ವಚನ 18 ಅಕ್ಕನೆಡೆಗೆ- ವಾರದ ವಿಶೇಷ ವಚನ ವಿಶ್ಲೇಷಣೆ
ಪಾರದರ್ಶಕ ನಿಲುವಿನ ಅಕ್ಕ
ಎನ್ನಂತೆ ಪುಣ್ಯಂಗೈದವರುಂಟೆ?
ಎನ್ನಂತೆ ಭಾಗ್ಯಂಗೈದವರುಂಟೆ?
ಕಿನ್ನರನಂತಪ್ಪ ಸೋದರರೆನಗೆ
ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನಗೆ
ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ.
ಅಕ್ಕಮಹಾದೇವಿ ಕಲ್ಯಾಣದ ಶರಣರ ಸಾಂಗತ್ಯ ಬಯಸಿ ಬಂದ ಅಧ್ಯಾತ್ಮ ಜೀವಿ. ಅವಳು ಕಲ್ಯಾಣದ ಹೆಬ್ಬಾಗಿಲಿಗೆ ಬಂದು ನಿಂತಾಗ, ಎಲ್ಲಾ ಶರಣರಿಗೂ ಅಕ್ಕನ ಇರುವಿಕೆ ವೇದ್ಯವಾಗಿ ಸ್ವಾಗತಕ್ಕೆ ಅಣಿಯಾದ ಸಂದರ್ಭ. ಆಗ ಅಕ್ಕನನ್ನು ಪರೀಕ್ಷೆಗೆ ಒಡ್ಡಲು, ಕಿನ್ನರಯ್ಯ ಬರುತ್ತಾನೆ. ಅವನೊಂದಿಗೆ ಪ್ರಶ್ನೋತ್ತರಗಳು ನಡೆದು, ಅಕ್ಕನನ್ನು ಚಿನ್ನದಂತೆ ಒರೆಗೆ ಹಚ್ಚುವ ಪ್ರಕ್ರಿಯೆ.
ಅಕ್ಕ ಕಿನ್ನರಯ್ಯನಿಗೆ ಪ್ರತಿಕ್ರಿಯೆ ನೀಡುತ್ತ, ತಾನು ದೇಹಾತೀತವಾಗಿ ಇರುವ ಸ್ಥಿತಿಯನ್ನು ಮನವರಿಕೆ ಮಾಡುವ ರೀತಿ ಅನನ್ಯ. ತನ್ನ ಅಚಾರ, ವಿಚಾರಗಳನ್ನು ಸ್ಪಷ್ಟ ಪಡಿಸುವ ಸೂಕ್ಷ್ಮತೆ ಅಲೌಕಿಕ. ಒಂದು ವೇಳೆ ತನ್ನೊಳಗೆ ‘ಕಾಮ’ ಎನ್ನುವುದು ಅಪ್ಪಿತಪ್ಪಿ
ಉಳಿದುಕೊಂಡಿದ್ದರೆ, ಅದರ ಹಣೆಬರಹವನ್ನೇ ಅಳಿಸಿಬಿಡುವೆ ಎಂದು ಪ್ರಖರವಾದ ಸ್ಪಷ್ಟತೆಯಿಂದ ಭಾವತೀವ್ರವಾಗಿ ಉತ್ತರಿಸುತ್ತಾಳೆ.
‘ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ
ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ!’
ಭವದ ಎಲ್ಲಾ ಅನುಭವಗಳನ್ನು ಮೆಟ್ಟಿ ನಿಂತ ಅಕ್ಕ ಅನುಭಾವದಲ್ಲಿ ತೇಲುವ ಸೂಕ್ಷ್ಮ ಶರೀರಿ. ಅಂತಹ ಸ್ಥಿತಿಯ ಸಂತೃಪ್ತಿಯನ್ನು ಮೇಲಿನ ವಚನದಲ್ಲಿ ಕಾವ್ಯಾತ್ಮಕವಾಗಿ ಅನಾವರಣಗೊಳಿಸಿದ್ದಾಳೆ.
ಈ ಜಗತ್ತಿನಲ್ಲಿ ತನ್ನ ಹಾಗೆ ಪುಣ್ಯ ಮಾಡಿದವರು ಯಾರಾದರೂ ಇದ್ದಾರೆಯೆ? ತನ್ನಂತಹ ಭಾಗ್ಯವಂತರು ಯಾರಾದರೂ ಇದ್ದಾರೆಯೆ? ಎಂದು ಪ್ರಶ್ನೆ ಮಾಡುತ್ತ, ತನ್ನ ಪುಣ್ಯ ಮತ್ತು ಭಾಗ್ಯಕ್ಕೆ ಕಾರಣವೇನು ಎನ್ನುವುದನ್ನು ಸ್ಪಷ್ಟ ಪಡಿಸುತ್ತಾಳೆ. ಇಂದು ತನ್ನನ್ನು ಸ್ವಾಗತಿಸಲು ಬಂದಿರುವ ಕಿನ್ನರಯ್ಯನಂಥವರು ಅನೇಕ ಸೋದರರಿದ್ದಾರೆ. ಇದೊಂದೇ ಒಂದು ಜನ್ಮ ಅಷ್ಟೇ ಅಲ್ಲ ಏಳೇಳು ಜನ್ಮ ಪಡೆದು ಬಂದರೂ, ಶಿವಭಕ್ತರೇ ತನ್ನ ಬಂಧು ಬಳಗ. ಹಾಗೆಯೇ ಶ್ರೀಶೈಲದ ಚೆನ್ನಮಲ್ಲಿಕಾರ್ಜುನನೇ ತನ್ನೊಲವಿನ ಪತಿಯೆಂದು ಅಭಿಮಾನದಿಂದ ಹೇಳಿಕೊಳ್ಳುತ್ತಾಳೆ.
ಈ ರೀತಿಯಾಗಿ ಅಕ್ಕ ಕಲ್ಯಾಣದ ಹೆಬ್ಬಾಗಿಲಲ್ಲಿ ಕಿನ್ನರಯ್ಯನ ಮನ ಗೆದ್ದು, ಮುಂದೆ ಕಲ್ಯಾಣ ಪ್ರವೇಶ ಮಾಡಲು ಮುಂದಡಿ ಇಡುತ್ತಾಳೆ.
ಅಕ್ಕನ ಅನೇಕ ವಚನಗಳು ಅವಳ ದಾರಿ ಪಯಣ, ಜೀವ ಪಯಣ, ಅಧ್ಯಾತ್ಮ ಪಯಣದ ವಿವರಗಳನ್ನು ಹೊರ ಹಾಕುತ್ತವೆ.
ಉಡುತಡಿಯಿಂದ ಕಲ್ಯಾಣದವರೆಗೆ, ಕಲ್ಯಾಣದಿಂದ ಕದಳಿಯವರೆಗೆ ಕಾಣುವ ಮೇಲ್ನೋಟದ ಪಯಣ. ಆದರೆ ಅದರೊಳಗೆ ಅಕ್ಕನ ಬದುಕಿನ ಹೊಸ ಹೊಸ ಹೊಳವುಗಳು ಅಂತರ್ಗತ. ಅವಳ ವೈಯಕ್ತಿಕ ಜೀವ ಪಯಣದಲ್ಲಿ ಶರಣತ್ವದ ಪಯಣ. ಒಬ್ಬ ಮಹಿಳೆಯ ಅಸ್ಮಿತೆಯಲ್ಲಿ ಅಡಗಿದ ಅಪರೂಪದ ಔನತ್ಯದ ಪಯಣವನ್ನು ಕಾಣಬಹುದು.
ಅಕ್ಕನಿಗೊಂದು ದಿವ್ಯ ದೃಷ್ಟಿ ಇತ್ತು. ಆ ಬೆಳಕಿನ ಹುಡುಕಾಟದಲ್ಲಿ ತೊಡಗಿ, ಶರಣರ ಸಂಗ ಬಯಸಿ ಬರುತ್ತಾಳೆ. ತನ್ನ ಅಧ್ಯಾತ್ಮ ಮಾರ್ಗವ ಸ್ಪಷ್ಟಗೊಳಿಸಿಕೊಳ್ಳುವ ವಿಧಾನವದು. ತನಗೆ, ತನ್ನ ಗುರಿಗೆ, ಏನು ಅಗತ್ಯವಿದೆ? ಈ ವಿಷಯವಾಗಿ ಅಕ್ಕನಲ್ಲಿ ಸ್ಪಷ್ಟತೆ ಇದೆ. ಇದು ಅನುಕರಣೀಯ. ಅವಳ ದಿವ್ಯ ದೃಷ್ಟಿಗೆ ಎಲ್ಲವೂ ಸ್ವಚ್ಛ, ಸ್ಪಷ್ಟ, ಸಂತೃಪ್ತ. ಅದಕ್ಕಾಗಿಯೇ ಅಕ್ಕನ ವ್ಯಕ್ತಿತ್ವ ಪಾರದರ್ಶಕ.
ಅಕ್ಕಮಹಾದೇವಿಯಂತೆ ಸಾಮಾನ್ಯರು ಆಧ್ಯಾತ್ಮ ಸಾಧನೆ ಮಾಡಲು ಅಸಾಧ್ಯ, ನಿಜ. ಆದರೆ ಮಾಡುವ ಯಾವುದೇ ಕೆಲಸವಿರಲಿ, ಅದರಲ್ಲಿ ತನ್ಮಯತೆಯಿಂದ ಮುಳುಗಿ, ಗುರಿ ಸಾಧಿಸಿದರೂ ಸರಿ, ಅದು ಒಂದು ಮಟ್ಟದ ಪ್ರಯತ್ನ. ಅದನ್ನು ‘ಅಧ್ಯಾತ್ಮ’ ಎಂದು ಕರೆಯದಿದ್ದರೂ ‘ಧ್ಯಾನಸ್ಥ ಸ್ಥಿತಿ’ ಎಂದು ಮಾತ್ರ ಹೇಳಬಹುದು. ನಮ್ಮ ನಮ್ಮ ಕೆಲಸ, ಕಾರ್ಯಗಳಲ್ಲಿ ಅಂತಹ ಧ್ಯಾನಸ್ಥ ಸ್ಥಿತಿ ತಲುಪಲು ಮುಂದಾಗೋಣ…
ಸಿಕಾ