ತಾನೊಂದು ಬಗೆದರೆ……

ತಾನೊಂದು ಬಗೆದರೆ……

ಬೇರೆಯವರ ಮೇಲಿನ ಹೊಟ್ಟೆ ಉರಿ ನಮ್ಮನ್ನೇ ತಿನ್ನುತ್ತೆ ಅಂತಾರಲ್ಲ ಅದು ಖಂಡಿತ ಸತ್ಯ. ಯಾರೋ ಮೇಲಿನ ಪೈಪೋಟಿಗೆ ನಿಂತು ಅವರ ಹಾಗೆ ನಾನಿಲ್ಲ, ಇವರ ಹಾಗೆ ಇಲ್ಲ, ಅವರು ನನಗಿಂತ ಬುದ್ಧಿವಂತರು, ಇವರು ನನಗಿಂತ ಚೆನ್ನಾಗಿದಾರೆ, ಅವರು ಎಷ್ಟು ಒಳ್ಳೆಯ ಬಟ್ಟೆ ಧರಿಸುತ್ತಾರೆ, ಇವರು ಸ್ವಂತ ಮನೆಯಲ್ಲಿ ವಾಸಿಸುತ್ತಾರೆ…..ಹೀಗೆ ಹಲವಾರು ಬೇಡದ ವಿಚಾರಗಳೆ ನಮ್ಮ ತಲೆಯಲ್ಲಿ ತುಂಬಿಕೊಂಡಿರುತ್ತದೆ. ಅಷ್ಟೇ ಅಲ್ಲದೆ ಅನೇಕ ಕೆಟ್ಟ ಕೆಲಸಗಳನ್ನು ಮಾಡಲು ಮನಸು ಪ್ರೇರೇಪಿಸುತ್ತದೆ.

ಕೆಲವೊಮ್ಮೆ ಯಾರನ್ನಾದರೂ ದ್ವೇಷ ಮಾಡಿಕೊಂಡು, ಅವರನ್ನು ಬೈದುಕೊಂಡು ಇದ್ದಾಗ, ಅವರೇ ಎದುರಿಗೆ ಬಂದಾಗ ನಾವು ಆಹಾ ನಿನ್ನ ಭೇಟಿಯಾಗಿದ್ದು ಬಹಳ ಸಂತೋಷ ಅಂತ ಡೋಂಗಿ ಮಾತುಗಳನ್ನಾಡಿ ಅವರನ್ನು ತಬ್ಬಿ ನಮ್ಮ ಇಲ್ಲದ ಸಂತೋಷ ವ್ಯಕ್ತಪಡಿಸಿದಾಗ…..ನಮ್ಮ ಶರೀರದಲ್ಲಿ ಆಗುವ ಬದಲಾವಣೆಗಳ ಪರಿಣಾಮ ಏನಾಗುತ್ತೆ ಅಂದರೆ….ನಮ್ಮ ದೇಹದೊಳಗಿನ ಜೀವಕೋಶಗಳಿಗೆ ಅವರನ್ನು ಬೈದುಕೊಂಡು ದ್ವೇಷ ಮಾಡುತ್ತಿರುವ ಸಂದೇಶ ಹೋದಾಗ ಅದು ಅಲ್ಲಿ ಹಾಗೆ ಅಚ್ಚೊತ್ತಿರುತ್ತದೆ.

ನಂತರ ನಮ್ಮ ಭಾವನೆಗಳು ಇದ್ದಕ್ಕಿದ್ದಂತೆ ವ್ಯತಿರಿಕ್ತವಾದಾಗ ಅದೇ ಜೀವಕೋಶಗಳಿಗೆ ಗೊಂದಲವಾಗಿ ಸ್ಪಂದನೆ ಸಿಗದೆ ಹೋಗುತ್ತದೆ. ಕೆಲವು ರಾಸಾಯನಿಕ ಕ್ರಿಯೆಗಳು ನಡೆದು ಮಾನಸಿಕವಾಗಿಯೂ, ದೈಹಿಕವಾಗಿಯೂ ಅನೇಕ ಬದಲಾವಣೆಗಳಾಗುತ್ತದೆ. ಈ ಕಾರಣದಿಂದ ಮನುಜ ಕಣ್ಣಿಗೆ ಕಾಣದ ಅನೇಕ ರೋಗಗಳನ್ನು ಎದುರಿಸುತ್ತಾನೆ. ದ್ವೇಷ, ಹೊಟ್ಟೆಯುರಿ ಮನುಷ್ಯನನ್ನು ಎಷ್ಟರ ಮಟ್ಟಿಗೆ ಹೈರಾಣ ಮಾಡುತ್ತದೆ ಎಂದರೆ ಸೇಡು ತೀರಿಸಿಕೊಳ್ಳುವವರೆಗೂ ಅವನ ಮನಸ್ಸು ಚಂಚಲಗೊಳ್ಳುತ್ತದೆ. ಆದರೆ ಅದರಿಂದ ಆ ಸುಳಿಯಲ್ಲಿ ಅವನೇ ಸಿಕ್ಕಿ ಹಾಕಿಕೊಂಡು ಒದ್ದಾಡುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

ಮನುಜನ ಸ್ವಭಾವ ಇದನ್ನೆಲ್ಲಾ ದಾಟಿ ನಿಲ್ಲಬೇಕು. ಬೇರೆಯವರನ್ನು ಕೀಳಾಗಿ ಕಂಡು ಆಡಿಕೊಳ್ಳುವುದನ್ನು ಮೊದಲು ಬಿಡಬೇಕು. ಅದಕ್ಕೆ ಸಾಧನೆ ಮುಖ್ಯ. ಬೇರೆಯವರ ಬದುಕಿನ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ತನ್ನ ತಾ ಮೊದಲು ಅರಿತು ಬೇರೆಯವರೂ ಸಹ ನನ್ನಂತೆ ಎಂದು ಪರಿಗಣಿಸಿದರೆ ಬಹಳ ಉತ್ತಮ ಮನುಷ್ಯರಾಗಿ ಬದುಕಲು ಸಾಧ್ಯ.

ಚಂಪಕವನ”
ಚಂಪಾ ಚಿನಿವಾರ್.

Don`t copy text!