ಶರಣ ನಿಧಿ

ಶರಣ ನಿಧಿ

ಫಲತುಂಬಿಕೊಂಡ ತೋಟ
ಕಾಯುವವರಿಲ್ಲದೇ
ಬರಡಾಗುತ್ತಿರುವಾಗ
ಎದ್ದು ಬಂದನು ಈ ‘ಸಿದ್ಧ’
ಅದಕೆ ‘ಲಿಂಗ’ ಕಳೆಯ ತುಂಬಲು…

ಸಿಂದಗಿಯ ಸಿದ್ಧರಾಮ
ಎಡೆಯೂರಿನ ಆರಾಮಕೊಲಿದು
ತನುವೇ ತೋಂಟವಾಗಲೆಂದು
ಮಿಗಿಲಾದ ತೋಳಬಲವ ಬಳಸಿ
ಮನದ ಗುದ್ದಲಿಯ ಹಿಡಿದು
ಅಗೆದು ಅಗೆದು ಸುಟ್ಟುಬಿಟ್ಟ
ಜಗದ ಭ್ರಾಂತಿ ಬೇರನು…..

ಬೆಳೆವ ಭೂಮಿ ಫಲವಾಗಲೆಂದು
ಪ್ರಳಯದ ಕಸ ಅಳಿಯಲೆಂದು
ವಚನದ ಮಳೆ ಕರೆದು ಕರೆದು
ಫಸಲು ಹುಲುಸಾಗಿಸಿ ಬಿಟ್ಟ
ತೋಂಟದ ಯತಿಯ ನಿಲುವ
ನಮ್ಮ ಮುಂದೆ ಇಟ್ಟ….

ಸುರಿವ ಬೆಳಕು,ಸುಳಿವ ಗಾಳಿ
ಜೀವಕುಲಕೆ ಅನ್ಯವಿಲ್ಲದೆ ಸಲ್ಲುವಂತೆ
ಅನ್ನ-ಅರಿವು ಈ ಜಗಕೆ ಸಂದು
ನಗುವು ಬಾಳ ತುಂಬಲೆಂದು
ಬಯಸಿ,ಹರಸಿ ನಿರುತ ದುಡಿದ
ಮಾತೃ ಹೃದಯಿ ಸಂತ…

ಕೊಳಚೆ ಕಸವ ನುಂಗಿಕೊಂಡು
ಸಿರಿ ಬೆಳೆಯನೀವ ಭೂಮಿಯಂತೆ
ಈ ಜಗವು ಇತ್ತ ನಂಜು ನುಂಗಿ
ಸಿಹಿಜೇನನು ದಾಸೋಹಗೈದ
ಬಯಲ ಕಳೆಯೇ ಮೈವೆತ್ತ
ಕರುಣೆಯ ಮೂರ್ತಿ ಮಹಾಂತ.

ನುಡಿಯ ಬೆಡಗು ಬೆಳಗಲೆಂದು
ನೇಗಿಲದ ಗುಡಿಯು ಹಾರಲೆಂದು
ಸಂಚು ವಂಚನೆ ಅಳಿಯಲೆಂದು
ಅಲ್ಲಾ-ಅಲ್ಲಮರೊಂದೇ ಎಂದು
ಎಲ್ಲರೊಳಗು ಅನ್ಯವು ಸಲ್ಲದೆಂದು
ಮಠವು ಅರಿವಿನಾಲಯವಾಗಲೆಂದು
ದೀಕ್ಷೆಯ ತೊಟ್ಟನು,ಆಚಾರದಿ ನಡೆದನು
ನೋಡಿತು ಜಗವು ಬೆರಗುಗೊಂಡು…..

ಆನೆ ಅಂಬಾರಿ,ಅಂದಣ ಸಡಗರ
ಶರಣಗೆ ಸಲ್ಲದೆಂದು,
ಭೋಗವು,ಭಾಗ್ಯವು ರಾಜನ ರೋಗವು
ವಿರತಗೆ ದೂರವೆಂದು…
ಜಗದ ಭಾರವ ಹೊರುವಾತನೆ ಜಗದ್ಗುರು
ಭಕ್ತಗೆ ಭಾರವಾಗಕೂಡದೆಂದು
ಜಂಗಮನಾಗಿ ನಡದೇ ನಡೆದನು
ಜಗದ ಏಳಿಗೆಗೆಂದು…….

ಭಿನ್ನವ ತೊರೆಯಿರಿ, ಇಲ್ಲಿಗೆ ಬನ್ನಿರಿ
ಹಿಡಿಯಿರಿ ಬನ್ನಿ ಬನ್ನಿ ಎಂದು….
ಹರಳಯ್ಯ-ಮಧುವಯ್ಯರು
ಹರಸಿದಾ ದಿನವಿಂದು
ನಮಗೆ ‘ಮಹಾನವಮಿ’ ಎಂದು
ಪ್ರೀತಿಗೆ ಮಿಡಿದರು, ಭೀತಿಗೆ ಜಡಿದರು
ಹೆದರದೇ ಬಾಳಿರೆಂದು
ಸೂರ್ಯನುದಯದಿ ಬೆಳಕಲಿ ಕಂಡರು
ಮರಣವೇ ಮಹಾನವಮಿ ಆಯಿತೆಂದು.


-ಕೆ.ಶಶಿಕಾಂತ
ಲಿಂಗಸೂಗೂರ

Don`t copy text!