ಸಮಾಜ ಸ್ವಾಸ್ಥ್ಯವನ್ನೇ ಬದುಕಾಗಿಸಿಕೊಂಡವರು

ಸಮಾಜ ಸ್ವಾಸ್ಥ್ಯವನ್ನೇ ಬದುಕಾಗಿಸಿಕೊಂಡವರು
(ವಿಶ್ವ ವಿಕಲಚೇತನರ ಹಾಗೂ ವಕೀಲರ ದಿನಾಚರಣೆ)

 

ಮನುಷ್ಯರಿಂದಲೇ ನಿರ್ಮಿತವಾಗಿದ್ದು ‘ಸಮಾಜ’. ಇದನ್ನು ಮನುಷ್ಯರೇ ಉದ್ಧರಿಸಬೇಕಾಗಿರುವುದು ಅಷ್ಟೇ ಸತ್ಯ. ಆ ಕಾರಣಕ್ಕಾಗಿ ಪ್ರತಿಯೊಬ್ಬರೂ ಇದನ್ನು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸುವುದೇ ಸರಿ. ಅಕಸ್ಮಿಕವಾಗಿ ಸಮಾಜ ಕಟ್ಟುವಿಕೆಯಲ್ಲಿ ಅವಸಾನ ಕಂಡರೆ, ಅದಕ್ಕೆ ನಾವು ಸಮಾಜಜೀವಿಗಳೇ ಕಾರಣ ಎನ್ನುವುದನ್ನು ಮರೆಯಬಾರದು. ಹೀಗೆ ಆಲೋಚಿಸುವಾಗ “ಸಮಾಜ ಸ್ವಾಸ್ಥ್ಯ” ಎನ್ನುವುದು ಪ್ರತಿಯೊಬ್ಬರ ಹೊಣೆಗಾರಿಕೆಯೂ ಆಗಿರುವುದನ್ನು ಹೌದೆಂದು ಒಪ್ಪಲೇಬೇಕು. ಇಂತಹ ಒಂದು ಜಾಗೃತಿ ಅಥವಾ ಅರಿವು ತಮ್ಮೊಳಗೆ ಮೂಡಿಸಿಕೊಂಡು, ತಮ್ಮ ಜೀವನದ ಶೈಲಿಯನ್ನು ಅದಕ್ಕೊಪ್ಪುವ ರೀತಿಯಲ್ಲಿ ಬದಲಿಸಿಕೊಂಡು, ಕ್ರಿಯಾಶೀಲರಾಗಿರುವವರು ಕಟ್ಟಿಮನಿ ಪರಿವಾರ. ಸುಮಂತ, ಶೀದೇವಿಗೆ ಮೂರು ಮಕ್ಕಳು, ಸಚಿನ್, ಜಯಲಕ್ಷ್ಮಿ ಮತ್ತು ಸತ್ಯಜೀತ.

ಶ್ರೀ ವೆಲ್‌ನೆಸ್ ಕ್ಲಬ್‌ನ ಮುಖ್ಯಸ್ಥರಾಗಿ ಡಾ.ಶ್ರೀದೇವಿ ಕಟ್ಟಿಮನಿಯವರು ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಕುಟುಂಬದವರೆಲ್ಲಾ ತಮ್ಮ ತಮ್ಮ ವೃತ್ತಿ ಹಾಗೂ ವಿದ್ಯಾಭ್ಯಾಸದೊಂದಿಗೆ ಈ ಕ್ಲಬ್‌ಗೆ ಬೆನ್ನುಲುಬಾಗಿ ನಿಂತಿರುವುದು, ಅದೊಂದು ಕುಟುಂಬ ಸದಸ್ಯರ ಸಹಕಾರ. ಅದಕ್ಕಾಗಿಯೇ ಈ ಕುಟುಂಬವನ್ನು ಮಾದರಿ ಎಂದೇ ಹೇಳಬಹುದು.

ಇದೇ ಡಿಸೆಂಬರ್ ನಾಲ್ಕರಂದು ಡಾ.ಶ್ರೀದೇವಿ ಕಟ್ಟಿಮನಿಯವರು ತಮ್ಮ ಶ್ರೀ ವೆಲ್‌ನೆಸ್ ಕ್ಲಬ್‌ಗೆ ಅತಿಥಿಯಾಗಿ ಆಹ್ವಾನಿಸಿದರು. ವಿಶ್ವ ವಿಕಲಚೇತನರ ಹಾಗೂ ವಕೀಲರ ದಿನಾಚರಣೆ ಆಚರಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಶ್ರೀ ವೆಲ್‌ನೆಸ್ ಕ್ಲಬ್‌ನಲ್ಲಿ ಪ್ರತಿನಿತ್ಯ ನಡೆಯುವ ಎಕ್ಸರ್‌ಸೈಜ್, ಧ್ಯಾನವನ್ನು ಮಾಡಿ, ನಂತರ ಈ ದಿನಾಚರಣೆಗಳನ್ನು ನಡೆಸಲಾಯಿತು. ಸುಮಂತ ಕಟ್ಟಿಮನಿ ಸ್ವಾಗತ ಕೋರುತ್ತ, ಎಲ್ಲರನ್ನೂ ಗೌರವಿಸಿದರು.

 

ಸಚ್ಚಿನ್ ಕಟ್ಟಿಮನಿಯವರು ಒಂದು ಚಿಕ್ಕ ಸ್ಕಿಟ್ ಮಾಡಿಸಿದರು. ಕಣ್ಣಿಗೆ ಪಟ್ಟಿ ಕಟ್ಟಿಕೊಂಡು, ಪೇಸ್ಟ್, ಬ್ರಶ್, ಫೇಸ್ ವಾಶ್ ಹುಡುಕಿ, ಅದನ್ನು ಬಳಸುವಂತೆ ನಟಿಸಲು ಇಬ್ಬರಿಗೆ ತಿಳಿಸಿದರು. ಅವರಿಬ್ಬರು ಪ್ರಯೋಗಕ್ಕೆ ಅಣಿಯಾದರು. ಒಬ್ಬರಿಗೆ ಹತ್ತು ಹೆಜ್ಜೆ ಇಡುವುದರಲ್ಲೇ, ಕಣ್ಣಿಲ್ಲದೆ ಮುಂದೆ ಹೋಗಲು ಸಾಧ್ಯವೇ ಇಲ್ಲ ಎನಿಸಿ ಹಿಂದೆ ಸರಿದರು. ಇನ್ನೊಬ್ಬರು ಬಬಿತಾ ಶಬ್ದ ಮತ್ತು ಸ್ಪರ್ಶದ ಸಹಾಯದಿಂದ ಆ ವಸ್ತುಗಳನ್ನು ಹುಡುಕಿ, ಬಳಸಿದಂತೆ ನಟಿಸಿದರು. ಈ ಘಟನೆಯು, ಅಂಗ ವೈಫಲ್ಯವಾದವರಿಗೆ ಆರನೇ ಇಂದ್ರಿಯ ಜಾಗೃತವಾಗುತ್ತದೆ ಎನ್ನುವ ಸತ್ಯವನ್ನು ನಿರೂಪಿಸಿತು. ಇಲ್ಲಿ ಒಬ್ಬ ಅಂಗವಿಕಲ, ಕಣ್ಣಿಲ್ಲದವನು ಎದುರಿಸುವ ಸಮಸ್ಯೆಯನ್ನು ಗ್ರಹಿಸಲು ಅನುವು ಮಾಡಿಕೊಟ್ಟಿತು. ಅದಕ್ಕಾಗಿ ಅಂಥವರ ಪರವಾಗಿ ನಿಲ್ಲುತ್ತ, ಸಾಧ್ಯವಾದಷ್ಟು ಸಹಾಯ ಮಾಡಬೇಕು ಎನ್ನುವುದೇ ಇದರ ಮೂಲ ಉದ್ದೇಶ.

ಕಾರ್ಯಕ್ರಮದ ಉದ್ಘಾಟನೆಗಾಗಿಯೇ ನನ್ನನ್ನು ಆಹ್ವಾನಿಸಿದ್ದರು. ಸಸಿಗೆ ಎಲ್ಲರೂ ಸೇರಿ ನೀರೆರೆಯುವ ಮೂಲಕ ಸಂಭ್ರಮಿಸಿದೆವು. ಹಿರಿಯ ವಕೀಲರು ಹೇಮಾ ಎಸ್.ಬಿರಾದಾರ ಪ್ರಸ್ತಾವಿಕ ಮಾತನಾಡಿದರು.

ವಿಶ್ವ ವಿಕಲಚೇತನರ ಹಾಗೂ ವಕೀಲರ ದಿನಾಚರಣೆ, ದೇಹ ಮತ್ತು ಮನಸು, ಡಾ.ಶ್ರೀದೇವಿ ಕಟ್ಟಿಮನಿ ಮತ್ತು ಸುಮಂತ ಕಟ್ಟಿಮನಿಯವರ ಸಾಮಾಜ ಸೇವೆ, ಹೀಗೆ ನಾಲ್ಕು ಆಯಾಮದಲ್ಲಿ ಮಾತನಾಡಿದೆ.
ವೇದಿಕೆಯ ಮೇಲಿದ್ದ ವಕೀಲರು ರತ್ನಾ ಎಸ್.ಅಗ್ರೆ, ಶಶಿಕಾಂತ ಹಿರೇಗೌಡ, ಮಂಗಲಾ ಎಸ್.ಹಿರೇಗೌಡ, ಸಂಜೀವಕುಮಾರ ಬಿರಾದಾರ, ಹೇಮಾ ಎಸ್.ಬಿರಾದಾರ, ಕೋಮಲ್ ಪಾಟೀಲ್, ತಮ್ಮ ವಕೀಲಿ ವೃತ್ತಿಯ ಅನುಭವ ಸಂಕ್ಷಿಪ್ತವಾಗಿ ಹಂಚಿಕೊಂಡರು.

ಶ್ರೀ ವೆಲ್‌ನೆಸ್ ಕ್ಲಬ್‌ನ ಮುಖ್ಯಸ್ಥರಾದ ಡಾ.ಶ್ರೀದೇವಿ ಕಟ್ಟಿಮನಿಯವರು ಇತ್ತೀಚೆಗೆ ಡಾಕ್ಟರೇಟ್ ಪದವಿಯನ್ನು ಗುಲಬರ್ಗಾ ವಿವಿಯಿಂದ ಸ್ವೀಕರಿಸಿದ್ದರು. ಅವರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ಅವರು ತಮ್ಮ ಅಧ್ಯಯನದ ಅನುಭವವನ್ನು ಹಂಚಿಕೊಂಡರು. ಕುರುಡರು ಮತ್ತು ಕಿವುಡರು, ಮೂಕರಿಗೆ ನೀಡುವ ತರಬೇತಿಯ ವಿಶೇಷ ಮಾಹಿತಿಯನ್ನು ನೀಡಿದರು. ಇವರು ವಿವಿಧ ಕೋರ್ಸ್‌ಗಳ ಮೂಲಕ ಅಭ್ಯಾಸ ಮಾಡಿರುವುದರ ಅನುಭವ ಕೇಳಲು ರೋಚಕವಾಗಿತ್ತು.

ಇಡೀ ಕಾರ್ಯಕ್ರಮವನ್ನು ಸುಮಂತ ಕಟ್ಟಿಮನಿ ಮತ್ತು ಜಯಲಕ್ಷ್ಮಿ ಕಟ್ಟಿಮನಿ ಅಚ್ಚುಕಟ್ಟಾಗಿ ನಿರೂಪಿಸಿದರು. ಪ್ರತಿಭಾ ಲಿಂಗರಾಜ ಮರ್ಕಲೆ ಪ್ರಾರ್ಥನೆ ಗೀತೆ ಹಾಡಿದರು. ಕಿರಣಕುಮಾರ, ಸುರೇಖಾ ಮಚ್ಚೆ, ಸುಮಂತ ಬಾಯಿ, ಶಲ್ಪಾ, ಜಗದೇವಿ, ಕೌಶಲ್ಯ, ಮುಂತಾದವರು ಚಟುವಟಿಕೆಯಿಂದ ಭಾಗಿಯಾದರು.

ಕಾರ್ಯಕ್ರಮದ ಕೊನೆಯಲ್ಲಿ ಉಪಹಾರವೂ ಇತ್ತು. ಅದನ್ನೂ ಆರೋಗ್ಯದ ದೃಷ್ಟಿಯಿಂದಲೇ ತಯಾರಿಸಲಾಗಿತ್ತು. ಒಂದು ಬಟ್ಟಲು ಮೊಳಕೆ ಕಾಳು, ಗ್ಲಾಸಿನಷ್ಟು ರಾಗಿ ಗಂಜಿ. ಬಹಳ ಹಿತವಾಗಿ ಎಲ್ಲರರೊಳು ಸೇರಿತು.

ಕೆಂಪು ನೆಲದ ಬೀದರ ಜಿಲ್ಲೆಯಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿರುವ ಶ್ರೀ ವೆಲ್‌ನೆಸ್ ಕ್ಲಬ್‌ಗೆ ವಿಶಿಷ್ಟ ಸ್ಥಾನವಿದೆ. ಕ್ಲಬ್‌ನ ಸದಸ್ಯರೆಲ್ಲರೂ ಒಂದು ಪರಿವಾರದಂತೆ ಪ್ರತಿನಿತ್ಯ ಬೆಳಿಗ್ಗೆ ಐದರಿಂದ ಆರರವರೆಗೆ ಎಕ್ಸರ್‌ಸೈಜ್ ಮಾಡುವ ಪರಿಪಾಠ ಮೆಚ್ಚುವಂಥದ್ದು. ಇದು ಸ್ವಸ್ಥ ಸಮಾಜ ಕಟ್ಟುವ ಕನಸು ನನಸು ಮಾಡುವ ಪರಿಯೂ ಹೌದು!

ಶ್ರೀದೇವಿ ಕಟ್ಟಿಮನಿ, ಸುಮಂತ ಕಟ್ಟಿಮನಿಯವರು ಕಟ್ಟಿರುವ ಶ್ರೀ ವೆಲ್‌ನೆಸ್ ಕ್ಲಬ್ ಹೀಗೆ ನಿರಂತರವಾಗಿ ಸಮಾಜ ಸ್ವಾಸ್ಥ್ಯ ಕಾಪಾಡುತ್ತಿರಲೆಂದು ಶುಭ ಹಾರೈಸುವೆ.

ಸಿಕಾ

Don`t copy text!