ಬಯಲ ಬೆಳಗು
ತಣ್ಣನೇ ಸುಳಿವ ಸುಳಿಗಾಳಿ
ಪರಿಮಳವನುಂಡ ಸೂಸುತ್ತಾ
ಸುಮವೊಂದು ಸಾರ್ಥಕ್ಯ ಭಾವದಲಿ
ಮೌನವಾಗಿ ಬಾಗುತ್ತಲಿದೆ
ಗುಡಿ ಗೋಪುರಗಳಲಿ
ಗಂಟೆಯ ಗದ್ದಲವಿಲ್ಲದೇ
ನಿರಾಳವಾಗಿ ಭಗವಂತ
ಶಾಂತ ಸ್ಮಿತವಾಗಿದ್ದಾನೆ
ಪಯಣಿಗರನು ಶಾಂತವಾಗಿ
ಸಹಿಸಿಕೊಂಡು ರಸ್ತೆಗಳು
ಧನ್ಯತಾ ಭಾವದಲಿ
ಪುಳಕಿತಗೊಂಡಿವೆ
ಮೌನವನ್ನು ಛಿದ್ರಿಸಿ
ಅಂತರಂಗವನ್ನು ಛೇದಿಸಿ
ಆತ್ಮಜ್ಯೋತಿ ಬೆಳಗಿಸಿಕೊಂಡ
ಜೀವಗಳು ಕಣ್ಣಾಲಿಯೊಡನೆ ಕೈ ಮುಗಿದು ನಿಂತಿವೆ
ಪರಿಮಳ ಸೂಸುವ ಸುಮ ಶಾಂತಸ್ಮಿತನಾದ ಭಗವಂತ
ಪುಳಕಿತಗೊಂಡ ರಸ್ತೆ ಕೈ ಮುಗಿದ ಜೀವಗಳು
ಇವೆಲ್ಲವನು ಬಯಲೊಳಗಣ
ಬೆಳಗು ಎಂಬ ಆತ್ಮೋನ್ನತಿಯಲಿ
ಅರಿತು ಅರಿಯಬೇಕೆಂದು
ಮೌನವಾಗಿ ಸಂದೇಶ ಸಾರಿದ
ಸಂತರು ಸಾವಿನೊಳಗಣ
ಸಂಕೇತವಾಗಿ
ಬಯಲ ಬೆಳಗಿಗೆ ಭಾಷ್ಯವಾಗಿದ್ದಾರೆ.
-ಡಾ. ನಾಹೀರಾ ಕುಷ್ಟಗಿ
(ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀ ಗಳ ಅಂತಿಮ ಭಾವದರ್ಶನದಲಿ)