ದೇವರಿಗೊಂದು ಪತ್ರ
ಆತ್ಮೀಯ ದೇವನೇ
ಹೇಗಿರುವೆ ಅಲ್ಲಿ ?
ಕುಶಲವೆಂದೆನಲು
ಏನಿಲ್ಲ ಇಲ್ಲಿ ||
ಯಾಂತ್ರಿಕ ಜೀವನಕೆ
ತೆರೆಬೀಳೊವರೆಗೆ
ಸುಖವುಂಡರೂ ಶಾಂತಿ
ನಿಲುಕಲ್ಲ ನಮಗೆ ||
ನಿನ್ನೂರಿನಲ್ಲಿ ಮಳೆ ಹೇಗೆ ?
ಬೆಳೆ ಹೇಗೆ ?
ಇಲ್ಲಂತೂ ಬಗೆ ಬಗೆಯ
ಧಗೆಧಗೆ ಧಗೆಧಗೆ ||
ಕೇಳಿದಳು
ನನ್ನಮ್ಮ ಭೂತಾಯಿ
ನಿನ್ನನಿಂದು
ಬರೆದು ಕೇಳೆಂದಳು
ಭುವಿಗೆ ನೀ ಬರುವುದು ಎಂದು? ||
ನನ್ನೂರ ಹಳ್ಳದಲಿ
ನೀರಿಲ್ಲ ನೆರಳಿಲ್ಲ
ಮನುಜರ ಮನಗಳಲಿ
ಶಾಂತಿ ನೆಮ್ಮದಿ ಇಲ್ಲ
ಕಳಿಸಬಾರದೆ ನಿನ್ನ
ಗಂಗೆಯನ್ನು
ಬರುತಲಿರಲಾ ತಾಯಿ
ಭುವಿಗೆ
ತಣಿಸುತಲಿರಲೀ
ನಮ್ಮ ಧರೆಯನ್ನು
ಉರಿಯುತಿಹ ಮನಗಳನ್ನು ||
ಕೊಚ್ಚಿಹೋಗಲಿ
ಮನದ
ಹೊಲಸೆಲ್ಲ ರಭಸದಲಿ
ಹೊಸ ನೀರು
ಹೊಸ ಬೆಳಕು
ಹೊಸ ಗಾಳಿ
ಹಸನಾದ ಬದುಕು ಬರಲಿ
ಎಲ್ಲರಲಿ ನೆಮ್ಮದಿಯ ನಗುವು ಇರಲಿ
ಅದ ನೋಡೆ ಸಾಕು
ಸಿರಿ ಬೇಡ ಸುಖ ಬೇಡ
ಬೇಡವೆನಗಾವ ಗರಿಯು
ಬಾಡಿ ಬೀಳುವ ಮುನ್ನ
ಸಿಗಲಿ ನೆಮ್ಮದಿಯು ||
– ಇಂತಿ ನಿನ್ನವನು
ಆದಪ್ಪ ಹೆಂಬಾ ಮಸ್ಕಿ
ಮನಮಿಡಿಯುವ ಕವಿತೆ ಸರ್….ಹೌದು ದೇವರು ಬರಬೇಕು ಯಾರದೋ ರೂಪದಲ್ಲಿ….