ಮಾತಿನ ಮಹತ್ವ ಬಲ್ಲವರಾರು?

ಮಾತಿನ ಮಹತ್ವ ಬಲ್ಲವರಾರು?

ಮಾತು ಬಲ್ಲವರು ಏನು ಕೂಡ ಮಾಡಬಲ್ಲರು? ಮಾತು ಬಲ್ಲವನಿಗೆ ಜಗಳವಿಲ್ಲ ಅಂತ ಹಿರಿಯರು ಹೇಳಿದ್ದಾರೆ.

ವಾಕ್ ಚಾತುರ್ಯ ಉಳ್ಳವರು ಎಂಥಾ ಕಷ್ಟದ ಸನ್ನಿವೇಶಗಳಲ್ಲೂ ಕೂಡ ಸುಲಭವಾಗಿ ಗೆಲ್ಲಬಲ್ಲರು. ಇತರರಿಗೆ ತಮ್ಮ ಮನದಾಳದ ಭಾವನೆಗಳನ್ನು ಹೇಳಿ ಮಾತಿನಲ್ಲಿ ಸುಂದರ ಲೋಕವನ್ನು ಕಟ್ಟಬಹುದು. ನಮ್ಮ ಮನಸ್ಸಿನ ಆಸೆ ಆಕಾಂಕ್ಷೆಗಳನ್ನು ಶಬ್ದ ರೂಪಗಳಲ್ಲಿ ತಿಳಿಸಲು ಇರುವ ಅತ್ಯಂತ ಪರಿಣಾಮಕಾರಿ ಮಾಧ್ಯಮವೇ ಈ ಮಾತು .

ಮಾತು ಬರಿ ಶಬ್ದವಲ್ಲ, ಮನದ ಬಯಕೆ ಹಾಗೂ ಹಂಬಲ, ಪ್ರೀತಿ ವಿಶ್ವಾಸವನ್ನು, ಅಭಿನಂದನೆಯನ್ನು, ಸಂತಾಪವನ್ನು, ತಿಳಿಸುವ ಈ ಮಾತು , ಮನದ ಭಾವದ ಹಕ್ಕಿಗೆ ಗರಿ ಮೂಡಿಸಿ ಆಕಾಶದ ಎತ್ತರಕ್ಕೆ ಹಾರುವ ಚೇತನವನ್ನು ತುಂಬುವುದರಲ್ಲಿ ಸಂಶಯವಿಲ್ಲ

ದೇವರು ಮಾನವನಿಗೆ ಮಾತ್ರ ನೀಡಿರುವ ಅತ್ಯದ್ಭುತ ಕೊಡುಗೆ ಎಂದರೆ ಅದು ಮಾತು ಚೆನ್ನಾಗಿ ಶಕ್ತಿಶಾಲಿ ಯಾಗಿ ಮಾತನಾಡುವುದು ಒಂದು ಕಲೆ, ಸುಳ್ಳಿಗೆ ನಿಜ , ಹಾಗೇ ನಿಜಕೇ ಸುಳ್ಳು, ಮಾಡೋದು ಒಂದು ಕಲೆ, ಅದು ಎಲ್ಲರಿಗೂ ಬರುವಂತದಲ್ಲ. ಕೆಟ್ಟ ಯೋಚನೆ ಹೊಂದಿದವರಿಗೆ ಅದು ಹೊಸತಲ್ಲ.

ಇತ್ತೀಚಿಗೆ ಸಂವಹನ ಕಲೆ ತುಂಬಾ ಮಹತ್ವ ಪಡೆದುಕೊಳ್ಳುತ್ತಿದೆ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ ನಮ್ಮ ಆಲೋಚನೆಗಳನ್ನ ಭಾವನೆಗಳನ್ನು ಇತರರಿಗೆ ಪರಿಣಾಮವಾಗಿ ತಿಳಿಸುವುದು ನಮ್ಮಲ್ಲಿರುವ ಹೊಸ ವಿಚಾರಧಾರೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಲು , ನಾವು ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಸಹಾಯಕಾರಿ ಯಾಗಿದೆ.

ಎಲ್ಲಾ ಜ್ಞಾನವನ್ನು ಹೊಂದಿ ಅಭಿವ್ಯಕ್ತಿಸಲು ಬರದಿದ್ದರೆ ಸಮಾಜದ ಜೀವನದಲ್ಲಿ ನಾವು ಜೀರೋ ಆಗಿಬಿಡುತ್ತೇವೆ,

ಅದಕ್ಕೆ ಸರ್ವಜ್ಞನವರು ಹೇಳಿದ್ದಾರೆ ಮಾತಿನಿಂದಲೇ ಗೆಳೆತನ, ಮಾತಿನಿಂದಲೇ ಹಗೆ ತನ , ಮಾತಿನಿಂದಲೇ ಸಕಲ ಸಂಪತ್ತು ದೊರೆಯುವುದು ಎಂದು

ಪ್ರೀತಿ ಪೂರ್ವಕವಾಗಿ ಮಾತನಾಡುವರ ಬಳಿ ನಮ್ಮ ಕಷ್ಟ ಸುಖಗಳು ನಾವು ಯಾವುದೇ ಹಿಂಜರಿಯುವಿಲ್ಲದೆ ಹಂಚಿಕೊಳ್ಳಬಹುದು, ಆತ್ಮೀಯತೆ ತುಂಬಿದ ಮಾತುಗಳು ನಮ್ಮನ್ನು ಅವರ ನಿಕಟ ವರ್ತಿಯಾಗಿ ಮಾಡುತ್ತದೆ, ಅದಲ್ಲದೆ ನಮಗೆ ಎಂದೆಂದಿಗೂ ಬೇಡವಾದ ಏಕಾಂಗಿತನ ಮರೆಸುತ್ತದೆ.

ಅದೇ ಮಾತು ವಿರುದ್ಧವಾಗಿದ್ದಲ್ಲಿ ನಮ್ಮ ಜೀವನವೇ ನರಕವಾಗಿ ಬಿಡುತ್ತದೆ. ಹಾಗಾಗಿ ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮಾತಿನ ಬಗ್ಗೆ ಹೇಳುತ್ತಾರೆ ಸ್ಪಟಿಕದ ಸಲಾಕೆಯಂತೆ, ಮಾಣಿಕ್ಯದ ದೀಪ್ತಿಯಂತೆ, ನಮ್ಮ ಮಾತುಗಳಿರಬೇಕು. ಮಾತು ನಮ್ಮ ವೈರಿಗಳ ಮುಂದೆ ಗತ್ತಿನಂತಿರಬೇಕು. ಹೆದರಿಸುವರ ಮುಂದೆ ಕತ್ತಿಯಂತಿರಬೇಕು. ಅದೇ ನಮ್ಮ ಆತ್ಮೀಯರ ಮುಂದೆ ಮುತ್ತಿನಂತಹ ಮಾತುಗಳಾಗಿರಬೇಕಂತೆ ಹಿರಿಯರ ಮುಂದೆ ಹತ್ತಿಯಂತಿರಬೇಕು

ನಮ್ಮ ಮನಸ್ಸು ಆಲೋಚನೆ ಮಾಡುತ್ತಿದೆ ಎಂದರೆ ಅದು ತನ್ನೊಂದಿಗೆ ತಾನು ಮಾತನಾಡುತ್ತಿದ್ದೇನೆ ಎಂದರ್ಥ.

ಮಾತು ಆಡುವ ಮುನ್ನ ನಿಮ್ಮದು, ಆಡಿದ ಮೇಲೆ ಅದು ಪರರದು , ಇದು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು.

ಭಾಷಾ ಪ್ರಜ್ಞೆ ಇರುವವರು ಎಲ್ಲರನ್ನು ಆಕರ್ಷಿಸುತ್ತಾರೆ, ಮಾತುಗಳ ನಡುವೆ ದೃಷ್ಟಾಂತಗಳನ್ನು ಸಂದರ್ಭಾನುಸಾರವಾಗಿ ಬಳಸಿದ್ದರೆ ಎದುರಿನವರಿಗೂ ರಂಜಿಸುತ್ತಾರೆ ,

ಸ್ಪೂರ್ತಿದಾಯಕ ಮಾತಿಗೆ ಸ್ವಾಮಿ ವಿವೇಕಾನಂದರು ಕೂಡ ಒಂದು ಮಾತನ್ನು ಹೇಳುತ್ತಾರೆ ಮಾನವನ ಜೀವನವೆಂಬ ನಾಟಕದಲ್ಲಿ ಶಬ್ದಗಳ ಪ್ರಮುಖ ಪಾತ್ರ ವಹಿಸುತ್ತದೆ
ಅದೇ ಮಾತು ನಮ್ಮ ಯೋಚನಾ ಲಹರಿಗೆ ವಿರುದ್ಧವಾಗಿ ನಕರಾತ್ಮಕವಾಗಿ ವಿಚಾರಿಸಿದಲ್ಲಿ ಎಂತಹ ಹೊಲಸು ಮಾತು ನಮ್ಮ ಬಾಯಿಂದ ಬರುತ್ತದೆ . ಆಗ ನಮ್ಮ ಎದುರಿನವರಿಗೆ ಎಷ್ಟೊಂದು ಅಘಾತವಾಗುತ್ತದೆ. ಎಂಬುದು ಕೂಡ ಈ ಮಾತಿನ ಉತ್ಪತ್ತಿಯಿಂದಲೇ. ಹಾಗಾದರೆ ನಮ್ಮ ಮಾತು ಹೇಗಿರಬೇಕು? ನಾವೆಂದು ಯೋಚಿಸದೆ ಮಾತನಾಡಬಾರದು, ಸರಳವಾಗಿ ನೇರವಾಗಿ ಆಕರ್ಷಿಷವಾಗಿ ಮೆಚ್ಚುಗೆಯ ಸೂಚಿಸುವಂತಹ ಪದಗಳು ಮಾತಿನಲ್ಲಿರಬೇಕು. ಆಲಿಸುತ್ತಿರುವವರಿಗೆ ಹಿತವೇನಿಸುವಂತಿರಬೇಕು. ಭಾವಕೆ ತಕ್ಕಂತೆ ಮಾತಿನ ದಾಟಿರಬೇಕಂತೆ, ನಮ್ಮ ಮಾತು ಯಾವಾಗಲೂ ಉದ್ದೇಶದಿಂದ ಕೂಡಿರಬೇಕು. ಮಾತು ಮನದಾಳದಿಂದ ಬಂದರೆ ಎದುರಿನವರಿಗೆ ನಮ್ಮ ಪ್ರಾಮುಖ್ಯತೆ ಸರಳವಾಗಿ ಗೊತ್ತಾಗುತ್ತದೆ.

ಆದರೆ ಕೆಲವೊಂದು ಸಲ ಕೋಪದಲ್ಲಿ ನಾವು ಆಡುವ ಮಾತಿನ ಬಾಣಗಳು ಕೋಪದ ಜ್ವಾಲೆಯಲ್ಲಿ ಉರಿಯುವಂತೆ ಇರುತ್ತವೆ.

ಕೋಪದಲ್ಲಿದ್ದಾಗ ನಮ್ಮ ಮೇಲೆ ನಮಗೆ ಹತೋಟಿ ಇರುವುದಿಲ್ಲ ಹಾಗಾಗಿ ಎದುರಿನವರ ಭಾವನೆಗಳಿಗೆ ಧಕ್ಕೆ ಉಂಟಾಗುವ, ಮನಸ್ಸು ನೋಯಿಸುವ ಹಾಗೆ ಮಾತನಾಡಿ ಬಿಡುತ್ತೇವೆ.

ಅತಿ ಮಾತನಾಡಿ ನಮ್ಮ ಮರ್ಯಾದೆ ನಾವೆ ಕಳೆದುಕೊಳ್ಳುತ್ತೇವೆ, ಅನಗತ್ಯವಾದದ್ದನ್ನು ಹೇಳಲು ಮುಂದಾಗುತ್ತೇವೆ , ಸುಳ್ಳು ಭರವಸೆಗಳನ್ನ ನೀಡಿ ಜಂಬ ಕೊಚ್ಚಿಕೊಳ್ಳುತ್ತೇವೆ.

ಅರ್ಥವಿಲ್ಲದ ಹೊಲಸು ಪದಗಳನ್ನು ಬಳಸುತ್ತೇವೆ. ಅಗ್ಗವಾದ ಹಗುರವಾದ ಮಾತನ್ನು ಆಡಿ ಎದುರಿನವರ ಮನಸ್ಸು ಚುಚ್ಚುತ್ತೇವೆ.

ಮಾತಿನ ಮಹತ್ತರ ಉಪಯೋಗಗಳನ್ನು ತಿಳಿದು ಮಾತನಾಡಿದರೆ ಬೇರೆಯವರ ಮನ ತಿಳಿಯಲು ನೆರವಾಗುತ್ತದೆ ಅಲ್ಲವೇ?

ಚಿಕ್ಕವರ ಜೊತೆ ಚಿಕ್ಕವರಾಗಿ ಹಿರಿಯರ ಜೊತೆ ಅನುಕಂಪದಿಂದ, ಕಷ್ಟದಲ್ಲಿದ್ದವರ ಬಗ್ಗೆ ಸಹಾನುಭೂತಿಯಿಂದ, ದುರ್ಬಲರ ಮತ್ತು ಪತಿತರ ಬಗ್ಗೆ ಸಹನೆಯಿಂದ ಇದ್ದಲ್ಲಿ , ನಮ್ಮ ಮಾತಿನ ಮೇಲೆ ನಮಗೆ ಹಿಡಿತ ಬರಲು ಸಾಧ್ಯವಾಗುತ್ತದೆ.

ಮುಂದುವರೆಯುತ್ತದೆ….

_ ಮೇನಕಾ ಪಾಟೀಲ್

Don`t copy text!