ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿ ಕೊಂಡು ಈಜಿ ದಡ ಸೇರೋಣ
ಕೆಲಸದ ಒತ್ತಡ ಹೆಚ್ಚುತ್ತಿದೆಯಾ. ಆಗಿದ್ದಲ್ಲಿ ನನಗೆ ಗೊತ್ತಿರುವ ಹಾಗೆ ಕೆಲವೊಂದು ಕಿವಿ ಮಾತುಗಳು
ಕಾಯಕವೇ ಕೈಲಾಸ ಎನ್ನುವಂತೆ, ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಫಲಾಫಲಗಳನ್ನು ಭಗವಂತನಿಗೆ ಬಿಟ್ಟು ನಮ್ಮ ಕೆಲಸದ ಕಡೆ ಗಮನ ಹರಿಸೋದೆ ಉತ್ತಮ!
ಯಾಕೆಂದರೇ ನಮ್ಮನ್ನು ನೋಡಿ ಜನ ಕೊರಗುತ್ತಿದ್ದಾರೆ ಎಂದರೆ ನಮ್ಮ ಕೆಲಸದಲ್ಲಿ ಚಾಕ್ಕಚ್ಕ್ಕತೆ ಅವರಲ್ಲಿ ಅಂತಹ ಭಾವನೆ ಉಂಟು ಮಾಡುತ್ತಿದೆ ಎಂದರ್ಥ.
ನಾವು ಎಂದಿಗೂ ನಿಂತು ನೀರಾಗದೆ ಸದಾ ಹರಿಯುವ ನದಿಯಾಗುತ್ತಾ ಸ್ಪೂರ್ತಿಯ ಚಿಲುಮೆಯಾಗುತ್ತಾ? ಹಲವಾರು ಜನರ ಪಾಲಿಗೆ ಜೀವನದಲ್ಲಿ ನಾವು ಹರಿಯುವ ಸಮಯದಲ್ಲಿ ಇತರಿಗೆ ಸಹಾಯ ಮಾಡುತ್ತಾ ಸಣ್ಣಪುಟ್ಟ ನದಿಗಳನ್ನು ಕೂಡಿಕೊಂಡು ಅಗಾಧವಾಗಿ ಜಲಪಾತವಾಗುತ್ತಾ ನಮ್ಮ ಗುರಿಯನ್ನು ನಾವು ಮುಟ್ಟಬೇಕು,
ಆಗ ನಮ್ಮ ದಾರಿಗೆ ಯಾರು ಬರುತ್ತಾರೆ ? ಏಕೆ ಬರುತ್ತಾರೆ ? ಬಂದರೂ ಈ ಹರಿಯುವ ನೀರಿನ ವಿರುದ್ಧ ಈಜಿದವರು ಇತಿಹಾಸದಲ್ಲಿ ಇಲ್ಲ .
ಈ ಯಶಸ್ಸು ಎಂಬುದು ಕೂಡ ಹಾಗೆ ಅದು ಕೇವಲ ಸಾಧಕರ ಸತ್ವವೇ ಹೊರತು ಸೋಮಾರಿ ಇದ್ದವರದಲ್ಲ.
ಕೈ ಕೆಸರಾದರೆ ಬಾಯಿ ಮೊಸರು ಅನ್ನುವ ಹಾಗೆ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯ ಯೋಜನೆ ಹಾಕಿಕೊಳ್ಳಬೇಕು ನಮ್ಮ ಮನಸ್ಸು ಆ ಕಾರ್ಯಗಳಿಗೆ ಹದಗೊಳಿಸಬೇಕು, ಕೆಲಸ ಪೂರ್ಣಗೊಂಡಾಗ ಆಗುವ ಸಂತೋಷ ಕಲ್ಪಿಸಕ್ಕೂ ಆಗುವುದಿಲ್ಲ.
ಅಂತಹ ಅಗಾಧವಾದ ಯಶಸ್ಸು ನಮ್ಮದಾಗುತ್ತದೆ ಈ ಹಾರ್ಡ್ ವರ್ಕ್ ಮಾಡುವುದಕ್ಕಿಂತ ಸ್ಮಾರ್ಟ್ ವರ್ಕ್ ಮಾಡಲೂ ಶುರು ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಸಿಗುವ ಸಂತೋಷವೇ ಬೇರೆ.
ನಾವು ಮಾಡುತ್ತಿರುವ ಕೆಲಸದ ಉದ್ದೇಶ ನಮಗೆ ಆತ್ಮ ತೃಪ್ತಿ ಕೊಡುತ್ತದೆ. ಬೇರೆಯವರನ್ನು ಮೆಚ್ಚಿಸಲು ಮಾಡುವ ಕೆಲಸಗಳಿಂದ ನೋವುಗಳೆ ಹೆಚ್ಚು. ಅದೇ ರೀತಿ ಬೇರೆಯವರ ಮೇಲಿನ ಹಠದಿಂದ ಮಾಡುವ ಕೆಲಸ ಆ ಕ್ಷಣದಲ್ಲಿ ಯಶಸ್ಸು ನೀಡಿದರು ಭವಿಷ್ಯದಲ್ಲಿ ಮನಶಕ್ತಿ ಕುಂದಿಸುತ್ತದೆ
ಆದ್ದರಿಂದ ಕೆಲಸ ಯಾವುದೇ ಇರಲಿ ನಮಗಾಗಿ ನಾವು ಮಾಡಬೇಕು ಬೇರೆಯವರನ್ನು ಮೆಚ್ಚಿಸಲು ಆ ಭಗವಂತನಿಂದಲೂ ಸಾಧ್ಯವಿಲ್ಲ. ಭಗವಂತನ ಸೃಷ್ಟಿಯಲ್ಲಿ ನ್ಯೂನತೆಗಳನ್ನು ಹುಡುಕುವ ಜನರಿರುವ ನಮ್ಮ ಕೆಲಸಗಳನ್ನು ಮೆಚ್ಚಿ ಪ್ರಶಂಸೆ ಮಾಡುತ್ತಾರೆಂಬ ಭ್ರಮೆ ನಮಗೆ ಬೇಡ.
ನಮ್ಮ ಮಾತು ನಮ್ಮ ಕೆಲಸ ಇತರರು ಗುರುತಿಸಿ ಮೆಚ್ಚಬೇಕೆಂದರೆ ಮೊದಲು ನಮ್ಮನ್ನು ನಾವು ಆ ಸ್ವಭಾವ ಬೆಳೆಸಿಕೊಳ್ಳಬೇಕು. ಬೇರೆಯವರ ಕೆಲಸಗಳಲ್ಲೂ ಕೂಡ ಮೆಚ್ಚುಗೆ ವ್ಯಕ್ತಪಡಿಸಬೇಕು. ಯಾಕೆಂದರೆ ನಾವು ಅವರಿಗೆ ಒಂದು ಸ್ಪೂರ್ತಿಯ ಸೆಲೆಯಾಗಬೇಕು.
ನಮ್ಮಲ್ಲಿನ ಪ್ರತಿ ಬದಲಾವಣೆ ಇತರರಿಗೆ ಮಾದರಿಯಾಗಬೇಕು ನಾವು ಬಯಸುವ ಬದಲಾವಣೆ ನಮ್ಮಿಂದಲೇ ಶುರುವಾಗಬೇಕು.
ಈ ಪ್ರಪಂಚವೇ ಒಂದು ಕನ್ನಡಿ ಇದ್ದಂತೆ, ನಾವು ನಕ್ಕರೆ ಮಾತ್ರ ಅದು ನಗುತ್ತದೆ ನಾವು ಅತ್ತರೆ ಇನ್ನು ಜಾಸ್ತಿ ಅಳಿಸುತ್ತದೆ. ಆದ್ದರಿಂದ ಸ್ವೀಕರಿಸುವ ಬದಲು ನೀಡಲು ಪ್ರಯತ್ನಿಸೋಣ ಆಗ ನಮ್ಮ ಅನುಭವದ ಮುಕ್ತತೆ ಜೊತೆಗೆ ಮನಸ್ಸಾಕ್ಷಿ ಹೇಗೆ ಒಪ್ಪಿಕೊಳ್ಳುತ್ತದೆ ಎನ್ನುವದು ಮನವರಿಕೆ ಆಗುತ್ತದೆ.
ಬಡತನದಲ್ಲಿ ಕುಗ್ಗದೆ ಸಿರಿತನದಲ್ಲಿ ಹಿಗ್ಗದೆ ಬದುಕುವ ಛಲ ಬಿಡದೆ ಎಂದಿಗೂ ನಮ್ಮ ಯಶಸ್ಸಿನತ್ತ ನಾವು ಸಾಗಬೇಕು.
ಛಲದಿಂದ ಬೆಳೆದ ನಮಗೆ ಇಂದು ಛಲದ ಬಲವಿಲ್ಲದಾಗಿ ಹೋಗಿದೆ, ಇದರಿಂದ ಮನುಷ್ಯನಲ್ಲಿ ಆತ್ಮ ವಿಶ್ವಾಸದ ಕೊರತೆ ಇದೆ. ಯಾಕೆ???
ಈ ಹೇಡಿತನ ಎಂಬುದು ದಿನೇ ದಿನೇ ಆತ್ಮವಿಶ್ವಾಸದ ಕೊರತೆಯಿಂದ ಹೆಚ್ಚುತ್ತಿದೆ.
ಸಂಕಷ್ಟಗಳಿಗೆ ಹೆದರಿಸುವ ಜೀವನವನ್ನೇ ಹತ್ಯೆ ಮಾಡುವುದಕ್ಕಿಂತ ಸಮಸ್ಯೆಗೆ ಅಭಿಮುಖವಾಗಿ ಕೊಳ್ಳುವುದು ಜಾಣತನಲ್ಲವೇ?
ನಾಲ್ಕು ಬಾರಿ ಬಿದ್ದು ಐದನೇ ಬಾರಿ ಎದ್ದೇಳುವವನು ಬದುಕಿನಲ್ಲಿ ಯಶಸ್ಸನ್ನು ಸಾಧಿಸಬಲ್ಲ. ಇದುವೇ ಬದುಕಿನ ರಹಸ್ಯ ಕೂಡ , ಜೀವನದಲ್ಲಿ ಕಷ್ಟ ನಷ್ಟ ಎದುರಾಗುವುದು ಸಹಜ ಸೋಲಿನ ಗೋಳು ಆವರಿಸುತ್ತದೆ. ಗೆಲುವಿನ ಸಿಹಿ ಅನುಭವಿಸಬೇಕಾದರೆ ಸೋಲಿನ ಕಹಿ ಹೊಂದಿರಲೇಬೇಕು ಆ ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಈಜಿದರೆ ದಡ ಸೇರಬಹುದಲ್ಲವೇ??
ಮುಂದುವರೆಯುವುದು…..
– ಮೇನಕಾ ಪಾಟೀಲ್