ಹೊಸ ಆಲೋಚನೆಗಳ ಜೊತೆಗೆ ಮುಕ್ತವಾಗಬೇಕು
ಇಂಗ್ಲಿಷರದೋ, ನಮ್ಮದೋ ಅಥವಾ ಯಾರದೋ ಇದ್ದರೂ ಶತಮಾನದಿಂದ ಜನವರಿ ಹೊಸ ವರ್ಷ ಎಂದು ನಂಬಿ ಸಾಗಿದ್ದೇವೆ. ಉಗಾದಿ ನಮ್ಮ ಹಬ್ಬವಂತೆ ಇರಲಿ, ಭಾರತೀಯರಿಗೆ ಹಬ್ಬಗಳೆಂದರೆ ಸದಾ ಸಡಗರ. 2022 ರ ಪಯಣವನ್ನು ಅವಲೋಕಿಸಿದಾಗ ಏನಾದರೂ ಹೊಸ ಪ್ರಯೋಗ ನಡೆದಿದೆಯಾ ಎಂಬ ಆತ್ಮವಿಮರ್ಶೆ ಅಗತ್ಯ. ಮನುಷ್ಯ ತುಂಬಾ ವಿಚಿತ್ರ ಪ್ರಾಣಿ. ತಾನು ತೋಡಿದ ಖೆಡ್ಡಾದಲ್ಲಿ ತಾನೇ ಬಿದ್ದರೂ ಇತರರನ್ನು ಆರೋಪಿಸುವ ಆತುರ.
ವೈಯಕ್ತಿಕ, ವೃತ್ತಿ ಮತ್ತು ಪ್ರವೃತ್ತಿಗಳ ಸಾರ್ವಜನಿಕ ಬದುಕಿನಲ್ಲಿ ಅದೇನೋ ನಿರಂತರ ಹುಡುಕಾಟದ ಹಪಾಹಪಿ. ದೇಹ,ಮನಸು ಮತ್ತು ಭಾವನೆಗಳ ತೃಪ್ತ ಪಡಿಸಲಾಗದ ಅಸಹನೆ ಮತ್ತು ಅಸಹಾಯಕತೆ. ಅದು ಒಂದು ಹಂತದಲ್ಲಿ ನಿಂತಾಗ ನಮ್ಮ ಒಳಗಿನ ಪಯಣ ಶುರುವಾಗುತ್ತದೆ, ಆದರೆ ಹೊರಗಿನ ಹುಡುಕಾಟ ನಿಲ್ಲಬೇಕು ಎಂದು ವರ್ಷದ ಕೊನೆಗೆ ಅನಿಸಿತಲ್ಲ ಎಂಬ ಸಮಾಧಾನ.
ಆದರೂ ಒಮ್ಮೆ ಮಗಳು ಮುನ್ನುಡಿ ಹೇಳಿದಳು ‘ನಿನಗೇನು ಲಿಮಿಟೆಡ್ ಸರ್ಕಲ್ ಇದೆ, ಅದರಿಂದ ನಿನಗೆ ಟೆನ್ಷನ್ ಕಡಿಮೆ, ನಮಗೆ ನೋಡು ಹುಯ್ ಅಂತ ಫ್ರೆಂಡ್ಸ್, ಯಾರಾದರೂ ನೋವು ಮಾಡಿದರೆ ಬರೀ ಕೊರಗೋದು.’ ಇಲ್ಲಿ ಒಂದು ಸಣ್ಣ ವೇದಾಂತದ ಸುಳಿವು ಕಾಣಿಸಿತು ಆದರೆ ಪರಿಹಾರವಲ್ಲ.
ಅದೇ ರೀತಿ ಎರಡನೇ ಮಗಳು ಅಭಿವ್ಯಕ್ತಿಯ ಮಾತು ‘ ಅಯ್ಯೋ ಕೆಲಸ ಮಾಡೋ ಜಗಾದಾಗ ಸುಮ್ನೆ, ಏನೂ ಕಾರಣ ಇಲ್ದೆ ಕಾಡಿದಾಗ ಜೋರಾಗಿ ಅಳಬೇಕು ಅಷ್ಟೇ. ಯಾರು ಸಲ್ಯೂಶನ್ ಕೊಡಂಗಿಲ್ಲ, ಅಲ್ಲೇ ಎಡ್ಜಸ್ಟ್ ಮಾಡ್ಕೋ ಅಂತ ಹೇಳೋರ.’ ಇಬ್ಬರೂ ಹೇಳಿದ್ದು ತಾವು ಕೆಲಸ ಮಾಡುವ ವೃತ್ತಿ ಜಗದ ಅನುಭವದ ಆಧಾರದ ಮೇಲೆ.
ಕಳೆದ 33 ವರ್ಷಗಳ ವೃತ್ತಿ ಬದುಕಿನಲ್ಲಿ ಅನುಭವಿಸಿದ ಯಾತನೆ,ನೋವು,ಅಪಕ್ವ ಹೊಂದಾಣಿಕೆ, ಮುಖವಾಡ, ಸುಳ್ಳುಗಳು, ವೃತ್ತಿ ಅಸೂಯೆಗಳ ಅನುಭವಿಸಿ, ‘ ಅಯ್ಯೋ ಇದು ಇಷ್ಟೇ ಬಿಡು’ ಎನ್ನುವ ಒಣ ವೇದಾಂತ. ವೈಯಕ್ತಿಕ ಸ್ವಾರ್ಥ, ಸಾಲ ತೀರಿಸುವ ಕಾರಣಕ್ಕಾಗಿ ಹಣ ಗಳಿಸುವ ತೀವ್ರತೆ. ಅದಕ್ಕಾಗಿ ಮತ್ತೆ, ಮತ್ತೆ ಮರು ಸಾಲದ ಗಿರಕಿ ಹೊಡೆಯುತ್ತ ಹೋಗುವುದು…
ವೈಯಕ್ತಿಕ ಬದುಕಿನ ಓದು,ಬರಹ, ಜೀವನಾನುಭವದ ಆಧಾರದ ಮೇಲೆ ಕೀರ್ತಿ ಮತ್ತು ಹಣ ಗಳಿಸಬಹುದಾ? ಎಂಬ ಅದಮ್ಯ ಬಯಕೆ. ಐವತ್ತರ ಗಡಿ ದಾಟಿ, ಅರವತ್ತರ ಹತ್ತಿರ ಸುಳಿಯುವಾಗ ದೈಹಿಕ ಸುಖವನ್ನು ಇನ್ನೂ ಚಂದ ಅನುಭವಿಸಬಹುದಿತ್ತು ಎಂಬ ಹುಚ್ಚಾಟದ ಹುಡುಕಾಟ. ಹೋಗಲಿ ಅದನ್ನು ದಕ್ಕಿಸಿಕೊಂಡ ಮೇಲಾದರೂ ಸಮಾಧಾನ ಇರಬೇಕಲ್ಲ, ‘ದಕ್ಕಿಸಿ ಕೊಟ್ಟ ದಿವ್ಯತೆಯ’ ವಿಷಯದಲ್ಲಾದರೂ ನಿರಾತಂಕ ಇರಬೇಕಲ್ಲ, ಅದೂ ಇಲ್ಲ, ಇನ್ನೂ ಬೇಕು ಬೇಕೆಂಬ ತೀರದ ದಾಹ.
ದಾಹ ಎನ್ನುವ ಪದದ ಅರ್ಥ ಈಗ ಪೂರ್ಣ ಅರಿವಿಗೆ ಬಂದಿದೆ. ತೃಪ್ತಿ ಕೊಡುವ ಆ ಶಕ್ತಿ ಸದಾ ಬಳಿ ಇರಲಿ ಎಂಬ ಸ್ವಾರ್ಥದ ಹಿಂದೆ ಇತರರ ಸ್ವಾತಂತ್ರ್ಯ ಕಬಳಿಸುವ ಹುನ್ನಾರ!
ಆದರೂ ಸಂತೃಪ್ತ ಪದದ ಗ್ರಹಿಕೆಯ ಹಂತ ತಲುಪಲು, ದಾರ್ಶನಿಕರು, ವಚನಕಾರರು, ಮುಖ್ಯವಾಗಿ ಬುದ್ಧ,ಅಲ್ಲಮ, ಅಕ್ಕ ಮತ್ತು ಓಶೋ ಕಾರಣ ಎಂದು ಒಪ್ಪಿಕೊಳ್ಳಲು ಹೆಮ್ಮೆ ಎನಿಸುತ್ತದೆ.
ಅರ್ಧ ವರ್ಷದ ಓಡಾಟದ ನಂತರ ಬಹುದಿನಗಳ ಪ್ರವಚನದ ಕನಸು ನನಸಾಯಿತು. ತುಂಬಾ ಹಕ್ಕೊತ್ತಾಯದಿಂದ ಬೀದರಿನ ಶರಣ ಸಿದ್ಧಾಂತದ ಅಧ್ಯಯನಶೀಲ ವ್ಯಕ್ತಿತ್ವದ ಪ್ರಕಾಶ ಗಂಧಿಗುಡಿ, ಡಾ.ಬಸವರಾಜ ಬಲ್ಲೂರ, ಅಲ್ಲಮಪ್ರಭು ನಾವದಗೆರೆ, ಶಿವು ಸಾಲಿ ಮತ್ತು ತಂಡದೊಂದಿಗೆ ವಚನ ಚಾರಿಟೇಬಲ್ ಸೊಸೈಟಿಯ ಸಹಯೋಗದಲ್ಲಿ ‘ನೆಮ್ಮದಿಯ ಬದುಕಿಗಾಗಿ ವಚನಾನುಸಂಧಾನ’ ಮಾಲಿಕೆಯ ಹತ್ತು ದಿನಗಳ ಉಪನ್ಯಾಸ ಮುಗಿಸಿ ಹೊಸ ಪಯಣ ಆರಂಭಿಸಿದೆ. ಅದಕ್ಕೂ ಮೊದಲು ಯೋಗಾಯೋಗ ಎಂಬಂತೆ ರಾಯಚೂರಿನ ‘ಸುದ್ದಿ ಮೂಲ’ ಸಂಪಾದಕರಾದ ಬಸವರಾಜಸ್ವಾಮಿ ಅವರು ಅರ್ಧ ದಿನ ಶರಣರ ವಚನಗಳನ್ನು ಗ್ರಹಿಸುವ ವಿಶೇಷ ಆಯಾಮ ಹೇಳಿದರು. ಇದರ ಸುತ್ತಲೂ ಒಂದಿಷ್ಟು ಯೋಚನೆ ಹಾಗೂ ಯೋಜನೆಗಳೂ ಅಡಗಿ ಕೊಂಡಿದ್ದವು.
ಅಗಸ್ಟ್ 13 ರಂದು ಹುಲಕೋಟಿಯ ಯುವಕ ಎಡಿಟರ್ ಸಂದೀಪ ಬಿಳೆಯಲಿ ಹೊಸದೊಂದು ಯ್ಯೂ ಟ್ಯೂಬ್ ಆರಂಭಿಸಲು ಪ್ರೇರಕನಾದ. ಬೀದರಿನ ವಿಡಿಯೋಗಳ ಜೊತೆಗೆ ಹೊಸದೇನಾದರು ಮಾಡಬಹುದು ಎಂಬ ಭರವಸೆ ಮೂಡಿತು. ತಂತ್ರಜ್ಞಾನದ ಬಳಕೆಯ ಕುರಿತು ತುಂಬಾ ಆಸ್ಥೆ ಮೂಡಿಸಿದವರು ಪ್ರಕಾಶ ಗಂಧಿಗುಡಿ. ಸಾಮಾಜಿಕ ಜಾಲತಾಣದ ಪರಿಣಾಮಕಾರಿ ಬಳಕೆಯ ಕುರಿತು ಮತ್ತೆ, ಮತ್ತೆ ಹೇಳಿದರು. ಬುದ್ಧ, ಅಲ್ಲಮ, ಓಶೋರ ಪ್ರಭಾವವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬ ಆಸೆ ಮೂಡಿತು. ಆದರೆ ಆಧ್ಯಾತ್ಮಿಕ ಲೋಕದ ಗ್ರಹಿಕೆ ಅಷ್ಟೊಂದು ಸುಲಭವಲ್ಲ.
ತೃಪ್ತಿ ಎಂಬುದಿರುವುದಿಲ್ಲ, ಎಷ್ಟೇ ಓದಿಕೊಂಡರೂ ಅಪೂರ್ಣ ಎಂಬ ಕೊರತೆ. ಸರಿ ಕಂಡಂತೆ, ಸರಿ ಕಂಡಷ್ಟನ್ನು ಭಯಂಕರ ನಿರೀಕ್ಷೆಗಳಿಲ್ಲದೇ ಮಾಡುತ್ತ ಸಾಗಬೇಕು; ಟೀಕೆ, ಟಿಪ್ಪಣಿ ಮತ್ತು ಕಾಮೆಂಟುಗಳ ಕಡೆಗೆ ಮನ ಹರಿಬಿಡಬಾರದು.
ನಿರಂತರ ಓದು,ಬರಹ ಮತ್ತು ಪುಸ್ತಕಗಳ ಪ್ರಕಟಣೆ ಸಾಗಿದೆ. ಯಾವುದು ಉಳಿಯುತ್ತದೆ, ಉಳಿಯುವುದಿಲ್ಲ ಎಂಬುದು ಕೂಡ ಒಂದು ಭ್ರಮೆ. ಭಾಷಣ, ಬರಹ,ವಿಡಿಯೋ ಏನೇ ಇರಲಿ ಉಳಿಯುವ ತಾಕತ್ತು ಇದ್ದರೆ ಮಾತ್ರ ಉಳಿಯಲು ಸಾಧ್ಯ.
ಬೀದರಿನ ಗೆಳೆಯರಾದ ಸುರೇಶ ಚನ್ನಶೆಟ್ಟಿ, ಡಾ.ಬಲ್ಲೂರ ಅವರು ಹುಲಸೂರಿನ ಡಾ.ಶಿವಾನಂದ ಸ್ವಾಮಿಗಳು ಕೊಡಮಾಡುವ ವ್ಯೋಮಕಾಯ ಅಲ್ಲಮಪ್ರಭು ಪ್ರಶಸ್ತಿಯನ್ನು ನಿಸ್ಸಂಕೋಚವಾಗಿ ಸ್ವೀಕರಿಸಲು ಅಲ್ಲಮನೇ ಮಹಾಕಾರಣ ಅಷ್ಟೇ!
ಈ ಹಿನ್ನೆಲೆಯಲ್ಲಿ ಬುದ್ಧ,ಬಸವ,ಅಲ್ಲಮ, ಶೇಕ್ಸ್‌ಪಿಯರ್ ಮತ್ತು ಓಶೋಗೆ ತಾವು ಸದಾಕಾಲವೂ ಉಳಿಯುತ್ತೇವೆ ಎಂಬ ಭ್ರಮೆ ಇಟ್ಟುಕೊಂಡು ಬರೆಯಲಿಲ್ಲ, ಉಳಿಯುವ ಅರ್ಹತೆ ಮತ್ತು ಸಾಮರ್ಥ್ಯ ಇತ್ತು ಅದಕ್ಕಾಗಿ ಉಳಿದರು ಮತ್ತು ಮುಂದೆಯೂ ಉಳಿಯುತ್ತಾರೆ. ಆಳವಾದ ಜೀವನಾನುಭವ, ಅಧ್ಯಯನ, ತ್ಯಾಗದೊಂದಿಗಿನ ನಿರ್ಲಿಪ್ತ ಭಾವ ಅವರನ್ನು ಅಮರಗೊಳಿಸಿದೆ.
ಆದರೆ ನಮಗೆ ಆ ನಿರ್ಲಿಪ್ತ ಭಾವ ಅದೇಕೋ ಸಾಧ್ಯವಾಗದೆ ಕೇವಲ ಥಿಯರಿ ಹಂತಕ್ಕೆ ನಿಂತು, ಕಾಲದಲ್ಲಿ ಲೀನವಾಗಿ ಹೋಗುತ್ತೇವೆ. ಪ್ರೀತಿ, ಸ್ವಾತಂತ್ರ್ಯ, ಅಂತರಂಗದ ಅರಿವು ಜಾಗ್ರತವಾಗದ ಹೊರತು, ಒಳ ಪಯಣ ಸಾಧ್ಯವಾಗುವುದಿಲ್ಲ.
ಆದರೆ ಈಗ ಒಳ ಪಯಣದ ತುಡಿತ ಆರಂಭವಾಗಿ ಕೊಂಚ ಧಾವಂತ ಕಡಿಮೆಯಾಗಿದೆ ಎಂಬುದೇ ಸಮಾಧಾನ.
ಮುಂದೆ ನಿಧಾನವಾಗಿ ಒಳಗೆ ಇಳಿಯುವ ಕಾರ್ಯ ಆರಂಭಮಾಡುವ ದೃಢ ಸಂಕಲ್ಪ. ಇನ್ನೂ ಓದಿದ್ದನ್ನು ಗಟ್ಟಿಯಾಗಿ ಅನುಷ್ಠಾನಗೊಳಿಸಬೇಕು, ಅದರ ಹಾದಿ ಕಂಡ ಮೇಲೂ ಮುಖ ತಿರುವಿಕೊಂಡು ಹೋಗುವುದು ಸರಿಯಲ್ಲ.
ಲಿಮಿಟೆಡ್ ಸಂಗತಿಗಳನ್ನು ಮತ್ತು ಸಂಗಾತಿಗಳನ್ನು ಅವರ ಮಿತಿಗಳ ಸಮೇತ ಗಾಢವಾಗಿ ಆಲಂಗಿಸಬೇಕು.
‘ದೇಹವೇ ದೇವಾಲಯ’ ಎಂಬ ಸತ್ಯ ಆಳಕ್ಕೆ ಇಳಿಯಬೇಕು. ದೇಹ,ಮನಸ್ಸು ಆಡುವ ಆಟಗಳನ್ನು ಗಮನಿಸಿ ನಿಧಾನವಾಗಿ ಹಿಡಿತ ಸಾಧಿಸಬೇಕು. ಅಂತರಂಗದ ಸಂವಹನ ಹೆಚ್ಚಾಗಬೇಕಾದರೆ ಹೊರಗಿನ ಮಾತುಕತೆ ಮಿತಿಯಾಗಲೇಬೇಕು. ಓಳಗಿರುವ ಅಲ್ಲಮ,ಬುದ್ಧನನ್ನು ಹುಡುಕಿ ಹೊರಗೆ ಕರೆದುಕೊಂಡು ಬರಬೇಕು. ಇತರರ ಎದುರು ನಿಲ್ಲಿಸುವ ಅಗತ್ಯವೂ ಇಲ್ಲ. ಬೆಂಗಳೂರಿನ ಸಾಧನಾ ಪ್ರಕಾಶನದ ಗೆಳಯ ರವಿ ಅವರು ಪುಸ್ತಕ ಪ್ರಕಟಿಸಲು ಮುಂದಾಗಿದ್ದಾರೆ, ಅವರಿಗೆ ಕೃತಜ್ಞತೆಗಳು.
ಹೊಸ ವರ್ಷದ ಸಂಕಲ್ಪಗಳು ಈಡೇರಲಿ ಎಂದು ಆಶಿಸುವೆ.
ಸಿದ್ದು ಯಾಪಲಪರವಿ ಕಾರಟಗಿ.
9448358040