ಅಕ್ಕನೆಡೆಗೆ- ವಚನ – 11 ವಾರದ ವಿಶೇಷ ಲೇಖನ

 

ನಾನೆಂಬ ಭಾವ ಅಳಿದಾಗ…

ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ?
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ
ಚೆನ್ನಮಲ್ಲಿಕಾರ್ಜುನಾ?

ಅಕ್ಕಮಹಾದೇವಿಯ ವಚನಗಳಲ್ಲಿ ಪ್ರಕೃತಿ, ಪ್ರಾಣಿ, ಪಕ್ಷಿಗಳು, ಇತ್ಯಾದಿ ಭಾವನೆಗಳೊಂದಿಗೆ ಬೆಸೆದು, ಕಾವ್ಯ ಶಕ್ತಿಯಾಗಿ ಹೊರಹೊಮ್ಮಿರುವುದು ಗಮನಾರ್ಹ. ಮೇಲಿನ ವಚನದ ಶಬ್ದಗಳು, ಐದು ಪ್ರಶ್ನೆಗಳು ಮತ್ತು ವಚನದ ನಿರೂಪಣೆ ಲಾಲಿತ್ಯಪೂರ್ಣವಾಗಿ ಮೂಡಿ ಬಂದಿರುವುದು ಅಕ್ಕನ ಕಾವ್ಯಶಕ್ತಿಗೆ ದ್ಯೋತಕ. ವಚನದ ಗೇಯತೆ ತನ್ಮಯತೆಯ ಅನುಭವ ನೀಡುತ್ತದೆ.
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ?

ವಚನದ ಈ ಸಾಲನ್ನು ಅರ್ಥಪೂರ್ಣವಾಗಿ ತಿಳಿದುಕೊಳ್ಳಲು ಒಂದು ಸಣ್ಣ ಕತೆ ಸಹಾಯವಾಗುತ್ತದೆ. ಒಬ್ಬ ಹಳ್ಳಿಯ ಹುಡುಗ ಶಿವು, ಹತ್ತನೇ ತರಗತಿ ಮುಗಿಸಿ, ಕಾಲೇಜು ಕಲಿಯಲು ಪಕ್ಕದ ಊರಿಗೆ ಹೋಗುತ್ತಾನೆ. ಊರ ಹೊರಗಿನ ಕಾಲೇಜು ಹೊಸ ಕಟ್ಟಡವಾದುದರಿಂದ ಸುತ್ತಮುತ್ತ ಒಂದೂ ಗಿಡ ಮರ ಇರುವುದಿಲ್ಲ. ಕಣ್ಣು ಹಾಯಿಸಿದಷ್ಟು ದೂರವೂ ಬಯಲು ಪ್ರದೇಶ.

ದಿನಾ ಹತ್ತು ಕಿಲೋಮೀಟರ್ ದೂರ ಬಸ್‍ನಲ್ಲಿ ಪ್ರಯಾಣ ಮಾಡಿ, ಜೊತೆಯಲ್ಲಿ ರೊಟ್ಟಿ ಬುತ್ತಿ ಕಟ್ಟಿಕೊಂಡು ಬರುತ್ತಿದ್ದ. ಕುಳಿತು ಊಟ ಮಾಡಲು ಒಂದೇ ಒಂದು ಮರವೂ ಕಾಣುವುದಿಲ್ಲ. ಆಗ ಅವನಿಗೆ ತಮ್ಮ ಚಿಕ್ಕ ಹೊಲದ ನೆನಪಾಗುತ್ತದೆ. ಅಲ್ಲಿಯ ಮಾವಿನ ಮರ, ಬೇವಿನ ಮರ ಕಣ್ಮುಂದೆ ಬಂದಂತಾಗಿ ಬೇಸರವೆನಿಸುತ್ತದೆ.

ಎಲ್ಲಾ ಹುಡುಗರು ಕ್ಯಾಂಟೀನಿನಲ್ಲಿ ಊಟ, ತಿಂಡಿ ಮಾಡುತ್ತಿದ್ದರು. ಹಳ್ಳಿ ವಾತಾವರಣದಲ್ಲಿ ಬೆಳೆದು, ಕನ್ನಡ ಮೀಡಿಯಂನಿಂದ ಬಂದ ಕೀಳರಿಮೆ, ಎಲ್ಲರೊಂದಿಗೆ ಬೆರೆಯಲು ಸಂಕೋಚಪಡುತಿದ್ದ.

ಒಂದು ದಿನ ಕನ್ನಡ ಪ್ರಾಧ್ಯಾಪಕರಿಗೆ ಮಾತನಾಡಿಸಿದ. ತನ್ನೊಳಗೆ ಸ್ವಲ್ಪ ಮಟ್ಟಿಗೆ ಧೈರ್ಯ ತಂದುಕೊಂಡು ಹೇಳಿಯೇಬಿಟ್ಟ. ತಮ್ಮೂರಿನಿಂದ ಮಾವಿನ ಸಸಿಯನ್ನು ತಂದು, ಕಾಲೇಜ್ ಕ್ಯಾಂಪಾಸ್‌ನಲ್ಲಿ ನೆಡುವುದೆಂದು. ಅವರು ಸಂತೋಷದಿಂದ ಒಪ್ಪಿಗೆ ಕೊಟ್ಟಾಗ ಶಿವು ಸಂಭ್ರಮಿಸಿದ. ಹಾಗೇ ಮಾಡಿದ.

ಕಾಲೇಜಿನ ನಾಲ್ಕೂ ಮೂಲೆಗೆ ಒಂದೊಂದು ಮಾವಿನ ಸಸಿಯನ್ನು ನೆಟ್ಟು, ದಿನಾ ಅದರ ಅರೈಕೆ ಮಾಡಿದ. ಸಮಯಕ್ಕೆ ಸರಿಯಾಗಿ ನೀರು, ಗೊಬ್ಬರ ಹಾಕಿದ. ಕೆಲವರು ಸಹಪಾಠಿಗಳು ‘ಮಾಲಿ… ಮಾಲಿ…’ ಎಂದು ಹಂಗಿಸಿದರು. ಓದಿನಲ್ಲಿ ಫೇಲ್ ಆಗಿ ಮತ್ತೆ ಹೊಲಕ್ಕೆ ಹಿಂದಿರುಗ ಬೇಕಾಗುವುದೆಂದು ಕಿಚಾಯಿಸಿದರು. ಅವರ ಮಾತುಗಳಿಗೆ ಕಿವಿಗೊಡದೆ ತನಗೆ ಅನಿಸಿದ್ದನ್ನು ಶಿಕ್ಷಕರ ಸಹಾಯದಿಂದ ಮಾಡಿದನು.

ಅವನು ಆ ಕಾಲೇಜಿನಿಂದ ಓದು ಮುಗಿಸಿ ಮುಂದೆ ಹೋದನು. ಇಪ್ಪತ್ತೈದು ವರ್ಷಗಳ ನಂತರ ಮತ್ತೆ ಆ ಕಾಲೇಜಿಗೆ ಹೋದಾಗ, ಕನ್ನಡ ಪ್ರಾಧ್ಯಾಪಕರು ಅಲ್ಲೇ ಇದ್ದರು. ಶಿವು ಬ್ಯಾಂಕೊಂದರಲ್ಲಿ ಉದ್ಯೋಗ ಮಾಡುತ್ತ ದೊಡ್ಡ ವ್ಯಕ್ತಿಯಾಗಿದ್ದ. ಆ ಕಾಲೇಜಿನಲ್ಲಿ ಅವನು ನೆಟ್ಟ ಮರ ಇಂದು ಅನೇಕ ವಿದ್ಯಾರ್ಥಿಗಳಿಗೆ ನೆರಳಾಗಿತ್ತು. ಆ ಮರಗಳ ಕೆಳಗೆ ಕುಳಿತುಕೊಂಡು ಊಟ ಮಾಡುತ್ತಾರೆಂದು ತಿಳಿದಾಗ ಶಿವು ಮನಸಿಗೆ ನೆಮ್ಮದಿ ಸಿಕ್ಕಿತು. ನಿರಾಳವಾಗಿ ಉಸಿರು ಬಿಟ್ಟ.

ಹೀಗೆ ಮರ ಮತ್ತದರ ನೆರಳು ಎಷ್ಟು ಉಪಯುಕ್ತ ಹಾಗೂ ಮನಸಿಗೆ ಮುದ ನೀಡುವುದೆಂದು, ಮೇಲಿನ ಕತೆಯಿಂದ ತಿಳಿಯುತ್ತದೆ. ಹಾಗೆಯೇ ಮರವಿದ್ದು ನೆರಳೇ ಇಲ್ಲದಿದ್ದರೆ, ಏನು ಪ್ರಯೋಜನ? ಎನ್ನುವುದು ಅಕ್ಕನ ಪ್ರಶ್ನೆ. ಮರ ಎಂದ ಕೂಡಲೆ ರೆಂಬೆ, ಕೊಂಬೆಗಳು ಹಸಿರು ಎಲೆ, ಹೂ, ಹಣ್ಣುಗಳಿಂದ ಕೂಡಿದ ಸಂಪತ್ಭರಿತ ಚಿತ್ರಣ ಕಣ್ಮುಂದೆ ಬರುವುದು ಸಹಜ. ಆದರೆ ಬೋಳು ಬೋಳಾದ, ಕೇವಲ ರೆಂಬೆ ಕೊಂಬೆಗಳಷ್ಟೇ ಇರುವ ಒಣಗಿದ ಮರವಿದ್ದರೆ ಏನು ಪ್ರಯೋಜನ?

ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?

ವಯಸ್ಸಾದ ವ್ಯಕ್ತಿ ರಾಮಪ್ಪ ಜಿಪುಣ. ಮನೆಯಲ್ಲಿ ಯಾರೂ ಇಲ್ಲ. ಒಂಟಿಯಾಗಿ ಪೆನ್ಷನ್ ಹಣದಲ್ಲಿ ಜೀವನ ಸಾಗಿಸುತ್ತಿದ್ದ. ಹೆಂಡತಿಯನ್ನು ಕಳೆದುಕೊಂಡಿದ್ದ. ಮಕ್ಕಳು ದೂರ ಇದ್ದರು.
ಮನೆಯ ಹತ್ತಿರದ ಚಹದಂಗಡಿ, ಖಾನಾವಳಿಯಿಂದ ಊಟದ ವ್ಯವಸ್ಥೆ ಮಾಡಿಕೊಂಡಿದ್ದ.

ಪ್ರತಿ ದಿನ ಎರಡು ಊಟ ಮಾಡಿದರೆ ಖರ್ಚು ಹೆಚ್ಚಾಗುವುದೆಂದು ಭಾವಿಸಿ, ಒಂದೇ ಊಟ ಮಾಡಿ, ಒಂದೇ ಚಹ ಕುಡಿಯುತಿದ್ದ. ಎರಡು ತಿಂಗಳು ಹೀಗೇ ಮಾಡಿ ರಾಮಪ್ಪ ಸಣ್ಣಗಾಗಿ ಹೋದ. ನೆರೆಹೊರೆಯವರು ಹೆಂಡತಿ ಇದ್ದಾಗ ಚೆನ್ನಾಗಿ ಉಂಡು ತಿಂದು ಇದ್ದವನು ಈಗ ಉಪವಾಸವಿದ್ದು ನರಪೇತ ಆಗಿದಾನೆ ಎಂದು ಆಡಿಕೊಳ್ಳಲು ಶುರು ಮಾಡಿದರು.

ಇದನ್ನೆಲ್ಲಾ ಗಮನಿಸಿದ ಖಾನಾವಳಿಯ ಮಾಲಿಕ ಬಂದು ರಾಮಪ್ಪನಿಗೆ ತಿಳಿಹೇಳಿದ. ‘ಅಪ್ಪಾ… ನಿನ್ನಲ್ಲಿ ಹಣ ಇದೆ. ಪ್ರತಿ ತಿಂಗಳು ನಿನಗೆ ಬೇಕಾಗಿದ್ದೆಲ್ಲಾ ಅನುಭವಿಸಿದರೂ ಇನ್ನೂ ಹಣ ಉಳಿಯುತ್ತದೆ. ಯಾಕೆ ನಿನ್ನ ಮೇಲೇ ನಿನಗೆ ದಯೆ ಇಲ್ಲ? ಇರುವವರೆಗೂ ಮೂರು ಹೊತ್ತು ಚೆನ್ನಾಗಿ ತಿಂದುಂಡು ಇರಬೇಕು.’

ಆಗ ರಾಮಪ್ಪನಿಗೆ ಹೌದೆನಿಸಿತು. ತನ್ನ ಮೇಲೇ ತನಗೆ ಕನಿಕರ ಮೂಡಿತು. ಅಂದಿನಿಂದ ಮನಸು ಬದಲಿಸಿದ. ತಾನೂ ಚೆನ್ನಾಗಿ ಊಟ ಮಾಡಿ, ಜೊತೆಯಲ್ಲಿ ಯಾರಾದರು ಇದ್ದರೆ, ಅವರಿಗೂ ಮಾಡಿಸಲಾರಂಭಿಸಿದ. ಈ ಬದಲಾವಣೆಯಿಂದ ರಾಮಪ್ಪನ ಮುಖ ಲವಲವಿಕೆಯಿಂದ ಕೂಡಿ, ಆರೋಗ್ಯವೂ ಸುಧಾರಿಸಿತು.

ಮನುಷ್ಯನ ಮನದಲ್ಲಿ ದಯೆ, ಮಾಯೆ ಮೊದಲು ತನ್ನ ದೇಹದ ಮೇಲೆ ಇರಬೇಕು. ನಂತರ ತನ್ನ ಅಕ್ಕಪಕ್ಕದಲ್ಲಿ ಇರುವವರ ಮೇಲೆ‌ ಹುಟ್ಟುತ್ತದೆ. ಆಗ ಅವನಲ್ಲಿದ್ದ ಹಣಕ್ಕೊಂದು ಅರ್ಥ ಬರುತ್ತದೆ. ಅಕ್ಕನ ಪ್ರಶ್ನೆಯು ಅದೇ ಆಗಿದೆ. ದಯೆ ಇಲ್ಲದ ಮೇಲೆ ಧನವಿದ್ದು ಏನು ಫಲ?

ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ?

ಅನೇಕ ವರ್ಷಗಳಿಂದ ಗೋರಕ್ಷಣೆಯ ಕುರಿತು ಕೇಳಿದ್ದೇವೆ. ಅದಕ್ಕಾಗಿ ನಡೆಯುತ್ತಿದ್ದ, ನಡೆಯುತ್ತಿರುವ ಹೋರಾಟಗಳನ್ನು ನೋಡಿದ್ದೇವೆ. ಒಂದು ಸಹಿ ಹಾಕುತ್ತ ನಾವೂ ಮೂಕ ಪಶುವಿನ ಪರವಾಗಿ ನಿಲ್ಲುತ್ತೇವೆ ಎಂದು ಘೋಷಿಸಬಹುದು. ಜನಸಾಮನ್ಯರೆಲ್ಲರಿಗೂ ಹಿಂಸೆ ಬೇಡ, ಗೋವುಗಳಿಗೆ ರಕ್ಷಣೆ ಸಿಗಲಿ ಎನ್ನುವುದೇ ಆಗಿದೆ.

ಮನುಷ್ಯ ಹೇಗೆಂದರೆ, ಎಮ್ಮೆಯಾಗಲಿ, ಆಕಳಾಗಲಿ ಅವು ಹಾಲು ಕೊಡುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳುವುದು. ಅದರಿಂದ ಹಾಲು ಮಾರಿ ಲಾಭ ಮಾಡಿಕೊಂಡು ಜೀವನ ನಡೆಸುವುದು. ಅವುಗಳಿಗೆ ವಯಸ್ಸಾದ ಮೇಲೆ, ಕಸಾಯಿ ಖಾನೆಗೆ ಮಾರಿ ಬಿಡುವ ಸ್ವರ್ಥ ಮನಸು ಮನುಷ್ಯನದು. ತಾನು ಬದುಕಲು ಬಳಸಿದ್ದನ್ನು ಮರೆತು ಮೂಕ ಪ್ರಾಣಿಯ ಪಾಲಿಗೆ ಕಠೋರ ಮನಸ್ಥಿತಿ.

ಅಂದರೆ ಹಸು ಇದ್ದರೆ ಹಯನವಿರಲೇ ಬೇಕು. ಹಾಲಿನ ಪದಾರ್ಥಗಳು ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇವುಗಳನ್ನೆಲ್ಲಾ ‘ಹಯವ’ ಎನ್ನುತ್ತಾರೆ. ಹಯನವೇ ಇಲ್ಲದ ಮೇಲೆ ಹಸುವಿದ್ದು ಏನು ಫಲ? ಎನ್ನುವ ಮಾತು ಈ ವಚನದಲ್ಲಿದೆ.

ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?

ಸಾಮಾನ್ಯವಾಗಿ ರೂಪ, ಗುಣದ ಮಾತು ಬಂದ ಕೂಡಲೆ ಕೇವಲ ಹೆಣ್ಣಿಗೆ ಅನ್ವಯವಾಗುವಂತೆ ಆಲೋಚಿಸುವುದು ಲೋಕ ರೂಢಿ. ಆದರೆ ಶರಣರು ಹೇಳಿದ್ದು, ‘ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ’ ಎಂದು. ಹೆಣ್ಣೇ ಇರಲಿ, ಗಂಡೇ ಇರಲಿ ವ್ಯಕ್ತಿಯೊಳಗೆ ಸದ್ಗುಣವಿಲ್ಲದಿದ್ದರೆ ಹೊರಗೆ ಕಾಣುವ ರೂಪಕ್ಕೆ ಬೆಲೆ ಇರುವುದಿಲ್ಲ.

ಅಕ್ಕನೇ ಹೇಳುವಂತೆ, ‘ಕಾಯ ಕರ್ರನೆ ಕಂದಿದಡೇನು? ಕಾಯ ಮಿರ್ರನೆ ಮಿಂಚಿದಡೇನು? ಚೆನ್ನಮಲ್ಲಿಕಾರ್ಜುನನಿಗೊಲಿದ ಕಾಯ ಹೇಗಿದ್ದಡೇನು?’ ಈ ದೇಹಕ್ಕೆ ರೂಪಕ್ಕಿಂತ ಮುಖ್ಯ ಗುಣ ಎನ್ನುವ ಮಾತನ್ನು ಎತ್ತಿ ತೋರಿಸುವ ಸಾಲಿದು.

‘ತುಂಬಿದ ಕೊಡ ತುಳುಕುವುದಿಲ್ಲ’ ಪೂರ್ಣ ಜ್ಞಾನ ಹೊಂದಿದ ವ್ಯಕ್ತಿ ಗುಣವಂತನಾಗಿರುತ್ತಾನೆ.

ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ?

ಅಗಲು ಎಂದರೆ ಊಟದ ತಟ್ಟೆ. ಬಾನ ಎಂದರೆ ಅನ್ನ. ಇಲ್ಲಿ ಅನ್ನ ಮತ್ತು ಊಟದ ತಟ್ಟೆಯು ಕಾಯಕದ ಪ್ರತೀಕವಾಗಿದೆ. ನಮ್ಮ ಮನೆಯಲ್ಲಿ ಸಾಕಷ್ಟು ಊಟದ ತಟ್ಟೆಗಳನ್ನು ಇಟ್ಟುಕೊಂಡಿರುತ್ತೇವೆ. ಅದರಲ್ಲಿ ಅನ್ನ ನಿರಂತರ ಇರಬೇಕಾದರೆ ದುಡಿಮೆ ಅಗತ್ಯ. ‘ಕೈ ಕೆಸರಾದರೆ ಬಾಯಿ ಮೊಸರು’ ಗಾದೆ ಮಾತಿನಂತೆ ಪ್ರತಿಯೊಬ್ಬರು ದುಡಿದರೆ ಮಾತ್ರ ನಮ್ಮ ಊಟದ ತಟ್ಟೆಯು ಅನ್ನದಿಂದ ತುಂಬಿರುತ್ತದೆ ಎನ್ನುವ ಭಾವ ಈ ಸಾಲಿನಲ್ಲಿ ಅಡಗಿದೆ.

ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ ಚೆನ್ನಮಲ್ಲಿಕಾರ್ಜುನಾ?

ಮರ ಮತ್ತು ನೆರಳು, ಧನ ಮತ್ತು ದಯೆ, ಹಸು ಮತ್ತು ಹಯನ, ಊಟದ ತಟ್ಟೆ ಮತ್ತು ಅನ್ನ, ಈ ಎಲ್ಲಾ ಹೋಲಿಕೆ ಕೊಡುತ್ತ ಕೊಡುತ್ತ ಅಕ್ಕ ತೀರಾ ವೈಯಕ್ತಿಕ ನೆಲೆಗೆ ಬಂದು ಕೇಳುತ್ತಾಳೆ, ‘ಚೆನ್ನಮಲ್ಲಿಕಾರ್ಜುನಾ, ನಿನ್ನನ್ನು ಅರ್ಥ ಮಾಡಿಕೊಳ್ಳದೆ, ನಿನ್ನ ಕುರಿತು ನನ್ನ ಜ್ಞಾನ ಹೆಚ್ಚಿಸಿಕೊಳ್ಳದೆ, ನಾನು ಈ ಭೂಮಿ ಮೇಲೆ ಬದುಕಿದ್ದು ಏನು ಪ್ರಯೋಜನ?’

ಶೇಕ್ಸ್‌ಪಿಯರ್ ನಾಟಕ ‘As you like it’ ನಲ್ಲಿ ಒಂದು ಮಾತು ಹೇಳುತ್ತಾನೆ, ‘All the world’s stage and all the men and women mere!y players’. ಈ ಜಗತ್ತು ರಂಗಭೂಮಿ, ಇಲ್ಲಿರುವ ಎಲ್ಲಾ ಸ್ತ್ರೀ, ಪುರುಷರು ನಟರೆನ್ನುತ್ತಾನೆ. ಹಾಗೆಯೇ ಆಧ್ಯಾತ್ಮದ ಪಥದಲ್ಲಿ ಸಾಗುತಿದ್ದ ಅಕ್ಕನಿಗೆ ಈ ಪ್ರಪಂಚದ ಕುರಿತು ಸ್ಪಷ್ಟವಾದ ಪರಿಕಲ್ಪನೆ ಇತ್ತು. ಅಷ್ಟೇ ನಿಖರವಾಗಿ ಮನುಷ್ಯನ ದೇಹದ ಸತ್ಯಾಸತ್ಯದ ಬಗೆಯನ್ನೂ ಅರಿತವಳು. ಈ ದೇಹ, ಮನಸು, ಪ್ರಪಂಚವನ್ನು ಮೀರಿ ಆಲೋಚನೆ ಮಾಡಿ, ಎಲ್ಲವನ್ನೂ ತಿಳಿದುಕೊಂಡ ನಂತರ ನಾವು ಹೇಗೆ ಬದುಕಬೇಕು ಎನ್ನುವ ಸ್ಪಷ್ಟ ನಿಲುವು.

ಅಲ್ಬರ್ಟ್ ಐನ್‍ಸ್ಟೈನ್ ಹೇಳಿಕೆ ಹೀಗಿದೆ, ‘ಒಬ್ಬ ಮಹಿಳೆ ಗುಂಪಿನಲ್ಲಿ ಹೋದರೆ, ಗುಂಪಿಗಿಂತ ಮುಂದೆ ಹೋಗುವುದಿಲ್ಲ. ಒಂಟಿಯಾಗಿ ಹೋದರೆ, ಬಹುದೂರ ಸಾಗಬಲ್ಲಳು.’ ಈ ಮಾತಿನಂತೆ ಅಕ್ಕ ಕಲ್ಯಾಣಕ್ಕೆ ಬಂದು ಶರಣರ ಸಂಗದಲ್ಲಿ ಶರಣ ತತ್ವಗಳನ್ನು ಅರಿತು, ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಮುಂದೆ ಒಂಟಿಯಾಗಿ ಸಾಗುತ್ತಾಳೆ. ಆಗ ಅಕ್ಕ ಒಂದು ದೇಹವಲ್ಲ. ಒಂದು ಜ್ಯೋತಿಯಾಗಿ ಚೆನ್ನಮಲ್ಲಿಕಾರ್ಜುನನೆಂಬ ಜ್ಞಾನದ ಗಣಿ!

ಪ್ರತಿಯೊಬ್ಬರಲ್ಲೂ ‘ನಾನು’ ಎನ್ನುವ ಅಹಂಭಾವ ತೊರೆಯದ ಹೊರತು ಜ್ಞಾನ ದಕ್ಕುವುದಿಲ್ಲ. ವಿದ್ಯೆ ಇರುವವನಲ್ಲಿ ವಿನಯತೆ ಮನೆ ಮಾಡಿರುತ್ತದೆ ಎನ್ನುವ ಮಾತು ಸುಳ್ಳಲ್ಲ. ‘ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುತ್ತ ಸುಳಿವ ಗಾಳಿ ನಿಮ್ಮ ದಾನ’ ಎಂದು ಹೇಳುವ, ನಂಬುವ, ಸಮರ್ಪಿಸಿಕೊಳ್ಳುವ ಬಸವಾದಿ ಶರಣರು ನಮಗೆ ದಾರಿ ದೀಪ.

ಸಿಕಾ

Don`t copy text!