ಮರು ಮಿಲನ
ಈ ಅಶೋಕ ವನ
ಶೋಕ ವನವಾಗಿದೆ
ಮಿಡುಕುತಿಹೆ ಮನದಿ
ಕಾಯುತಿಹೆ ನಿನ್ನದೇ ಹಾದಿ
ಎಂದು ನೋಡುವೇನೋ ನಿನ್ನ
ಕಾತರಿಸುತಿದೆ ನನ್ನ ಮನವಿನ್ನು
ಬಾ ಬೇಗ ನೀನೂ ಇಲ್ಲಿಗೇ
ಪರಿಹರಿಸು ಈ ವಿರಹ ಬೇಗೆ
ಈ ಹೂಬನ, ಈ ಪಕ್ಷಿ ಸಂಕುಲ
ಈ ವಿಶೇಷ ಹಣ್ಣುಹಂಪಲ
ಯಾವುದೂ ಬೇಡವಾಯಿತಲ್ಲ
ನಿನ್ನ ನೆನೆದು ದುಃಖಿಸದ ದಿನವಿಲ್ಲ
********
ಘೋರ ಕಾಳಗದ ಭೀತಿ ಹುಟ್ಟಿಸುವ ಸದ್ದು
ಆನೆ ಅಶ್ವಗಳ ಖುರಪುಟದ ಸದ್ದು
ಸೈನಿಕರ ಮಡದಿಯರ ಆಕ್ರಂದನದ ಸದ್ದು
ಬೆಚ್ಚಿ ಬೀಳಿಸುವ ಭಯಂಕರ ಸದ್ದು
ಶ್ರೀಲಂಕೆಯ ದೊರೆಗೆ ಸೋಲು
ಶ್ರೀರಾಮನ ಗೆಲುವಿನ ಮಜಲು
ರಾವಣ ಪ್ರಚಂಡ ವೀರಾಧೀವೀರ
ರಾಮ ಅವನನ್ನೇ ಸೋಲಿಸಬಲ್ಲ ಶೂರ
ಕೊನೆಗೂ ಯುದ್ಧ ಮುಗಿಯಿತು
ವೀರ ರಾಮನಿಗೆ ಜಯವಾಯಿತು
ನನ್ನ ಬೇಡಿಕೆ ಕೊನೆಗೂ ಈಡೇರಿತು
ಈ ದೂರ ಇನ್ನು ಕೊನೆಯಾಯಿತು
ನಾಳೆಯೇ ನನ್ನ ಪ್ರಿಯನ ಭೇಟಿ
ನಲಿಯಿತು ಹೃದಯ ಮೀಟಿ ಮೀಟಿ
ಹೋಗುವೆ ಅವನು ಇರುವಲ್ಲಿಗೆ
ಹೇಗಿರಬಹುದು ಆ ಸವಿಗಳಿಗೆ?!
*******
ಬಂದಿತು ಹತ್ತಿರ ಅವನ ಕುಟೀರ
ಮೇನೆಯಲ್ಲಿರುವ ನನ್ನ ಕಣ್ಣು ಭಾರ
ಮೇನೆಯಿಂದ ನಿಧಾನವಾಗಿ ಇಳಿದೆ
ಅವನನೊಮ್ಮೆ ಕತ್ತೆತ್ತಿ ನೋಡಿದೆ
ಅದೇನೋ ಸಂಭಾಷಣೆ ಜನರಲಿ
ನನಗೋ ಬಹಳ ಕಾತುರ ಮನದಲಿ
ಹತ್ತಿರ ಬಂದು ಲಕ್ಷ್ಮಣ ಕಾಲಿಗೆರಗಿದ
ಕಣ್ಣೀರು ತುಂಬಿತಲಿ ಕೈ ತೋರಿದ
ಉರಿವ ಬೆಂಕಿಯಲಿ ಕಾಲಿಡಬೇಕು
ಅಗ್ನಿಪರೀಕ್ಷೆಯಲಿ ಹೊರಬರಬೇಕು
ಇದೆಂಥ ವಿಚಿತ್ರ ಮರು ಮಿಲನ
ಮನದಲ್ಲಿ ಗೊಂದಲ ಆಲಾಪನ
ಮನ ನಸುನಕ್ಕು ಹೇಳಿತು ನನಗೆ
ಸೀತೆಯಾ ನೀನೂ?? ಹೇಳಿಬಿಡು ಈಗ್ಗೆ
ಆ ರಾವಣನ ಕುಕೃತ್ಯ ನೆನಪಾಯ್ತು
ನೀ ಸೀತೆಯ ಛಾಯೆಯಲ್ಲವೇ ಎಂದಿತು
ಮೆಲ್ಲನೆ ನಡೆದು ಕಾಲಿಟ್ಟೆ ಅಗ್ನಿಯಲಿ
ಅಗ್ನಿ ಸುಡದೆ ನನ್ನ ನಿಜ ರೂಪ ತೋರುತಲಿ
ಒಪ್ಪಿಸಿದ ರಾಮನಿಗೆ ಈ ಸೀತೆಯನ್ನ
ಮಧುರ ಈ ಮರುಮಿಲನವಿನ್ನು
ಅನೇಕ ವರುಷಗಳ ವಿರಹ ಬೇಗೆ
ಪ್ರಿಯತಮನ ಕಂಡು ಹೋಯಿತು ಈಗ್ಗೆ
ಮಂದಹಾಸ ಬೀರುತ ಎದೆಗೊರಗಿದೆ
ರಾಮನೂ ನನ್ನ ಬರಸೆಳೆದ ತನ್ನೆಡೆಗೆ
✍️ರೇಖಾ. ಮುತಾಲಿಕ್.
ಬಾಗಲಕೋಟ