ ನನ್ನ ಮಾನ ತೆಗೆತಿದೆ. ನಾನು ಹೇಗೆ ಶ್ರೇಷ್ಠ ಅದ ಅಂತ ಉದ್ದವಾಗಿ ಬಡಾಯಿ ಕೊಚ್ಚಿಕೊಂಡು ನ್ಯಾಯ ಕೊಡಿಸಿ” ಎಂದು ತನ್ನ ಅಹವಾಲು ಸಲ್ಲಿಸಿತು.
ಪಂಚರು ಸೂಜಿ ಕಡೆ ತಿರುಗಿ “ನಿನ್ನ ಮೇಲೆ ಆರೋಪ ಮಾಡುತ್ತಿದ್ದಾನೆ ಕತ್ತರಿ. ನೀನು ಏನು ಹೇಳ್ತಿಯಪ್ಪಾ?” ಅಂದ್ರು.
“ನಾನು ಹೇಳೊದೆನದರಿ, ಎಲ್ಲಾ ನಿಮಗ ಗೊತ್ತಿದ್ದ ಅದ. ನಾನು ಕತ್ತರಿಗೆ ಏನು ಅಂದಿಲ್ಲ. ಅವರ ಜಗಳಾ ತೆಗೆದರ. ಅವರೆ ಶ್ರೇಷ್ಠ ಅಂತ ಒಪ್ಪಿಕೊಂಡಿನಿ. ನಾನು ಎಷ್ಟಾದ್ರೂ ಸಣ್ಣವ. ನನ್ನ ಕೈಲಾದ ಕೆಲಸ ಮಾಡ್ತಿನಿ. ಅದನ್ನ ಒಳ್ಳೆ ಕೆಲಸ ಅಂತ ಭಾವಿಸಿನಿ” ಎಂದಿತು
ಪಂಚರೆಲ್ಲ ದೀರ್ಘವಾಗಿ ಚರ್ಚಿಸಿ, ಸಮಾಲೋಚಿಸಿ, ಅಳೆದು ತೂಗಿ ಸೂಜಿನೆ ಶ್ರೇಷ್ಠ ಅಂತ ತೀರ್ಪುಕೊಟ್ರು. ಕತ್ತರಿ ಕೆಂಡಾಮಂಡಲವಾಯಿತು. “ಅನ್ಯಾಯ ಇದು ಅನ್ಯಾಯ” ಎಂದು ಬೊಬ್ಬೆ ಹಾಕಿತು. ಮತ್ತೊಮ್ಮೆ ಆತ್ಮರತಿ ಮಾಡಿಕೊಂಡು “ಸೂಜಿ ಅದ್ಹೇಗೆ ಶ್ರೇಷ್ಠ ಆಗುತ್ತೆ? ನಾನೇ ಶ್ರೇಷ್ಠ” ಅಂದಿತು.
“ನೋಡು ಕತ್ತರಿಯಣ್ಣ, ನೀನು ಕತ್ತರಿಸೊ ಕೆಲಸ ಮಾಡತಿ ಆದರೆ ಸೂಜಿ ಜೋಡಿಸೊ ಕೆಲಸ ಮಾಡತಾದ. ನೀನು ದೊಡ್ಡ ಕಾರ್ಯಕ್ರಮಗಳನ್ನು ಉದ್ಘಾಟಿಸಬಹುದು, ಎಲ್ಲಾ ಕಡೆ ಬಳಸಬಹುದು ಆದರ ನೀನು ಕತ್ತರಿಸಿದ್ದನ್ನು ಸೂಜಿ ಜೋಡಿಸಿ ಉಪಕರಿಸುತ್ತದೆ. ಸೂಜಿ ಇದ್ದುದ್ದಕ್ಕಾಗಿಯೆ ನಿನಗೆ ಬೆಲೆ ಇದೆ. ಕತ್ತರಿಸುವುದು ದೊಡ್ಡದಲ್ಲ ಅದಕ್ಕಿಂತಲೂ ಜೋಡಿಸುವುದು ಶ್ರೇಷ್ಠ ಕಾರ್ಯ. ಆ ಕಾರ್ಯ ಸೂಜಿಯಿಂದ ಮಾತ್ರ ಸಾಧ್ಯ” ಎಂದಾಗ ಜನ ಚಪ್ಪಾಳೆ ತಟ್ಟಿದರು. ಖಾಲಿ ಕೂಡಲಾರದೆ ಕ್ಯಾತೆ ತೆಗದ ಕತ್ತರಿ ಮಂಗಳಾರತಿ ಮಾಡಿಸಿಕೊಂಡು ತಲೆತಗ್ಗಿಸಿತು.