ಬಯಲಲ್ಲಿ ಬಯಲಾಗಿ ಅಜರಾಮರರು

ಬಯಲಲ್ಲಿ ಬಯಲಾಗಿ ಅಜರಾಮರರು

12ನೇ ಶತಮಾನ, ಶರಣ ಶತಮಾನ,
ಅಪೂರ್ವ ಕ್ರಾಂತಿ, ದೂರವಾದ ಬ್ರಾಂತಿ.
ವರ್ಗ ವರ್ಣ ಲಿಂಗಭೇದ,
ಆಶ್ರಮ ರಹಿತ ಸಮಾಜಕ್ಕೆ ಹೋರಾಟ,
ಧರ್ಮ ಸತ್ಯ ಶುದ್ಧ ಆಚರಣೆ…

ಲಿಂಗ ವಸ್ತು ಅಲ್ಲ, ಜಂಗಮ ಜಾತಿ ಅಲ್ಲ,
ಬಸವಣ್ಣನವರ ಅರ್ಥಪೂರ್ಣ ಮೌಲ್ಯಗಳು
ಸಮಕಾಲೀನ ಶರಣರ ಆಚರಣೆ,
ಈಗ ಅವೆಲ್ಲವುಗಳ ಮೂಲೆಗುಂಪಾಗಿಸಿ,
ತಿಳಿದಂತೆ ಅರ್ಥೈಸಿಕೊಳ್ಳುವ
ಆಧುನಿಕ ಬ್ರಾಂತಿ ನಮ್ಮದು…

ಸ್ಥಾವರಕ್ಕೆ ಅಳಿವುಂಟು,
ಜಂಗಮಕ್ಕೆ ಅಳಿವಿಲ್ಲ ಎಂದ ಬಸವಣ್ಣ,
ಮೂರ್ತಿ ಪೂಜೆ ಸಲ್ಲದು ಎಂದ ಬಸವಣ್ಣನ ಅಸಂಖ್ಯಾತ ಮೂರ್ತಿಗಳ ಅನಾವರಣ
ಜಗದ ತುಂಬಾ,
ಆತನ ಅಸಂಖ್ಯಾತ ಮೌಲ್ಯಗಳ ಭದ್ರ ಆವರಣ…..

ಧರ್ಮ ಮಾನ್ಯತೆಗೆ ಹೋರಾಟ,
ಹಕ್ಕುಗಳಿಗಾಗಿ ಪರದಾಟ,
ಲಿಂಗಾಯತ ವೀರಶೈವಗಳ
ನಡುವಿನ ಸತತ ದೊಂಬರಾಟ,
ಜನಸಾಮಾನ್ಯನ ಸ್ಥಿತಿ ಅಯೋಮಯ ರಾಠಾಳ..

ಸರ್ವಕಾಲಿಕ ಸಮಾನತೆ ಸಮತೆ
ಪ್ರೀತಿ ತೋರಿದ ಶರಣ ಸಂಸ್ಕೃತಿ,
ಕೆಲವೊಮ್ಮೆ ಅರ್ಥವಾಗದ ಹಿನ್ನೆಲೆಯಲ್ಲಿ
ಜಡ ಸ್ಥಾವರದ ಮುನ್ನೆಲೆಯಲ್ಲಿ
ಮೌಡ್ಯಗಳ ಕಪಿಮುಷ್ಠಿಯಲ್ಲಿ…

ಮೌಲ್ಯಭರಿತ ಶರಣರ ಸಿದ್ಧಾಂತ
ಇದೀಗ ಜಂಗಮದಿಂದ ದೂರ ದೂರ,
ವಚನ ಸಂದೇಶ, ವಚನ ಕಾವ್ಯಧಾರೆ,
ವಚನ ಚಳುವಳಿ, ವಚನಕಾರರು,
ಮನುಕುಲದ ದಾರಿ ದೀಪ….

ಶರಣರ ಆಶಯ, ಕನಸು
ನಮ್ಮ ಮುಂದಿನ ಭವಿಷ್ಯ
ಶರಣರು ಮನುಕುಲದ ಕೊಡುಗೆ
ನಮ್ಮ ಮುಂದಿನ ಜೀವನದ ಉಡುಗೆ,
ಬಯಲಲ್ಲಿ ಬಯಲಾಗಿ ಅಜರಾಮರರು
ನಮ್ಮ ನಿಜಕುಲದ ಶರಣರು…..

ಪ್ರೊ ವಿಜಯಲಕ್ಷ್ಮಿ ಪುಟ್ಟಿ (ತಿರ್ಲಾಪುರ)
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ

Don`t copy text!