ಅಕ್ಕನ ನಡೆ – ವಚನ-8
ಚೆನ್ನಮಲ್ಲಿಕಾರ್ಜುನನ ಸಾಂಗತ್ಯದ ಗಮ್ಯ
ಸಜ್ಜನೆಯಾಗಿ ಮಜ್ಜನಕ್ಕೆರೆವೆ
ಶಾಂತಳಾಗಿ ಪೂಜೆ ಮಾಡುವೆ
ಸಮರತಿಯಿಂದ ನಿಮ್ಮ ಹಾಡುವೆ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.
ಅಕ್ಕ ತನ್ನ ಅಧ್ಯಯನ, ಅನುಭವ, ಅನುಭಾವದ ಹಂತ ತಲುಪಿ, ಒಂದೊಂದೇ ಮೆಟ್ಟಿಲೇರುತ್ತ ಗಮ್ಯದ ಕಡೆ ಮುಖ ಮಾಡಿ, ಸಾಧನೆ ಗೈದ ತಪಸ್ವಿ. ಈ ವಚನದಲ್ಲಿಯೂ ಅದೇ ತನ್ಮಯತೆ ಇರುವುದನ್ನು ಗ್ರಹಿಸಬಹುದು.
ಸಜ್ಜನೆಯಾಗಿ ಮಜ್ಜನಕ್ಕೆರೆವೆ
ಇಲ್ಲಿ ‘ಸಜ್ಜನ’ ಮತ್ತು ‘ಮಜ್ಜನ’ ಎರಡು ಶಬ್ದಗಳು ಪ್ರಾಸ ಪದಗಳಂತೆ ಕೇಳಿಸಬಹುದು. ಆದರೆ ಅದರ ಒಳಾರ್ಥದ ಗ್ರಹಿಕೆ ಅನನ್ಯ. ಸಜ್ಜನನೆಂದರೆ ಒಳ್ಳೆಯ ವ್ಯಕ್ತಿ; ಸಜ್ಜನಿಕೆ ಎಂದರೆ ಒಳ್ಳೆಯತನ. ವ್ಯಕ್ತಿ ಸಜ್ಜನ ಎನಿಸಿಕೊಳ್ಳುವುದು ಸುಲಭದ ಮಾತಲ್ಲ. ಅದೊಂದು ರೂಢಿಯಾಗಿ ಬರುವ ಪ್ರಕ್ರಿಯೆ ಮತ್ತು ವೈಯಕ್ತಿಕ ಬದ್ಧತೆ. ಮಜ್ಜನವೆಂದರೆ ಲಿಂಗಪೂಜೆಗೂ ಮುನ್ನ ಮಾಡುವ ಸ್ನಾನ ಮತ್ತು ಇಷ್ಟಲಿಂಗ ಶುದ್ಧೀಕರಣ ಪ್ರಕ್ರಿಯೆ.
ಸಜ್ಜನಿಕೆಯ ಹಿನ್ನೆಲೆಯಲ್ಲಿ ಮಹಾತ್ಮರು ನೀಡುವ ಕೆಲವು ಉದಾಹರಣೆಗಳಿವೆ. ರಾಮಕೃಷ್ಣ ಪರಮಹಂಸರು ಒಂದು ಮಾತು ಹೇಳುತ್ತಾರೆ, ‘ಏನನ್ನು ತಿನ್ನುತ್ತೇವೆಯೊ ಅದನ್ನೇ ತೇಗುತ್ತೇವೆ.’ ಇಂಗ್ಲಿಷಿನ ಗಾದೆ ಮಾತು ಹಾಗೆಯೇ ಇದೆ, ‘Tell me your company I will tell you what you are.’ ಹಿಂದಿಯಲ್ಲಿ ಅದನ್ನೇ ಹೀಗೆ ಹೇಳುತ್ತಾರೆ, ‘ಜೈಸಾ ಸಂಗ್ ವೈಸಾ ರಂಗ್.’ ಅಂದರೆ ನಾವು ಎಂಥ ಜನರ ಜೊತೆಯಲ್ಲಿ ಇರುತ್ತೇವೆಯೊ, ಅಂಥವರ ಗುಣಗಳು ನಮ್ಮಲ್ಲಿಯೂ ಬೆಳೆಯುತ್ತದೆ.
‘ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ
ದೂರ ದುರ್ಜನರ ಸಂಗವದು ಭಂಗವಯ್ಯಾ
ಸಂಗವೆರಡುಂಟು ಒಂದ ಹಿಡಿ ಒಂದ ಬಿಡು
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರು.’
ಬಸವಣ್ಣನ ಈ ವಚನದ ಆಶಯವೂ ಅದೇ ಆಗಿದೆ. ಒಳ್ಳೆಯವರ ಸಹವಾಸದಲ್ಲಿದ್ದು, ಇತರರಿಂದ ದೂರವಿರಬೇಕು. ದುರ್ಜನರ ಜೊತೆಗಿದ್ದರೆ, ಅದು ನಮ್ಮ ಬದುಕಿನ ಬೆಳವಣಿಗೆಗೆ ಧಕ್ಕೆ ತರುತ್ತದೆ. ಯಾವತ್ತೂ ಸಂಗಗಳು ಎರಡು ಇರುತ್ತವೆ. ಆದರೆ ಆಯ್ಕೆ ನಮ್ಮ ಕೈಯಲ್ಲಿಯೇ ಇರುವುದರಿಂದ, ಸರಿಯಾದುದನ್ನು ನಿರ್ಧರಿಸಬೇಕು. ಶರಣನಾದವನು ಎಲ್ಲವನ್ನೂ ಗ್ರಹಿಸಿ, ಶುದ್ಧ ಮನಸಿನಿಂದ ಮಾಡುವುದರಿಂದ ಮಂಗಳಕರವಾಗಿಯೇ ಇರುತ್ತದೆ.
ಇದೇ ಅರ್ಥದ ಇನ್ನೊಂದು ದಾಸರ ಕೀರ್ತನೆಯ ಸಾಲು, ‘ಸಜ್ಜನರ ಸಂಗದೊಳು ಇರಿಸೆನ್ನ ರಂಗ, ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ’ ಎಂದಿದೆ.
ಹಿಂದಿ ಕವಿಯೋಬ್ಬ ಹೋಲಿಕೆಯ ಮೂಲಕ ಹೇಳುತ್ತಾನೆ,
‘ಸೌ ಯೋಜನ ಸಜ್ಜನ್ ಬಸೈ
ಜಾನೆ ಹೃದಯಮಂದೀರ್
ಕಪಟ್ ಸನೇಹಿ ಆಂಗನೇ
ಜಾನೇ ಸಮುಂದರ್ ಪಾರ್’
ಸಜ್ಜನ ವ್ಯಕ್ತಿಯೊಬ್ಬನು ನೂರಾರು ಅಡಿ ದೂರದಲ್ಲಿ ವಾಸವಾಗಿದ್ದರೂ, ಅವನು ನಮ್ಮ ಹೃದಯ ಮಂದಿರದಲ್ಲೇ ವಾಸವಾಗಿದ್ದಾನೆಂದು ತಿಳಿಯಬೇಕು. ಕಪಟ ಗುಣ ಹೊಂದಿದ ವ್ಯಕ್ತಿಯು ಮನೆಯಂಗಳದಲ್ಲೇ ಇದ್ದರೂ, ಸಮುದ್ರದಾಚೆ ಇರುವನೆಂದು ತಿಳಿಯಬೇಕು. ಹೀಗೆ ಹೇಳುವಲ್ಲಿ ದುರ್ಜನರಿಂದ ದೂರವಿರಬೇಕು ಎನ್ನುವುದೇ ಆಗಿದೆ.
ಮಹಾರಾಷ್ಟ್ರದಲ್ಲಿ ಆಗಿ ಹೋದ ಸಂತ ಏಕನಾಥರ ಒಂದು ಕತೆಯಿದೆ. ಹಿಂದೆ ಹೆಚ್ಚಿನ ವಿದ್ಯಾಭ್ಯಾಸ ಮಾಡುವವರು ಕಾಶಿಗೆ ಹೋಗುತ್ತಿದ್ದರು. ಅಲ್ಲೇ ನೆಲೆಸಿ ಪಂಡಿತರು, ಸಂತರು ಆಗುತ್ತಿದ್ದರು. ಹಾಗೆ ಏಕನಾಥರೊಮ್ಮೆ ಕಾಶಿ ಕ್ಷೇತ್ರದಲ್ಲಿ ಉಳಿದುಕೊಂಡರು. ಅವರಲ್ಲಿ ಎಲ್ಲರೂ ಮೆಚ್ಚುವ ಅಪಾರ ಶಾಂತಿ, ಸಹನೆಯ ಗುಣಗಳಿದ್ದವು. ಆ ಸ್ಥಾಯಿಭಾವವನ್ನು ಎಲ್ಲರೂ ಹೊಗಳುತ್ತಿದ್ದರು. ಇದನ್ನು ಸಹಿಸದ ಒಬ್ಬ ವ್ಯಕ್ತಿ ಅವರ ಸಂಯಮಕ್ಕೆ ಸವಾಲೊಡ್ಡುತ್ತಾನೆ.
ಒಂದು ದಿನ ಎಲೆ ಅಡಿಕೆಯನ್ನು ತಿಂದು, ಚೆನ್ನಾಗಿ ಮೆದ್ದು, ಏಕನಾಥರು ಗಂಗಾಸ್ನಾನ ಮಾಡಿ ಬರುವುದನ್ನೇ ಕಾಯುತ್ತ ಕುಳಿತಿರುತ್ತಾನೆ. ಅವರು ಶುಭ್ರವಾಗಿ ಬರುತ್ತಿರುವುದನ್ನು ಕಂಡೊಡನೆ, ಬಾಯ್ತುಂಬ ತುಂಬಿಕೊಂಡಿದ್ದನ್ನು ಮೈ ಮೇಲೆ ಉಗುಳಿಬಿಡುತ್ತಾನೆ. ಅದಕ್ಕೆ ಏಕನಾಥರ ಪ್ರತಿಕ್ರಿಯೆ ಏನೂ ಇರುವುದಿಲ್ಲ. ಅವರ ವರ್ತನೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಮರು ಉತ್ತರ ಕೊಡುವುದಾಗಲಿ, ಅಸಹನೆ ತೋರುವುದಾಗಲಿ, ಏನೂ ವ್ಯಕ್ತಪಡಿಸಲಿಲ್ಲ. ಚಕಾರವೆತ್ತದೆ ಮತ್ತೆ ಹಿಂದಿರುಗಿ ಶುಭ್ರವಾಗಿ ಬರುತ್ತಾರೆ.
ಇದರಿಂದಾಗಿ ಆ ವ್ಯಕ್ತಿಯ ಕೋಪ ದ್ವಿಗುಣವಾಗಿ ಮೈ ಪರಚಿಕೊಳ್ಳುವಂತಾಗುತ್ತದೆ. ಅವನು ಮತ್ತೆ ಮತ್ತೆ ಉಗುಳುವುದು, ಅವರು ಪುನಃ ಗಂಗಾಸ್ನಾನ ಮಾಡಿ ಬರುವುದು. ಇದು ಹೀಗೆಯೆ ತೊಂಬತ್ತೆಂಟು ಬಾರಿ ನಡೆಯುತ್ತದೆ. ಏಕನಾಥರು ತೊಂಬತ್ತೊಂಬತ್ತನೇ ಬಾರಿಯೂ ಗಂಗಾಸ್ನಾನ ಮಾಡಿ ಬರುತ್ತಾರೆ. ಇಷ್ಟಾದ ಮೇಲೆ ಆ ವ್ಯಕ್ತಿಯ ಕಲ್ಲು ಮನಸು ಕರಗಿ, ಪಾಪ ಪ್ರಜ್ಞೆ ಕಾಡಲಾರಂಭಿಸುತ್ತದೆ. ಪಶ್ಚಾತ್ತಾದಿಂದ ಒದ್ದಾಡಿ ಕಣ್ಣೀರು ಹಾಕುತ್ತ, ಏಕನಾಥರ ಕಾಲು ಹಿಡಿದನು.
ಆಗ ಏಕನಾಥರು ಸ್ಪಂದಿಸಿದ್ದು ಹೀಗೆ, ‘ಅಯ್ಯಾ ಮಹಾತ್ಮ ನೀನೇಕೆ ಅಳುತ್ತಿರುವೆ? ನೀನು ಯಾವ ತಪ್ಪನ್ನೂ ಮಾಡಿಲ್ಲ. ನಿಜಕ್ಕೂ ನೀನು ಪುಣ್ಯವಂತ. ನಿನ್ನಿಂದಾಗಿ ಈ ದಿನ ತೊಂಬತ್ತೊಂಬತ್ತು ಬಾರಿ ಗಂಗಾಸ್ನಾನ ಮಾಡಿದೆ. ಇನ್ನೊಂದು ಬಾರಿ ಗಂಗಾ ಸ್ನಾನ ಮಾಡಿದ್ದರೆ, ನೂರು ಬಾರಿ ಮಾಡಿಸಿದ ಪುಣ್ಯ ನಿನಗೆ ಬರುತ್ತಿತ್ತು’ ಎಂದರು.
ಆಗ ಆ ವ್ಯಕ್ತಿಯ ಮನಸು ಪರಿವರ್ತನೆಯಾಯಿತು. ಅವನು ಮುಂದೆ ಸಂತ ಏಕನಾಥರ ಆಪ್ತ ಶಿಷ್ಯನಾದ. ಒಬ್ಬ ವ್ಯಕ್ತಿ ಸಜ್ಜನನಾಗಬೇಕಾದರೆ, ಅವನಲ್ಲಿ ಶಾಂತಿ, ಸಹನೆ, ಸಂಯಮ, ಈ ಮೂರೂ ಗುಣಗಳಿರಬೇಕು ಎನ್ನುವುದು ಈ ಕತೆಯಿಂದ ತಿಳಿಯುತ್ತದೆ.
ಸದಾ ಶಿವಯೋಗದ ಧ್ಯಾನದಲ್ಲಿ ನಿರತಳಾಗುವ ಅಕ್ಕ, ಸಜ್ಜನೆಯಾಗಿ ಮಜ್ಜನಕ್ಕೆರೆವಳು. ಕಲ್ಯಾಣದ ಶರಣರ ಸಾಂಗತ್ಯವನ್ನು, ಆ ಅನುಭವವನ್ನು ಇತರ ವಚನಗಳಲ್ಲಿ ಕೊಂಡಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಶಾಂತಳಾಗಿ ಪೂಜೆ ಮಾಡುವೆ
ಲಿಂಗ ಪೂಜೆಯು ಧ್ಯಾನದ ಒಂದು ವಿಧಾನ. ದೇಹಭಾವದಿಂದಾಚೆಗೆ ಧ್ಯಾನಸ್ಥವಾಗಿ ಆಳಕ್ಕಿಳಿಯಲು ಶಾಂತ ಮನಸ್ಥಿತಿಯ ಅಗತ್ಯವಿರುತ್ತದೆ. ಅಕ್ಕ ಅದನ್ನು ರೂಢಿಸಿಕೊಂಡು ಅದೇ ಸ್ಥಿತಿಯಲ್ಲಿರುವುದನ್ನು ಈ ಸಾಲು ಧ್ವನಿಸುತ್ತದೆ.
ಸಮರತಿಯಿಂದ ನಿಮ್ಮ ಹಾಡುವೆ
ಧ್ಯಾನದಲ್ಲಿ ತಲ್ಲೀನವಾಗಿ ಅಂಗ ಮತ್ತು ಲಿಂಗ ಎರಡೂ ಒಂದಾದ ಭಾವ. ಶರಣರ ‘ಲಿಂಗಾಂಗ ಸಾಮರಸ್ಯ’ದ ಉನ್ನತಾವಸ್ಥೆ ಎಂದು ಹೇಳಬಹುದು. ಬೇರೆ ಬೇರೆಯಾಗಿದ್ದ ಎರಡು ಒಂದಾಗುವ ಸ್ಥಿತಿ. ಆ ಸ್ಥಿತಿಯೇ ಸಮರತಿಯ ಸಾಮರಸ್ಯ. ಅಂಗ ಮತ್ತು ಲಿಂಗದ ಮಿಲನವನ್ನು ಸಂಭ್ರಮಿಸುವ ಅಕ್ಕ ಆನಂದದಿಂದ ಹಾಡುತ್ತಾಳೆ.
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ
ಅಕ್ಕನ ಬದುಕಿನಲ್ಲಿದ್ದುದು ಒಂದೇ ಒಂದು ಹುಡುಕಾಟ. ಅದು ಅವಳ ಆತ್ಮ ಸಂಗಾತಿ ಚೆನ್ನಮಲ್ಲಿಕಾರ್ಜುನನನ್ನು ಕಾಣುವ ಉತ್ಕಟ ಹಂಬಲ. ಇದಕ್ಕೆ ಶರಣ ಸಮೂಹ ಮತ್ತು ಇಷ್ಟಲಿಂಗ ಪೂಜೆಯು ಮಾಧ್ಯಮವಾಯಿತೆಂದು ಹೇಳಿಕೊಂಡಿದ್ದಾಳೆ. ತನ್ನ ಮತ್ತು ಚೆನ್ನಮಲ್ಲಿಕಾರ್ಜುನನ ನಡುವೆ ಕಿಂಚಿತ್ತು ದೂರವನ್ನು ಸಹಿಸದ, ಸಂತೃಪ್ತ ಭಾವದ ಅನುಭವ ಈ ಸಾಲಿನಲ್ಲಡಗಿದೆ. ಲೌಕಿಕ ಮತ್ತು ಪಾರಮಾರ್ಥಿಕದ ಸಮಾಗಮವನ್ನು ಸಂಭ್ರಮಿಸಿದ್ದಾಳೆ.
ಈ ವಚನವನ್ನು ವೈಯಕ್ತಿಕ ನೆಲೆಯಲ್ಲಿ ಅಕ್ಕ ಹೇಳಿರಬಹುದು. ಆದರೆ ಇದನ್ನು ನಾವು ನಮ್ಮ ಜೀವನಕ್ಕೂ ಅಳವಡಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯ. ವ್ಯಕ್ತಿತ್ವ ವಿಕಾಸದ ನೆಲೆಯಲ್ಲಿ ಪರಿಗಣಿಭಾವಿಸಬಹುದು. ಹೇಗೆಂದರೆ, ಒಬ್ಬ ವ್ಯಕ್ತಿ ತಾನು ಹಿಡಿದ ಯಾವುದೇ ಕೆಲಸವಿದ್ದರೂ, ಅದನ್ನೂ ಪರಿಪೂರ್ಣಗೊಳಿಸುವುದು ಅವಶ್ಯಕ. ಆಗ ‘ನಾನು’ ಮತ್ತು ‘ನನ್ನ ಗುರಿ’ ಬೇರೆಯಲ್ಲ ಎನ್ನುವ ಭಾವ ಸ್ಥಾಯಿಗೊಂಡರೆ, ಆ ಕೆಲಸದಲ್ಲಿ ತನ್ಮಯತೆ ಮೂಡುತ್ತದೆ. ಅಲ್ಲಿ ‘ನಾನು’ ಮತ್ತು ‘ನನ್ನ ಸಾಧನೆ’ ಎರಡೇ ಉಳಿದಿರುತ್ತದೆ. ಎರಡು ಒಂದಾದ ಭಾವವೇ ಯಶಸ್ಸು ಅಥವಾ ಬದುಕಿನ ಗಮ್ಯ. ಅದೇ ಆತ್ಮತೃಪ್ತಿಯೂ ಹೌದು!
-ಸಿಕಾ