ಜಿಲ್ಲಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ, ರಾಯಚೂರು ಅವರು ಜಿಲ್ಲಾ ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನವನ್ನು ರಾಯಚೂರಿನಲ್ಲಿ ೨೬ನೇ ಫೆಬ್ರುವರಿ ೨೦೨೩ ಆಯೋಜಿಸಿದ್ದರು. ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಡಾ. ಶ್ರೀಮತಿ ಸರ್ವಮಂಗಳ ಸಕ್ರಿ ಆಯ್ಕೆ ಆಗಿದ್ದರು. ಸಮ್ಮೇಳನದಲ್ಲಿ
ಅಧ್ಯಕ್ಷರ ನುಡಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ
–ಸಂಪಾದಕ
ಕನ್ನಡ ನಾಡಿನ ಪ್ರಿಯ ಜಾನಪದ ಮನಸ್ಸುಗಳಿಗೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು. ಪ್ರಪ್ರಥಮವಾಗಿ ಜಿಲ್ಲೆಯ ಸಮಸ್ತ ಜಾನಪದ ಅಭಿಮಾನಿಗಳಿಗೆ, ಹಾಡುಗಾರರಿಗೆ, ಕಲಾಕಾರರಿಗೆ, ಜಾನಪದ ಕಲೆಯನ್ನು ಶ್ರೀಮಂತಗೊಳಿಸಿ ಪ್ರಶಸ್ತಿಗಳನ್ನು ಪಡೆದ ಜಾನಪದ ಸಂಗೀತಗಾರರಿಗೆ ಮತ್ತು ತತ್ವಪದಕಾರರಿಗೆ ಶರಣೆನ್ನುತ್ತೇನೆ.
ರಾಯಚೂರು ಜಿಲ್ಲೆಯ ಪ್ರಥಮ ಜಾನಪದ ಸಮ್ಮೇಳನವನ್ನು ನಾವಿಂದು ನಮ್ಮ ಜಿಲ್ಲೆಯಲ್ಲಿ ಮಾಡುತ್ತಿದ್ದೇವೆ. ನನ್ನ ಅನುಭವದ ಪ್ರಕಾರ ನನಗಿಂತ ಹಿರಿದಾದವರಿಗೆ ಅಧ್ಯಕ್ಷೀಯ ಸ್ಥಾನವನ್ನು ಕೊಡಬೇಕಾಗಿತ್ತು ಎಂದು ನನ್ನ ಪ್ರಾಮಾಣಿಕ ಮನವಿಯಾಗಿತ್ತು. ಹಿರಿಯರು ನಿರ್ವಹಿಸುವ ಅಧ್ಯಕ್ಷೀಯ ಸ್ಥಾನವನ್ನು ನನಗೆ ನೀಡಿದ್ದೀರಿ. ನಿಮ್ಮ ಪ್ರೀತಿ ಅಂತಃಕರಣಗಳಿಗೆ ನಾನು ಶರಣೆನ್ನುತ್ತೇನೆ.
ರಾಯಚೂರು ಕೋಟೆ ಕೊತ್ತಲಗಳ ನಡುವೆ ನಡೆದ ನನ್ನ ವಿದ್ಯಾಭ್ಯಾಸ ನನ್ನ ಬದುಕನ್ನು ಕಟ್ಟಿಕೊಂಡ ಈ ಊರಿನಲ್ಲಿ ನಡೆಯುತ್ತಿರುವುದು ನನಗೆ ಹೆಚ್ಚು ಸಂತಸವಾಗಿದೆ. ನಿಮ್ಮ ವಿನಮ್ರ ಮನಸ್ಸುಗಳಿಗೆ ನನ್ನ ನಮಸ್ಕಾರಗಳು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕರಾದ ಡಾ.ಶಿವರಾಜ ಪಾಟೀಲ್ ಮತ್ತು ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಷ||ಬ್ರ|| ಶಾಂತಮಲ್ಲಿ ಶಿವಾಚಾರ್ಯರು, ಉದ್ಘಾಟಕರು ಶ್ರೀ ಶಂಕರ ಬಿ.ಪಾಟೀಲರು, ಡಾ.ಎಸ್.ಬಾಲಾಜಿ ರಾಜ್ಯಾಧ್ಯಕ್ಷರು, ಸನ್ಮಾನ್ಯ ಶ್ರೀ ರಾಜಾ ಅಮರೇಶ್ವರ ನಾಯಕ, ಶ್ರೀ ಬಸನಗೌಡ ದದ್ದಲ, ಅಧ್ಯಕ್ಷರಾದ ಡಾ.ಶರಣಪ್ಪ ಗೋನಾಳ, ಕಾರ್ಯದರ್ಶಿಗಳಾದ ಶ್ರೀ ದಂಡಪ್ಪ ಬಿರಾದಾರ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀ ದಾನಮ್ಮ ಸುಭಾಷ ಚಂದ್ರ ಕಡಗಂಚಿ, ಕಾರ್ಯದರ್ಶಿಯಾದ ಶ್ರೀಮತಿ ಸುಮಂಗಲಾ ಸಕ್ರಿ ಮತ್ತು ವೇದಿಕೆ ಮೇಲೆ ಆಸೀನರಾದ ಸಮಸ್ತ ಜಾನಪದ ಬಳಗಕ್ಕೆ ಮತ್ತು ಎಲ್ಲಾ ಸದಸ್ಯರುಗಳಿಗೆ ನನ್ನ ನಮಸ್ಕಾರಗಳು.
ನಿಮ್ಮೆಲ್ಲ ಅಭಿಮಾನಕ್ಕೆ ನಾನು ಸದಾ ಚಿರಋಣಿ. ನಿಮ್ಮ ಈ ಅಸಮಾನ್ಯ ಗೌರವ ನೀಡಿದ್ದು ನನಗಲ್ಲ. ನನ್ನ ಸಾಹಿತ್ಯ ಕ್ಷೇತ್ರಕ್ಕೆ ಮತ್ತು ನನ್ನ ಸಂಶೋಧನೆಗೆ ಎಂದು ಅರಿತಿದ್ದೇನೆ. ಜಾನಪದ ಸಾಹಿತ್ಯದಷ್ಟೇ ತತ್ವಪದ ಸಾಹಿತ್ಯ, ವಚನ ಸಾಹಿತ್ಯ ಹಿರಿದೆಂದು ಮನದಟ್ಟು ಮಾಡಿ ತೋರಿಸಿದ್ದೀರಿ. ವಿದ್ವತ್ತಿಗೆ ಗೌರವಿಸಿ ಮಾರ್ಗದರ್ಶಿಕಳಾಗಿ ನನ್ನನ್ನು ಎತ್ತರಕ್ಕೆ ನಿಲ್ಲಿಸಿದ್ದೀರಿ. ನನ್ನ ಜಿಲ್ಲೆಯ ಜಾನಪದ ಕ್ಷೇತ್ರದ ಜವಾಬ್ದಾರಿಯನ್ನು ನನಗೆ ವಹಿಸಿದ್ದೀರಿ. ನನಗೆ ಅಧಿಕ ಸಂತೋಷ ತಂದಿದೆ.
ನನ್ನ ನಾಡು ಎಡೆದೊರೆ ನಾಡು. ದೋ ಅಬ್ ಎಂದು ಪ್ರಸಿದ್ಧಿ ಪಡೆದ ಚಿನ್ನದ ನಾಡು. ಪ್ರಾಚೀನ ಕಾಲದಲ್ಲಿ ೨೦೦೦ ಹಳ್ಳಿಗ ಹೊಡೆತನ ಹೊಂದಿದ್ದ ಈ ನಾಡಿನಲ್ಲಿ ೪೦೦ ಹಳ್ಳಿಗಳ ಕರಡಿಕಲ್, ೩೦೦ ಹಳ್ಳಿಗಳ ಮೊರಟ(ಮಲ್ಲಟ), ೩೦೦ ಹಳ್ಳಿಗಳ ಮೊಸಳೆ ಕಲ್ಲು ಆಡಳಿತ ಭಾಗವಾಗಿದ್ದವು. ರಾಯಚೂರು ಜಿಲ್ಲೆ ನಿರಂತರ ದಾಳಿಗೊಳಗಾದ ಈ ನಾಡಿನ ಜನರು ಅತಂತ್ರರಾಗಿದ್ದರು. ವಿರಕ್ತಿಯೊಳಗೆ ಪ್ರಭುತ್ವವನ್ನು ದಿಕ್ಕರಿಸುವ ಸಶಕ್ತತೆಯನ್ನು ಪಡೆದವರು ಈ ಭಾಗದ ಜನಪದರಾಗಿದ್ದಾರೆ.ಲೌಖಿಕದ ಮೂಲಕ ಅನುಭಾವದ ಪ್ರಜ್ಞೆ ದಕ್ಕಿಸಿ ಕೊಟ್ಟವರು ನನ್ನ ನಾಡಿನ ಜನಪದರು.
ಜಾನಪದ ಎಂಬ ಪರಿಕಲ್ಪನೆ ಜನರ ಒಡನಾಟದ ಜನಜೀವನವದು. ನಮ್ಮ ನಿತ್ಯ ಜೀವನದೊಂದಿಗೆ ಸಮಷ್ಟಿ ಆಚರಣೆಯನ್ನು ಕಟ್ಟಿಕೊಡುವ ವ್ಯವಸ್ಥೆಯೇ ನಮ್ಮ ಜಾನಪದ, ನಮ್ಮ ಸಂಸ್ಕೃತಿ ಮತ್ತು ಸಮಾಜದ ಜನರ ಉತ್ಪತ್ತಿ, ಹಂಚಿಕೆ ನಮ್ಮ ಸಂಸ್ಕೃತಿಯಾಗಿದೆ. ಸಮಾಜದ ಜನರ ಉತ್ಪತ್ತಿ, ಹಂಚಿಕೆ, ಅನುಭೋಗ, ಆಹಾರ, ಉಡುಪು, ವಸತಿ, ಆರ್ಥಿಕ ಚಟುವಟಿಕೆಗಳ ಜೊತೆ ಸಾಂಸ್ಕೃತಿಕವಾಗಿ ಗುರುತಿಸಿ ಎಚ್ಚರಿಸುತ್ತದೆ. ಜನವಾಣಿ ಬೇರು ಕವಿವಾಣಿ ಹೂ ಎಂಬ ಮಾತು ಜಾನಪದ ಭಾಷೆಯ ಗಟ್ಟಿತನವನ್ನು ಎತ್ತಿ ತೋರಿಸುತ್ತದೆ.
“ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್” ರಚಿತವಾದ ಜಾನಪದವು ನಮ್ಮ ಪ್ರಾಚೀನ ಜನತೆ ಕಾವ್ಯ ರಚಿಸಿದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಆಧುನಿಕ ಬಧುಕಿಗೆ ಪ್ರೇರಣೆಯನ್ನು ಕಲ್ಪಿಸುತ್ತದೆ. ಸಮಾಜ ಸಮ್ಮತಿಸಿದ ಕಲಿಕೆಗಳೆಲ್ಲಾ ನಡವಳಿಕೆಗಳು, ಸಂಸ್ಕೃತಿಯ ಅಂಗವೆಂದು ಪರಿಗಣಿಸುವುದರಿಂದ ಜಾನಪದವು ಸಾಮಾನ್ಯ ಮನಸ್ಸುಗಳ ಸಂಸ್ಕೃತಿಯಾಗಿದೆ.
ಶ್ರಮಜೀವಿಗಳಾದ ನಮ್ಮ ಜನಪದರು ತಮ್ಮ ಆಯಾಸ ಪರಿಹಾರಕ್ಕೋಸ್ಕರ ಅನುಭವ ಮುಕ್ತವಾದ ಜನಪದ, ಜಾನಪದ ಹಾಡುಗಳನ್ನು ರಚಿಸಿದರು. ಗ್ರಾಮ್ಯ ಸಮಾಜದ ಕಷ್ಟ, ನೋವುಗಳಿಗೆ ಸ್ಪಂದಿಸಿ ನೀತಿಯನ್ನೇ ಉಪದೇಶಿಸಿದರು. ಮೌಖಿಕತೆಯೇ ಇವರ ಶುದ್ಧ ಸಾತ್ವಿಕ ಶಕ್ತಿ. ಆದ್ದರಿಂದ ಜಾನಪದವನ್ನು ಬಾಯಿಂದ ಬಾಯಿಗೆ ಹರಿದಾಡಿದ ಸಾಹಿತ್ಯ ಕಂಠಸ್ಥ ಸಾಹಿತ್ಯ ಎಂಬ ಪದಬಳಕೆಯೂ ಇದೆ. ಕವಿರಾಜ ಮಾರ್ಗಕಾರನು ಹೇಳುವಂತೆ “ಕಾವೇರಿಯಿಂದಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೋಳ್” ಎಂಬ ಹೇಳಿಕೆಯಲ್ಲಿ ಒಂದು ನಿರ್ಧಿಷ್ಠ ಪ್ರದೇಶದಲ್ಲಿ ವಾಸ ಮಾಡುವ ಜನರೇ ಜನಪದರು. ಇಂತಹ ಜನ ಸಂಸ್ಕೃತಿ ಅನುಸಂಧಾನಗಳು ಮರು ರೂಪ ಪಡೆದವುಗಳಾಗಿವೆ.
ಬೆಳಗಾಗಿ ನಾನೆದ್ದು ಯರ್ಯಾರ ನೆನೆಯಲಿ ||
ಎಳ್ಳು ಜೀರಿಗೆ ಬೆಳೆಯೋಳೆ | ಭೂಮಿತಾಯಿ ||
ಎದ್ದೊಂದು ಘಳಿಗೆ | ನೆನೆದೇನ ಮಾದೇವ || ೧ ||
ಜನಪದರಿಗೆ ಭೂಮಿಯೇ ಮೊದಲ ತಾಯಿ |
ತಾಯಿ ಭಾವದ ಮೂಲಕ ತನ್ನ ಹೊಟ್ಟೆ ತುಂಬಿಸಿದವಳು, ತನ್ನ ಬಡತನವನ್ನು ನೀಗಿಸಿದವಳು ಈ ಭೂಮಿ ತಾಯಿ ಎಂಬ ಕೃತಜ್ಞತೆ ಆಕೆಯದು.
ನಿನ್ನ ಹೊರತು | ನಾನ್ಯಾರ ನಂಬಿಲ್ಲ |
ನಾ ಮಾಡಿದೆನೆಂಬ | ಆಳವಿಲ್ಲ ಮಲ್ಲಯ್ಯ ||
ನೀ ನಡೆಸು | ಎನ್ನ ಸರುವೆಲ್ಲ || ೨ ||
ಜನಪದ ಸಂಸ್ಕೃತಿಯ ಒಳ ಸೂಕ್ಷ್ಮಗಳು ನಮ್ಮನ್ನು ಸದಾ ಎಚ್ಚರಿಸುತ್ತವೆ. ಜನಪರವಾದ ನೋವು ನಲಿವುಗಳು, ಸೋಲು ಗೆಲುವು, ಎತ್ತರ ಬಿತ್ತರ, ಕಷ್ಟ ಕಾರ್ಪಣ್ಯ ಈ ಎಲ್ಲಾ ಭಾವನೆಗಳು ಅನುಭವದಲ್ಲಿ ಬೆಂದು ಪರಿಶುದ್ಧವಾಗುತ್ತವೆ.
ಜಾನಪದ ಸಮೂಹಕ್ಕೆ ಅನುಗುಣವಾಗಿ ಬೆಳದವುಗಳೆಂದರೆ ಹಾಡು, ಹಸೆ, ಕಥೆ, ಕುಣಿತ ಗಾದೆ, ಒಗಟು ಇವೆಲ್ಲಾ ಗ್ರಾಮ್ಯ ಸಂಸ್ಕೃತಿಯ ಕಥನಗಳಾಗಿವೆ. ಜನಪದರು ಸಾರ್ವಕಾಲಿಕ ಎಚ್ಚರಿಸುವ ವಿಶ್ವಕೋಶವೇ ಜಾನಪದ. ಹೀಗಾಗಿ ನಮ್ಮ ರಾಯಚೂರು ಭಾಗದ ಜಾನಪದ ಸಂಸ್ಕೃತಿ ಧರ್ಮವನ್ನು ಬಿಂಬಿಸಬೇಕಾದ ಈ ಸಂದರ್ಭದಲ್ಲಿ ಜಾನಪದ ಒಡಲಿನ ನೈತಿಕ ಮೌಲ್ಯಗಳು ಬಹಳ ಮುಖ್ಯವಾಗಿರುತ್ತವೆ.
ಕಥೆಗಳು, ಸಂಪ್ರದಾಯಗಳು, ಹಾಡುಗಳು, ಕಥನಾತ್ಮಕ ಲಾವಣಿಗಳು, ಕೆಲಸದ ಹಾಡುಗಳು, ಮಕ್ಕಳ ಹಾಡುಗಳು, ಇವು ಎಲ್ಲವುಗಳನ್ನು ಶಾಬ್ದಿಕ ಜಾನಪದವೆಂದು ಹೇಳಲಾಗುತ್ತದೆ. ಒಂದು ಸಂಸ್ಕೃತಿ ಮತ್ತು ಪರಿಸರವನ್ನು ಹೆಚ್ಚು ಪ್ರೀತಿಸಬೇಕೆಂದರೆ ಆ ಸಂಸ್ಕೃತಿಯ ಪರಿಚಯವಿರಬೇಕು. ಈ ಹಿನ್ನೆಲೆಯಲ್ಲಿ ಜಾನಪದ ಸಂಸ್ಕೃತಿಯ ಪ್ರೇರಣೆ ಶಿಷ್ಟ ಸಾಹಿತ್ಯಕ್ಕೆ ಆಗಿದೆ ಎಂಬುದು ಅಷ್ಟೇ ಸತ್ಯವಾದದ್ದು. ಮೌಖಿಕ ಸಾಹಿತ್ಯದಲ್ಲಿ ತ್ರಿಪದಿಗೆ ಪ್ರಥಮ ಸ್ಥಾನ. ಜನಪದ ಸಂಸ್ಕೃತಿಯನ್ನು ಅವಲೋಕಿಸಬೇಕಾದರೆ ಹಾಡು ಭಾಷೆಯ ನೀತಿಯನ್ನು ಪ್ರೇರೇಪಿಸುತ್ತದೆ.
“ಸಾಧುಗೆ ಸಾಧು ಮಾಧುರ್ಯ್ಯಂಗೆ ಮಾಧುರ್ಯ್ಯಂ
ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ”
ಕಪ್ಪೆ ಅರಭಟ್ಟನ ಶಾಸನ ಭಾಷೆಯನ್ನು ಗಮನಿಸಬೇಕು. ಕಲಿತನದ ಗಂಡು ಮೆಟ್ಟಿನ ನಾಡೆಂದೇ ಪ್ರಸಿದ್ಧಿ ಪಡೆದ ಈ ಭಾಗದ ಜನಪದರು ಕವಿಗಳು ಹೌದು, ಕಲಿಗಳೂ ಹೌದು. ನಮ್ಮ ಭಾಗದ ಮಸ್ಕಿ ಶಾಸನಕ್ಕೆ ಅತ್ಯಂತ ಪ್ರಾಶಸ್ತ್ಯ ವಿದೆ. ದೇವನಾಂ ಪ್ರಿಯ ಎಂಬುವನು ಅಶೋಕನೇ ಎಂದು ಗೊತ್ತಾದದ್ದು ಮಸ್ಕಿಯ ಶಾಸನದಿಂದಲೇ ಆಗಿದೆ. ಒಮ್ಮೆ ಬಿ.ಎಂ.ಶ್ರೀ ಅವರು ರಾಯಚೂರಿಗೆ ಬಂದಾಗ ರಾಯಚೂರಿನ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಜನಪದ ಜನಜೀವನವನ್ನು ಕಂಡು ರಾಯಚೂರು ಕನ್ನಡದ ಕಾಶಿ ಎಂದು ಕರೆದರೆಂದು ಶ್ರೀ ಶಾಂತರಸರು ಒಂದೆಡೆ ಉಲ್ಲೇಖಿಸಿದ್ದಾರೆ.
ನಮ್ಮ ನಾಡಿನ ಸಂಪ್ರದಾಯಗಳನ್ನು ಜನಪದರ ಮೌಖಿಕ ಕಾಲಘಟ್ಟಗಳನ್ನು ಅರಿತುಕೊಳ್ಳಬೇಕಾದರೆ ಆ ನಾಡಿನ ಕಲೆಗಳನ್ನು ಅಧ್ಯಯನ ಮಾಡಬೇಕಾಗಿದೆ. ಈ ದೃಷ್ಟಿಯಿಂದ ನೋಡಿದರೆ ಜಿಲ್ಲೆಯಲ್ಲಿ ಸಾಕಷ್ಟು ಜಾನಪದ ಕಲೆಗಳಿಗೆವೆ, ಸಾಹಿತ್ಯವಿದೆ. ಈ ನೆಲದಲ್ಲಿ ಚಿನ್ನದಷ್ಟೇ ವಿಫುಲವಾದ ಜನಪದ ಕಲೆಗಳ ಕಣಜ ಬತ್ತಿಲ್ಲ. ಆದರೆ ಈ ಭಾಗದ ಜನಪದ ಕಲೆಗಳನ್ನು ಕಾಪಾಡಿಕೊಳ್ಳಲು ವಿಫಲವಾಗಿದ್ದಂತು ಸತ್ಯವಾಗಿದೆ.
ಜನಪದ ಕಲಾವಿದರ ಬಡತನವನ್ನು ಕಂಡೂ ಕಾಣದಂತೆ ಸರ್ಕಾರ ಸಂಘ, ಸಂಸ್ಥೆಗಳು ಕುರುಡಾದದ್ದೂ ನಿಜ. ಆದರೆ ಕೆಲ ಕಲೆಗಳು ಕಣ್ಮರೆಯಾಗಿವೆ. ಇನ್ನೂ ಕೆಲ ಕಲೆಗಳು ಮರೆಯಾಗುತ್ತಿವೆ. ಒಟ್ಟಾರೆ ಆಧುನಿಕತೆಯ ಅಬ್ಬರದಲ್ಲಿ ಈ ಜನಪದ ಕಲೆಗಳು ಅಲಕ್ಷಕ್ಕೆ ಒಳಗಾಗಿವೆ. ನಮ್ಮ ಜನಮಾನಸ ಸಂಸ್ಕೃತಿಯಿಂದ ಜನಪದ ಕಲೆಗಳನ್ನು ಜಾನಪದ ಸಂಪತ್ತನ್ನು ನಾವಿಂದು ಉಳಿಸಿಕೊಳ್ಳಬೇಕಾಗಿದೆ, ರಕ್ಷಿಸಬೇಕಾಗಿದೆ.
ನಮ್ಮ ರಾಯಚೂರು ಭಾಗದಲ್ಲಿ ಮಹಿಳಾ ಜಾನಪದ ಸಮ್ಮೇಳನ ಮಾಡುವ ಉದ್ದೇಶ ಮಹಿಳೆಯರ ಪಾಲಿಗೆ ಬಂದಿದೆ. ಮಹಿಳೆಯರು ಎಚ್ಚರಗೊಳ್ಳಲಿ, ಸಮಾಜಮುಖಿಯಾಗಿ ಚಿಂತನೆ ನಡೆಸಲಿ, ಸಂಘಟನೆ ಮಾಡಲಿ ಎನ್ನುವ ಒಂದು ವಿಚಾರ ಇಟ್ಟುಕೊಂಡಿದ್ದಾರೆ. ಆದರೆ ನಾವು ಇದನ್ನು ಮರೆಯಬಾರದು. ಶರಣರ ದಾಸರ ನಾಡಾದ ಈ ಜಿಲ್ಲೆ ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕರ ವಚನಗಳಲ್ಲಿ ಜನಪದರ ಭಾಷೆಯ ಮಿಡಿತಗಳನ್ನು ನಾವು ಕಂಡಿದ್ದೇವೆ. ನಮ್ಮ ಜೀವನದ ಭಾಗವಾಗಿ ಹುಟ್ಟಿಕೊಂಡಿರುವ ಜನಪದ ಹಾಡು, ಕುಣಿತ, ಕಲೆ, ಕಥೆಗಳಾಗಿವೆ. ಆಧುನಿಕತೆಯ ಆಡಂಬರದಲ್ಲಿ ಜನಪದ ಸಾಹಿತ್ಯ ಬದಲಾವಣೆಯಾದಂತೆ ನಮ್ಮ ವಿಚಾರ ದೃಷ್ಟಿಕೋನಗಳು ಬದಲಾಗಿವೆ.
ಮೊಬೈಲ್, ಇಂಟರ್ನೆಟ್ ಹಾವಳಿಗಳಲ್ಲಿ ನಮ್ಮತನದ ಪ್ರೀತಿ ವಿಶ್ವಾಸ ಆತ್ಮೀಯತೆಗಳನ್ನು ನಾವಿಂದು ಕಳೆದುಕೊಂಡಿದ್ದೇವೆ. ಈ ಮಾಧ್ಯಮಗಳ ಅಬ್ಬರದಲ್ಲಿ ಮಹಿಳೆಯರು, ಹಾಡು, ಹಸೆ, ರಂಗವಲ್ಲಿ, ಕಸೂತಿ ಕಲೆಗಳನ್ನು ಮರೆತಿದ್ದಾರೆ. ಈ ಕಲೆಗಳನ್ನು ಕಲಿಯಲು ಆಸಕ್ತಿಯೂ ಸಹಿತ ನಮ್ಮ ಮಹಿಳೆಯರಿಗೆ ಇಲ್ಲವಾಗಿದೆ. ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಅಡುಗೆ ಮಾಡುವ ಉತ್ಸುಕತೆಯನ್ನೂ ಸಹ ನಮ್ಮ ಮಹಿಳೆಯರು ಉದಾಸೀನ ಮಾಡುತ್ತಿದ್ದಾರೆ.
ನಮ್ಮ ಜನಪದ ಸಂಸ್ಕೃತಿಯನ್ನು ನಾವಿಂದು ಉಳಿಸಿಕೊಂಡು ರಕ್ಷಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲೆಯ ಕಲಾವಿದರಲ್ಲಿ ಈ ರೀತಿಯ ಜಾಗೃತಿ ಮೂಡಿಸುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಾನಪದ ಪರಿಷತ್, ಕರ್ನಾಟಕ ಜಾನಪದ ಪರಿಷತ್ ಮಾಡುತ್ತಿದೆ. ಆದರೆ ನಮ್ಮಲ್ಲಿ ಕನ್ನಡ, ತೆಲುಗು, ಉರ್ದು ಭಾಷೆಗಳ ಸಮನ್ವಯ ನೆಲ ನಮ್ಮದು. ಈ ಭಾಗದ ಪ್ರಖ್ಯಾತ ಸಾಹಿತಿಗಳು ಶ್ರೀ ಸಿದ್ಧಯ್ಯ ಪುರಾಣಿಕರು, ಶ್ರೀ ಶಾಂತರಸರು, ಶ್ರೀ ವಿ.ಎಸ್.ಕಾಂತನವರ, ಶ್ರೀ ಜಂಬಣ್ಣ ಅಮರಚಿಂತರು, ಡಾ.ಬಸವಲಿಂಗ ಸೊಪ್ಪಿಮಠರು, ಡಾ.ಚನ್ನಬಸ್ಸಯ್ಯ ಹಿರೇಮಠರು, ಶ್ರೀ ವೀರಹನುಮಾನರವರು, ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಶ್ರೀಮತಿ ಲಕ್ಷ್ಮೀದೇವಿ ಶಾಸ್ತಿç, ಡಾ.ಮೀನಾಕ್ಷಿ ಖಂಡಿಮಠ, ಡಾ.ಶೀಲಾದಾಸ, ಡಾ.ಮಧುಮತಿ ದೇಶಪಾಂಡೆ, ಡಾ.ರಾಜಶ್ರೀ ಕಲ್ಲೂರಕರ್ ಇವರ ವಿಚಾರ ವಿದ್ವತ್ಧಾರೆಗಳಲ್ಲಿ ನಾವಿಂದು ಮುನ್ನಡೆಯುತ್ತಿದ್ದೇವೆ.
ಇಂತಹ ಮಹಾನ್ ಲೇಖಕರು ನಮ್ಮ ಅಂತರಂಗದ ಕತ್ತಲನ್ನು ಹೊಡೆದೋಡಿಸಿ ಬೆಳೆಸಿದವರು ಇವರಾಗಿದ್ದಾರೆ.
ಈ ಭಾಗದಲ್ಲಿ ಜನಪದರ ಹಾಡುಗಬ್ಬ ಕಾವ್ಯಗಳೆಂದರೆ ಲಕ್ಷ್ಮೀಶನ ಜೈಮಿನಿ ಭಾರತ, ಷಡಕ್ಷರಿ ವಿರುಪಾಕ್ಷಪ್ಪ ಪಂಡಿತರ ಕವಿಗಳ ಕಾವ್ಯಗಳನ್ನು ಜನರು ಕಂಠ ಪಾಠ ಮಾಡುತ್ತಿದ್ದರು. ಜೈಮಿನಿ ಭಾರತ ರಾಜಶೇಖರ ವಿಳಾಸಗಳನ್ನು ಓದದವರೇ ಇಲ್ಲ. ಪ್ರತಿಯೊಬ್ಬ ಮನೆಯ ಹಿರಿಯರು ಈ ಹಾಡುಗಬ್ಬ ಕಾವ್ಯಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಿದ್ದರು. ಮುಸ್ಲಿಂರ ಆಳ್ವಿಕೆಯಲ್ಲಿದ್ದ ನಾವು. ಮುಸ್ಲಿಂರು ಕೂಡ ರಾಜಶೇಖರ ವಿಳಾಸವನ್ನು ಬಗಲಲ್ಲಿ ಇಟ್ಟುಕೊಂಡು ಓದುತ್ತಿದ್ದರು. ಆಸಕ್ತಿಯಿಂದ ಇತರರೊಂದಿಗೆ ಕಾವ್ಯದ ಭಾಗಗಳನ್ನು ಹಂಚಿಕೊಳ್ಳುತ್ತಿದ್ದರು.
ಶಾಂತರಸರು ಒಂದುಕಡೆ ಹೇಳುತ್ತಾರೆ. ಐನೋರ ಶಾಲೆಗಳಲ್ಲಿ ಇವೇ ಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ಓದಿಸುತ್ತಿದ್ದರು. ವಿದ್ಯಾರ್ಥಿ ಸರಿಯಾಗಿ ಓದು ಬರಹ ಬಲ್ಲವನಾದಕೂಡಲೆ ಅವನಿಗೆ ಜೈಮಿನಿ ಭಾರತವನ್ನು ಪ್ರಾರಂಭಿಸುತ್ತಿದ್ದರು. ಜೈಮಿನ ಭಾರತ ಓದಕ್ ಬಂದ್ರೆ ಅವನಿಗೆ ಹೆಣ್ ಕೊಡ್ರಿ ಎಂದು ಹೇಳುತ್ತಿದ್ದರು. ಹೀಗಾಗಿ ಕಂಠಸ್ತ ಸಾಹಿತ್ಯವೆಂದರೆ ಕಾವ್ಯಗಳಾಗಿವೆ ಎಂದು ಗಮನಿಸಬೇಕು.
ಈಗ ಕಾಲ ಬದಲಾಗಿದೆ. ಹಳ್ಳಿಗಾಡಿನ ಕಲೆಗಳು ಅವನತಿಯಲ್ಲಿವೆ. ತಮ್ಮ ಮನಸ್ಸಂತೋಷಕ್ಕಾಗಿ ದೇವರ ಮೇಲಿನ ಭಕ್ತಿ ಪ್ರೀತಿಯು ಕಾರಣವಾಗಿ ದೇವರ ಉತ್ಸವಗಳಲ್ಲಿ, ಜಾತ್ರೆಗಳಲ್ಲಿ ಪ್ರೋತ್ಸಾಹಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಲಿ ಗ್ರಾಮ್ಯ ಬದುಕು ಮತ್ತು ಸಾಹಿತ್ಯ ಪಿಹೆಚ್.ಡಿ. ಪದವಿಗಳಿಗೆ ವಸ್ತುವಾಗುತ್ತಿವೆ. ಸಂಶೋಧನೆಗೆ ಆಕರಗಳಾಗುತ್ತಿವೆ. ಪಾಶ್ಚಿಮಾತ್ಯರು ನಮ್ಮ ಸಂಸ್ಕೃತಿ ಸಾಹಿತ್ಯಗಳಲ್ಲಿ ಆಸಕ್ತಿ ಪಡೆದು ಪಿಹೆಚ್.ಡಿ.ಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.
ಆಕಾಶವಾಣಿ, ದೂರದರ್ಶನ ಕಲಾವಿದರುಗಳಿಗಿಂತ ಇಂದು ಶ್ರೇಷ್ಟಮಟ್ಟದ ಗಾಯಕರು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಅವರನ್ನು ಗುರುತಿಸುವ, ದಾಖಲಿಸುವ ಕೆಲಸ ಜಾನಪದ ಪರಿಷತ್ತುಗಳು ಮಾಡಿದೆ, ಮಾಡುತ್ತಲಿವೆ. ಒಂದುಕಡೆ ಸಂಶೋಧನೆಗೆ ಪ್ರೋತ್ಸಾಹ ನೀಡಬೇಕು. ಇನ್ನೊಂದೆಡೆ ಕಲಾವಿದರ ಸಂಘಟನೆಯನ್ನು ಜಾನಪದ ಅಧ್ಯಯನದ ಆಸಕ್ತರು, ಬರಹಗಾರರು ಮಾಡಬೇಕಾಗಿದೆ.
ಕಡ್ಲಿಯ ಕಲ್ಲಿಗೆ | ನನ್ಯಾರ ಕರಿಸ್ಯಾರ |
ಕಟದ ಮಾಳಿಗಿ | ಮನಿಯಾಳು ||
ಕಟದ ಮಾಳಿಗಿ | ಮನಿಯ ತಂಗೆವ್ವ ||
ಕಡ್ಲಿ ಒಡಿಯಾಕ | ಕರಿಸ್ಯಾಳ
ಉದ್ದಿನ ಕಲ್ಲಿಗೆ | ನನ್ಯಾರ ಕರಿಸ್ಯಾರ ||
ಸುದ್ದಿ ಮಾಳಿಗಿ | ಮನಿಯಾಳ ||
ಸುದ್ದ ಮಾಳಿಗಿ | ಮನಿಯಾಳ ||
ಅಕ್ಕಮ್ಮ ಉದ್ದ | ಬೀಸಾಕ ಕರಿಸ್ಯಾಳ ||
ಜನಪದ ಸಾಹಿತ್ಯವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಜನಪದರ ಮೌಲ್ಯ ಮತ್ತು ಸಂಸ್ಕೃತಿಯನ್ನು ತಿಳಿಸಿ ಕೊಡುವ ಕೆಲಸವನ್ನು ಜನಪದ ಪರಿಷತ್ತು ಮಾಡುತ್ತಲಿದೆ.
ಹಳ್ಳಿಯ ಹಾಡುಗಳು, ಸಂಪ್ರದಾಯದ ಪದಗಳು, ಕೃಷಿ ಹಾಡುಗಳು, ಗ್ರಾಮೀಣ ಹಾಡುಗಳು ಇವೆಲ್ಲಾ ಕಡಿಮೆಯಾಗಿ ಇಂದು ಅಳಿವಿನ ಅಂಚಿನಲ್ಲಿವೆ. ಜಾಗತೀಕರಣ ಬೆಳೆದು ಜನಪದಕ್ಕೆ ದಕ್ಕೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಆದರೆ ವಾಸ್ತವ ಸತ್ಯವದು. ಇಂತಹ ಆಧುನಿಕತೆಯ ಕರಿ ನೆರಳು ವ್ಯಾಪಿಸಿದ ಜಿಲ್ಲೆಯಲ್ಲಿ ಜನಪದ ಸಂಗ್ರಹ ಕಾರ್ಯ ನಡೆಯಬೇಕಾಗಿದೆ. ಜಾನಪದ ಪುರಾಣಗಳು, ಐತಿಹ್ಯಗಳು, ಜನಪದ ಕಥೆ, ಕಾವ್ಯ, ಗಾದೆಗಳು, ಒಗಟುಗಳು, ನಂಬಿಕೆಗಳು ಮುಂತಾದ ಸಮಗ್ರವಾದ ಕೆಲಸಗಳು ಆಗಿಯೇ ಇಲ್ಲ. ಅನೇಕ ಜನಾಂಗೀಯ ಅಧ್ಯಯನಗಳನ್ನು ಇನ್ನೂ ಮಾಡಬೇಕಾಗಿದೆ. ದ್ವಿಭಾಷಾ ಪ್ರಾಂತ ಇದಾಗಿದ್ದರಿಂದ ತೆಲುಗು ಭಾಷೆಯ ಪ್ರೀತಿಯಿಂದ ಕನ್ನಡ ಅಲಕ್ಷ್ಯ ತನಕವೂ ಸಹಿತ ಇಲ್ಲಿದೆ.
ಇದೆಲ್ಲದರ ನಡುವೆ ೧೯೯೫ ರಲ್ಲಿ ನಾನು ಮುನ್ನೂರುಕಾಪು ಜನಾಂಗದ ಸಂಸ್ಕೃತಿ ಮತ್ತು ಸಂಸ್ಕಾರ ಕುರಿತು ಒಂದು ಲೇಖನವನ್ನು ಅಂದು ನಾನೇ ಬರೆದಿದ್ದೆ. ಆದರೆ ಅಂದು ನನಗೆ ಯಾವುದೇ ದಾಖಲಾತಿಗಳು ಇಲ್ಲ. ಕ್ಷೇತ್ರ ಕಾರ್ಯದ ಮೂಲಕ ಮೌಖಿಕತೆಯನ್ನು ಆಧಾರವಾಗಿಟ್ಟುಕೊಂಡು ನಾನು ಈ ಲೇಖನವನ್ನು ಪ್ರಪ್ರಥಮವಾಗಿ ಬರೆದಿದ್ದೆ.
ನಂತರ ಮುನ್ನೂರು ಮುಂಗಾರು ಪುಸ್ತಕ ಶ್ರೀ ರಾಮಣ್ಣ ಹವಳೆ ಮಾಸ್ಟರ್ ಅವರ ಸಂಪಾದಕತ್ವದಿಂದ ಹೊರ ಬಂದಿತು. ರಾಯಚೂರು ಜಿಲ್ಲೆಯ ಸ್ಥಳನಾಮಗಳ ಕುರಿತು ಡಾ.ರಾಜೇಶ್ವರಿ ಹಿರೇಮಠ ರವರು ಮಾಡಿದ್ದಾರೆ. ಜಿಲ್ಲೆಯ ಜನಪದ ಕಥೆಗಳು, ಗಾದೆಗಳು, ಒಗಟುಗಳು, ಜನಪದ ನಂಬಿಕೆಗಳು ಇವುಗಳ ಸಂಗ್ರಹವಾಗಬೇಕಾಗಿದೆ. ಜಿಲ್ಲೆಯ ಜಾತ್ರೆಗಳ ಕುರಿತಾದ ವಿವರಗಳನ್ನು ಸಂಗ್ರಹಿಸಬೇಕಾಗಿದೆ. ಈ ಜಿಲ್ಲೆಗೆ ವಿಶಿಷ್ಟವಾದ ಕೇಳಿಕೆ, ಸಣ್ಣಾಟ, ಬಯಲಾಟ, ಬರ್ರಕಥಾ ಅಲ್ಲದೆ ಉಳಿದ ಕಲೆಗಳಾವವು ಎಂದು ಗುರುತಿಸಿ ದಾಖಲಿಸಬೇಕಾಗಿದೆ.
ರಾಯಚೂರು ಜಿಲ್ಲೆಯ ಭಾಷಾ ಕೊಡುಕೊಳ್ಳುವಿಕೆಯಲ್ಲಿ ತೆಲುಗು ನುಡಿಗಳು, ವಾಗ್ರೂಢಿಗಳು, ನುಡಿಗಟ್ಟುಗಳು, ನುಸುಳಿಕೊಂಡಿರುವ ಸಾಧ್ಯತೆಗಳಿವೆ. ಹೀಗಾಗಿ ಇಲ್ಲಿನ ಜನಪದ ಸಾಹಿತ್ಯವನ್ನು ಸಂಗ್ರಹಿಸುವಾಗ ವಾಕ್ ಸಂಪ್ರದಾಯಗಳನ್ನು ಗುರುತಿಸಬೇಕಾಗುತ್ತದೆ. ಲಾವಣಿ ಗೀತ ಸಂಗ್ರಹಿಸುವಾಗ ಅವುಗಳ ಪೂರ್ವಾಪರ ಬರೆದಿಟ್ಟುಕೊಳ್ಳಬೇಕು. ಸಾಮಾಜಿಕ ಕಟ್ಟುಪಾಡುಗಳಿಗೆ ಸಂಪ್ರದಾಯಗಳಿಗೆ ಹೆಚ್ಚು ಗಮನ ಕೊಡಬೇಕು. ಜನಪದ ಬೈಗಳನ್ನು ಸಂಗ್ರಹಿಸುವಾಗ ಎದುರಾಗಬಹುದಾದ ಸಂಕೋಚ, ಶೀಲ ಅಶ್ಲೀಲದ ಪ್ರಶ್ನೆಗಳ ಅರಿವಿರಬೇಕಾಗುತ್ತದೆ.
ತ್ರಿಭಾಷಾ ಸಂಗಮದಿಂದ ಕೊನೆಗೊಂಡು ಅರಳಿದ ಇಲ್ಲಿಯ ಜನಪದ ಕಲೆಗಳು ಹಾಗೂ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ವಿಫಲರಾಗಿದ್ದೇವೆ. ಕೆಲವು ಕಲೆಗಳು ಈಗಾಗಲೇ ಕಣ್ಮರೆಯಾಗುತ್ತಿವೆ. ಜನಸಂಸ್ಕೃತಿಯ ಬಗ್ಗೆ ಕಾಳಜಿ ಉಳ್ಳವರು, ವಿದ್ಯಾವಂತರು ಉಳಿಸಿಕೊಳ್ಳಬೇಕಾಗಿದೆ ಹಾಗೂ ಬೆಳೆಸಬೇಕಾಗಿದೆ. ಕರ್ನಾಟಕದಲ್ಲಿ ಬರ್ರಕಥೆಯ ಕಲಾ ಪ್ರಕಾರ ನಶಿಸಿ ಹೋಗಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಜಾನಪದ ಕಲಾವಿದೆ ಬರ್ರಕಥಾ ಕಮಲಮ್ಮನವರಿಗೆ ರಾಜ್ಯ ಸರ್ಕಾರವು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಜಾನಪದ ಕಲಾವಿದೆಯಾಗಿ ಹಳ್ಳಿ ವೈದ್ಯೆಯಾಗಿ, ಸೂಲಗಿತ್ತಿಯಾಗಿ ಎಷ್ಟೋ ಮರು ಹುಟ್ಟನ್ನು ನೀಡಿದವರು ಈ ಜಾನಪದ ಕಲಾವಿದೆ ಕಮಲಮ್ಮನವರಾಗಿದ್ದಾರೆ.
ಜಾನಪದ ಸಾಹಿತ್ಯವನ್ನು ಜೀವಂತವಿರಿಸಿದ ಶ್ರೀಎಂ.ಎಸ್.ಲಟ್ಟೆ ಜಾನಪದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ೩೦ ಕೃತಿಗಳನ್ನು ಹೊರತಂದಿದ್ದಾರೆ. ಇವರ ಪರಿಶ್ರಮದಿಂದ ಇಂದು ನಾವೆಲ್ಲಾ ಜನಪದ ಸಾಹಿತ್ಯ, ಶರಣ ಸಾಹಿತ್ಯವನ್ನು ನೋಡುವಂತಾಗಿದೆ. ಶ್ರೀ ಲಟ್ಟೆಯವರು ೨೬೦ ಕವಿಗಳ ಲೇಖನಗಳನ್ನು ಈಗಿನ ಪಿಹೆಚ್.ಡಿ. ವಿದ್ಯಾರ್ಥಿಗಳು ಇವರ ಲೇಖನಗಳ ಕುರಿತು ಅಧ್ಯಯನ ಮಾಡುತ್ತಿದ್ದಾರೆ.
ನಮ್ಮ ಭಾಗದಲ್ಲಿ ಬಂಡಾಯ ಸಾಹಿತ್ಯ ಬೆಳೆದಷ್ಟು ಜಾನಪದ ಸಾಹಿತ್ಯ, ತತ್ವಪದ ಸಾಹಿತ್ಯ ಬೆಳೆಯಲೇ ಇಲ್ಲ. ವಚನ ಸಾಹಿತ್ಯದ ಅಧ್ಯಯನಗಳಾಗಿವೆ. ಜನಮಾನಸ ಸಂಪರ್ಕಕ್ಕೆ ಶರಣ ಸಾಹಿತ್ಯ ದೂರವೇ ಆಗಿದೆ.
ಜಿಲ್ಲೆಯ ಸೂಫಿಗಳು, ಯೋಗಿಗಳು, ಅನುಭಾವಿಗಳು, ಜನಪದ ಹಾಡುಗಾರರು, ತತ್ವಪದ ಕಾರರು, ಜನಮಾನಸದಲ್ಲಿ ಮೂಡಿಸಿದ ಈ ವಿರಕ್ತಿಯು ವೈರಾಗ್ಯವಾಗಿ ಸ್ವೀಕರಿಸಿದವರು ಅಲ್ಲ. ಅಂದರೆ ಪ್ರಪಂಚದ ಮೇಲೆ ಅತಿಯಾದ ವ್ಯಾಮೋಹ ಇಟ್ಟುಕೊಳ್ಳಬಾರದು ಎಂದು ನಂಬಿದ್ದರು. ಅಂದು ನಾಡಿನ ಮೇಲಾಗುವ ನಿರಂತರ ದಾಳಿಗಳಿಂದ ಜನಸಮೂಹ ಕಂಗೆಟ್ಟಿತ್ತು. ಸಮಾಜದಲ್ಲಿ ಅನಾಯಕತ್ವ ಕ್ಷಾಮ, ಸಾಂಕ್ರಾಮಿಕ ರೋಗಗಳಿಂದ ಬೇಸತ್ತ ಈ ಭಾಗದ ಜನರು ಈ ನಿಲುವಿಗೆ ಜನಸಾಮಾನ್ಯರನ್ನು ಪರಿವರ್ತಿಸಲು ಸಂತರಿಂದ, ಜನಪದರಿಂದ ಮಾತ್ರ ಸಾಧ್ಯವಾಯಿತು. ಸಾಮಾಜದಲ್ಲಿ ಭೇದವೆಣಿಸದೆ ಸರಳ ಮಾರ್ಗವನ್ನು ತಿಳಿಸಿದರು. ದುಗುಡಗೊಂಡ ಮನಸ್ಸುಗಳಿಗೆ ನೆಮ್ಮದಿಯನ್ನು ನೀಡಲು ಶಕ್ತರಾದರು. ತಮ್ಮ ದಣಿದ ಮನಗಳಿಗೆ ಜನಪದ ಹಾಡುಗಳನ್ನು ಹಾಡುತ್ತಾ, ದುಗುಡ ಸಮಾಜವನ್ನು ತಿದ್ದಿದವರು ಈ ಭಾಗದವರು. ಆರ್ಥಿಕತೆಯ ದೃಷ್ಟಾಂತಗಳನ್ನು ನಮ್ಮ ಜಾನಪದರು ಎಷ್ಟು ಸಲೀಸಾಗಿ ಸೊಗಸಾಗಿ ಹಾಡನ್ನು ಕಟ್ಟಿ ಅಭಿಮಾನಿಸಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ದೇವದುರ್ಗ ತಾಲೂಕಿನ ಸೋಬಾನೆ ಹಾಡುಗಾರ್ತಿ ದಂಡಮ್ಮ ಅಕ್ಕರಕಿ ಇವರಿಗೆ ಸೋಬಾನ ಚಿಕ್ಕಮ್ಮ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ಕಾಳಮ್ಮ ಛಲುವಾದಿ ಇವರಿಗೆ ಜಾನಪದ ಅಕಾಡೆಮಿಯ ಪ್ರಶಸ್ತಿ ಕೂಡಾ ಲಭಿಸಿದೆ. ಜಾನಪದ ಹಾಡುಗಳಲ್ಲಿ ಸೋಬಾನೆ ಹಾಡುಗಳನ್ನು ಹಾಡುವುದರ ಮೂಲಕ ಪ್ರಸಿದ್ಧಿ ಪಡೆದಿದ್ದರು. ಕನ್ನಡ ಜನಪದ ಕಲೆಗಳು ಪರಸ್ಪರ ಕೊಡುಕೊಳ್ಳುಕೆಗಳಿಂದ ವಿಶಿಷ್ಟ ಸಂಸ್ಕೃತಿ ಇಂದು ತಲೆ ಎತ್ತಿದೆ. ಕನ್ನಡ ಜನಪದ ಕಲೆಗಳಾದ ಬಯಲಾಟ, ಸಣ್ಣಾಟಗಳು ಕಾಣಸಿಗುತ್ತವೆ. ಡಾ.ಬಸವರಾಜ ಪೊಲೀಸ್ ಪಾಟೀಲ್ ರವರ ಕಲ್ಯಾಣ ನಾಡಿನ ಸಣ್ಣಾಟಗಳು, ಜನಪದ ರಂಗಮAಟಪದ ವೇಶಭೂಷಣಗಳು, ಡಾ.ಎಚ್.ಟಿ.ಪೋತೆಯರವರ ಕೆಲವು ದೊಡ್ಡಾಟಗಳ ವಿವೇಚನೆ ಮತ್ತು ಡಾ.ರಾಜಶ್ರೀ ಕಲ್ಲೂರಕರ್ ಅವರ ಹೈದ್ರಾಬಾದ್ ಕರ್ನಾಟಕದ ಬಯಲಾಟಗಳು ಶ್ರೀ ಎನ್.ಹನುಮನಗೌಡರ ಹರಿದಾಸರು ರಚಿಸಿದ ಬಯಲಾಟಗಳು ಈ ಎಲ್ಲಾ ಬಯಲಾಟಗಳ ಮೇಲೆ ನಡೆದ ಜಿಲ್ಲೆಯ ಅಧ್ಯಯನಗಳಾಗಿವೆ ಮತ್ತು ‘ಹೊಸ್ತಿಲು ಒಂದು ಸಾಂಸ್ಕೃತಿಕ ಅಧ್ಯಯನ’ ಕುರಿತು ಶ್ರೀಮತಿ ಸವಿತಾ ಬಡಿಗೇರ ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ. ಮಾಡಿದ್ದಾರೆ. ಡಾ.ಹುಲಿಗಪ್ಪ ಹೆಚ್.ಬುದ್ದಿನ್ನಿ ಇವರು ರಾಯಚೂರು ಜಿಲ್ಲೆಯ ಬಯಲಾಟಗಳ ಕುರಿತು ಪಿಹಚ್.ಡಿ. ಮಾಡಿದ್ದಾರೆ”.
ತೆಲುಗು ಭಾಷೆಯ ಪ್ರಭಾವ ನಿಜಾಮರ ಆಳ್ವಿಕೆಯಿಂದ ರಾಯಚೂರು ಜಿಲ್ಲೆಯ ಜನಪದ ರಂಗಭೂಮಿಯ ಇತಿಹಾಸ, ಲಿಖಿತವಾಗಿ, ಸ್ಪಷ್ಟವಾಗಿ ದಾಖಲಿಸದಿದ್ದರೂ ದಾಸರ ಪದಗಳು ಮತ್ತು ತತ್ವಪದಗಳಿಗೆ ಹೆಸರಾದ ಜಿಲ್ಲೆ ನಮ್ಮದು. ವೃತ್ತಿ ರಂಗಭೂಮಿಗೆ ಶ್ರೀ ಅಮರೇಶ್ವರ ನಾಟ್ಯ ಸಂಘ ಖ್ಯಾತವಾಗಿದೆ. ವಚನಗಾಯನ ರಂಗ ಗೀತೆಗಳ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದವರು. ಪಂಡಿತ್ ಸಿದ್ಧರಾಮ ಜಂಬಲದಿನ್ನಿಯವರು. ಶ್ರೀ ಅಂಬಯ್ಯ ನುಲಿ, ಶ್ರೀ ಸೂಗೂರೇಶ ಅಸ್ಕಿಹಾಳ, ಡಾ.ಶರಣಪ್ಪ ಗೋನಾಳ ಅವರು ಜಿಲ್ಲೆಯ ಜಾನಪದ ಹಾಡಿನ ಪರಂಪರೆಯನ್ನು ಮತ್ತು ಜನಪದ ರಂಗ ಭೂಮಿಯನ್ನು ಗಟ್ಟಿಗೊಳಿಸಿದ್ದಾರೆ.
ಜನಪದ ಸಾಹಿತ್ಯ ಮತ್ತು ಕಲೆ ಎರಡನ್ನೂ ಒಟ್ಟೊಟ್ಟಿಗೆ ನೋಡಬೇಕಾದ ಅನಿವಾರ್ಯತೆ ನಮ್ಮೆಲ್ಲರದ್ದಾಗಿದೆ. ಕಲೆ ಮತ್ತು ಸಾಹಿತ್ಯಗಳು ಜನಪದ ಸಂಸ್ಕೃತಿಯ ನಂಟಿನ ಸಂಬAಧವದು. ಜಾನಪದ ಸಾಹಿತ್ಯ, ಸಂಗೀತ, ಕಲೆ ಇವು ತ್ರಿವೇಣಿ ಸಂಗಮಗಳಾಗಿ ರೂಪಗೊಂಡಿವೆ. ಮುಗ್ದ ಗ್ರಾಮೀಣ ಬದುಕಿನ ಹಾಡು ಭಾಷೆಯ ಅಭಿವ್ಯಕ್ತತೆಯ ಮೂರ್ತ ರೂಪವಾಗಿದೆ. ಜನಪದರ ಹಾಡುಗಳಲ್ಲಿ ಹಲವಾರು ಪ್ರಕಾರಗಳಿವೆ. ಗಮಕ, ಲಾವಣಿ ಹಾಡುಗಳು, ಭಜನೆಯ ಹಾಡುಗಳು, ಗೀಗಿ ಪದಗಳು, ಮದುವೆಯ ಹಾಡುಗಳು, ಸೋಬಾನೆ ಹಾಡುಗಳು, ಜೋಗುಳದ ಹಾಡುಗಳು, ಹಂತಿ ಹಾಡುಗಳು, ಅಂಟಿಕೆ ಪಂಟಿಕೆ ಹಾಡುಗಳು, ಬೀಸುಕಲ್ಲು ಹಾಡುಗಳು, ಸುಗ್ಗಿಯ ಹಾಡುಗಳು, ಕೋಲಾಟದ ಹಾಡುಗಳು, ಡೊಳ್ಳಿನ ಹಾಡುಗಳು, ದುಂದುಬಿ ಹಾಡುಗಳು, ಕಂಬಿಯ ಹಾಡುಗಳು, ಗೊಂದಲಿಗರ ಹಾಡುಗಳು, ಗೊರವರ ಹಾಡುಗಳು, ಜೋಕುಮಾರ ಸ್ವಾಮಿಯ ಹಾಡುಗಳು ಹಬ್ಬದ ಹಾಡುಗಳು. ಇವೆಲ್ಲಾ ಜಾನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ.
ಜನಪದರ ಹಾಡುಗಳೆಂದರೆ ಮುಕ್ತ ಹಾಗೂ ನಿರಾಭರಣತ್ವ ಯಾವುದೇ ಪಾಂಡಿತ್ಯವನ್ನು ಹೊರ ಜಗತ್ತಿಗೆ ತಿಳಿಸಬೇಕೆನ್ನುವ ಹಪಾಹಪಿ ಇರುವುದಿಲ್ಲ.
ಹಲಿಗೆ ಹಿಡಿದಿಲ್ಲ ಬಳಪದಿ ಬರೆದಿಲ್ಲ
ಶ್ರೀ ಗುರುವು ನಮಗೆ ಬರೆಸಿಲ್ಲ – ಕೇಳಿರವ್ವ
ಲೆಕ್ಕಣಿಕೆ ನಮಗೆ ಗೊತ್ತಿಲ್ಲ
ಮುಗ್ದ ಜನಪದರ ವಿಶಾಲ ಜ್ಞಾನದ ಪರಧಿ ಇದಾಗಿದೆ.
ಜನಪದ ಸಾಹಿತ್ಯ ಸಂಗ್ರಹ ಎಂದ ಕೂಡಲೆ ಗೀತೆಗಳ ಕಡೆಗೆ ನಮ್ಮ ಗಮನವಿರುತ್ತದೆ. ಇಷ್ಟಕ್ಕೆ ಸೀಮಿತವಾಗದ ನಮ್ಮ ಭಾಗದಲ್ಲಿ ಕಂಡುಬAದ ಕಥೆಗಳು, ಗಾದೆಳು, ಲಾವಣಿಗಳು, ಒಗಟುಗಳು, ನಂಬಿಕೆಗಳು ಇವುಗಳ ಸಂಗ್ರಹದತ್ತಲೂ ಗಮನ ಕೊಡಬೇಕಾಗಿದೆ. ಲಿಂಗಸೂಗೂರಿನ ಕರಡಕಲ್ ಕೆರೆ ಪ್ರಸಿದ್ಧಿಯನ್ನು ಪಡೆದಿದೆ. ಇದನ್ನು ಕಟ್ಟಿಸಿದಾತ ಬಿಲ್ಲಮರಾಜ ಎಂದು ಹೇಳಿಕೆ ಇದೆ. ಕೆರೆ ನಿಲ್ಲದೇ ಹೋದಾಗ ಬಿಜ್ಜಮ್ಮ ಎಂಬಾಕೆಯನ್ನು ಕೆರೆಗೆ ಹಾರವಾದ ಕಥೆಗಳು, ಜನಪದ ಕಥೆಗಳಲ್ಲಿ ಬರುತ್ತವೆ. ಕೆರೆಗೆ ಹಾರವಾದ ಘಟನೆಯನ್ನು ಕರಡಕಲ್ ಲಿಂಗಸೂಗೂರುಗಳಲ್ಲಿ ಹಾಡುವ ಜನಪದರ ಮಹಿಳೆಯರಿದ್ದಾರೆ. ಇಡೀ ಕಾವ್ಯವನ್ನು ಸಂಗ್ರಹಿಸುವುದು, ಮುದ್ರಿಸುವುದು ಆಗಬೇಕಾಗಿದೆ.
ಹೈದ್ರಾಬಾದ್ ನಿಜಾಮರ ಆಳ್ವಿಕೆಯ ಈ ನಾಡಿನಲ್ಲಿ ಉರ್ದುವಿನೊಂದಿಗೆ ಕನ್ನಡವನ್ನು ರಕ್ಷಿಸಬೇಕಾದ ಈ ಸಂದರ್ಭದಲ್ಲಿ ಸಂಶೋಧನೆಯು ನಿಧಾನ ಗತಿಯಾದದ್ದು ಗಮನಿಸಬೇಕಾಗಿದೆ. ಇಲ್ಲಿಯ ಕವಿಗಳು ಶೀಘ್ರ ಪ್ರಚಾರಕ್ಕೆ ಬರುವ ಕವಿತೆ, ಕಥೆಗಳತ್ತ ವಾಲಿದ್ದೇ ಹೆಚ್ಚು. ಹೀಗಾಗಿ ಸೃಜನ ಕ್ಷೇತ್ರಕ್ಕಿಂತ ಸಂಶೋಧನೆ, ಸಂಪಾದನೆಗೆ ಆದ್ಯತೆ ಕಡಿಮೆಯಾಗಿದೆ. ವೈಭವ ಸಂಸ್ಕೃತಿಯ ಅಬ್ಬರದಲ್ಲಿ ಜನಪದ ಸಂಸ್ಕೃತಿಯನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯ ಡೊಳ್ಳು ಕುಣಿತ, ಮುದಗಲ್ನ ಮೊಹರಂ ಕುಣಿತ, ದೇವಸೂಗೂರಿನ ವೀರಗಾಸೆ, ವೇಶಗಾರರು, ಬುಡುಬುಡುಕೆಯವರು, ತೊಗಲು ಗೊಂಬೆ ಆಟದವರೂ ಇಲ್ಲಿದ್ದಾರೆ. ಕಥೆ ಹೇಳುವವರಿದ್ದಾರೆ, ಹಾಡುವವರಿದ್ದಾರೆ, ಶ್ರೀ ಕೃಷ್ಣ ಪಾರಿಜಾತ ಬರೆದ ಅಪರಾಳ ತಮ್ಮಣ್ಣನ ನೆಲ ನಮ್ಮದು. ಇತ್ತೀಚೆಗೆ ಜನಪದ ಕಲೆಯಾದ ಡೊಳ್ಳು ಕುಣಿತದಲ್ಲಿ ನಮ್ಮ ಜಿಲ್ಲೆಯ ಮಹಿಳೆಯರ ತಂಡ ಖ್ಯಾತಗೊಳ್ಳುತ್ತಿದೆ.
ಕೆರೆಗೆ ಹಾರವಾದ ಜನಪದ ಕಥೆಗಳಲ್ಲಿ ಕಂಡರೆ ಕೋಟೆಯ ಕಟ್ಟಡಕ್ಕೆ ಬಲಿಯಾದವರ ಹೆಸರು ಅಜರಾಮರ ಜಿಲ್ಲೆಯ ರಾಯಚೂರು ಕೋಟೆ ಇತಿಹಾಸ ಪ್ರಸಿದ್ಧವಾದ್ದು. ಕೋಟೆ ಅಂದಾಕ್ಷಣ ರಾಣಿ ರುದ್ರಮ್ಮನ ಕೊಡುಗೆ ನೆನಪಾಗುತ್ತದೆ. ರಾಯಚೂರಿನ ಒಂದನೇ ಸುತ್ತಿನ ಕೋಟೆಗೆ ಬಾಳೆ ಸಂಗಮ್ಮ ನರಬಲಿಯಾಗಿದ್ದಾಳೆ. ಅವಳ ಸ್ಮರಣಾರ್ಥ ಈ ಕೋಟೆಯನ್ನು ಬಾಳಸಂಗಮ್ಮನ ಕೋಟೆ ಎಂದು ಹೇಳಲಾಗುತ್ತದೆ. ಇದೇ ಈಗಿನ ಅಂದ್ರೂನ್ ಖಿಲ್ಲಾ ಎನ್ನುವ ಇದನ್ನು ಕಾಕತೀಯ ರಾಣಿ ರುದ್ರಮ್ಮ ಕಟ್ಟಿಸಿದ್ದು ಎಂದು ಇತಿಹಾಸ ಹೇಳುತ್ತದೆ (ಅದು ಕ್ರಿ.೧೨೯೪).
ನವರಂಗ್ ದರ್ವಾಜವನ್ನು ಎರಡನೇ ಸುತ್ತಿನ ಕೋಟೆ ಎಂದು ಉಲ್ಲೇಖಿಸುತ್ತೇವೆ. ಈ ಕೋಟೆಯನ್ನು ಕೃಷ್ಣದೇವರಾಯನ ಹೆಂಡತಿ ರಾಣಿ ಚಿನ್ನಮಾಂಬೆ ನಿರ್ಮಿಸಿದ್ದಾಳೆ. ಈ ಕೋಟೆಯ ಚಿತ್ರಗಳು ಅನಂತಪುರ ಜಿಲ್ಲೆಯ ಗೋರಂಟಿ ಗ್ರಾಮದ ಗೋವರ್ಧನ ದೇವಾಲಯದ ಶಿಲ್ಪ ಕಲೆಯನ್ನು ಹೋಲುತ್ತವೆ. ಇದನ್ನೇ ರಾಯಚೂರಿನಲ್ಲಿ ಬೇರೂನ್ ಖಿಲ್ಲಾ ಎಂದು ಹೇಳುತ್ತಾರೆ. ಇದರ ಮೂಲ ಹೆಸರು ಬಹರೂನ್ ಖಿಲ್ಲಾ. ಈ ಕೋಟೆಗೆ ಬಸವರೆಡ್ಡಿ ಮಲ್ಲಮ್ಮ ದಂಪತಿಗಳು ನರ ಬಲಿಯಾಗಿದ್ದಾರೆ. ಈ ಕೋಟೆಯ ಎಡ ಮತ್ತು ಬಲ ಭಾಗಗಳಲ್ಲಿ ಶಿಲ್ಪದ ದುರಂತ ಹಾಡನ್ನು ಕಾಣಬಹುದು.
ಒಂದು ಪಟ್ಟಣ ಇಳಿದಾಳ ಎರಡು ಪಟ್ಟಣಕ್ಕೆ ಇಳಿದಾಳ
ಮೂರು ಪಟ್ಟಣಕ್ಕೆ ತಾ ಇಳಿದಾಳ
ಮೂರನೇ ಪಟ್ಟಣಕ್ಕೆ ಇಳಿದಾಗ ಮಲ್ಲಮ್ಮ
ದಬ್ಬಾಸ್ ಆಗ್ಯಾವ ರಾಚೂರು ಕೋಟೆಗಳ
ಗಂಡ ಹೆಂಡರಿಗೆ ಮುಗಿದಾವ ರಾಯಚೂರು ಕ್ಯಾಟೆ
(ಸಂಗ್ರಹ: ಲಕ್ಷ್ಮೀದೇವಿ ಶಾಸ್ತಿç)
ಕೋಟೆಯ ಕಟ್ಟಡಕ್ಕೆ ನರಬಲಿಯ ದುರಂತವನ್ನು ಹೇಳುವ ಜಾನಪದರು ಹಾಡುಗಳ ಮೂಲಕ ಇದನ್ನು ಕಟ್ಟಿದ್ದಾರೆ.
ಶ್ರೀ ಪ್ರಕಾಶ ನಂದಿ ಇವರು ರಾಯಚೂರು ಇತಿಹಾಸವನ್ನು ಬಿಂಬಿಸುವ ಲಾವಣಿ ಹಾಡುಗಾರರಾಗಿದ್ದಾರೆ. ಎರಡು ಸಲ ರಾಜ್ಯ ಪ್ರಶಸ್ತಿ ಮತ್ತು ಗೌರವ ಡಾಕ್ಟರೆಟ್ ಪದವಿಯನ್ನು ಪಡೆದ ಅಪರೂಪದ ಜಾನಪದ ಕಲಾವಿದರು. ೨೦೨೨ ರಲ್ಲಿ ಜಾನಪದ ಅಕಾಡೆಮಿಯ ಪ್ರಶಸ್ತಿ ಸಹಿತ ಇವರಿಗೆ ಲಭಿಸಿದೆ.
ದೇವಸೂಗೂರಿನ ವೀರಗಾಸೆ ನೃತ್ಯದ ಸಂಚಾಲಕರು ಶ್ರೀ ಪ್ರಕಾಶ ನಂದಿಯವರಾಗಿದ್ದಾರೆ. ೧೬ಜನ ಈ ತಂಡದಲ್ಲಿದ್ದಾರೆ. ೧೦ ಜನ ವೀರ ನರ್ತನ ಮಾಡುವ ಜಾನಪದ ಕಲಾಕಾರರಾಗಿದ್ದು, ನರ್ತನದಲ್ಲಿ ಒಲವುಳ್ಳವರಾಗಿದ್ದಾರೆ. ಒಬ್ಬರು ಪ್ರವಚನಕಾರರು, ಇಬ್ಬರು ದಿನ್ನಿ ವಾದ್ಯವನ್ನು ನುಡಿಸುವವರಾಗಿದ್ದಾರೆ. ಈ ವೀರಗಾಸೆ ನೃತ್ಯಕ್ಕೆ ಎರಡುಸಲ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಶ್ರೀ ಸೂಗೂರೇಶ್ವರ ಭಜನಾ ಮಂಡಳಿ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ. ರಾಚಯ್ಯ ಮರುಳ, ಸೂಗಪ್ಪ ಪೂಜಾರಿ ತತ್ವ ಪದಗಳನ್ನು ಮತ್ತು ಭಜನೆಯ ಹಾಡುಗಳನ್ನು ದಣಿವರಿಯದೆ ಹಾಡಿ ಜಿಲ್ಲೆಯ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಜಾನಪದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಈ ತಂಡ ಜನಸಮುದಾಯದಲ್ಲಿ ವಿಶೇಷ ಶಕ್ತಿಯಾಗಿ ಬೆಳೆಯುತ್ತಿದೆ. ರಾಚಯ್ಯ ಮರುಳಾ, ತ್ರಿಪುರಾಂತಯ್ಯ ಮರುಳ, ಪ್ರಕಾಶ ನಂದಿ, ಸುರೇಶ ಮಾನ್ವಿ, ಎಂ.ಶಿಖರೇಶ ಇವರು ಎರಡುಸಲ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಶರಣಪ್ಪ ಗೋನಾಳರವರು ಜಿಲ್ಲೆಯ ಜಾನಪದ ಹಾಡುಗಾರರು. ರಂಗ ಭೂಮಿಯ ಕಲಾವಿದರು, ಆಕಾಶವಾಣಿಯ ಮತ್ತು ದೂರದರ್ಶನದ ಕಲಾವಿದರಾಗಿ ಜಾನಪದ ಕ್ಷೇತ್ರದಲ್ಲಿ ೪೦ ವರ್ಷಗಳ ಸಾಧನೆ ಮಾಡಿದ್ದಾರೆ. ಜಾನಪದ ತತ್ವಪದ, ಭಾವ ಗೀತೆಗಳ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ಜಿಲ್ಲೆ, ರಾಜ್ಯಮಟ್ಟಗಳಲ್ಲಿ ನೀಡಿದ್ದಾರೆ. ಇವರಿಗೆ ಸಂದ ಗೌರವ ಪ್ರಶಸ್ತಿಗಳು: ಮಣಿಪಾಲ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ. ಇಳಕಲ್ ಮಠದಿಂದ ರಾಜ್ಯ ಜಾನಪದ ಕಲಾಶ್ರೀ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಹೀಗೆ ವಿವಿಧ ಸಂಘ ಸಂಸ್ಥೆಗಳಿಂದ ೨೭ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಧ್ವನಿ ಸುರುಳಿಗಳ ಬಿಡುಗಡೆ, ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಸಧ್ಯ ರಾಯಚೂರು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಸಂಘ ಸಂಸ್ಥೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ.
ಮಾನ್ವಿ ತಾಲೂಕಿನವರಾದ ದುರ್ಗಮ್ಮ ಕರಡಿ ಗುಡ್ಡದವರು ಸಾಂಪ್ರದಾಯಿಕ ಹಾಡುಗಳನ್ನು ದಣಿವರೆಯದಿ ಬೆಳಗಿನವರೆಗೆ ಹಾಡುತ್ತಾರೆ. ಇವರು ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಸಾಂತವ್ವ ಮಸ್ಕಿ ಬರ್ರಕಥಾ ಹಾಡುಗಾರ್ತಿ ಮತ್ತು ಶ್ರೀಮತಿ ರಮಾದೇವಿ ಶಂಭೋಜಿ ದಂಪತಿಗಳು ಜನಪದ ಹಾಡುಗಾರಿಕೆಯನ್ನು ಶ್ರೀಮಂತವಾಗಿ ಈ ಭಾಗದಲ್ಲಿ ಬೆಳೆಸಿದವರಾಗಿದ್ದಾರೆ
ಬಸ್ಸಮ್ಮ ಸಿಂಧನೂರಿನವರಾಗಿದ್ದು, ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಜಾನಪದ ಕಲಾವಿದೆ. ಇವರ ಪತಿ ಬಯಲಾಟದ ಕಲಾವಿದರು ಆಗಿದ್ದಾರೆ.
ಕಸಬಾ ಲಿಂಗಸೂಗೂರಿನವರಾದ ದಿ.ವೀರಮ್ಮ ಕಾಡ್ಲೂರು, ಶ್ರೀಮತಿ ಸೂಗಮ್ಮ ಕಾಡ್ಲೂರು ಇವರು ಸುಮಾರು ೨೦೦ ಜಾನಪದ ಹಾಡುಗಳನ್ನು ಹಾಡಿ ದಾಖಲೆ ಮಾಡಿದ್ದಾರೆ. ಅವ್ವಾ ಹಾಡಿದ ಕಾಳಿಂಗಯ್ಯ ರಾಯನ ಹಾಡು, ಇವರ ಮಗನಾದ ಡಾ.ಕೆ.ಶಶಿಕಾಂತ ಅವ್ವ ಹಾಡಿದ ಹಾಡನ್ನು ಸಂಗ್ರಹಿಸಿದ್ದಾರೆ. ೭೦ ಪುಟಗಳ ಜನಪದ ಕಥನ ಪ್ರಸಂಗಗಳಲ್ಲಿ ಇದು ವಿಶೇಷ ಗಮನ ಸೆಳೆದಿದೆ. ಈ ಕೃತಿಗೆ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಜಾನಪದ ಸಿರಿ ಪ್ರಶಸ್ತಿ ಲಭಿಸಿದೆ.
ಹನುಮಂತವ್ವ ಗುಡ್ಡದ ಇವರು ನೀರಲಕೇರಿ ಬಸವಲಿಂಗರ ತತ್ವ ಪದಗಳನ್ನು ಹಾಡಿ ಖ್ಯಾತಿ ಗಳಿಸಿದ್ದಾಳೆ. ದೇವದುರ್ಗದ ಕಾಳಮ್ಮ ಚಲುವಾದಿ ಸಂಪ್ರದಾಯದ ಹಾಡುಗಳನ್ನು ಹೊಸ ಹಳ್ಳಿಯ ಹುಲಿಗಮ್ಮ ಗೀಗಿ ಪದಗಳಿಗೆ ಹೆಸರು ಪಡೆದಿದ್ದಾಳೆ. ದೇವದುರ್ಗದ ಕಾಳಮ್ಮ ಸಾಂಪ್ರದಾಯಕ ಹಾಡುಗಳಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾಳೆ.
ಡಾ.ರಾಜಶ್ರೀ ಇಲ್ಲೂರು ಶ್ರೀ ಸೂಗೂರೇಶ್ವರ ಕುರಿತು ಪಿಹೆಚ್.ಡಿ. ಮಾಡಿದ್ದಾರೆ. ಜಾನಪದ ಹಾಡುಗಳನ್ನು ಸಂಗ್ರಹಿಸಿ ಪುಸ್ತಕವನ್ನು ಹೊರ ತಂದಿದ್ದಾರೆ. ಶ್ರೀಮತಿ ಲಲಿತಾ ಬಸನಗೌಡರ ಜಾನಪದ ಹಾಡುಗಳ ಪುಸ್ತಕ ಪ್ರಕಟವಾಗಿವೆ.
ಶ್ರೀ ಬಸವರಾಜ ಗಸ್ತಿ ಸಿಂಧನೂರು ಇವರಿಗೆ ಯುವ ಸಬಲೀಕರಣ ಕ್ರೀಡಾ ಇಲಾಖೆ ವತಿಯಿಂದ ಜನಪದ ಕಲೆಗಳಿಗೋಸ್ಕರ ಪ್ರಶಸ್ತಿಯನ್ನು ಕೊಟ್ಟಿದ್ದಾರೆ. ಶ್ರೀ ರುದ್ರಗೌಡ ಯುವಕ ಮಂಡಳಿ ಸಿಂಧನೂರು ಇವರು ಪ್ರತಿ ವರ್ಷ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀ ವೀರೇಶ ಯರದಿಹಾಳ ಮತ್ತು ಶ್ರೀಮತಿ ಶಿಲ್ಪಾ ಇವರು ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಶ್ರೀ ಸೂಗಪ್ಪ ಗುಡೇಬಲ್ಲೂರು ಇವರು ತತ್ವಪದಗಳನ್ನು ಹಾಡುವುದರ ಮೂಲಕ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶ್ರೀಮತಿ ಶಾಂತಾ ಕುಲಕರ್ಣಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೆ ಬಸ್ಸಪ್ಪ ಹೆಗ್ಗಡದಿನ್ನಿ ಸಿರವಾರ ತಾಲ್ಲೂಕಿನ ಇವರು ೬ ವಾದ್ಯಗಳನ್ನು ಒಟ್ಟಿಗೆ ನುಡಿಸುವ ಕಲೆ ಉಳ್ಳವರಾಗಿದ್ದಾರೆ.
ಜಿಲ್ಲೆಯ ಜಾನಪದ ಸಾಹಿತ್ಯವು ನಮ್ಮ ಯುವ ಮಕ್ಕಳಿಗೆ ವಿದ್ಯಾರ್ಥಿಗಳಿಗೆ, ಅರಿವಾಗಲಿ, ಎಚ್ಚರಗೊಳ್ಳಲಿ ಎಂಬ ಉದ್ದೇಶದಿಂದ ಜಿಲ್ಲೆಯ ಜಾನಪದ ಸಾಹಿತ್ಯ ಪರಿಷತ್ತು, ಜಾನಪದ ಸಂಸ್ಕೃತಿಯನ್ನು ಬೆಳಸುತ್ತಿದೆ. ನಾಟಕ, ಏಕಾಂತ, ಹಾಡು, ಕುಣಿತ ಯಾವುದೇ ಕಲಾ ಪ್ರಕಾರವಾಗಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಮುನ್ನಡೆಸುವಂತಹ ವಾತಾವರಣವನ್ನು ಜಿಲ್ಲೆಯ ಜಾನಪದ ಪರಿಷತ್ತು ಮಾಡುತ್ತಿದೆ. ನವರಾತ್ರಿ ಉತ್ಸವಗಳಲ್ಲಿ ಈ ಕಲಾ ತಂಡಗಳನ್ನು ಮುಂಚೂಣಿಯಲ್ಲಿಡುವ ಮತ್ತು ಜನರು ಆಕರ್ಷಿಸುವಂತೆ ಸಾಹಿತ್ಯ ಪರಿಷತ್ತಿನ ಡಾ.ಶರಣಪ್ಪ ಗೋನಾಳ, ಡಾ.ದಂಡಪ್ಪ ಬಿರಾದಾರ, ಶ್ರೀಮತಿ ದಾನಮ್ಮ ಸುಭಾಷಚಂದ್ರ ಕಡಗಂಚಿ, ಶ್ರೀಮತಿ ಸುಮಂಲ ಸಕ್ರಿ ಸದಾ ಕಾರ್ಯನಿರತರಾಗಿ ಜಿಲ್ಲೆಯ ಕಲೆಯನ್ನು ಬೆಳಸುವಲ್ಲಿ ಶ್ರಮ ಪಡುತ್ತಿದ್ದಾರೆ.
ರಾಯಚೂರು ಜಿಲ್ಲೆಗೆ ಶರಣರು ಕೊಡುಗೆಗಳು
ಜಿಲ್ಲೆಯ ಶರಣರ ಪರಂಪರೆ ಸಾಹಿತ್ಯಿಕವಾಗಿ ಧಾರ್ಮಿಕವಾಗಿ ಮತ್ತು ಅಧ್ಯಯನಶೀಲವಾಗಿ ಗುರುತಿಸಿಕೊಂಡಿದೆ. ೮ ಜನ ವಚನಕಾರರನ್ನು ಮತ್ತು ನೆಲೆ ನಿಂತ ಸ್ಥಳಗಳನ್ನು ಅಧ್ಯಯನದ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಶರಣರು ಜಾತಿಯ ಎಲ್ಲೆ ಮೀರಿ ಮನುಷ್ಯ ಧರ್ಮದ ಮೂಲಕ ಸಮಾಜ ಮುಖಿಯಾಗಿ ಚಿಂತಿಸಿದವರು ಶರಣರಾಗಿದ್ದರು. ಬ್ರಾಹ್ಮಣನಾದ ಶಂಕರ ದಾಸಿಮಯ್ಯ, ಬಿಬ್ಬಿ ಬಾಚಯ್ಯರು ಯಾವ ಶರಣರಿಗೂ ಕಡಿಮೆಯಿಲ್ಲದಂತೆ ಶರಣ ಧರ್ಮದ ಅನುಭವದ ಎತ್ತರಕ್ಕೇರಿದವಾರಗಿದ್ದರು. ಈ ಭಾಗದ ವಚನಕಾರರು ಕಲ್ಯಾಣ ಕಾಂತ್ರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಶೇಷವಾಗಿ ಗುರುತಿಸಿಕೊಂಡವರಾಗಿದ್ದರು. ಶಂಕರ ದಾಸಿಮಯ್ಯ ವೈದಿಕ ಸಂಪ್ರದಯ ದಿಕ್ಕರಿಸಿ ಶರಣ ಧರ್ಮಕ್ಕೆ ಹತ್ತಿರವಾಗಿದ್ದರು. ಶಿವನಿಂದ ಹಣೆಗಣ್ಣು ಪಡೆದು ಅನ್ಯ ದೈವಗಳ ಪ್ರತಿಮೆಗಳನ್ನು ಸುಟ್ಟುಹಾಕಿದ ಘಟನೆಗಳಿವೆ.
ಗಬ್ಬೂರು ೧೨ನೇ ಶತಮಾನದಲ್ಲಿ ಒಂದು ಪ್ರಸಿದ್ಧ ಅಗ್ರಹಾರ. ಪ್ರಸಾದಿಕಾಯಕದಿಂದ ವಿಭಿನ್ನವಾಗಿ ಗುರುತಿಸಿಕೊಂಡ ಬಿಬ್ಬಿ ಬಾಚಯ್ಯನಾಗಿದ್ದ. ಶರಣರ ಪ್ರಸಾದವನ್ನು ವೈದಿಕರು ಎಂಜಲು ಎಂದು ನಿಂದಿಸಿ ಅವಮಾನಿಸಿದಾಗ ಶರಣರ ಪ್ರಸಾದ ಅವರ ಮನೆಯ ಮೇಲೆ ತೂರಿದಾಗ ಬೆಂಕಿ ಹತ್ತಿಕೊಂಡು ಉರಿದ ಘಟನೆಗಳು ಬಿಬ್ಬಿ ಬಾಚಯ್ಯನ ಜೀವನದಲ್ಲಿ ಕಾಣಲಾಗುತ್ತದೆ. ಇದು ದೇವಸೂಗೂರಿನ ಚನ್ನವೀರರ ಒಡನಾಡಿಯಾಗಿದ್ದವನು ಪ್ರಸಾದ ಕಾಯಕದಲ್ಲಿ ನಿರತನಾಗಿ ಅರ್ಪಣೆ ಕಟ್ಟೆಯ ಮೇಲೆ ಜಂಗಮ ದಾಸೋಹ ಮಾಡುತ್ತಾ ಶರಣ ಧರ್ಮದ ಮೌಲ್ಯಗಳನ್ನು ಎತ್ತರಕ್ಕೆ ಒಯ್ದ ಶರಣ ಮುಂದೆ ಇಲ್ಲಿಯೇ ಐಕ್ಯನಾದ ಎಂಬ ಪ್ರಸ್ತಾಪ ಬರುತ್ತದೆ.
ವೈಚಾರಿಕ ನಿಲುವಿಗೆ ಪ್ರಸಿದ್ಧಳಾದ ಶರಣೆ ಮುಕ್ತಾಯಕ್ಕ. ದೇವದುರ್ಗ ತಾಲೂಕಿನ ಮಸರಕಲ್ಲು ಗ್ರಾಮದ ಜನರು ಅಭಿಮಾನದಿಂದ ಹೇಳುತ್ತಾರೆ ಈ ಗ್ರಾಮದ ಜನರು. ಗೂಗಲ್ ಗ್ರಾಮದಲ್ಲಿ ಅಲ್ಲಮ ಪ್ರಭುವಿನ ಗುಹೆ ಇದೆ. ಮೊಸರ ಕಲ್ಲಿನ ಸಮೀಪದಲ್ಲಿ ಕಾಣುವ ಧಾರಾ ನಗರ ಇಲ್ಲಿ ಮಲ್ಲಯ್ಯ, ಸಿದ್ದಯ್ಯ ಬಸವಣ್ಣನವರ ಗದ್ದುಗೆಗಳು ಇವೆ ಎಂದು ಇಲ್ಲಿಯ ಜನರು ಸ್ಪಷ್ಟತೆಯನ್ನು ಕೊಡುತ್ತಾರೆ. ಮಾಳವ್ವನೇ ಮುಕ್ತಾಯಕ್ಕಳಾಗಿದ್ದು, ಅಜಗಣ್ಣನ ಸಿದ್ದಯ್ಯನೆಂಬ ಸ್ಪಷ್ಟವಾದ ಹೇಳಿಕೆ ಈ ಭಾಗದ ಜನರಲ್ಲಿದೆ. ವೈಚಾರಿಕತೆಗೆ ಮತ್ತು ದಿಟ್ಟ ನಿಲುವಿಗೆ ಜ್ಞಾನ ಮಾರ್ಗ ಪಡೆದ ಮೇರು ಶರಣೆ ಮುಕ್ತಾಯಕ್ಕಳಾಗಿದ್ದಾಳೆ. ಶರಣ ಧರ್ಮದ ಶ್ರೇಷ್ಠ ಮೌಲ್ಯಗಳಲ್ಲಿ ಒಂದಾಗಿ ಕಾಯಕ ಪ್ರಜ್ಞೆಯ ರೂವಾರಿ ನಮ್ಮ ಜಿಲ್ಲೆಯ ಆಯ್ದಕ್ಕಿ ಲಕ್ಕಮ್ಮ.
ಆಯ್ದಕ್ಕಿ ಲಕ್ಕಮ್ಮ ಮಾರಯ್ಯ ದಂಪತಿಗಳು. ಆರ್ಥಿಕತೆಯ ಬಗ್ಗೆ ಈಗಲು ಲಕ್ಕಮ್ಮನ ವಚನಗಳನ್ನು ಓದುಗರು ಮತ್ತು ಭಾಷಣಕಾರರು ಪ್ರಸ್ತಾಪಿಸುತ್ತಾರೆ. ೧೨ನೇ ಶತಮಾನದ ಬಸವಣ್ಣನು ಸ್ಥಾಪಿಸಿದ ಪ್ರಜಾಪ್ರಭುತ್ವದ ಧರ್ಮದ ಆವಿಷ್ಕಾರ ೨೦ನೇ ಶತಮಾನದ ಆವಿಷ್ಕಾರ ಆರ್ಥಿಕತೆಯ ಸಿದ್ಧಾಂತ. ೨೦ನೇ ಶತಮಾನದ ಅವಿಸ್ಮರಣೀಯ ಸೋಜಿಗಳಲ್ಲಿ ಒಂದಾಗಿದೆ. ನೆರೆ ಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲ ಸಂಗಮ ಎಂಬ ಗಟ್ಟಿ ಧ್ವನಿ ಶರಣ ಧರ್ಮದ್ದಾಗಿದೆ. ಒಮ್ಮೆ ಅನುಭಾವ ಗೋಷ್ಠಿಯಲ್ಲಿ ಮಾರಯ್ಯನು ಮೈ ಮರೆತಾಗ ಕಾಯಕ ನಿಂದಿತ್ತು ಹೋಗಯ್ಯ ಎಂಬ ಎಚ್ಚರಿಕೆ ಆಯಗಾರ ವೃತ್ತಿಯ ಒಬ್ಬ ಮಹಿಳೆ ಎತ್ತಿ ತೋರಿದ್ದಾಕೆ ಆಯ್ದಕ್ಕಿ ಲಕ್ಕಮ್ಮ.
ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯರು ತಮ್ಮ ಕೊನೆಯ ಕಾಲವನ್ನು ವಚನ ಸಂರಕ್ಷಣೆಗಾಗಿ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಕಳೆಯುತ್ತಾರೆ. ಈ ದಂಪತಿಗಳು ಆದರ್ಶದ ಕಾಯಕ ನಮ್ಮ ಜಿಲ್ಲೆಯನ್ನು ಗೌರವಿಸುವ ವಚನ ಸಾಹಿತ್ಯದ ಇತಿಹಾಸದಲ್ಲಿ ಧಾಕಲಾತಿ ಮೈಲುಗಲ್ಲಾಗಿದೆ. ಮೊರಟದ ಬಂಕಣ್ಣ (ಸುಂಕದ ಬಂಕಣ್ಣ) ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ. ಸುಂಕದ ವೃತ್ತಿಯ ಜೊತೆಗೆ ಆತ್ಮಜ್ಞಾನ ಹಂಚಿಕೊAಡ ಶರಣ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮಲ್ಲಟ ಗ್ರಾಮದವನು. ಇಲ್ಲಿನ ಶಾಸನಗಳು. ಇದನ್ನು ಮೊರಟ ನಾಡು ಮೊರಟ ಮುನ್ನೂರು ಎಂದು ಉಲ್ಲೇಖಿಸಿದೆ. ೧೦೮ ವಚನಗಳು ಸಮಕಾಲಿನ ಧಾರ್ಮಿಕತೆ, ಆರ್ಥಿಕ ಸಂಸ್ಕೃತಿಯನ್ನು ಬಿಂಬಿಸುತ್ತದೆ.
ಎಲ್ಲರ ಸುಂಕ ಎತ್ತು ತೊತ್ತು
ಬಂಡಿ ಬಲ್ಲೆತ್ತು ಎನ್ನ ಸುಂಕ
ಎಲ್ಲರ ಪರಿಯಲ್ಲ ಕಟ್ಟಿದ
ಕುರುಹಿಂಗೆ ಹಿಡಿದ ವ್ರತ, ನೇಮ
ನಿತ್ಯಕ್ಕೆ ತಪ್ಪಲಿಲ್ಲವೆಂದು ಕೊಟ್ಟ
ಚೀಟಿ ಸಿಕ್ಕಿಸಿದೆ ನಿಮ್ಮಂಗದಲ್ಲಿ
ಸುಂಕದ ಬಂಕಣ್ಣನ ವೃತ್ತಿಯ ಪ್ರಸ್ತಾಪ ಸುಂಕ, ಎತ್ತು, ಬಲ್ಲೆತ್ತು ಪದಬಳಕೆಯ ಪ್ರಸ್ತಾಪಗಳನ್ನ ನೋಡಿದಾಗ ರಾಯಚೂರು ದೇಸೀಯ ಭಾಷೆಯ ಪದಗಳನ್ನು ಗಮನಿಸಬೇಕು.
ಭಕ್ತರಾಗಿ ಕಳುವು ಹಾದರ ಮಿಕ್ಕಾದೊಂದು
ಬೇಡ ಎಂದು ಕೊಟ್ಟ ಚೀಟಿ ವಿಶಿದ್ದ
ಜಗದ ಸುಂಕದೊಡೆಯ ಬಂಕೇಶ್ವರ ಲಿಂಗನು
ಇಲ್ಲಿ ಭಾಷೆಗೆ ಇರುವ ಇನ್ನೊಂದು ಆಯಾಮ ಜನಪದ ನುಡಿಯ ಒಡಲಿನಿಂದ ಬಂದ ವಚನ ಭಾಷೆಯ ವೈವಿದ್ಯತೆ, ಜಿಲ್ಲೆಯ ಸಾಂಸ್ಕೃತಿಕತೆಯ ವರ್ಚಸ್ಸು ಈ ವಚನಗಳಲ್ಲಿ ಅಡಕವಾಗಿದೆ.
ಹುಳಿಯುಮೇಶ್ವರ ಚಿಕ್ಕಯ್ಯ ಸಿಂಧನೂರು ತಾಲೂಕಿನ ದೇವರ ಗುಡಿಯ ಹುಳಿಯುಮೇಶ್ವರ ದೇವಾಲಯದಲ್ಲಿ ಸ್ಥಾನಾಚಾರ್ಯನಾಗಿದ್ದನೆಂಬ ಪ್ರಸ್ತಾಪ ಬರುತ್ತದೆ. ಮೊದಲು ಶೈವನಾಗಿದ್ದು, ನಂತರ ಶರಣ ಧರ್ಮವನ್ನು ಸ್ವೀಕರಿಸಿದ ಘಟನೆಗಳಿವೆ. ಹುಳಿಯುಮೇಶ್ವರ ಅಂಕಿತದಲ್ಲಿ ೧೨ ವಚನಗಳು ಲಭ್ಯವಾಗಿವೆ. ಇವನ ಕಾಯಕ ಕಾಳಾಮುಖ ಆಚಾರ್ಯ. ಹುಳಿಯಮೇಶ್ವರ ಲಿಂಗವೇ ಈತನ ಅಂಕಿತ.
ಅಘ್ರವಣಿ ಹಂಪಯ್ಯನು ಹಂಪೆಯ ವಿರುಪ ಅಂಕಿತದಲ್ಲಿ ನಾಲ್ಕು ವಚನಗಳಿವೆ ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದವನೆಂಬುದು ಇತಿಹಾಸದ ದಾಖಲೆಗಳು ಪ್ರಸ್ತಾಪಿಸುತ್ತವೆ. ಕುಮಾರ ರಾಮ ಸಾಂಗತ್ಯದಲ್ಲಿ ಈ ವಚನಕಾರನ ಪೂರ್ಣ ವಿವರ ಸಿಗುತ್ತದೆ. ರಾಯಚೂರು ಜಿಲ್ಲೆಗೆ ಸೇರಿದ ಈ ಎಲ್ಲಾ ಶರಣರು ಸದಾಚಾರ ಸದ್ವಿಚಾರಗಳನ್ನು ಹುಟ್ಟು ಹಾಕುವುದರ ಮೂಲಕ ಅರಿವಿನ ಹಾದಿಯಲ್ಲಿ ಮುನ್ನಡೆದಿದ್ದಾರೆ.
ಶರಣರ ಧಾರ್ಮಿಕ ವಿವೇಚನೆಯಲ್ಲಿ ಆಧುನಿಕ ಯುಗ ಮನೋಧರ್ಮಕ್ಕೆ ತಕ್ಕಂತೆ ಮೆಚ್ಚುಗೆಯಾಗುವ ಸ್ವತಂತ್ರ ವಿಚಾರ ಶೀಲತೆ. ಸತ್ಯ-ಅಸತ್ಯವನ್ನು ಪ್ರತ್ಯಕ್ಷವಾಗಿ ಪ್ರಾಮಾಣಿಸಿಯಲ್ಲದೆ ನಿಶ್ಚಯವನ್ನು ಅರಿಯಬಾರದು ಎಂಬ ವಿವೇಕ ಚಿಂತನೆ ಶರಣರದ್ದಾಗಿತ್ತು. ಜನಪದ ಸಾಹಿತ್ಯದಂತೆ ವಚನ ಸಾಹಿತ್ಯದ ಮೌಲ್ಯಗಳನ್ನು ಹಳ್ಳಿ ಹಳ್ಳಿಗೆ ತಲುಪಿಸಬೇಕಾದ ಕೆಲಸ ನಮ್ಮ ಕದಳಿ ವೇದಿಕೆಯ ಸಹೋದರಿಯರು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ವಚನ ಸಾಹಿತ್ಯದ ಕೆಲಸ ನಿಬ್ಬೆರಗಾಗುವಷ್ಟು ಲೇಖನಗಳು, ಪುಸ್ತಕಗಳು ಪ್ರಕಟಣೆಗಳು ಹಾಗೂ ಪಿಹೆಚ್.ಡಿ.ಗಳಾಗಿವೆ.
ಜಿಲ್ಲೆಯ ಇತಿಹಾಸ ವಿಫುಲವಾಗಿ ಬೆಳೆಯಲು ಕಾರಣ, ವಚನಗಳಾಗಲಿ, ಜನಪದವಾಗಲಿ, ತತ್ವಪದಗಳಾಗಲಿ, ಏಕತಾರಿಯ ಮೂಲಕ ಸಹಜವಾಗಿ ಹಾಡಬಹುದಾದ ಹಾಡುಗಾರಿಕೆಯನ್ನು ಅಳವಡಿಸಿಕೊಂಡ ಹಾಡುಗಾರರು ಇಲ್ಲಿದ್ದಾರೆ. ಈ ಹಾಡುಗಳು ಜನಪದ, ವಚನಪದ ಹಾಡುಗಾರಿಕೆಯ ಸತ್ವವನ್ನು ಅಳವಡಿಸಿಕೊಂಡ ಅನುಭಾವಿ ಪರಂಪರೆ ನಮ್ಮ ರಾಯಚೂರು ಜಿಲ್ಲೆಯಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಸುಮಾರು ೩೦ ಜನ ತತ್ವಪದಕಾರರನ್ನು ನನ್ನ ಅಧ್ಯಯನಕ್ಕೆ ಅಳವಡಿಸಿಕೊಂಡಿದ್ದೇನೆ. ಜಿಲ್ಲೆಯಲ್ಲಿ ಕಾಣುವ ಹೆಚ್ಚಿನ ತತ್ವಪದಕಾರರು ಕೆಳವರ್ಗದವರಿಂದ ಬಂದವರಾಗಿದ್ದಾರೆ. ಇಲ್ಲಿ ಕಾಣುವ ಸೂಫಿಗಳು, ಆರೂಢರು, ಅವಧೂತರು, ದರ್ವೇಶಿಗಳು, ಸಾಧು-ಸನ್ಯಾಸಿಗಳು, ಬಯಲು ಸಾಧಕರು, ಗುರು ಮಕ್ಕಳು ಇವರೆಲ್ಲಾ ಸಾಮಾಜಿಕ ಹಾಗೂ ಧಾರ್ಮಿಕ ಪರಿಧಿಗಳನ್ನು ಮೀರಿ ನಿಂತವರು. ಹಾಗೆಯೇ ಬದುಕಿ ತೋರಿಸಿ ಅದನ್ನೇ ತಮ್ಮ ಹಾಡುಗಳಲ್ಲಿ ಪ್ರತಿಪಾದಿಸಿದ್ದಾರೆ. ಒಂದು ರೀತಿ ಶೋಷಿತ ಜನಗಳ ತಣ್ಣನೆಯ ಪ್ರತಿಭಟನೆಗಳಾಗಿ ಇವರ ಹಾಡುಗಳು ಹುಟ್ಟಿ ಬಂದಂತವುಗಳು. ಜಿಲ್ಲೆಯ ತತ್ವಪದಕಾರರ ಹಾಡುಗಳಲ್ಲಿ ಮುಖ್ಯವಾಗಿ, ವಿಶಿಷ್ಟವಾಗಿ, ಕಾಣುವ ಸಂಗತಿಯೆಂದರೆ ಪಾರಂಪರಿಕ ಮೌಲ್ಯಗಳ ಅಪವರ್ಗೀಕರಣ, ಗುರುಲಿಂಗ ಜಂಗಮ ಸತಿ-ಪತಿ ಅನುಭಾವ ಮುಂತಾದ ಪಾರಂಪರಿಕ ದಾರ್ಶನಿಕ ಪರಿಕಲ್ಪನೆಯ ನೆಲೆಗಳನ್ನು ಪುನರ್ ವ್ಯಾಖ್ಯಾನಕ್ಕೆ ಗುರಿ ಮಾಡಿದರು.
ಭಕ್ತನು ವ್ರತ ಪ್ರಧಾನವಾಗಿ ಕಾಣುವುದಕ್ಕಿಂತ ಭಿನ್ನವಾಗಿ ಕ್ರಿಯಾ ಪ್ರಧಾನವಾಗಿ ಗುರುತಿಸಿದರು. ಜಿಲ್ಲೆಯ ಒಟ್ಟು ತತ್ವಪದಕಾರರ ಅಭಿವ್ಯಕ್ತಿಯ ನೆಲೆಗಳನ್ನು ಗಮನಿಸಿದಾಗ ಸ್ವರವಚನಿಗಳಿಗಿರುವಂತಹ ನಿರ್ದಿಷ್ಟ ಗುಣಲಕ್ಷಣಗಳು ಹಾಗೂ ಶ್ರೇಷ್ಠತೆ ಪ್ರಧಾನವಾಗಿರತಕ್ಕಂತಹ ರಾಗ ಲಕ್ಷಣಗಳ ಗೊಡವೆ ಇಲ್ಲಿ ಇಲ್ಲ. ಸ್ವರವಚನಕಾರರು ತತ್ವಕ್ಕಾಗಿ ಹಾಡಿದರೆ, ತತ್ವಪದಕಾರರು ಸ್ವ ಸಂತೋಷಕ್ಕಾಗಿ, ಆತ್ಮವಿಮರ್ಶೆಗಾಗಿ ನಿರಾಡಂಬರವಾಗಿ ಹಾಡಿದರು. ಇವು ಏಕತಾರಿಯಂತಹ ಲಯ ಪ್ರಧಾನ ವಾದ್ಯಕ್ಕೆ ಹೆಚ್ಚು ಹೊಂದುವ ನಾದ, ಲಯ ಪ್ರಧಾನ ಹಾಡುಗಳು.
ಇಲ್ಲಿ ಕಂಡುಬರತಕ್ಕಂತಹ ತತ್ವಪದಕಾರರು ಬಹು ಭಾಷೆ ಹಾಗೂ ಭಾಷಾಪರವಾದಂತಹ ಸಾಂಸ್ಕೃತಿಕ ಸಂಕೀರ್ಣತೆಗಳನ್ನು ಮೈಗೂಡಿಸಿಕೊಂಡವರು. ಇವರನ್ನು ಪ್ರಚಲಿತವಾಗಿ ನಿರ್ದಿಷ್ಟ ಅಧ್ಯಯನಗಳ ಮೂಲಕ ವಿವೇಚಿಸಲು ಸಾಧ್ಯವಾಗಲಾರದು. ಭೋಗ ಪ್ರಧಾನವಾದ ಪ್ರಭುತ್ವ ಶಕ್ತಿಗಳ ಮುಂದೆ ವಿರಕ್ತತನವು ದೊಡ್ಡ ಪ್ರತಿಭಟನೆಯೇ ಆಗಿದೆ. ಜಿಲ್ಲೆಯಲ್ಲಿ ಕಂಡುಬರುವ ಕ್ಷಾಮ, ಸಾಂಕ್ರಾಮಿಕ ರೋಗ, ಅರಾಜಕತೆಗಳಿಂದ ಬೇಸತ್ತ ಜನರು ಇವರನ್ನು ಈ ನಿಲುವಿಗೆ ಪರಿವರ್ತಿಸುವುದು ಇಲ್ಲಿಯ ಸಂತರಿAದ ಮಾತ್ರ ಸಾಧ್ಯವಾಯಿತು. ಆತಂಕಗೊಂಡ ಮನಸ್ಸುಗಳಿಗೆ ತಮ್ಮ ಹಾಡುಗಳ ಮೂಲಕ ಸಾಂತ್ವನಗೊಳಿಸಿದರು.
ಇಲ್ಲಿಯ ಸಂತ ಪರಂಪರೆ ದಾರ್ಶನಿಕ ಬೇರುಗಳು ಒಂದು ರೀತಿಯ ಯೋಗದರ್ಶನದಂತೆ ಕಾಣುತ್ತದೆ. ಕ್ರಿಯೆ ಯೋಗ ದರ್ಶನದ ಬಹು ಮುಖ್ಯ ಬಾಗ. ಜಿಲ್ಲೆಯ ಬಹಳಷ್ಟು ತತ್ವಪದಕಾರರು ಗುರುತಿಸಿಕೊಳ್ಳುವುದು, ಕೃಷಿ, ವ್ಯಾಪಾರ, ನೇಕಾರಿಕೆ, ನೌಕರಿ ಹಗ್ಗೆ ಹೆಣೆಯುವ ಮುಂತಾದ ದುಡಿಯುವ ಕೆಲಸಗಳ ಜೊತೆಗೆ ಇವರ ಬಗ್ಗೆ ನಡೆದ ಅಧ್ಯಯನ ಕೂಡ ಹೆಚ್ಚು ವೀರಶೈವೀಕರಣಗೊಂಡ ನೆಲೆಯಾಗಿದ್ದರೂ, ಹಿಂದೂ ಮುಸ್ಲಿಂ ಸೌಹಾರ್ದತೆಯ ಫಲಿತಗಳೆಂದು ಬಿಂಬಿಸಲಾಗಿದೆ. ಕಾರಣ ಸೂಫಿ ಮತ್ತು ಈ ಭಾಗದ ಅನುಭಾವಿಗಳ ಮಧ್ಯೆ ಜನಗಳ ಮಧ್ಯೆ, ನಿರಂತರ ಕೊಡುಕೊಳ್ಳುವಿಕೆಗಳ ನಡೆದಿವೆ. ಬಂದೇನವಾಜನಿಗೆ ಸಿದ್ದಪ್ಪ ಶಿಷ್ಯನಾಗುವುದು, ತಿಪ್ಪಣ್ಣ ತಾತ ಮತ್ತು ರ್ರ ಮಾರೆಪ್ಪನಿಗೆ ಚಂದಾಹುಸೇನ ಶಿಷ್ಯನಾಗುವುದು ಇಂತಹ ತಾತ್ವಿಕ ಹರಿದಾಟಗಳು ಜನಪರಂಪರೆಯ ಒಳಗೆ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಗಳಾಗಿ ಕೆಲಸ ಮಾಡಿವೆ.
ತತ್ವಪದಕಾರರನ್ನು ಹೀಗೆ ಮತ ಧರ್ಮಗಳ ಚೌಕಟ್ಟಿಗೆ ಹೊಂದಿಸಿ ನೋಡುವ ಕ್ರಮಗಳನ್ನು ಅನೇಕ ಅಧ್ಯಯನಗಳು ಅನುಮಾನದಿಂದ ನೋಡಿವೆ. ಅನೇಕ ಅನುಭಾವಿಗಳು ಲಿಂಗಧಾರಣ ವಿರೋಧಿಗಳು ಅಲ್ಲಮನ ಕಾಲದಿಂದ ಈ ಧಾರೆ ಬೇರೆಯಾಗಿಯೇ ಬೆಳೆದು ಬಂದಿದೆ. ತಿಂಥಿಣಿ ಮೌನಪ್ಪಯ್ಯ, ಕೊಡೆಕಲ್ ಬಸವಣ್ಣ, ತೋಂಟದ ಸಿದ್ದಲಿಂಗ ಪರಂಪರೆಯಲ್ಲಿ ಬರುವ ಬೋಳ ಬಸವರು ಇಷ್ಟಲಿಂಗ ವಿರೋಧಿಗಳಾಗಿದ್ದರು. ಇದೊಂದು ಸಂಗತಿಯೆAದರೆ ತತ್ವಪದಕಾರರನ್ನು ಮತಿಯ ಸಾಮರಸ್ಯವಾದಿಗಳೆಂದು ವ್ಯಾಖ್ಯಾನಿಸುವ ನೆಲೆ ಇದು. ಸಾಮರಸ್ಯ ಎನ್ನುವ ಪದ ಹುಟ್ಟಿದ್ದೇ ರಾಷ್ಟಿçÃಯವಾದಿ ಚರಿತ್ರೆಯ ಘಟ್ಟದಲ್ಲಿ. ಇಂತಹ ಕಲ್ಪಿತ ಚೌಕಟ್ಟನ್ನು ಮೀರಿ ಇಲ್ಲಿನ ತತ್ವಪದಕಾರರು ಹಾಗೂ ಜನರು ಉರ್ದು, ಕನ್ನಡ, ಹಿಂದೂ-ಮುಸ್ಲಿಂ ಎನ್ನುವ ಪರಿಕಲ್ಪನೆಯನ್ನು ಬದುಕಿನ ಭಾಗವಾಗಿಸಿಕೊಂಡವರು.
ಜಾನಪದ ಸಾಹಿತ್ಯ, ವಚನ ಸಾಹಿತ್ಯ, ತತ್ವಪದ ಸಾಹಿತ್ಯಗಳು ನಮ್ಮ ಜಿಲ್ಲೆಯ ಬಹುಮುಖಿ ಅಧ್ಯಯನದ ಫಲಿತಗಳಾಗಿವೆ. ಈ ಸಾಹಿತ್ಯವನ್ನು ಗಟ್ಟಿಗೊಳಿಸಬೇಕಾಗಿದೆ. ಪ್ರಕಟವಾದ ಪುಸ್ತಕಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಬರಹಗಾರರ ಕರ್ತವ್ಯವಾಗಿದೆ.
ಎಲ್ಲರಿಗೂ ನನ್ನ ಗೌರವದ ನಮನಗಳು
–ಡಾ.ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು, ರಾಯಚೂರು