ಕಲ್ಯಾಣದ ಕೊಂಡಿ ನಿಷ್ಟುರವಾದಿ -ಡಾ ಎಂ ಎಂ ಕಲ್ಬುರ್ಗಿ

ಲಿಂಗಾಯತ ಪುಣ್ಯ ಪುರುಷರ ಮಾಲೆ-೩

ಕಲ್ಯಾಣದ ಕೊಂಡಿ ನಿಷ್ಟುರವಾದಿ -ಡಾ ಎಂ ಎಂ ಕಲ್ಬುರ್ಗಿ ಅವರಿಗೆ ವಚನಾಂಜಲಿ-(ಒಂದು ನೆನಪು )

ಪುರೋಗಾಮಿಗಳ ಪ್ರತಿಗಾಮಿಗಳ ಸಂಘರ್ಷ ಇಂದು ನಿನ್ನೆಯದಲ್ಲ ಶತಮಾನದಿಂದ ನಡದೇ ಇದೆ. ಮೌಲ್ಯ ಮತ್ತು ಮೌಡ್ಯಗಳ ನಡುವಿನ ತಿಕ್ಕಾಟ .ಪ್ರಗತಿಪರ ಪುರೋಗಾಮಿ ಚಿಂತಕರ ನಿರಂತರ ಹತ್ಯೆ ಬದಲಾಗದ ಸಮಾಜ .ಶೋಷಣೆ ಅನ್ಯಾಯಕ್ಕೆ ಒಗ್ಗಿಕೊಂಡ ವ್ಯವಸ್ಥೆ .ಬುದ್ಧ ಮೊಹಮ್ಮದ ,ಯೇಸು ,ಬಸವಣ್ಣ ಗಾಂಧೀ ಇಂತಹ ಪ್ರಯೋಗಶೀಲತೆ ಪರಿವರ್ತನೆಗಾಗಿ ತಮ್ಮ ಜೀವ ತೆತ್ತರು.

ಇದು ಕೇವಲ ಒಂದು ರಾಷ್ಟ್ರದ ಸಮಸ್ಯೆ ಅಲ್ಲ ಮೂಲಭೂತವಾದಿಗಳ ಅಟ್ಟಹಾಸ ಇಂದು ವಿಶ್ವವ್ಯಾಪಿಯಾಗಿ ಮೆರೆಯುತ್ತಿದೆ. ಕೊಲೆ ಹತ್ಯೆ ಭೀಕರವಾಗುತ್ತಿದೆ .
ಉಸಿರುಗಟ್ಟಿದ ವಾತಾವರಣ ಅಭಿವ್ಯಕ್ತಿ ಸ್ವಾತಂತ್ರದ ಸಮಾಧಿಯಾಗಿದೆ .

ಹೆಚ್ಚಾಗುತ್ತಿರುವ ಮೂಲಭೂತವಾದ (FUNDAMENTALISM) 

ಆಲ್ ಖೈದಾ ,ತಾಲಿಬಾನ ,ಇಂಡಿಯನ್ ಮುಜಾಹಿದ್ದೀನ ,ಕೆಲ ಸ್ಥಾಪಿತ ಮೌಲ್ಯಗಳನ್ನು ಕೊಚ್ಚಿ ಹಾಕಿ ಸಮಾಜದಲ್ಲಿ ಅಶಾಂತಿ ಅನಿಶ್ಚಿತತೆ ಭಯ ಭೀತಿ ವಾತಾವರಣ ನಿರ್ಮಿಸುವ ದುಷ್ಟ ಶಕ್ತಿಗಳ ಹುನ್ನಾವಿರಬಹುದೇ? ಸಮಾಜವನ್ನು ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡು ತನಗೆ ಬೇಕಾದಂತೆ ಸುಲಿಗೆ ಮಾಡಿ ಬದುಕಬೇಕ್ಕೆನ್ನುವ ಕ್ರ್ರೋರ ಆಲೋಚನೆಯೇ ? ಡಾರ್ವಿನ ಸಿದ್ಧಾಂತದಂತೆ ( survival of the fittest ) ಶಕ್ತಿಯುತರಿಗೆ ಒಲಿವ ಬದುಕುವ ಸಾಮರ್ಥ್ಯವೇ?,

ಎಡ ಪಂಥೀಯ ಮತ್ತು ಬಲ ಪಂಥೀಯ ತೀವ್ರ ಸಂಘರ್ಷ .
ಭಾರತವು ಹಲವು ಭಾಷೆ ಸಂಸ್ಕೃತಿ ಧರ್ಮ ಆಚಾರ ವಿಚಾರಗಳಿ೦ದ ಕೂಡಿದ ದೇಶವಾಗಿದೆ ,ಸನಾತನವಾದಿಗಳು ಪ್ರಬಲ ಪಾಲುದಾರರು . ಈ ದೇಶದ ಆಡಳಿತವನ್ನು ಸದಾ ತನ್ನ ಹತೊಟಿಯಲ್ಲಿಟ್ಟು ಕೊಳ್ಳುವ ಒಂದೇ ಉದ್ದೇಶದಿಂದ ಇಂತಹ ಮೂಲಭೂತವಾದದ ಸಂಘಟನೆಗಳು . ಸಂಘ ಪರಿವಾರ ದೇಶದ ಸ್ವಾತಂತ್ರತೆಗೆ ದುಡಿದಿದೆ ಆದರೆ ಅದೊಂದೇ ದೇಶಭಕ್ತ ಸಂಘಟನೆ ಅನ್ನೋದು ತಪ್ಪು.. ಸಮಾಜವಾದಿ , ಕಮ್ಯುನಿಸ್ಟ್ ದಲಿತ ಪ್ರಗತಿಪರ ಸಂಘಟನೆಗಳು ತಮ್ಮ ಸಿದ್ದಾಂಥಗಳನ್ನು ಹೋರಾಟವನ್ನು ಜನಪರ ವೇದಿಕೆ ಮೂಲಕ ಪ್ರತಿಪಾದಿಸಿದರೆ , ಧರ್ಮ ಆಚಾರ ಪೌರಾಣಿಕ ಹಿನ್ನೆಲೆಯವರು ತಮ್ಮ ವಿಚಾರಗಳನ್ನು ಧಾರ್ಮಿಕ ಪೌರಣಿಕ ಶ್ರದ್ಧೆಗಳ ಮೂಲಕ ಸಾಧಿಸಲು ಪ್ರಯತ್ನಿಸುತ್ತಾರೆ , ಇವರು ಬಲಪಂಥಿಯ ಸಿದ್ಧಾಂತದವರಾಗಿರುತ್ತಾರೆ.

ಮತೀಯ ಶಕ್ತಿಗಳ ಅಟ್ಟಹಾಸ

ಕರ್ನಾಟಕವು ಶಾಂತಿಯ ತವರು ಅದರಲ್ಲೂ ಧಾರವಾಡ ಕವಿಗಳ ತಾಣ ಸಮರಸದ ಕವಿ ದ. ರಾ .ಬೇಂದ್ರೆ ಕರ್ಮಭೂಮಿ .ಸಮನ್ವಯತೆಯ ಕವಿ ಚೆನ್ನವೀರ ಕವಿಯ ಕ್ಷೇತ್ರ. ಡಾ ಗಿರಡ್ಡಿ ,ಚಂಪಾ , ಕುರ್ತಕೋಟಿ ,ಬೆಟಗೇರಿ ಕೃಷ್ಣ ಶರ್ಮ,ಪಟ್ಟಣಶೆಟ್ಟಿ ,ಮುಂತಾದ ಅನೇಕ ಸಾಹಿತಿ ಸಂಶೋದಕರನ್ನು ಹೊಂದಿದ ಧಾರವಾಡದ ನೆಲದಲ್ಲಿ ಸಮರಸ ಸಮಕಳೆ ಸಮಸುಖ ,ಸಮಾನತೆ ತತ್ವವನ್ನು ಸಾರುವ ಕೇಂದ್ರ.

ಸಮೀಕ್ಷೆಯ ಪ್ರಕಾರ ಧಾರವಾಡದ ನೆಲದಲ್ಲಿ ಸಿಗುವಷ್ಟು ಸಾಹಿತಿಗಳು ನಾಡಿನ ದೇಶದ ಇನ್ನೊಂದು ಭಾಗದಲ್ಲಿ ಸಿಗಲು ಅಸಾಧ್ಯ . ಇಂತಹ ಮಣ್ಣು ಅಗಷ್ಟ ೩೦ ರಂದು ಹಿಂಸೆಯ ರಕ್ತದೋಕುಳಿಯಲ್ಲಿ ರಕ್ತ ಸಿಕ್ತವಾಯಿತು.ಭಾರತವು ಕಂಡರಿಯದ ಸಾಹಿತಿಗಳ ಕೊಲೆ ಹತ್ಯೆ ಮಾನವ ಕುಲಕ್ಕೆ ನಾಚಿಕೆಗೆಡಿತನದ ವಿಷಯ.
ಅಂದು ೩೦ ಅಗಷ್ಟ ೨೦೧೫ ಕಲ್ಯಾಣ ನಗರದ ೯ ನೆ ಕ್ರಾಸ್ ಶ್ರೀ ವಿಜಯ ಎಂಬ ಮನೆಯಲ್ಲಿ ಹಾಡ ಹಗಲೇ ಒಬ್ಬ ನಾಡಿನ ಬಹು ದೊಡ್ಡ ವಿದ್ವಾಂಸ ಡಾ ಎಮ್ ಎಂ ಕಲಬುರ್ಗಿ ಅವರ ಕೊಲೆ ನಡೆಯಿತು.
ಬೆಳಿಗ್ಗೆ ೮.೪೦ ರ ಸಮಯ ಇಬ್ಬರು ಮೋಟಾರ್ ಬೈಕಿನ ಸವಾರರು ಬಂದು ಒಬ್ಬ ಮೋಟಾರ್ ಬೈಕನ್ನು ಆರಂಬಿಸಿ ನಿಂತಿದ್ದ ಇನ್ನೊಬ್ಬ ಗೇಟ್ ತೆಗೆದು ಕಾಲಿಂಗ ಬೆಲ್ ಒತ್ತಿದನು.ಡಾ ಎಂ ಎಂ ಕಲಬುರ್ಗಿ ಅವರ ಧರ್ಮ ಪತ್ನಿ ಶ್ರೀಮತಿ ಉಮಾ ಅವರು ಬಾಗಿಲು ತೆಗೆದು ವಿಚಾರಿಸಲು, ” ಸರ್ ಇದ್ದಾರಾ ? ಎಂದು ಪ್ರಶ್ನಿಸಿದನು.
ಅವರ ಪತ್ನಿ ” ಏನ್ರಿ ನಿಮ್ಮನ್ನು ಯಾರೋ ಭೇಟಿ ಆಗಕ ಬಂದಾರ ನೋಡ್ರಿ ” ಎಂದು ಹೇಳಿ ಮುಂಬಾಗಿಲನ್ನು ತೆಗೆದು ಪತ್ನಿ ಅಡುಗೆ ಮನೆಗೆ ಹೋದರು.
ಕಣ್ಣಿನ ಆಪರೇಷನ್ ಮಾಡಿಕೊಂಡಿದ್ದ ಡಾ ಕಲಬುರ್ಗಿಯಾರದೋ ಜೊತೆಯಲ್ಲಿ ಫೋನಿನಲ್ಲಿ ಮಾಟದ ಹತ್ತಿದ್ದರು . ಬಾಗಿಲ ಬಳಿ ಬಂದು ಕೈ ಮಾಡಿ ಸ೦ಜ್ಞೆಯ ಮೂಲಕ ಕುಳಿತು ಕೊಳ್ಳಲು ಸೊನ್ನೆ ಮಾಡಿರಬಹುದು. ಟಪ್ ಟಪ್ ಗುಂಡಿನ ಸಪ್ಪಳ .ಹಂತಕ ನಿಲ್ಲದೆ ಗೇಟ್ ದಾಟಿ ಹೊರಗೆ ಓಡಿ ಹೋಗಿ ಮೋಟಾರ್ ಬೈಕಿನವನೊಂದಿಗೆ ಪರಾರಿಯದನು.
ಇದು ನಾಡಿನ ಕರಾಳ ಚರಿತ್ರೆ, ಕಳೆದ ೫೦ ವರ್ಷದಿಂದ ಸಾರಸ್ವತ ಲೋಕದ ರಾಯಭಾರಿ ವಕ್ತಾರ ,ನಾಡು ನೆಲ ಜಲದ ಬಗ್ಗೆ ಭಾಷೆಯ ಬಗ್ಗೆ ಸಂಸ್ಕೃತಿ ಸಾದರಪಡಿಸುವ ದಿಟ್ಟ ಕನ್ನಡಿಗ ಕೊಲೆಯಾಗಿ ಬಿದ್ದದ್ದು ದುರಂತವೇ ಸರಿ. ದೇಶವೇ ಬೆಚ್ಚಿ ಬೀಳುವ ಪ್ರಸಂಗ ನಡೆದು ಹೋಯಿತು.ಮತೀಯ ಶಕ್ತಿಗಳ ಅಟ್ಟಹಾಸದ ಕೇಕೆ ,ಮೌಡ್ಯ ಕಂದಾಚರನೆಯ ದರ್ಪ, ಶೋಷಣೆ ಅನಾಚಾರಗಳ ತಾತ್ಪೂರ್ತಿಕ ಗೆಲುವು. ಕಲಬುರ್ಗಿ ಅವರ ಕೊಲೆ ಒಬ್ಬ ವ್ಯಕ್ತಿಯ ಕೊಲೆಯಲ್ಲ ಅದು ಒಂದು ಸಿದ್ಧಾಂತಕ್ಕೆ ಬಸವ ತತ್ವಕ್ಕೆ ಸತ್ಯದ ಕೊಲೆ .ಮತ್ತು ಪ್ರಗತಿ ಪರರ ಅಭಿವ್ಯಕ್ತಿ ಸ್ವಾತಂತ್ರ ಹರಣ ಮಾಡುವ ಮುನ್ಸೂಚನೆ

ಯಾರು ಡಾ ಕಲಬುರ್ಗಿ ಅವರನ್ನು ಕೊಂದಿರಬಹುದು??
ಡಾ ಎಂ ಎಂ ಕಲಬುರ್ಗಿ ದೇಶವು ಕಂಡ ಅಪ್ರತಿಮ ಸಂಶೋಧಕ ಧಾರ್ಮಿಕ ಸಾಮಾಜಿಕ ನೈತಿಕ ವೈಚಾರಿಕ ಮತ್ತು ೧೨ ನೆ ಶತಮಾನದ ಬಸವಾದಿ ಶರಣರ ಜೀವನ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಒಂದು ಇರುವೆಯನ್ನು ಹಿ೦ಸಿಸದ ಸಭ್ಯ ಜೀವಿ. ಕಂಡದ್ದನ್ನು ನೇರವಾಗಿ ನಿಷ್ಠುರವಾಗಿ ಖಚಿತ ಮಾಹಿತಿ ಆಧಾರದೊಂದಿಗೆ ಹೇಳುವ ಧೈರ್ಯವಂತ ಲೇಖಕ .
ಇವರು ಹಿಂದೂ ಧರ್ಮದ ಮೇಲೆ ವ್ಯಕ್ತಪಡಿಸಿದ ಕೆಲ ಅಭಿಪ್ರಾಯಗಳು ಮತ್ತು ಮೂರ್ತಿ ಪೂಜೆಯ ಬಗ್ಗೆ ಡಾ ಯು ಆರ್ ಅನತಮೂರ್ತಿಯವರ ಅಭಿಪ್ರಾಯವನ್ನು ತಮ್ಮ ಭಾಷಣದಲ್ಲಿ ಹೇಳಿದ್ದು ತಪ್ಪಾಯಿತೇ?
ಹಿಂದೂ ಎನ್ನುವದು ಒಂದು ಧರ್ಮವೇ ಅಲ್ಲ ,ಭಗವತ್ ಗೀತೆ ಹೇಗೆ ಧರ್ಮ ಗ್ರಂಥವಾಗುತ್ತೆ ? ಅಂತ ಪ್ರಶ್ನೆ ಮಾಡಿದ್ದು ತಪ್ಪೇ ?
ಲಿಂಗಾಯತ ವೀರಶೈವ ಬೇರೆ ಬೇರೆ ಎಂಬ ಅಭಿಮತಕ್ಕೆ ಬಂದದ್ದು ಸರಿಯಲ್ಲವೇ?
ಆಷಾಡಭೂತಿ ಸ್ವಾಮಿಗಳ ಬಗ್ಗೆ ಟೀಕಿಸಿದ್ದು ತಪ್ಪೇ? ಮಠಗಳು ವ್ಯಾಪಾರ ಕೇಂದ್ರ ಅಲ್ಲಿ ಬಸವನಿಲ್ಲ ಸ್ವಾಮಿಗಳು ಮಾತ್ರ ಇದ್ದಾರೆ ಅಂತಾ ಹೇಳಿರೋದು ನಿಜವಲ್ಲವೆ ?
ಹೀಗೆ ಹಲವು ಹತ್ತು ಸಂಶಯಗಳನ್ನು ಹುಟ್ಟು ಹಾಕಿದ ಡಾ ಕಲಬುರ್ಗಿ ಅವರ ಕೊಲೆ ಪ್ರಕರಣ .
ಭಾರತದಲ್ಲಿ ಈಗ ಉಸಿರಿಸುವದು ಕಠಿಣವಾಗುತ್ತಿದೆ. ಮಾನವ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ ಇವು ಕೇವಲ ಭಾಷಣದ ಮತ್ತು ಪುಸ್ತಕದ ಶಬ್ದಗಳು ಮಾತ್ರ.

ಡಾ ಎಂ ಎಂ ಕಲ್ಬುರ್ಗಿ ಅವರ ವಿವಿಧ ಮುಖ ಕನಸು ಆಶಯಗಳನ್ನು ಇಲ್ಲಿ ನೋಡೋಣ .ಅವರೊಬ್ಬ ವಿಶ್ವ ಮಾನವ ತತ್ವದಲ್ಲಿ ನಂಬಿಕೆ ಇಟ್ಟ ಅತ್ಯಂತ ಪ್ರಯೋಗ ಶೀಲ ಮನಸ್ಸಿನವರು.

ಭಾವ ತೀವ್ರತೆಯ ಮಹಾಪೂರ .
ಅತ್ಯಂತ ಸೂಕ್ಷ್ಮ ಸಂವೇದಿ ವ್ಯಕ್ತಿತ್ವದ ಡಾ ಎಂ ಎಂ ಕಲಬುರ್ಗಿ ಸರ್ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡು ಯಾವುದೇ ವಿಷಯದಲ್ಲಿ ತಮ್ಮ ಭಾವನೆಯನ್ನು ಆಳವಾಗಿ ಹರಿ ಬಿಡುತ್ತಿದ್ದರು. ವಸ್ತು ವಿಷಯ ಇತಿಹಾಸ ಭಾಷೆ ಭೌಗೋಲಿಕ ಪರಿಸರ ಸಾಹಿತ್ಯ ಪ್ರಜ್ಞೆ ಶಾಸನ ಇಂತಹ ಅತಿ ಮುಖ್ಯವಾದ ಆಲೋಚನೆಗಳಲ್ಲಿ ಸದಾ ತಲ್ಲೀನರಾಗುತ್ತಿದ್ದರು. ಸಂಶೋಧನೆ ಸೃಜನಶೀಲ ಸಾಹಿತ್ಯವಲ್ಲ ಎಂದಾಗ “ಕೆಟ್ಟಿತ್ತು ಕಲ್ಯಾಣ” “ಖರೆ ಖರೆ ಸಂಗ್ಯಾ ಬಾಳ್ಯಾ” ಎಂಬ ನಾಟಕಗಳನ್ನೂ “ನೀರು ನೀರಡಿಸಿತ್ತು” ಕವನ ಸಂಕಲನ ತಂದು ಜನರಿಗೆ ಅಚ್ಚರಿ ಮೂಡಿಸಿದರು.ಅಷ್ಟೇ ಅಲ್ಲ ನಾಡಿನ ಹೆಸರಾಂತ ಬಸವರಾಜ ಕಟ್ಟಿಮನಿ ಅವರ ಬಗ್ಗೆ ಬರೆದ ಲಾವಣಿ ಪದಗಳು ಇಂತಹ ಕನ್ನಡಿಗರನ್ನು ಕಣ್ಣೀರು ತರಿಸುತ್ತದೆ. ಅವರೊಬ್ಬ ಭಾವುಕ ಜೀವಿ .ಸತ್ಯವನ್ನು ಅತಿಯಾಗಿ ಆರಾಧಿಸಿ ಮನುಕುಲವನ್ನು ಪ್ರೀತಿಸುವ ಸುಂದರ ಸರಳ ಮನಸ್ಸಿನವರು ಡಾ ಎಂ ಎಂ ಕಲ್ಬುರ್ಗಿ.

ಸಂಶೋಧನೆಯಲ್ಲಿ ಹೊಸತನ.
ದೇಶದ ಹೆಸರಾಂತ ಸಂಶೋಧಕ ಡಾ ಎಂ ಎಂ ಕಲಬುರ್ಗಿ ಗುರುಗಳು ತಮ್ಮ ಕಾರ್ಯದಲ್ಲಿ ಯಾವಾಗಲೂ ಹೊಸತನ್ನು ಕಾಣುತ್ತಿದ್ದರು ಮತ್ತೂ ಅಂತಹ ಹೊಸತನವನ್ನು ಬಯಸುತ್ತಿದ್ದರು . ಕನ್ನಡ ಸಾಹಿತ್ಯದಲ್ಲಿ ಕೈಫಿಯತ್ತು ಯಾರು ಊಹಿಸದ ಕ್ಷೇತ್ರ ಡಾ ಕಲಬುರ್ಗಿ ಅವರಿಗೆ ವಿಜಯಪೂರ ಅಂದರೆ ಪಂಚ ಪ್ರಾಣ,
ಆದಿಲಶಾಹಿ ಕಾಲದ ಉರ್ದು ಸಾಹಿತ್ಯವನ್ನು ಪ್ರಕಗೊಳಿಸುವ ಮೂಲಕ ಸಾಹಿತ್ಯ ಪ್ರೇಮಿಗಳನ್ನು ಚಕಿತಗೊಳಿಸಿದರು. ಅವರು ಒಬ್ಬ ನಿಷ್ಠಾವಂತ ಯೋಜಕರು .
ಕೈಫಿಯತ್ತು ಮುಸ್ಲಿಮರ ಉರ್ದು ಸಾಹಿತ್ಯವನ್ನು ವಿಶ್ವ ವಿದ್ಯಾಲಯದ ಅನುದಾನದಲ್ಲಿ ಪ್ರಕಟಿಸಿದರು.
ಶಿಖರ ಸಿಂಗಣಾಪೂರದ ಶ್ರೀ ಶಂಭು ಮಹಾದೇವ ಮೂಲ ಮರಾಠಿ ಡಾ ರಾಮಚಂದ್ರ ಚಿಂತಾಮಣಿ ಡೇರೆ ಅವರ ಮೂಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲು ಡಾ ವಿಠ್ಠಲ ಗಾಯಕವಾಡ ಅವರಿಂದ ಅನುವಾದ ಮಾಡಿಸಿ ಶಿವಾಜಿ ಸಿದ್ಧರಾಮರು ಕರ್ನಾಟಕ ಮತ್ತು ಶಿವಾಜಿಯ ನಂಟನ್ನು ಹೊಸ ಜಗತ್ತಿಗೆ ಪರಿಚಿಸಲು ಹೆಣಗಾಡಿದರು. ಅವರು ಪ್ರಯೋಗಶೀಲ ಸಂಶೋಧಕರು ಸತ್ಯವನ್ನು ಪಟ್ಟ ಅಂತ ಹೇಳುವ ಛಲಗಾರರು .ಅವರೊಮ್ಮೆ ನನಗೆ ಫೋನ್ ಮಾಡಿ ಕಿತ್ತೂರಿನ ರುಮಾಲೆ ಪುರಾಣದ ಕೆಲ ಧಾಖಲೆಯಲು ಪುಣೆಯಲ್ಲಿ ಸಿಗುತ್ತವೆ ಒಮ್ಮೆ ಬರುತ್ತೇನೆಂದು ಹೇಳಿದ್ದರು. ಕೊನೆಗೂ ಅದನ್ನು ಅವರೇ ತರಿಸಿಕೊಂಡು ಆ ಕೆಲಸವನ್ನು ಇನ್ನೊಬ್ಬ ತರುಣ ಮಿತ್ರರಿಗೆ ಕೊಟ್ಟರು. ಶಿಖರ ಸಿಂಗಣಾಪೂರದ ಶ್ರೀ ಶಂಭು ಮಹಾದೇವ ಸಂಶೋಧನೆಗೆ ದೂಳೆ ಮಾಹಾಂಕಾಳಿ ಗುಡಿಗೆ ಸೆಪ್ಟೆಂಬರನಲ್ಲಿ ಬರುವುದಾಗಿ ಹೇಳಿದ್ದರು ಅವರು ಬರಲೇ ಇಲ್ಲ ಕಾರಣ ಆಗಸ್ಟ್ ತಿಂಗಳು ಅವರು ಬರ್ಬರವಾಗಿ ಹತ್ಯೆಯಾದರು.
ಮಾರ್ಗ 1,2,3 ,4 ,5 ,6 ,7 ಹೀಗೆ ಅವರ ಹೊಸ ಹೊಸ ಹೊಳುವಿನಲ್ಲಿ ದಾಖಲಿಸಿದ ಅನೇಕ ಸತ್ಯಗಳು ಅತ್ಯಂತ ಸರಳ ಸುಂದರವಾಗಿವೆ.ಇಂತಹ ಒಬ್ಬ ದಿಟ್ಟ ಸಂಶೋಧಕ ನಮ್ಮ ಮುಂದಿಲ್ಲ.

ಶುದ್ಧ ಹಸ್ತದ ಗುಣವಂತ .
ಡಾ ಎಂ ಎಂ ಕಲಬುರ್ಗಿ ಅವರು ಅತ್ಯಂತ ಶುದ್ಧ ಹಸ್ತರು. ಅವರೊಮ್ಮೆ ಬೀದರಿಗೆ ತಮ್ಮ ಮಡದಿಯೊಂದಿಗೆ ಕಾರ್ಯಕ್ರಮಕ್ಕೆಂದು ಹೋಗಿದ್ದರು ಅಲ್ಲಿ ಸಂಘಟಿಕರು ನಿವೃತ್ತ ಕುಲಪತಿ ಎಂದು ತಿಳಿದು ದೊಡ್ಡ ಮೊತ್ತದ ಪಾಕೇಟನ್ನು ಡಾ ಕಲಬುರ್ಗಿ ಅವರಿಗೆ ಕೊಟ್ಟಿದ್ದರು .

ತಮ್ಮನ್ನು ಕಾರ್ಯಕ್ರಮಕ್ಕೆ ಕರೆವ ಮಧ್ಯವರ್ತಿಗಳನ್ನೂ ಕರೆದು ಅದರಲ್ಲಿ ಕೇವಲ ಬಸ್ಸಿನ 2000 ರೂಪಾಯಿ ಹಣ ಮಾತ್ರ ಪಡೆದು ಉಳಿದ ಹಣವನ್ನು ಮರಳಿ ಕೊಟ್ಟರು. ಹಣದ ಹಪ ಹಪಿ ಇರಲಿಲ್ಲ. ಅವರಿಗೆ ಪಂಪ ಪ್ರಶಸ್ತಿ ಬಂದಾಗ ಅದನ್ನು ಸ್ವೀಕರಿಸಿ ಹಣವನ್ನು ಪಂಪ ಸ್ಮಾರಕವನ್ನು ಅಣ್ಣಿಗೇರಿಯಲ್ಲಿ ನಿರ್ಮಿಸಬೇಕು ಎಂದು ಮರಳಿ ಕೊಟ್ಟು ಸರಕಾರದ ಕಣ್ಣು ತೆರೆಸಿದರು.

ಅಂಬಲಿ ಕಂಬಳಿ ಆಸ್ತಿ ಉಳಿದದ್ದು ಜಾಸ್ತಿ ಇದು ಅವರ ವಾಕ್ಯವಾಗಿತ್ತು .ಅತಿ ಸರಳತೆ ಯಾರಿಗೂ ಭಾರವಾಗಬಾರದು ಇನ್ನೊಬ್ಬರಿಗೆ ಹೊರೆಯಾಗಬಾರದು.
ನಿವೃತ್ತ ಕುಲಪತಿಯಾಗಿದ್ದರೂ ಬಸ್ ರಿಕ್ಷಾದಲ್ಲಿ ಓಡಾಡುತ್ತಿದ್ದರು.

ಬರಹ ಮಾರ್ಗವಾದರೂ ಬದುಕು ದೇಸಿಯಾಗಿತ್ತು.
ಡಾ ಎಂ ಎಂ ಕಲಬುರ್ಗಿ ಅವರ ಬರಹ ಎಲ್ಲಾ ದೃಷ್ಟಿಯಲ್ಲೂ ಶುದ್ಧ ಮತ್ತು ಪಂಡಿತ ಪಾಮರರು ತಲೆದೂಗುವ ಭಾಷಾ ಪ್ರಾವೀಣ್ಯತೆ ಪಡೆದವರು.ಅವರ ಬರಹ ಸಾದರ ಪಡಿಸುವ ವೈಜ್ಞಾನಿಕ ವೈಚಾರಿಕ ಚಿಂತನೆಗಳು ಮಾರ್ಗದ ರೂಪದಲ್ಲಿಯೇ ಮೂಡಿ ಬಂದಿವೆ. ಭಾಷಾ ಶುದ್ಧತೆಯ ಬಗ್ಗೆ ಹೆಚ್ಚು ಮಹತ್ವ ಕೊಟ್ಟ ಅವರು ಪದ ಬಳಕೆ ವಾಕ್ಯ ರಚನೆಯಲ್ಲಿ ನಿಧಾನವಾಗಿ ತೂಗಿ ಬರೆಯುವ ಜಾಯಮಾನದವರು. ಆದರೆ ಅವರ ಬದುಕು ಶುದ್ಧ ದೇಸಿಗೆ ರೀತಿಗೆ ಅಂಟಿಕೊಂಡವರು .
ಒಮ್ಮೆ ಆಳ್ವಾಸ ಸಾಹಿತ್ಯ ಸಮ್ಮೇನಕ್ಕೆ ದೇಸಿ ಉಡುಪಿನಲ್ಲಿ ಅಂದರೆ ಪಂಚೆ (ದೋತುರ) ಉಟ್ಟು ಮೇಲೆ ಉತ್ತರ ಕರ್ನಾಟಕದ ಪೇಟಾ ಸುತ್ತಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಅವರಿಗೆ ಕನ್ನಡದ ದೇಸಿ ಕವಿ ಡಾ ರಾ ಬೇಂದ್ರೆ ಅವರ ಸಾಹಿತ್ಯ ತುಂಬಾ ಇಷ್ಟ .ಡಾ ಎಂ ಎಂ ಕಲ್ಬುರ್ಗಿ ಅವರ ಬರಹದಲ್ಲಿ ಆಲೋಚನೆಗಳು ಚಿಂತನೆಗಳು ಸ್ಪಷ್ಟವಾಗಿ ಕಂಡು ಬರುತ್ತಿದ್ದವು.

ಯೋಜನೆಗಳು ಹಾಗು ಕನಸುಗಳು .
ಡಾ ಎಂ ಎಂ ಕಲ್ಬುರ್ಗಿ ಅವರು ಒಬ್ಬ ದೊಡ್ಡ ಕನಸುಗಾರರು ಯೋಜಕರು..ಕರ್ನಾಟಕದ ಬಹುತೇಕ ಮಠಗಳಲ್ಲಿ ಶರಣ ಸಾಹಿತ್ಯದ ಪ್ರಸಾರಂಗದ ಹೊಸ ಹೊಸ ರೂಪ ರೇಷೆಗಳನ್ನು ಹಾಕಿ ಕೊಡುತ್ತಿದ್ದರು. ವರ ಕವಿ ಡಾ ರಾ ಬೇಂದ್ರೆ ಅವರ ರಾಷ್ಟ್ರೀಯ ಪ್ರತಿಷ್ಠಾನ ಕಲ್ಬುರ್ಗಿ ಅವರ ಕೊಡುಗೆ ಮತ್ತು ಸತತ ಪರಿಶ್ರಮದ ಪ್ರತಿಫಲ . ಆಮೇಲೆ ಬೆಳಗಾವಿಯಲ್ಲಿ ಬಸವರಾಜ ಕಟ್ಟಿ ಮನಿ ಅವರ ಪ್ರತಿಷ್ಠಾನ ಸ್ಥಾಪಿಸಿ ಮೂರು ವರುಷ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋದರು. ಅವಧಿ ಮುಗಿಯುತ್ತಿದ್ದಂತೆ ಇನ್ನೊಬ್ಬರಿಗೆ ಅಧಿಕಾರ ವಹಿಸಿ ಮುಕ್ತರಾಗುತ್ತಿದ್ದರು.ಗದಗ ಬೆಳಗಾವಿ ಶಿವಮೊಗ್ಗ ಮೈಸೂರು ಚಿತ್ರದುರ್ಗ ಮುಂತಾದ ಮಠಗಳಲ್ಲಿ ಶರಣರ ತಾತ್ವಿಕ ಚಿಂತನೆಗಳ ಪುಸ್ತಕ ರೂಪದಲ್ಲಿ ತರುವ ಅನೇಕ ಯೋಜನೆಗಳನ್ನು ಹುಟ್ಟು ಹಾಕಿ ಮಠಗಳಿಗೆ ಅಕಾಡೆಮಿಕ್ ಸ್ಥಾನ ದೊರುಕುವಲ್ಲಿ ಶ್ರಮಿಸಿದರು.

ನಾಟಕದ ಸಂಗೀತ ರೂಪಕಗಳ ಗೀಳು .
ಡಾ ಎಂ ಎಂ ಕಲ್ಬುರ್ಗಿ ಅವರಿಗೆ ಅತಿಯಾದ ನಾಟಕ ರೂಪಕ ಸಂಗೀತದ ಗೀಳು .ಬಸವರಾಜ ಬೆಂಗೇರಿ ಅವರು ಅಭಿನಯಿಸಿದ ಕ್ರಾಂತಿಯೋಗಿ ಬಸವಣ್ಣ ಹಲವು ಬಾರಿ ನೋಡಿ ಅದಕ್ಕೆ ತಮ್ಮದೇ ಆದ ಸಲಹೆ ಸೂಚನೆ ನೀಡುತ್ತಿದ್ದರು.ಇಂಪಾಗಿ ವಚನ ಹಾಡುವರು ಸಿಕ್ಕರೆ ಅವರಿಗೆ ಹಬ್ಬ.ಹಲವು ಬಾರಿ ಅವರು ಹೇಳುತ್ತಿದ್ದರು ” ಶರಣ ಸಾಹಿತ್ಯ ಪರಿಚಯವನ್ನು ಭಾಷಣಕ್ಕಿಂತ ರೂಕ ನಾಟಕ ಸಂಗೀತದ ಮೂಲಕ ಪ್ರಸಾರಗೊಳಿಸಬೇಕೆನ್ನುತ್ತಿದ್ದರು.”ಅವರೇ ಬರೆದ ಕೆಟ್ಟಿತ್ತು ಕಲ್ಯಾಣ ನಾಟಕ ಬರೆದು ಕಲ್ಯಾಣ ನಾಡಿನ ಕ್ರಾಂತಿಯ ಹಿಂದೂ ಮುಂದು ಪರಿಚಯಿಸಿದರು. “ಖರೆ ಖರೆ ಸಂಗ್ಯಾ ಬಾಳ್ಯಾ ” ಇದು ಡಾ ಎಂ ಎಂ ಕಲಬುರ್ಗಿ ಅವರ
ಸತ್ಯ ಸಂಶೋಧಿತ ವಸ್ತು ನಿಷ್ಠ ನಾಟಕ .ಈಗಲೂ ಈ ನಾಟಕ ಮಲೆನಾಡಿನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ಅವರು ಬರೆದ ಅನೇಕ ಲಾವಣಿಗಳು ಮನ ಕುಲುಕುವಂತಿವೆ.

ಹರಟೆ ತಿಳಿ ಹಾಸ್ಯ ಡಾ ಎಂ ಎಂ ಕಲ್ಬುರ್ಗಿ ಅವರ ಅಚ್ಚು ಮೆಚ್ಚು.
ಸಂಶೋಧಕ ಚಿಂತಕ ಪ್ರಗತಿ ಪರ ಲೇಖಕ ಡಾ ಎಂ ಎಂ ಕಲ್ಬುರ್ಗಿ ಅವರು ಎಂದರೆ ಗಂಭೀರ ಸ್ವಭಾವ ಸೀರಿಯಸ್ ಆಗಿರುವವರು ಎಂದು ಯೋಚಿಸುವದು ಸರಳ.
ಆದರೆ ಆತ್ಮೀಯರೊಂದಿಗೆ ಹರಟೆ ಅವರಿಗೆ ಅಚ್ಚು ಮೆಚ್ಚು . ಅವರಲ್ಲಿರುವ ಹಾಸ್ಯ ಪ್ರಜ್ಞೆ ಅವರ ಆಪ್ತ ಒಡನಾಟದವರಿಗೆ ಮಾತ್ರ ಗೊತ್ತು.ಅವರೆಂದು ಮಧ್ಯಾಹ್ನ ಮಲಗುತ್ತಿರಲಿಲ್ಲ . ನಾನುಮತ್ತು ಶ್ರೀ ಲಿಂಗರಾಜ ಕಂಬಳಿ ಅವರು ಒಮ್ಮೆ ಅವರ ಮನೆಗೆ ಅಕ್ಟೋಬರ್ 2014 ರಲ್ಲಿ ಹೋಗಿದ್ದೆವು . ಸುಮಾರು ಘಂಟೆ ಗಟ್ಟಲೆ ಸಂಘಟನೆಯ ಸಲಹೆ ಸೂಚನೆ ನೀಡುತ್ತಿದ್ದರು. ಅವರ ಸಲಹೆ ಸತ್ಯ ಪ್ರದರ್ಶಕವಾಗಿರುತ್ತಿದ್ದವು.ನೇರ ದಿಟ್ಟ ನಿಷ್ಟುರ ಸ್ವಭಾವದ ಡಾ ಎಂ ಎಂ ಕಲ್ಬುರ್ಗಿ ಸರ್ ಒಮ್ಮೊಮ್ಮೆ
ತಮ್ಮ ತಿಳಿ ಹಾಸ್ಯ ಮಿಶ್ರಿತ ಮಾತಿನಿಂದ ವಿಡಂಬನೆಯ ಮೂಲಕ ಹೇಳುತ್ತಿದ್ದರು. ಅವರೊಂದಿಗೆ ಮಾತಿಗೆ ಇಳಿದರೆ ಸಾಕು ಸಾಹಿತ್ಯ ಭೂಗೋಳ ಕಾಲ ಇತಿಹಾಸ ಮುಂತಾದ ಅನೇಕ ಹೊಸ ಅಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು.
ಮೇ 20 2015 ನಾನು ನನ್ನ ಮಡದಿ ಮಗ ಮತ್ತು ಶ್ರೀ.ಶಂಕರ ಅಂಗಡಿ ಧಾರವಾಡಕ್ಕೆ ಮದುವೆಗೆ ಹೋಗಿದ್ದೆವು. ಧಾರವಾಡಕ್ಕೆ ಹೋದರೆ ಕಲಬುರ್ಗಿ ಸರ್ ಗೆ ಭೇಟಿ ಆಗಲೇ ಬೇಕು.ನಾನು ಫೋನ್ ಮಾಡಿ ಸರ್ 1 ಘಂಟೆಗೆ ನಿಮ್ಮ ಮನೆಗೆ ಬರುವದಾಗಿ ತಿಳಿಸಿದೆ .ಆದರೆ 2 ಕ್ಕೆ ಸ್ವಲ್ಪ ತಡವಾಗಿ ಹೋದೆನು.ಸಮಯ ಪ್ರಜ್ಞ ಹೊಂದಿದ ಡಾ ಎಂ ಎಂ ಕಲ್ಬುರ್ಗಿ ಅವರು ” ಯಾಕಪಾ ಈಗ ನಿನಗ ಒಂದಾತ ಏನು “ಎಂದು ಕೇಳಿದರು , ಮನೆಯ ಹಾಲಿನಲ್ಲಿ 10000 ಪುಟಗಳ ವಚನಗಳ ತಿದ್ದುವಿಕೆ ವಚನಗಳ ಪರಿಷ್ಕರಣೆ ರೀತಿ ಅಡಚಣೆಗಳು ಹೀಗೆ ಎಲ್ಲವನ್ನು ವಿವರವಾಗಿ ಹೇಳುತ್ತಿದ್ದರು.ಸಮಯ 6 ಆಗಿತ್ತು . ತಾಯಿ ಉಮಾದೇವಿಯವರು ಅವರ ಮಗಳು ರೂಪದರ್ಶಿ ಅಂದಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ನನ್ನ ಮಗನನ್ನು ತಮ್ಮ ತೊಡೆಯ ಮೇಲೆ ಕರೆದುಕೊಂಡು ನೋಡು ನಾನು ವೈಸ್ ಛಾನ್ಸಲ್ಲರ ಆಗೀನಿ ನೀನು ಛಾನ್ಸಲ್ಲರ್ ಆಗಬೇಕೆಂದು ಹರಸಿದರು.ಮುಗ್ದ ಮನದ ಮಹಾ ಮಾನವ ಡಾ ಎಂ ಎಂ ಕಲ್ಬುರ್ಗಿ ಅವರು.

ಹಲವು ಅಗ್ನಿ ಕುಂಡಗಳನ್ನು ದಾಟಿದ ಅಪ್ರತಿಮ ಸ್ವಾಭಿಮಾನಿ 
ನೇರ ,ನಿಷ್ಟುರ ದಿಟ್ಟ ಮನದ ಡಾ ಎಂ ಎಂ ಕಲಬುರ್ಗಿ ಅವರು ಹಲವು ಆತಂಕ ಅಗ್ನಿ ಕುಂಡಗಳಲ್ಲಿ ಹಾಯ ಬೇಕಾದ ಪ್ರಸಂಗವಿದ್ದವು.
1989 ಮಾರ್ಗ 2 ಪ್ರಕಟಗೊಂಡ ಸಮಯ .ಅಲ್ಲಿರುವ ನೀಲಾಂಬಿಕೆಯ ಪ್ರಸಂಗ ಮತ್ತು ಅಕ್ಕ ನಾಗಮ್ಮನ ವಿಚಾರದಲ್ಲಿ ಕೋಲಾಹಲವೇ ನಿರ್ಮಾಣವಾಯಿತು .
ಅಲ್ಲಿರುವ ಅನೇಕ ಸಾಹಿತಿಗಳು ಡಾ ಗುರುಲಿಂಗ ಕಾಪಸೆ ಸ ಸ ಮಾಳವಾಡ ಮುಂತಾದ ಅನೇಕ ಹಿರಿಯ ಸಾಹಿತಿಗಳು ಡಾ ಎಂ ಎಂ ಕಲಬುರ್ಗಿ ಅವರನ್ನು ಧಾರವಾಡದ ಶ್ರೀ ಮುರುಘಾ ಮಠಕ್ಕೆ ಕರೆಸಿ ಚರ್ಚೆಗಿಳಿದು ಡಾ ಎಂ ಎಂ ಕಲಬುರ್ಗಿ ಅವರನ್ನು ಅವಮಾನಗೊಳಿಸಿದ್ದಲ್ಲದೆ ಅವರಿಂದ ಕ್ಷಮಾ ಪತ್ರವನ್ನು ಪಡೆದರು. ತಮ್ಮ ಜೀವಿತ ಅವಧಿಯ ಕೊನೆಯ ವರೆಗೂ ಡಾ ಎಂ ಎಂ ಕಲ್ಬುರ್ಗಿ ಅವರು ಮುಂದೆ ಶ್ರೀ ಮಠ ಕ್ಕೆ ಹೋಗಲಿಲ್ಲ.ಇಲ್ಲಿ ಎರಡೂ ಕಡೆಯಿಂದ ಸ್ವಲ್ಪ ದುಡುಕುತನವೆನಿಸಿತು ಎನ್ನುವುದು ನನ್ನ ಅಭಿಪ್ರಾಯ . ಮಾರ್ಗದಲ್ಲಿ ಕೆಲ ಅನಗತ್ಯ ವಿವಾದ ಹುಟ್ಟಿಸುವ ವಿಚಾರವಿದ್ದದ್ದು ಸತ್ಯವಾಗಿತ್ತು .ಆದರೆ ಅದನ್ನು ಸ್ವಲ್ಪ ವ್ಯವಧಾನವಾಗಿ ಪರಿಹರಿಸಬಹುದಿತ್ತು.
ತರ್ಕ ಗ್ರಹಿಕೆ ಊಹೆಯಲ್ಲಿ ಕೆಲವೊಮ್ಮೆ ಏರು ಪೇರಾಗ ಬಹುದು ಅದನ್ನು ಸಂಯಮದಿಂದ ಬಗೆ ಹರಿಸಬಹುದಿತ್ತು. ಕೆಲ ದಿನಗಳವರೆಗೆ ಡಾ ಎಂ ಎಂ ಕಲಬುರ್ಗಿ ಅವರು ವಿಶ್ವ ವಿದ್ಯಾಲಯ ದಲ್ಲಿ ಪೋಲೀಸರ ಕಾವಲಿನಲ್ಲಿ ಪಾಠ ಮಾಡಬೇಕಾದ ಅನಿವಾರ್ಯತೆ ಬಂದೊದಗಿತು.
ಯು ಆರ್ ಅನಂತಮೂರ್ತಿಯ “ದೆವ್ವದ ಕಲ್ಲು ” -ಅನಂತ ಮೂರ್ತಿಯವರು ತಮ್ಮ ಪುಸ್ತಕದಲ್ಲಿ ತಮ್ಮ ಬಾಲ್ಯದ ನೆನಪು ಮಾಡಿಕೊಂಡಿದ್ದನ್ನು ಡಾ ಎಂ ಎಂ ಕಲ್ಬುರ್ಗಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಅದನ್ನು ಕೆಲ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿ ಡಾ ಎಂ ಎಂ ಕಲಬುರ್ಗಿ ಅವರ ಮನೆಯ ಮೇಲೆ ಬಾಟಲಿ ಕಲ್ಲು ಬೀಳಲು ಕಾರಣವಾಯಿತು.
ಡಾ ಎಂ ಎಂ ಕಲಬುರ್ಗಿ ಅವರ ಹಳೆಯ ಶಿಷ್ಯ ಪತ್ರಕರ್ತರು ನಾಡಿನ ಪ್ರಸಿದ್ಧವಾರ ಪತ್ರಿಕೆಯಲ್ಲಿ ನಿರಂತರವಾಗಿ ದೋಷಯುತ ವಚನ ಸಂಪುಟಗಳ ಬಗ್ಗೆ ವಿವರವಾಗಿ ಬರೆಯ ಹತ್ತಿದರು. ಅವರ ಹಿಂದ ಸಹೋದ್ಯೋಗಿ ಸಂಶೋಧಕರೊಬ್ಬರು “ಸಂಶೋಧಕರೊಂದಿಗೆ ಕಿವಿ ಮಾತು ” ಎಂಬ ಗ್ರಂಥ ಬರೆದು ವಚನ ಸಂಪಾದಕರಿಗೆ ನೇರ ತರಾಟೆಗೆ ತಗೆದುಕೊಂಡಿದ್ದರು.ಇಂತಹ ಘಟನೆಯಿಂದ ಡಾ ಎಂ ಎಂ ಕಲ್ಬುರ್ಗಿ ಅವರು ಘಾಸಿಗೊಂಡಿದ್ದರು. ಅಷ್ಟಕ್ಕೂ ಸಾಲದೇ 22 ಆಗಸ್ಟ್ 2014 ರಂದು ದೋಷ ಮುಕ್ತ ವಚನ ಸಂಪುಟದ ಬೇಡಿಕೆಗೆ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗೆ ಕೆಲವರು ಮನವಿ ಸಲ್ಲಿಸದರು. . ಕೆಲವರು ಉದ್ಧೇಶ ಪೂರಿತವಾಗಿ ಡಾ ಎಂ ಎಂ ಕಲಬುರ್ಗಿ ಅವರಿಗೆ ಮಾನಸಿಕ ಕಿರುಕಳ ಕೊಡಲೆತ್ನಿಸಿದರು. ಆದರೆ ಅವರು ಧೃತಿಗೆಡಲಿಲ್ಲ . ಸತ್ಯದ ಅರಿವಿದ್ದ ಡಾ ಎಂ ಎಂ ಕಲಬುರ್ಗಿ ಅವರು ವಚನ ಸಂಪುಟ ಕೆಲಸವನ್ನು ಅತ್ಯಂತ ಶೃದ್ಧೆ ನಿಷ್ಠೆಯಿಂದ ಮಾಡಿದರು.
ಗದಗಿನಲ್ಲಿ ರಾಷ್ಟ್ರ ಮಟ್ಟದ ಕಾರ್ಯಾಗಾರದಲ್ಲಿ ಹಿಂದೂ ಒಂದು ಧರ್ಮವೇ ಅಲ್ಲ ಎಂದು ಪ್ರತಿಪಾದಿಸಿದಾಗಲೂ ಅನೇಕ ಪ್ರತಿಭಟನೆಗಳು ಪ್ರತಿರೋಧಗಳು ಕಂಡು ಬಂದವು.
ಮಾಧ್ಯಮದಿಂದ ದೂರವಿದ್ದ ಡಾ ಎಂ ಎಂ ಕಲಬುರ್ಗಿ ಅವರು “ಸತ್ಯ ಹೇಳುವದರಿಂದ ಜನರಿಗೆ ಭ್ರಾಂತಿ ಉಂಟಾಗಿ ಜನರ ನಂಬಿಕೆಯ ಬೇರು ಸಡಿಲು ಗೊಳ್ಳುತ್ತವೆ ,ಸತ್ಯ ಹೇಳಿದವನ ಮೇಲೆ ಹಲ್ಲೆ ನಡೆಯುತ್ತವೆ.ಹೀಗಾಗಿ ನಾನು ಕಾರ್ಯಕ್ರಮಕ್ಕೆ ಹೋಗುವದನ್ನು ನಿಲ್ಲಿಸಿದ್ದೇನೆ “ಎಂದು ಹೇಳುತ್ತಿದ್ದರು.
ಹಾಗಂತ ಅವರು ಸುಮ್ಮನೆ ಕುಳಿತು ಕೊಳ್ಳುವ ಜಾಯಮಾನದವರಾಗಿರಲಿಲ್ಲ.. ಡಾ ಎಂ ಎಂ ಕಲಬುರ್ಗಿ ಅವರಿಗೆ ಕೆಲಸವಿದ್ದರೆ ಅತ್ಯಂತ ಉತ್ಸಾಹ .ಇಂತಹ ಅನೇಕ ಆತಂಕ ಅಳುಕು ದುಗುಡುಗಳ ಅಗ್ನಿ ಕುಂಡ ದಾಟಿದ ಅಪ್ರತಿಮ ಸಾಹಿತಿ ಅವರು..

ಹಲವು ಸಾಧನೆಯ ಮಹಾ ಪಥಿಕ ಡಾ ಎಂ ಎಂ ಕಲಬುರ್ಗಿ ಈಗ ಒಂದು ನೆನೆಪು ಮಾತ್ರ . ಮಾನವೀಯತೆ ಜಾತ್ಯಾತೀತ ನಿಲುವು ಅಪ್ಪಟ ದೇಶಪ್ರೇಮ ಯುವಕರಿಗೆ ಸದಾ ಸ್ಪೂರ್ತಿಯ ಚಿಲುಮೆಯಾಗಿದ್ದ ಡಾ ಎಂ ಎಂ ಕಲ್ಬುರ್ಗಿ ಅವರು ಭೌತಿಕವಾಗಿ ನಮ್ಮಿಂದ ದೂರವಾಗಿದ್ದಾರೆ ಆದರೆ ಅವರು ಹಾಕಿಕೊಟ್ಟ ಅನೇಕ ಯೋಜನೆಗಳು ನಮ್ಮ ಮುಂದೆ ಇನ್ನು ಸವಾಲಾಗಿವೆ. ಅವರ ಕೆಲವೆ ಆಪ್ತರಲ್ಲಿ ಆತ್ಮೀಯ ಓದನ್ನಾತದಲ್ಲಿ ಪಾಲ್ಗೊಳ್ಳುವ ಅವಕಾಶ ನನ್ನದಾಗಿತ್ತು.
ಡಾ ಎಂ ಎಂ ಕಲಬುರ್ಗಿ ಅವರೇ ಹೇಳುವಂತೆ ” ನಾನುಬದುಕಿದ್ದು ಎರಡು ವಿಷಯಕ್ಕಾಗಿ ಒಂದು ಕನ್ನಡ ಇನ್ನೊಂದು ಬಸವಣ್ಣ” ಹೌದು ಕಲ್ಯಾಣದ ಅನೇಕ ದಾಖಲೆಗಳನ್ನು ಶಾಸನಗಳನ್ನು ವಚನಗಳನ್ನು ಸಂಶೋಧಿಸಿ ಪರಿಷ್ಕರಿಸಿ ಕನ್ನಡ ನಾಡಿಗೆ ಪರಿಚಯಿಸಿದ ರೀತಿ ಶ್ಲಾಘನೀಯವಾಗಿದೆ. ಕಳೆದುಕೊಂಡಿದ್ದೇವೆ ಕಲ್ಯಾಣದ ಕೊಂಡಿ ಡಾ .ಎಂ ಎಂ ಕಲಬುರ್ಗಿ ಅವರಿಗೆ ನಮ್ಮೆಲ್ಲರ ವಚನ ಶೃದ್ಧಾಂಜಲಿ

ಡಾ.ಶಶಿಜಾಂತ ಪಟ್ಟಣ್ಣ ರಾಮದುರ್ಗ, ಪುಣೆ

Don`t copy text!