ಸಂತಸಿರಿ
ಶುದ್ಧ ಸಿದ್ಧಿಯ ಬುದ್ಧ ಬೆಳಕು
ನಮ್ಮ ನಡುವೆಯೇ ಬೆಳಗಿತು
ಆಸೆ ಮೋಹ ದಾಹ ದರ್ಪವು
ಎಲ್ಲರೆದುರೇ ಸುಟ್ಟಿತು.
ಜ್ಞಾನ ಯೋಗ ಮಿಲನವಾಗಿ
ಕೂಡಲಸಂಗಮವಾಯಿತು
ಕೃಷ್ಣ ಪ್ರಭೆಯರು ತುಂಬಿ
ಹರಿಯಲು,ಭವದ ಕೊಳೆಯು
ತೊಳೆಯಿತು.
ಮುಗಿಲ ಮುಟ್ಟಿತು
ಮಲ್ಲಿಕಾರ್ಜುನರ ಶಿಖರವು
ಕಲಶಕಾಗಿ ಕಾಯುತ
ಹೊಂಗಳಸವಾದನು ಸಿದ್ಧೇಶ್ವರನೇ
ಜಗವ ಬೆರಗು ಗೊಳಿಸುತ.
ನಾಡಿನೆಲ್ಲೆಡೆ ಗಡಿಯ ಒಳ-ಹೊರಗೆ
ಪ್ರವಚನದ ಮಧುಮಳೆ ಸುರಿಯುತ
ಈ ಶಾಂತಯೋಗಿಯು ಎದುರಿಗಿರಲು
ಶಿಲೆಯಂಥ ಜೀವವೂ ಧ್ಯಾನಿಯಾಗುತ
ಬಂಧಿಯಾಗಬಾರದು ಬೋಧೆ ಪ್ರವಚನ
ಗುಡಿ ಮಠಗಳ ಅಂಗಳದೊಳು
ಬೀಳಬಾರದು ಬೋಧೆಗೈಯ್ವನು
ಸುಡುವ ಕಾಸಿನ ಬಾಣಲೆಯೊಳು
ಸಾವಿರದ ಚಂದ್ರನು ಕಂಡನುಂಡನು
ಈ ನೆಲದೊಳು ಇಂಥ ಬಾಳನು
ನಡೆನುಡಿಯಲಿ ಎರಡು ಇರದ
ಎಂಥ …..ದಿವ್ಯ ಬೆಳಕನು
ಆಶ್ರಮವೆಂಬುದು ಆಸರೆಗೆ ನೆಲೆಯು
ವಿಶ್ರಾಮವಿರದು ಜ್ಞಾನ ಯೋಗಕೆ
ಬೆಳೆಯದಿರಲಿ ಕಲ್ಲುಮಹಲು ಮುಗಿಲ ಮೇಲ ಮೇಲಕೆ
ಹಬ್ಬಿ ನಿಲ್ಲಲಿ ಹಸಿರ ಮರಗಳು ದೇವ ಜೀವರ ಸಲ್ಲಾಪಕೆ
ದೇಹವೆಂಬುದು ಸಹಜ ಕೆಡುವದು
ದೇಗುಲವಾಗದು ಜೀವವಳಿಯಲು
ದೇಹಗಳ್ಳರು ಕೊಳ್ಳೆಹೊಡೆವರು
ಬೂದಿಯಾಗಲಿ ಕೈಗೆ ಸಿಗದೊಲು
ವಚನ ಓದುವಿನಲ್ಲೇ ಕಂಡುದು
ವಿರಕ್ತಿ ಅರ್ಥದ ಮರ್ಮವು
ಈಗ ನಮ್ಮೊಳು ತುಂಬಿತಲ್ಲ
ಸರಳ ಸಂತನ ರೂಪದೊಳು
ಪೀಠಪಟ್ಟಗಳ ಹಂಗೇ ಇಲ್ಲ
ದೇವರನು ಬಿಟ್ಟ ಮಾತೇ ಇಲ್ಲ
ಪ್ರೀತಿಯನು ಬಿಟ್ಟ ನುಡಿಯೇ ಇಲ್ಲ
ವ್ಯೋಮ ಮೂರುತಿಯ ಕಂಡೆವಲ್ಲ
ನಮೋ ಗುರುವೇ,ಸಿದ್ಧ ಗುರುವೇ
ಶುದ್ಧ ಗುರುವೇ,ಬದ್ಧ ಗುರುವೇ
ಜಗದ ನಿದ್ದೆಯನಳಿಯಲು ನಿಲ್ಲದೇ
ಎದ್ದು ಬಾ ಗುರುವೇ ಎದ್ದು ಬಾ ಗುರುವೇ.
ಕೆ.ಶಶಿಕಾಂತ
ಲಿಂಗಸೂಗೂರ