ಕರುನಾಡ ಸೀಮೆ
ಇತಿಹಾಸದ ಪುಟ ತೆರೆದು
ನೋಡಬೇಕು ಪುರಾವೆಗಳಿಗಾಗಿ
ಕರುನಾಡ ಸೀಮೆ ಚಾಚಿದ
ವಿಸ್ತಾರ ಅಳೆಯುವುದಕ್ಕಾಗಿ….
ಕಾವೇರಿಯಿಂದ ಗೋದಾವರಿಯವರೆಗೂ
ಹರಡಿದ ಕರುನಾಡು ನಮ್ಮದೆಂದು
ಅಂದೆ ಶಾಸನವ ಬರೆದಿಟ್ಟ
ಕಾವ್ಯಗಳಲಿ ಕಟ್ಟಿಟ್ಟ ನಮ್ಮಪಂಪ
ಹರಡಿಸುತ ಕನ್ನಡದ ಕಂಪ…
ಮಾನ್ಯಖೇಟದ ಪುಟ್ಟ ರಾಜ್ಯವಂದು ಸಮತಟ್ಟ ನೆಲದಲಿ ಹುಟ್ಟಿ
ಕನ್ನಡ ಕಲಿಗಳ ತೊಳ್ಬಲದಲಿ
ವಿಂದ್ಯಪರ್ವತದ ಸಾಲುಗಳ ಏರಿ
ಮಧ್ಯಪ್ರದೇಶದ ಮೇರೆ ಮೀರಿ
ಬೆಳೆದುದಕೆ ಸಾಕ್ಷಿಯಾಗಿ
ಅಜಂತಾ ಎಲ್ಲೋರದ
ಗುಹೆಗಳೆಲ್ಲಾ ದೇಗುಲಗಳಾದವು
ಕಲ್ಲಕರಗಿ ಕಲೆಯಾದವು….!!
ಕನ್ನಡ ನಾಡು ಹರವಿಹಬ್ಬುವಂತೆ
ಗಡಿಗಳನು ವಿಸ್ತರಿಸಿ
ಉತ್ತರದ ಧೀರರನು ಮಣಿಸಿ
ಉತ್ತರಪತೇಶ್ವರನೆಂಬ
ಬಿರಿದಾಂಕಿತ ವೀರ ಪುಲಕೇಶಿಯ
ಚಾಲುಕ್ಯರ ನಾಡೆಲ್ಲವು ಕನ್ನಡ…..
ಕರುನಾಡ ಮಣ್ಣ ಮಕ್ಕಳನು
ಕೆಣಕುವ ಮೊದಲೊಮ್ಮೆ
ಓದಿಬಿಡಿ ಶಾಸನವ
ಈ ಮಣ್ಣು ಮೈಗೂಡಿಸಿದವರ ಗುಣಸ್ವಭಾವ
“ಮಾಧುರ್ಯಂಗೆ ಮಾಧುರ್ಯ
ಭಾದಿಪ ಕಲಿಗಳಿಗೆ ಕಲಿಯುಗ ವಿಪರೀತನ್ ” ಎನ್ನುವ ಸಾಲುಗಳ
ಅರ್ಥೈಸಿಕೊಂಡು ಬಿಡಿ
–ಡಾ. ನಿರ್ಮಲಾ ಬಟ್ಟಲ