ದಿ. ಶಿವರಾಮ ಕಾರಂತರು

 

ದಿ. ಶಿವರಾಮ ಕಾರಂತರು

ಕಡಲ ಗರ್ಭದಿ ಹುಟ್ಟಿ
ಬೆಳೆದ ಸಿಂಪಿಯ ಮುತ್ತು
ಹೊಳೆದಿಹುದು ಜಗದ ತುಂಬ
ಕಡಲತೀರದಿ ಜನಿಸಿ
ಬೆಳೆದೊಂದು ಜೀವ
ಬೆಳಗಿಹುದು ಜಗದ ಮನವ..

ಪೃಕೃತಿ ಮಡಿಲಿನ ಕೂಸು
ಶಿವ ಶಕ್ತಿ ಪಡೆದು
ರಾಮ ಬಾಣವನೆತ್ತಿ ಸಾಗಿ
ಕಾರ್ ಗುಣಗಳ ಮೆಟ್ಟಿ
ಅಂತ ಮಾಡುತಲದರ
ಬೆಳೆದರು ಶಿವರಾಮ ಕಾರಂತರಾಗಿ..!

ಅನ್ಯಾಯದೆದುರಿನಲಿ
ನ್ಯಾಯ ಹುಟ್ಟನು ಹಾಕಿ
ತೋರಿಹರು ಸತ್ಯತೆಯ ತೀರವ
ಪಾಶವೀ ಕೃತಿಗಳಿಗೆ
ಪಾಶಗಳ ತೊಡಿಸುತಲಿ
ಉಳಿಸಿಹರು ನಮ್ಮೀ ಪರಿಸರವ..

ಸಾಹಿತ್ಯ ದೀವಿಗೆಯ
ಹಿಡಿದು ಕೈಯಲಿ ನೀವು
ತೆರೆದಿರಿ ವಿಜ್ಞಾನ ಹೆಬ್ಬಾಗಿಲವ
ರಾಗ ತಾಳಗಳಿಂದ
ಯಕ್ಷಗಾನವ ಕುಣಿದು
ತೋರಿದಿರಿ ಜಗಕೆಲ್ಲ ಯಕ್ಷಲೋಕವ..!

ಬಿರುದುಗಳ ಹಂದರದಿ
ತಮ್ಮತನವೆತ್ತರಿಸಿ
ನಿಂದಿಹಿರಿ ಕೀರ್ತಿ ಪಾರಿಜಾತವಾಗಿ..
ಬಾಲವನದಲಿ ನಲಿವ
ಚಿಣ್ಣರೆದೆ ಹಿಗ್ಗಿಸುವ
ಜ್ಞಾನ ದಂಗಳ ಕಾರಂತಜ್ಜ ನಾಗಿ..!

ದುಷ್ಟ ಕಾಲನ ಕ್ರೂರ
ದೃಷ್ಟಿ ತಾಕಿತೆ ನಿಮಗೆ
ಸೇರಿದಿರಿ ನೀವು ಮರಳಿಮಣ್ಣಿಗೆ
ಮರೆಯಲಾರೆವು ನಿಮ್ಮ
ಅನುದಿನವು ಅನುಕ್ಷಣವು
ನಿಮ್ಮ ಚೇತನವಿರಲಿ ನಮ್ಮ ಬಾಳಿಗೆ..

ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ 

Don`t copy text!