ಈ ಬದುಕು…

ಈ ಬದುಕು…

ಕಳೆಯಬಹುದು
ತೆಗಳಿಕೆಯಲೊಮ್ಮೆ
ಹೊಗಳಿಕೆಯಲೊಮ್ಮೆ
ಸವೆದು ಹೋಗುತ್ತದೆ ಕ್ಷಣ ಕ್ಷಣವೂ
ಗೆಳೆಯರೇ..ಈ ಬದುಕು..! ಪಡೆಯಲು ಇಲ್ಲ ಏನೂ
ಒಯ್ಯಲೂ ಏನಿಲ್ಲ;
ಚಿಂತಿಸುವಿರೇಕೆ ಮತ್ತೆ..?
ಸವೆಯುವುದು ಮಾತ್ರ ಸುಂದರತೆ,
ಇದುವೇ ಬದುಕು ಗೆಳೆಯರೇ..
ಸವೆಯುತ್ತ ಹೋಗುವದು ಗಳಿಗೆ ಗಳಿಗೆಗೆ…

ಹಚ್ಚುತ್ತಲೇ ಇರುವೆ ತೇಪೆಯನ್ನು
ಮತ್ತೆ ಮತ್ತೆ ಬದುಕಿನ ಜೇಬಿಗೆ;
ಖೋಡಿ ದೈವ, ಹೋಗಿಯೇ ಬಿಡುತ್ತವೆ
ಸಂತಸದ ಕೆಲವು ಕ್ಷಣಗಳು…

ಬಯಕೆಗಳದೇ ಜಗಳಗಳು
ಜೀವನದ ತುಂಬಾ..
ಬೇಡ ಅವಕೆ ದುಃಖಗಳು. ಕಮ್ಮಿಯೂ ಆಗಬಾರದು ಕೆಲವಕೆ…

ತಟ್ಟುತಿರಿ ಮನದ ಕದಗಳನು
ಒಬ್ಬರನೊಬ್ಬರು;
ಭೇಟಿ ಆಗದಿದ್ದರೂ ಸರಿಯೇ
ಸದ್ದಾದರೂ ಬರುತಿರಬೇಕು..

ಸಮಯದ ಟೊಂಗೆಯ ಮೇಲೆ
ಕುಳಿತಿಹೆವು ಹಕ್ಕಿಗಳಂತೆ ;
ಹಾರಿಹೋಗುವೆವು ಒಂದು ದಿನ
ಚಿತ್ರದೊಳಗಿನ ಬಣ್ಣಗಳಂತೆ…!

ಆಡುವ ಮಾತು ಹೇಳುತ್ತದೆ
ಮನುಷ್ಯ ಎಂಥವನೆಂದು;
ಸಂವಾದ ತಿಳಿಸುತ್ತದೆ
ಜ್ಞಾನ ಎಂತಹುದೆಂದು;
ಅಹಂಕಾರ ನುಡಿಯುತ್ತದೆ
ಹಣ ಎಷ್ಟಿದೆಯೆಂದು;
ಸಂಸ್ಕಾರ ಹೇಳುತ್ತದೆ
ಪರಿವಾರ ಎಂತಹುದೆಂದು…!

ರಹಸ್ಯವಲ್ಲ…ಬದುಕು
ಬೇಸರವಲ್ಲ….ಬದುಕು
ಸಾಕು ಏನಿದೆಯೋ
ಇಂದಿದೆ..ಈ ಬದುಕು..!

ಮೂಲ ಹಿಂದಿ: ಕವಿ ಗುಲ್ ಜಾರ್.
ಕನ್ನಡ ಅನುವಾದ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ.

Don`t copy text!