ಗುರುಗುಂಟ ಅಮರೇಶ್ವರ ರಥೋತ್ಸವ ಇಂದು
e-ಸುದ್ದಿ ಲಿಂಗಸುಗೂರು
ಕಲ್ಯಾಣ ಕರ್ನಾಟಕ ಭಾಗದ ಅತಿ ದೊಡ್ಡ ಜಾತ್ರೆ ಎಂದೇ ಪ್ರಖ್ಯಾತಿ ಪಡೆದ ಐತಿಹಾಸಿಕ ಲಿಂಗಸುಗೂರು ತಾಲ್ಲೂಕಿನ ಗುರುಗುಂಟ ಶ್ರೀ ಅಮರೇಶ್ವರ ರಥೋತ್ಸವ ಮಂಗಳವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಅದ್ಧೂರಿಯಾಗಿ ಜರುಗಲಿದೆ.
ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಗುರುಗುಂಟ, ಗುಂತಗೋಳ ಯರಡೋಣಾ ,ಹೊನ್ನಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಜಾತ್ರೆಗೆ ಬರುವ ವಾಹನಗಳಿಗೆ ನಿಲುಗಡೆಗೆ ಸಂಚಾರಿ ವ್ಯವಸ್ಥೆ, ಕುಡಿಯ ನೀರು , ಅಲ್ಲದೇ ಆರೋಗ್ಯ ಇಲಾಖೆಯಿಂದ ಮುಂಜಾಗ್ರತ ಕ್ರಮವಾಗಿ ಆರೋಗ್ಯ ಸೇವೆ ಸೇರಿದಂತೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ತಾಲೂಕು ಆಡಳಿತದಿಂದ ಸಕಲ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ.
ವಿವಿಧ ಜಿಲ್ಲೆ ಮತ್ತು ರಾಜ್ಯ ಗಳಿಂದ ಲಕ್ಷಾಂತರ ಭಕ್ತರ ಆಗಮಿಸುತ್ತಾರೆ,ಅಲ್ಲದೆ ಕೆಲವು ಭಕ್ತರು ದೂರದ ಊರುಗಳಿಂದ ಪಾದ ಯಾತ್ರೆ ಮೂಲಕ ಆಗಮಿಸುವುದು ವಿಶೇಷ. 15-20 ದಿನಗಳ ವರೆಗೆ ಜಾತ್ರೆ ನಡೆಯುವುದರಿಂದ ವ್ಯಾಪಾರ ವಹಿವಾಟು ಕೂಡಾ ಚೆನ್ನಾಗಿ ನಡೆಯುತ್ತದೆ.
ಬೆಂಡು-ಬೆತಾಸು ,ಪೂಜಾ ಸಾಮಗ್ರಿಗಳ , ಕೃಷಿ ಪರಿಕರಗಳ , ಮಕ್ಕಳ ಆಟಿಕೆ ಸಾಮಾನುಗಳು ಸೇರಿದಂತೆ ಬಗೆ ಬಗೆಯ ತರಹೆವಾರು ಅಂಗಡಿಗಳನ್ನು ಹಾಕಲಾಗಿದ್ದು ಒಟ್ಟಾರೆಯಾಗಿ ಜಾತ್ರೆಯಂತು ಸಡಗರ ಸಂಭ್ರಮದಿಂದ ಜರುಗಲಿದೆ.