ಲಂಡನ್ ಟು ವ್ಯಾಟಿಕನ್ ಸಿಟಿ
(ಎಂಟು ದೇಶ ನೂರೆಂಟು ವಿಶೇಷ)
ಪ್ರವಾಸ ಕಥನ
ಮೊದಲನೇ ಮುದ್ರಣ: 2021
ಪ್ರಕಾಶಕರು : ಮುಂಬಯಿ ಚುಕ್ಕಿ ಸಂಕುಲ
ಮುದ್ರಣ: ಪ್ರಿಂಟ್ ಆರ್ಟ್ ಕಾರ್ಪೊರೇಷನ್,ಮುಂಬಯಿ
“ಲಂಡನ್ ಟು ವ್ಯಾಟಿಕನ್ ಸಿಟಿ”…ಎಂಟು ದೇಶ ನೂರೆಂಟು ವಿಶೇಷ.ಇದು ಮುಂಬಯಿಯ ಹೆಸರಾಂತ ಕವಿ,ಕತೆಗಾರ,ಲೇಖಕ, ಅಂಕಣಕಾರರಾದ ಗೋಪಾಲ್ ತ್ರಾಸಿ ಅವರ ಕೃತಿ.
ಇದೊಂದು ಪ್ರವಾಸ ಕಥನ. *ಪ್ರವಾಸ ಎಂಬ ಸಂಭ್ರಮೋಲ್ಲಾಸ* ಎಂಬ ನುಡಿಗಳ ಸಡಗರದಿಂದ ಶುರುವಾಗುವ ಕೃತಿ ಅದೇ ಸೊಬಗನ್ನು ವೈವಿಧ್ಯಮಯ ವಿಸ್ಮಯಗಳನ್ನು, ಕುತೂಹಲ ಸನ್ನಿವೇಶಗಳನ್ನು ಕೊನೆಯ ಪುಟದವರೆಗೆ ಬಿಟ್ಟೂ ಬಿಡದಂತೆ ಓದಿಸಿಕೊಂಡು ಹೋಗುವ ಕೃತಿ ಒಂದು ಅತ್ಯುತ್ತಮ ಪ್ರವಾಸ ಕಥನವಾಗಿ ಪ್ರವಾಸಪ್ರೀಯರನ್ನಷ್ಟೇ ಅಲ್ಲದೆ ಸಾಮಾನ್ಯ ಓದುಗರನ್ನೂ ಕೂಡ ತನ್ನತ್ತ ಸೆಳೆಯುತ್ತದೆ.
ಎರಡು ವಾರಗಳ ತಮ್ಮ ಯುರೋಪ್ ಪ್ರವಾಸವನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಕೈಗೊಂಡ ಅನುಭವ,ವಿದೇಶದ ಹೊಸ ವಾತಾವರಣ, ಜನಸಮುದಾಯ,ಹೋಟೆಲ್, ಆಹಾರ ಪದ್ಧತಿ, ರಸ್ತೆಗಳು ಹೂ,ಗಿಡ ಹೀಗೆ ತಾವು ಕಂಡ ಸನ್ನಿವೇಶಗಳನ್ನು ಎಳೆಎಳೆಯಾಗಿ ಅಕ್ಷರ ರೂಪದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಗರಿಬಿಚ್ಚಿ ಹಾರುವ ಮುನ್ನ ಎಂಬ ಶೀರ್ಷಿಕೆಯಡಿ ಯುರೋಪ್ ದೇಶಗಳಿಗೆ ಪ್ರವಾಸಕ್ಕೆ ಹೊರಡಲು ಬೇಕಾಗುವ ಪ್ರತಿಯೊಂದು ಮಾಹಿತಿಗಳಾದ ವೀಸಾ ಪ್ರಕ್ರಿಯೆಯಿಂದ ಹಿಡಿದು ಪ್ರತೀ ಹಂತದ ಮಾಹಿತಿಯನ್ನು ಸವಿವರವಾಗಿ ತಿಳಿಸುವ ಲೇಖಕರ ಮನದಾಳದ ಮಾತುಗಳು ಇಷ್ಟವಾಗುತ್ತವೆ.
ಪ್ರವಾಸದ ಸಮಯದಲ್ಲಿ ಅವಶ್ಯವಾಗಿ ಕೊಂಡೊಯ್ಯಲೇಬೇಕಾದ ಕಾಗದ ಪತ್ರಗಳು,ವಿದೇಶದ ಹವಾಗುಣಕ್ಕನುಗುಣ ಬಟ್ಟೆಗಳು,ಅವಶ್ಯ ಔಷಧಿಗಳು, ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮತ್ತು ಅವರು ವಿಮಾನ ಏರುವ ತನಕದ ಹಲವಾರು ಪ್ರಕ್ರಿಯೆಗಳನ್ನು ಹಾಗೂ ವಿಮಾನದಲ್ಲಿರುವ ಸೌಲಭ್ಯಗಳ ಜೊತೆ ಜೊತೆಗೆ ಪ್ರಯಾಣಕ್ಕೆ ತಗುಲುವ ಒಟ್ಟು ಸಮಯವನ್ನು ಬಹಳ ಸೊಗಸಾಗಿ ಬಣ್ಣಿಸಿದ್ದಾರೆ.ಲೇಖಕರು ತಮ್ಮ ಟೂರ್ ತಂಡದ ಸದಸ್ಯರು ,ಅವರ ಪರಿಚಯ, ಸ್ವಭಾವ ಹಾಗೂ ಪ್ರವಾಸದುದ್ದಕ್ಕೂ ನಡೆದ ಘಟನೆಗಳನ್ನು ಓದುಗರಾಗಿ ನಾವು ಓದುವಾಗ ಲೇಖಕರ ಸೂಕ್ಷ್ಮ ದೃಷ್ಟಿ ವಿಶೇಷವಾಗಿ ಗೋಚರಿಸುತ್ತದೆ. ವಯಸ್ಸಾದವರು,ಮಕ್ಕಳು ಎಂದರೆ ಏನೋ ಒಂದು ಭಾವನಾತ್ಮಕ ಎಳೆ ನಮಗರಿವಿಲ್ಲದಂತೆ ಹೃದಯವನ್ನು ಸೆಳೆದುಬಿಡುತ್ತದೆ.ಇದು ತನ್ನಷ್ಟಕ್ಕೆ ತಾನೇ ಹೊರಹೊಮ್ಮುವ ಪ್ರಕ್ರಿಯೆ ಅಷ್ಟೇ ಅಲ್ಲದೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತಿಬಿಂಬ.ಅಪರಿಚಿತರನ್ನೂ ಮುಗುಳ್ನಗುತ್ತಲೇ ಮಾತಿಗೆಳೆಯುವ ಲೇಖಕರ ಗುಣ ಅವರ ಸಹೃದಯತೆಯ ದರ್ಶನ ಮಾಡಿಸುತ್ತದೆ.ಆದರೆ ಬ್ರಿಟಿಷರ ಶಿಸ್ತು ಇಂತವುಗಳಿಗೆಲ್ಲ ನಿಷಿದ್ಧ ಎಂಬಂಥ ವಾತಾವರಣ ವಿದೇಶದಲ್ಲಿ ಲೇಖಕರ ಮಾತುಗಳ ಮೂಲಕ ಒಂದು ಪಾಠವಾಗಿ ಓದುಗರಿಗೂ ಅದರ ಪ್ರದರ್ಶನವಾಗುತ್ತದೆ.”ತಮಗೆ ದಕ್ಕಿದ್ದಷ್ಟನ್ನು ಅಕ್ಷರ ರೂಪಕ್ಕಿಳಿಸಿ ಕಥನ ಓದುವ ಖುಷಿಗೆ ಕಾರಣವಾದರೆ ನನಗಷ್ಟು ತೃಪ್ತಿ ಇದೆ ಎಂಬ ಲೇಖಕರ ನುಡಿಗಳಂತೆ ಗರಿ ಬಿಚ್ಚಿ ಹಾರುವ ಮುನ್ನ,ಅಂತರಿಕ್ಷ ದಲ್ಲಿ ನಮ್ಮ ನಡೆ ಹೀಗೆ ಶೀರ್ಷಿಕೆಯಲ್ಲಿಯೇ ಓದುಗರಲ್ಲಿ ಒಂದು ರೀತಿಯ ರೋಮಾಂಚನ ಮತ್ತು ಪುಳಕನ್ನುಂಟುಮಾಡಿ ಸೃಷ್ಟಿಯ ಸೊಬಗನ್ನೆಲ್ಲ ತಮ್ಮಂತರಾಳದಿಂದ ಗಮನಿಸಿ ಬಲು ಮನೋಜ್ಞವಾಗಿ ವಿವರಿಸುತ್ತ ತಮ್ಮ ಕಥನದಲ್ಲಿ ಅದನ್ನೆಲ್ಲ ಸೃಜಿಸಿದ್ದಾರೆ.ಪ್ರತೀ ಪ್ರದೇಶವನ್ನು ಭೌಗೋಳಿಕ, ವೈಜ್ಞಾನಿಕ ಮತ್ತು ಸಾಮಾಜಿಕವಾಗಿ ಹೀಗೆ ಹಲವಾರು ಸಂಗತಿಗಳನ್ನು ಬಹಳಷ್ಟು ಆಳವಾಗಿ ನೋಡುವ ಲೇಖಕರ ದೃಷ್ಟಿಕೋನ ನಿಜಕ್ಕೂ ಬೆರಗುಗೊಳಿಸುತ್ತದೆ!.ವಿದೇಶದ ನೆಲದೊಡಲು,ಅಲ್ಲಿಯ ಪ್ರಕೃತಿ ಸೌಂದರ್ಯ,ಮಳೆ,ಗಾಳಿ,ಬೆಳಕು,ಸ್ವಚ್ಛತೆ ಮತ್ತು ಅಲ್ಲಿನ ಶಿಸ್ತುಬದ್ಧ ಜೀವನ ಶೈಲಿಯನ್ನೆಲ್ಲ ಅವರು ಮುಕ್ತ ಮನಸ್ಸಿನಿಂದ ವರ್ಣಿಸುವಾಗ,ಹೊಗಳುವಾಗ ಅವರದೆಷ್ಟು ಹಸಿರುಸಿರಿನ ಆರಾಧಕರು, ಪ್ರವಾಸ ಪ್ರೀಯರು ಎಂಬುದು “ಶಿಸ್ತಿನ ಸಾಮ್ರಾಜ್ಯ ಲಂಡನ್”ಎಂಬ ಶೀರ್ಷಿಕೆಯಡಿಯ ಬರಹದಲ್ಲಿಯೇ ಅರಿವಾಗುತ್ತದೆ.ಯುರೋಪ್ ನಲ್ಲಿಯ ಕೆಲವು ಅನಿರೀಕ್ಷಿತ ಸುವ್ಯವಸ್ಥೆಗಳನ್ನು ಪುಟ್ಟ ಮಕ್ಕಳಂತೆ ಸಂಭ್ರಮಿಸುವ ಪರಿ ಅವರೊಳಗಿನ ಮುಗ್ಧತೆಯನ್ನು ಪ್ರತಿಬಿಂಬಿಸುತ್ತದೆ.’ಲಂಡನ್ ಬ್ರಿಡ್ಜ್ ಇಸ್ ಫಾಲಿಂಗ್ ಡೌನ್’…..ಎಂಬ ನರ್ಸರಿ ರೈಮ್ಸ್ ಅನ್ನು ಒಬ್ಬ ಫ್ರೀ ಸ್ಕೂಲ್ ಶಿಕ್ಷಕಿಯಾಗಿ ಕಳೆದ ಎರಡು ವರ್ಷದಿಂದ ಕಲಿಸುತ್ತ,ನೃತ್ಯ ಮಾಡಿಸುತ್ತ ಬಂದ ನನಗೆ ಅದರ ಹಿಂದಿನ ಇತಿಹಾಸ, ಮತ್ತು ಅದರ ಬಗ್ಗೆ ಹೆಚ್ಚು ಮಾಹಿತಿ ಕಲೆಹಾಕಿ,ಮಕ್ಕಳಿಗೆಲ್ಲ ತಿಳಿಸುವ ಅವಕಾಶವು ಸಿಕ್ಕಂತಾಯಿತು ಎಂದರೆ ತಪ್ಪಾಗಲಾರದು. ಹಾಲೆಂಡಿನ ಅವರ ರಾತ್ರಿಯ ಇಡೀ ಹಡಗು ಪ್ರಯಾಣವನ್ನ ಹಗಲಿನಲ್ಲೇ ಮಾಡಿದಷ್ಟು ಸವಿವರವಾಗಿ ತೆರೆದಿಟ್ಟಿದ್ದಾರೆ.ಜಗತ್ತಿನಲ್ಲಿ ಯೇ ಅತ್ಯಂತ ಹೆಚ್ಚು ಸೈಕಲ್ ಪ್ರಿಯರು ಇರುವುದು ಈ ದೇಶದಲ್ಲಿ ಮತ್ತು ಸೈಕಲ್ ಸವಾರರಿಗೇ ಮೀಸಲಾದ ಮಾರ್ಗವಿದೆ ಎಂದು ‘ಸುಖ ಸಮೃದ್ಧ ದೇಶ ಹಾಲೆಂಡ್’ ಬರಹದಡಿಯಲ್ಲಿ ಓದಿದಾಗಲೇ ನಿಜವಾಗಿಯೂ ಗೊತ್ತಾಗಿದ್ದು.ಪ್ರಕೃತಿ,ಸುತ್ತಲಿನ ವಾತಾವರಣ,ರಸ್ತೆ ಬದಿಯ ಕಲ್ಲು ಬೆಂಚು,ಕಲಾಕೃತಿಗಳನ್ನು, ಸಾಲು ಸಾಲುಮರಗಳನ್ನೇ ಅಷ್ಟೊಂದು ಸವಿಸ್ತಾರವಾಗಿ ತಮ್ಮ ನಲುಮೆಯ ಪದಪುಂಜಗಳಲ್ಲಿ ಬಣ್ಣಿಸುವ ಲೇಖಕರು ಇನ್ನು ಟುಲಿಫ್ ಪುಷ್ಪಧಾಮಕ್ಕೆ ಆಗಮಿಸಿದಾಗ ಸುಮ್ಮನಿರುವರೆ!?…..ಸಣ್ಣ ಸಣ್ಣ ಹೂವಿನಲ್ಲೂ ಅದೆಷ್ಟು ಸೊಗಸು!ಮುಗುಳ್ನಗುವನ್ನೇ ತೋರುವ ಮನಸ್ಸಿನಲ್ಲಿ ಎಣಿಸದಷ್ಟು ಒಲವು ….ಬಣ್ಣ, ಬಣ್ಣಗಳಿಗಿಲ್ಲಿಲ್ಲ ಮತ್ಯಾವ ಮುನಿಸು ಸಂಪ್ರೀತಿ ಸಸ್ನೇಹವೆ ನಿಜ ಚೆಲುವು! ಎನ್ನುವಂತೆ ಸುಮಾರು ಎಂಬತ್ತು ಎಕರೆ ವಿಸ್ತಾರವುಳ್ಳ ಆ ಉದ್ಯಾನವನದ ಎಪ್ಪತ್ತು ಲಕ್ಷ ಹೂ ಗಿಡ,ಬಳ್ಳಿಗಳ ಮೃದು,ಮೃದು ಪಕಳೆಗಳ ತುದಿಬೆರಳ ಸ್ಪರ್ಶವನ್ನು ಬರಹದ ಪ್ರತೀ ಸಾಲಿನಲ್ಲೂ ಜೀವಂತವಿರಿಸಿ ಅದರ ಪರಿಮಳ ಓದುಗನ ನಾಸಿಕಕ್ಕೂ ತಲುಪಿ ನವಿರಾದ ಭಾವವೊಂದು ಹೊಮ್ಮುವಂತೆ ಮಾಡಿ ನೆಲದೊಡಲ ಪ್ರೀತಿಯನ್ನು ಎದೆಯಾಳದಲ್ಲಿ ನೆಲೆಸಿಬಿಡುವಂತೆ ವರ್ಣಿಸಿದ್ದಾರೆ.
ತಮ್ಮ ಪ್ರವಾಸದ ಮೊತ್ತ ಮೊದಲ ಪ್ರೇಕ್ಷಣೀಯ ಸ್ಥಳ ‘ಲಂಡನ್ ಕಣ್ಣು’…(Landon Eye),ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್,ಮ್ಯಾಡಮ್ ಟುಸ್ಸಾಡ್ ವ್ಯಾಕ್ಸ್ ಮ್ಯೂಸಿಯಂ ಬಗ್ಗೆ ಮಾಹಿತಿ ನೀಡುತ್ತ ಸಾಗುವ ಲೇಖಕರು ಮುಂದೆ ತಮ್ಮ ಹಾಲೆಂಡಿನ ಹಡಗು ಪ್ರಯಾಣವನ್ನು ಹಂಚಿಕೊಳ್ಳುತ್ತಾರೆ.ಬೆಲ್ಜಿಯಂ, ಪ್ಯಾರಿಸ್,ಸಹನಶೀಲ ದೇಶ ಬೆಲ್ಜಿಯಂ,ಪ್ರಾನ್ಸಿನ ರಾಜಧಾನಿ ಪ್ಯಾಷನ್ ಪಟ್ಟಣ ಪ್ಯಾರಿಸ್, ಇನ್ನು ಬಲಿಷ್ಠ ದೇಶ ಜರ್ಮನಿಯತ್ತ ಶೀರ್ಷಿಕೆಯಡಿಯ ಜರ್ಮನಿ ದೇಶದ ಕಪ್ಪು ಕಾಡುಗಳ,ಅಲ್ಲಿಯ ಪ್ರಕೃತಿಯ ಅನುಭವಗಳನ್ನು ತಮ್ಮದೇ ಆದ ಶೈಲಿಯಲ್ಲಿ ಬರೆಯುತ್ತ ಹೋಗುತ್ತಾರೆ.’ಭೂಲೋಕದ ಸ್ವರ್ಗ ಸ್ವಿಝರ್ ಲ್ಯಾಂಡ್ ‘ ಇಟಲಿ ಎಂಬ ಕಲಾತ್ಮಕ ದೇಶ,ವ್ಯಾಟಿಕನ್ ಸಿಟಿ ಹೀಗೆ ತಾವು ಕಂಡುಂಡ ಹನ್ನೆರಡು ರಾತ್ರಿ,ಹದಿಮೂರು ದಿನಗಳ ಪಯಣದ ಸವಿಯನ್ನು ಓದುಗರಿಗೂ ಉಣಿಸುತ್ತ ವಿದೇಶದ ಮಣ್ಣಿನ ಘಮದಲ್ಲೂ ತಾಯ್ನಾಡಿನ ಹೆಮ್ಮೆಯ ಕವಿಗಳ ಸಾಲುಗಳನ್ನು ಅವರು ಸ್ಮರಿಸಿಕೊಂಡು ಆಗ್ರಾಣಿಸುವಾಗ ನಿಜವಾಗಿಯೂ ಹೆಮ್ಮೆ ಮತ್ತು ಸಂತಸವೆನಿಸುತ್ತದೆ.ಕೊನೆಯಲ್ಲಿ ಪ್ಯಾಕೇಜ್ ಟೂರ್ ನ ಅನುಕೂಲ, ಅನಾನುಕೂಲ ಮತ್ತು ಅನಿವಾರ್ಯತೆಗಳನ್ನು ಮುಕ್ತ ಮನಸ್ಸಿನಿಂದ ತೆರೆದಿಡುವ ಲೇಖಕರು ಪ್ರವಾಸವೆಂದರೆ ಜಗತ್ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾತ್ರ ಅಂತ ಭಾವಿಸಬೇಕಾಗಿಲ್ಲ. ಹೊಸ ಪರಿಸರ ಆಚಾರ ವಿಚಾರ ಪದ್ದತಿ ಅರಿಯುವ ಮನಸ್ಸು ಮುಖ್ಯ ಎಂದು ಹೇಳಲು ಮರೆಯುವುದಿಲ್ಲ.ಇದೆಲ್ಲದರ ನಡುವೆಯೇ ತಮಗೊದಗಿದ ಅನುಭವವನ್ನು ಅಂದಿನದಂದಿಗೆ ಡೈರಿಯಲ್ಲಿ ಬರೆದುಕೊಳ್ಳುವಾಗ ಕವಿ ಮನದ ವಿಚಾರಗಳು, ಬರವಣಿಗೆಯೊಂದಿಗಿನ ನಂಟನ್ನು ಪ್ರತಿನಿಧಿಸುತ್ತದೆ ಮಾತ್ರವಲ್ಲ ಬರಹದೊಂದಿಗಿನ ಅವರ ಅನುಬಂಧವನ್ನು, ಆತ್ಮೀಯತೆಯನ್ನು ಪರಿಚಯಿಸುತ್ತ ಅನಾವರಣಗೊಳಿಸುತ್ತದೆ. ಒಟ್ಟಿನಲ್ಲಿ “ದೇಶ ಸುತ್ತಬೇಕು ಕೋಶ ಓದಬೇಕು ಎಂಬ ಮಾತಿನಂತೆ” ಈ ಪ್ರವಾಸ ಕಥನದ ಕೋಶ ಓದಿದ ಪ್ರತೀ ಓದುಗ ಅವರೊಂದಿಗೆ ದೇಶ ಸುತ್ತಿ ಬಂದಂತ ರೋಮಾಂಚನವಾಗುವುದಂತೂ ಸತ್ಯ! ವರ್ಷಕ್ಕೊಮ್ಮೆಯೊ, ಎರಡು ವರ್ಷಕ್ಕೊಮ್ಮೆಯೋ! ತವರೂರಿಗೆ ಹೋಗಿ ಬರುವ ಅದರಲ್ಲೂ ಪ್ರವಾಸವೆಂದರೆ ಆಗಿಯೇ ಬರುವುದಿಲ್ಲ ಎನ್ನುವಂಥ ನನ್ನಂತವರಿಗೂ(ತಲೆ ಸುತ್ತು,ವಾಂತಿ ಇಂತಹ ಆರೋಗ್ಯ ಸಮಸ್ಯೆ) ಒಂದು ಸಲ ವಿದೇಶ ಪ್ರಯಾಣ ಮಾಡಬೇಕು ಎನ್ನುವಷ್ಟು ಆಸೆ ಓದುಗರಿಗೆ ಬರುವುದಂತೂ ಖಂಡಿತ! ಏಕೆಂದರೆ ಅಷ್ಟು ಸುಂದರವಾಗಿ ಈ ಪ್ರವಾಸ ಕಥನವನ್ನು ಸೊಗಸಾಗಿ ನಿರೂಪಿಸಿದ್ದಾರೆ ಲೇಖಕರು.ಯುರೋಪ್ ವಿದೇಶ ಪ್ರಯಾಣ ಕೈಗೊಳ್ಳುವ ಪ್ರವಾಸಿಗರಿಗೆ ಇದೊಂದು ಸಮಗ್ರ ಮಾಹಿತಿ ನೀಡುವ ಅತ್ಯುತ್ತಮ ಕೃತಿ ಅಂತ ನನ್ನನಿಸಿಕೆ.
ಸೃಜಿಸುವುದಕ್ಕೂ ಸೃಷ್ಟಿಯಂತೆ ಸಹೃದಯತೆ ಬೇಕು!…
ನಮ್ಮ ದೇಶ,ಭಾಷೆಯನ್ನು ಆರಾಧಿಸಿ ಪೂಜಿಸುವ ನಾವು ಬೇರೆ ದೇಶವನ್ನು , ಪರಿಸರವನ್ನು,ಒಳ್ಳೆಯ ಪ್ರಕೃತಿ ಸೌಂದರ್ಯವನ್ನು ಇಷ್ಟು ಸುಂದರವಾಗಿ,ಬರೆದು ವಿವರಿಸುವುದೂ ಕೂಡ ಒಂದು ಕಲೆ ಹಾಗೂ ಸೃಜನಶೀಲತೆ. ಹಾಗೆಯೇ
ದೇಶ ವಿದೇಶವೆಂಬ ಬೇಧತೋರದೆ ಸಿಕ್ಕಿರುವ ಸದಾವಕಾಶವನ್ನು ಸದ್ವಿನಿಯೋಗಗೊಳಿಸಿಕೊಂಡು,ಅಲ್ಲಲ್ಲಿ ಸವಿ ನೆನಪುಗಳ ಚಿತ್ತಾರದಂತೆ ಹಲವು ಭಾವಚಿತ್ರಗಳನ್ನು ಚಿತ್ರಿಸಿ ಅಚ್ಚುಕಟ್ಟಾಗಿ ಮೂಡಿಬಂದ ಕೃತಿ ಮತ್ತು ಲೇಖಕರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಪುಸ್ತಕದ ಆಳಕ್ಕಿಳಿದಷ್ಟೂ ಓದುಗರಿಗೆ ಈ ಪ್ರವಾಸದ ಅರಿವಿನ ಪಯಣದ ಹರಿವಿದೆ.ವಿಸ್ತರಿಸಿಕೊಂಡಷ್ಟು ಬರಹದಲ್ಲಿ ಅರ್ಥವಿದೆ.ಒಬ್ಬ ಓದುಗಳಾಗಿ ನನ್ನನಿಸಿಕೆ,ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ. ಪ್ರೀತಿಯಿಂದ ಇಂತಹ ಒಂದು ಅದ್ಭುತ ಕೃತಿ ನನ್ನ ಕೈಗಿತ್ತು ಓದುವುದಕ್ಕೆ ಅನುವು ಮಾಡಿಕೊಟ್ಟ ಲೇಖಕರಾದ ಗೋಪಾಲ್ ತ್ರಾಸಿ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.
ಗರಿಗೆದರಿ ಆಕಾಶದೆತ್ತರಕ್ಕೆ ಹಾರುವ ಮುನ್ನ ಅದೆಷ್ಟು ಸಂಭ್ರಮಿಸಿ ಹಾತೊರೆದ ಕವಿಮನಸ್ಸು ಅದೇ ಸಡಗರವನ್ನು ಪ್ರವಾಸದುದ್ದಕ್ಕೂ ಅನುಭವಿಸುತ್ತ ವಿಹರಿಸಿ ವಿವರಿಸಿದ್ದಾರೆ.ತಮ್ಮ ಪ್ರಯಾಣದ ಸವಿಬುತ್ತಿಯ ತುತ್ತನ್ನು ಓದುಗರೊಂದಿಗೆ ಹಂಚಿಕೊಳ್ಳುವಲ್ಲಿ ಸಫಲರಾದ ಲೇಖಕರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಹೊರಬರಲಿ,ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ.