ಸಮಾನತೆಯಲಿ ಸಾಮರಸ್ಯದ ಸವಿ

ಅಕ್ಕನೆಡೆಗೆ-ವಚನ – 20  (ವಾರದ ವಿಶೇಷ ಲೇಖನ ಸರಣಿ)

ಸಮಾನತೆಯಲಿ ಸಾಮರಸ್ಯದ ಸವಿ

ಗಂಡ ಮನೆಗೆ ಒಡೆಯನಲ್ಲ
ಹೆಂಡತಿ ಮನೆಗೆ ಒಡತಿಯೇ? ಒಡತಿಯಲ್ಲ
ಗಂಡಹೆಂಡಿರ ಸಂಬಂಧವಿಲ್ಲಯ್ಯಾ
ಗಂಡುಗಲಿಯೇ ಚೆನ್ನಮಲ್ಲಿಕಾರ್ಜುನಾ
ನೀ ಮನೆಯೊಡೆಯನೆಂದು ನಾ ದುಡಿವೆ ತೊತ್ತುಗೆಲಸವನು

ಆಧುನಿಕತೆ, ಪ್ರಗತಿಪರತೆ, ಬಂಡಾಯ, ಸ್ತ್ರೀವಾದ, ಇವೆಲ್ಲವೂ ಅಸ್ತಿತ್ವಕ್ಕೆ ಬಂದ ಕಾಲದಲ್ಲಿದ್ದೇವೆ. ಮಹಿಳಾ ಅಸ್ಮಿತೆಯ ಹುಡುಕಾಟವು ಒಂದು ಟ್ರೆಂಡ್ ಆಗಿ ಬೆಳೆಯುತ್ತಿರುವ ಸಂಕ್ರಮಣದ ಸಮಯ. ಇದು ಇದೇ ಶತಮಾನದಲ್ಲಾದ ನಿಧಾನ ಗತಿಯ ಸೂಕ್ಷ್ಮ ಬದಲಾವಣೆ. ಆದರೆ ಹನ್ನೆರಡನೇ ಶತಮಾನದಲ್ಲಿ ಅಕ್ಕಮಹಾದೇವಿಗೆ, ಹೆಣ್ಣಿನ ಅಸ್ಮಿತೆಯ ಹುಡುಕಾಟವಾಗಲಿ, ಸಾಮಾಜಿಕ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವುದಾಗಲಿ ಅಷ್ಟು ಸುಲಭದ ಮಾತಾಗಿರಲಿಲ್ಲ. ಮಹಾರಾಜರುಗಳ ಆಜ್ಞೆ ಪರಿಪಾಲಿಸುವ ಪ್ರಜೆಗಳಿದ್ದಾಗ, ಅಕ್ಕನಿಗೆ ಹಾಗೆ ಮಾಡಲು ಸಾಧ್ಯವಾಗಿದ್ದರೆ, ಅದು ಅವಳ ಗಟ್ಟಿತನ, ಆತ್ಮ ವಿಶ್ವಾಸ ಮತ್ತು ಆತ್ಮ ಸ್ಥೈರ್ಯ! ಆ ಅಂಶ ಮೇಲಿನ ಸಾಲುಗಳಲ್ಲಿರುವುದನ್ನು ಗ್ರಹಿಸಬಹುದು.

ಸಮಾಜದ ಕೌಟುಂಬಿಕ ಚಿತ್ರಣವನ್ನು ವಿಭಿನ್ನ ನೆಲೆಯಲ್ಲಿ ಅನಾವರಣಗೊಳಿಸಿದ ವಚನವಿದು. ಮದುವೆ ಅನಿವಾರ್ಯವೆಂದು ಇಂದಿಗೂ ಪರಿಗಣಿಸುವ ಸಾಮಾಜಿಕ ವ್ಯವಸ್ಥೆ ನಮ್ಮದು. ತಲತಲಾಂತರದ ಈ ಆಲೋಚನೆ, ಈಗಲೂ ಜನಮಾನಸದಲ್ಲಿ ಅಚ್ಚೊತ್ತಿಕೊಂಡಿದೆ. ವಿವಾಹ, ಗಂಡ, ಮಕ್ಕಳು ಇರಲೇ ಬೇಕು ಎನ್ನುವ ನಿಯಮದಿಂದಾಗಿ, ತಾಯ್ತನ ಇಲ್ಲದ ಹೆಣ್ಣು ಅಪರಿಪೂರ್ಣಳು ಎನ್ನುವ ನಂಬಿಕೆಯೂ ನೆಲೆಯೂರಿದೆ.

ಅಕ್ಕನ ಆಧ್ಯಾತ್ಮಿಕ ಚಿಂತನೆಯನ್ನು ಕೆಲ ಸಮಯ ಬದಿಗಿಟ್ಟು, ಲೌಕಿಕದ ನೆಲೆಯಲ್ಲಿ ಈ ವಚನವನ್ನು ಆಲೋಚಿಸಿ, ಒಂದು ತೀರ್ಮಾನಕ್ಕೆ ಬರುವುದು ಅವಶ್ಯಕ. ಅದಕ್ಕೊಂದು ಸೂಕ್ತ ಉದಾಹರಣೆ ಇದೆ. ಪ್ರಾಥಮಿಕ ಶಾಲಾ ಮಕ್ಕಳ ಸಮಾಜ ವಿಜ್ಞಾನ ಪಠ್ಯದಲ್ಲಿ ಕುಟುಂಬದ ಕುರಿತು ಚರ್ಚಿಸಲಾಗಿದೆ.
‘Who is the head of the family?’
‘Father is the head of the family.’
ಹೀಗೆ ಬೆಳೆಯುವ ಮಕ್ಕಳ ಗಮನಕ್ಕೆ ಕೌಟುಂಬಿಕ ಚಿತ್ರಣವನ್ನು ಪುರುಷ ಪ್ರಧಾನ ಆಲೋಚನಾ ಕ್ರಮದಲ್ಲೇ ಕೊಡಲಾಗಿದೆ. ನೈತಿಕ ಮೌಲ್ಯಗಳ ತಳಹದಿಯ ಮೇಲೆ ಸಾಮಾಜಿಕ ವ್ಯವಸ್ಥೆ, ಕಟ್ಟು ಕಟ್ಟಳೆಗಳು ಹುಟ್ಟಿಕೊಂಡಿವೆ ನಿಜ. ಆದರೆ ಅದೇ ಅಂತಿಮ ಸತ್ಯ ಎಂದು ನಂಬಲು ಸಾಧ್ಯವಿಲ್ಲ.

ಇಂತಹ ಸಂದರ್ಭದಲ್ಲಿ ಅಕ್ಕಮಹಾದೇವಿಯ ಆಧ್ಯಾತ್ಮಿಕ ಹಿನ್ನೆಲೆಯ ಮೇಲಿನ ವಚನವು ಪ್ರಸ್ತುತ. ಕುಟುಂಬ ವ್ಯವಸ್ಥೆಯ ಹೊಸ ಪರಿಕಲ್ಪನೆ ಕಟ್ಟಿಕೊಡುತ್ತಾಳೆ.
‘ಗಂಡ ಮನೆಯ ಒಡೆಯನಲ್ಲ’ ಎಂದು ಹೇಳುತ್ತ, ‘ಹೆಂಡತಿ ಮನೆಗೆ ಒಡತಿಯೇ? ಒಡತಿಯಲ್ಲ’ ಎನ್ನುವ ಮಹಿಳೆಯ ಹಕ್ಕು ಚಲಾಯಿಸುವ ಸ್ವಭಾವವನ್ನೂ ನಿರಾಕರಿಸುತ್ತಾಳೆ.

ಮನೆಯಲ್ಲಿ ಗಂಡನಾದರೂ ಒಡೆಯನಾಗಿರಬೇಕು, ಇಲ್ಲ ಹೆಂಡತಿಯಾದರೂ ಒಡತಿಯಾಗಿರಬೇಕು. ಇಲ್ಲಿ ಅಕ್ಕ, ಹೆಂಡತಿ ಒಡತಿಯೇ‌? ಪ್ರಶ್ನಿಸುತ್ತ ಅಲ್ಲ ಎಂದು ಹೇಳುವುದು ಕುತೂಹಲಕರ. ಗಂಡ ಹೆಂಡತಿಯ ಸಂಬಂಧವೂ ಇಲ್ಲ ಎನ್ನುವುದು ಭಾವನೆಗಳಿಗೆ ಸವಾಲು ಹಾಕಿದಂತೆನಿಸುತ್ತದೆ. ಸಾಮಾನ್ಯರಿಗಿರುವ ಸಂಬಂಧದ ಭ್ರಮೆಯನ್ನು ಒಂದೇ ಒಂದು ಕ್ಷಣದಲ್ಲಿ ಕಳಚುವ ಸಾಲಿದು. ಹಾಗಾದರೆ ಮನೆಯ ಒಡೆಯ ಯಾರು? ಹೀಗೆ ಪ್ರಶ್ನೆ ಕೇಳುವಾಗ, ಪಿತೃ ಪ್ರಧಾನ ಕುಟುಂಬ ಅಥವಾ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯು ನೆನಪಾಗುತ್ತದೆ. ಇಬ್ಬರೂ ಅಲ್ಲದ ಮೇಲೆ ಯಾರು ಒಡೆಯರು? ಎನ್ನುವುದು ಮುಂದಿನ ಪ್ರಶ್ನೆ.

ಒಡೆಯ ಮತ್ತು ಗಂಡ-ಹೆಂಡತಿಯ ಸಂಬಂಧವನ್ನು ಸಮೀಕರಿಸಿ ಹೇಳುವ ಅಕ್ಕನ ರೀತಿ ಅನನ್ಯ. ‘ಗಂಡುಗಲಿಯೇ ಚೆನ್ನಮಲ್ಲಿಕಾರ್ಜುನಾ ನೀ, ಮನೆಯೊಡೆಯನೆಂದು ನಾ ದುಡಿವೆ ತೊತ್ತುಗೆಲಸವನು’ ಇಲ್ಲಿ ಶರಣ ತತ್ವದ ವಿಚಾರಧಾರೆಯನ್ನು ಆಳವಾಗಿ ಗ್ರಹಿಸಬಹುದು.

ಅಂದಿನ ಶರಣ ಸಮೂಹದ ‘ಶರಣ ಸತಿ ಲಿಂಗ ಪತಿ’ ಪರಿಕಲ್ಪನೆ ವಿಶಿಷ್ಟವಾದುದು. ಅಂದರೆ ಇಡೀ ಮನುಕುಲವೇ ‘ಸತಿ’ ಎನ್ನುವ ಲಿಂಗಾತೀತ ಭಾವನೆ ಈ ಸಾಲಿನಲ್ಲಡಗಿದೆ. ಹೆಣ್ಣಿರಲಿ, ಗಂಡಿರಲಿ, ಮನುಷ್ಯನಿಗೂ ಮೀರಿದ, ಮಿಗಿಲಾದ ಒಂದು ಶಕ್ತಿ ಇದೆ. ಅದು ಪ್ರಕೃತಿ, ಪರಮಾತ್ಮ, ಲಿಂಗರೂಪಿ ಅಥವಾ ಚೆನ್ನಮಲ್ಲಿಕಾರ್ಜುನನೂ ಆಗಿರಬಹುದು. ಮನೆ ಎಂದರೆ ಈ ಭೂಮಂಡಲ. ಇಲ್ಲಿ ಗಂಡನೂ ಒಡೆಯನಲ್ಲ, ಹೆಂಡತಿಯೂ ಒಡತಿಯಲ್ಲ. ಬೇಡಿದ್ದೆಲ್ಲವನ್ನೂ ಕೊಡುವ ಒಡೆಯ ‘ಅವನು!’ ಅವನೊಬ್ಬನೇ ಪತಿ ಎನ್ನುವ ಸತ್ಯವನ್ನು ಮನವರಿಕೆ ಮಾಡಿಸುವ ವಚನ. ಈ ಭೂಮಿಯ ಮೇಲೆ ಎಲ್ಲರೂ ಸತಿಯಾಗಿ ಕಾಯಕ ಮಾಡಲಿ ಎನ್ನುವ ಸದುದ್ದೇಶ ಅಕ್ಕನದಾಗಿದೆ.

ಇದೇ ಭಾವವಿರುವ ಬಸವಣ್ಣನ ವಚನದ ಸಾಲು, ‘ಹೊತ್ತು ಹೋಗದ ಮುನ್ನ ಮೃತ್ಯು ಒಯ್ಯದ ಮುನ್ನ ತೊತ್ತು ಕೆಲಸವ ಮಾಡು ಕೂಡಲಸಂಗಮದೇವನ’ ನೆನಪಾಗುತ್ತದೆ. ಇಲ್ಲಿ ‘ತೊತ್ತು’ ಎನ್ನುವ ಪದ ಅರ್ಥಪೂರ್ಣ. ವ್ಯಕ್ತಿ ಯಾವುದೇ ಸ್ವಾರ್ಥವಿಲ್ಲದೆ, ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವುದು ಎನ್ನುವ ಸದ್ಭಾವ ಇದರಲ್ಲಿದೆ.

ದಾಸರು ಹೇಳುವಂತೆ, ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎನ್ನುವ ಹಾಗೆ ಜೀವನ‌ ಸಾಗಿಸಿ ಈ ಲೋಕದ ಜಾತ್ರೆ ಮುಗಿಸುವ ನಿಸರ್ಗದ ನಿಯಮ. ಇದ್ದಷ್ಟು ಕಾಲ ಸಮಾನತೆಯಲ್ಲಿ ನಂಬಿಕೆ ಇಟ್ಟು ಕಾಯಕ, ದಾಸೋಹ ಮಾಡಬೇಕೆನ್ನುವುದು ಶರಣರ ಆಶಯ. ಅದರಂತೆ ಅವರು ನುಡಿದಂತೆ ನಡೆದು ತೋರಿಸಿದರು.

ಪ್ರಸ್ತುತ ಸಮಾಜದಲ್ಲಿ ಕುಟುಂಬ ವ್ಯವಸ್ಥೆಯ ಬದಲಾದ ಸ್ವರೂಪ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಹಿಂದೆ ‘ಜಾಯಿಂಟ್ ಫ್ಯಾಮಿಲಿ’ ಕಾಲ ಒಂದಿತ್ತು. ಆದರೆ ಇಂದು ‘ನ್ಯೂಕ್ಲಿಯರ್ ಫ್ಯಾಮಿಲಿ’ ಆಗಿದೆ. ಮನೆಯಲ್ಲಿ ಹಿರಿಯರು, ಕಿರಿಯರು ಮತ್ತು ಮಕ್ಕಳು ಎನ್ನುವ ಮೂರು ತಲೆಮಾರಿನ ಜನಗಳಿರುತ್ತಿದ್ದರು. ಇಂದು ಅದರ ಅಭಾವದಲ್ಲಿ ಅನೇಕ ಸಮಸ್ಯೆಗಳು ಏಳುತ್ತಿವೆ. ಹಿರಿಯರೇ ಇಲ್ಲದ, ಕೇವಲ ಅಪ್ಪ-ಅಮ್ಮನ ಜೊತೆಯಲ್ಲಿ ಬೆಳೆಯುವ, ಒಂದೇ ಒಂದು ಮಗು ಇರುವ ಕುಟುಂಬಗಳು ಹೆಚ್ಚಾಗಿವೆ. ಅತ್ಯಾಧುನಿಕ ಜೀವನ ಶೈಲಿ ಮನುಷ್ಯನಲ್ಲಿರುವ ಸಮೂಹ ಪ್ರಜ್ಞೆಯನ್ನು ಇಲ್ಲವಾಗಿಸುತ್ತಿವೆ.

ಸಮಾನತೆಯ ಹೆಸರಿನಲ್ಲಿ ಹೆಣ್ಣು, ಗಂಡು ಇಬ್ಬರೂ ಆರ್ಥಿಕವಾಗಿ ಸಶಕ್ತರಾಗುತ್ತಿರುವುದು ಸತ್ಯ. ಆದರೆ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತ, ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಸೋಲನುಭವಿಸುವ ಅನಿರ್ವಾಯತೆ ಸೃಷ್ಟಿಸಲಾಗಿದೆ. ಅಕ್ಕನ ಅಧ್ಯಾತ್ಮ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲದಿದ್ದರೂ, ‘ಶರಣ ಸತಿ ಲಿಂಗ ಪತಿ’ ಭಾವವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ, ಅನೇಕ ಸಮಸ್ಯೆಗಳು ತನ್ನಿಂದ ತಾನಾಗಿಯೇ ಕರಗಿ ಬಿಡುತ್ತವೆ. ಅಬ್ಬರದ ಮಾತುಗಳಿಲ್ಲದೆ, ಶಿಥಿಲವಾದ ಪ್ರತಿರೋಧದ ದನಿಯಲ್ಲಿ ಅಕ್ಕ ಕುಟುಂಬ ವ್ಯವಸ್ಥೆಯನ್ನು ನಿರಾಕರಿಸುವ ಜಾಣ್ಮೆ ತೋರಿರುವುದು ಬಹಳ ಸೂಕ್ಷ್ಮವಾಗಿ ಮೂಡಿದೆ.

ನಾನು, ನನ್ನದೆನ್ನುವ ಸ್ವಾರ್ಥದ ಮಾತನ್ನು ಬದಿಗಿಟ್ಟು, ನಿಸ್ವಾರ್ಥ ಭಾವ ತಾಳಿದರೆ, ‘ಅಲ್ಲಿದೆ ನಮ್ಮ ಮನೆ, ಇಲ್ಲಿರುವೆ ಸುಮ್ಮನೆ’ ಎಂದುಕೊಂಡು ಶಾಂತವಾಗಿರಲು ಮನ ಬಯಸುತ್ತದೆ. ಆಗ ನಾನು-ನೀನು ಪೈಪೋಟಿಗೆ ಆಸ್ಪದವಿರುವುದಿಲ್ಲ. ಗಂಡು-ಹೆಣ್ಣು, ಮೇಲು-ಕೀಳು, ಸಮಾನ-ಅಸಮಾನತೆಯ ಮಾತೇ ಗೌಣವಾಗಿ ನೆಮ್ಮದಿಯ ನೆಲೆ ಕಾಣಬಹುದು. ಅಕ್ಕ ಪ್ರತಿಯೊಂದನ್ನೂ ಅಧ್ಯಾತ್ಮದ ನೆಲೆಯಲ್ಲೇ ವಿವರಿಸುತ್ತಾಳೆ. ಇಂತಹ ವಾಸ್ತವವನ್ನು ವೈರಾಗ್ಯದ ಮನಸ್ಥಿತಿಯಿಂದ ಆಲೋಚಿಸುವಾಗ, ಯಾರೂ ದೊಡ್ಡವರು ಆಗುವುದಿಲ್ಲ, ಸಣ್ಣವರೂ ಆಗುವುದಿಲ್ಲ. ಆಗ ಸಮಾನತೆಯ ಮಹತ್ವಾಕಾಂಕ್ಷೆಯ ಹಂಬಲ ಹಿಂದೆ ಸರಿದು, ಸಾಮರಸ್ಯದ ಸವಿಯನು ಆಸ್ವಾದಿಸಬಹುದಲ್ಲವೆ?

-ಸಿಕಾ

Don`t copy text!