ಕೆಟ್ಟು ಪಟ್ಟಣ ಸೇರು ಮತ್ತು ಎಪ್ಪತ್ತರ ದಶಕದ ದುಷ್ಕಾಳದ ದುಗುಡಗಳು

ಕೆಟ್ಟು ಪಟ್ಟಣ ಸೇರು ಮತ್ತು ಎಪ್ಪತ್ತರ ದಶಕದ ದುಷ್ಕಾಳದ ದುಗುಡಗಳು

 

ಕೆಟ್ಟು ಪಟ್ಟಣ ಸೇರು ಎಂಬುದು ಹಳ್ಳಿಗಳಲ್ಲಿ ಮತ್ತೆ ಮತ್ತೆ ಕೇಳಿಬರುವ ಮತ್ತು ಯಾವತ್ತೂ ಚಾಲತಿಯಲ್ಲಿರುವ ಗಾದೆಮಾತು. ಅದರಲ್ಲೂ ವಿಶೇಷವಾಗಿ ಮದುವೆಯಾಗದ ಅಡನಾಡಿ ಹುಡುಗರ ವಿಷಯದಲ್ಲಿ ಪ್ರಸ್ತಾಪಗೊಳ್ಳುವ ಈ ಮಾತು ನಿತ್ಯ ಜನಜನಿತ. ಗ್ರಾಮಭಾರತದ ಊರೊಳಗಿನ ಉಡಾಳ ಹುಡುಗರ ಉಪದ್ವ್ಯಾಪಿತನವನ್ನು ಉಲ್ಲೇಖ ಮಾಡಿ ಹೇಳುವಂತಹ ಚರ್ವಿತ ಚರ್ವಣ ಮಾತುಗಳಿವು. ಹೀಗೆ ಹೇಳುವ ಮಾತುಗಳಲ್ಲೇ ನಮ್ಮ ಹಳ್ಳಿಗಳು ಸರಿಇಲ್ಲ, ಪಟ್ಟಣಗಳು ಉತ್ತಮ ಎನ್ನುವುದನ್ನು ಒಪ್ಪಿಕೊಂಡಂತಿದೆ. ಹಾಗೆ ಹೇಳುವ ಮೂಲಕ ಅಂತಹ ಪೋಕರಿ ಪೋರರು ಹಳ್ಳಿ ಊರುಗಳಲ್ಲಿ ಇರಬಾರದೆಂಬ ಅಪರೋಕ್ಷ ಸಂದೇಶವೇ ಇಂತಹ ಮಾತುಗಳ ಹಿಂದಿನ ಮತಿತಾರ್ಥ. ಆ ಮೂಲಕ ಯುವಕರು ಪಟ್ಟಣ ಸೇರಬೇಕೆಂಬ ಉಚಿತ ಸಂದೇಶ ರವಾನೆಯಾಗಿ ಬಿಡುತ್ತದೆ.

ದುರಂತವೆಂದರೆ ವರ್ತಮಾನದ ನಗರ, ಪಟ್ಟಣಗಳು ದುರಸ್ತಿ ಮಾಡದಷ್ಟು ಕೆಟ್ಟು ಕೆರ ಹಿಡಿದಿರುವ ಥರಾವರಿ ಕತೆಗಳನು ಬಣ್ಣಿಸಲಾಗದು. ಹಾಗೆಂದು ಹಳ್ಳಿಗಳು ಮಹಾಸಾಜೋಗ ಆಗಿವೆಯೆಂದು ಖಂಡಿತಾ ಹೇಳಲಾಗದು. ಮುಂಬಯಿ, ಬೆಂಗಳೂರಿನಂತಹ ಜಗತ್ ಪ್ರಸಿದ್ದ ಜಗತ್ತಿನ ಒಂದು ಗಲ್ಲಿಯಲ್ಲಿ ದೋಖೆಬಾಜಿ ಕೆಲಸ ಮಾಡಿ, ಅದೇ ಊರುಗಳ ಹತ್ತಾರು ಮೈಲಿ ದೂರದ ಮತ್ತೊಂದು ಗಲ್ಲಿಯಲ್ಲಿ ಗಪ್ಪ ಹೊಡೆದು ಪೊಗದಸ್ತಾಗಿ ಜೀವನ ಸಾಗಿಸಬಹುದು.

ಹಾಗೆಯೇ ಅದೇ ರಾಜಧಾನಿಗಳ ವಿಧಾನಸಭೆ, ವಿಧಾನಸೌಧ ಮತ್ತಿತರೆ ಆಯಕಟ್ಟಿನ ಜಾಗಗಳಲ್ಲಿನ ಕೆಲವರು ರಾಜಾರೋಷವಾಗಿ ಖತರ್ನಾಕ್ ಕೆಲಸಗಳನ್ನು ಮಾಡಿ ನೀಗಿಸಿಕೊಳ್ಳ ಬಹುದೆಂಬ ಸೊಕ್ಕಿನ ನಿರ್ಧಾರಕ್ಕೆ ಬಂದು ಬಿಟ್ಟಿರುತ್ತಾರೆ. ಹಾಗೆ ಮಾಡುವ ಅವರೆಲ್ಲರೂ ಜನಪ್ರತಿನಿಧಿಗಳೇ ಆಗಿರಬೇಕೆಂದೇನೂ ಇರುವುದಿಲ್ಲ. ಆದರೆ ಪ್ರತಿನಿಧಿಗಳಾಗಿರುವವರನ್ನು ಆವರಿಸಿಕೊಂಡಿರುವ ಈ ಬಗೆಯ ಬಿಗಿಮುಷ್ಠಿ ಬಿಳಿಲು ಬಂಧನಗಳೇ ಯದ್ವಾತದ್ವಾ ಬೆಳೆದಿರುತ್ತವೆ. ಹ್ಯಂಗ್ ಹ್ಯಂಗೋ ಗುದುಮುರಗಿ ಹಾಕುವ ಅವುಗಳ ಅಡಮುಟ್ಟು ಆಟಗಳು ಅಷ್ಟೇ ಭಯಂಕರವಾಗಿರುತ್ತವೆ.

ಜನಪ್ರತಿನಿಧಿಗಳ ಸುತ್ತಮುತ್ತ ಇರುವ ವಂದಿಮಾಗದರಿಗೆ ಪ್ರಭುತ್ವದ ಅಧಿಕಾರಶಕ್ತಿ ಮತ್ತು ಅದರ ಸಾಮರ್ಥ್ಯದ ಅಮಲಿನ ರುಚಿ ಹತ್ತಿರುತ್ತದೆ. ಅವರು ಆಯಾ ಕಾಲಘಟ್ಟದ ಆಳುವ ಪಕ್ಷಗಳ ವಶೀಕರಣ ವಿದ್ಯಾಭೂಷಣರು. ಎಡ ಬಲಗಳೆಂಬ ಭಿನ್ನ ಭೇದಗಳ ಅರಿವಲ್ಲ ಎರಡಿರುವುದಿಲ್ಲ. ಅದರಲ್ಲೂ ಸಾಂಸ್ಕೃತಿಕ ಲೋಕದ ಕೆಲವು ಸೋಗಲಾಡಿ ಕಿಲಾಡಿಗಳು ಯಾರಿಗೂ ಕ್ಯಾರೇ ಅನ್ನದಂತೆ ನುಂಗಿ ನೊಣೆಯುವಲ್ಲಿ ಮಹಾನಿಪುಣರೇ ಆಗಿರುತ್ತಾರೆ. ಆ ಕೆಲವರು ಅಕಸ್ಮಾತ್ತಾಗಿ ರಾಜಧಾನಿಗರಾಗಿದ್ದರಂತೂ ಮುಗಿದೇ ಹೋಯ್ತು. ಯಾಕೆಂದರೆ ಶಕ್ತಿಕೇಂದ್ರದಲ್ಲಿದ್ದುಕೊಂಡೇ ಅವರು ಎಲ್ಲ ಕಾಲಕ್ಕೂ ಎಲ್ಲಾ ಪಕ್ಷದ ಜನಪ್ರತಿನಿಧಿಗಳ ಒಳಹೊರಗನ್ನು ಅರಿತಿರುತ್ತಾರೆ. ಯಾರಿಗೆ ಏನೇನು ಆನಿಸಬೇಕೆನ್ನುವುದರಲ್ಲಿ ಅವರು “ಸ್ಯಾಂಟ್ರೋ” SON ಗಳನ್ನೇ ಮೀರಿಸುವ ಹೊಲಬುಗೇಡಿಗಳು. ಹಾಗೆಯೇ ಎಲ್ಲಾ ನಮೂನೆಯ ಸಮೂಹ ಮಾಧ್ಯಮಗಳನ್ನು ಮುಷ್ಟಿಯಲ್ಲಿ ಮಡಗಿ ಕೊಂಡಿರುತ್ತಾರೆ.

ಅಂಥವರ ದಟ್ಟ ಒಡನಾಟದ ಮಾಧ್ಯಮದ ಕೆಲವು ಸೋಗಲಾಡಿಗಳು ಅವರನ್ನೇ ಮೀರಿಸುವ ಮಹಾಬೆರಕಿಗಳು. ಹೆಬ್ಬೆಟ್ಟಿನ ಅಪ್ಪ ಅವ್ವಗಳಿಗೆ ಪತ್ರಕರ್ತರ ಪಟ್ಟಕಟ್ಟಿ ಅವರ ಹೆಸರಲ್ಲೂ ಸರಕಾರದ ಸೈಟುಗಳನ್ನು, ಮಕ್ಕಳಿಗೆ ಮೆಡಿಕಲ್ ಸೀಟುಗಳನ್ನು, ತಮಗೆ ಪ್ರಶಸ್ತಿ ಪುರಸ್ಕಾರಗಳನ್ನು ಹೊಡಕೊಳ್ಳುವ ಪೇಮೆಂಟ್ ಪಾಕಡಾಗಳು. ಹಾಗೆ ಹೊಡಕೊಂಡ ಸಣ್ಣದೊಂದು ಪ್ರಶಸ್ತಿಗೆ ನೊಬೆಲ್ ಪ್ರಶಸ್ತಿ ಪಡೆದ ಪ್ರಚಾರ ಗಿಟ್ಟಿಸಿಕೊಳ್ಳುವ ಪಾಷಂಡ ಪ್ರವೀಣರು. ಇವರು ಕೊಳಕು ರಾಜಕಾರಣಿಗಳಿಗಿಂತ ಮಹಾ ಕೊಳಕರು. ಭಲೇ ಭಲೇ ಮಂತ್ರಿಗಳನ್ನೇ ಯಾಮಾರಿಸುವ ಎಲ್ಲ ತಂತ್ರಗಾರಿಕೆಗಳನ್ನು ಕರತಲಾಮಲಕ ಮಾಡಿಕೊಂಡಿರುವವರು. ತಿರುಬೋಕಿತನದ ಸಕಲ ವಿದ್ಯೆಗಳ ಪಾರಂಗತರು. ಈ ಎಲ್ಲ ಸಂಕಲಿತ ಸಂಗತಿಗಳ ನಡಬರಕ ಹಳ್ಳಿಗರ “ಕೆಟ್ಟು ಪಟ್ಟಣ ಸೇರು” ಎಂಬ ಹುಕಿಯ ಮಾತುಗಳು ವರ್ತಮಾನದಲ್ಲಿ ಅರ್ಥ ಕಳಕೊಂಡಿವೆ. ಹಾಗೇನೇ ಹಳ್ಳಿಗಳು ಒಳ್ಳೆಯವು, ಪಟ್ಟಣಗಳು ಕೆಟ್ಟವು ಎನ್ನುವ ಬೋಳೆಗಾದೆಗಳು ಬರ್ಖಾಸ್ತುಗೊಂಡಿವೆ. ಅದೇಪ್ರಕಾರ ಪಟ್ಟಣಗಳು ಮಾನವೀಯತೆ ಮೈಗೂಡಿಸಿಕೊಂಡಿವೆ ಎಂಬುದು ಅಷ್ಟೇ ಬೊಗಳೆ ಭೋಂಗು.

 

ನಾನು ಚಿಕ್ಕವನಿದ್ದಾಗ ದೂರದ ಸೊಲ್ಲಾಪುರ ಪಟ್ಟಣದಿಂದ ಕೆಟ್ಟು ಓಡಿಬಂದಿದ್ದ ಕಿಲಾಡಿಯೊಬ್ಬ ಹಳ್ಳಿಸೇರಿ ಹಳ್ಳಿಯ ಬದುಕನ್ನೇ ಹಳ್ಳ ಹಿಡಿಸಿ ಬಿಟ್ಟಿದ್ದ. ಆ ಕುರಿತು ನಾನು ಈಗ್ಗೆ ನಾಲ್ಕು ದಶಕಗಳ ಹಿಂದೆಯೇ ಸ್ವಾರಸ್ಯಕರ ಕಥೆಯೊಂದನ್ನು ಹೆಸರಾಂತ ಮಾಸಿಕವೊಂದರಲ್ಲಿ ಬರೆದಿದ್ದೆ. ಅದು ಪ್ರತಿಭಟನೆಯ ರೂಪಕಾತ್ಮಕ ಸಾಹಿತ್ಯವೇ ಆಗಿತ್ತು. ಒಂದು ಹಳ್ಳಿಯ ಪತನಮುಖಿ ಒಳಹುನ್ನಾರಗಳು ನೆಲಧರ್ಮದ ಸಾಮಾಜಿಕ ಬದುಕಿನ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತಾದ ಕತೆ ಅದಾಗಿತ್ತು. ಆ ಕುರಿತು ಇನ್ನೊಂದು ಸಲ ಬರೆಯುವೆ. ಏಕೆಂದರೆ ಅದು ಒಂದು ಅಂಕಣಕ್ಕೆ ಮಿಕ್ಕುವ ವಸ್ತು ವಿಷಯ. ಹತ್ತಾರು ದುರಿತ ಕವಲುಗಳ ಕೆಟ್ಟಕಥನ. ಅದೆಲ್ಲ ಈಗ ಒತ್ತಟ್ಟಿಗಿರಲಿ.

ಆದರೆ ನನ್ನನ್ನು ಎಪ್ಪತ್ತರ ದಶಕದ ದುಷ್ಕಾಳದ ಘೋರ ದಿನಗಳು ಮತ್ತೆ ಮತ್ತೆ ಕಾಡ ತೊಡಗಿವೆ. ಕೆಟ್ಟು ಪಟ್ಟಣ ಸೇರುವ ಗಾದೆಗೆ ಸಂಬಂಧಿಸಿದಂತೆ ಆನುಷಂಗಿಕವಾಗಿ ಹೇಳಲೇ ಬೇಕಿದೆ. ಅವತ್ತು ನನ್ನೂರಿನ ಆತ್ಮಗಳೇ ಆಗಿದ್ದ ನಲವತ್ತಕ್ಕೂ ಹೆಚ್ಚು ಯುವಕರನ್ನು ಊರು ಬಿಟ್ಟು ಹೋಗುವಂತೆ ಮಾಡಿದ್ದು ದುಷ್ಕಾಳದ ಅಂದಿನ ಆ ದುರಿತಕಾಲ. ನಿರಂತರ ನಾಕೈದು ವರುಷಗಳಿಂದ ಮಳೆ ಬಾರದೇ ನಮಗೆಲ್ಲ ಮಳೆಯೆಂಬ ಪದವೇ ಮರೆತು ಹೋಗಿದ್ದಂತಹ ಮತ್ತು ಡೋಗಿ ಬರವನ್ನೇ ಮೀರಿಸುವ ಕೆಟ್ಟ ಬರಗಾಲ. ಯಾತಕ್ಕೆ ಮಳೆ ಹೋದವೋ ಶಿವ ಶಿವಾ ಲೋಕ ತಲ್ಲಣಿಸುತಾವೋ ಅನ್ನುವುದನ್ನು ನೇರವಾಗಿ ಬದುಕಿದವರು ನಾವು.

ಕುಡಿಯುವ ನೀರು ಕೂಡಾ ದೂರದ ಬೀದರ ಕಡೆಯ ಯಾವುದೋ ಊರಿನಿಂದ ಟ್ಯಾಂಕರ್ ಮೂಲಕ ಸರಬರಾಜು ಆಗುತ್ತಿತ್ತು. ರೇಷನ್ ಅಂಗಡಿ ಮುಂದೆ ಸರತಿ ಸಾಲಲ್ಲಿ ನಿಂತು ರೇಷನ್ ಪಡೆಯುವಂತೆ ಕುಟುಂಬಕ್ಕೆ ಒಂದೇ ಒಂದು ಕೊಡದಂತೆ ಕುಡಿಯುವ ನೀರು ಪಡೆದ ಘನಘೋರ ನೆನಪುಗಳು. ಜನರು ವರುಷಗಟ್ಟಲೇ ಜಳಕ ಮಾಡಿರಲಿಲ್ಲ. ಅಷ್ಟು ಪ್ರಮಾಣದಲ್ಲಿ ಕುಡಿಯುವ ನೀರಿಗೇ ತತ್ವಾರ.

ಮನುಷ್ಯರದು ಆ ಗತಿಯಾದರೆ ಮೂಕ ಪ್ರಾಣಿಗಳ ರೋದನ ಅಕ್ಷರ ಮಾತುಗಳಿಗೆ ನಿಲುಕದ್ದು. ಕುಡಿಯುವ ನೀರಿನದೇ ಈ ಕತೆಯಾದರೆ ಇನ್ನು ಉಣ್ಣುವ ಅನಾಜುಗಳ ಕತೆ ಹೇಳಬಾರದು. ಸರಕಾರದವರು ಕೊಡುವ ಕೆಂಪು ಜೋಳದ ಗಂಜಿಯ ಉಪ್ಪಿಗೂ ಗತಿ ಇರಲಿಲ್ಲ. ಕೆಲವರು ಉಣ್ಣುವುದನ್ನೇ ಮರೆತಿದ್ದರು. ಅಂಥವರಿಗೆ ಉಣ್ಣಲು ಬಾರದಂತೆ ಬಾಯಾಡಿಸುವ ಮೆಲುಕುಗಳು ಬಲಹೀನಗೊಂಡಿದ್ದವು. ಹೆಣ್ಣುಮಕ್ಕಳ ಕೈ ಬಳೆಗಳು ತೋಳುಗಳವರೆಗೆ ಸರಿಯುವಷ್ಟು ಅವರು ಸೊರಗಿ ಹೋಗಿದ್ದರು. ಊರು ತುಂಬಾ ಹುಡುಕಿದರೂ ಮುದುಕ ಮುದುಕಿಯರು ಮತ್ತು ಸಣ್ಣ ಸಣ್ಣ ಮಕ್ಕಳು ಮಾತ್ರ ನೋಡಲು ಸಿಗುತ್ತಿದ್ದರು. ತರುಣರು ಮತ್ತು ಮೈಯಲ್ಲಿ ಓಡಾಡುವ ಸ್ವಲ್ಪಾದರೂ ಶಕ್ತಿ ಉಳ್ಳವರು ಹೊಟ್ಟೆಪಾಡಿಗಾಗಿ ಊರು ಬಿಟ್ಟು ಹೋಗಿ ಬಿಟ್ಟಿದ್ದರು.

ನಮ್ಮನೆಯಲ್ಲಿ ಕಲ್ಯಾಣಿ ಎಂಬ ಆಕಳಿತ್ತು. ಅಕ್ಷರಶಃ ನೀರಿಲ್ಲದೇ ಅದು ನಲುಗಿ ನಲುಗಿ, ಅಂಬಾ ಎಂದು ಕೂಗಲು ಸಾಧ್ಯವಿರಲಿಲ್ಲ. ಅದರ ನಾಲಗೆಯ ಪಸೆಯೇ ಒಣಗಿ ಹೋಗಿತ್ತು. ಅದರ ಗಂಟಲ ದನಿ ಮತ್ತು ದೇಹದ ಬನಿ ಕಳೆದು ಹೋಗಿತ್ತು. ಒಂದಿನ ಕಲ್ಯಾಣಿ ದಪ್ಪಂತ ನೆಲಕ್ಕೆ ಬಿದ್ದು ಸತ್ತಾಗ ನೆಟೆ ಒಣಗಿದ ಔಡಲಗಿಡ ಲಟಕ್ಕಂತ ಮುರಿದು ನೆಲಕ್ಕೆ ಬಿದ್ದಂತಹ ಸಪ್ಪಳ ಕೇಳಿ ಬಂದಿತ್ತು. ಆಕಳು ಕಲ್ಯಾಣಿ ಸತ್ತಾಗ ನನ್ನವ್ವ ತನ್ನ ಒಡ ಹುಟ್ಟಿದವರು ಸತ್ತಾಗ ಅತ್ತಂತೆ ಅತ್ತ ನೆನಪು ನನ್ನ ಚಿತ್ತಭಿತ್ತಿಯಿಂದ ಇನ್ನೂ ಮಾಸಿ ಮರೆಯಾಗಿಲ್ಲ. ಆ ಮುಜೇತಿ ದನಕರುಗಳ ಕರುಣಾಜನಕ ಬದುಕಿನ ಕುರಿತೇ ಬೃಹತ್ ಕಾದಂಬರಿ ಬರೆಯುವಷ್ಟು ಘಟನೆಗಳು ನನ್ನ ಕಣ್ಮುಂದೆ ಹೂಬಾ ಹೂಬಾ ಜರುಗಿದವು. ಇದು ಕೇವಲ ನನ್ನೂರ ಕತೆಯಲ್ಲ. ಅಂದಿನ ಹೈದ್ರಾಬಾದ ಕರ್ನಾಟಕದ ಸಂಕಟವೇ ಆಗಿತ್ತು. ಅವತ್ತಿನ ದುಗುಡಗಳು ಇವತ್ತಿಗೂ ನನ್ನ ಮನಃಪಟಲದಿಂದ ಮರೆಯಾಗಿಲ್ಲ. ಆಗ ಜನಗಳು ತಮ್ಮ ಕೈ ಕಾಲುಗಳಲ್ಲಿ ಶಕ್ತಿ ಇರುವುದರೊಳಗೆ ಬದುಕಿ ಉಳಿಯಲು ಮುಂಬಯಿ ಕಡೆಗೆ ಗುಳೇ ಹೋದರು.

ಅದಕ್ಕೆಂದೇ ಕಲಬುರ್ಗಿಯಿಂದ ಮುಂಬಯಿಗೆ ಹೋಗುವ ಉಚಿತ ರೈಲುಗಾಡಿಯನ್ನೇ ಸರಕಾರ ವ್ಯವಸ್ಥೆ ಮಾಡಿತ್ತು. ಆ ರೈಲುಗಾಡಿಯನ್ನು “ಬರ್ಗಾಲ ಗಾಡಿ” ಅಂತಲೇ ಕರೆಯಲಾಗುತ್ತಿತ್ತು. ನಿತ್ಯವೂ ಬರ್ಗಾಲ ಗಾಡಿಗೆ ನೂಕು ನುಗ್ಗಲು. ದಿನವೂ ಸಾವಿರಾರು ಮಂದಿ ಮುಂಬಯಿಗೆ ಹೋಗುತ್ತಿದ್ದರು. ರೈಲುಗಾಡಿ ಸರಕು ಸಾಮಾನಿನಂತೆ ಮನುಷ್ಯರನ್ನು ತುಂಬಿ ಕೊಂಡೊಯ್ಯುತ್ತಿತ್ತು. ಹಾಗೆ ಬರ್ಗಾಲ ಗಾಡಿ ಹತ್ತಿ ಹೋದವರು ನನ್ನೂರಿನ ನಲವತ್ತಕ್ಕೂ ಹೆಚ್ಚು ಹದಿಹರೆಯದ ಹುಡುಗರು. ಅವರೇನು ಕೆಟ್ಟು ಪಟ್ಟಣ ಸೇರಬೇಕೆಂದು ಬರ್ಗಾಲ ಗಾಡಿ ಹತ್ತಿ ಹೋಗಲಿಲ್ಲ. ಅಕ್ಷರಶಃ ಉಪವಾಸ ತಾಳಲಾರದೇ ಹಸಿವು ನೀಗಿಸಿಕೊಳ್ಳಲು ಹೋದರು.

ಹಾಗೆ ಹೋದವರು ಹೊಳ್ಳಿ ಹಳ್ಳಿಗೆ ಬರಲೇ ಇಲ್ಲ. ಆ ಯುವಕರಲ್ಲಿ ಅನೇಕರು ಪ್ರತಿಭಾಶಾಲಿಗಳೇ ಇದ್ದರು. ಅವರಲ್ಲಿ ನನಗೆ ಕೆಲವರ ಹೆಸರುಗಳು ಪಕ್ಕಾ ದ್ಯಾಸದಲ್ಲಿ ಉಳಿದಿವೆ. ಮುಖ್ಯವಾಗಿ ಮಹಿಬೂಬ, ಸಿದ್ರಾಮ, ಶಿವಪ್ಪ, ಸಿರಿಮಂತ, ಭಗವಂತ, ಕಾಶೀಮ, ಮರೆಪ್ಪ … ಹೀಗೇ ಕುಂತು ಧೇನಿಸಿದರೆ ಇನ್ನಷ್ಟು ಹೆಸರುಗಳು ದೊರಕಬಹುದು.

ನನಗೆ ನೆನಪಿರುವಂತೆ ಮಹಿಬೂಬ ಆಗಿನ ಕಾಲದ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತಮ ದರ್ಜೆ ಪಡೆದು ಉತ್ತೀರ್ಣನಾಗಿದ್ದ. ಗಣಿತದಲ್ಲಿ ಮತ್ತು ಮೆಕಾನಿಕ್ ವಿದ್ಯೆಯಲ್ಲಿ ಮಹಾ ಬುದ್ಧಿವಂತ. ಅಷ್ಟೇ ಚುರುಕಾಗಿದ್ದ. ನಮಗೆಲ್ಲ ಮೂವತ್ತರವರೆಗೆ ಮಗ್ಗಿ ಬಾಯಿಪಾಠ ಮಾಡಿಸುತ್ತಿದ್ದ. ಅದೇ ಆಗ ನಮ್ಮೂರಿಗೆ ಹೊಸದಾಗಿ ತಂದಿದ್ದ ಕಿರ್ಲೋಸ್ಕರ್ ಕಂಪನಿಯ ಪಂಪ್ ಸೆಟ್ ಇಂಜಿನ್ ಕೆಟ್ಟಿತ್ತು. ಕೆಲವೇ ಕ್ಷಣಗಳಲ್ಲಿ ಇಂಜಿನ್ ಬಿಚ್ಚಿ ‘ರೀಫಿಟ್’ ಮಾಡಿ ಇಂಜಿನ್ ಚಾಲೂ ಮಾಡಿದ್ದ. ಹಾಗೆಯೇ ಅದೇ ಆಗ ಚಾಲ್ತಿಗೆ ಬಂದಿದ್ದ ಟೇಪ್ ರೆಕಾರ್ಡರ್ ಬಿಚ್ಚಿ ಜೋಡಿಸುವಲ್ಲಿ ಮಹಿಬೂಬನ ಕೈ ಚಳಕ ನಮಗೆಲ್ಲ ಮಹಾ ಸೋಜಿಗ ತರಿಸುತ್ತಿತ್ತು. ಅವನು ಹಿಂದಿ ಚಿತ್ರಗೀತೆಗಳನ್ನು ಸೊಗಸಾಗಿ ಹಾಡುತ್ತಿದ್ದ. ಶಾಯರಿಗಳನ್ನು ಸ್ವಾರಸ್ಯಕರವಾಗಿ ಹೇಳುತ್ತಿದ್ದ‌. ಇಷ್ಟೇ ಆಗಿದ್ರೆ ಹೋಗಲಿ ಬಿಡು ಅದೇನು ಮಹಾ ಅನಬಹುದಿತ್ತು‌.

ಅನುಭಾವದ ಹರಿಕಾರ ನಮ್ಮ ಕಡಕೋಳ ಮಡಿವಾಳಪ್ಪನ ತತ್ವಪದಗಳನ್ನು ಮಹಿಬೂಬ ಭಾಳಚೆಂದ ಹಾಡುತ್ತಿದ್ದ. ಭೀಮಾಶಂಕರ ಗವಿಯೊಳಗೆ ಸಾಧುಗಳ ಜತೆ ಸೇರಿ ಚಿಲುಮೆಯಲಿ ಬೆಳಕು ಮೂಡಿಸುತ್ತಿದ್ದ. ಸಿದ್ಧಪತ್ರಿ ಚಿಲುಮೆ ಸೇದಿದನೆಂದರೆ ಲಯಬದ್ಧವಾಗಿ ದಮಡಿ ನುಡಿಸಿ ಪದಗಳಿಗೆ ಅನುರಾಗ ಹುಟ್ಟಿಸುತ್ತಿದ್ದ. ಮಡಿವಾಳಪ್ಪನ ನೂರೆಂಟು ನಾಮಾವಳಿಗಳನ್ನು ಕಣ್ಮುಚ್ಚಿ ತಡವರಿಸದೇ ಹೇಳಿ ಚಿಕ್ಕವರಾದ ನಮಗಷ್ಟೇ ಅಲ್ಲ ದೊಡ್ಡವರಲ್ಲೂ ಅಚ್ಚರಿ ಹುಟ್ಟಿಸುತ್ತಿದ್ದ. ಆ ಎಲ್ಲ ನೆನಪುಗಳು ನನಗಿನ್ನೂ ಹಚ್ಚ ಹಸಿರಾಗಿವೆ. ಅಂಥ ಯುವಕ ಮಹಿಬೂಬ ಮತ್ತು ಅವನ ವಾರಗೆಯ ಅನೇಕರು ಅವತ್ತು ಬರಗಾಲಕ್ಕೆ ತತ್ತರಿಸಿ ಊರು ಬಿಟ್ಟು ಪಟ್ಟಣ ಸೇರಲು “ಬರ್ಗಾಲ ಗಾಡಿ” ಹತ್ತಿ ಹೋದವರು ಮತ್ತೆ ಮರಳಿ ಬರಲೇಇಲ್ಲ. ಆ ಕ್ರೂರ ಬರಗಾಲ ನಮ್ಮೂರ ಪ್ರತಿಭೆಗಳನ್ನು ಕೊಂಡೊಯ್ದ ಖಂಡುಗ ನೆನಪುಗಳು ನನ್ನನ್ನು ಮತ್ತೆ ಮತ್ತೆ ಕಾಡುತ್ತಲೇ ಇರುತ್ತವೆ.


ಮಲ್ಲಿಕಾರ್ಜುನ ಕಡಕೋಳ
9341010712

Don`t copy text!