ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,

ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ. ಬಸವಣ್ಣ

ಶಿವ .ಆದಿ ಶಿವ ,ಯೋಗಿ ಶಿವ ,ಪರಶಿವ ಹೀಗೆ ಅನೇಕ ಪಾರಿಭಾಷಿಕ ಪದಗಳನ್ನು ಹೊಂದಿ ಸಂದರ್ಭ ಮತ್ತು ಕಾಲಕ್ಕೆ ತಕ್ಕಂತೆ ಅರ್ಥೈಸಿಕೊಂಡು ಬಂದ ನಮ್ಮ ಭಾರತೀಯ ಸಂಸ್ಕೃತಿಗೆ ಸಂಪೂರ್ಣವಾಗಿ ವಿಭಿನ್ನವಾದ ವ್ಯಾಖ್ಯಾನವನ್ನು ಕೊಟ್ಟವರು ಶರಣರು. ಇಂತಹ ಕ್ರಾಂತಿಯ ಮರುವ್ಯಾಖ್ಯಾನದ ಹರಿಕಾರನೇ ಬಸವಣ್ಣ .

ಶರಣ ಎಂಬ ಸಾಧಕನಿಗೆ ತನ್ನ ನಿತ್ಯ ಕ್ರಿಯೆ ಆಲೋಚನೆ ವಿಚಾರ ನಡುವಳಿಕೆಗಳು ಎಲ್ಲವೂ ಪಾವನ ಅರ್ಥಪೂರ್ಣ.
ಇಲ್ಲಿ ವ್ಯಷ್ಟಿ ಸಮಷ್ಟಿಯ ಮಧ್ಯೆ ನಡೆವ ಸಂಧಾನ ವ್ಯಕ್ತಿಯ ತನ್ನ ಕಾಯ ಗುಣದಲ್ಲಿ ದೇವರನ್ನು ಕಾಣುವ ಹೊಸ ಪರಿಯನ್ನು ಗುರುತಿಸಿದರು ಶರಣರು.
ಶರಣ ಧರ್ಮವು ಸಹಜದತ್ತವಾದ ಧರ್ಮವಾಗಿದೆ.

ಶರಣ ನಿದ್ರೆಗೈದಡೆ ಜಪ ಕಾಣಿರೊ,
ಜಪ ತಪ ಯಜ್ಞ ಯೋಗ ಹೀಗೆ ಸಮಷ್ಟಿಯನ್ನು ನಿಯಂತ್ರಿಸಲು ವ್ಯಕ್ತಿ ತನ್ನ ಮೇಲೆ ನಿರಂತರವಾಗಿ ದಾಳಿ ಶಬ್ದ ಸ್ಪರ್ಶ ರೂಪ ರಸ ಗಂಧ ಇವುಗಳ ನಡೆಸುತ್ತಾನೆ .
ಜಪಿಸುವ ಮನುಷ್ಯ ಮೋಕ್ಷ ಹೊಂದುವ ಮಾರ್ಗ ಕಂಡುಕೊಳ್ಳುವ ಎನ್ನುವ ಭ್ರಮೆಯಲ್ಲಿರುತ್ತಾನೆ .ಆದರೆ ಶೃದ್ಧೆ ಕಾಯಕ ಶ್ರಮದಿಂದ ದಣಿವಾಗಿ ಶರಣ ಮಲಗಿದೊಡೆ ಅದುವೇ
ಜಪವಿದ್ದಂತೆ ಅಥವಾ ಜಪಕ್ಕಿಂತಲೂ ಶ್ರೇಷ್ಠ ಕ್ರಿಯೆ ಎಂದಿದ್ದಾರೆ ಬಸವಣ್ಣನವರು. ಇದನ್ನು ಅಲೌಕಿಕ ಮತ್ತು ಲೌಕಿಕವಾದ ಬದುಕಿನಲ್ಲಿ ಅಜಪಜಪ ಎಂದೆನ್ನುವುದು ವಾಡಿಕೆ .

ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,

ನಿದ್ರೆ ಹೇಗೆ ಸಹಜವೋ ಹಾಗೆ ನಿದ್ರೆಯಿಂದ ಮೇಲೆ ಎದ್ದೇಳುವುದು ಕೂಡ ಅಷ್ಟೇ ಸಹಜವಾಗಿದೆ.ಮಲಗಿದಾಗ ನಿಶ್ಚಲ ಸ್ಥಿತಿಯಲ್ಲಿರುವ ಸಾಧಕನು ಎದ್ದು ಚಲನಶೀಲನಾಗುತ್ತಾನೆ .ಹೀಗಾಗಿ ಇಂತಹ ಕ್ರಿಯಾಶೀಲತೆಯೇ ಶಿವರಾತ್ರಿ . ನಿದ್ದೆಯಿಂದ ಏಳುವುದು ಎಂದರೆ ಜಡದಿಂದ ಮುಕ್ತನಾಗುವುದು ಅಂತ ಅರ್ಥ .
ಚಲನಶೀಲತೆ ಕ್ರಿಯಾಶೀಲತೆ ಇದ್ದಾರೆ ಅಲ್ಲಿ ಶಿವನನ್ನು ಕಾಣುತ್ತಾನೆ . ಇಂತಹ ಸುಂದರ ತೃಪ್ತ ಭಾವವೇ ಶಿವರಾತ್ರಿ.ನಿದ್ದೆಗೆಡುವುದು ಶಿವರಾತ್ರಿಯಲ್ಲ ನಿದ್ದೆಯಿಂದ ಸಹಜವಾಗಿ ಎದ್ದಾಗಲೇ ಅದು ಶಿವರಾತ್ರಿ ಮಂಗಳಮಯ .

ಶರಣ ನಡೆದುದೆ ಪಾವನ ಕಾಣಿರೊ,

ಶರಣ ಎಂದರೆ ಪರಿಪೂರ್ಣ ಸಾಧಕ ಚೈತನ್ಯಶೀಲ ಸಮಷ್ಟಿಯ ಜೊತೆಗೆ ನಿರಂತರ ಸಂಬಂಧವನ್ನು ಹೊಂದಿದವನು. ಸಕಲ ಚರಾ ಚರ ಜೀವ ಜಾಲವನ್ನು ಪ್ರೀತಿಸುವವನು ಜಂಗಮ ಜ್ಞಾನವನ್ನು ಪಸರಿಸುವನು ಇಂತಹ ಸಾಧಕನು ನಡೆಯುವುದೇ ಪಾವನವಾಗಿರುತ್ತದೆ . ಪಾವಿತ್ರ್ಯವೆನ್ನುವುದು ಹೊರಗಿನ ಅನುಗ್ರಹವಲ್ಲ ಅದು ಅಂತರಂಗದ ಮುಹೂರ್ತ ಸ್ವರೂಪದ ಸಂಕಲ್ಪವಷ್ಟೆ

ಶರಣ ನುಡಿದುದೆ ಶಿವತತ್ವ ಕಾಣಿರೊ,

ನಡೆಯಲ್ಲಿ ಶುಚಿತ್ವ ಶುದ್ಧತೆ ಕಂಡು ಕೊಂಡ ಶರಣನ ನುಡಿಯು ಪರುಷ ಕಂಡಂತೆ ..ಅಂತಹ ಲಿಂಗದೇಹಿಯ ಬಾಯಲ್ಲಿ ಅರಳುವ ಪ್ರತಿಯೊಂದು ಅನುಭವವು ಶಿವ ತತ್ವ . ಶರಣರ ನಡೆ ನುಡಿ ಸಮನ್ವಯವೇ ಮುಕ್ತಿ . ಮನುಷ್ಯನ ಒಳ ಜಂಜಡ ಹೋರಾಟದಿಂದ ನಿರಾಳಗೊಳ್ಳುವ ಸರಳ ಹಾಗು ಅಷ್ಟೇ ಸಹಜ ಪರಿಕ್ರಮವನ್ನು ಸಾಧಕನ ಬದುಕಿನಲ್ಲಿ ಕಾಣಬೇಕೆನ್ನುವುದು ಬಸವಣ್ಣನವರ ಉತ್ಕಟ ಬಯಕೆಯಾಗಿದೆ.

ಬಸವಣ್ಣ ಜಪ ತಪ ಪಾವಿತ್ರತೆ ಪಾವನ ಶಿವತತ್ವವನ್ನು ಪರೀತಿಯೊಬ್ಬ ಮನುಷ್ಯನ ಆಚಾರ ವಿಚಾರಗಳಿಗೆ ಅನುಗುಣವಾಗಿ ವಿವರಿಸಿದ್ದಾನೆ .ಸನಾತನಿಗಳ
ಜಪ ತಪ ಪಾವನ ಪಾಪ ಪ್ರಜ್ಞೆಯಲ್ಲೂ ತಳ್ಳಿ ಹಾಕುವ ನೈಪುಣ್ಯತೆಯನ್ನು ಅವರ ವಚನಗಳಲ್ಲಿ ಕಾಣಬಹುದು.
ಮಲಗುವದು ಸಹಜ ದತ್ತವಾದ ಜೈವಿಕ ಕ್ರಿಯೆ ,ನಿದ್ರೆಯಿಂದ ಏಳುವುದು ಅಷ್ಟೇ ಸರಳ ಹಾಗು ಸಹಜ .ಆದರೆ ಇಂತಹ ಸಹಜ ಧರ್ಮಕ್ಕೆ ವಿರುದ್ಧವಾಗಿ ಶಿವನನ್ನು ಓಲೈಸುತ್ತೇವೆ ಎಂದು ನಿದ್ರೆ ಬಿಟ್ಟು ಬರಿ ಹೊಟ್ಟೆಯಿಂದ ರಾತ್ರಿಯಿಡಿ ಜಾಗರಣೆ, ಪೂಜೆ, ಮಂತ್ರ ಘೋಷ, ಜಪತಪ ಮಾಡಿದರೆ, ಅಂತಹ ಶರೀರವು ಬಳಲಿಕೆಗೆ ತುತ್ತಾಗುತ್ತದೆ. ಶಿವರಾತ್ರಿ ಎಂದು ಆಚರಿಸುವುದು ವ್ಯಕ್ತಿಯ ಸೋಲು ಹಾಗು ಧಾರ್ಮಿಕ ಗುಲಾಮಗಿರಿ ದಾಸ್ಯತ್ವಕ್ಕೆ ಒಳಗಾಗಿ ಸಮ್ಮೋಹನದಿಂದ ಬಳಲುವ ಬದುಕು ಅರ್ಥಹೀನ .
ಕಾರಣ ಸ್ಪಷ್ಟವಾಗಿ ಬಸವ ತತ್ವಗಳನ್ನು ಅನುಸರಿಸದೆ ಇಂತಹ ಡಾಂಭಿಕ ಆಚರಣೆ ಪೂಜೆ ಮಾಡುವುದು ಎಷ್ಟು ಸಮಂಜಸ ?

ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ
ಸತ್ಯ ಶುದ್ಧ ಕಾಯಕವ ಮಾಡಿ ಹಸಿದು ಬಂದ ಜಂಗಮರಿಗೆ ಪ್ರಸಾದ ದಾಸೋಹ ಮಾಡಿ, ಹಸಿವು ಬಳಲಿಕೆ ತೃಷೆ ಇಲ್ಲದಂತೆ ಸಮಾಜಸೇವೆ ಮಾಡುವುದೇ ಲಿಂಗ ಪೂಜೆ ಯೋಗವು . ಮರಗಿಡ ಬಳ್ಳಿಗಳಿಗೆ ನೀರುಣಿಸಿ ಪಕ್ಷಿ ಪ್ರಾಣಿಗಳ ದಯೆ ತೋರುವುದೆ ಪರಮಾತ್ಮನ ಒಲುಮೆ. ಇಂತಹ ಸತ್ಯ ಶುದ್ಧ ಚಾರಿತ್ರ್ಯವಂತನ ಕಾಯವೇ ಕೈಲಾಸ ಕಾಣಿರೋ ಎಂದಿದ್ದಾರೆ ಬಸವಣ್ಣನವರು.

ಕೈಲಾಸದ ಪರಿಕಲ್ಪನೆಯನ್ನು ಅಲ್ಲಗಳೆದು ನೈಜ ಬದುಕಿನ ಕಡೆಗೆ ದಾರಿ ತೋರುವ ಮಹಾ ಮಣಿಹ ಸಂಗನ ಬಸವಣ್ಣ ಎನಗೆಯು ಗುರು ನಿನಗೂ ಗುರು ಎಂದು ಅಲ್ಲಮರು ಕೊಂಡಾಡಿದ್ದಾರೆ.ಶರಣರು ವಿಶ್ವದಲ್ಲಿ ಹಿಂದೆಂದೂ ಕಾಣದ ಸುಂದರ ಸಮತಾವಾದದ ಹಿನ್ನೆಲೆಯುಳ್ಳ ಮುಕ್ತ ಅಭಿವ್ಯಕ್ತಿಯುಳ್ಳ ಸಮಾಜವನ್ನು ಕಟ್ಟಿದರು ,ಅದುವೇ ಕಲ್ಯಾಣ ರಾಜ್ಯದ ಪರಿಕಲ್ಪನೆ


ಡಾ.ಶಶಿಕಾಂತ.ಪಟ್ಟಣ ರಾಮದುರ್ಗ 9552002338

Don`t copy text!