ಧಾರ್ಮಿಕ ಬಂಡುಕೋರ ಜಗತ್ಪ್ರಸಿದ್ಧ ಸಂತ ಓಶೋ

ಧಾರ್ಮಿಕ ಬಂಡುಕೋರ ಜಗತ್ಪ್ರಸಿದ್ಧ ಸಂತ ಓಶೋ

ಬಂಡಾಯ ಮನುಷ್ಯನ ಮೂಲ ಗುಣ, ಆದರೆ ಎಲ್ಲರಿಗೂ ಅದರ ಅಭಿವ್ಯಕ್ತಿ ಅಸಾಧ್ಯ. ಆದರೆ ಆಚಾರ್ಯ ರಜನೀಶ, ಓಶೋ ಅದ್ವಿತೀಯ ಧಾರ್ಮಿಕ ಬಂಡುಕೋರ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಡಿಸೆಂಬರ್ ೧೧, ೧೯೩೧ ರಂದು ಮಧ್ಯಪ್ರದೇಶದ ಕುಚುವಾಡದಲ್ಲಿ ಜನಿಸಿದ ಮೋಹನಚಂದ್ರ ಜೈನ್, ಬೆಳೆದಂತೆ ಆಚಾರ್ಯ ರಜನೀಶನಾಗಿ ರೂಪಾಂತರಗೊಂಡ ಬಗೆ ಅನನ್ಯ. ಓದು,ಓದು ಬರೀ ಓದು, ಬಾಲ್ಯದಲ್ಲಿ ಇವನ ಜಾತಕ ಬರೆಸಿದ ಅಜ್ಜ, ಅಜ್ಜಿಗೆ ಇವನ ಭವಿಷ್ಯದ ಅರಿವಿದ್ದ ಕಾರಣದಿಂದ ತುಂಬಾ ಮುಕ್ತವಾಗಿ ಬೆಳೆಸಿದರು.

ದರ್ಶನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕೆಲಕಾಲ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ನಂತರ ಬಯಲ ಬೋಧಕನಾದ. ಸಾರ್ವಜನಿಕ ಪ್ರವಚನಗಳ ಮೂಲಕ ಹೊಸ ಧಾರ್ಮಿಕ ಮನ್ವಂತರ ಆರಂಭಿಸಿದ. ಭಾರತೀಯ ಮೂಲಭೂತವಾದದ ಬೇರುಗಳನ್ನು ಅಲುಗಾಡಿಸಿ, ಮುಖ್ಯವಾಗಿ ಧರ್ಮ ಗುರುಗಳು ಸನ್ಯಾಸ ಮತ್ತು ಬ್ರಹ್ಮಚರ್ಯದ ನೆಪದಲ್ಲಿ ಧರಿಸಿದ ಮುಖವಾಡ ಕಳಚಲಾರಂಭಿಸಿದ.

ಕಾಮದ ಕುರಿತು ಧಾರ್ಮಿಕ ಗುರುಗಳು ಬಾಯಿ ಬಿಡಲಾಗದು ಎನ್ನುವ ಸಂದರ್ಭದಲ್ಲಿ ‘ಸಂಭೋಗದಿಂದ ಸಮಾಧಿಯಡೆಗೆ’ ಸಾಗುವ ಮಾರ್ಗ ತೋರಿಸಿ, ಮಡಿವಂತ ಮನಸುಗಳಿಗೆ ಮುಜುಗರ ಉಂಟು ಮಾಡಿದ. ಸಹಜವಾದ ಕಾಮ ನಿಗ್ರಹ ಅಸಾಧ್ಯ ಆದರೆ ಧ್ಯಾನದ ಮೂಲಕ ಕುಂಡಲಿನಿ ಜಾಗ್ರತಗೊಂಡರೆ ಅದು ಸಾಧ್ಯ ಎಂಬ ಮಾತುಗಳು ಸೋಗಲಾಡಿ ಧರ್ಮ ಗುರುಗಳಿಗೆ ಇಷ್ಟವಾಗಲಿಲ್ಲ. ಇವನೊಬ್ಬ ಕಾಮುಕ, ಸೆಕ್ಸ್ ಗುರು ಎಂದು ಮೂದಲಿಸಿ, ಇವನ ಪ್ರವಚನಗಳನ್ನು ಬಹಿಷ್ಕರಿಸಲು ಕರೆ ನೀಡಿದರು. ಆದರೆ ಜಾಣಾತಿ ಜಾಣ ರಜನೀಶ ಇದರ ಲಾಭ ಪಡೆದುಕೊಂಡು ಅಷ್ಟೇ ವೇಗವಾಗಿ ಬೆಳಕಿಗೆ ಬಂದ.

ಜಗತ್ತಿನ ಎಲ್ಲ ಧಾರ್ಮಿಕ ಗ್ರಂಥಗಳನ್ನು ಆಳವಾಗಿ ಗ್ರಹಿಸಿ, ಅಷ್ಟೇ ಆಳವಾಗಿ ವಿವರಿಸಿ ಲಕ್ಷಾಂತರ ಜನರ ಗಮನ ಸೆಳೆದು ಅಂತರಾಷ್ಟ್ರೀಯ ಮಾನ್ಯತೆ ಪಡೆದುಕೊಂಡ. ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ ಮತ್ತು ಭಯದ ಮೂಲವನ್ನು ಬಯಲಿಗೆಳೆದ. ‌ಪುಣೆಯ ಆಶ್ರಮದ ಧ್ಯಾನ ಶಿಬಿರ ಮತ್ತು ಪ್ರವಚನಗಳನ್ನು ಆರಂಭಿಸಿದ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಅನುಯಾಯಿಗಳು ಜಮಾಯಿಸಿದಾಗ ಆಶ್ರಮ ಚಿಕ್ಕದೆನಿಸಿತು. ಇಡೀ ದೇಶ ಸುತ್ತಿದರೂ ಸರಕಾರ ಆಶ್ರಮ ಕಟ್ಟಲು ಭೂಮಿ ನೀಡಲಿಲ್ಲ. ‌ಇವನ ಬಂಡುಕೋರ ವಿಚಾರಗಳಿಗೆ ಧಾರ್ಮಿಕ ಮತ್ತು ರಾಜಕೀಯ ನಾಯಕರು ಬೆದರಿ ಹೋಗಿದ್ದರು. ಕೊನೆಗೆ ಮಾ ಆನಂದ ಶೀಲಾ ಎಂಬ ಕ್ರಿಯಾಶೀಲ ಸೆಕ್ರೆಟರಿ ಪ್ರಯತ್ನದಿಂದ ಅಮೆರಿಕದ ಒರೆಗಾನ್ ನಲ್ಲಿ ಅರವತ್ತು ಸಾವಿರ ಎಕರೆ ಜಮೀನು ಖರೀದಿಸಿ ಸ್ವರ್ಗ ನಿರ್ಮಿಸಲಾಯಿತು.

ಅಲ್ಲಿಯೂ ಅದೇ ಸತ್ಯದ ಮಾತುಗಳು ಇವನ ಓಟಕ್ಕೆ ತಡೆ ಒಡ್ಡಿದವು. ಕ್ರಿಶ್ಚಿಯನ್ ಧರ್ಮ ಬಿತ್ತುವ ಪಾಪ ಪ್ರಜ್ಞೆ, ಕನಫೆಕ್ಸ್ ಬಾಕ್ಸ್ ಇತ್ಯಾದಿ ಇತ್ಯಾದಿ ವಿಷಯಗಳ ತಮಾಷೆ ಮಾಡಿ ಪಾದ್ರಿಗಳ ಕೆಣಕಿದ.

ತಾನು ಕೇವಲ ಶ್ರೀಮಂತರ ಗುರು ಎಂಬುದನ್ನು ಭಗವಾನ್ ರಜನೀಶ ಒಪ್ಪಿಕೊಂಡ. ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳ, ಚಾರ್ಟರ್ ವಿಮಾನಗಳು, ಸ್ವಂತ ಸೈನ್ಯ, ಹತ್ತು ಸಾವಿರ ಆಶ್ರಮ ವಾಸಿಗಳ ರಾಜಕೀಯ ಹಕ್ಕೊತ್ತಾಯ ಅಮೆರಿಕ ಸರ್ಕಾರ ಮತ್ತು ಸ್ಥಳೀಯ ವಾಸಿಗಳನ್ನು ಕೆರಳಿಸಿತು. ಸೆಕ್ರೆಟರಿ ಶೀಲಾ ಅನೇಕ ಅನಾಹುತಗಳನ್ನು ಸೃಷ್ಟಿಸಿ ಅಪಾಯ ತಂದಳು.

ಅದೇನೇ ಇರಲಿ ಓಶೋನ ಆಲೋಚನಾ ಕ್ರಮ, ಧರ್ಮ ಮತ್ತು ಆಧ್ಯಾತ್ಮಕ್ಕೆ ಇರುವ ವ್ಯತ್ಯಾಸವನ್ನು ಪ್ರತಿಪಾದಿಸಿದ ರೀತಿ ಮಾತ್ರ ಅದ್ಭುತ. ವ್ಯಕ್ತಿ ಸ್ವಾತಂತ್ರ್ಯ, ಗುಣಮಟ್ಟದ ಶಿಕ್ಷಣ, ಸ್ತ್ರೀ ಸ್ವಾತಂತ್ರ್ಯ, ಕಾಮದ ಅನನ್ಯತೆಯನ್ನು ಸ್ಪಷ್ಟವಾಗಿ, ದಿಟ್ಟತನದಿಂದ ವಿವರಿಸಿ ಬದುಕಿನ ನಿಜಾರ್ಥವನ್ನು ನಮ್ಮ ಕೈಗೆ ಕೊಟ್ಟು ಹೋಗಿದ್ದಾನೆ. ವ್ಯಕ್ತಿ ವೈಯಕ್ತಿಕ ಸಾಧಕನಾಗಬೇಕು, ಯಾವುದೇ ಧರ್ಮ ಅಥವಾ ಧಾರ್ಮಿಕ ನಾಯಕನ ಗುಲಾಮನಾಗಬಾರದು ಎಂಬುದನ್ನು ಪದೇ ಪದೇ ಉಚ್ಛರಿಸಿದ. ಆಂತರಿಕ ಒಳನೋಟ, ಗಾಢವಾದ ವಿವರಣೆ,ಅಪರೂಪದ ಧ್ಯಾನ ತಂತ್ರಗಳು, ಮುಖ್ಯವಾಗಿ ಡೈನಾಮಿಕ್ ಮೆಡಿಟೇಶನ್ ಲಕ್ಷಾಂತರ ಅನುಯಾಯಿಗಳನ್ನು ಸೃಷ್ಟಿಸಿತು.

ಇವನ ಜೀವಿತಾವಧಿಯಲ್ಲಿ ಸಾವಿರಾರು ತಾಸು ಮಾತನಾಡಿ, ಜೊತೆಗೆ ಐದು ಸಾವಿರ ತಾಸು ಮಾತುಗಳ ದಾಖಲೆ ಬಿಟ್ಟು ಹೋಗಿದ್ದಾನೆ. ಇವನ ಪ್ರವಚನಗಳನ್ನು ಆಧರಿಸಿ ಆರು ನೂರಾ ಐವತ್ತು ಪುಸ್ತಕಗಳು ಪ್ರಕಟಗೊಂಡಿವೆ. ಹಿಂದಿ, ಇಂಗ್ಲಿಷ್ ಹಾಗೂ ಭಾರತೀಯ ಎಲ್ಲಾ ಭಾಷೆಗಳಲ್ಲಿ ಇವನ ಕೃತಿಗಳು ಇಂದಿಗೂ ಮರು ಮುದ್ರಣಗೊಳ್ಳುತ್ತಲೇ ಇವೆ. ಇವನ ಹೆಸರಲ್ಲಿ ಸಾವಿರಾರು ಧ್ಯಾನ ಕೇಂದ್ರಗಳು ಓಶೋ ಮೌಲ್ಯಗಳನ್ನು ಪ್ರಸಾರ ಮಾಡುತ್ತಲಿವೆ.
ಓಶೋ ಪರಂಪರೆ ಇದೆ ಆದರೆ ಉತ್ತರಾಧಿಕಾರಿ ಇಲ್ಲ’ ಎಂಬುದೇ ಸಮಾಧಾನಕರ.
ಗೀತೆ, ವೇದ, ಉಪನಿಷತ್ ಹಾಗೂ ಇತರ ಧಾರ್ಮಿಕ ವಿಚಾರಗಳನ್ನು ಇವನಷ್ಟು ಪ್ರಬುದ್ಧವಾಗಿ ಬಿಡಿಸಿ ಕೊಡುವುದು ಇತರರಿಗೆ ಸಾಧ್ಯವಾಗಲಿಲ್ಲ. ಮೂರು ಹೊತ್ತು ಮೆಡಿಟೇಶನ್ ಮತ್ತು ಪ್ರವಚನಗಳ ಮೂಲಕ ಜನರನ್ನು ತನ್ನತ್ತ ಸೆಳೆದುಕೊಂಡ ಹಿರಿಮೆ. ಓಶೋ ಕೇಂದ್ರಗಳು ಅವನ ಮಾತುಗಳನ್ನು ಅದ್ಭುತವಾಗಿ ಆಡಿಯೋ, ವಿಡಿಯೋ ಮತ್ತು ಪುಸ್ತಕ ರೂಪದಲ್ಲಿ ದಾಖಲಿಸಿದ ಐತಿಹಾಸಿಕ ಪ್ರಜ್ಞೆ ಅಸಾಮಾನ್ಯ.

ವಾತ್ಸಾಯನ ಕಾಮ ಸೂತ್ರಗಳನ್ನು ಮೀರಿಸುವ ಕಾಮದ ಕುರಿತ ವಿವರಗಳನ್ನು ಆಲಿಸಿದಾಗ ಅಚ್ಚರಿ ಎನಿಸುತ್ತದೆ. ಮಡಿವಂತ ಮನಸುಗಳು ಕಾಮದ ಕುರಿತು ಚರ್ಚೆ ಮಾಡುವುದು ಪಾಪ ಎಂದು ಭಾವಿಸಿದ ಹೊತ್ತಿನಲ್ಲಿ ಕಾಮಾನುಸಂಧಾನಕೆ ಮುಂದಾದ… ವಿಕೃತಗೊಳಿಸದೆ ಸಕ್ರಿಯ ಧ್ಯಾನವಾಗಿಸುವ ಮಾರ್ಗ ತೋರಿಸಿದ. ಧ್ಯಾನಸ್ಥ ಸಮಾಧಿ ಸ್ಥಿತಿ ಕಾಮದಲ್ಲಿ ಇದೆ ಆದರೆ ಅದನ್ನು ಹೇಗೆ ಧ್ಯಾನವಾಗಿ ಪರಿವರ್ತನೆ ಮಾಡಬಹುದು ಎಂಬುದನ್ನು ವ್ಯಾಖ್ಯಾನಿಸಿದ. ಸುಪ್ತ ಮನಸ್ಸಿನ ಚೈತನ್ಯ ಮತ್ತು ಮನಸ್ಸಿನ ಸಾಮರ್ಥ್ಯವನ್ನು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ ಆಡಿಯೋ, ವೀಡಿಯೋಗಳು ಈಗಲೂ ಲಭ್ಯ.

ಅವನ ಇಡೀ ಜೀವಂತಿಕೆ,ಸಾಮರ್ಥ್ಯ ಮತ್ತು ಎನರ್ಜಿ ಕೇವಲ ಅವನ ಕಣ್ಣುಗಳಲ್ಲಿ ಇದೆ, Eyes are so powerful and enlightened. ಈಗಲೂ ವಿಡಿಯೋ ನೋಡುವಾಗ ಅವನ ಕಣ್ಣುಗಳು ನಮ್ಮ ಕಡೆ ಬೆಂಕಿ ಉಂಡೆ ತರಹ ದಾಳಿ ಮಾಡುತ್ತವೆ. ಅವನ ಮಂದಹಾಸದ ಮುದ ಅವನಿಗೆ ಪ್ರಾಪ್ತವಾಗಿರುವ ಕುಂಡಲಿನಿ ಚೈತನ್ಯದ ಪ್ರತಿಫಲನ.
ನೆಮ್ಮದಿಯ ಬದುಕು’ ಎಂಬ ಯ್ಯೂ ಟ್ಯೂಬ್ ಚಾನಲ್ ಮೂಲಕ ಅವನ ವಿಚಾರಗಳನ್ನು ಹಂಚುವ ಸಾಹಸ ನನ್ನ ಪಾಲಿಗಿದೆ.
ಇಂದು ಅವನ ಹುಟ್ಟು ಹಬ್ಬ, ಓಶೊ ನೆವರ್ ಡಾಯ್ಡ್ , ಕೇವಲ ಕೆಲಕಾಲ ಇಲ್ಲಿ ಇದ್ದು ಹೋದ ಎಂಬ ಅವನ ಮಾತುಗಳು, ಅವನ ಸಾಕ್ಷಿ ಪ್ರಜ್ಞೆಯ ಸಂಕೇತ.

ಪ್ರೊ.ಸಿದ್ದು ಯಾಪಲಪರವಿ
9448358040

Don`t copy text!