ಭವದ ಬದುಕಿಗಾಗಿ ವಿಭೂತಿ

ಅಕ್ಕನೆಡೆಗೆ –ವಚನ 19- ವಾರದ ವಚನ ವಿಶ್ಲೇಷಣೆ

ಭವದ ಬದುಕಿಗಾಗಿ ವಿಭೂತಿ

ಹಿತವಿದೇ ಸಕಲಲೋಕದ ಜನಕ್ಕೆ
ಮತವಿದೇ ಶೃತಿ-ಪುರಾಣ-ಆಗಮದ
ಗತಿಯಿದೇ ಭಕುತಿಯ ಬೆಳಗಿನುನ್ನತಿಯಿದೇ
ಶ್ರೀವಿಭೂತಿಯ ಧರಿಸಿದಡೆ ಭವವ ಪರಿವುದು
ದುರಿತಸಂಕುಲವನೊರೆಸುವುದು
ನಿರುತವಿದು ನಂಬು ಮನುಜ
ಜನನ ಭೂತಿಯೇ ವಿಭೂತಿ
ಮರಣಭಯದಿಂದ ಅಗಸ್ತ್ಯ ಕಶ್ಯಪ ಜಮದಗ್ನಿಗಳು
ಧರಿಸಿದರೆಂದು ನೋಡಾ
ಶ್ರೀಶೈಲ ಚೆನ್ನಮಲ್ಲಿಕಾರ್ಜುನನೊಲಿಸುವ ವಿಭೂತಿ

ಅಕ್ಕಮಹಾದೇವಿ ಈ ವಚನದಲ್ಲಿ ವಿಭೂತಿಯ ಮಹತ್ವವನ್ನು ಕಟ್ಟಿ ಕೊಟ್ಟಿದ್ದಾಳೆ. ಲಿಂಗ, ವಿಭೂತಿ, ನೀರು, ಪುಷ್ಪ, ಪತ್ರೆ‌ ಇವು ಲಿಂಗಪೂಜೆಗೆ ಬೇಕಾಗುವ ಭೌತಿಕ ಸಾಮಾಗ್ರಿಗಳು. ಹೀಗೆ ಲಿಂಗ ಪೂಜೆಯ ಅಂಗವಾದ ವಿಭೂತಿಯು ಶುಭ ಸೂಚಕವು, ಆರೋಗ್ಯಕರವೂ ಆದ ಸಾಮಾಗ್ರಿಯಾಗಿದೆ. ಅದನ್ನು ಆಕಳ ಸಗಣಿಯಿಂದ ತಯಾರಿಸಲಾಗುತ್ತದೆ. ಮಧ್ಯದ ಮೂರು ಬೆರಳಿನಿಂದ ತೀಡಿ, ಹಣೆ, ಕುತ್ತಿಗೆ, ಕೈ ಮುಂತಾದ ದೇಹದ ಎಲ್ಲಾ ಭಾಗಕ್ಕೂ ಹಚ್ಚಿಕೊಳ್ಳುವ ಪದ್ಧತಿ. ‘ಶರಣರ ನೊಸಲಿಗೆ ವಿಭೂತಿಯೇ ಶೃಂಗಾರ’ ಎನ್ನುವ ಅರ್ಥಗರ್ಭಿತ‌ ಮಾತನ್ನು ಸ್ಮರಿಸಬಹುದು.

ಲಿಂಗ ಪೂಜೆ, ಕಾಯಕ, ದಾಸೋಹದಲ್ಲಿ ನಿರತರಾದ ಬಸವಾದಿ ಶರಣರನ್ನು ಕಾಣಲು ಬಂದ ಅಕ್ಕಮಹಾದೇವಿಯ ಅನುಭವ ಮಂಟಪದ ಪ್ರವೇಶ ಮತ್ತು ಪರೀಕ್ಷೆ ಒಂದು ಐತಿಹಾಸಿಕ ದಾಖಲೆ. ಅಲ್ಲಿ ಶರಣರ ಸಂಗದಲ್ಲಿ, ತನ್ನ ಭಕ್ತಿ ಮತ್ತು ಪ್ರೀತಿಯಿಂದ ಎಲ್ಲರ ಮನಗೆದ್ದು, ಶರಣ ಸಂಸ್ಕೃತಿಯನ್ನು ರೂಢಿಸಿಕೊಂಡು, ತನ್ನ ಶೋಧನೆಗೆ ತೊಡಗುತ್ತಾಳೆ. ಆ ಸಂದರ್ಭದಲ್ಲಿ ಅಕ್ಕ ತನಗಾದ, ವಿಭೂತಿಯ ಅನುಭೂತಿಯನ್ನು ಈ
ವಚನದಲ್ಲಿ ವ್ಯಕ್ತ ಪಡಿಸಿದ್ದಾಳೆ.

ಹಿತವಿದೇ ಸಕಲಲೋಕದ ಜನಕ್ಕೆ
ಮತವಿದೇ ಶೃತಿ-ಪುರಾಣ-ಆಗಮದ
ಗತಿಯಿದೇ ಭಕುತಿಯ ಬೆಳಗಿನುನ್ನತಿಯಿದೇ

‘ಈ ವಿಭೂತಿಯಿಂದ ಪ್ರಪಂಚದ ಎಲ್ಲಾ ಜನರಿಗೂ ಒಳ್ಳೆಯದಾಗುತ್ತದೆ. ಶೃತಿ, ಪುರಾಣ, ಆಗಮಗಳಲ್ಲಿಯೂ ವಿಭೂತಿಗೆ ಮಹತ್ವದ ಸ್ಥಾನ ಕೊಡಲಾಗಿದೆ. ಸೂರ್ಯೋದಯಕ್ಕೂ ಮೊದಲು ಭಕ್ತಿಯಿಂದ ಲಿಂಗಪೂಜೆ ಮಾಡುತ್ತ ಬೆಳಗನ್ನು ಸ್ವಾಗತಿಸಿದರೆ, ಆ ದಿನವು ಔನತ್ಯದೆಯೆಡೆಗೆ ಸಾಗುತ್ತದೆ’ ಎಂದು ಅಕ್ಕ ಹೇಳಿದ್ದಾಳೆ.

ಶ್ರೀವಿಭೂತಿಯ ಧರಿಸಿದಡೆ ಭವವ ಪರಿವುದು
ದುರಿತಸಂಕುಲವನೊರೆಸುವುದು

ಇಲ್ಲಿ ಅಕ್ಕ ವಿಭೂತಿಯ ಮಹತ್ವವನ್ನು ಸಾರಲು, ಅದಕ್ಕೆ ‘ಶ್ರೀ’ ಎನ್ನುವ ಗೌರವ ಸೂಚಕ ಪದವನ್ನು ಬಳಸಿರುವುದು, ಅದರ ಮಹಿಮೆಯನ್ನು ಅಭಿವ್ಯಕ್ತಿಸುತ್ತದೆ. ಪ್ರತಿದಿನ ವಿಭೂತಿ ಹಚ್ಚಿಕೊಂಡರೆ, ಕೆಟ್ಟ ವಿಚಾರಗಳ ಅಳಿಸಿ, ಒಳ್ಳೆಯ ಸಂಸ್ಕಾರವನ್ನು ಮನುಕುಲ ಪಡೆಯುತ್ತದೆ. ಒಟ್ಟಾರೆ ಮನುಷ್ಯನ ಬದುಕಿನ ಕತ್ತಲೆಯನ್ನು ನಿವಾರಿಸುವ ಶಕ್ತಿ ವಿಭೂತಿಯಲ್ಲಿದೆ.

ಶ್ರೀ ವಿಭೂತಿ ರುದ್ರಾಕ್ಷಿಯೇ ಭಕ್ತಿ ಮುಕ್ತಿಗೆ ಸಾಧನವೋ ಎನ್ನ ತಂದೆ, ಶಿವಶಿವಾ ಎಂಬ ಮಂತ್ರ ಎನಗಮೃತಾರೋಗಣೆಯೋ ಎನ್ನ ತಂದೆ, ಕೂಡಲ ಸಂಗಮದೇವಾ ನಿಮ್ಮ ನಾಮದ ರುಚಿ ತುಂಬಿತೋ ಎನ್ನ ತನುವ’ ಎಂದು ಬಸವಣ್ಣ ವಿಭೂತಿಯ ಕುರಿತು ಹೇಳಿರುವುದನ್ನು ಜ್ಞಾಪಿಸಿಕೊಳ್ಳಬಹುದು.

ನಿರುತವಿದು ನಂಬು ಮನುಜ
ಜನನ ಭೂತಿಯೇ ವಿಭೂತಿ

ಜನ್ಮ ಜನ್ಮಾಂತರದ ಬೇರನ್ನು ಅಳಿಸಿ ಹಾಕುವ ಸಿರಿತನದ ಸಂಕೇತವಿದು. ವಿಭೂತಿಯ ಕುರಿತಾದ ಎಲ್ಲಾ ಅಂಶಗಳು ಸತ್ಯವೆಂದು ನಂಬಲು ಅಕ್ಕನ ವಿನಯಪೂರ್ವಕ ನಿವೇದನೆ.

ಮರಣಭಯದಿಂದ ಅಗಸ್ತ್ಯ ಕಶ್ಯಪ ಜಮದಗ್ನಿಗಳು
ಧರಿಸಿದರೆಂದು ನೋಡಾ

ಅಗಸ್ತ್ಯ ಮಹರ್ಷಿಗಳು, ಹಿರಣ್ಯ ಕಶ್ಯಪ, ಜಮದಗ್ನಿ ಇವರೆಲ್ಲ ಸಾವಿನ ಭಯದಿಂದ ವಿಭೂತಿಯನ್ನು ಹಚ್ಚಿಕೊಂಡರು. ಹಾಗೆ ಮಾಡುತ್ತ ತಮಗೆ ತಾವೇ ಧೈರ್ಯ ತಂದುಕೊಳ್ಳುವ ಪ್ರಯತ್ನವದು. ಅಂದರೆ ಸಾವನ್ನು ಗೆಲ್ಲುವ ಆಂತರಿಕ ಶಕ್ತಿ, ಮನುಷ್ಯನೊಳಗಿರುವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರ್ಥ.

ಶ್ರೀಶೈಲ ಚೆನ್ನಮಲ್ಲಿಕಾರ್ಜುನನೊಲಿಸುವ ವಿಭೂತಿ.

ಅಕ್ಕನ ಆಧ್ಯಾತ್ಮ ಮಾರ್ಗದ ಗಮ್ಯವೆಂದರೆ ಚೆನ್ನಮಲ್ಲಿಕಾರ್ಜುನನಲ್ಲಿ ಲೀನವಾಗುವುದು. ಹಾಗೆ ಅವನನ್ನು ತನ್ನತ್ತ ಒಲಿಸಿಕೊಳ್ಳಲು ಈ ಇಷ್ಟಲಿಂಗಪೂಜೆ ಮತ್ತು ವಿಭೂತಿ ಸಹಾಯ ಮಾಡುತ್ತಿದೆ ಎನ್ನುವ ಭಕ್ತಿ ಪೂರ್ವಕ ನಂಬಿಕೆ.

ವಿಭೂತಿಯು ವೈಜ್ಞಾನಿಕ ಗುಣಗಳನ್ನು ಹೊಂದಿರುವ ಕಾರಣದಿಂದಾಗಿ ಚರ್ಮಕ್ಕೆ ನಿರೋಗವಾಗಿ ಪರಿಣಮಿಸುತ್ತದೆ. ಇದನ್ನು ವಿಜ್ಞಾನಿಗಳು ಇಂದು ಸಾಬೀತು ಪಡಿಸಿರಬಹುದು. ಆದರೆ ನಮ್ಮ ಹಳೆಯ ತಲಮಾರಿನವರು ಬಹಿರ್ದೆಸೆಗೆ ಹೋಗಿ ಬಂದ ನಂತರ ಬೂದಿಯನ್ನು ಉಪಯೋಗಿಸುತ್ತಿದ್ದರು. ಅ್ಯಾಂಟಿಬ್ಯಾಕ್ಟೀರಿಯರಿಲ್ ಕಾರಣಕ್ಕಾಗಿಯೇ ಅದರ ಬಳಕೆ ಪ್ರಚಲಿತವಾಗಿದೆ.

ಆಕಳ ಸಗಣಿಯನ್ನು ತಟ್ಟಿ ಬೆರಣಿ ಮಾಡಿ, ಸುಟ್ಟು ಭಸ್ಮವಾಗಿಸಿ ವಿಭೂತಿ ತಯಾರಿಸಲಾಗುತ್ತದೆ. ಹಾಗೆ ಉತ್ಪಾದಿಸಲಾದ ವಿಭೂತಿಯು ಸಾತ್ವಿಕ, ನಿರ್ಮಲ, ನಿಷ್ಕಲ್ಮಶತೆಯ ಸಂಕೇತವೆಂದು ಅಕ್ಕ ಹೇಳುತ್ತಾಳೆ. ಇದು ಶರಣರು ಬದುಕುವ ರೀತಿಯೂ ಆಗಿತ್ತು.

ನಾನು ವೈಯಕ್ತಿಕವಾಗಿ ಪ್ರತಿನಿತ್ಯ ವಿಭೂತಿ ಹಚ್ಚುತ್ತ ಆ ಅನುಭೂತಿಯೆಡೆಗೆ ಸಾಗುತ್ತಿರುವೆ. ನೀವೂ ಬನ್ನಿ ಅದರ ಮಹಿಮೆ ಅರಿಯಲು ಪ್ರಯತ್ನಸೋಣ.

ಸಿಕಾ

Don`t copy text!