e- ಸುದ್ದಿ, ಮಸ್ಕಿ
ತಾಲೂಕಿನ ಬುದ್ದಿನ್ನಿ (ಎಸ್) ಗ್ರಾಮಕ್ಕೆ ಪ್ರೌಡ ಶಾಲೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಬುದ್ದಿನ್ನಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಗಾಂಧಿನಗರದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಅಶೋಕ ವೃತ್ತ, ಅಗಸಿ, ದೈವದಕಟ್ಟೆ, ಮೇನ್ ಬಜಾರ್, ಕನಕವೃತ್ತ, ವಾಲ್ಮೀಕಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ ಕಚೇರಿ ತಲುಪಿದರು.
ಎಸ್.ಡಿಎಂಸಿ ಅದ್ಯಕ್ಷ ನಾಗರಡ್ಡಿ ದೇವರಮನಿ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನೂಕೂಲವಾಗಲೆಂದು ಸರ್ಕಾರ 2017-18 ನೇ ಸಾಲಿನಲ್ಲಿ 1 ಕೋಟಿ 40 ಲಕ್ಷ ರೂ ಅನುದಾನ ನೀಡಿ ಶಾಲಾ ಕಟ್ಟಡ ಪೂರ್ಣಗೊಳಿಸಿದ್ದರೆ. ಆದರೆ ಶಾಲೆಯನ್ನು ಮಂಜೂರು ಮಾಡದಿರುವುದು ದುರಂತ. ವಿದ್ಯಾರ್ಥಿಗಳು ಹೈಸ್ಕೂಲ್ ಗಾಗಿ ಬೇರೆ ಬೇರೆ ಊರುಗಳಿಗೆ ಹೋಗುವಂಥ ದುಸ್ಥಿತಿ ಬಂದಿದೆ ಎಂದರು.
ಈ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಲಾಗಿದೆ. ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಣಯ ಮಾಡಲಾಗಿತ್ತು. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಾಸಕರು ಶಾಲೆ ಮಂಜೂರು ಮಾಡುವದಾಗಿ ಭರವಸೆ ನೀಡಿದ್ದರಿಂದ ಬಹಿಷ್ಕಾರ ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಇದುವರೆಗೂ ಶಾಲೆ ಮಂಜೂರು ಆಗದಿರುವದು ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸುವುದಾಗಿ ನಾಗರಡ್ಡಿ ದೇವರಮನಿ ತಿಳಿಸಿದರು.
ಪ್ರತಿಭಟನೆಯಲ್ಲಿ ಬುದ್ದಿನ್ನಿ.ಎಸ್. ಹೂವಿಭಾವಿ, ಮುದಬಾಳ್, ಸಾನಬಾಳ್, ಬೆಂಚಮರಡಿ, ಇಲಾಲಪುರ, ಹರ್ವಾಪೂರು ಸೇರಿದಂತೆ ಸುಮಾರು ಎಂಟುಕ್ಕೂ ಹೆಚ್ಚಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಪಂ ಸದಸ್ಯ ಮೌನೇಶ ಬುದ್ದನ್ನಿ, ಬಸವರಾಜ ಈಳಿಗೇರ್, ದೇವೇಂದ್ರಪ್ಪ, ಯಮನಪ್ಪ, ಶರಣಪ್ಪ, ರಡ್ಡೆಪ್ಪ, ಸಕರಪ್ಪ, ಸಂಗೀತಾ, ಸವೀತಾ, ಅಮೀನಾಭಿ, ಬಸವರಾಜ ಯಕ್ಕಿ, ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.