ಸಂತ ಮಹಾತ್ಮ
ಸಂತನೆಂದರೆ ಶ್ರೀ ಸಿದ್ಧೇಶ್ವರರು ಎಂದೇ
ಜಗವು ಹಾಡಿದೆ ಎದೆಯ ಬಾಂದಳದಿಂದ
ಅರಿವು ಗುರುವಿನ ಸಂಗಮವೇ ಶ್ರೀಗಳು
ಲೋಕದ ಒಳಗಣ್ಣು ತೆರೆಸಿದ ಮಹಾಂತ!
ಇವರ ಕಾಲಿಗೆ ಪೆಟ್ಟಾಗಿ ಬಳಲಿದಾಗ ಜಗವು
ನರಳಿತು ದೇವರಿಗೂ ಚಿಕಿತ್ಸೆಯೆ? ಅಂದಿತು
ಕೊರಗಿತು ಇವರು ಮ್ಲಾನವದನರಾದಾಗ
ಖುಷಿಯಿಂದ ಕುಣಿಯಿತು ಶ್ರೀಗಳು ನಕ್ಕಾಗ !
ಶ್ವೇತ ವಸ್ತ್ರಧಾರಿ ಹಿಂಗೈತಿ ನೋಡ್ರಿ ಜಗದ ಜಂಝಡ
ಅಂದು ಜನರ ಮನದ ಆಳಕಿಳಿದಾಗ ಏನಾಶ್ಚರ್ಯ
ಎಲ್ಲ ಎಲ್ಲರೂ ಬುದ್ದೀಜಿಯ ಪ್ರತಿರೂಪವೇ ಆದರು
ಅದನು ಕಂಡು ಮುಗಿಲು ಸುರಿಸಿತು ಆನಂದ ಭಾಷ್ಪ!
ಇದೇ ನೋಡಿ ದೇವ ದೇವನು ತೋರುವ ವಿಸ್ಮಯ
ಲೋಕ ಕಂಡ ಅಪರೂಪದ ಸಂಚಾರಿ ಹಿಮಾಲಯ!
ಗುಹೇಶ್ವರನ ಬಯಲಲಿ ಸತ್ಯ ಅಸತ್ಯಗಳ ರಂಪಾಟವು
ಇಲ್ಲವೇ ಇಲ್ಲ ಸಹಜ ಅಸಹಜಗಳೇ ಎಲ್ಲಿ ಇವೆ ಹೇಳಿರಿ
ನಾನೂ ಇಲ್ಲ ನೀನೂ ಇಲ್ಲ ಎಲ್ಲ ಬರೀ ಬಯಲ ಭ್ರಾಂತಿ
ಬಯಲೊಳಗೆ ಬಯಲಾಗಲು ಹೊರಟು ನಿಂತನೀ ಸಂತ
ಎಲ್ಲವೂ ಸಹಜ ಇಲ್ಲಿ ಕುದಿವವರು ಕುದಿಯುತ್ತಾರೆ
ಉರಿಯುವವರು ಬೂದಿಯಾಗುತ್ತಾರೆ ಹೌದಲ್ಲವೆ?
ನಿಸರ್ಗದಿಂದ ಬಂದ ದೇಹ ನಿಸರ್ಗ ಸೇರಬೇಕಲ್ಲವೆ?
ಗುಡಿ ಸ್ಮಾರಕ ಬೇಡವೇ ಬೇಡವೆಂದರು ಸಿದ್ಧಪ್ಪಾಜಿಗಳು
ಆರಾಧಿಪರ ಎದೆಗೂಡೊಳಗೆ ಉಳಿದು ಹೋದರವರು
ಮನದಲಿ ಶಾಶ್ವತ ಮೂರುತಿ ಬೆಳಗಿತು ದೀಪಾಂಜಲಿ!
ಅಲ್ಲಮ ಬಂದ ನೋಡು ಈ ಯುಗದಲಿ ಈ ರೀತಿಯಾಗಿ
ಬಯಲು ಬಿತ್ತಿ ತಾ ಎತ್ತರೆತ್ತರಕೆ ಹೋಗಿ ಬಿಟ್ಟ ಆಗಸದಲಿ!
ಜಗದ ವಿಸ್ಮಯವೀ ಸಂಗತಿ ನಿಜವೇ ಇದು ಸಾಧ್ಯವೇ?
ಎಂದು ತನ್ನ ಚಿವುಟಿಕೊಂಡ ಬೆರಗಿನಲಿ ಶ್ರೀಸಾಮಾನ್ಯ!
ಶ್ರೀನಿವಾಸ ಜಾಲವಾದಿ
ಸುರಪುರ