ಧಾರವಾಡದ ಲಿಂಗಾಯತ ಎಜ್ಯೂಕೇಶನ್ ಅಸೋಸಿಯೇಷನ್ ಸ್ಥಾಪನೆಯ ಹಿನ್ನೆಲೆ, ಬೆಳವಣಿಗೆ..

ಲಿಂಗಾಯತ ಪುಣ್ಯ ಪುರುಷರ ಮಾಲೆ-೪

ಧಾರವಾಡದ_Lingayat_education association_ಸ್ಥಾಪನೆಯ_ಹಿನ್ನೆಲೆ_ಮತ್ತು_ಅದರ #ಬೆಳವಣಿಗೆ..

ಭಾರತ ದೇಶಕ್ಕೆ ಒಂದು ರಾಜಕೀಯ ಪಕ್ಷ ಉದಯಿಸುವ ಮುಂಚೆ ಲಿಂಗಾಯತ ಧರ್ಮಿಯರಿಗೆ ಒಂದು ಶೈಕ್ಷಣಿಕ ನಿಧಿಯನ್ನು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿಗೆ ಮುನ್ನಡೆ ಬರೆದವರು ಗಿಲಗಂಚಿ ಗುರುಸಿದ್ದಪ್ಪನವರ ಮತ್ತು ಅರಟಾಳ ರುದ್ರಗೌಡರು.

ಹನ್ನೆರಡನೇಯ ಶತಮಾನದಲ್ಲಿ ಬಸವಣ್ಣವರ ನೇತೃತ್ವದಲ್ಲಿ ಧಾರ್ಮಿಕ ಕ್ರಾಂತಿಯಾದರೆ ಹತ್ತೊಂಬತ್ತನೆಯ ಶತಮಾನದ ಕೊನೆಗೆ ಶೈಕ್ಷಣಿಕ ಕ್ರಾಂತಿಗೆ ಅರಟಾಳ ರುದ್ರಗೌಡರು ಮತ್ತು ಗಿಲಗಂಚಿ ಗುರುಸಿದ್ದಪ್ಪನವರು Lingayat Education Association ಏನ್ನುವ ಬೀಜ ಬಿತ್ತಿದರು.

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೇರೆಬೇರೆ ಹುದ್ದೆಗಳಲ್ಲಿ ಗಿಲಗಂಚಿ ಗುರುಸಿದ್ದಪ್ಪನವರು ಮತ್ತು ರುದ್ರಗೌಡರು ಕಾರ್ಯನಿರ್ವಹಿಸುತ್ತಿದ್ದರು. ಇವರು ಮೊದಲ ಮುಖಾಮುಖಿಯಾಗಿದ್ದು 1874 ರಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ..

1883 ರಲ್ಲಿ ಗಿಲಗಂಚಿ ಗುರು ಸಿದ್ದಪ್ಪ ನವರು ಧಾರವಾಡ ಜಿಲ್ಲೆಯ ಆಕ್ಟಿಂಗ್ ಹುಜುರ್ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿ ಪ್ರಭಾರವನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿಯೇ ಲಿಂಗಾಯತ ಶೈಕ್ಷಣಿಕ ನಿಧಿ ಪ್ರಾರಂಭವಾಗಿರುವುದು.

ಕಚೇರಿ ಕರ್ತವ್ಯದ ನಂತರ ಗಿಲಗಂಚಿ ಗುರುಸಿದ್ದಪ್ಪನವರು ಮತ್ತು ಅರಟಾಳ ರುದ್ರಗೌಡರು (ಮೈಲಾರ ಗುಡ್ಡದ ಹತ್ತಿರ ಅಂದರೆ ಇವತ್ತಿನ JSS ಮಹಾವಿದ್ಯಾಲಯದ ಆವರಣ ಎಂದು ತಿಳಿಯಬೇಕು ) ಪ್ರತಿನಿತ್ಯ ವಾಯು ವಿಹಾರಕ್ಕೆ ತೆರಳುತ್ತಿದ್ದರು .

ಈ ಸಂದರ್ಭದಲ್ಲಿ ಅನಕ್ಷರಸ್ಥ ಲಿಂಗಾಯತ ಧರ್ಮಿಯರನ್ನು ಮೇಲೆತ್ತುವುದು ಹೇಗೆ ಎಂಬ ಚಿಂತನೆಯ ಸಂದರ್ಭ ಸಂದರ್ಭದಲ್ಲಿ ಮೂಡಿಬಂದಿದ್ದೆ ಧಾರವಾಡದ ಲಿಂಗಾಯತ ಶೈಕ್ಷಣಿಕ ನಿಧಿ .

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಧಾರ್ಮಿಕ ಕ್ರಾಂತಿಯ ಮಾದರಿಯಲ್ಲಿ 1883 ರಲ್ಲಿ ಅರಟಾಳ ರುದ್ರಗೌಡ್ರು ಮತ್ತು ಗಿಲಗಂಚಿ ಗುರುಸಿದ್ದಪ್ಪನವರ ನಾಯಕತ್ವದ ಮೂಸೆಯಲ್ಲಿ ಮೂಡಿಬಂದಿದ್ದೆ,ಲಿಂಗಾಯತ ಶೈಕ್ಷಣಿಕ ನಿಧಿ .

ಈ ಈ ಶೈಕ್ಷಣಿಕ ನಿಧಿ ಮೊಳಕೆ ಒಡೆದು ಮುಂಬೈ-ಕರ್ನಾಟಕ ವ್ಯಾಪ್ತಿಯಲ್ಲಿ ಅಕ್ಷರಕ್ರಾಂತಿಗೆ ಮುನ್ನುಡಿ ಬರೆಯಿತು.ಮೈಲಾರ ಬೆಟ್ಟದಲ್ಲಿ ಚರ್ಚಿಸುತ್ತ ಸಮಾಜ ಮುಂದುವರಿಯಬೇಕಾದರೆ ಅದಕ್ಕೆ ಶಿಕ್ಷಣ ಸೌಕರ್ಯ ಒದಗಿಸುವುದು ಅವಶ್ಯಕ.ಲಿಂಗಾಯತ ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಬೇಕಾಗುವ ಹಣವನ್ನು ಸಾಲರೂಪದಲ್ಲಿ ಶಿಷ್ಯವೇತನವನ್ನು ಕೊಡುವ ವ್ಯವಸ್ಥೆಯನ್ನು ಮಾಡುವುದೇ ಇದಕ್ಕೆ ಪರಿಹಾರ ಎಂಬ ನಿರ್ಣಯಕ್ಕೆ ಬಂದು ತಮ್ಮ ಚರ್ಚೆ ಮುಕ್ತಾಯಗೊಳಿಸಿ ಮುಂದಿನ ಕಾರ್ಯಕ್ಕೆ ಅಣಿಯಾದರು.

ಲಿಂಗಾಯತ ಶಿಕ್ಷಣ ನಿದಿಯ ಉದ್ದೇಶ ಮುಂಬೈ ಪ್ರೆಸಿಡೆನ್ಸಿ ಪ್ರಾಂತ್ಯದಲ್ಲಿ ಲಿಂಗಾಯತ ಸಮಾಜದವರು ಬಹಳಷ್ಟು ಜನ ಇದ್ದು ಅವರು ಇಂಗ್ಲಿಷ್ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಮತ್ತು ಧರ್ಮಕ್ಕೆ ಸಂಬಂಧಿಸಿದ ವಿದ್ಯಾಭ್ಯಾಸವನ್ನು ಮಾಡುವ ಪ್ರಯತ್ನವನ್ನು ಯಾರೂ ಮಾಡಿಲ್ಲ ಹಾಗಾಗಿ ಸಮುದಾಯದ ಗೌರವ ಕಡಿಮೆಯಾಗುತ್ತಿದೆ ಈ ಉದ್ದೇಶಕ್ಕಾಗಿ ಒಂದು ನಿಧಿಯನ್ನು ಕೂಡಿಸಬೇಕೆಂದು ಆ ಕಾರಣಕ್ಕಾಗಿ ಸಭೆ ಕರೆಯುವ ನಿರ್ಣಯ ಮಾಡಲಾಯಿತು.

1883 ಸೆಪ್ಟೆಂಬರ್ 30 ರಂದು ಭಾನುವಾರ ಪ್ರಾತಃಕಾಲ ವರ್ತಕರು ,ವಿದ್ಯಾವಂತರು, ಸಮಾಜಮುಖೀ ಚಿಂತಕರು ,ಧಾರವಾಡದ ಅಡಕಿ ಓಣಿಯಲ್ಲಿದ್ದ ಚನ್ನಮಲ್ಲಪ್ಪ ಚನ್ನಬಸಪ್ಪ ತೆಂಗಿನಕಾಯಿ ಅವರ ಮನೆಯಲ್ಲಿ ವಿದ್ಯಾಭಿವೃದ್ಧಿ ಸಂಸ್ಥೆ ಸ್ಥಾಪಿಸುವ ನಿರ್ಧಾರ ಮಾಡಿದರು.

ಸುಮಾರು ಒಂದು ತಿಂಗಳೊಳಗಾಗಿ ಅಂದರೆ ಅಕ್ಟೋಬರ್ 20 ನೇ ದಿನ ಲಿಂಗಾಯತ ವಿದ್ಯಾಭಿವೃದ್ಧಿ ನಿಧಿಯ ಸಂಸ್ಥಾಪಕ ಪ್ರವರ್ತಕರು ಆದ ರುದ್ರಗೌಡರ್ ಸಾಹೇಬರು ಮತ್ತು ಗುಲಗಂಜಿ ಗುರುಸಿದ್ದಪ್ಪನವರ ಮೂರು ಸಾವಿರಗಳನ್ನು ಕೂಡಿಸಿದರು.

1883 ನವಂಬರ್ 15ನೇ ದಿನ ಸಭೆಯ ಉದ್ದೇಶ ಹಣ ಕೊಡಿಸುವ ಕ್ರಮ ಕೂಡಿದ ಹಣ ಬಳಕೆ ಮಾಡುವ ವ್ಯವಸ್ಥೆ ಮುಂತಾದವುಗಳನ್ನು ಕುರಿತು ಒಂದು ಪತ್ರಿಕೆ(magzin) ಪ್ರಕಟಿಸಿದರು. ಮುಖ್ಯ ಸಭೆ ಧಾರವಾಡದಲ್ಲಿ ಸಂಘಟಿಸಲಾಯಿತು, ಜೊತೆಗೆ ಉಪಸಮಿತಿಗಳನ್ನು ನಿರ್ಮಾಣ ಮಾಡಿ ಹುಬ್ಬಳ್ಳಿ ಗರಗ ಉಪ್ಪಿನಬೆಟಗೇರಿ ಬೆಳಗಾವಿ ನರಗುಂದ ಗಳಲ್ಲಿ ಸಭೆ ನಡೆಸಲಾಯಿತು.

ಜಿಲ್ಲೆಯ ಆಚೆಗೆ ರುದ್ರಗೌಡರು ಮತ್ತು ಗಿಲಗಂಚಿ ಗುರುಸಿದ್ದಪ್ಪ ಸ್ವತಃ ಓಡಾಡಿ ಹಣ ಸಂಗ್ರಹಿಸಿದರು.ಧಾರವಾಡ ಜಿಲ್ಲೆಯೊಂದರಲ್ಲಿ 20 ಸಾವಿರಕ್ಕಿಂತ ಹೆಚ್ಚು ಹಣ ಕೂಡಿರುವುದು, ಹಣ ಕೂಡಿಸುವ ಕಾರ್ಯ ಇನ್ನೂ ನಡೆದಿತ್ತು

ಲಿಂಗಾಯತ ಪಂಡಿನ ಹಣವನ್ನು ಮುಂಬೈ ಸರ್ಕಾರದಲ್ಲಿ ಠೇವಣಿ ಮಾಡಿ ವರ್ಷಕ್ಕೆ ನೂರಕ್ಕೆ ನಾಲ್ಕು ರೂಪಾಯಿಯಂತೆ ಬಡ್ಡಿಯನ್ನು ಕೊಡಬೇಕೆಂದು ಧಾರವಾಡ ಮತ್ತು ಬೆಳಗಾವಿ ಜಿಲ್ಲಾಧಿಕಾರಿ ಗಳು ಮುಂಬೈ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದರಿಂದ ಮುಂಬೈ ಸರ್ಕಾರ ಬಹಳಷ್ಟು ಖುಷಿಯಿಂದ ಶಿಪಾರಸ್ಸನ್ನು ಮಾನ್ಯ ಮಾಡಿದರು.

ಲಿಂಗಾಯತ ವಿದ್ಯಾಭಿವೃದ್ಧಿ ನಿಧಿಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುವರು. ಎರಡು ಲಕ್ಷಕ್ಕೂ ಹೆಚ್ಚಿನ ಹಣವನ್ನು ಕೂಡಿಸಬೇಕು ಎಂಬುದು ಗಿಲಗಂಚಿ ಗುರುಸಿದ್ದಪ್ಪನವರ ಮತ್ತು ಅರಟಾಳ ರುದ್ರಗೌಡರ ಇಚ್ವಾಶಕ್ತಿಯಾಗಿತ್ತು.

ಮೆಟ್ರಿಕ್ ನಂತರದ ಉನ್ನತ ಶಿಕ್ಷಣವನ್ನು ಲಿಂಗಾಯತ್ ಯುವಕರಿಗೆ ಒದಗಿಸಲು, ಕಲಾ ಕೌಶಲ್ಯಗಳನ್ನು ಕಲಿಸುವುದ್ದಕ್ಕೋಸ್ಕರ ಲಿಂಗಾಯತ ನಿಧಿಯಿಂದ ಬರುವ ಬಡ್ಡಿಯಿಂದ ವಿದ್ಯಾರ್ಥಿಗಳ ಶುಲ್ಕ ಊಟ, ವಸತಿ ಖರ್ಚುಗಳನ್ನು ಲಿಂಗಾಯತ ಶಿಕ್ಷಣ ನಿದಿಯಿಂದ ಬರಿಸುವುದು.

ಶಿಕ್ಷಣದ ನಂತರದಲ್ಲಿ ಸರ್ಕಾರದಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದು ಸಮಾಜದ ಪ್ರತಿಷ್ಠೆಯನ್ನು ಹೆಚ್ಚಿಸುವುದು ಲಿಂಗಾಯತ ಪಂಡಿನ ಉದ್ದೇಶವಾಗಿತ್ತು.

1884ರಲ್ಲಿ ಲಿಂಗಾಯತ ಪಂಡಿನಿಂದ ಪ್ರಕಟನೆಯನ್ನು ಹೊರಡಿಸಿ ಮೊದಲ ಸಾರಿ ಸಮಾಜದ ಚಿಂತನೆ ಮಾಡುವ ಸಲುವಾಗಿ ನಿಬಂಧ ಸ್ಪರ್ಧೆಗಳನ್ನು ಈ ಕೆಳಗಿನ ಐದು ವಿಷಯಗಳ ಕುರಿತು ಏರ್ಪಡಿಸಲಾಗಿತ್ತು.

೧) ಲಿಂಗಾಯತ ಧರ್ಮದ ಉತ್ಪತ್ತಿ ,ಕರ್ತೃ, ಕಾಲ.
೨) ಲಿಂಗಾಯತ ಧರ್ಮದ ಆಚರಣೆಗಳು, ಸ್ತ್ರೀ ಪುನರ್ವಿವಾಹ, ದತ್ತಕ, ಸ್ತ್ರೀಧನ ಮುಂತಾದ ವ್ಯವಹಾರದ ಸಂಗತಿಗಳು.
೩) ಲಿಂಗಾಯತ ಧರ್ಮದ ಒಳಪಂಗಡಗಳು ಅವುಗಳ ಕಾರಣಗಳು ಮತ್ತು ಆಚರಣೆಗಳು
೪) ಲಿಂಗಾಯತ ಧರ್ಮ ಸ್ವೀಕರಿಸುವ ಅನ್ಯ ಧರ್ಮದವರನ್ನು ಸ್ವೀಕರಿಸಬಹುದೇ? ಅನ್ಯಧರ್ಮ ಸೇರಿರುವ ಲಿಂಗಾಯತರನ್ನು ಮರಳಿ ಲಿಂಗಾಯತ ಧರ್ಮಕ್ಕೆ ಸೇರಿಸಿಕೊಳ್ಳಬಹುದೇ?
೫) ವಿರಕ್ತ ,ಪಟ್ಟ ಮೂರ್ತಿ ,ಚರಂತಿ, ಗುರುಸ್ಥಳ ,ಮುಂತಾದ ಸ್ವಾಮಿತ್ವವವನ್ನು ಎಂಥ ಯೋಗ್ಯತೆ ಇರುವವರಿಗೆ ಕೊಡಬಹುದು ಅವರ ಕರ್ತವ್ಯಗಳೇನು? ಮಠಪತಿ ಗಣಾಚಾರಿ ಮುಂತಾದವರ ಕರ್ತವ್ಯಗಳೇನು?

ಈ ಮೇಲಿನ ವಿಷಯಗಳ ಕುರಿತು ಐದು ಪ್ರಬಂಧಗಳು ಮಂಡನೆಯಾಗಿದ್ದು ಅವುಗಳನ್ನು ಪರೀಕ್ಷಿಸಲು ಏಳು ಜನ ಪಂಡಿತರನ್ನು ನೇಮಕ ಮಾಡಿದ್ದರು.

ಐದು ಪ್ರಶ್ನೆಗಳಿಗೆ ಯಾವುದೇ ಒಬ್ಬ ಸ್ಪರ್ಧಿಯು ಉತ್ತರಿಸಿರಲಿಲ್ಲ. ಆದರೆ ಹೆಚ್ಚು ಅಂಕಗಳನ್ನು ಪಡೆದವರಿಗೆ ಬಹುಮಾನ ಕೊಡುವ ನಿರ್ಧಾರವಾಯಿತು.

ಒಟ್ಟು ಎರಡು ನೂರು ರೂಪಾಯಿಗಳ ಬಹುಮಾನವನ್ನು ವಿತರಿಸಲಾಯಿತು.

ಇದರಲ್ಲಿ ಪ್ರಥಮ ಬಹುಮಾನವನ್ನು ಹುಬ್ಬಳ್ಳಿ ಎರಡೇತ್ತಿನ ಮಠದ ಶ್ರೀಗಳಿಗೆ, ಎರಡನೇ ಬಹುಮಾನ ರಂಗಪ್ಪ ಶೆಟ್ಟಿಗೆ ,ಪ್ರಭಯ್ಯನವರಿಗೆ ಮೂರನೇ ಬಹುಮಾನ ,ಮೈಸೂರು ಸ್ಟಾರ್ ಪತ್ರಿಕೆಯ ಪತ್ರಕರ್ತರಾದ ವೀರಸಂಗಪ್ಪ ನವರಿಗೆ ನಾಲ್ಕನೇಯ ಬಹುಮಾನ ಚಿಕುರ್ಡೇಯ ಸೀತಾರಾಮಶಾಸ್ತ್ರಿ ಅವರಿಗೆ ಐದನೆಯ ಬಹುಮಾನ ಕೊಡಲಾಯಿತು.

ಬಹುಮಾನ ವಿತರಣಾ ಸಮಾರಂಭಕ್ಕೆ ಒಂದು ಸಾವಿರಕ್ಕಿಂತ ಹೆಚ್ಚು ಜನ ಸೇರಿದ್ದರು ,ಇದನ್ನು ಧಾರವಾಡದ ಹೊಸ ನಾಟಕ ಗೃಹದಲ್ಲಿ ಕೊಡಲಾಯಿತು.

ಲಿಂಗಾಯತ್ ವಿದ್ಯಾಭಿವೃದ್ಧಿ ನಿದಿ 3 ಸಾವಿರ ತಲುಪಿದೊಡನೆ ಅಂದಿನ ಧಾರವಾಡ ಜಿಲ್ಲಾಧಿಕಾರಿಯಾದ ಜೆಮ್ಸ ರಸೆಲ್ ಮಿಡಲ್ಟನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರ ಮುಖಾಂತರ ಲಿಂಗಾಯತ ನಿಧಿಯನ್ನು ಮುಂಬೈ ಸರಕಾರದ ಸುಪರ್ದಿಗೆ ಕೊಟ್ಟರು .ನಂತರ ಸರ್ಕಾರದವರು ಸಭೆಯ ಅಧ್ಯಕ್ಷರ ಹೆಸರಿನಿಂದ ಪ್ರಾಮಿಸರಿ ನೋಟುಗಳನ್ನು ಕೊಂಡು ಮುಂಬೈ ಸರ್ಕಾರದ ಅಕೌಂಟೆಂಟ್ ಜನರಲ್ ಇವರ ವಶದಲ್ಲಿ ಕೊಟ್ಟರು .

ಅದರಿಂದ ಬರುವ ಬಡ್ಡಿ ಹಣವನ್ನು ಲಿಂಗಾಯತ ವಿದ್ಯಾಭಿವೃದ್ಧಿ ಸಭೆಯ ಸದಸ್ಯರಿಗೆ ಕೊಡುವ ಠರಾವ್ ಮಾಡಲ್ಪಟ್ಟಿತು.

ಠರಾವ್ ನಂಬರ್‌ ED No 369 of 1884. ಲಿಂಗಾಯತ ವಿದ್ಯಾಭಿವೃದ್ಧಿ ಸಭೆಯ ವ್ಯವಸ್ಥೆಗಾಗಿ ಸಮಾಜದ ಮುಖ್ಯಸ್ಥರನ್ನು ಮೆಂಬರ್ ರನ್ನಾಗಿ ನೇಮಿಸಲು ಮುಂಬಯಿ ಪ್ರೆಸಿಡೆನ್ಸಿ ಸರಕಾರ ಪ್ರಾರಂಭಿಸಿತು.

ಧಾರವಾಡ ಜಿಲ್ಲೆಯಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿಗೆ ನಿದಿ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಲಿಂಗಾಯತ ವಿದ್ಯಾಭಿವೃದ್ದಿ ನಿದಿಗೆ ಹಣ ಹರಿದು ಬರಲು ಪ್ರಾರಂಭವಾಯಿತು.

ಆ ನಿಧಿಯನ್ನು ಪ್ರತ್ಯೇಕವಾಗಿ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಯ ಅಧೀನದಲ್ಲಿ ಇಡಬೇಕೆಂಬ ಸೂಚನೆ ಮುಂಬೈ ಸರ್ಕಾರದ ಮುಂದೆ ಬಂದಾಗ ಮೊದಲು ನಿದಿ ಪ್ರಾರಂಭವಾಗಿದ್ದು ಧಾರವಾಡದಲ್ಲಿ ,ಆದ್ದರಿಂದ ಧಾರವಾಡ ಜಿಲ್ಲಾಧಿಕಾರಿಗಳೂಬ್ಬರೇ ಸಮಗ್ರ ಲಿಂಗಾಯತ ನಿದಿಗೆ ಅಧ್ಯಕ್ಷರಾಗಿ ರಬೇಕು. ,ಅವರೊಬ್ಬರೇ ಸಾಕು ಎಂದು ಮುಂಬೈ ಸರ್ಕಾರ ಮಾರ್ಗದರ್ಶನವನ್ನು ನೀಡಿತು.

ಲಿಂಗಾಯತ ವಿದ್ಯಾಭಿವೃದ್ಧಿ ನಿಧಿ 30-9-1883 ರಂದು ಸ್ಥಾಪನೆಯಾದ ಕಾಲಕ್ಕೆ ಲಿಂಗಾಯತ ವಿದ್ಯಾಭಿವೃದ್ಧಿ ಸಭೆ ಎಂದು ಕರೆಯಲಾಗಿತ್ತು. ಈ ಸಂಸ್ಥೆ ಪ್ರಾರಂಭವಾದಾಗಿನಿಂದ 1886 ರವರೆಗೆ ಯಾವ ನಿಯಮಗಳು ಇದ್ದಿದ್ದಿಲ್ಲ.

1886 ರಲ್ಲಿ 25ನೆಯ ನಿಯಮಗಳನ್ನು ಸಿದ್ಧಪಡಿಸಿ ಅವುಗಳನ್ನು ಸರ್ಕಾರಕ್ಕೆ ಕಳಿಸಿ ಆದರಿಂದ E.D.No 384 of 11-2-1890 ಅನ್ವಯ ಮಂಜೂರಿ ಪಡೆಯಲಾಯಿತು .

1906 ರಲ್ಲಿ( ಲಿಂಗಾಯತ ಎಜುಕೇಶನ್ ಅಸೋಸಿಯೇಷನ್) ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಎಂದು ಬದಲಾಯಿಸಿ ಸಂಸ್ಥೆಯನ್ನು ಚಾರಿಟೇಬಲ್ ಎಂಡಾವಮೆಂಟ ಆಕ್ಟ ಪ್ರಕಾರ ರಿಜಿಸ್ಟರ್ ಮಾಡಿಸಲಾಯಿತು.

15-1-1887 ರಲ್ಲಿ ರೂಪಿಸಲಾದ ಹಾಗೂ 11-2- 1890 ರಲ್ಲಿ ತಿದ್ದುಪಡಿ ಮಾಡಿದ “ಲಿಂಗಾಯತ್ ಎಜುಕೇಶನ್ ಫಂಡ್ ಕಮಿಟಿ” ತನ್ನದೇ ಆದ ನಿಯಮಗಳನ್ನು ಹೊಂದಿತ್ತು.
ಕಾರ್ಯಕಾರಿ ಮಂಡಳಿ 18 ಜನ ಸದಸ್ಯರನ್ನು ಹೊಂದಿರುವ ಕಾರ್ಯಕಾರಿ ಸಮಿತಿ ಹೊಂದಿರಬೇಕು. ಸದಸ್ಯರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅವರ ವ್ಯಕ್ತಿತ್ವ ಮತ್ತು ನಡತೆ ಪ್ರಮುಖ ವಾಗಿರಬೇಕು.ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ನಿಧಿಗೆ ಲಿಂಗಾಯತ ಸದಸ್ಯರನ್ನು ನೇಮಕ ಮಾಡಬೇಕು.

ಸದಸ್ಯರಾದ ಐದು ವರ್ಷ ನೇಮಕ ಮಾಡಿದ ಒಳಗೆ ಜಾಗ ಖಾಲಿಯಾದರೆ ಮತ್ತೊಬ್ಬರನ್ನು ನೇಮಕ ಮಾಡುವ ಅಧಿಕಾರ ಜಿಲ್ಲಾಧಿಕಾರಿ ಅವರಿಗಿರಬೇಕು.

ಸದಸ್ಯರ ಅವಧಿ ಐದು ವರ್ಷ, ಆಯ್ಕೆಯಾಗುವ ಸದಸ್ಯರೆಲ್ಲರೂ ಲಿಂಗಾಯತ ಧರ್ಮಿಯರು ಆಗಿರಬೇಕು. ಕಮಿಟಿಯ ಅಧ್ಯಕ್ಷರಾಗಿ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಸರಕಾರದಿಂದ ನೇಮಕವಾಗಬೇಕು ಎನ್ನುವವು ಲಿಂಗಾಯತ ಅಭಿವೃದ್ಧಿ ಸಂಸ್ಥೆಯ ಪ್ರಮುಖ ನಿಯಮಗಳು ಆಗಿದ್ದವು.

ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಶಿಷ್ಯವೇತನ ನೀಡುವ ಸಂದರ್ಭದಲ್ಲಿ ತನ್ನದೇ ಆದ ನಿಯಮಾವಳಿಗಳನ್ನು ರಚಿಸಿಕೊಂಡು ಅದರನುಸಾರ ಶಿಷ್ಯವೇತನ ನೀಡಲು ಪ್ರಾರಂಭಿಸಿತು, ಶಿಷ್ಯ ವೇತನ ನೀಡಲು ಸಹಿತ ಕಾನೂನಿನ ಸ್ವರೂಪವನ್ನು ತನ್ನಷ್ಟಕ್ಕೆ ತಾನೇ ಲಿಂಗಾಯತ ವಿದ್ಯಾಭಿವೃದ್ದಿ ಸಂಸ್ಥೆ ರಚಿಸಿಕೊಂಡಿತು.

ಪ್ರತಿ ವಿದ್ಯಾರ್ಥಿಗೆ 30 ರೂಪಾಯಿಯ ಶಿಷ್ಯವೇತನ ನೀಡಲಾಗುವುದು.ಸ್ಕಾಲರ್ಶಿಪ್ ಪಡೆದು ಶಿಕ್ಷಣ ಮುಗಿಸಿದ ನಂತರ ತಿಂಗಳಿಗೆ 30 ರೂಪಾಯಿಗಳನ್ನು ದುಡಿಯುವ ಸಾಮರ್ಥ್ಯ ಬಂದ ನಂತರದಲ್ಲಿ ನಂತರದಲ್ಲಿ ಪಡೆದ ಸ್ಕಾಲರ್ಶಿಪ್‌ ನ ೧೦% ನಂತೆ ನಿಧಿಗೆ ಜಮಾ ಮಾಡಬೇಕು.

ಸ್ಕಾಲರ್ ಶಿಪ್ ನ ಪೂರ್ಣಪ್ರಮಾಣದ ಹಣ ಮರುಭರಣ ಮಾಡಿದ ನಂತರ ಲಿಂಗಾಯತ್ ವಿದ್ಯಾಭಿವೃದ್ಧಿ ನಿಧಿಯ ಆಜೀವ ಸದಸ್ಯರಾಗಿ ಜೀವಮಾನದ ಸದಸ್ಯರಾಗುವ ಹಕ್ಕನ್ನು ಫಲಾನುಭವಿಗಳು ಪಡೆಯುವರು.

ಇದರ ಜೊತೆಗೆ ಇನ್ನೂ ಹಲವು ನಿಯಮಗಳನ್ನು ಮುಂಬೈ ಸರ್ಕಾರದ ಶಿಕ್ಷಣ ಇಲಾಖೆಯ 15-1-1887 ಮತ್ತು 11-2-1890 ರ ಠರಾವಿನಲ್ಲಿ ಪ್ರಕಟಿಸಿರುವರು.

1886 ನಿಯಮಾವಳಿಗಳ ಪ್ರಕಾರ 18ಜನರ ಕಾರ್ಯಕಾರಿ ಸಮಿತಿಯನ್ನು ಹೊಂದಿದ್ದು ಇದರಲ್ಲಿ ಅಂದಿನ ಧಾರವಾಡ ಜಿಲ್ಲಾಧಿಕಾರಿ A.w.crawly boevey ಲಿಂಗಾಯತ ವಿದ್ಯಾಭಿವೃದ್ಧಿ ನಿಧಿಯ ಮೊದಲ ಅಧ್ಯಕ್ಷರಾದರು.

ಸದಸ್ಯರು

ಲಿಂಗಾಯತ್ ವಿದ್ಯಾಭಿವೃದ್ಧಿ ನಿಧಿಯು ಮೂರು ತರದ ಸದಸ್ಯರನ್ನು ಹೊಂದಿದ್ದು ಅದರಲ್ಲಿ ೧)ಗೌರವ ಸದಸ್ಯರು
೨)ಆಜೀವ ಸದಸ್ಯರು
೩)ಸಾಮಾನ್ಯ ಸದಸ್ಯರು ಎಂದು ವರ್ಗೀಕರಿಸಲಾಗಿದೆ.

ಲಿಂಗಾಯತ ವಿದ್ಯಾಭಿವೃದ್ಧಿ ನಿಧಿ ಸ್ಥಾಪನೆಯಾದಾಗಿನಿಂದ ಧಾರವಾಡ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುತ್ತಿದ್ದರು ಈ ಸಂಪ್ರದಾಯ ಹತ್ತೊಂಬತ್ತು ನೂರಾ ಮೂವತ್ತ ಮೂರ ರವರೆಗೆ (೧೯೩೩)ಸಾಗಿತು.

1933 ರಲ್ಲಿ ಹೊಸ ನಿಯಮಗಳ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಸರಕಾರಿ ಕೆಲಸ ಹೆಚ್ಚಾಗಿರುವುದರಿಂದ ಲಿಂಗಾಯತ ಸಮಾಜದ ಯೋಗ್ಯ ವ್ಯಕ್ತಿಯನ್ನು ಲಿಂಗಾಯತ ನಿಧಿಯ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸೂಚನೆ ನೀಡಿತು.

ಲಿಂಗಾಯತ ನಿಧಿಯ ಮೊದಲ ಅಧ್ಯಕ್ಷರು

ಸರಕಾರದ ಸೂಚನೆಯ ಪ್ರಕಾರ ಶ್ರೀಮಂತ ಸರದಾರ ರಾಜಾ ಲಕಮಗೌಡ ಬಸವಪ್ರಭು ಸರ್ ದೇಸಾಯಿ ಇವರನ್ನು 1933 ರಲ್ಲಿ ಲಿಂಗಾಯತ ನಿಧಿಗೆ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.

ಲಿಂಗಾಯತ ವಿದ್ಯಾಭಿವೃದ್ಧಿ ನಿಧಿ 1883 ರಲ್ಲಿ 3000 ರೂಪಾಯಿಗಳಿಂದ ಪ್ರಾರಂಭವಾಗಿ 1-4-1888 ಕ್ಕೆ 77000 ರೂಪಾಯಿಗಳಾಯಿತು.

ಇದರಲ್ಲಿ 54244 ರೂಪಾಯಿಗಳು ಧಾರವಾಡ ಜಿಲ್ಲೆಯಿಂದ, 21305 ರೂಪಾಯಿ ಗಳು ಬೆಳಗಾವಿ ಜಿಲ್ಲೆಯಿಂದ ಸಂಗ್ರಹವಾಗಿದ್ದು , ಮುಂಬೈ ಸರಕಾರದಲ್ಲಿ 77000 ರೂಪಾಯಿಗಳನ್ನು ಪ್ರಾಮಿಸರಿ ನೋಟ್ ರೂಪದಲ್ಲಿ ಠೇವಣಿ ಇಡಲಾಯಿತು. ಇದಕ್ಕೆ ವರ್ಷಕ್ಕೆ 1885 ರೂಪಾಯಿಗಳು ಬಡ್ಡಿ ಬರಲಿಕ್ಕೆ ಪ್ರಾರಂಭವಾಯಿತು.

ಲಿಂಗಾಯತ ವಿದ್ಯಾಭಿವೃದ್ಧಿ ನಿಧಿಯು 1902ರಲ್ಲಿ ಒಂದು ಲಕ್ಷ ಎಂಬತ್ತೆಂಟು ಸಾವಿರ ರೂಪಾಯಿಗಳನ್ನು ತಲುಪಿತು.1901 ರಲ್ಲಿ ಹುಕ್ಕೇರಿಯ ಒಂಟಮೂರೆಯ ರಾಜಾ ಲಕಮಗೌಡ ಬಸವಪ್ರಭು ಸರ ದೇಸಾಯಿಯವರು 55000 ರೂಪಾಯಿಗಳನ್ನು ಲಿಂಗಾಯತ ವಿದ್ಯಾಭಿವೃದ್ದಿ ನಿದಿ ಕೊಟ್ಟ ಕಾರಣವಾಗಿ ತೀವ್ರವಾಗಿ ಲಿಂಗಾಯತ ನಿಧಿಯ ಗಾತ್ರ ತೀರ್ವವಾಗಿ ಏರಲು ಕಾರಣವಾಯಿತು.

ICS_ಪಂಢ್

ಸೊಲ್ಲಾಪುರ ಜಿಲ್ಲೆಯ ಬಾರ್ಸಿ ತಾಲೂಕಿನ ವೈರಾಗ ಗ್ರಾಮದ ಶಿವಲಿಂಗಪ್ಪ ಚನಬಸಪ್ಪ ಹೊಸಳ್ಳಿ ಬಹಳ ಜಾಣ ವಿದ್ಯಾರ್ಥಿ ಆಗಿದ್ದ. ಆಗಿನಕಾಲದಲ್ಲಿ ಲಿಂಗಾಯತ್ ಸಮಾಜದಲ್ಲಿ ICS ಅಧಿಕಾರಿಗಳು ಯಾರೊಬ್ಬರೂ ಇರದ ಕಾರಣ ಚನ್ನಬಸಪ್ಪ ಹೊಸಳ್ಳಿಯನ್ನು ICS ಓದಿಸಲು ಇಂಗ್ಲೆಂಡಗೆ ಕಳುಹಿಸಲು ಗಿಲಗಂಚಿ ಗುರುಸಿದ್ದಪ್ಪನವರು & ಅರಟಾಳ ರುದ್ರಗೌಡರು ನಿರ್ಧರಿಸಿದರು.

ICS ಅಧ್ಯಯನಕ್ಕೆ ಲಂಡನ್ ಗೆ‌ ಹೋಗಬೇಕಾದ ಅನಿವಾರ್ಯತೆ ಇರುವ ಕಾರಣಕ್ಕಾಗಿ ICS ವಿದ್ಯಾಭ್ಯಾಸದ ಉದ್ದೇಶದಿಂದ ಅವರು 21ಸಾವಿರಕ್ಕೂ ಅಧಿಕ ಹಣವನ್ನು ಗದಗ್ ನವಲಗುಂದ ಭಾಗದ ಜನರಿಂದ ಜೋಳಿಗೆ ಹಾಕಿ ಕೊಂಡು ಸಂಗ್ರಹಿಸಿದರು.

ಇದನ್ನು ಧಾರವಾಡ ಜಿಲ್ಲೆಯ ಖಜಾನೆಯಲ್ಲಿ ಇಟ್ಟು “ಲಿಂಗಾಯತ ಫಂಡ್ ಫಾರ್ ಎಜುಕೇಶನ್ ಇನ್ ಇಂಗ್ಲೆಂಡ್ “ಎಂಬ ಹೆಸರಿನಲ್ಲಿ ಠೇವಣಿ ಮಾಡಲಾಯಿತು.

1891 ರಲ್ಲಿ ಗಿಲಗಂಚಿ ಗುರುಸಿದ್ದಪ್ಪನವರ ನಿಧನಹೊಂದಿದರು .ಮರಣ ಶಯ್ಯಯಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ಚನ್ನಬಸಪ್ಪ ಹೊಸಳ್ಳಿಯನ್ನು ಇಂಗ್ಲಂಡ್ ಗೆ ICS ಅಧ್ಯಯನಕ್ಕೆ ಹೋಗುವುದನ್ನು ನಿಲ್ಲಿಸಕೂಡದು ಎಂದು ಮಾತನ್ನು ರಾವ್ ಬಹದ್ದೂರ ಅರಟಾಳ ರುದ್ರಗೌಡರಿಂದ ತೆಗೆದುಕೊಂಡು ಪ್ರಾಣ ಬಿಟ್ಟರು.

ಇದರಿಂದ ಸಮಾಜದ ಮೇಲೆ ಗಿಲಗಂಚಿ ಗುರುಸಿದ್ದಪ್ಪನವರಿಗೆ ಇರುವ ಕಾಳಜಿ ಅರಿವಾಗದೇ ಇರದು.
ಚನ್ನಬಸಪ್ಪ ಹೊಸಳ್ಳಿ ಏರಡು ಸಾರಿ ICS ಪರೀಕ್ಷೆ ಕುಳಿತರೂ ಉತ್ತಿರ್ಣನಾಗದೇ ಇರುವಾಗ
ಚನ್ನಬಸಪ್ಪ ಹೊಸಳ್ಳಿ 1897 ರಲ್ಲಿ ಬ್ಯಾರಿಸ್ಟರ್ ಪದವಿಯನ್ನು ಪಡೆದು ಮರಳಿ ಭಾರತಕ್ಕೆ‌
ಬಂದರು .ಆದರೆ ಮರಳಿ ಬಂದು ಅರಟಾಳ ರುದ್ರಗೌಡರನ್ನು ಬೇಟಿಯಾಗುವ ಯಾವುದೇ ಸೌಜನ್ಯಯುತ ಪ್ರಯತ್ನ ಮಾಡಲಿಲ್ಲ.ಭೇಟಿಯಾಗುವ ಪ್ರಯತ್ನ ಮಾಡದೆ ತಮ್ಮ ಕೃತಘ್ನತೆಯನ್ನು ತೋರಿಸಿದರು.

ಹಣದ ಜೊತೆಗೆ ಕೆಲವೊಂದಿಷ್ಟು ಆಸ್ತಿಗಳು ಸಹಿತ ಲಿಂಗಾಯತ ವಿದ್ಯಾಭಿವೃದ್ಧಿ ನಿದಿಗೆ ಸೇರಿಕೊಂಡವು.

ಗುರುಸಿದ್ದಪ್ಪ ಚನಬಸಪ್ಪ ಬಡ್ನಿ ಸಾಕೀನ!! ಹೋಂಬಳ ಇವರ ಹೊಂಬಳ ಗ್ರಾಮದಲ್ಲಿ 23 ಎಕರೆ 33 ಗುಂಟೆ ಕೃಷಿ ಜಮೀನು, ಗದಿಗೆಪ್ಪ ಕಾಳಪ್ಪನವರ ಸಾಕಿನ್!! ಬಂಕಾಪುರ 20 ಕೂರಗಿ ಜಮೀನು ಲಿಂಗಾಯತ ನಿದಿಗೆ ಸೇರಿತು.

ಹೀಗೆ ಲಿಂಗಾಯತ ವಿದ್ಯಾಭಿವೃದ್ಧಿ ನಿಧಿಗೆ ಹಣದ ಜೊತೆಗೆ ಆಸ್ತಿಗಳನ್ನು ಸಂಗ್ರಹ ವಾಗಲು ಪ್ರಾರಂಭವಾಯಿತು.

ಲಿಂಗಾಯತ ನಿಧಿ ಬೃಹತ್ತಾಗಿ ಬೆಳೆದು ಲಿಂಗಾಯತ ವಿದ್ಯಾವಂತರ ಬಾಳಿಗೆ ಬೆಳಕನ್ನು ನೀಡುವ ಆಶಾಕಿರಣವಾಗಿ ಯಶಸ್ಸನ್ನು ಕಂಡಿತು.

ಸದಸ್ಯರ_ಸಂಖ್ಯೆ.

1984 ರ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಗೆ ವಂಶಪಾರಂಪರ್ಯ ಪೋಷಕರು ಒಬ್ಬರು ,ಗೌರವ ಸದಸ್ಯರು ಒಬ್ಬರು, ಆಜೀವ ಸದಸ್ಯರು 702 ಜನ ,ಮತ್ತು ಸಾಮಾನ್ಯ ಸದಸ್ಯರು 42ಜನ ಇದ್ದರು ,ವ್ಯವಸ್ಥಾಪಕ ಕಮಿಟಿಯು 10 ಜನರನ್ನು ಒಳಗೊಂಡಿದೆ.

ಪ್ರಸ್ತುತದಲ್ಲಿರುವ ಲಿಂಗಾಯತ ವಿದ್ಯಾಭಿವೃದ್ಧಿ ನಿಧಿಯ ಸದಸ್ಯರು ,ಕಾರ್ಯಕಾರಿ ಮಂಡಳಿಯ ಸಮಿತಿಯ ಮಾಹಿತಿಯನ್ನು ಆ ಸಂಸ್ಥೆಯು ಪ್ರಕಟಗೊಳಿಸಿ ಸಂಸ್ಥೆಯ ನೈತಿಕತೆಯನ್ನ ಎತ್ತಿ ಹಿಡಿಯುವ ಹೊಣೆಗಾರಿಕೆ ಪ್ರದರ್ಶಿಸಬೇಕು.

ಸ್ಕಾಲರ_ಶಿಪ್_ವಿತರಣೆ

ಲಿಂಗಾಯತ ವಿದ್ಯಾಭಿವೃದ್ಧಿ ನಿಧಿಯ ಬಡ್ಡಿಹಣ 1888 ರಲ್ಲಿ ಬರಲು ಪ್ರಾರಂಭವಾಯಿತು .

1885ನೆಯ ಜನವರಿ ತಿಂಗಳಿನಿಂದ ಐದು ತಿಂಗಳವರೆಗೆ ಪುಣಾ ಕಾಲೇಜಿನಲ್ಲಿ ಸೇರಿದ ಐದು ಲಿಂಗಾಯತ ವಿದ್ಯಾರ್ಥಿಗಳಿಗೆ ಗಿಲಗಂಚಿ ಗುರುಸಿದ್ದಪ್ಪನವರು ತಮ್ಮ ಕೈಯಿಂದ 370 ರೂಪಾಯಿಗಳನ್ನು ಕೊಟ್ಟರು.

ಮುಂದೆ 1885 ಜೂನ್ ತಿಂಗಳಿಂದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಶಿಷ್ಯವೇತನವನ್ನು ಪ್ರಾರಂಭ ಮಾಡಿತು.
ಆರಂಭದಲ್ಲಿ ಧಾರ್ಮಿಕ ಶಿಕ್ಷಣವನ್ನು ಕಲಿಯುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 10 ರೂಪಾಯಿಗಳಂತೆ 4ವರ್ಷ ಶಿಷ್ಯವೇತನ ಕೊಡುತ್ತಿದ್ದರು.

ವಿಜ್ಞಾನ ಮತ್ತು ಮೆಡಿಕಲ್ ಅಧ್ಯಯನಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಎರಡು ಸ್ಕಾಲರ್ ಶಿಪ್ ಕೂಡುತ್ತಿದ್ದರು.

1915ರ ನಂತರ ಶಾಸ್ತ್ರೀಯ, ಕೃಷಿ ,ಕಾಯ್ದೆ ,ಮಹಾವಿದ್ಯಾಲಯದ ಅಧ್ಯಯನದಲ್ಲಿ ತೊಡಗಿದ ವಿದ್ಯಾರ್ಥಿಗಳಿಗೆ ಮತ್ತು ಕೃಷಿ ವಿಜ್ಞಾನ,ಅರಣ್ಯ ವಿಜ್ನಾನ ಅಧ್ಯಯನದಲ್ಲಿ ತೊಡಗಿದ್ದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕೊಡಲಿಕ್ಕೆ ಪ್ರಾರಂಭ ಮಾಡಿದರು.

ಹತ್ತೊಂಬತ್ತು ನೂರ ಹದಿನೈದರಲ್ಲಿ (1915)ಮಾಡಿದ ನಿಯಮಗಳ ಪ್ರಕಾರ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಷ್ಯವೇತನವನ್ನು ನಿಲ್ಲಿಸಲಾಯಿತು.

ಲಿಂಗಾಯತ ವಿದ್ಯಾಭಿವೃದ್ಧಿ ನಿದಿ 1883 ರಲ್ಲಿ ಪ್ರಾರಂಭವಾದರೂ ಅದು ಶಿಷ್ಯವೇತನವನ್ನು ಕೊಡಲು ಪ್ರಾರಂಭಮಾಡಿದ್ದು 1885ರಿಂದ.

ಲಭ್ಯವಿರುವ ಮಾಹಿತಿಯ ಪ್ರಕಾರ 1888 ಕ್ಕಿಂತ ಮುಂಚೆ 36 ಜನ ಲಿಂಗಾಯತ ವಿದ್ಯಾಭಿವೃದ್ಧಿ ನಿಧಿಯ ಶಿಷ್ಯವೇತನವನ್ನು ಪಡೆದುಕೊಂಡಿದ್ದಾರೆ.

1888- 89ರಲ್ಲಿ 34 ಜನರಿಗೆ ಶಿಷ್ಯವೇತನವನ್ನು ಒದಗಿಸಿದ ಮಾಹಿತಿ ಲಭ್ಯವಿದೆ. ಅದರಲ್ಲಿ ಮುಂಬೈ ಪ್ರೀಚೆಸ್ ಇನ್ಸ್ಟಿಟ್ಯೂಟ್ ನಲ್ಲಿ ಅಧ್ಯಯನ ಮಾಡುತ್ತಿದ್ದ ಎರಡು ವಿದ್ಯಾರ್ಥಿಗಳು ,ಪುಣೆ ಫರ್ಗ್ಯುಸನ್ ಕಾಲೇಜಿನಲ್ಲಿ ಎರಡು ವಿದ್ಯಾರ್ಥಿಗಳು, ಸೈನ್ಸ್ ವಿದ್ಯಾಲಯದಲ್ಲಿ ಮೂರು ವಿದ್ಯಾರ್ಥಿಗಳು, ಧಾರವಾಡ ಹೈಸ್ಕೂಲ್ ನಲ್ಲಿ 11 ವಿದ್ಯಾರ್ಥಿಗಳು, ಧಾರವಾಡ ಜರ್ಮನ್ ಮಿಷನ್ ಹೈಸ್ಕೂಲಿನಲ್ಲಿ ಎರಡು ವಿದ್ಯಾರ್ಥಿಗಳು, ಬೆಳಗಾವಿ ಸರ್ದಾರ ಹೈಸ್ಕೂಲಲ್ಲಿ 12ಜನರು ,ಕಾಶಿಯ ಸಂಸ್ಕೃತ ಕಲಿಯುವ 2 ವಿದ್ಯಾರ್ಥಿಗಳಿಗೆ ಶಿಷ್ಯವೇತನ ವನ್ನು ನೀಡಲಾಗಿದೆ.

1888-89ರಲ್ಲಿ ಒಟ್ಟು 34 ವಿದ್ಯಾರ್ಥಿಗಳಿಗೆ ಲಿಂಗಾಯತ ವಿದ್ಯಾರ್ಥಿ ನಿಧಿಯಿಂದ ಶಿಷ್ಯವೇತನ ದೊರಕಿಸಿಕೊಡಲಾಯಿತು.

ಶಿಷ್ಯವೇತನವನ್ನು_ಹಿಂದಿರುಗಿಸುವ_ನಿಯಮ

1888 ರಲ್ಲಿನ ನಿಯಮಗಳ ಪ್ರಕಾರ ಸಂಸ್ಥೆಯಿಂದ ಹಣ ಪಡೆದು ಕಲಿತ ವಿದ್ಯಾರ್ಥಿಗಳು ತಮ್ಮ ಅಭ್ಯಾಸವನ್ನು ಮುಗಿಸಿ ದುಡಿಮೆಯನ್ನು ಪ್ರಾರಂಭಿಸಿದ ನಂತರ ತಿಂಗಳಿಗೆ 30 ರೂಪಾಯಿ ಗಳಿಸುವ ಸಾಮರ್ಥ್ಯ ಉಂಟಾದ ಮೇಲೆ ತಮಗೆ ಫಂಡಿನಿಂದ ದೊರೆತ ಹಣದಲ್ಲಿ ಶೇಕಡ 10ರಷ್ಟನ್ನು ಪ್ರತಿತಿಂಗಳು ಭರಣ ಮಾಡುತ್ತಾ ಹೋಗಬೇಕು ಎಂಬ ಕರಾರುಪತ್ರ ನ್ನು ಪ್ರತಿ ಫಲಾನುಭವಿ ಕೊಡಬೇಕಾಗುತ್ತಿತ್ತು.

ಈ ಮೇಲಿನ ನಿಯಮವು 1924 ರವರೆಗೆ ನಡೆದು 1924ರಲ್ಲಿ ಆದ ನಿಯಮದ ಪ್ರಕಾರ ವರ್ಷಕ್ಕೆ 600 ಗಳನ್ನು ದುಡಿಯಲು ಶಕ್ತನಾದ ಮೇಲೆ ಪಡೆದ ಹಣವನ್ನು ಮರಳಿ ನಿದಿಗೆ ಕೊಡತಕ್ಕದ್ದು ಎಂಬ ನಿಯಮಾವಳಿಯನ್ನು ಮಾಡಲಾಯಿತು.

ಈವರೆಗೂ 5ಲಕ್ಷ 50ಸಾವಿರಕ್ಕೂ ಕ್ಕೂ ಹೆಚ್ಚಿನ ನಿಧಿಯನ್ನು ವಿದ್ಯಾರ್ಥಿ ವೇತನಕ್ಕಾಗಿ ಖರ್ಚು ಮಾಡಲಾಗಿದೆ ಆದರೆ ಅದರಲ್ಲಿ ಮರಳಿರುವುದು ಕೇವಲ 42707 ರೂಪಾಯಿ ಮಾತ್ರ. ಲಿಂಗಾಯತ ವಿದ್ಯಾಭಿವೃದ್ಧಿ ನಿಧಿಯಿಂದ ಹಣವನ್ನು ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡು ಮರಳಿ ಲಿಂಗಾಯತ ವಿದ್ಯಾಭಿವೃದ್ಧಿ ನಿಧಿಗೆ ಹಣವನ್ನು ಪಾವತಿಸದ ಕೆಲವರ ಮನಸ್ಥಿತಿ ಹೀನ ಮನಸ್ಥಿತಿಯ ಋಣಗೇಡಿತನವನ್ನು ಎತ್ತಿ ತೋರುವುದು.

ಹೀಗಾಗಿ ಇಡೀ ದೇಶದಲ್ಲಿಯೇ ಹೆಸರುವಾಸಿಯಾಗಿದ್ದ ಲಿಂಗಾಯತ ವಿದ್ಯಾಭಿವೃದ್ಧಿ ನಿಧಿ ಇವತ್ತು ಪ್ರಚಾರದಲ್ಲಿ ಇರದೇ ಇರುವುದು ನೋವಿನ ವಿಷಯ.

ಅದು ಇಂತಹ ಫಲಾನುಭವಿಗಳ ಖುಣಗೇಡಿತನದ ಮನಸ್ಥಿತಿಯ ಫಲಶೃತಿ ಎಂದರೆ ತಪ್ಪಾಗಲಾರದು, ಸ್ಥಾಪಕರು ಇಟ್ಟುಕೊಂಡ ಉದ್ದೇಶಕ್ಕೆ ಚ್ಯುತಿ ತಂದ ಅಪಕೀರ್ತಿ ಫಲಾನುಭವಿಗಳದ್ದು ಎಂದರೆ ತಪ್ಪಾಗಲಾರದು.

ಲಿಂಗಾಯತ_ವಿದ್ಯಾಭಿವೃದ್ಧಿ
ನಿಧಿಯ_ಚಿನ್ನೆ

ಲಿಂಗಾಯತ ವಿದ್ಯಾಭಿವೃದ್ಧಿ ನೀದಿಯು ಗೋಲಾಕಾರದ ವೃತ್ತದಲ್ಲಿ ಇಷ್ಟಲಿಂಗವನ್ನು ಪೂಜಿಸುವ ಹಸ್ತ,ಇಷ್ಟಲಿಂಗದ ಮೇಲೆ ಬಿಲ್ವಪತ್ರೆ, ಇಷ್ಟಲಿಂಗದ ಮುಂದೆ ಬೆಳಗುತ್ತಿರುವ ದೀಪ ಇಷ್ಟಲಿಂಗ ಮತ್ತು ದ್ವೀಪದ ಪಕ್ಕದಲ್ಲಿ ತೆರೆದ ಪುಸ್ತಕ ,ಪುಸ್ತಕದಲ್ಲಿ ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನ ಹೊಂದಿದೆ.

140 ವರ್ಷಗಳ ಹಿಂದೆ ಸ್ಥಾಪಿಸಿದ ಲಿಂಗಾಯತ ವಿದ್ಯಾಭಿವೃದ್ಧಿ ನಿದಿಯ ಸ್ಥಾಪಕರಿಗೆ ಸ್ಪಷ್ಟವಾಗಿ ಲಿಂಗಾಯತ ಧರ್ಮದ ಪರಿಕಲ್ಪನೆಯನ್ನು ಹೊಂದಿದ್ದರು ಎಂಬುದು ತಿಳಿಯುತ್ತದೆ .ಇಂದಿಗೂ ಲಿಂಗಾಯತ ಧರ್ಮದ ಮಾನ್ಯತೆಗೆ ಇದೊಂದು ಉತ್ತಮವಾಗಿರುವ ಆಸ್ತಿ ಅಥವಾ ದಾಖಲೆಯಾಗಿ ಪರಿಣಮಿಸಬಲ್ಲದು.

1883 ರಲ್ಲಿ ಸ್ಥಾಪಿತಗೊಂಡು ಲಿಂಗಾಯತರಲ್ಲಿ ಶಿಕ್ಷಣದ ದೀಪವನ್ನು ಬೆಳಗಿದ ಲಿಂಗಾಯತ ವಿದ್ಯಾಭಿವೃದ್ಧಿ ನಿಧಿ ತಾನು ಬೆಳಗುವುದಲ್ಲದೆ ಹಲವಾರು ವ್ಯಕ್ತಿಗಳನ್ನು ಬೆಳಸಿತು,ಹಲವಾರು ವ್ಯಕ್ತಿಗಳು ದೈತ್ಯ ಶಕ್ತಿಗಳಾಗಿ ನಂತರ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ನಾಡು-ನುಡಿಯನ್ನು ಕಟ್ಟುವ ಕೆಲಸ ಮಾಡಿದರು ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು,

ಇದೇ ಸಂಸ್ಥೆಯ ಸಂಸ್ಥಾಪಕ ರಾಗಿರುವ ರುದ್ರಗೌಡರು ಧಾರವಾಡದಲ್ಲಿ ಕೆಸಿಡಿ ಕಾಲೇಜನ್ನು ,ಬೆಳಗಾವಿಯಲ್ಲಿ ಲಿಂಗಾಯತ ಎಜುಕೇಶನ್ ಸೊಸೈಟಿಯನ್ನು, ಬೆಳಗಾವಿಯಲ್ಲಿ ನರ್ಸಿಂಗ್ ಸ್ಕೂಲನ್ನು ,ಸೋಲಾಪುರದಲ್ಲಿ ಲಿಂಗಾಯತ ಬೋರ್ಡಿಂಗ್ ಅನ್ನು, ಹೀರೆಕೇರುರನಲ್ಲಿ ಲಿಂಗಾಯತ ಇಂಗ್ಲಿಷ್ ಶಾಲೆಯನ್ನು ,ಗದಗಿನಲ್ಲಿ ಸಂಸ್ಕೃತ ಪಾಠಶಾಲೆಯನ್ನು ,ಹುಬ್ಬಳ್ಳಿಯಲ್ಲಿರುವ ವೀರಶೈವ ಮುದ್ರಣಾಲಯವನ್ನು ಸ್ಥಾಪಿಸಿದರು.

ಇದೇ ಸಂಸ್ಥೆಯ ಫಲಾನುಭವಿಗಳಾಗಿರುವ ಸಿದ್ದಪ್ಪ ಕಂಬಳಿ ಅವರು ಭಾರತದ ಸ್ವಾಭಿಮಾನಿ ರಾಜಕೀಯ ನಾಯಕನಾಗಿ ಬೆಳೆದರು.ಇದೇ ಸಂಸ್ಥೆಯ ಮೂಲಕ ಅರಟಾಳ ರುದ್ರಗೌಡರ ಸಹಾಯದಿಂದ KLE ಯನ್ನು ಬೆಳಸಿದ ಸಪ್ತರ್ಷಿಗಳು ಶಿಷ್ಯವೇತನ ಪಡೆದು ತಮ್ಮ ಶೈಕ್ಷಣಿಕ ಬದುಕು ಕಟ್ಟಿಕೊಂಡರು. ಇದೇ ಸಂಸ್ಥೆಯ ಫಲಾನುಭವಿಗಳಾದ ಪ ಗು ಹಳಕಟ್ಟಿಯವರು ಬಿಜಾಪುರದಲ್ಲಿ b l d ಸಂಸ್ಥೆಯನ್ನು ಪ್ರಾರಂಭಿಸಿದರು, ಮುಂದೆ ಲಿಂಗಾಯತ ರು ಕಟ್ಟಿಕೊಂಡ ಬಸವೇಶ್ವರ ವಿದ್ಯಾವರ್ಧಕ ಸಂಘ, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ ,ಗುಲ್ಬರ್ಗದ ಶರಣಬಸಪ್ಪ ಶಿಕ್ಷಣ ಸಂಸ್ಥೆಗಳು ,ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಧಾರವಾಡದ ಪ್ರೇರಣೆಯನ್ನು ಪಡೆದುಕೊಂಡು ಸ್ಥಾಪನೆಯಾಗಿ ದಕ್ಷಿಣ ಭಾರತ ಲಿಂಗಾಯತ ಜನ ಅಷ್ಟೇ ಅಲ್ಲದೇ ಜಾತ್ಯತೀತ ವಾಗಿಎಲ್ಲ ಸಮುದಾಯದ ಎದೆಗೆ ಅಕ್ಷರವನ್ನು ಬಿತ್ತುವ ಮೂಲಕ ನಾಡಿನ ಮಾನವ ಸಂಪನ್ಮೂಲದ ಗುಣಮಟ್ಟವನ್ನು ಹೆಚ್ಚಿಸಿದೆ, ಎತ್ತರಕ್ಕೇರಿಸಿದೆ ಸರಕಾರ ಮಾಡಬೇಕಾದ ಕೆಲಸವನ್ನು ಲಿಂಗಾಯತ ಶಿಕ್ಷಣ ಸಂಸ್ಥೆಗಳು ಮಾಡಿದೆ .ಅಂದರೆ ಅದರ ಹಿಂದಿರುವ ಪ್ರೇರಕ ಶಕ್ತಿಯೇ ಲಿಂಗಾಯತ ವಿದ್ಯಾಭಿವೃದ್ಧಿ ನಿಧಿ ಧಾರವಾಡ ಎಂದರೆ ತಪ್ಪಾಗಲಾರದು.

ಆದರೆ ಪ್ರಾರಂಭದಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ನಿಧಿ ಪ್ರಾರಂಭದ ವೇಗ ಸ್ವತಂತ್ರ ನಂತರ ಭಾರತದಲ್ಲಿ ಇಲ್ಲದೆ ಇರುವುದು ಒಂದಿಷ್ಟು ಹಳಹಳಿ ಎನಿಸಿದೆ.

ಇದರ ಜೊತೆಗೆ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯವರು ಅದನ್ನು ಕಟ್ಟಿಬೆಳೆಸಿದ ಪುಣ್ಯ ಪುರುಷರನ್ನು ನಾಡಿನ ಜನಮಾನಸಕ್ಕೆ ತಲುಪಿಸುವ ,ಪರಿಚಯಿಸುವ ಗುರುತರ ಹೊಣೆಗಾರಿಕೆ ವರ್ತಮಾನದ ಸಮಿತಿಯವರಲ್ಲಿದೆ .ಅದನ್ನು ನಿರ್ವಹಿಸಿದರೆ ಅವರು ಆ ಸಂಸ್ಥೆಯ ಫಲಾನುಭವಿಗಳು ಆಗಿದ್ದಕ್ಕೆ, ಆಡಳಿತ ಮಂಡಳಿಯ ಸದಸ್ಯರಾಗಿ ರುವುದಕ್ಕೆ ಸಾರ್ಥಕವಾಗುವುದು.

ಸಂಸ್ಥಾಪಕರು ವರ್ತಮಾನ್ ಆಡಳಿತ ಮಂಡಳಿಗೆ ಮತ್ತಷ್ಟು ಕೆಲಸಮಾಡುವ ಸಾಮರ್ಥ್ಯ ವನ್ನು ಸಂಸ್ಥಾಪಕರು ನೀಡಲಿ ಎನ್ನುವುದರೊಂದಿಗೆ ಲೇಖನವನ್ನು ಇಲ್ಲಿಗೆ ಸಮಾಪ್ತಿ ಗೊಳಿಸಿದ್ದೇನೆ

 

ಲೇಖನ:ಮಹೇಶ.ನೀಲಕಂಠ. ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರು.
೯೭೪೦೩೧೩೮೨೦

 

 

ಬೆಳಕು  ಚಾನಲ್ ಗೆ ಸಬ್ ಸ್ಕ್ರೈಬ್ ಮಾಡಿ, ಶೇರ್ ಮಾಡಿ, ಅಭಿಪ್ರಾಯ ಕಮೆಂಟ್ ಮಾಡಿ

Don`t copy text!