ಮಾವೂರದ ಯಲ್ಲಮ್ಮದೇವಿಯ ಮಹಿಮೆ…
ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ದಿನಾಂಕ 06.02.2023 ರಂದು ಸೋಮವಾರ ಸಾಯಂಕಾಲ ಹೂವಿನ ರಥೋತ್ಸವ ಜರುಗುವುದು.
ಯಲ್ಲಮ್ಮದೇವಿ ಕಲಿಯುಗದ ದುರ್ಗಾವತಾರ ವೆಂದು ಹೇಳಬಹುದು. ಕರ್ನಾಟಕದಲ್ಲಿ ಅನೇಕ ದೇವತೆಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದಲ್ಲಿ ಯಲ್ಲಮ್ಮ ದೇವಿಯ ದೇವಸ್ಥಾನಗಳು ಪ್ರತಿಯೊಂದು ಗ್ರಾಮದಲ್ಲಿ ಕಾಣಬಹುದು.
ಆ ತಾಯಿಯ ಶಕ್ತಿ ಎಲ್ಲಾ ಹರಡಿ ಬೇರೆ ಬೇರೆ ನಾಮಾಕಿಂತ ಹೆಸರುಗಳಿಂದ ಕರೆಯುವದು ವಾಡಿಕೆ. ಉದಾಹರಣೆಗೆ ಸವದತ್ತಿ ಯಲ್ಲಮ್ಮದೇವಿ ಉತ್ತರ ಕರ್ನಾಟಕ ದಲ್ಲಿ ದೊಡ್ಡ ಶಕ್ತಿ ಪೀಠವಾಗಿ ಬೆಳೆದಿದೆ. ಅದೇ ರಾಯಚೂರು ಜಿಲ್ಲೆಯಲ್ಲಿ ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಯಲ್ಲಮ್ಮ ದೇವಿ ಕೂಡಾ ಅಷ್ಟೇ ಪ್ರಸಿದ್ದಿಯಾಗಿ ನಮ್ಮ ಭಾಗದಲ್ಲಿ ಶಕ್ತಿ ಪೀಠ ವಾಗಿ ಬೆಳೆದು ನಿಂತಿದೆ. ಒಟ್ಟಾರೆಯಾಗಿ ಯಲ್ಲಮ್ಮ ಅವತಾರ ಕಲಿಯುಗದಲ್ಲಿ ಅಪಾರ ವೆಂದು ಹೇಳಬಹುದು.
ಅದಕ್ಕೆ ಪೂರಕವಾಗಿ ಹಿರೇದಿನ್ನಿ ಮಾವೂರದ ಯಲ್ಲಮ್ಮ ದೇವಿಯ ಶಕ್ತಿ ಮತ್ತು ಮಹಿಮೆ ಅಪಾರ.
ಹಿಂದೆ ನಮ್ಮೂರು ಬರಗಾಲ ಪೀಡಿತ ಪ್ರದೇಶವಾಗಿತ್ತು,ಸುಮಾರು 90 ವರ್ಷಗಳ ಹಿಂದೆ ನಮ್ಮೂರಿನ ಹಿರಿಯ ನಾಲ್ಕು ಜನ ಯಜಮಾನರು ಸೇರಿ ಸುಗ್ಗಿ ಸಲುವಾಗಿ ಪ್ರತಿವರ್ಷ ಮಾವುರ ಗ್ರಾಮಕ್ಕೆ ಹೋಗುತಿದ್ದರು. ಮಾವೂರು ಎಂಬಂದು ಬೆಳಗಾಂ ಜಿಲ್ಲೆಯ ಮತ್ತು ಮಹಾರಾಷ್ಟದ ನಡುವೆ ಇರುವ ಗಡಿ ಪ್ರದೇಶದಲ್ಲಿ ಬರುವ ಚಿಕ್ಕ ಗ್ರಾಮ. ತೆಲಗುನಲ್ಲಿ ಮಾವೂರು ಅಂದ್ರೆ ನಮ್ಮ ಊರು ಎಂದರ್ಥ.ಆ ಗ್ರಾಮ ದೇವತೆ ಯಲ್ಲಮ್ಮ ದೇವಿ ಅಲ್ಲಿ ಪ್ರತಿವರ್ಷ ಜಾತ್ರೆ ಬಹಳ ಅದ್ದೂರಿ ಯಾಗಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ನಮ್ಮೂರಿನ ಹಿರಿಯ ನಾಲ್ಕು ಜನ ಹಾಲುಮತದ ಯಜಮಾನರು ಆ ಜಾತ್ರೆಗೆ ತಪ್ಪದೆ ಹೋಗುತ್ತಿದ್ದರು. ಹೀಗೆ ಅನೇಕ ವರ್ಷಗಳು ಹೋಗಿ ಬರುವ ಸಂದರ್ಭದಲ್ಲಿ ಕೂಡಾ ಅವರಿಗೆ ದೇವಿಯ ಶಕ್ತಿ ಬಗ್ಗೆ ಕೊಂಡಾಡಿ ಊರ ಜನರಿಗೆಲ್ಲಾ ಹೇಳುತ್ತಾ ಖುಷಿಯಿಂದ ತಾಯಿಯ ಬಗ್ಗೆ ವರ್ಣನೆ ಮಾಡುತ್ತಾ ಮಾಡುತ್ತಾ ಇರುವ ಸಮಯದಲ್ಲಿ ನಾಲ್ಕು ಜನ ಹಿರಿಯ ಹಾಲುಮತದ ಯಜಮಾನರಲ್ಲಿ ಒಬ್ಬ ಯಜಮಾನರಿಗೆ ಆ ತಾಯಿಯ ದಿವ್ಯ ಶಕ್ತಿ ಗೋಚರಿಸಬೇಕು ಅಂತಾ ಆ ತಾಯಿಗೆ ಆಸೆ ಆಗಿರಬೇಕು, ಅವರ ಮುಗ್ದ ಭಕ್ತಿಗೆ ತಾಯಿ ಒಲಿದಿರಬೇಕು ಎಂಬಂದು ಪ್ರತೀತಿ.
ಆ ಕಾರಣಕ್ಕಾಗಿ ಮಾರನೇ ವರ್ಷದ ಜಾತ್ರೆಗೆ ಹೋಗಿ ವಾಪಸ್ಸು ಬರುವಾಗ ಆ ತಾಯಿ ಹಾವಿನ ರೂಪದಲ್ಲಿ ಅವರಿಗೆ ದರ್ಶನವಿತ್ತಳು ಆಗ ಅವರಿಗೆ ಭಯವಾಗಿ ಸ್ವಲ್ಪ ಗಾಬರಿಗೊಂಡು ಮುಂದೆ ಬಂದಾಗ ಮತ್ತೇ ಆ ತಾಯಿ ಇವರನ್ನು ಹಿಂಬಾಲಿಸಿದಳು ಇವರಿಗೆ ಗೊತ್ತಿಲ್ಲದ ಹಾಗೆಯೇ. ಮತ್ತೊಮ್ಮೆ ಅವರ ಚೀಲದಲ್ಲಿ ಒಂದು ಸುಂದರವಾದ ಕಾಯಿ ಯಾಗಿ ರೂಪಗೊಂಡಳು ಮತ್ತೇ ಅವರಿಗೆ ಭಯ ಪ್ರಾರಂಭವಾಗಿ ಅದನ್ನು ನೀರಿಗೆ ಎಸೆದರು. ಆದರೂ ಆ ಜಗನ್ಮಾತೆ ಇವರನ್ನು ಬಿಡಲಿಲ್ಲ ಕೊನೆಗೆ ಇವರ ಜಾತ್ರೆಯಲ್ಲಿ ಖರೀಸಿದ ಬುಟ್ಟಿಯಲ್ಲಿ( ಜಲ್ಲಿ )ಸುಂದರವಾದ ಕಲ್ಲಿನ ರೂಪದಲ್ಲಿ ಬಂದು ಕುಳಿತಳು.ಆ ಕಲ್ಲಿನ ಮೂರ್ತಿಯಲ್ಲಿ ರೂಪಗೊಂಡ ಆ ದೇವತೆ ಹೂವಿನಂತೆ ಹಗುರ ಕಲ್ಲಿನಂತೆ ಕಠಿಣವಾಗಿ ಅವರಿಗೆ ಗೋಚರಿಸುತ್ತ ಊರಿಗೆ ಪ್ರವೇಶ ಮಾಡಿದಳು.ಆ ನಾಲ್ಕು ಜನ ಹಿರಿಯ ಯಜಮಾನರಲ್ಲಿ ಒಂದು ಸಂದೇಹ ಬಂತು, ಇದನ್ನು ಯಾರು ಒಯ್ಯಬೇಕು ಇದನ್ನು ಎಲ್ಲಿ ಇಡಬೇಕು ಅಂತಾ ಗೊಂದಲ ಶುರುವಾಯಿತು. ಅದರಲ್ಲಿ ಒಬ್ಬ ಹಿರಿಯ ಯಜಮಾನ (ಈಗಿನ ಪೂಜಾರಿ ವಂಶದವರು )ಆಯಿತು ಏನೇ ಆಗ್ಲಿ ಆ ತಾಯಿ ನಮ್ಮಿಂದ ಬಂದಾಳ ಅಂದ್ರೆ ಏನೋ ಇದೆ ಬಂದಿದ್ದು ಬರಲಿ ನಾನು ಪೂಜೆ ಮಾಡ್ತೀನಿ ಅಂತಾ ಗಟ್ಟಿ ಧೈರ್ಯದಿಂದ ಆ ತಾಯಿಯ (ಕಲ್ಲು ರೂಪದಲ್ಲಿರುವ ಮೂರ್ತಿಯನ್ನು )ಮೂರ್ತಿಯನ್ನು ತೆಗಿದು ಒಂದು ಗುಣೆದಲ್ಲಿ (ಮಾಡಾ )ಇಟ್ಟರು.. ಅದೇ ಇವತ್ತಿನ ಕತೃ ಗದ್ದುಗೆ.. ಅಲ್ಲಿಂದ ಮಾವುರದ ಯಲ್ಲಮ್ಮ ದೇವಿಯ ಬಗ್ಗೆ ಜನ ಮಾತಾಡಿ ಕೊಳ್ಳೋದು ಮತ್ತೇ ಆಕೆಯ ಬಗ್ಗೆ ಮಾತಾಡಿದಷ್ಟು ಜನಗಳಿಗೆ ಶಕ್ತಿ ಬಂದು ಕುಣಿದು ಕುಪ್ಪಳಿಸುವಂತೆ ಮಾಡಿಬಿಟ್ಟಿತ್ತು ಅಲ್ಲದೇ ಜಾನುವಾರಗಳು ಹೆಚ್ಚಾದವು, ಮಳೆ -ಬೆಳೆ ಉತ್ತಮವಾಗತ್ತಿತ್ತು ಒಟ್ಟಿನಲ್ಲಿ ನಮ್ಮೂರು ವಾತಾವರಣ ಸದಾ ಹಬ್ಬದ ವಾತಾವರಣದಂತೆ ಸೃಷ್ಟಿ ಮಾಡಿದಳು. ಮುಂದೆ ಜನ ಸಾಲುಗಟ್ಟಿ ಮಂಗಳವಾರ ಮತ್ತು ಶುಕ್ರವಾರ ಆ ದೇವಿಗೆ ದೀಪ ಹಚ್ಚುವದನ್ನು ಮತ್ತು ದೇವಿಯ ಬಗ್ಗೆ ಹಾಡುವದನ್ನು ರೂಢಿ ಮಾಡಿಕೊಂಡರು.. ನಮ್ಮೂರಿಂದ 5 ಕಿಲೋ ಮೀಟರ್ ದೂರದಲ್ಲಿ ಇರುವ ಬಾಗಲವಾಡ ಜನರು ಬಹಳ ಭಕ್ತಿಯಿಂದ ಈ ತಾಯಿಯ ಸೇವೆ ಮಾಡಲು ಸಿದ್ದರಾದರು. ತದ ನಂತರ ನಮ್ಮೂರಿನ ಎಲ್ಲಾ ವರ್ಗದ ಜನ ಸೇರಿ ಹಾಲುಮತದ ಪೂಜಾರಿಯವರು,ಊರ ಗೌಡ, ಸ್ವಾಮಿಗಳು, ತಳವಾರ್ ಕುಲಕರ್ಣಿ ಹೀಗೆ ಮುಖಂಡರ ಸೇರಿ ತಾಯಿಗೆ ಗುಡಿ ಕಟ್ಟಲು ತಯ್ಯಾರ ಮಾಡಿದರು.. ಅಲ್ಲಿವರೆಗೆ ಊರ ಹಿರಿಯರು ಮೊದಲು ಮಾಂಸ ತಿನ್ನುತ್ತಿದ್ದರು, ಕೆಲವರು ಭಟ್ಟಿ ಸಾರಾಯಿ ಕುಡಿಯುತ್ತಿದ್ದರು. ಯಾವಾಗ ದೇವಿ ನಮ್ಮೂರ ಪ್ರವೇಶ ಮಾಡಿದಾಳೋ ಆಗ ಮೊದಲಿಗೆ ಊರಿಗೆ ಹಿರಿಯರಿಗೆ ಅವರಿಗೆ ಅರಿವಿಲ್ಲದ ಹಾಗೆಯೇ ಬದಲಾವಣೆ ಮಾಡಿ ಅವರೆಲ್ಲರೂ ಕುಡಿಯುವದನ್ನು ತಿನ್ನುವದನ್ನು ಬಿಟ್ಟರು. ನಂತರ ದೇವಿಯ ಗರ್ಭ ಗುಡಿ ಕಟ್ಟಿಸಬೇಕು ಅಂತಾ ನಿರ್ಧಾರ ಮಾಡಿ ಸುತ್ತಾ ಮುತ್ತಾ ಇರುವ ಹಳ್ಳಿಗಳಿಂದ ಬರುವ ಜನರು ಸೇರಿ ಸಣ್ಣ ಪ್ರಮಾಣದಲ್ಲಿ ದೇವಸ್ಥಾನ ನಿರ್ಮಿಸಿದರು.. ಈ ದೇವಸ್ಥಾನ ನಿರ್ಮಿಸುವಾಗ ಕೆಲವರು ಜಾತಿ ಕಲಹ ಉಂಟಾಗಿ ಕುಹುಕ ಮಾತುಗಳನ್ನಾಡಿ ಹಾಲುಮತದ ಜನರಿಗೆ ಸ್ವಲ್ಪ ಅವಮಾನ ಮಾಡಿದರು, ಆಗ ಸ್ವತ: ರಾತ್ರಿ ಹೊತ್ತಲ್ಲಿ ಪೂಜಾರಿಗೆ ಕನಸಲ್ಲಿ ಬಂದು ಹೇ ಪೂಜಾರಿಯಪ್ಪ ನಾನು ನಿನ್ನ ನಂಬಿ ಈ ಊರಿಗೆ ಬಂದಿನಿ,ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ನಾನು ಸದಾ ನಿನ್ನ ಮನೆಯಲ್ಲಿ ಇರೋದು ನೀನೆ ಪೂಜೆ ಮಾಡಬೇಕು ಮುಂದೆ ಕೂಡಾ ನಿಮ್ಮ ಮನೆಯವರು ಪೂಜಾ ಮಾಡಬೇಕು ಇದು ನನ್ನ ವಚನ. ನೀನು ತಿಂದು ಕುಡಿದು ಪೂಜಿಸುದರೂ ಪರವಾಗಿಲ್ಲ ನಾನು ಸಂತೂಷ್ಟಳಾ ಗುತ್ತೇನೆ ನೀನು ಚಿಂತೆ ಮಾಡಬೇಡ ಮಗನೆ ನಿನ್ನ ಹಿಂದೆ ನಾನು ಸದಾ ಕಾಯುವೆ ನಿನ್ನ ವಿರುದ್ಧ ಪಿತೂರಿ ಮಾಡುವವರನ್ನು ನಾನು ನೋಡಿಕೊಳ್ಳುತ್ತೇನೆ ಇದು ನನ್ನ ಮಾತು ಅಂತಾ ಹೇಳಿ ತಟ್ಟನೆ ಮಾಯವಾದಳು..
ಆಗ ಪೂಜಾರಿಯಪ್ಪ ಬೆಳಿಗ್ಗೆ ಎದ್ದು ತಮ್ಮ ಮನೆಯ ಎಲ್ಲರಿಗೂ ಹೇಳಿದ ನಂತರ ಎಲ್ಲರೂ ಇನ್ನೂ ಮೇಲೆ ತಾಯಿಯ ಸೇವೆ ಮಾಡೋಣ ಇದು ನಮ್ಮ ಭಾಗ್ಯ ಎಂದು ತಿಳಿದು ಪ್ರತಿನಿತ್ಯ ದೇವಿಯ ಭಜನೆ ಮಾಡುತ್ತಾ ಗುಡಿಯನ್ನು ನಿರ್ಮಿಸಿದರು. (ಆ ಮನೆಯವರು ಇಂದಿಗೂ ಪೂಜಾಗೈಯುತ್ತಿದ್ದಾರೆ )ಮುಂದೆ ವರ್ಷ ಕಳೆದಂತೆ ಊರಿನ ಕಳೆ ಬದಲಾಗುತ್ತಾ ನಮ್ಮೂರಿನ ಮತ್ತೇ ನಮ್ಮೂರು ಸುತ್ತಾ ಮುತ್ತಲಿನ ಊರುಗಳಿಂದ ಭಕ್ತರು ಸೇವೆ ಮಾಡಲು ಹರಕೆ ತೀರಿಸಲು ಸಿದ್ದರಾದರು… ಮುಂದೆ ಇದೆ ಜನ ನಮ್ಮೂರಲ್ಲಿ ಜಾತ್ರೆ ಮಾಡಬೇಕು, ಅಮ್ಮಾನಾ ತೇರು ನೋಡಬೇಕು ಅಂತಾ ತಿಳಿದು ಚರ್ಚೆ ಮಾಡಿದ್ರು ಆಗ ಊರ ಹಿರಿಯರು ಮತ್ತು ಸ್ವಾಮಿಗಳನ್ನು ಸೇರಿಸಿ ಒಂದು ದಿನ ನಿಗದಿ ಮಾಡಬೇಕು ಅಂತಾ ಒಮ್ಮತದಿಂದ ಒಪ್ಪಿ ಯಲ್ಲಮ್ಮಮ್ಮನ ಹುಣ್ಣಿವೆ ಅಂದ್ರೆ ಅದು ಭಾರತ ಹುಣ್ಣಿಮೆಯ ದಿನ ನಾವೆಲ್ಲರೂ ಸೇರಿ ತಾಯಿಯ ಜಾತ್ರೆ ಮಾಡೋಣ ಜೊತೆಯಲ್ಲಿ ಮನೆಯ ಹಿರಿಯರನ್ನು ಅವತ್ತೇ ಮಾಡೋಣ ಎಂದು ನಿರ್ಧಾರ ಮಾಡಿ ಪ್ರತಿವರ್ಷ ಫೆಬ್ರವರಿ ಯಲ್ಲಿ ಬರುವ ಭಾರತ ಹುಣ್ಣಿಮೆಯ ಮರುದಿನ ಜಾತ್ರೆ ನಡೆದು ಬರುತ್ತಾ ಇದೆ. ಹೀಗೆ ಕೆಲವು ವರ್ಷಗಳು ಗತಿಸಿದ ನಂತರ ಪೂಜಾರಿಯಪ್ಪ ಲಿಂಗಕ್ಯರಾದಾಗ ಮುಂದೆ ಪೂಜಾ ಮಾಡಲು ಅವರ ಮನೆಯಲ್ಲಿ ಹಿರಿಯ ಮಗನನ್ನು ನೇಮಕ ಮಾಡಿದರು.. ಆಗ ಕೇವಲ ನಾಲ್ಕು ಮನೆಗಳು ಇದ್ದವು, ಇವತ್ತು ಅವೆಲ್ಲಾ ಬೇರೆ ಬೇರೆ ಆಗಿ ಇವತ್ತು 16 ಮನೆತನ ಗಳು ಆಗಿ ಪ್ರತಿವರ್ಷದಂತೆ ಒಬ್ಬೊಬ್ಬರಿಗೆ ಪೂಜಾ ಕೈಂಕರ್ಯ ನಡಿದಿದೆ. ಹೀಗೆ ಹತ್ತು ಹಲವು ವರ್ಷಗಳು ಕಳೆದು ಹೋಗಿ ತಾಯಿಯ ಸೇವೆ ಮಾಡುತ್ತಾ ಇರುವಾಗ ಗಾಳಿ (ದೆವ್ವ )ಜ್ವರ ಯಾವುದೇ ಕಾಯಿಲೆ ಬಂದು ಬಳಲುತ್ತಿರುವಾಗ ಜನಗಳು ನಿಷ್ಠೆ ಯಿಂದ ತಾಯಿಯ ಹೆಸರು ಹೇಳಿ ಭಂಡಾರ ಹಚ್ಚಿದ್ರೆ ಸಾಕು ಎಲ್ಲವೂ ಮಾಯವಾಗಿ ಗುಣಮುಖರಾಗುತ್ತಿದ್ದರು ಇದು ದೇವಿಯ ಒಂದು ಪವಾಡ. ಈಗಲೂ ಇದು ನಡಿದಿದೆ
ಪ್ರತಿನಿತ್ಯ ಎದ್ದು ಬಳಿಕ ಆಕೆಯ ಹೆಸರಿನ ಮೇಲೆ ಹಣೆ ಮೇಲೆ ಭಂಡಾರ ಹಚ್ಚಿದರೆ ಸಾಕು ಜಯ ಖಂಡಿತಾ. ಮಾವುರದ ಯಲ್ಲಮ್ಮದೇವಿ ಹಿರೇದಿನ್ನಿ ಗ್ರಾಮಕ್ಕೆ ಸೀಮಿತವಾಗಿರದೆ ಅನೇಕ ಕಡೆ ತನ್ನ ಶಕ್ತಿಯನ್ನು ತೋರಿಸಿ ಬಂದ ಭಕ್ತರಿಗೆ ಬವಣೆಯನ್ನು ನೀಗಿಸಿ ಸುಖ ಶಾಂತಿ ಸಮಾಧಾನ ನೀಡುವ ಭಾಗ್ಯದೇವತೆ ಎಂದ್ರೆ ತಪ್ಪಲ್ಲ..ಹೀಗೆ ಜಗನ್ಮಾತೆಯಾದ ಯಲ್ಲಮ್ಮದೇವಿ ಒಂದು ದಿನ ರಾತ್ರಿ ಹೊತ್ತಲ್ಲಿ ಪೂಜಾರಿಗೆ ಕನಸಲ್ಲಿ ಬಂದು ಹೀಗೆ ಹೇಳಿದಳು, ಲೋ ಮಗನೇ ನೀವೂ ಜಾತ್ರೆ ಮಾಡುವಾಗ ನನಗೆ ಮತ್ತು ನನ್ನ ಜೊತೆಗೆ ನನ್ನ ತಂಗಿಯರಾದ ಮಾಯಮ್ಮ ಮರಿಯಮ್ಮ ದೇವಿಯ ಗಂಗೆ ಸ್ನಾನ ಮಾಡಿಸಿ ನಾವು ಮತ್ತಷ್ಟು ಶಕ್ತಿವಂತರಾಗಿ ನಿಮ್ಮನ್ನು ಉದ್ದಾರ ಮಾಡ್ತೀವಿ ಅಂದ್ಲು ಆಗ ಪೂಜಾರಿ ಬೆಳಿಗ್ಗೆ ಎದ್ದು ಈ ವಿಷಯ ಊರ ಮಂದಿಗೆ ತಿಳಿಸಿದ, ಆಗ ಪಟೇಲ್ ಕುಲಕರ್ಣಿ ತಳವಾರ ಸೇರಿ ಆಯಿತು ಪ್ರತಿವರ್ಷ ಗಂಗೆ ಸ್ನಾನ ಅಂದ್ರೆ ಪಲ್ಲಕ್ಕಿ ಉತ್ಸವದೊಂದಿಗೆ ಊರ ಹೊರಗಿರುವ ಬಾವಿಯಲ್ಲಿ ಸ್ನಾನ ಮಾಡಿಸಿ ಪೂಜಾ ಮಾಡಿ ಮುತ್ತೈದೆಯರ ಕುಂಭದೊಂದಿಗೆ ಜಾತ್ರೆ ಮಾಡೋಣ ಅಂತಾ ಒಪ್ಪಿ ಸುಮಾರು ವರ್ಷಗಳ ಕಾಲ ಹೀಗೆ ಜಾತ್ರೆ ನಡೆಯಿತು. ಮುಂದೆ ಹತ್ತಾರು ವರ್ಷಗಳು ಗತಿಸಿದಾಗ ಅಂಕಲಿ ಮಠದ ಶ್ರೀಗಳು ಊಟಕೂರಿನ ಶರಣರ ಸಮ್ಮುಖದಲ್ಲಿ ಮತ್ತು ಹಲವು ಹಿರಿಯರ ಸಾನಿಧ್ಯದಲ್ಲಿ ಪ್ರತಿವರ್ಷ ಜರುಗುವ ಜಾತ್ರೆಯಲ್ಲಿ ಭಕ್ತರ ಅಪ್ಪಣೆ ಮೇರೆಗೆ ಮತ್ತು ಅವರ ಸಾಮರ್ಥ್ಯನುಸಾರವಾಗಿ ಯಲ್ಲಮ್ಮದೇವಿಯನ್ನು ಮತ್ತು ಮಾಯಮ್ಮ ಮರಿಯಮ್ಮ ದೇವಿಯರನ್ನು ಒಳಗೊಂಡಂತೆ ಪಲ್ಲಕ್ಕಿ ಉತ್ಸವದೊಂದಿಗೆ ಒಂದು ವರ್ಷ ಗಂಗಾ ಸ್ನಾನಕ್ಕೆ ಚಿಕಲ್ಪಿರ್ವಿ (ತುಂಗಾ ಭದ್ರ ನದಿ )ನದಿಗೆ ಹೋದರೆ ಮತ್ತೊಂದು ವರ್ಷ ಹಿರೇ ಹೊಳೆ (ಕೃಷ್ಣ ಹೊಳೆ ) ದೇವದುರ್ಗ ತಾಲೂಕಿನ ಲಿಂಗದಹಳ್ಳಿ ಗೆ ಸ್ನಾನಕ್ಕೆ ಅನೇಕ ಭಕ್ತರನ್ನು ಕರೆದುಕೊಂಡು ಅಲ್ಲಲ್ಲಿ ಪ್ರಸಾದವ್ಯವಸ್ಥೆ, ಅನ್ನ ದಾಸೋಹ, ಭಕ್ತಿ ಸೇವೆ ಮಾಡಿಸಿಕೊಂಡು ಸುಮಾರು 10 ಸಾವಿರ ಜನರ ಸಮೂಹದೊಂದಿಗೆ ನೂರಾರು ಟ್ರ್ಯಾಕ್ಟರ್, ಬಂಡಿ,ಸೈಕಲ್ ಮೋಟಾರ್ ವಾಹನಗಳು ದಾರಿಯುದ್ಧಕ್ಕೂ ಸಾಗಿ ದೇವಿಯ ಪಲ್ಲಕ್ಕಿಯಲ್ಲಿ ಮೆರೆಯುತ್ತಾ ಬಂದ ಭಕ್ತರನ್ನು ಹರಸಿ ಹಾರೈಸುತ್ತಾ ಆಶೀರ್ವಾದ ನೀಡಿ, ಭೂತ ಪ್ರೇತಗಳು ಓಡಿಸಿ, ಸಂತಾನವಿಲ್ಲದವರಿಗೆ ಸಂತಾನ ಭಾಗ್ಯ ನೀಡಿ, ಹಸಿದವರಿಗೆ ಅನ್ನ ಆಶ್ರಯ, ಶಾಂತಿ ನೆಮ್ಮದಿ ಕರುಣಿಸಿದ ಮಹಾತಾಯಿ ಯಲ್ಲಮ್ಮದೇವಿ ಎಂದ್ರೆ ತಪ್ಪಲ್ಲ.ಭಂಡಾರದಿಂದ ಭವರೋಗ ಕಳೆದಾಕೆ, ಬಂಧನವ ಬಿಡಿಸಿದಾಕೆ, ನೊಂದವರಿಗೆ ಬೆಂಗಾವಲು ಆಗಿ,ಇಂದಿಗೂ ತನ್ನ ಶಕ್ತಿಯಿಂದ ಬಂದ ಭಕ್ತರಿಗೆ ಬೇಡಿದ್ದದನ್ನು ಕೊಡುವ ಮಹಾತಾಯಿ ಈ ಮಾವೂರದ ಯಲ್ಲಮ್ಮದೇವಿ ಅಂದ್ರೆ ತಪ್ಪಲ್ಲ.
ಈಕೆಯ ಶಕ್ತಿ ಅಪಾರ, ಅಗಮ್ಯ ಅನುಪಮವಾದದ್ದು.ಈಕೆಯ ಶಕ್ತಿಯನ್ನು ಅರಿಯಬೇಕಾದ್ರೆ ನಾವೂ ಲಿಂಗದಹಳ್ಳಿಯಲ್ಲಿ ಒಂದು ಸುಂದರವಾದ ಗಿಡದಲ್ಲಿ ಒಡಮೂಡಿ ತನ್ನ ಶಕ್ತಿಯನ್ನು ಮೆರೆದಿದ್ದಾಳೆ.ಇದನ್ನು ನಾವೂ ನೋಡಬಹುದು.ಬರೀ ಯಲ್ಲಮ್ಮ ಅಂದ್ರೆ ಸಾಕು ಆ ತಾಯಿಗೆ ಮಕ್ಕಳು ಕರೆದಷ್ಟು ಖುಷಿಯಾಗಿ ಏನು ಬೇಕು ಮಗನೇ ಎಂದು ಬರುವ ಮಹಾಶಕ್ತಿ ಸ್ವರೂಪಳೆ ಈ ಎಲ್ಲಮ್ಮ ದೇವಿ. ಹೀಗೆ ತಾಯಿಯ ಬಣ್ಣನೆ ಮಾಡಲು ಪದಗಳು ಸಾಲದು, ಆಕೆಯ ಮಹಿಮೆ ಜಗದಗಲ, ಮಿಗೆಯಗಲ ಎನ್ನುವಂತಿದೆ. ಇಂದಿಗೂ ಈ ತಾಯಿಯ ಜಾತ್ರೆ ನಿಮಿತ್ಯ ನಮ್ಮೂರಲ್ಲಿ ಮೊದಲಿಗೆ ಬಯಲು ಆಟ , ನಾಟಕ ಆಡುತ್ತಿದ್ದರು ಇತ್ತೀಚಿಗೆ ಅದು ಮಾಯವಾಗಿದೆ, ಈವಾಗ 2000 ಇಸಿವಿಯಿಂದ ಅಧ್ಯಾತ್ಮಿಕ ಪ್ರಜ್ಞೆ ಮೂಡಲಿ ಎಂಬ ಉದ್ದೇಶದಿಂದ ಅಂಕಲಿ ಮಠದ ತಾತನವರು, ಊಟಕನೂರಿನ ಶ್ರೀಗಳು ಮತ್ತು ಲಿಂಗೈಕ್ಯ ಗೌಡನಭಾವಿ ಶ್ರೀಗಳು ಇವರ ನೇತೃತ್ವದಲ್ಲಿ ಪುರಾಣ ಆರಂಭ ವಾಯಿತು. ಪ್ರತಿವರ್ಷ ಒಬ್ಬೊಬ್ಬರ ಶರಣರ ಚರಿತ್ರೆಯನ್ನು ಹೇಳುವದರ ಮೂಲಕ ನಮ್ಮೂರು ಆಧ್ಯಾತ್ಮಿಕ ಕೇಂದ್ರವಾಗಿ ಮಾರ್ಪಟ್ಟು ಇವತ್ತಿಗೂ 23 ವರ್ಷಗಳಿಂದ ಪುರಾಣ ನಡೆದು ಬಂದಿದ್ದು ಆ ತಾಯಿಯ ಸೇವೆ ಎಂದು ನಮ್ಮೂರಿನ ಎಲ್ಲಾ ಜನರು ತನು ಮನ ಧನದಿಂದ ಸೇವೆ ಮಾಡುತ್ತಾ ತಾಯಿಯ ಕೃಪೆಗೆ ಪಾತ್ರರಾಗಿದ್ದಾರೆ..ಸುತ್ತಾ ಮುತ್ತಲಿನ ಎಲ್ಲಾ ಹಳ್ಳಿಗಳ ಭಕ್ತರ ಸಮೂಹದೊಂದಿಗೆ ಹಿರೇದಿನ್ನಿ ಗ್ರಾಮದಲ್ಲಿ ಮಾವುರದ ಯಲ್ಲಮ್ಮದೇವಿಯ ಜಾತ್ರೆ 06.02.2023 ರಂದು ಸೋಮವಾರ ಸಾಯಂಕಾಲ 5.30 ಕ್ಕೆ ಹೂವಿನ ರಥೋತ್ಸವ ದೊಂದಿಗೆ ಜರುಗುವದು ನಾವೆಲ್ಲರೂ ದೇವಿಯ ದರ್ಶನ ಪಡೆದು ಪುನೀತರಾಗೋಣ……..
+ನಂದೀಶ್. ಬಿ. ಹಿರೇದಿನ್ನಿ