ಗುಹೇಶ್ವರ ಸತ್ತನೆಂಬ ಸುದ್ದಿ

ವಚನ ಸಾಹಿತ್ಯ ಚರಿತ್ರೆಯಲ್ಲಿ ಅಲ್ಲಮ ಪ್ರಭುಗಳಿಗೆ ಪ್ರಥಮ ಸ್ಥಾನವನ್ನು ಕಾಣಬಹುದು. ಬೆಡಗಿನ ಭಾಷೆಯಲ್ಲಿ ಓದುಗರನ್ನು ಮುಕ್ತವಾಗಿ ಸೆಳೆಯುವ ಬೆರಗಿನ ಹರಿಕಾರ. ಬೆಡಗು ಎಂದರೆ ಸೌಂದರ್ಯ ಲಾಲಿತ್ಯ ನಿಗೂಢ ಮುಚ್ಚಿ ಹೇಳುವುದು ಎಂಬ ಅರ್ಥಗಳು ಬೆಡಗಿಗಿದೆ. ವಚನಳಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಹುರಿಗಟ್ಟಿ ಕಲಾತ್ಮಕವಾಗಿ ಹೇಳಿದ ದಾರ್ಶನಿಕ ಅಲ್ಲಮಪ್ರಭುಗಳಾಗಿದ್ದಾರೆ. ಅಲ್ಲಮರ ಶಬ್ದಗಳ ಲೋಕಕ್ಕೆ ಪ್ರವೇಶ ಪಡೆಯಬೇಕಾದರೆ ಭೌತಿಕ ಮತ್ತು ಆಧ್ಯಾತ್ಮಿಕ ಒಳನೋಟಗಳ ಮತ್ತು ಕಾವ್ಯ ಭಾಷೆಯ ಪರಿಚಯ ಬೇಕಾಗುತ್ತದೆ. ಇಲ್ಲಿ ನಾನು ಚರ್ಚೆಗೆತ್ತಿಕೊಳ್ಳುತ್ತಿರುವ ವಚನವು ಅಂತಹದ್ದೇ ಆಗಿದೆ

ಗಂಗಾದೇವಿ | ಮುಂಡೆಯಾದಳು ||
ಗೌರಿದೇವಿ | ಓಲೆಯ ಕಳೆದಳು ||
ಸೂರ್ಯ ಚಂದ್ರರಿಬ್ಬರು | ನೀರಿಗಿಳಿದರು ||
ವಾಯುದೇವ | ವಿಮಾನ ಹೊತ್ತ ||
ವಾಸುದೇವ | ತಲೆಗೊಳ್ಳಿಯನಿರಿದ ||
ಅಲ್ಲಿಂದತ್ತ ಗುಹೇಶ್ವರ | ಸತ್ತನೆಂಬ ಸುದ್ದಿ ||

ಅಲ್ಲಮಪ್ರಭುಗಳ ಅತ್ಯುತ್ತಮ ವಚನಗಳಲ್ಲಿ ಇದೂ ಒಂದು. ಈ ವಚನ ಮೌಲಿಕವಾಗಿ ಕುತೂಹಲ ಉಂಟು ಮಾಡುವುದು ಸಹಜವಾಗಿದೆ. ಗಂಗೆ ಗೌರಿಯರು ವಿಧವೆಯರಾದರು ಎಂದು ಎಚ್ಚರಿಸುವ ಮೂಲಕ ಗುಹೇಶ್ವರ ಸತ್ತ ಪ್ರತಿಮೆ ಇಲ್ಲಿ ಸೃಷ್ಟಿಯಾಗಿದೆ. ಗುಹೇಶ್ವರ ಶಿವನಾದರೂ ಗಂಗೆ ಗೌರಿಯರು ಶಿವನ ಪತ್ನಿಯರು. ಈ ಕಥಾ ಪ್ರಸಂಗ ಆಧ್ಯಾತ್ಮ ಲೋಕದಲ್ಲಿ ಬೆಡಗಾಗಿ ಮತ್ತು ಬೆರಗಾಗಿ ಕಂಡು ಬರುತ್ತದೆ. ಶಿವನ ಸತಿಯರು ಆದಿ ಶಕ್ತಿಯ ಸ್ತ್ರೀ ರೂಪ ಪಡೆದವರು. ಸ್ತ್ರೀಯರಲ್ಲಿ ಕಂಡುಬರುವ ವಾತ್ಸಲ್ಯ ಪ್ರೇಮ ಕರುಣೆ ಸ್ನೇಹ ಕೋಪ ಭಾವಗಳು ಪಂಚಭೂತಗಳಲ್ಲಿ ಒಂದಾದ ಭೂಮಿಯ ತತ್ವದಲ್ಲಿ ಕಾಣಲು ಸಾಧ್ಯವಾಗುತ್ತದೆ.

ಈ ಭೂಮಿಯ ತತ್ವದಲ್ಲಿ ನಿಶಬ್ದವಾಗಿ ಓಂಕಾರ ನಾದದ ಕಂಪನಗಳು ಪ್ರತಿಧ್ವನಿಸಲು ಪ್ರಾರಂಭಿಸುತ್ತವೆ. ಓಂಕಾರವನ್ನು ಉಚ್ಛರಿಸುವುದರಿಂದ ಈ ಪಿಂಡಾಂಡ ಮತ್ತು ಬ್ರಹ್ಮಾಂಡದಲ್ಲಿ ಕನಸು ಎಚ್ಚರ ದೀರ್ಘ ನಿದ್ರೆಗಳು ಉಂಟಾಗುತ್ತವೆ. ಈ ಸ್ವಭಾವ ಹೊಂದಿದವರು. ಧ್ಯಾನಸ್ತ ಮನಸ್ಥಿತಿಯಲ್ಲಿ ಲೀನವಾಗುತ್ತಾರೆ. ಹೀಗಾಗಿ ಆಧ್ಯಾತ್ಮಿಕ ಜ್ಞಾನವನ್ನು ಶುದ್ಧೀಕರಿಸುವ ಪವಿತ್ರವಾದ ಶಕ್ತಿಯನ್ನು ಕೊಡುವವಳು ಗಂಗೆಯಾಗಿದ್ದಾಳೆ. ಅಲ್ಲಮನ ಪ್ರಕಾರ ಗಂಗೆ ಸತ್ತವರ ಸದ್ಗತಿಗಾಗಿ ಮುಂಡೆಯಾಗುತ್ತಾಳೆ. ಆಕಾಶ ತತ್ವದಲ್ಲಿ ಗುಹೇಶ್ವರನನ್ನು ಕಾಣಬೇಕಾದರೆ ರೂಪವೇ ಇರದ ವಾಯುದೇವ ವಿಮಾನ ಹತ್ತಲೇಬೇಕು.

ಪ್ರಕೃತಿಯ ಪಂಚಭೂತಗಳ ಒಡೆಯರು ಸೂರ್ಯ ಚಂದ್ರರಾಗಿದ್ದಾರೆ. ಅಲ್ಲಮರ ಬೆಡಗಿನ ಭಾಷೆಯಲ್ಲಿ ಸೂರ್ಯ ಚಂದ್ರರಿಬ್ಬರೂ ಸಮುದ್ರದ ನೀರಿನಲ್ಲಿ ಅಸ್ತಮಿಸಿದರು. ನೀರಿಗಿಳಿದರು. ಅನುಭಾವಿಕ ನೆಲೆಯಲ್ಲಿ ಸೂರ್ಯನು ಜ್ಞಾನವಂತನು. ಪ್ರಖರವಾದ ಬೆಳಕನ್ನು ನೀಡುತ್ತಾನೆ. ವೈದಿಕರಲ್ಲಿ ಸೂರ್ಯನ ಉಪಾಸನೆ ಮಾಡಲು ಅರ್ಘ್ಯವನ್ನು ಬಿಡಬೇಕು. ಹೀಗೆ ಮಾಡುವುದರಿಂದ ಆಧ್ಯಾತ್ಮಿಕ ಚೈತನ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದರೆ ಅಲ್ಲಮನ ಆದರ್ಶ ಮತ್ತು ಭಾಷೆಯಲ್ಲಿ ಸೂರ್ಯ ಚಂದ್ರರು ನೀರಿಗೆ ಬಿದ್ದರು. ವೈದಿಕ ಧಾರ್ಮಿಕ ಸಾಹಿತ್ಯದಲ್ಲಿ ಸೂರ್ಯ ಚಂದ್ರರನ್ನು ನಾಯಕರನ್ನಾಗಿಸಿದರು. ಕಥೆ ಹೇಳಿದರು. ಆದರೆ ನಮ್ಮ ಶರಣ ಧರ್ಮದಲ್ಲಿ ಪ್ರತಿಭಟನೆಯ ಟೀಕೆಯಾಗಿ ಗುಹೇಶ್ವರನ ಭಾವದಲ್ಲಿ ಲೀನವಾಗುತ್ತದೆ. ಶಾಂತಿದೂತನಾದ ಚಂದಿರನು ಶಿವಜ್ಞಾನವನ್ನು ನೀಡುವವನು. ಪ್ರಭುವಿನ ಈ ವಚನದಲ್ಲಿ ಸೂರ್ಯ ಚಂದ್ರರು ಭೂಮಿ ತತ್ವದ ಪ್ರಸನ್ನತೆಯನ್ನು ಹೊಂದಿದವರಾಗಿದ್ದಾರೆ.

ವಾಸುದೇವ ಅಗ್ನಿ ತತ್ವವನ್ನು ಪಡೆದವನಾಗಿದ್ದಾನೆ. ಅಗ್ನಿ ಸಂಸ್ಕಾರಕ್ಕೆ ಸಿದ್ಧನಾದ ಎಂಬ ವಿಡಂಬನೆ ಸತ್ತ ಗುಹೇಶ್ವರನಿಗೆ ಅಗ್ನಿಯ ಮೂಲಕ ಪವಿತ್ರೀಕರಿಸುವುದಾಗಿದೆ. “ವಾಸುದೇವ ತಲೆಗೊಳ್ಳಿಯನಿರಿದ ಅಲ್ಲಿಂದತ್ತ ಗುಹೇಶ್ವರ ಸತ್ತನೆಂಬ ಸುದ್ದಿ” ಈ ವಚನ ಪುರಾಣ ಕಲ್ಪಿತ ಕಥೆಗಳನ್ನು ಬಿಡಿಯಾಗಿಸಿ ಕಿಡಿಯಾಗಿಸಿ. ಹೇಳಿದ ಕಲಾ ಪ್ರತಿಮೆಗಳಾಗಿವೆ. ಅಲ್ಲಮರ ಭಾಷೆಯಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಪವಿತ್ರಿಕರಿಸುವ ಹಠ ಒಂದೆಡೆಯಾದರೆ ಇನ್ನೊಂದೆಡೆ ಪುರಾಣ ಕಲ್ಪಿತ ಕಥಾ ಹಂದರಗಳಿಗೆ ಪ್ರತಿಭಟನೆ ಮಾಡುವುದಾಗಿದೆ.
ವಚನ ಧರ್ಮದ ವೈಚಾರಿಕ ಹೇಳಿಕೆಯನ್ನು ತನ್ನದಾಗಿಸಿಕೊಳ್ಳುವ ಆಶಯ ಇನ್ನೊಂದೆಡೆ ಇದೆ. ಹೀಗಾಗಿ ಅಲ್ಲಮರ ಆಧ್ಯಾತ್ಮದ ಸಮರದಲ್ಲಿ ಬೆಡಗಿನ ಭಾಷೆಗೆ ಜಯವಾಗುತ್ತದೆ.

ಡಾ.ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು.

Don`t copy text!