ಸೃಷ್ಟಿಯ ನೆಲೆಯಲ್ಲಿ ಅಕ್ಕನ ಸ್ವೋಪಜ್ಞತೆ

ಅಕ್ಕನ ನಡೆ-ವಚನ – 10 

(ವಾರದ ಅಂಕಣ)

ಸೃಷ್ಟಿಯ ನೆಲೆಯಲ್ಲಿ ಅಕ್ಕನ ಸ್ವೋಪಜ್ಞತೆ

 

ಪೃಥ್ವಿ ಪೃಥ್ವಿಯ ಕೂಡದ ಮುನ್ನ
ಅಪ್ಪು ಅಪ್ಪುವ ಕೂಡದ ಮುನ್ನ
ತೇಜ ತೇಜವ ಕೂಡದ ಮುನ್ನ
ವಾಯು ವಾಯುವ ಕೂಡದ ಮುನ್ನ
ಆಕಾಶ ಆಕಾಶವ ಕೂಡದ ಮುನ್ನ
ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ.

ಲೌಕಿಕದವರಿಗೆ ಆಧ್ಯಾತ್ಮ ಅಂದರೆ ಅದೊಂದು ನಿಗೂಢ ಜಗತ್ತು. ಆದರೆ ಅದರಲ್ಲೇ ಇರುವವರಿಗೆ ಅದೇ ಜಗತ್ತು. ಇದಕ್ಕೆ ಅಕ್ಕಮಹಾದೇವಿಯೇ ಉದಾಹರಣೆ. ಈ ವಚನದಲ್ಲಿ ಇಡೀ ಸೃಷ್ಟಿಯನ್ನೇ ಎದುರಿಗಿಟ್ಟುಕೊಂಡು ನೋಡುವ ವಿಸ್ಮಯ ಕಾಣುತ್ತೇವೆ. ಪ್ರತಿ ಸಾಲು ಸೃಷ್ಟಿಯ ಕುರಿತೇ ಆಗಿದೆ. ಅಕ್ಕನಲ್ಲಿರುವ ಸಮರ್ಪಣಾ ಭಾವವು ವಚನದಾಳದಲ್ಲಿ ಹುದುಗಿದೆ.
ಊರೊಳಗಿನ ಬಯಲು ಊರ ಹೊರಗಿನ ಬಯಲು ಬೇರುಂಟೆ?’.
ಆಲಯ ಬಯಲೊಳಗೊ? ಬಯಲು ಆಲಯದೊಳಗೊ?’ ಬೇರೆ ಬೇರೆ ವಚನಗಳ ಮೇಲಿನ ಸಾಲುಗಳನ್ನು ಗಮನಿಸಬಹುದು. ಇದರ ವಾಸ್ತವ ಚಿತ್ರಣ ಅರ್ಥ ಮಾಡಿಕೊಳ್ಳಲು ಪ್ರಕೃತಿ ಮತ್ತು ಮನುಷ್ಯನನ್ನು ಸಮೀಕರಿಸಿ ನೋಡಬೇಕಾಗುತ್ತದೆ.
‘ದೇಹವೇ ದೇವಾಲಯ’ ಎನ್ನುವ ದೃಷ್ಟಿಕೋನದಿಂದ ವಿವೇಚಿಸಿದರೆ ಇನ್ನಷ್ಟು ಸುಲಭವಾಗಬಹುದು.

ಪೃಥ್ವಿ, ಅಪ್ಪು, ತೇಜ, ವಾಯು ಮತ್ತು ಆಕಾಶ ಇವು ಪಂಚಭೂತಗಳು. ಅಂದರೆ ಮಣ್ಣು, ನೀರು, ಅಗ್ನಿ, ಗಾಳಿ ಮತ್ತು ಆಕಾಶ. ಮನುಷ್ಯನಲ್ಲಿರುವ ಪಂಚೇಂದ್ರಿಯಗಳು ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ.

ಸೃಷ್ಟಿಯಲ್ಲಿರುವ ಪಂಚಭೂತಗಳು ಮತ್ತು ಮನುಷ್ಯನಲ್ಲಿರುವ ಪಂಚೇಂದ್ರಿಯಗಳನ್ನು ಶರಣರ ಬಯಲು ಮತ್ತು ಆಲಯಕ್ಕೆ ಸಮೀಕರಿಸಿದಾಗ, ಮನುಷ್ಯನ ಒಳಗೂ ಪಂಚಭೂತಗಳು, ಮನುಷ್ಯನ ಹೊರಗೂ ಪಂಚಭೂತಗಳು ಇರುವುದನ್ನು ಗ್ರಹಿಸಬಹುದು. ಹೀಗೆ ನಿಸರ್ಗದ ವಿವರಣೆಯಲ್ಲಿ ಇಡೀ ಮನುಷ್ಯನ ಬದುಕು ಚಿತ್ರಿಸಲಾಗಿದೆ.

ಇದೇ ವಿವರಣೆಯನ್ನು ಗಮನದಲ್ಲಿಟ್ಟುಕೊಂಡು, ಹೊರಗಿರುವ ಪಂಚಭೂತಗಳು ಮತ್ತು ಒಳಗಿರುವ ಪಂಚೇಂದ್ರಿಯಗಳು ಒಂದೇ ಎನ್ನುವ ಭಾವ ತಳೆದಾಗ ಮೇಲಿನ ವಚನ ಹೆಚ್ಚು ಹೆಚ್ಚು ಅರ್ಥಗರ್ಭಿತವಾಗಿ ಮನದಾಳಕ್ಕಿಳಿಯುತ್ತದೆ.

ಪೃಥ್ವಿ ಪೃಥ್ವಿಯ, ಅಪ್ಪು ಅಪ್ಪುವ, ತೇಜ ತೇಜವ, ವಾಯು ವಾಯುವ, ಆಕಾಶ ಆಕಾಶವ ಕೂಡದ ಮುನ್ನ’

ಇಲ್ಲಿ ಅಕ್ಕ ಹೇಳಲು ಹೊರಟಿರುವ ಸತ್ಯವನ್ನು ಗ್ರಹಿಸಬಹುದು. ನಿಸರ್ಗದೊಂದಿಗೆ ಮನುಷ್ಯನ ದೇಹವನ್ನು ಸಮಾನವೆನ್ನುವ ಭಾವ, ಹಾಗೆಯೇ ಅದು ಸತ್ಯ ಎಂದು ಅರಿವಿಗೂ ಬರುತ್ತದೆ. ಮನುಷ್ಯನ ಒಳಹೊರಗು ಪಂಚಗಳಿಂದಲೇ ಕೂಡಿದೆ. ಮನುಷ್ಯನಿಗೆ ಸಾವು ಸಂಭವಿಸುವ ಮುನ್ನ ಅಂದರೆ ಪಂಚಭೂತಗಳಲ್ಲಿ ಪಂಚೇಂದ್ರಿಯಗಳು ಲೀನವಾಗುವ ಮುನ್ನ ಎಂದು ಅರ್ಥೈಸಬಹುದು.

ಪ್ರತಿ ಸಾಲಿನಲ್ಲೂ ’ಕೂಡದ ಮುನ್ನ’ ಈ ಎರಡು ಶಬ್ದಗಳು ಪುನರುಕ್ತಿಯಾಗುತ್ತಲೇ ಹೋಗುತ್ತದೆ. ಇದು ಅಕ್ಕನ ಕಾವ್ಯ ಕಟ್ಟುವ ಶಕ್ತಿ. ಇದರಿಂದಾಗಿ ಇಡೀ ವಚನದ ಕಾವ್ಯ ಸೌಂದರ್ಯ ಇಮ್ಮಯಾಗುತ್ತದೆ.

ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ.’

ವಚನದ ಕೊನೆಯ ಈ ಎರಡು ಸಾಲುಗಳು, ‘ಮನುಷ್ಯನಿಗೆ ಹೀಗೆ ಬದುಕ ಬೇಕು’ ಎನ್ನುವ ರೀತಿಯನ್ನು ಕಟ್ಟಿ ಕೊಡುತ್ತದೆ. ಚೆನ್ನಮಲ್ಲಿಕಾರ್ಜುನನಿಗೆ ಶರಣೆನ್ನುವುದು ಎಂದರೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವುದು ಎಂದರ್ಥ. ಇದು ಅಕ್ಕನ ಆಯ್ಕೆ. ಹಾಗೇ ಇದು ನಮ್ಮೆಲ್ಲರ ಆಯ್ಕೆಯೂ ಆಗಬಹುದು. ಇಲ್ಲಿ ಶರಣ ಅಂದರೆ ಯಾರು? ಅವನು ಹೇಗಿರಬೇಕು? ಶರಣು ಅಂದರೆ ಏನು? ‘ಶರಣ’ ಮತ್ತು ‘ಶರಣು’ ಪದದ ಮೂಲ ಅರ್ಥ ತಿಳಿಯಬೇಕು.

ಹನ್ನೆರಡನೇ ಶತಮಾನದಲ್ಲಿ ಗುರು ಬಸವಣ್ಣ ಹುಟ್ಟು ಹಾಕಿದ್ದು ಲಿಂಗಾಯತ ಧರ್ಮ. ಗುರು, ಲಿಂಗ, ಜಂಗಮ, ಕಾಯಕ ಮತ್ತು ದಾಸೋಹದ ಹೊಸ ಪರಿಕಲ್ಪನೆಯ ಕುರಿತು ಚಾಲನೆ ಮತ್ತು ಆಚರಣೆ ಎರಡೂ ಆದ ಕಾಲ. ಈ ಐದು ತತ್ವಗಳನ್ನು ತನ್ನ ಬದುಕು ಮತ್ತು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡವನು ಶರಣ.

’ಶರಣು’ ಪದದ ಮಹತ್ವವನ್ನು ಅರಿಯ ಬೇಕಾದರೆ ಬಸವಣ್ಣ ಮತ್ತು ದಂಪತಿಗಳಾದ ಸಮಗಾರ ಹರಳಯ್ಯ, ಕಲ್ಯಾಣಮ್ಮರ ನಡುವೆ ನಡೆದ ಘಟನೆಯೊಂದನ್ನು ನೆನಪಿಸಬೇಕು.

ಒಂದು ದಿನ ಬಸವಣ್ಣ, ಮಹಾಮನೆಯಿಂದ ರಾಜಸಭೆಯತ್ತ ಹೋಗುತ್ತಿರುವಾಗ, ಮಾರ್ಗ ಮಧ್ಯದಲ್ಲಿ ಶರಣ ಹರಳಯ್ಯ ಎದುರಾಗುತ್ತಾರೆ. ಆಗ ಕೂಡಲೆ ಹರಳಯ್ಯನು ‘ಶರಣು’ ಹೇಳುತ್ತ ಕೈ ಮುಗಿದು ತಲೆ ಬಾಗಿಸಿ ನಿಲ್ಲುತ್ತಾರೆ. ಹರಳಯ್ಯನನ್ನು ದೃಷ್ಟಿಸಿ ನೋಡುತ್ತ, ಅವರ ಭಕ್ತಿಭಾವಕ್ಕೆ ತಲೆದೂಗಿ, ’ಶರಣು ಶರಣಾರ್ಥಿ’ ಎಂದು ಪ್ರತಿ ವಂದಿಸಿದರು. ಹಾಗೆಯೇ ಅವರು ರಾಜಸಭೆಯತ್ತ ಹೆಜ್ಜೆ ಹಾಕಿದರು.

ಹರಳಯ್ಯನು ಶರಣು ಹೇಳಿದ್ದಕ್ಕೆ ಶರಣು ಶರಣಾರ್ಥಿ ಎಂದ ಬಸವಣ್ಣನವರದು, ಒಂದು ಶರಣು ಹೆಚ್ಚಾಯಿತೆಂದು ಚಿಂತೆಗೀಡಾದರು. ಮನೆಗೆ ಹಿಂದಿರುಗಿ ಪತ್ನಿ ಕಲ್ಯಾಣಮ್ಮನಿಗೆ ಕಳವಳದಿಂದ ಹೇಳಿದರು. ಇದೇನು ಶಿವ ಶಿವ ತಪ್ಪಾಯಿತಲ್ಲ ಎಂದು ನೊಂದುಕೊಳ್ಳುತ್ತಾಳೆ. ಮಹಾತ್ಮರಾದ ಬಸವಣ್ಣನವರ ಪಾದದ ಧೂಳಿಗೆ ಸಮಾನರಾದ ತಮಗೆ ಒಂದು ಶರಣು ಹೆಚ್ಚಾಗಿ ಭಾರವಾಗುತ್ತಿದೆಯೆಂದು ಒದ್ದಾಡಿದರು.

ಇದಕ್ಕೆ ಪರಿಹಾರವೆಂಬಂತೆ ಪತಿ ಪತ್ನಿ ಇಬ್ಬರೂ ಸೇರಿ, ಬಸವಣ್ಣನಿಗೆ ತಮ್ಮದೇ ತೊಡೆಯ ಚರ್ಮದಿಂದ ಚೆಮ್ಮಾವುಗೆಯನ್ನು ಮಾಡಿ ಕೊಡಬೇಕೆಂದು ನಿರ್ಧರಿಸುತ್ತಾರೆ. ಹಾಗೆ ಮಾಡಿದರೆ ಈ ಭಾರದಿಂದ ಮುಕ್ತರಾಲು ಸಾಧ್ಯವೆಂದು ಭಾವಿಸುತ್ತಾರೆ.

ಹರಳಯ್ಯ ಮತ್ತು ಕಲ್ಯಾಣಮ್ಮ ತಮ್ಮ ತೊಡೆಯ ಚರ್ಮ ತೆಗೆದು ಸುಂದರವಾದ ಚೆಮ್ಮಾವುಗೆಯನ್ನು ಸಿದ್ಧಪಡಿಸಿದರು. ಅದನ್ನು ತಲೆಯ ಮೇಲೆ ಹೊತ್ತುಕೊಂಡು ಬಸವಣ್ಣನವರ ಬಳಿಗೆ ಹೋಗಿ, ಈ ಕಾಣಿಕೆಯನ್ನು ಸ್ವೀಕರಿಸಿರೆಂದು ವಿಧೇಯವಾಗಿ ನಿಂತು ಬೇಡಿಕೊಂಡರು. ‘ಎನಗಿಂತ ಕಿರಿಯರಿಲ್ಲ. ಶರಣರಿಗಿಂತ ಹಿರಿಯರಿಲ್ಲ’ ಎಂದು ಶರಣರ ಚರ್ಮದಿಂದ ಮಾಡಿದ ಚೆಮ್ಮಾವುಗೆಯು ಕೂಡಲ ಸಂಗಯ್ಯನ ಪಾದಕ್ಕೆ ಸೇರಬೇಕೆಂದು, ಭಕ್ತಿಯಿಂದ ತಮ್ಮ ತಲೆಯ ಮೇಲೆ ಇಟ್ಟುಕೊಂಡು, ಮತ್ತೆ ಹಿಂದಿರುಗಿಸಿದರು.

*ಬಸ್ ಸ್ಕ್ರೈಬ್ ಮಾಡಿ, ಇಷ್ಟವಾದ ಶೇರ್ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ*

ಹೀಗೆ ‘ಶರಣು‌’ ಎನ್ನುವ ಪದವು ಬಹಳ ಮಹತ್ವದ್ದಾಗಿದೆ. ತನು ಮನದಿಂದ ಸಮರ್ಪಿಸಿಕೊಳ್ಳುವ ಭಾವ ಮತ್ತು ರೀತಿ. ಇದು ವ್ಯಕ್ತಿಯ ವ್ಯಕ್ತಿಗತ ಆಯ್ಕೆಯೂ ಹೌದು. ಈ ವಚನದ ಸಂದೇಶವು ಸಾವು ಬಂದು ನಮ್ಮನ್ನಾವರಿಸುವ ಮುನ್ನ ಅರ್ಥಪೂರ್ಣವಾಗಿ ಬದುಕಬೇಕು ಎನ್ನುವುದಾಗಿದೆ.

ಸಿಕಾ

Don`t copy text!