ಜನರ ಬದುಕು ಹಸನಾಗುವ ಸಾಹಿತ್ಯ ರಚನೆಯಾಗಲಿ-ವೀರಹನುಮಾನ

ಜನರ ಬದುಕು ಹಸನಾಗುವ ಸಾಹಿತ್ಯ ರಚನೆಯಾಗಲಿ-ವೀರಹನುಮಾನ

 

ಆಯ್ದಕ್ಕಿ ಲಕ್ಕಮ್ಮ ವೇದಿಕೆ
e-ಸುದ್ದಿ ಲಿಂಗಸುಗೂರು

ಸಾಹಿತ್ಯ ರಚನೆ ಸಮಾಜದಲ್ಲಿ ಬದಲಾವಣೆ ತರುವಂತಾಗಬೇಕು ಎಂದು ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷ ವೀರಹನುಮಾನ ಹೇಳಿದರು.

ಲಿಂಗಸುಗೂರು ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಶನಿವಾರ ನಡೆದ ರಾಯಚೂರು ಜಿಲ್ಲಾ ೧೧ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ನಾನು ಬಹಳ ಸಣ್ಣವ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ದೊಡ್ಡತನ ಮೆರೆದಿದ್ದಾರೆ ಎಂದರು.
ಜಿಲ್ಲಾ ಸಮ್ಮೇಳನಗಳ ಅಧ್ಯಕ್ಷರಾಗಿ ಈಗಾಗಲೇ ಈ ಸ್ಥಾನವನ್ನು
ಅಲಂಕರಿಸಿರುವ ಸಾಹಿತಿ ದಿಗ್ಗಜರುಗಳಾದ ಶ್ರೀ ಸಿದ್ದಯ್ಯ
ಪುರಾಣಿಕ, ಡಾ.ಶಾಂತರಸ ಹೆಂಬೆರಾಳ, ದೇವೇಂದ್ರ
ಕುಮಾರ ಹಕಾರಿ, ಜಂಬಣ್ಣ ಅಮರಚಿಂತ, ಡಾ.ಬಸವಲಿಂಗ ಸೊಪ್ಪಿಮಠ, ಡಾ.ಅಮರೇಶ ನುಗಡೋಣಿ, ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್, ಡಾ.ಸ್ವಾಮಿರಾವ ಕುಲಕರ್ಣಿ, ರಾಜಶೇಖರ ನೀರಮಾನ್ವಿ, ಪ್ರೊ.ಶಾಶ್ವತ ಸ್ವಾಮಿ ಮುಕ್ಕುಂದಿಮಠ ಇವರೆಲ್ಲರು ಅಲಂಕರಿಸಿರುವ ಸ್ಥಾನವನ್ನು ನಾನು ಅಲಂಕರಿಸುತ್ತಿರುವುದು ನನ್ನ ಸೌಭಾಗ್ಯ.
ಜಗದೆಲ್ಲ ಭಾಷೆಗಳನು ಅರಿತಿರುವೆವು
ಪ್ರೇಮದ ಭಾಷೆಯನು ಮರೆತಿರುವೆವು
ಭಾಷೆಗಳಲಿ ಇದು ಹೃದಯದ ಮೂಲ ಭಾಷೆ
ಅರಿಯದೆ ದ್ವೇಷದ ಬೀಜ ಬಿತ್ತುತ್ತಿರುವೆವು
ಜಂಬಣ ಅಮರಚಿಂತರ ಈ ರುಬಾಯಿ ಹೇಳುವಂತೆ ಎಲ್ಲಾ ಭಾಷೆ ಅರಿತಿರುವ ನಾವು ಹೃದಯ ಭಾಷೆ ಮರೆತು ದ್ವೇಷ ಮನೋಭಾವ ತಾಳುತ್ತಿರುವದಕ್ಕೆ ಕಳವಳ ವ್ಯಕ್ತಪಡಿಸಿದರು.
ನಾನು ವಿದ್ಯಾರ್ಥಿ ದಿಸೆಯಿಂದಲೆ ಎಸ್.ಎಫ್.ಐ., ಡಿ.ವೈ.ಎಫ್.ಐ.
ಮತ್ತು ಸಮುದಾಯ ಸಂಘಟನೆಯಲ್ಲಿ ನನ್ನನ್ನು
ತೊಡಗಿಸಿಕೊಂಡಾಗಿನಿಂದ ನನ್ನ ಪ್ರದೇಶ, ನನ್ನ ಜನರು ಈ ಹಿಂದೆ
ಹೊಂದಿದ ಸ್ಥಾನಮಾನ, ಘನತೆ ಗೌರವಗಳನ್ನು ಮರಳಿ ಮತ್ತೆ, ಎಂದು ಹೇಗೆ ಪಡೆಯುವುದೋ ಎಂಬೆಲ್ಲ ವಿಚಾರಗಳು ನನ್ನನ್ನು ಕಾಡುತ್ತಿದ್ದವು.
ಬಡತನ, ನಿರುದ್ಯೋಗ, ಹಸಿವು, ಅಸ್ಪೃಶ್ಯತೆ, ಅಸಮಾನತೆಯಿಂದ
ಬಳಲುವ ಜನರ ಬವಣೆಗಳು ಎಂದು ಕೊನೆಗೊಳ್ಳುತ್ತವೆಯೋ ಎಂಬುವ ಆಲೋಚನೆಗಳು.. ಹೀಗೆ ಹತ್ತಾರು ಚಿಂತನೆಗಳನ್ನು ಹೊತ್ತು ಸಂಘಟನೆಯಲ್ಲಿ ಹಾಡುಗಳನ್ನು ಹಾಡುವುದು, ಬರೆಯುವುದನ್ನು ರೂಢಿಸಿಕೊಂಡದ್ದು ನನ್ನ ಸಾಹಿತ್ಯಕ್ಕೆ ಬೀಜಾಂಕುರವಾಯಿತೇನೋ ಎಂದೆನಿಸುತ್ತದೆ ಎಂದರು.
ನಮ್ಮ ಮುಂದೆ ಇನ್ನೂ ಸವಾಲುಗಳಿವೆ. ಈ
ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಕೇವಲ ಭಾಷೆಗೆ ಸೀಮಿತವಾಗದೆ ನಮ್ಮ ಬದುಕು ಬಲಗೊಳ್ಳಲು ಬೇಕಾದ ಆಯಾಮಗಳ ಬಗ್ಗೆ ಅರ್ಥಪೂರ್ಣವಾದ ಚರ್ಚೆಗಳು ನಡೆಯಬೇಕು. ಆಗ ಮಾತ್ರ ಈ ಸಮ್ಮೇಳನಕ್ಕೆ ಸಾರ್ಥಕತೆ ಬರುತ್ತದೆ ಎಂದರು.
ನಾಡಿನ ಇತಿಹಾಸದಲ್ಲಿ ಈ ಪ್ರದೇಶ ಪ್ರಾಚೀನ ಚರಿತ್ರೆಯನ್ನು ಹೊಂದಿದೆ. ಮಹತ್ವದ ಮಸ್ಕಿಯ ಶಾಸನದ ದಿವ್ಯ ಸಂದೇಶ ಇಲ್ಲಿದೆ. ಶರಣ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ, ಮಾರಯ್ಯನವರ ನೆಲೆ ಬೀಡಿದು, ಮೌನ ತಪಸ್ವಿನಿ ಸಜ್ಜಲ ಗುಡ್ಡದ ಶರಣಮ್ಮನ ಮನೆ ಇದು. ಸಂತೆಕಲ್ಲೂರಿನ ನಾಗಭೂಷಣ ಶಾಸ್ತ್ರೀ ಗಳು ನಡೆದಾಡಿದ ಊರಿದು. ದೇಶದ ಏಕೈಕ ಚಿನ್ನದ ಗಣಿ ಇರುವ ಸುವರ್ಣ ನಾಡಿದು, ವಿದೇಶದಿಂದ ಬಂದು ಸರ್ಕಾರಿ ಅಧಿಕಾರಿಯಾಗಿ ಜಿಲ್ಲೆಯಲ್ಲಿ ಬರಗಾಲದ ಸಂದರ್ಭದಲ್ಲಿ ಸಾವಿರಕ್ಕೂ ಅಧಿಕ ಬಾವಿಗಳನ್ನು ತೋಡಿಸಿದ ಲಿಯೋನಾರ್ಡ್
ಕ್ಯಾಪ್ಟನ್ ಮನ್‌ರವರು ನೆಲೆಸಿದ ನಾಡಿದು ಎಂದು ಲಿಂಗಸುಗೂರು ಮತ್ತು ಮಸ್ಕಿ ತಾಲೂಕನ್ನು ಉಲ್ಲೇಖಿಸಿದರು.

 

ನಾನು ನನ್ನ ಮಾತುಗಳನ್ನು ಸುದೀರ್ಘವಾಗಿ ಹೇಳದೆ ಸಂಕ್ಷಿಪ್ತದಲ್ಲಿ
ನಮ್ಮ ಚರಿತ್ರೆಯ ಘನತೆ, ಸಾಹಿತ್ಯ ಸಂಸ್ಕೃತಿ, ಶಿಕ್ಷಣ, ಅಭಿವೃದ್ಧಿ ಕುರಿತಾದ ಕೆಲವು ಅಂಶಗಳನ್ನು ಮಾತ್ರ ತಮ್ಮ ಗಮನಕ್ಕೆ ತರುವ ಪ್ರಯತ್ನಮಾಡುತ್ತಿದ್ದೇನೆ.
ಇತಿಹಾಸದ ಹಿರಿಮೆ:
ಬುದ್ಧ ಗುರುವಿನ ಉಪದೇಶಗಳನ್ನು ಜಗತ್ತಿಗೆ ಸಾರಿದ ಮತ್ತು
ಅಶೋಕನ ಕುರಿತಾದ ಮಹತ್ವದ ಮಾಹಿತಿಯನ್ನು ನೀಡಿದ ಮಸ್ಕಿಯ ಶಾಸನದ ಸಾರಾಂಶ ಉಲ್ಲೇಖಿಸುವುದು ನನ್ನ ಆಶಯವಾಗಿದೆ.
ನಾನು ಕಳೆದ ಎರಡೂವರೆ ವರ್ಷದಿಂದ ಬುದ್ಧ ಗುರುವಿನ
ಅನುಯಾಯಿಯಾಗಿದ್ದೇನೆ
ಅದಕ್ಕಿಂತ ಹೆಚ್ಚಾಗಿ ಈಗೊಂದು ವರ್ಷದಿಂದ
ನಾನು ಸಂಘವನ್ನು ಸೇರಿದ್ದೇನೆ
ಅತ್ಯಂತ ಉತ್ಸುಕತೆಯಿಂದ ಸೇರಿದ್ದೇನೆ
ಜಂಬು ದ್ವೀತಪದಲ್ಲಿ ಮೊದಲು ಕೆಲವೇ ಮಂದಿ
ದೇವರನ್ನು ಸಮೀಪಿಸಿದ್ದರು
ನೀತಿವಂತ ಜೀವನವನ್ನು ಅನುಸರಿಸುವ ಮೂಲಕ ಇದು ಸಾಧ್ಯ
ಒಬ್ಬ ದೀನ ವ್ಯಕ್ತಿ ಕೂಡ ಇದನ್ನು ಸಾಧಿಸಬಹುದು
ಉನ್ನತ ಸ್ಥಾನಮಾನದ ವ್ಯಕ್ತಿ ಮಾತ್ರ ತಲುಪಬಹುದೆಂದು
ಯೋಚಿಸಬೇಡಿ ದೊಡ್ಡವರು ಮತ್ತು ಸಣ್ಣವರು ಇದನ್ನು
(ಧರ್ಮವನ್ನು) ಆಚರಿಸುವುದರ ಮೂಲಕ ಸಾಧಿಸಬಹುದಾಗಿದೆ.
ಮೊದ ಮೊದಲು ಈ ನೆಲದಲ್ಲಿ ಬೌದ್ಧ ಧರ್ಮದ ಪ್ರಚಾರ
ಸಾಕಷ್ಟಿತ್ತೆಂಬುದು ಇದರಿಂದ ಗೊತ್ತಾಗುತ್ತದೆ.
ಕೃಷ್ಣಾ ತುಂಗೆಯರ ನಡುವಿನ ಈ ಜಿಲ್ಲೆ ಕ್ರಿ.ಪೂ. ೩೦೦೦
ವರ್ಷಗಳ ಚರಿತ್ರೆಯನ್ನು ತನ್ನ ಮಡಿಲಲ್ಲಿರಿಸಿಕೊಂಡಿದೆ. ಶಿಲಾಯುಗದಿಂದ
ಪ್ರಾರಂಭವಾಗುವ ಇಲ್ಲಿಯ ಇತಿಹಾಸ ಮೌರ್ಯರು, ಕಲ್ಯಾಣದ
ಕಲಚೂರಿಗಳು, ಸೇವುಣರು, ಕಾಕತೀಯರು, ಯಾದವರು, ದ್ವಾರ
ಸಮುದ್ರದ ಹೊಯ್ಸಳರು, ವಿಜಯನಗರದ ಅರಸರು, ಬಹುಮನಿ
ಸುಲ್ತಾನರು, ಬಿಜಾಪುರ ಆದಿಲ್ ಶಾಹಿಗಳು, ಮೊಗಲರು, ಮರಾಠರು ಮತ್ತು ಹೈದ್ರಾಬಾದ್ ನಿಜಾಮರು ಈ ನೆಲವನ್ನು ಆಳಿದ್ದರು. ವಿಜಯನಗರ ಅರಸರ ಕಾಲದಲ್ಲಿ ರಾಯಚೂರು ಬಹು ಮುಖ್ಯವಾದ ಪಾತ್ರ ವಹಿಸಿರುವುದು ಕಂಡುಬರುತ್ತದೆ. ಎರಡು ನದಿಗಳ ಮಧ್ಯದ ಫಲವತ್ತಾದ ಈ ನೆಲವನ್ನು ತಮ್ಮದಾಗಿಸಿಕೊಳ್ಳಲು ಅನೇಕ ಅರಸರು ಯುದ್ಧಗಳನ್ನು
ಮಾಡಿರುವುದು ಇತಿಹಾಸದಲ್ಲಿ ದಾಖಲಾತಿಯಾಗಿದೆ. ಸುಮಾರು ೧೩ ಯುದ್ಧಗಳು ನಡೆದವು. ಈ ಪ್ರದೇಶವು ಒಂದು ರಣರಂಗವಾಗಿತ್ತೆಂಬುದು ದೃಢಪಡಿಸುತ್ತದೆ. ಹಾಗೆ ನೋಡಿದರೆ ಕ್ರಿ.ಪೂ. ಕಾಲದಿಂದ ಅಶೋಕನು ತಿರುಗಾಡಿದ ಈ ಪ್ರದೇಶ ಸಮೃದ್ಧತೆಯಿಂದ ಕೂಡಿತ್ತೆಂಬುದು ನಮಗೆ
ತಿಳಿದು ಬರುತ್ತದೆ.
ಸುಮಾರು ೭೦೦ ವರ್ಷಗಳಿಂದ ಈ ಪ್ರದೇಶ ಪರಕೀಯರ
ಆಳ್ವಿಕೆಯಲ್ಲಿ ನಲುಗಿತ್ತು. ಹೈದ್ರಾಬಾದ್ ನಿಜಾಮನ ಆಳ್ವಿಕೆ ನಮ್ಮನ್ನು ಇನ್ನೂ ಅಧೋಗತಿಗೆ ಇಳಿಸಿತ್ತು. ಜನರ ಬದುಕಿಗೆ ಬೇಕಾದ ನೀರಾವರಿ, ಕೈಗಾರಿಕೆ, ಉದ್ಯೋಗಗಳು, ಬೃಹತ್ತಾಗಿ ಬೆಳೆಯಲಿಲ್ಲ. ಕೈಗಾರಿಕಾಉದ್ಯಮಗಳು, ಬೃಹತ್ತಾಗಿ ಬೆಳೆಯಲಿಲ್ಲ. ನೈಸರ್ಗಿಕವಾಗಿ ಒದಗಿರುವ ಸಂಪನ್ಮೂಲಗಳು ಸಮೃದ್ಧವಾಗಿವೆ ಆದರೂ ನಾವು ಹಿಂದುಳಿದಿದ್ದೇವೆ. ಚೈತನ್ಯರಹಿತ ನಮ್ಮ ಬದುಕಿಗೆ ಮತ್ತೊಮ್ಮೆ ಹೋರಾಟದ ದಾರಿ ಅನಿವಾರ್ಯವಾಗಿದೆ. ನಾವು ನಮ್ಮ ಜಿಲ್ಲೆಗೆ ಐ.ಐ.ಟಿ. ಸಿಗಬೇಕೆಂಬ ಉಗ್ರ ಹೋರಾಟ ಮಾಡಿದಾಗ ಕ್ಷುಲ್ಲಕ ರಾಜಕಾರಣ ನಡೆಸಿ ನಮಗೆ ಸಿಗದಂತೆ ಮಾಡಲಾಯಿತು. ಐ.ಐ.ಟಿ. ಹೋಗಲಿ ಈಗಲಾದರೂ ಏಮ್ಸ್ ಬೇಕೆಂಬ ಬೇಡಿಕೆ ಇಟ್ಟು ೨೦೦ ದಿನಗಳಿಗಿಂತ
ಹೆಚ್ಚು ಸತತವಾಗಿ ಹೋರಾಟ ಮಾಡುತ್ತಿದ್ದರೂ ಇನ್ನೂ ಫಲ ಸಿಕ್ಕಿಲ್ಲ.
ಇದು ನಮ್ಮ ಇತಿಹಾಸ; ಇದು ನಮ್ಮ ತಲ್ಲಣ. ಜನರಲ್ಲಿ ಹೋರಾಟದ ಕಿಚ್ಚಿದೆ. ಕೇಳುವ ಧೈರ್ಯವಿದೆ. ಆದರೆ ಆಳುವವರಲ್ಲಿ ಮಾಡುವ ಮನಸ್ಸಿಲ್ಲ.
ಇದಕ್ಕೆ ಕಾರಣರಾರು ಎಂಬುದನ್ನು ನಾವು ನಮ್ಮನ್ನು ನಾವು
ಪ್ರಶ್ನಿಸಿಕೊಳ್ಳಬೇಕಿದೆ ಎಂದರು.

Don`t copy text!