ಅಗೋಚರ ನಿಲುವಿನ ಠಾವು

ಅಕ್ಕನೆಡೆಗೆ ವಚನ – 15 ವಾರದ ವಿಶೇಷ ವಚನ ವಿಶ್ಲೇಷಣೆ

ಅಗೋಚರ ನಿಲುವಿನ ಠಾವು

ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜಿದಂತೆ
ಭಾವದ ಮರೆಯ ಬ್ರಹ್ಮನಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು!

ಅಕ್ಕಮಹಾದೇವಿಯ ವಚನಗಳನ್ನು ಆಧ್ಯಾತ್ಮಿಕ ಹಿನ್ನೆಲೆಯಲ್ಲಿಯೇ ಗ್ರಹಿಸುವ ಪ್ರಯತ್ನ ಮಾಡುವುದು ಅರ್ಥಪೂರ್ಣ. ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳ ಎಳೆಗಳು, ಕಣ್ಣಿಗೆ ಕಾಣದ, ಕೇವಲ ಮನಕ್ಕೆ ಗೋಚರಿಸುವ, ಪಾರಾಮಾರ್ಥಿಕ ಸಂಗತಿಗಳ ದರ್ಶನವಾಗುತ್ತದೆ. ಪ್ರಕೃತಿ ಪ್ರಿಯೆ, ಭಾವ ಜೀವಿ ಅಕ್ಕ ಈ ವಚನದಲ್ಲೂ ನಿಸರ್ಗದ ಅನೇಕ ಅಂಶಗಳನ್ನು ಉಲ್ಲೇಖಿಸುತ್ತ ಚೆನ್ನಮಲ್ಲಿಕಾರ್ಜುನನ ಇರುವಿಕೆಯ ಅನುಭಾವಕ್ಕಿಳಿದ ಅನುಭೂತಿ ನೀಡುತ್ತದೆ. ಅವಳ ಭಾವಕೋಶದಲ್ಲಿ ಪಕ್ಕಾದ ಅನುಭಾವವೇ ಎಲ್ಲಾ ವಚನಗಳಲ್ಲಿವೆ.

ಅಕ್ಕ ತನ್ನ ಹುಡುಕಾಟದ (Search) ಹಿಂದೆ ನಿದ್ರೆ, ಹಸಿವು, ನೀರಡಿಕೆ, ಅಡಿಷಡ್ವರ್ಗಗಳನ್ನು ತ್ಯಜಿಸಿ ಹೊರಟವಳು. ‘ಹಸಿವೆ ನೀನು ನಿಲ್ಲು ನಿಲ್ಲು, ತೃಷೆಯೆ ನೀನು ನಿಲ್ಲು ನಿಲ್ಲು…’ ನಿಸರ್ಗದೊಂದಿಗೆ ಮಾತನಾಡುತ್ತ, ಮುಂದುವರಿದ ಶೋಧನೆಯ ಪರಿಣಾಮವೇ ಈ ಮೇಲಿನ ವಚನವೆಂದು ಮನಸಿಗೆ ವೇದ್ಯವಾಗುತ್ತದೆ. ಅಕ್ಕ ಇಡೀ ಭೂಮಂಡಲವನ್ನೇ ತನ್ನ ಕಣ್ಣೆದುರಿಗೆ ಇಟ್ಟುಕೊಂಡು, ಅನೇಕ ಅಲಂಕಾರ, ಉಪಮೆಗಳನ್ನು ಬಳಸುತ್ತ, ಸಂಕೀರ್ಣವಾದ ಹೋಲಿಕೆಗಳಿಂದ ಚೆನ್ನಮಲ್ಲಿಕಾರ್ಜುನನ ನಿಲುವನ್ನು ಸ್ಪಷ್ಟ ಪಡಿಸುವ ವಚನ.

ನೆಲದ ಮರೆಯ ನಿಧಾನದಂತೆ

ನಾವು ಎಲ್ಲಿ ಕಾಲೂರಿ ನಿಂತಿದ್ದೇವೊ ಅದು ನೆಲ. ನೆಲ ಅಂದರೆ ಈ ಭೂಮಿ. ಇಡೀ ಮನುಕುಲದ ಕೋಟಿ ಕೋಟಿ ಜೀವರಾಶಿಗಳು ಹುಟ್ಟಿ, ಬೆಳೆದು, ಬದುಕಿ, ಜೀವನ ನಡೆಸಿ, ಅಂತ್ಯದಲ್ಲಿ ವಿದಾಯ ಹೇಳಿ ಹೋಗುತ್ತವೆ. ಆದರೆ ಈ ಭೂಮಿ ತಿರುಗುತ್ತಿದೆ ಎಂದು ಗೊತ್ತಿದ್ದರೂ, ಅದನ್ನು ನೋಡುವಂತಿಲ್ಲ, ಅನುಭವಿಸುವಂತಿಲ್ಲ.

ಖಗೋಳ ಶಾಸ್ತ್ರದ (Astrology) ಅಧ್ಯಯನ ಆರಂಭವಾಗಿ, ಖಗೋಳ ಶಾಸ್ತ್ರಜ್ಞರು (Astronomers), ವಿಜ್ಞಾನಿಗಳು ಮಾಡಿದ ಆವಿಷ್ಕಾರದಿಂದ ಮಾಹಿತಿ ದೊರಕಿದೆ.

ಸೌರಮಂಡಲದ (solar system) ವ್ಯವಸ್ಥೆ ನೋಡಿದಾಗ ಆಶ್ಚರ್ಯವಾಗುತ್ತದೆ. ಸೂರ್ಯ ಮತ್ತು ಸೂರ್ಯನ ಸುತ್ತ ಕಕ್ಷೆಯಲ್ಲಿ ಪ್ರದಕ್ಷಿಸುತ್ತಿರುವ ಗ್ರಹ, ಉಪಗ್ರಹ, ಧೂಮಕೇತು, ಸಣ್ಣ ನಕ್ಷತ್ರಾಕೃತಿಯ ಗ್ರಹಗಳ ಸಮೂಹ ಸೇರಿ ಸೌರಮಂಡಲ ಅಥವಾ ಸೌರವ್ಯೂಹ ಎನಿಸಿಕೊಳ್ಳುತ್ತದೆ. ಅನಂತ ಕೋಟಿ ಜೀವರಾಶಿಗಳು ಇರುವುದು ಈ ಭೂಮಿ ಎನ್ನುವ ಗ್ರಹದಲ್ಲಿ. ಇದು ಸೌರವ್ಯೂಹದ ಮ‌ೂರನೇ ಗ್ರಹ. ಭೂಮಿಯು ತನಗೆ ಅಗತ್ಯವಿರುವಷ್ಟು ಶಾಖ ಮತ್ತು ಬೆಳಕನ್ನು ಸೂರ್ಯನಿಂದ ಪಡೆಯುತ್ತದೆ. ಅದೇ ಜೀವಜಾಲಕೆಲ್ಲಾ ಆಧಾರ.

ಭೂಮಿಯು ತಾನು ಸ್ವತಃ ತಿರುತ್ತಲೇ ಕಕ್ಷೆಯಲ್ಲಿ ಸುತ್ತುತ್ತಿರುವುದೇ Rotation ಮತ್ತು Revolution. ಈ Rotation ಮತ್ತು Revolution ಎರಡೂ ಇದ್ದರೂ, ಯಾರ ಕಣ್ಣಿಗೂ ಕಾಣುವುದಿಲ್ಲ. ಕೇವಲ ಅರಿತಿರುತ್ತೇವೆ ಅಷ್ಟೆ.

ಇನ್ನೊಂದು ಅರ್ಥದಲ್ಲಿ ನೋಡುವುದಾದರೆ, ನೆಲದ ಒಡಲಲ್ಲಿ ಅನೇಕ ತರಹದ ಸಂಪತ್ತು ಇರುತ್ತವೆ. ಬೆಳೆಗಳು, ಖನಿಜಗಳು, ನಿಧಿ, ಇತ್ಯಾದಿ. ಹಲವಾರು ಬಗೆಯ ಸಂಪನ್ಮೂಲದ ಮೂಲ ನೆಲೆಯು ಈ ನೆಲವಾಗಿದೆ. ಹಾಗೆ ಈ ಭೂಮಿಯೊಳಗಿನ ಸಿರಿವಂತಿಕೆಯಂತೆಯೇ ವ್ಯಕ್ತಿಯೊಳಗಿನ ಪ್ರತಿಭೆಯೂ ಕೂಡ ಹೌದು.

ಆ ಚಲನೆ ಕಣ್ಣಿಗೆ ಕಾಣದಿದ್ದರೂ ಅಲ್ಲಿ ಎಲ್ಲೋ ನಡೆಯುತ್ತಿದೆ ಎನ್ನುವ ಸತ್ಯದ ಮನವರಿಕೆಯಾಗಬೇಕಷ್ಟೆ. ಅದೇ ನೆಲದ ಮರೆಯ ನಿಧಾನ.

ಫಲದ ಮರೆಯ ರುಚಿಯಂತೆ

ಫಲ ಅಂದರೆ ಹಣ್ಣು. ರುಚಿ ಅಂದರೆ ನಾಲಿಗೆಯಿಂದ ಸವಿದಾಗ ಆಗುವ ಅನುಭವ. ಹಣ್ಣಿನಲ್ಲಿ ಅಡಗಿರುವ ಹುಳಿ, ಸಿಹಿ ರುಚಿಗಳನ್ನು ಆಸ್ವಾದಿಸುತ್ತೇವೆ.

ಅಕ್ಕ ತನ್ನ ಇನ್ನೊಂದು ವಚನದಲ್ಲಿ ಪ್ರಶ್ನಿಸುವ ಬಗೆ ಹೀಗಿದೆ, ‘ಈಳೆ ನಿಂಬೆ ಮಾವು ಮಾದಲಕೆ ಹುಳಿ ನೀರನೆರೆದವರಾರಯ್ಯಾ? ಕಬ್ಬು ಬಾಳೆ ಹಲಸು ನಾರಿವಾಳಕೆ ಸಿಹಿ ನೀರನೆರೆದವರಾರಯ್ಯಾ?’ ಅಂದರೆ ಈ ಪ್ರಕೃತಿಯಲ್ಲಿ ಸಹಜವಾಗಿ ಬೆಳೆಯುವ ಹಣ್ಣು ಹಂಪಲುಗಳಲ್ಲಿ ಹುಳಿ, ಸಿಹಿ ಎನ್ನುವ ರುಚಿ ಅಡಗಿದೆ. ಅದರಲ್ಲಿ ಆ ಸತ್ವವನ್ನು ಹಾಕಿದವರು ಯಾರೆಂದು ಗೊತ್ತಿಲ್ಲ. ಆ ರುಚಿ ಕಣ್ಣಿಗೂ ಕಾಣುವುದಿಲ್ಲ. ಆದರೆ ಸವಿದಾಗ ಮಾತ್ರ ಮನರಿಕೆಯಾಗುತ್ತದೆ. ಹಾಗೆಯೆ ಫಲದ ಮರೆಯಲ್ಲಿರುವ ರುಚಿಯ ಸತ್ಯ ತಿಳಿದಿರಬೇಕು.

ಶಿಲೆಯ ಮರೆಯ ಹೇಮದಂತೆ

ಶಿಲೆ ಅಂದರೆ ಕಲ್ಲುಬಂಡೆ. ಹೇಮ ಎಂದರೆ ಚಿನ್ನ.

ಭೂವಿಜ್ಞಾನದ(Geology) ಅಧ್ಯಯನದಿಂದ ಭೂವಿಜ್ಞಾನಿಗಳು(Geologist) ಚಿನ್ನದ ಗಣಿಗಾರಿಕೆಯ ಕುರಿತು ಹೇಳುತ್ತಾರೆ. ಗಣಿಗಾರಿಕೆ ಅಂದರೆ ಉಪಯುಕ್ತ ಖನಿಜಗಳ ಅಥವಾ ಇತರ ಭೂವೈಜ್ಞಾನಿಕ ವಸ್ತುಗಳು. ಸಾಮಾನ್ಯವಾಗಿ ಅದಿರು, ಲೋಹ ಅಥವಾ ಕಲ್ಲಿದ್ದಲ ಪದರ ಭೂಮಿಯಿಂದಲೇ ಹೊರ ತೆಗೆಯಲಾಗುತ್ತದೆ.

ಅದರದೇ ಒಂದು ಭಾಗವಾದ ಚಿನ್ನದ ಗಣಿಗಾರಿಕೆ. ಕಲ್ಲು ಬಂಡೆಗಳ ಒಡಲಿಂದ ಚಿನ್ನ ಅಥವಾ ಚಿನ್ನದ ಅದಿರುಗಳ ಹೊರತೆಗೆಯಲಾಗುತ್ತದೆ. ಇದರಲ್ಲಿ ಹಲವಾರು ತಂತ್ರ ಹಾಗೂ ಪ್ರಕ್ರಿಯೆಗಳು ಇವೆ. ಅನೇಕ ಹಂತಗಳ ಸಂಸ್ಕರಣೆಯ ನಂತರ ಚಿನ್ನ, ಬಂಗಾರ, ಹೇಮ ಲಭ್ಯ. ಹಾಗೆ ಸಂಸ್ಕರಿಸಿದ ನಂತರ ಸಿಗುವ ವಸ್ತು ಅತ್ಯಮೂಲ್ಯ ಹಾಗೂ ಬೆಲೆ ಬಾಳುವಂಥದ್ದು.

ತಿಲದ ಮರೆಯ ತೈಲದಂತೆ

ತಿಲ ಅಂದರೆ ಎಳ್ಳು. ಹಿಂದಿ ಭಾಷೆಯಲ್ಲಿ ಎಳ್ಳಿಗೆ ತಿಲ್ ಎಂದು ಕರೆಯುತ್ತಾರೆ. ತಿಲ್ ಶಬ್ದವು ತಿಲ ಶಬ್ದಕ್ಕೆ ಹತ್ತಿರವಾಗಿದೆ. ತೈಲ ಎಂದರೆ ಸಂಸ್ಕರಿಸಿ ತೆಗೆದ ದ್ರವದಂತಹ ಎಣ್ಣೆ ಪದಾರ್ಥ. ಎಳ್ಳು ಬಹಳ ಚಿಕ್ಕ ಧಾನ್ಯ. ಅದರಿಂದ ತೈಲ ಉತ್ಪಾದಿಸಬಹುದು. ಎಳ್ಳನ್ನು ರಾಶಿ ಮಾಡಿ ಹಾಕಿದಾಗ, ಅದರಲ್ಲಿರುವ ತೈಲ ಕಾಣುವುದಿಲ್ಲ. ಹಾಗೆ ಅಂತರ್ಗತವಾಗಿರುವ ಅಂಶವನ್ನು ಊಹಿಸಬೇಕಷ್ಟೆ.

ಮರದ ಮರೆಯ ತೇಜಿದಂತೆ

ಈ ಭೂಮಂಡಲದ ಕೆಲವು ಕಾಡು ಪ್ರದೇಶಗಳು ತನ್ನಿಂದ ತಾನೇ ಬೆಂಕಿ ಹೊತ್ತಿ ಉರಿಯುತ್ತದೆ. ವಿಶಾಲ, ಸಂಪತ್ಭರಿತ, ನೆಲದ ಮೇಲೆ ಬೆಳೆದ ಗಿಡ ಮರಗಳು ವಿನಾಶದ ಕಡೆ ಸಾಗುತ್ತವೆ. ಅದಕ್ಕೆ ‘ಕಾಡ್ಗಿಚ್ಚು’ ಎಂದು ಕರೆಯುತ್ತೇವೆ.

‘ಒಲೆ ಹೊತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹೊತ್ತಿ ಉರಿದಡೆ ನಿಲಬಹುದೆ?’ ಎನ್ನುವ ಮಾತು ಸತ್ಯ. ಮರದಲ್ಲಿ ತೇಜದ ಗುಣವಿರುತ್ತದೆ. ತೇಜ ಅಂದರೆ ತೇಜಸ್ಸು, ಬೆಳಕು, ಬೆಂಕಿ, ಅಗ್ನಿ ಎನ್ನುವ ನಾನಾ ಅರ್ಥ ಕೊಡುತ್ತದೆ. ಮರಕ್ಕೆ ಯಾವುದಾದರೊಂದು ಕಾರಣದಿಂದ ಅಗ್ನಿಯ ಸ್ಪರ್ಶವಾದರೆ ಸಾಕು ಅದು ಅದನ್ನು ಪುಷ್ಟೀಕರಿಸುವ ಗುಣ ಹೊಂದಿದೆ. ಈಗ ಸ್ಪಷ್ಟವಾಗುವುದೇನೆಂದರೆ ಮರದ ಒಳಗೆ ಅಗ್ನಿ ಕಣ್ಣಿಗೆ ಕಾಣದಂತೆ ಅಡಗಿದೆಯೆಂದು.

ಭಾವದ ಮರೆಯ ಬ್ರಹ್ಮನಾಗಿಪ್ಪ

ಈ ಜಗತ್ತನ್ನು ‘ಸೃಷ್ಟಿ ಸ್ಥಿತಿ ಲಯ’ conceptಅನ್ನು ಆಧಾರವಾಗಿಟ್ಟುಕೊಂಡು ನೋಡುವ ಒಂದು ದೃಷ್ಟಿ ಇದೆ. ಅದಕ್ಕೊಂದು ಪೌರಾಣಿಕ ಹಿನ್ನೆಲೆಯು ‘ಬ್ರಹ್ಮ ವಿಷ್ಣು ಮಹೇಶ್ವರ’ ಎಂದಿದೆ. ಇಲ್ಲಿ ಬ್ರಹ್ಮ ಎಂದರೆ ಸೃಷ್ಟಿಯ ಪ್ರತೀಕ.

ಮನುಷ್ಯನಲ್ಲಿ ಕೆಲವು ಶಕ್ತಿಗಳಿವೆ. ದೈಹಿಕ ಶಕ್ತಿ ಮತ್ತು ಮಾನಸಿಕ ಶಕ್ತಿ. ಈ ಮಾನಸಿಕ ಶಕ್ತಿ ಹೇಗೆ ಸಂಸ್ಕಾರಗೊಳ್ಳುತ್ತದೆ ಅಂದರೆ ಭಾವನೆಗಳಿಂದ. ಒಂದು ಕ್ರಿಯೆಗೆ ಸ್ಪಂದಿಸಲು ಅನೇಕರಿಗೆ ಹೇಳಿದಾಗ, ಅಲ್ಲಿಂದ ಬರುವ output ಭಿನ್ನವಾಗಿರುತ್ತದೆ.

ಉದಾಹರಣೆಗೆ,

ಹತ್ತು ಜನ ಮಹಿಳೆಯರಿಗೆ ಸಾಂಬಾರ ಮಾಡಲು ಹೇಳುವುದು. ಎಲ್ಲರಿಗೂ ಸಮಾನವಾಗಿ ಸಾಮಾಗ್ರಿಗಳನ್ನು ಕೊಡುವುದು. ಆಗ ತಯಾರಾದ ಸಾಂಬಾರಿನ ರುಚಿ ನೋಡುತ್ತ ಹೋದರೆ, ಪ್ರತಿಯೊಬ್ಬರದೂ ಬೇರೆ ಬೇರೆ ರುಚಿಯಾಗಿರುತ್ತದೆ. ಮನುಷ್ಯನಿಂದ ಮನುಷ್ಯನ ಗ್ರಹಿಕೆ, ಸೃಷ್ಟಿಸುವ ಕಲೆ, ಪ್ರಸ್ತುತ ಪಡಿಸುವ ರೀತಿ ಎಲ್ಲವೂ ಬೇರೆಯಾಗಿರುವುದೇ ಇದಕ್ಕೆ ಕಾರಣ.

ಇಲ್ಲಿ ಪ್ರತಿ ವ್ಯಕ್ತಿಯೊಳಗೆ ‘ಇಲ್ಲದೆ ಇರುವುದನ್ನು ಹೊಸದಾಗಿ ಸೃಷ್ಟಿಸುವ ಕಲೆ ಆವಿಷ್ಕಾರಗೊಂಡಿರುತ್ತದೆ’. ಇದನ್ನೇ ‘ಸೃಜನಶೀಲತೆ’ ಎಂದು ಕರೆಯುತ್ತೇವೆ.

ಸೃಜನಶೀಲತೆಗೆ ಮೂಲ ಆಧಾರ ಭಾವನೆಗಳು. ಮನುಷ್ಯನಲ್ಲಿರುವ ಆ ‘ಭಾವ’ ಗುಣವೇ ಹೊಸತನಕ್ಕೆ ನಾಂದಿ. ಹಾಗೆಯೇ ಭಾವದ ಮರೆಯಲ್ಲಿ ಬ್ರಹ್ಮನಿದ್ದಾನೆ ಎನ್ನುವ ಪರಿಕಲ್ಪನೆ ಸ್ಪಷ್ಟವಾಗುತ್ತದೆ.

ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು!

ಹೀಗೆ ನೆಲದ ಮರೆಯ ನಿಧಾನದಂತೆ, ಹಣ್ಣಿನಲ್ಲಡಗಿದ ರುಚಿಯಂತೆ, ಗಣಿಯಲ್ಲಡಗಿದ ಚಿನ್ನದಂತೆ, ಎಳ್ಳಿನೊಳಗಿನ ಎಣ್ಣೆಯಂತೆ, ಮರದೊಳಗಿರುವ ಕಿಚ್ಚಿನಂತೆ, ಮನುಷ್ಯನ ಭಾವನೆಯೊಳಗಿರುವ ಹೊಸ ಸೃಷ್ಟಿಯ ಭಾವದಂತೆ, ಎಲ್ಲೆಡೆಯೂ ಚೆನ್ನಮಲ್ಲಿಕಾರ್ಜುನನಿದ್ದಾನೆ. ಅವನ ನಿಲುವು ಹೀಗೇ ಇರಬಹುದೆಂದು ಹುಡುಕಿಕೊಂಡು ಹೋಗಿ, ಅರಿಯುವ ಪ್ರಯತ್ನ ಮಾಡಬಾರದು. ಅವನು ನಮ್ಮೊಳಗೇ ಇದ್ದಾನೆ ಎಂದು ಅಕ್ಕಮಹಾದೇವಿಯು ಬಹಳ ಸೂಕ್ಷ್ಮವಾಗಿ, ನವಿರಾದ ಹೋಲಿಕೆಗಳನ್ನು ಕೊಡುತ್ತ, ಸ್ಪಷ್ಟವಾದ ತನ್ನ ಆಧ್ಯಾತ್ಮದ ಮಾರ್ಗದಲ್ಲಿ ಮುಂದೆ ಸಾಗುತ್ತಾಳೆ.

ಆ ಅಗೋಚರ ನಿಲುವಿನ ಠಾವು ನಮ್ಮೊಳಗೇ ಇರುವುದರಿಂದ, ನಮ್ಮ ನಮ್ಮ ಆತ್ಮದ ಶೋಧನೆ ಅಗತ್ಯ!!!

ಸಿಕಾ

Don`t copy text!