ತತ್ವಪದಕಾರರ ಆರ್ಥಿಕಾವರಣ
ತತ್ವಪದಕಾರರ ಆರ್ಥಿಕತೆ ಎಂದರೆ ಇವತ್ತಿನ ಬಂಡವಾಳಶಾಹಿ ಮನೋಧರ್ಮದಿಂದ ಅರ್ಥೈಸುವಂಥಾದ್ದಲ್ಲ. ಅದು ಹಣ ವಿನಿಮಯ ಸ್ವರೂಪಕ್ಕಿಂತ ಭಿನ್ನವಾದ ವಸ್ತು ವಿನಿಮಯ, ಸಾಮಗ್ರಿ ವಿನಿಮಯ ಸ್ವರೂಪದ್ದು. ಉಪಜೀವನ ಹಾಗೂ ಉತ್ಪಾದನಾ ಸ್ವರೂಪದ್ದು. ತತ್ವಪದಕಾರರು ಒಂದೇ ಸಾಮಾಜಿಕ ಹಿನ್ನೆಲೆಯಿಂದ ಬಂದವರಲ್ಲ. ಕಾರಣ ಅವರ ಬದುಕು ಮಠಗಳ ಗದ್ದುಗೆಗಳ ಅಸ್ತಿತ್ವ. ಜನರ ಭಾವುಕ ಶ್ರದ್ಧೆ, ಭಕ್ತಿ ಇವೆಲ್ಲವೂ ಸಮಾಜದ ಮೂರ್ತವಾದ ಆರ್ಥಿಕ ಚಟುವಟಿಕೆಗಳ ಜೊತೆಗೆ ದಟ್ಟ ಸಂಬಂಧವನ್ನು ಹೊಂದಿವೆ. ಜಾತ್ರೆ, ಕೃಷಿ, ಹಬ್ಬ, ವ್ಯಾಪಾರ, ಆರಾಧನೆ, ಆಚರಣೆ ಇವೆಲ್ಲಾ ಆರ್ಥಿಕ ಪರಿಕಲ್ಪನೆಯಾದರೂ ಒಂದರೊಳಗೊಂದು ಬೆರೆತಂಥವವು. ಕೆಲವೊಂದು ಸಂತರ ಗ್ದುಗೆಗಳಿಗೆ ಅರ್ಪಿಸುವ ಹಾಲು, ತುಪ್ಪ, ಜೇನು, ಹೂವು, ಹಣ್ಣು, ಅನ್ನ, ಕಾಳು, ದನ ಇಂತಹ ಸಂಗತಿಗಳು ಕೃಷಿ ಹಾಗೂ ಜಾನುವಾರು ಸಂಸ್ಕೃತಿಗೆ ಸಂಬಂಧಪಟ್ಟಂಥವು. ಕಾರಣ ಜನರ ಭಕ್ತಿ ಶ್ರದ್ಧೆಗಳೆ ಸತ್ಯ ಒಂದು ಬಗೆಯದಾದರೆ ಅವರ ದುಡಿಮೆಯ ಮೇಲೆ ತತ್ವಪದಕಾರರಂಥ ಸಾಧು ಸಂತರ ಅಸ್ತಿತ್ವ ನಿಂತಿದೆ ಎನ್ನುವುದು ಇನ್ನೊಂದು ಸತ್ಯವಾಗಿದೆ. ತತ್ವಪದಕಾರರು ಕರ್ನಾಟಕದ ಬೇಸಾಯ, ನೇಕಾರಿಕೆ, ಪಶುಪಾಲನೆ, ವ್ಯಾಪಾರ, ಕರಕುಶಲ ಕಲೆಗಳು ಮುಂತಾದ ಅನೇಕ ದುಡಿಮೆಯ ಜೊತೆಗೆ ಬೆಸೆದುಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ತತ್ವಪದಕಾರರು ಅತ್ಯಂತ ಹೆಚ್ಚು ಸಂಬಂಧ ಹೊಂದಿರುವುದು ಭೂಮಿ ಹಾಗೂ ಕೃಷಿ ಸಂಸ್ಕೃತಿಯ ಜೊತೆಗೆ, ಅನೇಕ ಹಳ್ಳಿಗಳಲ್ಲಿ ಇಂಥ ಸಂತರ ಮಠಗಳಿಗೆ ಭೂದಾನ, ಜಲದಾನ ಮಾಡಿದ ವಿವರಗಳು ಸಿಗುತ್ತವೆ. ತತ್ವಪದಕಾರ್ತಿಯಾದ “ಹನುಮಂತವ್ವ” ನ ಆಶ್ರಮಕ್ಕೆ ಆದೋನಿಯ ಭಕ್ತೆಯೋರ್ವಳು 4 ಎಕರೆ 30 ಗುಂಟೆ ಭೂಮಿಯನ್ನು ದಾನ ಮಾಡಿದ್ದಾಳೆ. ಲಿಂಗಸುಗೂರಿನ ಐದನಾಳ ಗ್ರಾಮದ ಭಕ್ತರು ನೀರಲಕೇರಿ ಬಸವಲಿಂಗರ ಕಾರ್ತಿಕ ಮಾಸದಲ್ಲಿ ಜಾತ್ರೆಯನ್ನು ಆಚರಿಸುವದರೊಂದಿಗೆ ಶತಮಾನೋತ್ಸವವನ್ನು ಆಚರಿಸುವುದು ತಿಳಿದು ಬರುತ್ತದೆ. ಐದನಾಳು ಗ್ರಾಮದ ಭಕ್ತರು ಬಸವಲಿಂಗಪ್ಪರ ಗದ್ದುಗೆಗೆ ಇಲ್ಲಿಯ ಜನರು ಊರ ಹೊರಗೆ ಜಾಗ ಕೊಟ್ಟು 4 ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ. ಅಮಾವಾಸ್ಯೆ ಅಥವಾ ಜಾತ್ರೆಯ ಸಮಯದಲ್ಲಿ ಬಂದ ಭಕ್ತಾದಿಗಳು ಹಣ ಅಥವಾ ದವಸ ಧಾನ್ಯಗಳನ್ನು ಅರ್ಪಿಸಿ ಕೃತಾರ್ಥರಾಗಿದ್ದನ್ನು ಕಾಣಬಹುದು. ಬಲರಾಮಪ್ಪನ ದೇವಸ್ಥಾನಕ್ಕೆ ಅಡತಿ ಅಂಗಡಿ ವ್ಯಾಪಾರ ಮಳಿಗೆಗಳಿಂದ ಬಾಡಿಗೆ ಬರುತ್ತದೆ.
ನೀರು ಆವಿಯಾಗಿ ಮೋಡವಾಗಿ ಮತ್ತೆ ನೀರಾಗಿ ಹೇಗೆ ಬಂದು ಆವರ್ತನಾಶೀಲವಾದ ಸಂಸ್ಕೃತಿಯನ್ನು ನಿರ್ಮಿಸುತ್ತದೆಯೋ ಅಂಥಾ ಒಂದು ಸಂಬಂಧವನ್ನು ತತ್ವಪದಕಾರರಲ್ಲಿ ಕಾಣುತ್ತೇವೆ. ಮಂದಕಲ್ಲ ಭೀಮಲಿಂಗಪ್ಪನಲ್ಲಿ ಹೀಗಿದೆ:
ಹಸಿನೋಡಿ ಬಿತ್ತಬೇಕು ಗಟ್ಟಿಬೀಜ
ದಿನ ದಿನ ಬೆಳೆಯುವಂಥಾ ತೇಜಾ
ಕಸ ಕಳೆ ಕಿತ್ತೆ ಹಾಕಬೇಕು ಅರಿವಿನ
ಮನಜಾ ಮರೆಯದಂತೆ ನೀ ನೋಡಿ ಬೆಳೆಯೋ
ಇಲ್ಲಿನ ಭೂಮಿ ಬೆಳೆಯಂಥ ಸಾವಯವ ಸಂಬಂಧಗಳು ಬರೀ ಕೃಷಿ ಚಟುವಟಿಕೆಗಳಾಗದೆ ಸಮುದಾಯದ ಪ್ರಜ್ಞಾ ಭಾಗಗಳಾಗಿ ಕಾಣುತ್ತೇವೆ. ಅಂದರೆ ಉತ್ತಮ ಕೃಷಿಯಿಂದ ಉತ್ತಮ ಬದುಕು ಉತ್ತಮ ಬದುಕಿನಿಂದ ಉತ್ತಮ ಸಮಾಜದಂತಹ ಸ್ವಾನುಭವ ಸಂವೇದನೆಗಳನ್ನು ಕಾಣುತ್ತೇವೆ. ತತ್ವಪದಕಾರರ ಆರ್ಥಿಕ ಚಿಂತನೆಗಳಿಂದ ಪರಾವಲಂಬಿತನವನ್ನು ಬಯಸದ ಸ್ವನಿರ್ಮಿತ ಸ್ವಾವಲಂಬ ಸ್ವರೂಪಮುಖಿ ಚಿಂತನೆಗಳಾಗಿವೆ. ಕೂಡಲೂರು ಬಸವಲಿಂಗಪ್ಪನು ಹೇಳುವಂತೆ:
ಒಕ್ಕಲು ಮಗ ಒಳ್ಳೆಯನಮ್ಮ ಈತ
ಮುಕ್ಕಣ್ಣ ಶಿವನೆಂದು ತಿಳಿದುಕೊಳ್ಳಮ್ಮ
ನಾನೆಂಬೋ ಅಹಂಕಾರದ ಕಠಿಣದ ಭೂಮಿಗೆ
ತಾನೊಂದು ನೇಗಿಲು ಹೂಡಿದನಮ್ಮಾ
ಎನ್ನುವಲ್ಲಿ ಸ್ವಾವಲಂಬಿಯಾದ ಅಂತಃಸತ್ವವುಳ್ಳ ಬಾಹ್ಯ ಹಾಗೂ ಆಂತರಿಕ ಕೃಷಿಯನ್ನು ವಿಶ್ಲೇಷಿಸುತ್ತಾನೆ. ಬಹಳಷ್ಟು ತತ್ವಪದಕಾರರು ಜಾತ್ರೆ ಉತ್ಸವಗಳಲ್ಲಿ ಕಾಲಜ್ಞಾನದ ಹೇಳಿಕೆಗಳನ್ನು ಬಲಿ ಕೊಡುವ ಬೂದಿ ನೀಡುವ ಸಂಪ್ರದಾಯಗಳು ಫಲವಂತಿಕೆಯ ಪ್ರತೀಕವಾಗಿವೆ. ಹೀಗೆ ಕೆಲವು ತತ್ವಪದಕಾರರು ಪಶು ಸಂಸ್ಕೃತಿಯ ಬಗ್ಗೆ ಮಾತನಾಡುವುದು ಕಾಣುತ್ತೇವೆ. ತತ್ವಪದಕಾರರ ತಿರುಗಾಟದ ಗುಣವೂ ಇದರಲ್ಲಿ ಒಂದು. ತಮ್ಮ ನೆಲೆಗೆ ತಕ್ಕ ಭಾಗ ಅಥವಾ ಗುರುವನ್ನು ಅರಸುತ್ತಾ ಹೋಗುವುದು, ತಕ್ಕ ಸ್ಥಾನ ದೊರೆತಾಗ ನೆಲೆ ನಿಲ್ಲುವುದು, ಅಲ್ಲಿ ತಮ್ಮ ಆಧ್ಯಾತ್ಮಿಕ ಅನುಭವವನ್ನು ಹುರಿಗೊಳಿಸಿಕೊಳ್ಳುವುದಲ್ಲದೆ ಸಾಮಾಜಿಕ ಕಳಕಳಿಯನ್ನು ತೋರುವುದು ಅದಮ್ಯ ಜಾಗೃತ ಪ್ರಜ್ಞೆಯನ್ನಾಗಿ ಮೂಡಿಸುವ ಮಾರ್ಗಗಳು ಹಾಗೂ ಸ್ವಾವಲಂಬಿ ಆರ್ಥಿಕ ಚಿಂತನೆಗಳ ಫಲವಾಗಿವೆ.
ಇದೂ ಅಲ್ಲದೆ ನೇಕಾರಿಕೆ, ವ್ಯಾಪಾರ, ಕರಕುಶಲ ವಸ್ತುಗಳ ಉತ್ಪಾದನೆ ಹಿನ್ನೆಲೆಯಿಂದ ಬಂದ ತತ್ವಪದಕಾರರ ಸಂವೇದನೆಗಳು ಆರ್ಥಿಕವಾಗಿ ಸಫಲತೆಯನ್ನು ನೀಡುವುದೇ ಆಗಿದೆ. ಹೀಗಿದ್ದರೂ ಇಂಥಾ ಸಾಧು ಸಂತರ ಮಠಗಳು ವ್ಯಾಪಾರ ಮಾರ್ಗಗಳನ್ನು, ರಾಜಕೀಯ ನೆಲೆಗಳನ್ನು ಆಕರ್ಷಿಸುತ್ತವೆ. ರಾಜಕೀಯ ಭವಿಷ್ಯವನ್ನು ತೀರ್ಮಾನ ಮಾಡುವ ಚಟುವಟಿಕೆಗಳನ್ನು ಸಂಘಟಿಸುವ ಸಂಕುಚಿತ ಫಲಾಪೇಕ್ಷೆಗಳು ಪ್ರಸ್ತು ದಿನಗಳಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿವೆ. ಆದರೆ ವೈಯಕ್ತಿಕ ಸಾಧನೆಯ ಮೂಲಕ ಬಿಡುಗಡೆಯಾಗಬೇಕು. ಮೋಕ್ಷ ಹೊಂದಬೇಕು ಎಂದು ಹೇಳುವ ತತ್ವಪದಕಾರರಿಗೆ ಇಂಥಾ ಆಕರ್ಷಣ ಗುಣ ಕಡಿಮೆ ಎಂದೇ ಹೇಳಬಹುದು.
ಪರಂಪರೆಯಲ್ಲಿ ಶ್ರಮ ಹಾಗೂ ಸ್ವಾವಲಂಬಿ ಗುಣಕ್ಕಿಂತ ಶ್ರಮವಿಲ್ಲದ ಹಾಗೂ ಪರಾವಲಂಬದ ಗುಣ ಹೆಚ್ಚು. ಮಂಜೂರಿಗೆ ಬಂದದ್ದು, ಪ್ರಾಶಸ್ತ್ಯ ಪಡೆದದ್ದು ಎದ್ದು ಕಾಣುತ್ತದೆ. ಇಂದು ಚಿಕ್ಕ ಪುಟ್ಟ ಶಾಲೆಗಳೂ ಸಹಿತ ತಮಗೆಂದು ಮಠ ಕಟ್ಟಿಕೊಂಡು ಅದಕ್ಕೊಂದು ಗುರುವನ್ನು ನೇಮಿಸಿಕೊಂಡು ಸಾಮಾಜಿಕ ಸಂಘಟನೆ ಮಾಡಿ ಅದನ್ನು ಆಧುನಿಕ ರಾಜಕಾರಣದೊಂದಿಗೆ ಸಮೀಕರಿಸಿ, ಲೌಕಿಕ ಸಂತರಿಗೆ ಪಾರಮಾರ್ಥಿಕವಾದ ಹಾಗೂ ಧಾರ್ಮಿಕವಾದ ಅಸ್ತಿತ್ವ ಸಿಗುವುದಕ್ಕಿಂತಲೂ ಹೆಚ್ಚಾಗಿ ಲೌಕಿಕವಾದ ಅಸ್ತಿತ್ವಗಳು ಸಿಗುತ್ತಿವೆ. ಖ್ವಾಜಾ ಬಂದೇ ನವಾಜ್, ತಿಂಥಣಿ ಮೋನಪ್ಪಯ್ಯನವರಂಥ ಶಾಶ್ವತ ಜಾಗಗಳು ಅವರ ಸಂತತನಕ್ಕಾಗಿ ಮೂಂಚೂಣಿಗೆ ಬರದೆ ಸಮಕಾಲೀನ ಆರ್ಥಿಕ, ಧಾರ್ಮಿಕ, ರಾಜಕಾರಣದ ಭಾಗಗಳಾಗಿ ನಿರ್ವಚನಗೊಳ್ಳುತ್ತಿವೆ. ದಮನಿತ ವರ್ಗಗಳ ಧ್ವನಿಯಾಗಿ ಹುಟ್ಟಿದ ಇಂಥಾ ಸಂತ ಸಾಧು ಅನುಭಾವಿಗಳ ಪರಂಪರೆಗಳು ಅವರ ಅನುಯಾಯಿಗಳು ಇಂದು ತುರೀಯ ವ್ಯವಸ್ಥೆಯ ಮೂಲಕ ಪ್ರಗತಿ ಪಡೆಯಲು ಯೋಚಿಸುತ್ತಿರುವುದು ಪ್ರಜಾಪ್ರಭುತ್ವದ ವ್ಯಂಗ್ಯವೇ ಆಗಿದೆ.
–ಡಾ.ಸರ್ವಮಂಗಳ ಸಕ್ರಿ ರಾಯಚೂರು
ಅಡಿ ಟಿಪ್ಪಣಿಗಳು:
1. ಬಸವರಾಜ ಸಬರದ (ಸಂ, 2000, ಹೈದ್ರಾಬಾದ್ ಕರ್ನಾಟಕದ ತತ್ವ ಪದಗಳು, ಪು. 130
2. ಅದೇ,
3. ರಹಮತ್ ತರೀಕೆರೆ, ಮುಸ್ಲಿಂ ತತ್ವಪದಕಾರರು ಹೀಗೆನ್ನಲು ಏಕೆ ಕಷ್ಟವಾಗುತ್ತದೆ.
4. ವಡಿಕೆ ತಾತಪ್ಪಯ್ಯ, 1957, ಅಮೃತ ಶಿಖಾಮಣಿ, ಪು. 109