ಚಿರತಪಸ್ವಿನಿ ಊರ್ಮಿಳೆ
ರಸರಹಿತ
ಬಾಳುವೆಗೆ ಸಿದ್ಧಳಾಗಿ
ಅರಮನೆಯ
ಮರುಭೂಮಿಯಲ್ಲಿ ಕುದಿಯುತ್ತಿರುವ
ಸೌಮಿತ್ರಿಯರ್ಧಾಂಗಿಯೇ!
ನಿನ್ನ ವಿರಹಜ್ವಾಲೆಯಲ್ಲಿ
ಬೆಂದು ಕರಕಾಗಿವೆ
ಅಂತಃಪುರದ ತಳಿರು ತೋರಣಗಳು!
ಗೋಡೆಮೇಲಿನ ಭಿತ್ತಿಚಿತ್ರಗಳು!
ಸಾರಿ ಹೇಳುತಿವೆ
ನಿನ್ನಂತರಂಗದ ಶೋಕ ಕಥೆಯ!
ಕೊನೆಯಿಲ್ಲದ ದಾರಿಯಲ್ಲಿ
ಬಾಗಿಲುಗಳೇ
ಇಲ್ಲದ ಪಂಜರದಲ್ಲಿ
ಹಿಂಸೆಗೊಂಡ ಪ್ರಾಣಿಯಂತೆ
ಪರಿತಪಿಸುತಿರುವೆ!
ಸಖನೊಡನೆ ಕಳೆದ
ಸುಖದ ಕ್ಷಣಗಳ
ನೆನೆ-ನೆನೆದು ಸೊರಗಿರುವೆ
ಬೇರು ಕತ್ತರಿಸಿದ ಬಳ್ಳಿಯಂತೆ!
ತಪವೆಂಬ ಪದಕೆ
ನೀನೆ ಅಪ್ರತಿಮ ಪ್ರತಿಮೆ
ವಿಯೋಗ ಸಮಾಧಿಯಲಿ ಸಖನ
ಧ್ಯಾನ ತಪಗೈದ ಧ್ಯಾನ ವಧು ನೀನು!
ಕಾಂತನೊಂದಿಗೆ
ಕಾಂತಾರ ವೈವಿಧ್ಯಸವಿದು
ದಶಕಂಠನ ಸೆರೆಯೊಳಿದ್ದು
ಹದಿಬದೆಯ ಸಾಹಸಕ್ಕೆ ಸಾಕ್ಷಿಯಾದ
ಸೀತೆಗೂ ಮಿಗಿಲಾದ
ಚಿರತಪಸ್ವಿನಿ ನೀನು!
ನಿನ್ನ ಹದಿಬದೆಯ ಮೇಲೆ
ನಂಬುಗೆಯ ಸಸಿ ನೆಟ್ಟು
ಭ್ರಾತೃಭಕ್ತಿ ಸಂಭ್ರಮಕೆ
ಇಂಬುಗೊಟ್ಟು
ಕಾನನಕೆ ಅಡಿಯಿಟ್ಟನೇ
ನಿನ್ನ ಪ್ರಾಣಕಾಂತ?
ಹದಿನಾಲ್ಕು ವರುಷಗಳು
ನಿರೀಕ್ಷೆ, ಖಿನ್ನತೆ,
ಹತಾಶೆಗಳ ಮಡಿಲಲ್ಲಿ
ದೀರ್ಘ ಮೌನದ ಮುಸುಕಹೊದ್ದ
ಮೂಕಸತಿ ನೀನು!
ಪತಿಯ ಸ್ವಾಮಿ ಭಕ್ತಿಗೆ
ಸಹನೆ, ತ್ಯಾಗದ ದೀಕ್ಷೆಯಿತ್ತ
ವೀರಸತಿ ನೀನು!
ಶ್ರೀರಾಮ-ಸೀತೆಯರಿಗೆ ಮೇಣ್ ನಿನ್ನಿಯನಿಗೆ
ಶುಭವಾಗಲೆಂದು
ಮಂಗಳದ ರಕ್ಷೆಯನ್ನು ಬೇಡಿದೆ
ರಾಮಾಯಣ ಕಥಾಮರಗಳ
ಕಾನನದಿ ಯಾರೂ ಗುರುತಿಸದ
ತ್ಯಾಗ ತರುವೇ,
ನಿನಗಾರು ಸರಿಯೇ!
–ಇಂದುಮತಿ ಪುರಾಣಿಕ ಇಳಕಲ್ಲ.