ಸಾಮಾಜಿಕ ನ್ಯಾಯದ ಹರಿಕಾರ ಅಂಬೇಡ್ಕರ್ ಸ್ಮರಣೆ
ಅಂಬೇಡ್ಕರ ಕನಸು ನನಸಾಗಲು ಇನ್ನೂ ಎಷ್ಟು ವರ್ಷ ಬೇಕಾಗಬಹುದು? ಹಾಗಾದರೆ ಅಂಬೇಡ್ಕರವರ ಕನಸು ಏನಾಗಿತ್ತು ಎನ್ನುವದು ಮುಖ್ಯ. ಮಹಾನ್ ಮಾನವತಾವಾದಿ ಬಾಬಾಸಾಹೇಬರು ನಮಗೆ ಹೇಳಿ ಕೊಟ್ಟಂತಹ ಅನೇಕ ಸಂಗತಿಗಳು ನಮ್ಮ ಕಣ್ಮುಂದಿವೆ. ಆದರೆ ನಾವೆಲ್ಲ ಅವುಗಳನ್ನು ಕಾರ್ಯರೂಪಕ್ಕೆ ತರಲು ಎಷ್ಟು ಒಗ್ಗಟ್ಟಾಗಿದ್ದೆವೆ ಮತ್ತು ಉಸ್ತಕರಾಗಿದ್ದೇವು? ಎನ್ನುವುದು ಇಲ್ಲಿ ಮುಖ್ಯವಾಗಿ ಅವಲೋಕಿಸಬೇಕಾದ ಪ್ರಶ್ನೆ.
ಜಾತಿಗಳ ಶ್ರೇಣಿಕರಣದ ಆಧಾರದಲ್ಲಿ ಮೇಲು ಕೀಳು ಎಂಬ ಹೀನಾಯವಾದ ಭಾವನೆಗಳು, ಆಚರಣೆಗಳು, ಹೇರಿಕೆಗಳಿಂದ ಕೂಡಿದ ಮೇಲ್ಜಾತಿ ಮತ್ತು ಮೇಲರ್ಗದ ಶೋಷಣಾತ್ಮಕ ಗುಲಾಮಗಿರಿಯ ದುಷ್ಫಲವಾಗಿ ಸಾಮಾಜಿಕವಾಗಿ ನಾವು ಇನ್ನೂ ಬಹಳ ಹಿಂದೆ ಬೀಳಲು ಕಾರಣವಾಗಿದೆ. ಜಾತೀಯತೆ ಹೋಗಲಾಡಿಸಲು ಬಾಬಾಸಾಹೇಬರು ನಮಗೇನು ಹೇಳಿದರು ಎನ್ನುವುದು ನಾವು ನೋಡಬೇಕಾಗಿದೆ. ಅಂಬೇಡ್ಕರವರು ಸ್ಪಷ್ಟವಾಗಿ ‘ಸದ್ಯದ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಲಾರದೆ ಯಾವ ಪ್ರಗತಿಯನ್ನು ಸಾಧಿಸಲಾಗದು” ಎಂಬುದು ಹಲವು ವರ್ಷಗಳ ಹಿಂದೆಯೆ ಹೇಳಿದ್ದಾರೆ. ಅದು ಅಕ್ಷರಶಃ ನಿಜ ಕೂಡ ಹೌದು.
ಹಿಂದುತ್ವದ ಅಮಲಿನಲ್ಲಿರುವ ಹಿಂದೂ ಸಮಾಜ ವ್ಯವಸ್ಥೆಯನ್ನು ಈಗಿರುವಂತೆ ಇಟ್ಟು ನಾವು ಜನಸಾಮಾನ್ಯರನ್ನು ನಮ್ಮ ರಕ್ಷಣೆಗಾಗಲಿ ಮತ್ತೊಬ್ಬರ ಮೇಲಿನ ಶೋಷಣೆಯನ್ನ ತಡೆಯುವಲ್ಲಿ ಹುರಿದುಂಬಿಸಿ ಸಿದ್ಧಗೊಳಿಸಲು ಸಾಧ್ಯವಿಲ್ಲ. “ಜಾತೀಯತೆ ಅಳಿಸಲು ಅದಕ್ಕೆ ಪರಮಾಸ್ತ್ರವೆಂದರೆ ಅಂತರ ಜಾತಿಯ ವಿವಾಹವೇ ಎಂಬುದು ನನಗೆ ಮನದಟ್ಟಾಗಿದೆ” ಅಂತ ಬಾಬಾಸಾಹೇಬರು ಅಂದೆ ಹೇಳಿದ್ದಾರೆ. ಅದರಂತೆ ಅವರು ಅಂತರ್ಜಾತಿ ವಿವಾಹಗಳಿಗೆ ತುಂಬಾ ಪರಿಣಾಮಕಾರಿಯಾದ ಬೆಂಬಲ ಸಿಗಬೇಕು ಎಂದು ವಾದಿಸಿದ್ದುಂಟು. ಆದರೆ ನಾವೂ ಅಂಬೇಡ್ಕರ ಅವರು ಹೇಳಿದ ಮಾತುಗಳೆಲ್ಲಾ ಮರೆತು ಹಲವಾರು ಆಶೆ ಆಕಾಂಕ್ಷೆ ಆಮೀಷಗಳಿಗೆ ಒಳಗಾಗಿ ಬೇರೆ ಬೇರೆ ದಿಕ್ಕಿಗೆ ಚೆಲ್ಲಾಪಿಲ್ಲಿಯಾಗಿ ಹೋಗುತ್ತಿದ್ದೆವೆ. ಈಗಾಗಲೇ ತಳ ಸಮುದಾಯಗಳ ಛಿದ್ರವಾದ ಗುಂಪುಗಳು ಉಗ್ರ ಬಲಪಂಥಿಯ ರಾಜಕೀಯ ಪಕ್ಷಗಳು ಧಾರ್ಮಿಕ ಸಂಘಟನೆಗಳು ಬಳಸಿಕೊಂಡು ಇವರನ್ನ ಸಂಪೂರ್ಣವಾಗಿ ಮತ್ತೊಮ್ಮೆ ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ.
ಅಂಬೇಡ್ಕರವರು ಪ್ರಜಾಪ್ರಭುತ್ವದ ಕನಸು ಎಂತಹದಾಗಿತ್ತು? ಅಂಬೇಡ್ಕರರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವದ ಕಲ್ಪನೆ ಮನುಷ್ಯ ಮನುಷ್ಯರ ಜೊತೆ ಇರುವ ಸಂಬಂಧ, ನಾಗರಿಕರು ಅಧಿಕಾರದ ಜೊತೆ ಇರುವ ಸಂಬಂಧ ಮಾಲೀಕರು ಕಾರ್ಮಿಕರ ನಡುವೆ ಪ್ರಜಾಪ್ರಭುತ್ವ ಇರ್ಬೇಕು ಅಂತ ಕನಸು ಕಾಣಿದ ಮಹಾನ ಪ್ರಜಾಪ್ರಭುತ್ವವಾದಿ ಅಂಬೇಡ್ಕರಾಗಿದ್ದರು. ಯಾವ ದೇಶದಲ್ಲಿ ಆರ್ಥಿಕ ಸ್ವಾತಂತ್ರ್ಯವಿಲ್ಲದೆ ಕೇವಲ ರಾಜಕೀಯ ಸ್ವಾತಂತ್ರ್ಯ ಕೊಟ್ಟರೆ ಅದು ಮಾಲೀಕರಿಗೆ ಕೊಟ್ಟ ಸ್ವಾತಂತ್ರ್ಯ ಅಂತ ಬಾಬಾಸಾಹೇಬರು ಹೇಳಿದರು. ಈವಾಗ ಭಾರತದ ಪರಿಸ್ಥಿತಿ ನೋಡಿದರೆ ಗೊತ್ತಾಗುತ್ತದೆ.
ಆರ್ಥಿಕ ಸಮಾನತೆ ಇಲ್ಲದ ದೇಶ ಭಾರತ ಮಾಲೀಕರಿಗೆ ಕೊಟ್ಟ ಸ್ವಾತಂತ್ರ್ಯ ಎಂದರು. ಯಾವುದೇ ರೀತಿಯ ತಪ್ಪಾಗಲಾರದು. ನಮಗೆ ಪಾಶ್ಚಿಮಾತ್ಯ ದೇಶಗಳು ನೋಡಿದರೆ ಗೊತ್ತಾಗುತ್ತೆ. ಸ್ವಲ್ಪ ದೇಶಗಳು ಆರ್ಥಿಕ ಸ್ವಾತಂತ್ರ್ಯ ಕೊಟ್ಟಿವೆ, ಆದ್ರೆ ವೈಯಕ್ತಿಕ ಸ್ವಾತಂತ್ರ್ಯವಿಲ್ಲ ಮತ್ತೆ ಕೆಲವು ದೇಶಗಳು ರಾಜಕೀಯ ಸ್ವಾತಂತ್ರ್ಯವಿದೆ . ಆದರೆ ಅಲ್ಲಿ ಆರ್ಥಿಕ ಸಮಾನತೆ ಇಲ್ಲ. ಹಾಗಾಗಿ ಬಾಬಾಸಾಹೇಬರ ಕನಸು ಇವೆರಡು ಇರುವ ದೇಶ ಭಾರತ ಆಗಬೇಕು ಎನ್ನುವದಿತ್ತು. ಅಂತಹ ಕನಸು ಹೊತ್ತು ಅವರು ಗತಿಸಿ ಹೋಗಿ 66 ವರ್ಷ ಕಳೆದರೂ ಈಡೇರುತ್ತಾ? ಅವರ ಕನಸು ನನಸು ಮಾಡಲು ನಾವು ಎಷ್ಟು ಪ್ರಯತ್ನ ಪಟ್ಟಿದ್ದೆವೆ ಎನ್ನುವುದು ಮುಖ್ಯವಾಗಿ ತಳ ಸಮುದಾಯದ ಪ್ರತಿಯೊಬ್ಬ ಪ್ರಜ್ಞಾವಂತ ಕೂಡ ಮತ್ತೊಮ್ಮೆ ಆತ್ಮವಲೋಕನ ಮಾಡಿಕೊಳ್ಳುವುದು ಇಂದಿನ ಅನಿವಾರ್ಯ.
– ಗಗನ್ ಫುಲೆ, ಭಾಲ್ಕಿ
ಸಾಮಾಜಿಕ ಕಾರ್ಯಕರ್ತರು