ಕತೆ-೭
ಬೆಕ್ಕಿಗೆ ಗಂಟೆ ಕಟ್ಟಿದ್ದಾಯ್ತು…..
“ಏನ್ರೋ ಮಾಡೋದು ಈ ಬೆಕ್ಕಿನ ಸಲುವಾಗಿ,ಸಾಕು ಸಾಕಾಗಿ ಹೋಗ್ಯಾದ..ಏನರ ಮಾಡ್ರೋ….ಅಟ್ ಲೀಸ್ಟ ಬೆಕ್ಕಿನ ಕೊಳ್ಳಾಗ ಗಂಟೆ ಕಟ್ಟಣ್ರೋ….” ಎಂದಿತು ಹಿರಿಯ ಇಲಿ.
“ಅಜ್ಜ…ಇದು ಹುಟ್ಟಿದಾಗಿನಿಂದ ಕೇಳಿಕೋತಾ ಬಂದಿನಿ..ನಮ್ಮವರೆಲ್ಲಾ ಕಟ್ಟೋಣ ಕಟ್ಟೋಣ ಅಂತಾ ಬೆಕ್ಕಿನ ಬಾಯಲ್ಲಿ ಹೋಗಿದ್ದ ಇತಿಹಾಸ…! ಒಬ್ಬರಾದ್ರೂ ಧೈರ್ಯ ಮಾಡಿ ಕೊಳ್ಳಾಗ ಗಂಟಿ ಕಟ್ಟಬೇಕು ಅಂತ ಆಲೋಚನೆ ಮಾಡಿದ್ರೇನು? ಸುಮ್ಮನೆ ಅದರ ಬಾಯಾಗ ಬಿದ್ದು ಆಹಾರ ಆದ್ರಿ ಹೊರತು…ಎಲ್ಲರೂ ಒಗ್ಗೂಡಿ ಎದುರಿಸೋ ಪ್ರಯತ್ನನ ಮಾಡಲಿಲ್ಲ..ಸುಮ್ಮನೆ ಮಾತಾಡೋದೆಲ್ಲ ವೇಸ್ಟ್…ಆಗೋ ಮಾತಿದ್ರ ಮಾತಾಡಬೇಕು” ಎಂದಿತು ಯುವ ಇಲಿ.
“ಹೌದಪ್ಪ ನಾವು ಹಳೆ ಮಂದಿ….ಬರಿ ಮಾತಾಡತೀವಿ..ನೀವು ಹೊಸಗಾಲದ ಮಕ್ಕಳು….ನೀವು ಐಡಿಯಾ ಕೊಡ್ರಿ..ಹಾಗಾದ್ರೂ ಮಾಡೋಣ”
“ನಾವೇನೊ ಕೊಡ್ತೀವಿ ಅಜ್ಜಾ. ಆದರ ನೀವು ನಮ್ಮ ಮಾತು ಕೇಳಬೇಕಲ್ಲ. ಹುಡುಗಬಟ್ಟಿಗಳು, ಏನು ಹೇಳತಾವೊ ಏನೊ? ‘ಹತ್ತು ಹಡದಾಕಿ ಮುಂದ ಒಂದು ಹಡದಾಕಿ ದಿಮಾಕು ಬಡಿದಂಗ ಮಾಡತಿರಿ’ ಅಂತ ಹಂಗಸ್ತೀರಿ ….”
“ಹಾಗೆನಿಲ್ಲ ನೀವೆಲ್ಲ…ಹೊಸ ಕಾಲಕ್ಕೆ ಅಪ್ ಡೇಟ್ ಆಗಿದ್ದೀರಿ.. ಹೊಸದೆಲ್ಲ ನಿಮಗ ಗೊತ್ತು. ಹೇಳ್ರಿ?”
“ನಾವು ಹೇಳಿದ ಹಾಗೆ ಮಾತು ಕೇಳ್ತಿರಾ?”
“ಎಸ್….ಎಸ್..” ಎಂದಿತು..ಉಳಿದ ಇಲಿಗಳು ಆಗಬಹುದು ಎಂದವು.
“ನಾವೆಲ್ಲ ಸೇರಿ ಬೆಕ್ಕನ್ನು ಭೇಟಿಯಾಗೋಣ”
“ಹಾಂ…! ಬೆಕ್ಕನ್ನ…? ತಲಿಗಿಲಿ ಕೆಟ್ಟಿದೇನು? ನಮ್ಮನ್ನ ಓಡಾಡಿಸಿ ತಿನ್ನತ್ತದೊ? ಏನು ಮಾತಂತ ಆಡತಿದಿ”
“ ಅದಕ ಹೇಳಿದ್ದು…ಪೂರ್ತಿ ಕೇಳಲಾರದ ಮಾತಡತಿರಿ…ಹೇಳೊದಷ್ಟು ಕೇಳಿಸಿಕೊಳ್ಳಿ”
“ಅಲ್ಲ…ನಮ್ಮ ಮೇಲೆ ಹಾರಿ..ಗಬಗಬ ತಿನ್ನಂಗಿಲ್ಲನು…?”
“ನಾವು ಎಲ್ಲಾ ಸೇರಿ ಹೋದ್ರೆ, ತಾನೆ ಅಂಜುತದ. ಸಮಯ ಬಂದ್ರೆ ನಾವೇ ಅಟ್ಯಾಕ್ ಮಾಡಿ ಅದನ್ನು ಕಚ್ಚಿಬಿಡೋಣ. ಇಲ್ಲವೇ ಮನೆ ತುಂಬ ಧಾಂದಲೆ ಮಾಡಿ, ಮನೆಯವರಿಂದ ಧರ್ಮದ ಏಟು ಬೀಳೊ ಹಾಗೆ ಮಾಡೋಣ ಇಲ್ಲ ಓಡಿಸೊ ಹಾಗೆ ಮಾಡೋಣ”
“ಹಾಂಗಂತೀಯಾ?”
“ಹೌದು…ಆದರೆ ಒಂದು ಮಾತು…ನೀವು ಯಾರು ಹೆದರಬಾರದು. ನಾ ಹೇಳಿದ್ದಷ್ಟ ಕೇಳಬೇಕು. ಸತ್ತರೆ ವೀರ ಸ್ವರ್ಗ ಉಳಿದರೆ ಜಯ” ಎಂದಿತು ಯುವ ಇಲಿ.
ಎಲ್ಲ ಇಲಿಗಳೂ ಅದರ ಮಾತಿಗೆ “ಎಸ್….. ಎಸ್….ಖರೆ ಅದ..ಖರೆ ಅದ” ಎಂದ್ರು. ಹಿರಿಯ ಇಲಿ ಸಮ್ಮತಿಸಿತು.
ಒನ್ ಫೈನ್ ಡೆ , ಎಲ್ಲ ಇಲಿಗಳು ಸೇರಿ ಬೆಕ್ಕಿಗೆ ಎದುರಾದವು….ಒಮ್ಮೆಲೆ ಐವತ್ತು ಅವರತ್ತು ಇಲಿಗಳನ್ನು ನೋಡಿ ಬಾಯಲ್ಲಿ ನೀರು ಬಂದವಾದರೂ “ಒಗ್ಗಟ್ಟಾಗಿ ನನ್ನ ಮೇಲೆ ಅಟ್ಯಾಕ ಮಾಡಲು ಬಂದಿವೆ” ಎಂದು ಹೆದರಿ…..ಹಿಂದಕ್ಕೆ ಸರಿಯ ತೊಡಗಿತು.
ಮೊದಲು ಹೆದರಿದ್ದ ಇಲಿಗಳು, ಬೆಕ್ಕು ಹಿಂದೆ ಸರಿಯುವುದನ್ನು ನೋಡಿ ಖುಷಿಗೊಂಡವು. ಯುವ ಇಲಿಯ ಯೋಚನೆಗೆ ಖುಷಿ ಪಟ್ಟವು. “ಅಟ್ಯಾಕ್ ಮಾಡಿ ಬಿಡೋಣಾ ?” ಎಂದು ಕೇಳಿದವು….
ಯುವ ಇಲಿ ‘ವೇಟ್…ವೇಟ್’ ಎಂದು ಇಲಿಗಳಿಗೆ ಹೇಳಿ “ನಮಸ್ತೆ ಬೆಕ್ಕಣ್ಣ ..ಹೇಗಿದ್ದೀರಿ?” ಎಂದಿತು.
ಇಲಿಗಳೂ ಅಂಜಿಕೆ ಇಲ್ಲದೆ ಮಾತಾಡಸೋದನ್ನು ನೋಡಿ ಬೆಕ್ಕು ಹೌಹಾರಿತು. ಹಿಂದೆ ಸರಿಯುತ್ತಾ ಭಯದಿಂದ “ಹುಂ… ಹುಂ… ಐ ಆಮ್ ಓಕೆ..ಫೈನ್ ಆದರೆ ನನಗೆ ಏನು ಮಾಡಬೇಡಿ?” ಎಂದಿತು.
“ನೋಡಣ್ಣ ಇಷ್ಟು ದಿನ ನಾವು ನೀವು…ಒಣ ಜಗಳ ಆಡತಾ ವೈರಿಗಳಾಗಿದ್ವಿ. ಕಾಲ ಬದಲಾದಂಗೆಲ್ಲ ನಾವು ಬದಲಾಗಬೇಕಲ್ಲ…! ಈಗ ನಾವು ಫ್ರೆಂಡ್ಸ ಆಗೋಣ”
“ಹ್ಞಾಂ….ಸರಿಸರಿ” ಅಂದಿತು ಹಿಂದು ಮುಂದೂ ಯೋಚಿಸದೆ ಹೆದರಿಕೆಯಿಂದ.
“ಅಯ್ಯೊ !ನಮ್ಮನ್ನು ನೋಡಿ ಯಾಕೆ ಭಯ ಪಡತಿದ್ದೀಯಾ? ಹಾಗೆ ನೋಡಿದ್ರ ನಾವೆ ಅಂಜಿಕೊ ಬೇಕು…”
“ಹೇ..ಹೇ..ಹಾಗೆನಿಲ್ಲ..ಹಾಗೆನಿಲ್ಲ..ನಾನೇನು ಅಂಜಿಕೊಂಡಿಲ್ಲ”ಎಂದಿತು ಅಂಜಿಕೋತ.
“ಇರಲಿ ಬಿಡು ಬೆಕ್ಕಣ್ಣ, ನಿನ್ನ ಮನಸ್ಸಿನ್ಯಾಗಿಂದು ಅರ್ಥ ಆಯಿತು. ವಿಷಯಕ್ಕ ಬರೋಣ,,,ನಿನಗೆ ಊಟ ಬೇಕಲ್ಲ…. ಸಿಗಲು ಸಹಾಯ ಮಾಡ್ತೀವಿ, ನೀವು ನಮಗೆ ಸಹಾಯ ಮಾಡಬೇಕು. ಮ್ಯುಚಲ್ ಅಂಡರ್ ಸ್ಟಾö್ಯಂಡಿಗ ಅಷ್ಟೆ. ನೀನು ಯಾಕ ನಮ್ಮ ಹುಡಕೊಕಂತ ದಿನಪೂರ್ತಿ ಕಾಯಬೇಕು..ನಿನಗೆ ಬೇಕಾದ ಹಾಲು ಮೊಸರು ಬೆಣ್ಣೆ ಸಿಗೋಹಾಂಗ ನಾವು ವ್ಯವಸ್ಥ ಮಾಡತೀವಿ. ನಮಗ ಬೇಕಾದ ಕಾಳು-ಕಡಿ, ಬ್ರೆಡ್-ಬಿಸ್ಕಟ್ಟು, ಹಣ್ಣು-ತರಕಾರಿ ಸಿಗುವ ಹಾಂಗ ನೀನು ಮಾಡಬೇಕು. ಬೇಕಿದ್ರೆ ನಮ್ಮ ಮಾಂಸ ಬೇಕಂದ್ರು ಸಪ್ಲೆಯ ಮಾಡ್ತೀವಿ”
ಬಾಯಲ್ಲಿ ನೀರು ಬಂದು “ಹೋ…. ಹೌದಾ! ಓಕೆ… ಓಕೆ…” ಅಂದಿತು.
“ಏನೊ..ಹೊಸ ಹುಡುಗರು ಏನೊ…ಒಳ್ಳೆದು ಮಾಡತೀರಿ ಎಂದು ಅಧಿಕಾರ ಕೊಟ್ರೆ… ನಮ್ಮನ್ನೆಲ್ಲ ಕೊಲ್ಲಾಕ ನೊಡತಾ ಇದ್ದೀಯಾ?” ಎಂದು ಅಜ್ಜ ಇಲಿ ದೂರ ಕರಕೊಂಡು ಹೋಗಿ ಬಯ್ಯಿತು.
ಯುವ ಇಲಿ, ಅಜ್ಜ ಇಲಿಯ ಕಿವಿಯಲ್ಲಿ “ಅಜ್ಜ ವಯಸ್ಸಾದವರು, ರೋಗ ಬಂದವರು ಸತ್ರೆ ಏನೂ ಮಾಡೋದು..? ವಾಸನೆ ಬಂದು ಮನೆಯವರು, ಮನೆಯಲ್ಲಿ ಇಲಿ ಹೆಚ್ಚಾಗಿವೆ ಎಂದು ಮತ್ಯಾವುದೊ ಪಾಷಾಣ ಇಟ್ಟು ಎಲ್ಲರನ್ನು ಕೊಲ್ತಾರಲ್ಲ..ಅದಕ್ಕಾಗಿ ಸತ್ತ ಇಲಿನ ಕೊಟ್ಟು ಬಿಡೋಣ” ಎಂದಾಗ
“ಹೋ..ಒಳ್ಳೆಯ ಐಡಿಯಾ..ಒಳ್ಳೆ ಐಡಿಯಾ…ವೆರಿಗುಡ್ ವೆರಿಗುಡ್” ಎಂದಿತು ಉಳಿದವರು “ಎಸ್ ಎಸ್” ಎಂದ್ರು…ಅಜ್ಜನ ಮಾತಿಗೆ.
ಯುವ ಇಲಿ ಮುಂದುವರೆದು ಬೆಕ್ಕಿಗೆ “ನಮ್ಮ ನಿಮ್ಮ ಗೆಳತನಕ್ಕೆ ಕುರುಹಾಗಿ ನಿಮಗೆ ಸನ್ಮಾನ ಮಾಡಬೇಕು ಅಂತ ಮಾಡಿವಿ” ಎಂದಿತು
ಬೆಕ್ಕು ಖುಷಿಗೊಂಡು….ಹುಚ್ಚ ಇಲಿಗಳು ಮತ್ತೆ ಪೆದ್ದ ಆಗತಿವೆ ‘ಲಡ್ಡು ಬಂದು ಬಾಯಾಗ ಬೀಳ್ತಿದೆ’ ಎಂದು ನಗುಬಂದಿತಾದರೂ ತೋರುಗೊಡದೆ “ಸನ್ಮಾನ ಮಾಡ್ತೀರಾ…ಮಾಡಿ..ಮಾಡಿ…ಎಸ್…. ಎಸ್….” ಎಂದು ತಲೆತಗ್ಗಿಸಿತು.
ಯುವ ಇಲಿ ಗೆಳೆಯನಿಗೆ ಕರೆದಾಗ, ಅವ ಕೆಂಪನೆಯ ದಾರಕ್ಕೆ ಕಟ್ಟಿದ ಗಂಟೆಯನ್ನು ತಂದು ಅಜ್ಜ ಇಲಿಯ ಕೈಯಿತ್ತ. ಅಜ್ಜ ಬೆಕ್ಕಣ್ಣ ಎಂದಾಗ
“ಆಯ್ತು ಆಯ್ತು..ಅರ್ಥ ಆಯ್ತು” ಅಂತ ಮೆಡಲಿನಂತಿದ್ದ ಕೆಂಪು ಪಟ್ಟಿ ಕಟ್ಟಿದ ಗಂಟೆಯನ್ನು ಹಾಕಿಸಿಕೊಳ್ಳಲು ಬೆಕ್ಕು ನೆಟ್ಟಗೆ ಕುಳಿತುಕೊಂಡಿತು.
ಯುವ ಇಲಿ ಪೂರ್ವಾಲೋಚಿಸಿ “ಬೆಕ್ಕಣ್ಣ…ನೀನು ಕೂತರೆ ಹಾಕಲು ಆಗುತ್ತದೇನು?..ಉದ್ದಕ್ಕ ಮಲಗಿಬಿಡಪ” ಎಂದಾಗ
“ಹೋ…ಹೌದಲ್ಲ..ಹೌದಲ್ಲ..ಸ್ವಾರಿ ಸ್ವಾರಿ” ಎಂದು ಉದ್ದಕ್ಕೆ ಮಲಗಿತು.
ಅಜ್ಜ ಇಲಿ, ಬೆಕ್ಕಿನ ಮೇಲೆ ಏರಿ, ಬೆಕ್ಕಿನಕೊರಳಲ್ಲಿ ಗಂಟೆಯ ಹಾಕಿ ಸನ್ಮಾನಿಸಿತು..ಎಲ್ಲರೂ ಚಪ್ಪಾಳೆ ತಟ್ಟಿದರು. . “ಡಣ್… ಡಣ್..’ ಸೌಂಡು ಬಂದು ಬೆಕ್ಕು ಕೂಡಾ ಖುಷಿಗೊಂಡಿತು ಮಕ್ಕಳು ‘ಕುಯಿಂ ಕುಯಿಂ’ ಎನ್ನುವ ಚಪ್ಪಲಿ ಹಾಕಿಕೊಂಡು ಸಂಭ್ರಮಿಸಿದಂತೆ ಓಡಿದ್ದೆ ಓಡಿದ್ದ..ಜಿಗಿದಿದ್ದೆ ಜಿಗಿದಿದ್ದು…
ಇಲಿಗಳು ತಮ್ಮ ಕೆಲಸ ವರ್ಕಔಟ್ ಆಗಿದ್ದಕ್ಕೆ ಅವು ಕುಣಿದಿದ್ದೆ ಕುಣಿದಿದ್ದು..ಯುವ ಇಲಿಗೆ ಜೈ ಜೈ ಅಂದಿದ್ದೆ ಅಂದಿದ್ದು..ಜೊತೆಗೆ ಬೆಕ್ಕಿಗೂ…
ಹೌದು…!ಮುಂದೆ ಏನಾಯ್ತು ಅಂದ್ರ…?
ಏನೆಲ್ಲಾ ಆಗಿರಬಹುದು… ನೀವೇ ಯೋಚಿಸಿ….?
ಆತ್ಮೀಯ ಓದುಗರೆ,
ಕಳೆದ ಒಂದು ವಾರದಿಂದ ಮುರಿದು ಕಟ್ಟಿದ ಹಾಗೂ ಹೊಸ ಬಗೆಯ ಏಳು ಮಕ್ಕಳ ಕತೆಗಳನ್ನು ಓದಿದ್ದೀರಿ ಎಂದು ಭಾವಿಸಿರುವೆ. ಮಕ್ಕಳಿಗೆ ಮಜಾ ಎನ್ನಿಸಲಿ ಎನ್ನುವ ಆಶಯದಿಂದ ಈ ಕತೆಗಳಲ್ಲಿ ತಿಳಿ ಹಾಸ್ಯ ತರುವ ಪಯತ್ನ ಮಾಡಿರುವೆ, ಮಕ್ಕಳಿಗೆ, ತಮಗೆ ಮಕ್ಕಳ ದಿನಾಚರಣೆಯ ಹಿನ್ನಲೆಯಲ್ಲಿ ತಮಗೆ ತಲುಪಿಸಲು,ಇಂತಹ ಅವಕಾಶ ಸಾಧ್ಯವಾಗಿದ್ದು ಆತ್ಮೀಯ ಒಡನಾಡಿಗಳು, ನನ್ನ ಹಿತೈಶಿಗಳು, ಸಂಪಾದಕರಾದ ಶ್ರೀ ವೀರೇಶ ಸೌದ್ರಿಯವರ ಪ್ರೀತಿಯಿಂದ. ಅವರ ಈ ಹೊಸ ಪ್ರಯೋಗಕ್ಕೆ ಸದಾ ಕೃತಜ್ಞನಾಗಿರುವೆ..ಹಾಗೆ ಓದಿದ ತಮಗೂ….
–ಗುಂಡುರಾವ್ ದೇಸಾಯಿ