ಮಸ್ಕಿಗೂ ಸಿದ್ದೇಶ್ವರ ಸ್ವಾಮೀಜಿಗೆ ಅವಿನಾಭಾವ ಸಂಬಂಧ
e-ಸುದ್ದಿ ಮಸ್ಕಿ
ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗೂ ಮಸ್ಕಿಗೂ ಅವಿನಾಭಾವ ಸಂಬAಧವಿದೆ. ೨೦೦೪ ರಲ್ಲಿ ಮೊದಲ ಬಾರಿಗೆ ಮಸ್ಕಿ ಪಟ್ಟಣಕ್ಕೆ ಆಗಮಿಸಿ ಒಂದು ತಿಂಗಳವರೆಗೆ ಪೂಜ್ಯ ಶ್ರೀಸಿದ್ದೇಶ್ವರ ಸ್ವಾಮೀಜಿ ಅವರು ಆಧ್ಯಾತ್ಮಿಕ ಪ್ರವಚನ ನಡೆಸುವ ಮೂಲಕ ಜನಮನಾಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ.
ಸಮೀಪದ ಮಸ್ಕಿ ನಾಲಾ ಯೋಜನೆಯ ಸ್ಥಳದಲ್ಲಿ ಬಿಡಾರ ಬಿಟ್ಟಿದ್ದ ಸ್ವಾಮೀಜಿ ಬೆಳಿಗ್ಗೆ ೫ ಗಂಟೆಗೆ ಎದ್ದು ಆಣೆಕಟ್ಟಿನ ಮೇಲೆ ಹಾಗೂ ಗುಡ್ಡಗಳಲ್ಲಿ ವಾಯುವಿಹಾರ ಮಾಡಿ ಅಲ್ಲಿಯ ಸುಂದರ ಪರಿಸರಕ್ಕೆ ಮಾರು ಹೋಗಿದ್ದರು ಮತ್ತು ಬೆಳಿಗ್ಗೆ ಆಗಮಿಸಿದ ಭಕ್ರೊಂದಿಗೆ ಸತ್ಸಂಗ ನಡೆಸುತ್ತಿದ್ದರು.
ಪ್ರವಚನ ವೇಳೆಯಲ್ಲಿ ಮಲ್ಲಿಕಾರ್ಜುನ ಬೆಟ್ಟ ಮತ್ತು ಅದರ ಪಕ್ಕದಲ್ಲಿರುವ ಬೆಟ್ಟ (ಎರಡು ಬೆಟ್ಟವನ್ನು ) ಯಾರ ಸಹಾಯವಿಲ್ಲದೆ ಯುವಕರಂತೆ ಉತ್ಸಾಹದಿಂದ ಬೆಟ್ಟಹತ್ತಿದ್ದರು. ಬೆಟ್ಟದಲ್ಲಿರುವ ಪ್ರಾಚೀನವಾದ ಶಿಲ್ಪಕಲೆಯನ್ನು ವಿಕ್ಷೀಸಿದ್ದರು.
ಭ್ರಮರಾಂಬ ಸಹಕಾರಿಗೆ ಭೇಟಿ ಃ ಪಟ್ಟಣದಲ್ಲಿ ಇರುವ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ಭೇಟಿ ನೀಡಿದ್ದ ಸ್ವಾಮೀಜಿ ಸಂಸ್ಥೆಯ ಬೆಳವಣಿಗೆ ಶೆರ್‌ದಾರರ ಸಂಖ್ಯೆ, ಆರ್ಥಿಕ ಚಟುವಟಿಕೆಯ ಮಾಹಿತಿ ಪಡೆದು ಕೊಂಡರಲ್ಲದೆ ಸಂಸ್ಥೆಯಲ್ಲಿ ಸಾಲ ಪಡೆಯುವ ಸಾಲಾಗರಾರನ್ನು ಸಾಲಗಾರರೆಂದು ಕರೆಯದೆ ಸಹಕಾರ ಕ್ಷೇತ್ರದಲ್ಲಿರುವವರು ಸಾಲಗಾರ ಪದಕ್ಕೆ ಪರ್ಯಾಯವಾಗಿ ಹೊಸ ಪದ ಹುಡುಕಿ ಎಂದು ಸಲಹೆ ನೀಡಿದ್ದರು. ಅವರ ಜತೆಗೆ ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮೀಜಿ ಮತ್ತು ಮಸ್ಕಿಯ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಜತೆಗಿದ್ದರು. ಇದೇ ಸಂದರ್ಭದಲ್ಲಿ ಹಲವರ ಮನೆಗಳಿಗೆ ಭೇಟಿ ನೀಡಿದ್ದರು.
೨೦೧೪ ರಲ್ಲಿ ಮಸ್ಕಿಯಲ್ಲಿ ನಡೆದ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದ್ದರು. ಕಳೆದ ೫ ವರ್ಷಗಳ ಹಿಂದೆ ಮಸ್ಕಿಯ ಗಚ್ಚಿನಮಠಕ್ಕೆ ಆಗಮಿಸಿ ಮಠದ ಅಭಿವೃದ್ದಿಗೆ ಸಲಹೆ ಸೂಚನೆ ನೀಡಿದ್ದರು.