ಅಕ್ಕರೋತ್ಸಾಹಿ

ಅಕ್ಕರೋತ್ಸಾಹಿ

(ಪೂಜ್ಯ ಲಿಂಗೈಕ್ಯ ಡಾ. ತೋಂಟದಾರ್ಯ ಸಿದ್ದಲಿಂಗಮಹಾಸ್ವಾಮಿಗಳ ಜಯಂತಿ ನೆನಪಿಗಾಗಿ)

ಜಗದೊಳಗಿನ ಜಗದ್ಗುರುಗಳೆಲ್ಲ ಜಾಢ್ಯದ
ಹಚ್ಚಡದಲಿ ಮಿರಿ ಮಿರಿ ಮಿಂಚುವಾಗ
ಕಾಯಕ ದಾಸೋಹಗಳಿಗೆ ದಿಕ್ಕು ತಪ್ಪಿಸಿದಾಗ
ಮಾನವರೊಡನೆ ಮತಿಹೀನರಂತೆ ವರ್ತಿಸಿದಾಗ
ಮಧಾಂಧರಾಗಿ ಪೀಠಗಳನೇರಿ ಭಯಾನಕ ಗುರುಗಳಾದಾಗ

ಕರುನಾಡೇ ಕಣ್ತೆರೆದು ನೋಡುವಂತೆ
ಆಶಾದೀಪವಾಗಿ ಕಂಗೊಳಿಸಿ
ಸೂಜಿಗಲ್ಲಿನಂತೆ ವಾಗ್ಝರಿಯ ವಾಗ್ಮಿಯಾಗಿ
ಸರ್ವರನೂ ಸಹೃದಯನಾಗಿರಿಸಿದ ಸಂತ

ಕಳ್ಳರು ಸುಳ್ಳರು ಸೇರಿ ಕಪ್ಪತಗಿರಿಯ ಮೇಲೆ
ಉರಿಯನು ಹಚ್ಚಿದಾಗ ಹೋರಾಟಕೆ ಬೀಜವಾದ ಧೀಮಂತ

ಪೂಜೆ ಪುಣ್ಯತಿಥಿಗಳಲ್ಲಿಯೇ
ಮಠ ಪೀಠಗಳನೇರಿ ಮುಳುಗಿ ಮದವೇರಿಸಿಕೊಂಡಾಗ
ಜಾತ್ರೆ ಉತ್ಸವಗಳಿಗೆ ಸಾಂಸ್ಕೃತಿಕ ಸಂಚಲನದ
ಝೇಂಕಾರ ಮೊಳಗಿಸಿದ ಸಂತ

ಕಲ್ಲುಸಕ್ಕರೆ ವಿಭೂತಿಗಳ ಪ್ರಸಾದ ಹಂಚುತ್ತಲೇ
ಪುಣ್ಯದ ಬೆಳಕಾಗಿದ್ದೇವೆಂಬ ಪ್ರದರ್ಶಕರಿಗೆ
ಪುಸ್ತಕದ ಕಿಚ್ಚು ಹೊತ್ತಿಸಿದ ಧೀಮಂತ

ಧರ್ಮದ ಜಯ ಪತಾಕೆಗಳು
ಮಠದ ಆವರಣಗಳಲ್ಲಿಯೇ ಗಿರಕಿಹೊಡೆದಾಗ
ಧರ್ಮ ಪತಾಕೆಗೆ ಸಾಂಘಿಕ ಸ್ವರೂಪವಾದ ಸಂತ
ಆಳುವವರ ಮತಿಹೀನರ ಮಾತುಗಳಿಗೆ
ಕೆಚ್ಚೆದೆಯಿಂದ ಘರ್ಜಿಸಿದ ಧೀಮಂತ

ಅಕ್ಷರ ಅಕ್ಕರೆಗಳಿಗೆ ಅನ್ವರ್ಥಕವಾಗಿ
ಶೋಧನೆ ಸಾಧನೆಗಳಿಗೆ ಆಶ್ರಯದಾತರಾಗಿ
ಮಾತುಗಳಿಗೆ ಮೌಲ್ಯದ ಪ್ರತೀಕವಾಗಿ
ಕರುನಾಡಿನ ಕುಲಗುರುವಾಗಿ
ಅಕ್ಕರೋತ್ಸಾಹಿ ಜಗದ ಗುರುಗಳಾಗಿ
ಸಂತತನಕೆ ಸಾಕ್ಷಿ ಪ್ರಜ್ಞೆಯಾಗಿ
ಧೀಮಂತತನಕೆ ಸ್ಫೂರ್ತಿ ಸೆಲೆಯಾಗಿ
ಕಾರುಣ್ಯದ ಕಾಂಚನವಾದವರು

ಡಾ. ನಾಹೀರಾ ಕುಷ್ಟಗಿ

Don`t copy text!