ಬಾಲ್ಯವೆಂದರೆ

ಬಾಲ್ಯವೆಂದರೆ ನನ್ನೂರು ಗುಡಗೇರಿಯ
ಇಪ್ಪತ್oಕಣದ ತುಂಬಿದಮನೆ
ಅಜ್ಜ ಅಮ್ಮ ದೊಡ್ಡಪ್ಪ ದೊಡ್ಡವ್ವ ಕಾಕಾ ಕಕ್ಕಿ
ಅಕ್ಕ-ತಮ್ಮ ಅಣ್ಣ-ತಂಗಿ ಅತ್ತೆ-ಮಾವ ಚಿಗವ್ವ
ಎಲ್ಲ ಸಂಬಂಧಗಳ  ಸೂರು….

ಬಾಲ್ಯವೆಂದರೆ…
ದೊಡ್ಡಪ್ಪನ ಎಂಜಲದ ತಾಂಬಾಲ
ಕಾಕಾನ ಕಿಸೆಯೊಳಗಿನ ನಾಕಾಣೆ
ಕೈತುಂಬಾ ಪಾಪಡಿ ಚಕ್ಕುಲಿ ಕರದಂಟು
ಬೆಲ್ಲದ ಅಂಟಂಟು  ಇಂದಿಗೂ ನಮಗದು ಮರೆಯಲಾಗದ ನೆನಪಿನ ಗಂಟು….

ಬಾಲ್ಯವೆಂದರೆ…
ಗುಡಗೇರಿಯ ರೈಲ್ವೆ ಸ್ಟೇಷನ್
ಹಳಿಗಳ ಮೇಲಿನ ಚಪ್ಪಟೆ ನಾಣ್ಯ
ಜಂಗ್ ಹಿಡಿದು  ಸೋರುವ ನಳ
ಗೂಡಂಗಡಿಯ ಮಿರ್ಚಿ ಗಿರಮಿಟ್ಟು
ನೆತ್ತಿಗೇರಿದ ಖಾರ ಕಣ್ಣಲ್ಲಿ ನೀರ…

ಬಾಲ್ಯವೆಂದರೆ….
ನಾಗನೂರು ಕೇರಿ ರಾಚನಕಟ್ಟಿ ಗಂಗಿಬಾವಿ
ಎಮ್ಮೆ ಬಾಲ ಹಿಡಿದ  ಈಜು
ಕಾಲಿಗೆ ಮೆತ್ತಿದ ಕೆಸರು
ಎರಿ ಹೊಲದ ರೊಟ್ಟಿ ಮೊಸರು
ಪುಂಡಿಪಲ್ಲೆ  ಹುಳಪಲ್ಲೆ ಕರಿಂಡಿ ಹೈಬ್ರಿಡ್ ರೊಟ್ಟಿ
ಸೌತೆಕಾಯಿ ಹಕ್ಕರಿಕೆಯ ಜವಾರಿ ಊಟ….

ಬಾಲ್ಯವೆಂದರೆ….
ಗುಡಗೇರಿಯ ಹಬ್ಬ  ಹರಿ ದಿನಗಳು
ದೀಪಾವಳಿಯ ಹೊಸ ಬಟ್ಟೆ
ಮಾಳಗಿ ಮ್ಯಾಲ ಸಗಣಿಯ ಪಾಂಡವರು
ಸುಣ್ಣ ಕೆಮ್ಮಣ್ಣ ತತ್ರಾಣಿ ಕಡ್ಡಿ ಅಲಂಕಾರ
ಮಧ್ಯದಲ್ಲಿ ಹಿರಿಯ ಪಾಂಡವ
ಆತನ ಬಳಗ ದನದ ಕೊಟ್ಟಿಗೆಯಲ್ಲಿ
ಸಣ್ಣ ಚಟಿಕೆಯಲ್ಲಿ  ಬೇಯುವ ಅನ್ನ… ಹಟ್ಟೆವ್ವ

ಬಾಲ್ಯವೆಂದರೆ……….
ಹಜಾರದ ಪಕ್ಕದ ವಿಶಾಲ ದನದ ಕೊಟ್ಟಿಗೆ
ಜಾನುವಾರಗಳ ಅಂಬಾ
ಕೊರಳ ಗಂಟಿ ತಣ ತಣ
ಮುಸುರಿ ಬಾನಿ, ದಂಟಿನ ಮೇವು
ಸಗಣಿ  ಹೊತ್ತಲ, ಕುಳ್ಳು ಹತ್ತಿ ಕಟ್ಟಿಗೆ
ಬಿಸಿನೀರ ಹಂಡೆ, ಮಾನಿಂಗನ ಬಳ್ಳಿ

ಬಾಲ್ಯ ಎಂದರೆ…….
ಹೊಲದ ಸೀಗಿ ಹುಣ್ಣಿಮೆ
ಬಿದಿರು ಬುಟ್ಟಿಯ ತುಂಬ ಕರಚಿಕಾಯಿ
ಕುಂಬಳದ ಗಾರಿಗಿ, ಉಂಡಗಡುಬು ಪುಂಡಿಪಲ್ಲೆ
ಹೊಲದ ದಪ್ಪಕ್ಕಿಯ ಬುತ್ತಿ ಕವಳಿ ಉಪ್ಪಿನಕಾಯಿ.

ಬಾಲ್ಯವೆಂದರೆ…..
ಸುರಬುರಲಿ, ಪಿರಗಿ, ನೇರಳೆ
ಬೇಲಿ ಮುಳ್ಳಿನ ಕೆಂಪಣ್ಣು
ಮಾವಿನ ಹೀಚು ಹುಣಸೆ ಮರ ಚಿಗಳಿ..

ಬಾಲ್ಯವೆಂದರೆ….
ದ್ಯಾಮವ್ವನ ಜಾತ್ರಿ ಬೆಂಡು ಬೆತ್ತಸ ರುಚಿ
ಬಳೆ ಸರ ರಿಬ್ಬನ್ಗಳ ಸಡಗರ
ರಾತ್ರಿ ನಾಟಕಗಳ ರಂಗು
ಸಣ್ಣ ಕಾಕಾನ ನಾಯಕ ಪಾತ್ರ
ಅಜ್ಜನ ಕೆಂಗಣ್ಣು….

ಬಾಲ್ಯವೆಂದರೆ….
ಮನೆಯ ಮುಂದಿನ ದೊಡ್ಡ  ಕಟ್ಟಿ
ಅದರ ಮ್ಯಾಲೊಂದು ಗುಡಾರ ರಾತ್ರಿ
ತಲೆಯ ಮೇಲೆ ಚಂದ್ರ ಚಿಕ್ಕಿಗಳ ಚಪ್ಪರ
ಯಮ್ಮನ ಕಥೆಗಳ ಜೋಗುಳ
ಮೊಮ್ಮಕ್ಕಳ ಕಣ್ತುಂಬ ನಿದ್ದೆಯ ಜೋಕಾಲಿ ..

 

-ಪ್ರೊ ವಿಜಯಲಕ್ಷ್ಮಿ ಪುಟ್ಟಿ 
ಬೆಳಗಾವಿ

Don`t copy text!