ಮತ್ತೊಂದು ಸಂವಾದಿ ಕವಿತೆ
ಸಿಕ್ಕಿದ್ದರಿಲ್ಲಿ
ಸಿಕ್ಕಿದ್ದರಿಲ್ಲಿ
ನೀವು ಹುಡುಕುತ್ತಿದ್ದ
ಚಹರೆಯವರು
ಕರೆತರಲೆಂದು
ಹೊರಟಿದ್ದೆ
ಮಂದಿರದ ಮುಂದಿನ
ಸರತಿಯ ಜನ
ಕೂಗಿದರೆಂದು
ಕೊಸರಿಕೊಂಡು
ಹೋದರು
ಬಿಡದೆ ಬೆನ್ನುಹತ್ತಿ ಹೋದೆ
ಅಷ್ಟರಲ್ಲಿ ಯಾರೊ
ಅವರ ಮೇಲೆ ಹಾಲು ಮೊಸರು ಸುರಿದು ಬಿಟ್ಟರು
ಮತ್ತೋಬ್ಬರು ಒಟ್ಟಿಗೆ ಒಂದಿಷ್ಟು
ಧೂಪ ಹೊತ್ತಿಸಿದರು
ಹೊಗೆಯ ಮಧ್ಯೆ
ಕಾಣದಾದವರ
ಜೋರಾಗಿ ಕೂಗಿದೆ
ಗಂಟೆ ಜಾಗಟೆಗಳ ಸದ್ದಲ್ಲಿ
ಮೈಮರೆತರು
ನೋಡಲು ಮುಂದೆ ಬಂದೆ
ತೀರಾ ಹತ್ತಿರ
ಅಷ್ಟರಲ್ಲಿ ಮತ್ತಾರದೊ
ಮೊರೆಗೆ ಓ ಗೊಟ್ಟು
ಅವಸರದಿ ಹೋಗಿಯೇ
ಬಿಟ್ಟರು
ಅವರು
ಮತ್ತೆ ಸಿಕ್ಕರೆ
ತಿಳಿಸುವೆ
ಇಲ್ಲಾ ….
ಮುಂದಿನ
ಶಿವರಾತ್ರಿಗೆ
ಖಂಡಿತ ಹಿಡಿದು ಕೊಡುವೆ
–ಆಶಾ ಯಮಕನಮರಡಿ
ಬೆಳಗಾವಿ