ಮಹತ್ವಪೂರ್ಣ ಕೃತಿಗಳ ನೀಡಿ ನಿರ್ಗಮಿಸಿದ ನಿರ್ಮೋಹಿ

ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಪ್ರಭಾವ ಮತ್ತು ವ್ಯಕ್ತಿತ್ವದ ಕುರಿತು ಎಷ್ಟೇ ಹೇಳಿದರೂ ಉತ್ತರ ಒಂದೇ ಅವರೊಬ್ಬ ನಿರ್ಮೋಹಿ ಸಂತರು. ಬುದ್ಧನ ಧ್ಯಾನ, ಅಲ್ಲಮನ ಬಯಲು, ಓಶೋನ ಜ್ಞಾನ ಪ್ರಾಪ್ತಿ ಮಾಡಿಕೊಂಡವರು. ತಮ್ಮ ನಿರಂತರ ಸಾವಿರಾರು ತಾಸುಗಳ ಪ್ರವಚನಗಳನ್ನು ಅಷ್ಟೇ ಕರಾರುವಾಕ್ಕಾಗಿ ದಾಖಲಿಸಿದ ಅಪರೂಪದ ಸಾಹಿತಿಗಳೂ ಹೌದು!

ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮತ್ತು ಗೀತೆಯ ಸಾರವನ್ನು ಆಳವಾಗಿ ಅರ್ಥೈಸಿಕೊಂಡವರು. ಭಾರತೀಯ ಕಾವ್ಯ ಪರಂಪರೆಯ ಘನತೆಯನ್ನು ವಿಭಿನ್ನ ದೃಷ್ಟಿಕೋನದಿಂದ, ಮಹಾಕಾವ್ಯಗಳನ್ನು ಆಸ್ವಾದಿಸಿದವರು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು. ವೇದ, ಉಪನಿಷತ್ತು ಹಾಗೂ ಶಾಸ್ತ್ರಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವ್ಯಾಖ್ಯಾನಿಸಿದ್ದಾರೆ. ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಮೇಲೆ ಹೊಂದಿದ್ದ ಪ್ರಭುತ್ವದಿಂದಾಗಿ ಇವರ ವ್ಯಾಖ್ಯಾನ ಅತ್ಯಂತ ಅಧಿಕೃತ ಮತ್ತು ಅಧಿಕಾರಯುತ.

ಕನ್ನಡ ವಚನ ಪರಂಪರೆಯ ಬಹುದೊಡ್ಡ ಜ್ಞಾನಿ ಅಲ್ಲಮನ ವಚನಗಳನ್ನು, ವಿಶೇಷವಾಗಿ ಬೆಡಗಿನ ವಚನಗಳನ್ನು ಸಾವಿರ ಪುಟಗಳಲ್ಲಿ ನಮ್ಮ ಕೈಗೆ ನೀಡಿದ್ದಾರೆ. ಸದರಿ ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಕೂಡ ಮಾಡಿದ್ದಾರೆ. ತತ್ವಶಾಸ್ತ್ರವನ್ನು ದರ್ಶನಶಾಸ್ತ್ರವೆಂದು ಕರೆಯುವ ಮೂಲ ಉದ್ದೇಶ ಪ್ರಕೃತಿ ಮತ್ತು ಮನುಷ್ಯನ ಅಂತರಾಳದ ದರ್ಶನದ ಅಗತ್ಯ. ಶೂನ್ಯ, ಬಯಲು, ಶಬ್ದ ಮತ್ತು ನಿಶಬ್ದದ ವಿವರಣೆಗಾಗಿ ಬಹುದೊಡ್ಡ ಹುಡುಕಾಟ ಸಾಗಿದ ಹೊತ್ತಿನಲ್ಲಿ ಸಿದ್ಧೇಶ್ವರ ಅಪ್ಪಗಳು ನಿರ್ವಚನದ ಹಾದಿ ಸುಗಮಗೊಳಿಸಿದರು. ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆಯುವ ಮತ್ತು ಬಯಲನು ಮಹಾ ಬಯಲಾಗಿ ಆಸ್ವಾಧಿಸುವ ಆಧ್ಯಾತ್ಮಿಕ ಕ್ರಮವನ್ನು ಪರಿಣಾಮಕಾರಿ ವಿವರಿಸಿದ್ದಾರೆ. ಸಂಸ್ಕೃತ ಮೂಲದಲ್ಲಿ ನೆಲೆಗೊಂಡ ವೇದ, ಉಪನಿಷತ್ತು ಮತ್ತು ಕನ್ನಡದ ನಿಜಗುಣ ಶಾಸ್ತ್ರವನ್ನು ಸರಳೀಕರಿಸಿದರು.

ಅಧ್ಯಾತ್ಮ ಪರಿಭಾಷೆಯಲ್ಲಿ ಅಡಗಿರುವ ಭೌತಶಾಸ್ತ್ರದ ಆಳವನ್ನು ತಮ್ಮ ಕೃತಿಗಳಲ್ಲಿ ಸಮರ್ಪಕವಾಗಿ ವ್ಯಾಖ್ಯಾನಿಸಿದ್ದಾರೆ. ಆಧ್ಯಾತ್ಮಿಕ ಶಾಸ್ತ್ರಗಳ ಸಾರವನ್ನು ಗ್ರಹಿಸುವುದೆಂದರೆ ಅಂಗೈಯಲ್ಲಿ ಆಕಾಶವನ್ನು ಹಿಡಿಯುವ ಸಾಹಸ. ಅಲ್ಬರ್ಟ್ ಐನ್‍ಸ್ಟೈನ್ ಸಿದ್ಧಾಂತದ ವೈಜ್ಞಾನಿಕ ಅಂಶಗಳನ್ನು ದರ್ಶನ ಶಾಸ್ತ್ರದ ಮೂಲಕ ಪರಿಚಯಿಸುವ ಪ್ರಯತ್ನದಲ್ಲಿ ಸಫಲರಾದರು.

ವ್ಯಕ್ತಿಯ ಪಾಂಡಿತ್ಯ ಕೇವಲ ಮಾತುಗಳ ಮೂಲಕ ಗಾಳಿಯಲ್ಲಿ ಲೀನವಾಗಿ ಮಾಯವಾಗಬಾರದು ಎಂಬುದನ್ನು ಅವರ ಒಳಗೆ ಅಡಗಿ ಕುಳಿತಿದ್ದ ಸಾಹಿತಿಯ ಗ್ರಹಿಕೆಗೆ ಇತ್ತು. ಮುಖ್ಯವಾಗಿ ಪ್ರಕೃತಿಯ ಶಕ್ತಿ ಮತ್ತು ಪಂಚ ಮಹಾಭೂತಗಳ ದೈತ್ಯ ಚೈತನ್ಯವನ್ನು ತಮ್ಮ ಕೃತಿಗಳಲ್ಲಿ ವೈಜ್ಞಾನಿಕ ದೃಷ್ಟಿಯಿಂದ ದಾಖಲಿಸಿದ್ದಾರೆ. ಅವರ ಗುರುಗಳಾದ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಧ್ಯಾತ್ಮಿಕ ವಿಚಾರಗಳನ್ನು ತಮ್ಮ ಪರಮ ಗುರುಗಳಾದ ಗದುಗಿನ ಪೂಜ್ಯ ಶಿವಾನಂದ ಮಹಾಸ್ವಾಮಿಗಳ ಮೂಲಕ ಪಡೆದುಕೊಂಡಿದ್ದರು. ಅದೇ ಪರಂಪರೆಯ ಅದ್ವಿತೀಯ ವಾರಸುದಾರರೆನಿಸಿಕೊಂಡರು.

ಪರಂಪರಾಗತವಾಗಿ ಬಂದ ಶಾಸ್ತ್ರಗಳು ಬರಿ ಬಾಯಿಂದ ಬಾಯಿಗೆ ಸಾಗಿದರೆ ಸಾಲದು ಅದು ಕೃತಿಗಳ ಮೂಲಕ ದಾಖಲಾದಾಗ ಅಜರಾಮರ ಎಂಬ ಅರಿವು ಪೂಜ್ಯರಿಗೆ ಇತ್ತು. ಆದ್ದರಿಂದ ತಮ್ಮ ಬಿಡುವಿನ ಸಮಯವನ್ನು ಅತ್ಯಂತ ಸಂಯಮದಿಂದ ಬರಹಕ್ಕೆ ಮೀಸಲಿಡುತ್ತಿದ್ದರು. ಪೂಜ್ಯರ ಪಾಲಿಗೆ ಶಿವಯೋಗ ಮತ್ತು ಲಿಂಗಪೂಜೆಯೆಂದರೆ ಓದು ಮತ್ತು ಬರಹ.

ಪ್ರವಚನಕ್ಕೆ ಮೊದಲು ಮತ್ತು ನಂತರ ಯಾವ ಸಂಗತಿಗಳನ್ನು ಅಕ್ಷರಕ್ಕೆ ಇಳಿಸಬೇಕೆಂಬ ಮೈಂಡ್ ಮ್ಯಾಪಿಂಗ್ ಇರುತ್ತಿತ್ತು. ಸೃಜನಶೀಲ ಬರಹ ಮತ್ತು ಆಧ್ಯಾತ್ಮಿಕ ಬರಹಗಳ ಮಧ್ಯೆ ತುಂಬಾ ವ್ಯತ್ಯಾಸವಿದೆ. ಸೃಜನಶೀಲ ಬರಹಕ್ಕೆ ಇರುವ ಸ್ವಾತಂತ್ರ್ಯ ಇಲ್ಲಿ ಇರುವುದಿಲ್ಲ. ಮೂಲ ಆಶಯಕ್ಕೆ ಅಪಚಾರವಾಗದಂತೆ ಶಾಸ್ತ್ರದ ಆಳವನ್ನು ವಿಭಿನ್ನವಾಗಿ ವಿವರಿಸುವ ಅಧಿಕಾರ ಇರುತ್ತದೆ ಆದರೆ ಅದೇ ಅಂತಿಮವೂ ಅಲ್ಲ. ವೈಜ್ಞಾನಿಕ ಸಿದ್ಧಾಂತ ಮಾದರಿಯ ನಿರಂತರ ಸಂಶೋಧನಾತ್ಮಕ ಹುಡುಕಾಟವಷ್ಟೇ! ಮಾತಿಗಿಂತಲೂ ಗಂಭೀರವಾದ ಆಯಾಮಗಳನ್ನು ಪೂಜ್ಯರು ತಮ್ಮ ಕೃತಿಗಳಲ್ಲಿ ದಾಖಲಿಸುವುದರ ಮೂಲಕ ಯಶಸ್ವಿಯಾಗಿದ್ದಾರೆ.

ಅವರ ಪ್ರಮುಖ ಕೃತಿಗಳಾದ, ಸಿದ್ಧಾಂತ ಶಿಖಾಮಣಿ, ಅಲ್ಲಮಪ್ರಭುದೇವರ ವಚನ ನಿರ್ವಚನ, ಪ್ರವಚನಗಳ ಒಂದರಿಂದ ಹತ್ತು ಮಾಲಿಕೆಗಳು, ಬದುಕು, ಸಿದ್ಧರಾಮೇಶ್ವರ ವಚನ ಪ್ರವಚನ, ನುಡಿ ಮುತ್ತುಗಳು, ಬದುಕು ಹೂದೋಟ, ಬದುಕು ಆರಾಧನೆ, ಸಾಂದರ್ಭಿಕ ಪ್ರವಚನಗಳು, ಮಾರುತಿ ಯೋಗ, ನೆಲದ ಮರೆಯ ನಿಧಾನ, ನಾನಾರು, ಭಗವತ್ ಚಿಂತನ, ಅಂತರಂಗದ ಕೃಷಿ, ಭಕ್ತಿ ಯೋಗ ಮತ್ತು ಜೀವನ ಯೋಗ, ಮನೆಯೊಡೆಯ, ದಿವ್ಯಾನುಭವ, ಗೀತಾ ಮಾಧುರ್ಯ, ಶಾಂತಿ ಪಥ, ಗುರು ಪಥ, ಸಂಸ್ಕಾರ ಶಿಬಿರದ ಕೈಪಿಡಿ, ಪ್ರಭುದೇವರ ಪ್ರಭೆ, ಚನ್ನಬಸವೇಶ್ವರ ವಚನಗಳು, ನೀತಿ ಯೋಗ, ಶಾಂತಿ ಯೋಗ, ಸದ್ಭಾವ – ಸತ್ಕಾರ್ಯ ಯೋಗ, ಪತಂಜಲಿ ಯೋಗಸೂತ್ರ, ಆನಂದ ಯೋಗ, ಭಾವಸಂಪದ, ಕಠೋಪನಿಷತ್ತು, ಈಶಾವಾಶೋಪನಿಷತ್ತು, ಮುಂಡಕೋಪನಿಷತ್ತು, ಶಿವ ಸೂತ್ರ.

ಅಲ್ಲದೆ ಇಂಗ್ಲಿಷ್ ಕೃತಿಗಳಾದ ಟೇಲ್ಸ್, ಡಿವೋಶನಲ್ ಸೇಯಿಂಗ್ಸ್ ಆಫ್ ಬಸವೇಶ್ವರ, ನಿಜಗುಣಾಸ್ ಎಕ್ಸಪೋಜಿಶನ್ ಆಫ್ ಸ್ಪಿರಿಚುವಲ್ ವಿಸಡಂ, ರಿಫ್ಲೆಕ್ಷನ್ ಆಫ್ ದ ಡಿವೈನ್, ದಿ ಗಾಡ್ ಹಾಗೂ ಇನ್ನೂ ಹತ್ತಾರು ಕೃತಿಗಳನ್ನು ಸ್ಮರಿಸಬಹುದು.

ಹತ್ತು ತಾಸುಗಳ ಗಾಢವಾದ ಅಧ್ಯಯನ, ಎರಡು ತಾಸುಗಳ ಮೌನ ನಡಿಗೆ, ಮಿತ ಆಹಾರ ಸೇವನೆ, ಅಂತರಂಗದ ಲಿಂಗಾಂಗ ಸಾಮರಸ್ಯ, ಒಂದೆರಡು ತಾಸು ಮಾತ್ರ ಸಾರ್ವಜನಿಕ ದರ್ಶನ ಹಾಗೂ ಒಂದೇ ತಾಸಿನ ಪ್ರವಚನ ಇವರ ದಿನಚರಿ.

ಪ್ರವಚನಗಳು ಮುಗಿದ ಮೇಲೆ ಸುಂದರ ಪರಿಸರದ ಮಡಿಲಲ್ಲಿ ಬರಹ ಆರಂಭ, ಕೇವಲ ಬರಹದ ಸುತ್ತ ಮಾತ್ರ ಚರ್ಚೆ ಮಾಡುವ ಪ್ರಾಜ್ಞರ ಬಳಗ. ಇವರೊಂದಿಗೆ ಅನಗತ್ಯ ಮಾತಿಗಿಳಿಯುವ ಅಥವಾ ಚರ್ಚೆ ಮಾಡುವ ಧೈರ್ಯ ಬಾರದಂತಹ ಮಂದಹಾಸ. ಕೇವಲ ನೋಡಬೇಕು, ಇವರ ನೆಲದ ಮರೆಯ ನಿಧಾನದ ಸಂಪತ್ತಿನ ಜ್ಞಾನಾಮೃತದ ಸವಿ ಅನುಭವಿಸಬೇಕು ಎನಿಸುವ ಮೇರು ವ್ಯಕ್ತಿತ್ವ.

ಒಬ್ಬ ಶ್ರೇಷ್ಠ ಬರಹಗಾರನಿಗೆ ಅತ್ಯಗತ್ಯವಿರುವ ದಿವ್ಯ ಏಕಾಂತವನ್ನು ತಮ್ಮ ಸಾಧನೆಯ ಮೂಲಕ ಸಂಪಾದಿಸಿಕೊಳ್ಳುವ ಅಸಾಧಾರಣ ಟೈಮ್ ಮ್ಯಾನೆಜ್‌ಮೆಂಟ್‌. ಮಾತಿಗಿಂತಲೂ ಮೌನಕ್ಕಿರುವ ಸಾಮರ್ಥ್ಯ ಮತ್ತು ಅದನ್ನು ಬರಹಕ್ಕೆ ಇಳಿಸುವ ವಿವೇಚನೆ ಇವರ ದಿವ್ಯ ಶಕ್ತಿ. ಒಂದೇ ಬಗೆಯ ಜೀವನ ಶೈಲಿಯನ್ನು ನಿರಂತರ ಆರು ದಶಕ ಕಾಪಾಡಿಕೊಂಡರು.

ಸಾಹಿತ್ಯ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳ ಸಾಧನೆಗೆ ಕೊಡ ಮಾಡುವ ಎಲ್ಲ ಪ್ರಶಸ್ತಿ, ಪುರಸ್ಕಾರಗಳನ್ನು ನಯವಾಗಿ ತಿರಸ್ಕರಿಸಿದರು. ವಿವಾದ, ಗೊಂದಲ ಉಂಟುಮಾಡುವ ಹೇಳಿಕೆ ಮತ್ತು ಬರಹಗಳಲ್ಲಿ ನಂಬಿಕೆ ಇರಲಿಲ್ಲ. ಇವರ ಸಾಹಿತ್ಯದ ಆಡಿಯೋ, ವಿಡಿಯೋ ಮತ್ತು ಗ್ರಂಥ ಸ್ವರೂಪದ ದಾಖಲೆಗಳನ್ನು ಅವರ ಅಭಿಮಾನಿಗಳು, ಶಿಷ್ಯರು ಕಾಪಾಡಿರುವುದು ಬಹುದೊಡ್ಡ ಸಾಂಸ್ಕೃತಿಕ ದಾಖಲೆ.

ಹತ್ತಾರು ದೇಶಗಳನ್ನು ಸುತ್ತುವಾಗಲೂ ಬಯಲ ಬೆರಗು, ಶಬ್ದದೊಳಗಿನ ನಿಶಬ್ದವನ್ನು ಹುಡುಕುತ್ತಿದ್ದರು. ಅವರು ಹುಡುಕಿಟ್ಟ ನಿಧಿಯನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ನಿರ್ಮೋಹಿ, ನಿರಹಂಕಾರಿ, ನಿರ್ಲಿಪ್ತ ಶತಮಾನದ ಸಂತರು ಕೇವಲ ದೈಹಿಕವಾಗಿ ನಿರ್ಗಮಿಸಿದ್ದಾರೆ.

ಪ್ರೊ.ಸಿದ್ದು ಯಾಪಲಪರವಿ.
9448358040

Don`t copy text!