ತತ್ವಪದಕಾರರಲ್ಲಿ ಫರಾಕುಗಳು

ತತ್ವಪದಕಾರರಲ್ಲಿ ಫರಾಕುಗಳು

ತತ್ವಪದಗಳು ಹೆಸರೇ ಸೂಚಿಸುವಂತೆ ತತ್ವಪ್ರಧಾನವಾದ ಹಾಡುಗಬ್ವ ಗಳಾಗಿವೆ. ಮನುಷ್ಯನ ಹಸನಾದ ಬದುಕಿಗೆ ಅವಶ್ಯಕವಾದ ತತ್ವ ನೀತಿ ಗುರು ಮುಕ್ತಿ ಮೊದಲಾದ ಮೌಲ್ಯಗಳನ್ನು ತತ್ವಪದಗಳು ಪ್ರತಿಪಾದಿಸುತ್ತವೆ‌ . ಇದು ತತ್ವಪದಗಳ ಮೂಲ ಆಶಯವೂ ಆಗಿದೆ. ಹೀಗಾಗಿ
ತತ್ವಪದಗಳು ಮನರಂಜನೆಗಿಂತ ನೀತಿಯನ್ನು ಧಾರ್ಮಿಕ ಅನುಭವಗಳನ್ನು ಪ್ರಧಾನವಾಗಿ ಹೇಳುತ್ತವೆ.
ಜನಪದರಲ್ಲಿ ಆಡುನುಡಿ ಸಾಹಿತ್ಯವಾದರೆ ತತ್ವಪದ ಕಾರರಲ್ಲಿ ತತ್ವವೇ ಸಾಹಿತ್ಯ ವಾಗುತ್ತದೆ. ಇಂಥಹ ತತ್ವಪ್ರಧಾನತೆಯ ಅಂಶ ಫರಾಖ ಆಗಿದೆ.

ರಾಯಚೂರು ಜಿಲ್ಲೆಯ ತತ್ವಪದಕಾರರಲ್ಲಿ ಫರಾಕುಗಳು ವೈಶಿಷ್ಟ್ಯಪೂರ್ಣವಾಗಿ ಕಂಡು ಬರುತ್ತವೆ. ಅದು ಭವಿಷ್ಯ ಕೇಂದ್ರಿತ ಆಶಯವನ್ನು ಮನುಷ್ಯ ಕಲ್ಪನೆಯ ಶೋಧದ ಕುತೂಹಲವನ್ನು ಹೊಂದಿರುವುದಾಗಿದೆ. ಇಂತಹ ತತ್ವಪದಕಾರರಲ್ಲಿ ಪ್ರಮುಖವಾಗಿ ಇಬ್ಬರನ್ನು ಕಾಣಬಹುದು. ೧) ನೀರಲಕೇರಿ ಬಸವಲಿಂಗಪ್ಪ, ಮತ್ತು ೨) ವೆಂಕಟಾಪುರ ಖೇಮಣ್ಣ. ಈ ಇಬ್ಬರಲ್ಲೂ ಫರಾಕು ಒಲವಿದೆ.

ವೆಂಕಟಾಪುರ ಖೇಮಣ್ಣನು ರಾಯಚೂರು ಸಮೀಪದ ಆಂದ್ರಭಾಗಕ್ಕೆ ಸೇರುವ ಪೂಲಚಿಂತಿ ಗ್ರಾಮದವನು.
ಇಲ್ಲಿನ ಹೆಚ್ಚಿನ ಜನರು ಕೃಷಿಕರಾಗಿದ್ದು ಇವರ ಭಾಷೆ ತೆಲುಗು ಮಿಶ್ರಿತ ಕನ್ನಡವಾಗಿದೆ.
ಭೂ ಮಾಲೀಕರು ಮತ್ತು ಕೆಳವರ್ಗದ ಸಮುದಾಯದವರಷ್ಟೇ ಈ ಊರುಗಳಲ್ಲಿ ಇದ್ದಾರೆ. ಇಂತಹ ಜನಸಮೂಹದ ಮಧ್ಯೆ ಜೀವಿಸಿದ ಸಂದರ್ಭದ ಕ್ಷೋಭೆಯನ್ನು ಕಣ್ಣಾರೆ ಕಂಡು ತನ್ನ ತತ್ವಪದಗಳಲ್ಲಿ ಹಿಡಿದಿಟ್ಟಿದ್ದಾನೆ .

“.* ದಂಡೂ ನಿಲ್ಲದ ದೊರೆಯು ಧರಣಿಯನಾಳುವನು
ಸೊಂಡಾಲಿಲ್ಲದ ಗಜನೇರಿಹನು ಕೇಳು / ಕೇಳು ಊರು ನಿಲ್ಲದ ಒಬ್ಬ ತಳವಾರ ಕಾವಲಿರುವ
ಬೇರಿ ಬಡುವುತ ಪಾರತಿರುಗುವ ಕೇಳು/ಕೇಳು

ವಿವೇಕವಿಲ್ಲದ ಹಾಗೂ ಜನಪ್ರೋತ್ಸಾಹವಿಲ್ಲದ ರಾಜನು ಪ್ರಭುತ್ವ ಸ್ಥಾಪಿಸಲು ಹೇಗೆ ಸಾಧ್ಯ? , ರಾಜ ಮತ್ತು ಆನೆ ಗಂಭೀರತೆಯ ಸಂಕೇತಗಳು. ರಾಜನಿಗೆ ಜನರು ಬಹುಪರಾಕ್ ಎಂದು ಉಧ್ಘೋಸಿಸಬೇಕಾಗುತ್ತದೆ.
ಬಹು ಫರಾಕು ಎಂದಾಗಲೆಲ್ಲ, ಸೊಂಡಿಲಿಲ್ಲದ ಆನೆ ತನ್ನ ಸೊಂಡಿಲನ್ನು ಹೇಗೆ ಮೇಲೆತ್ತಲು ಸಾಧ್ಯ? ಇಲ್ಲಿ ಸಮರ್ಥನಾದ
ರಾಜನೂ ಇಲ್ಲ , ಆನೆಯೂ ಇಲ್ಲ, ಗ್ರಾಮವನ್ನು ಕಾಯಲು ತಳವಾರನಿದ್ದರೂ ಊರನ್ನೇ ಕೊಚ್ಚಿ ಕೊಂಡು ಹೋಗುವ ಜನಪ್ರವಾಹ ಗ್ರಾಮದಲ್ಲಿದೆ.
“ಕ್ರಿ.ಶ. ೧೮, ೧೯ ನೇ ಶತಮಾನದ ಸಂದರ್ಭದಲ್ಲಿ ನಿಜಾಂ ಶಾಹಿ ಪ್ರಭುತ್ವದ ಕಾಲಘಟ್ಟಗಳು ರೈತ ಮತ್ತು ಭೂ ಮಾಲೀಕರಿಂದ ವರ್ಷದಲ್ಲಿ ೩ ಬಾರಿಯಂತೆ ಕಂದಾಯ ವಸೂಲಿ ಮಾಡುತ್ತಿದ್ದರು.
ಗ್ರಾಮಗಳಿಗೆ ನುಗ್ಗಿ ಹೆಂಗಸರನ್ನು , ಕುರಿ, ಕೋಳಿಗಳನ್ನು ಕದ್ಧೊಯ್ಯುತ್ತಿದ್ದರು. ರಾಯಚೂರು ನಿಂದ ೨೦ಕಿ .ಮೀ. ಕಾಡ್ಲೂರ ಗ್ರಾಮದ ಕಲ್ಯಾಣಿ ಶ್ರೀ ನಿವಾಸಾಚಾರ್ಯರ ಹೊಲಕ್ಕೆ ನುಗ್ಗಿ, ರಾಶಿ ಮಾಡಿದ ಕಾಳುಗಳನ್ನು ‘ ಲೇವಿ ‘ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದರು. ಹರವಿ ಗ್ರಾಮದ ಅಮರಣ್ಣನು ಲೇವಿ ಕೊಟ್ಟಿದ್ದರೂ ಕೊಟ್ಟಿಲ್ಲವೆಂಬ ಆಪಾದನೆ ಮಾಡಿ ಅವನ ಮನೆ ಹೊಕ್ಕು ದವಸ ಧಾನ್ಯಗಳನ್ನು ಲೂಟಿ ಮಾಡಿದರು. ಈ ಆಘಾತದಿಂದ ಅಮರಣ್ಣನು ಮರಣ ಹೊಂದಿದನು. ” ಇಂತಹ ಹಲವಾರು ಸಂಗತಿಗಳನ್ನು ತತ್ವ ಪದಕಾರರ ವಿವಿಧ ಅಭಿವ್ಯಕ್ತಿಗಳಲ್ಲಿ ಕಾಣಬಹುದಾಗಿದೆ.

ತತ್ವಪದಕಾರ ಕೇಳಿ, ಕೇಳಿ ಎಂದು ಉಧ್ಘೋಸಿಸುವುದರ ಹಿಂದೆ ಒಂದು ನಿರ್ದಿಷ್ಟ ಉದ್ದೇಶವಿರುತ್ತಿತ್ತು. ಜಾಗೃತಿ, ನೈತಿಕ ತಿಳುವಳಿಕೆ, ಭವಿಷ್ಯದ ಬಗ್ಗೆ ಕಳಕಳಿ, ವರ್ತಮಾನ ಸಂಗತಿಗಳ ಕುರಿತ ಚಿಂತನೆಗಳನ್ನು ಕಾಣುತ್ತೇವೆ.
ತತ್ವಪದಗಳಲ್ಲಿ ನೀತಿ ಬೋಧನೆ ಇದ್ದರೆ, ಫರಾಕು ಗಳಲ್ಲಿ ಅಥವಾ ಫರಾಕು ಅರ್ಥದ ಹಾಡುಗಳಲ್ಲಿ
ಮುಂದಿನ ಭವಿಷ್ಯದ ಕಾರಣಿಕ ಸ್ವರೂಪದ ಘೋಷಣೆ ಇರುತ್ತದೆ. ಫರಾಕು ಎನ್ನುವ ಕ್ರಿಯೆ, ತತ್ವಪದಕಾರನಾದ ನೀರಲಕೇರಿ ಬಸವಲಿಂಗಪ್ಪನಲ್ಲಿ
ಈ ರೀತಿಯಾಗಿದೆ.

ಸುಳ್ಳಲ್ಲವೀ ಸಾಕ್ಷಿ ಎಲ್ಲರೂ ಕೇಳಿರಿ ಸುವ್ವಾಲೆಕ್ಕ ಸುವ್ವಾಲೆ,
ಹಿಂದಾಡಿಕೊಳ್ಳುವವನು ಹಂದಿಯಾಗಿ ಬಾಳ್ವ ಸುವ್ವಾಲೆಕ್ಕ ಸುವ್ವಾಲೆ, ಕುಲದಭಿಮಾನಕ್ಕೆ
ಕುಸ್ತಿಯಾಡಿ ಸತ್ತವ ಸುವ್ವಾಲೆಕ್ಕ ಸುವ್ವಾಲೆ, ತತ್ವವ ತರ್ಕಿಸಿ ತಾ ತಿಳಿಯದೆ ಹೋದವ ಸುವ್ವಾಲೆಕ್ಕ ಸುವ್ವಾಲೆ “.

ನೀರಲಕೇರಿ ಬಸವಲಿಂಗಪ್ಪನು
ಬದುಕಿದ ಸಂದರ್ಭದಲ್ಲಿ ಊರಲ್ಲಿ ಬರ ಬಿದ್ದಿತ್ತು.
ಗ್ರಾಮಕ್ಕೆ ಕ್ರೈಸ್ತ ಪಾದ್ರಿ ತಮ್ಮ ಧರ್ಮ ಶ್ರೇಷ್ಠತೆಯನ್ನು
ಸಾರ್ವತ್ರಿಕರಣಗೊಳಿಸಬೇಕೆಂದು ಬಂದಿದ್ದನು. ಇವನ ಹಿಂಬಾಲಕರು, ತಮ್ಮ ಉಪ ಜೀವನಕ್ಕಾಗಿ ಗ್ರಾಮೀಣ ಜನರಿಗೆ ಕ್ರೈಸ್ತ ಧರ್ಮ ಸ್ವೀಕಾರ ಮಾಡುವಂತೆ ಆಮಿಷ ಒಡ್ಡುತ್ತಿದ್ದರು. ದೇಶದ ಆರ್ಥಿಕ ಶಕ್ತಿ ಯೆಂದು ಗುರುತಿಸಿಕೊಂಡ
ಕ್ರೈಸ್ತ ಪಾದ್ರಿಯನ್ನು ಬಸವಲಿಂಗರು ಆಧ್ಯಾತ್ಮದಲ್ಲಿ ಸೋಲಿಸಿ, ನಮ್ಮ ಧರ್ಮದ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದನ್ನು
ಇಂತಹ ಹಾಡುಗಳಲ್ಲಿ ಕಾಣಬಹುದು.

ತತ್ವ ಪದಗಳಿಗಿಂತ ಈ ನುಡಿಗಳು ಭಿನ್ನವಾಗಿ ನಿರೂಪಿತವಾಗುತ್ತವೆ .
೨ನೇ ಸಾಲಿನಲ್ಲಿ ಅಥವಾ ೩ನೇ
೪ನೇ ಸಾಲಿನಲ್ಲಿ ಈ ನುಡಿಗಳ
ಆಶಯ ಪ್ರಕಟವಾಗುತ್ತದೆ.
ಶರಣನರ ಶೂಳ್ನುಡಿಯಂತೆ
ಒಂದರ ನಂತರ ಮತ್ತೊಂದು ಪದಗಳ ಶಬ್ಧ ಮತ್ತು ಅರ್ಥಗಳ
ವಿಸ್ತಾರತೆಯನ್ನು ಹೆಚ್ಚಿಸುತ್ತದೆ.
ಈ ಶೀರ್ಷಿಕೆಯ ಸ್ವಭಾವವೇ ಘೋಷಣೆ ಮಾಡುವುದಾಗಿದೆ.
ಇಂಥ ಪಾರಂಪರಿಕ ಜ್ಞಾನ ಮಾದರಿಗಳನ್ನು ತತ್ವಪದಕಾರರು ಘೋಷಿಸಿದರೆಂಬುದನ್ನು ಗಮನಿಸಬೇಕು.

-ಡಾ.ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು.
ರಾಯಚೂರು.

ದಿನಾಂಕ :೧೬-೨-೨೦೨೩

 

Don`t copy text!