ಕನ್ನಡದ ಕಟ್ಟಾಳು; ಶ್ರೀ ರಾವ್‍ಬಹದ್ದೂರ ಅರಟಾಳ ರುದ್ರಗೌಡರು”

ಕನ್ನಡದ ಕಟ್ಟಾಳು; ಶ್ರೀ ರಾವ್‍ಬಹದ್ದೂರ ಅರಟಾಳ ರುದ್ರಗೌಡರು”

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದ ಆರಂಭದ
ವರ್ಷ, ಅಖಿಲ ಕರ್ನಾಟಕದ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ
ಇತಿಹಾಸದಲ್ಲಿ ರಾವಬಹದ್ದೂರ ರುದ್ರಗೌಡ ಚನ್ನವೀರಗೌಡ
ಅರಟಾಳರದು ಮರೆಯಲಾರದ ಮತ್ತು ಮರೆಯಬಾರದ
ಬಹುದೊಡ್ಡ ಹೆಸರು.

ಮುಲ್ಕೀ ಖಾತೆಯ ಸರಕಾರಿ ಸೇವೆಯಲ್ಲಿ
ಸ್ವಸಾಮಥ್ರ್ಯದಿಂದ ಒಂದೊಂದೇ ಹಂತವನ್ನು ದಾಟಿ ಉನ್ನತ
ಹುದ್ದೆಯನ್ನೇರುತ್ತಾ ತಮ್ಮ ಜೊತೆಗೆ ತಮ್ಮ ಸಮಾಜವನ್ನು
ಸುಂದರಗೊಳಿಸುವಲ್ಲಿ ಪ್ರಗತಿಯತ್ತ ಕೊಂಡೊಯ್ಯುವಲ್ಲಿ
ಮಾಡಿದ ಅವರ ಸಾಧನೆ ಅದ್ಭುತ.
ಅರಟಾಳ ರುದ್ರಗೌಡರು ಲಿಂಗಾಯತ ಸಮಾಜದ ತನ್ಮೂಲಕ
ಕನ್ನಡಿಗರ ಬದುಕಿಗೆ ಭವಿಷ್ಯವನ್ನು ಕಟ್ಟಿ ಕೊಟ್ಟವರು. ಇವರಿಂದ
ಪ್ರಾರಂಭವಾದ ಕನ್ನಡಿಗರ ಆಧುನಿಕ ಶಿಕ್ಷಣದ ಇತಿಹಾಸ
ಬೆಳೆದುನಿಂತದ್ದು ಹೆಮ್ಮರದಂತೆ. ಒಂದು ಸಮುದಾಯದ
ಆತ್ಮವಿಶ್ವಾಸ, ಆತ್ಮಗೌರವ ಬೆಳೆಯುವಂತೆ ಮಾಡಿ, ಅವರ ಭೌತಿಕ, ಸಾಂಸ್ಕøತಿಕ ಮಟ್ಟವನ್ನು ಹೆಚ್ಚಿಸಿದವರು. ರುದ್ರಗೌಡರ ಕಾಲಘಟ್ಟವು ಅವರು ಕಟ್ಟಿಕೊಟ್ಟ ಬದುಕು ಕನ್ನಡಿಗರ ಶೈಕ್ಷಣಿಕ, ಸಾಂಸ್ಕøತಿಕ, ಸಾಮಾಜಿಕ ಚರಿತ್ರೆಯೇ ಸುವರ್ಣಯುಗವಾಗಿದೆ.
ಅರಟಾಳರ ಜೀವನದ ಕಥೆ, ಅದು ಲಿಂಗಾಯತ ಸಮಾಜದ ಸದ್ಯದ ಶೈಕ್ಷಣಿಕ-ಸಾಮಾಜಿಕವಾದ ಉನ್ನತ ಸ್ಥಿತಿಯ ಬದುಕಿನ
ಸಾಧನೆಯಾಗಿದೆ. ಯೋಗ್ಯರಾದ ಕ್ರಿಯಾಶೀಲವುಳ್ಳ,
ಇಚ್ಛಾಶಕ್ತಿಯುಳ್ಳ ಮನುಷ್ಯ ಸಂಕಲ್ಪಿಸಿದ್ದುದನ್ನು ಸಾಧಿಸಬಲ್ಲ
ಎಂಬುದಕ್ಕೆ ಅವರ ಜೀವನ ಅತ್ಯುತ್ತಮ ಉದಾಹರಣೆ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಹತ್ತು ಹಲವಾರು ರಂಗಗಳಲ್ಲಿ ಕಾರ್ಯಸಾಧನೆಯಾಗುವುದು ಸಾಧ್ಯವೇ? ಎನ್ನುವ ಆಶ್ಚರ್ಯದ ಪ್ರಶ್ನೆಗೆ ಅವರ ಬದುಕಿನ ತೆರೆದ ಪುಸ್ತಕದಲ್ಲಿ ನಮಗೆ ಉತ್ತರ ಸಿಗುತ್ತದೆ.

ಎಲ್ಲ ಲಿಂಗಾಯತರ ಭವಿಷ್ಯ ಅದರಲ್ಲಿ ರೂಪಿಸಲ್ಪಟ್ಟಿದೆ. ಅವರ ಜೀವನ ಜ್ಯೋತಿಯ ವೈಚಾರಿಕ ಕಿರಣಗಳ ಬೆಳಕಿನಡಿಯಲ್ಲಿ ಬಾಳುತ್ತಿರುವ ನಮಗೆಲ್ಲರಿಗೂ ಪುರುಷ ಪ್ರಯತ್ನದ ಶಕ್ತಿಯ ಅರಿವುಂಟಾಗುತ್ತದೆ.

ಸುಸಂಸ್ಕøತವಾದ ಸಮಾಜವನ್ನು ನಿರ್ಮಾಣ ಮಾಡುವುದು
ಮಹತ್ತರವಾದ ಹೊಣೆಗಾರಿಕೆಯ ಕೆಲಸ, ಶೈಕ್ಷಣಿಕವಾಗಿ ಆರ್ಥಿಕವಾಗಿ ಎಲ್ಲಕ್ಕಿಂತಲೂ ಹೆಚ್ಚಾಗಿ ಮಾನಸಿಕವಾಗಿ ದುರ್ಬಲರಾದ ಲಿಂಗಾಯತರನ್ನು ಶಿಕ್ಷಣದ ಮೂಲಕ ಮುಂದೆ ತರವಂಥ ಹೊಸದಾರಿ ಹಾಕಿಕೊಟ್ಟರು.
ಹಳ್ಳಿಯ ಬಡರೈತರ ದನಿಯಾಗಿ ಉಸಿರಾಗಿ ಸಹಾಯ ಹಸ್ತ ನೀಡಿದರು. ಆ ದಿಶೆಯಲ್ಲಿ ರುದ್ರಗೌಡರು ಇತಿಹಾಸದ ಪುಟಗಳಲ್ಲಿ
ಅವಿಸ್ಮರಣೀಯರಾಗಿದ್ದಾರೆ. ಅನೇಕ ಎಡರು-ತೊಡರುಗಳ
ಮಧ್ಯದಲ್ಲೂ ಸಮಾಜವನ್ನು ಪುನರುತ್ಥಾನಗೊಳಿಸುವಲ್ಲಿ
ಬದುಕನ್ನೇ ಪ್ರಯೋಗಕ್ಕೆ ಒಳಪಡಿಸಿಕೊಂಡವರು. ಕಷ್ಟಗಳಿಗೆ
ಸವಾಲನ್ನೆಸಗಿ ಬದುಕಿ ಗೆದ್ದುಬಂದವರು.
ರುದ್ರಗೌಡರ ಮೂಲ ಮನೆತನದವರು ಬಿಜಾಪುರ ಜಿಲ್ಲೆಯ
ಕೊರತಿ ಕೊಲ್ಲಾರದ ದೇಸಾಯರಾಗಿದ್ದರು. ಔರಂಗಜೇಬನ ದಾಳಿ
ಮತ್ತು ಬಿಜಾಪುರದ ಉಗ್ರ ಕ್ಷಾಮದಿಂದಾಗಿ ಅಲ್ಲಿಂದ ಕುಂದಗೋಳ ತಾಲೂಕಿನ ಹಿರೇ ಹರಕುಣಿಗೆ ಬಂದರು. ಕಾಲಕ್ರಮದಲ್ಲಿ ಕಸಬಾ ಅರಟಾಳ ಮುಜರೆ, ಮುಸಣಿಕೊಪ್ಪ, ಹಿರೇಕೊಪ್ಪ, ಬೀರವಳ್ಳಿ ಹಾಗೂಹರಕುಣಿ ಈ ಪಂಚಗ್ರಾಮಗಳಿಗೆ ಅಧಿಕಾರಿಯಾಗಿದ್ದರು.

ತಂದೆ ಚೆನ್ನವೀರಗೌಡ, ತಾಯಿ ರುದ್ರಮ್ಮನವರ ಪುತ್ರರಾಗಿ
ರುದ್ರಗೌಡರು 1851ನೇ ಮಾರ್ಚ್ 22ರಂದು ಜನಿಸಿದರು. ಬಾಲ್ಯದಿಂದಲೂ ಬುದ್ಧಿವಂತರಾಗಿ, ಸಮರ್ಥರಾಗಿ ಬೆಳೆದರು.
ಇಂಗ್ಲೀಷ್ ಶಿಕ್ಷಣ ಪಡೆದು ಮುಲ್ಕೀ ಖಾತೆಯಲ್ಲಿ 12 ರೂ ಸಂಬಳದ ಕಾರಕೂನಕಿಯಿಂದ ಪ್ರಾರಂಭವಾದ ಅವರ ಸರಕಾರಿ ವೃತ್ತಿ ಒಂದೊಂದೇ ಹಂತ ಏರುವದರೊಂದಿಗೆ, ಡೆಪ್ಯೂಟಿ ಚಿಟ್ನಿಸ್, ಚಿಟ್ನೀಸ್‍ರಾಗಿ ಮುಂದೆ ಕಮೀಶನರ ದಪ್ತೆದಾರರಾಗಿ ಕೊನೆಗೆ ಪ್ರಾಂತ ಸಾಹೆಬರಾಗಿ, ಅಖಂಡ 38 ವರ್ಷಗಳ ಸೇವೆಯನ್ನು ಧಾರವಾಡ, ಕಾರವಾರ, ವಿಜಾಪುರ, ನಾಸಿಕ, ಬೆಳಗಾವಿ ಜಿಲ್ಲೆಗಳಲ್ಲಿ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಮಾಡಿ, ಸರಕಾರಕ್ಕೂ ಪ್ರಜೆಗಳಿಗೂ ನಡುವಿನ
ಮಧುರ ಕೊಂಡಿಯಾಗಿದ್ದರು.

ಹಳ್ಳಿಗರ ಮೇಲೆ, ರೈತರ ಮೇಲೆ ಆಗುತ್ತಿದ್ದ ಅನ್ಯಾಯವನ್ನು ಹೋಗಲಾಡಿಸುವಲ್ಲಿ ಭ್ರಷ್ಟಾಚಾರವನ್ನು ತೊಡೆದುಹಾಕಿ ರೈತರ ಉಸಿರಾದರು. ಅವರ ಹೋರಾಟದ ಪ್ರಶಂಸೆಯು ಸರಕಾರದ ರೆವೆನ್ಯೂ ಎಡ್‍ಮಿನಿಸ್ಟೇಟಿವ್ಹ್ ರಿಪೋರ್ಟದಲ್ಲಿ ಆಯ್. ಸಿ.ಎಸ್. ಕಲೆಕ್ಟರ್ ಹಾಗೂ ಕಮಿಶನ್‍ರವರಿಂದ
ಬರೆಯಲ್ಪಟ್ಟಿತು.“The entire credit of eradicating corruption from the revenue

ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸಿದ ಸರ್ವಶ್ರೇಯಸ್ಸು
ರಾವಬಹದ್ದೂರ ಆರ್.ಸಿ. ಅರಟಾಳರಿಗೆ ಸಲ್ಲುತ್ತದೆ. ಅದಲ್ಲದೆ
ವೈಸರಾಯರಿಂದ ‘ರಾವ್ ಬಹದ್ದೂರ’ ಎಂಬ ಪದವಿ ಪಡೆದ ಮೊಟ್ಟ ಮೊದಲ ಲಿಂಗಾಯತರಾಗಿದ್ದಾರೆ.
ಬ್ರಿಟಿಷರಿಂದ ‘ಲಿಂಗಾಯತರ ನಾಡು’ ಎಂದೆನಿಸಿಕೊಂಡಿದ್ದ ಕನ್ನಡ
ನಾಡಿನಲ್ಲಿ ವರ್ಣಾಶ್ರಮ ವ್ಯವಸ್ಥೆಯಲ್ಲಿ ಕೃಷಿಕಾಯಕವನ್ನು
ಮಾಡುವ ಈ ಸಮಾಜ ಜನಬಲ, ಧನಬಲ, ಬುದ್ಧಿಬಲ, ಸಂಘಬಲವಿದ್ದರೂ ಜ್ಞಾನಬಲವಿಲ್ಲದೆ ಹೀನಾಯ ಸ್ಥಿತಿಯಲ್ಲಿತ್ತು. ಅದಾಗಲೇ ಆಂಗ್ಲಮಾದರಿ ವಿದ್ಯೆ ಪಡೆದ ಉನ್ನತವರ್ಗದವರು ಅನೇಕ ಸವಲತ್ತುಗಳಿಂದ, ಹಣ ಅಧಿಕಾರಗಳಿಂದ ಮೆರೆಯುತ್ತಿದ್ದರು.

ಇದನ್ನರಿತ ಕೆಲ ವಿದ್ಯಾವಂತ ಲಿಂಗಾಯತ ಮುಖಂಡರು ಶೈಕ್ಷಣಿಕವಾಗಿ ಜನಾಂಗದ ಕಣ್ಣು ತೆರೆಸುವ ಕಾರ್ಯವನ್ನು ಕೈಗೆತ್ತಿಕೊಂಡರು. ಡೆಪ್ಯೂಟಿ ಚನ್ನಬಸಪ್ಪನವರ ಅನ್ನದಾಸೋಹ ಮತ್ತು ಅಕ್ಷರಾಭ್ಯಾಸಗಳು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಳಕು ಮೂಡಿಸಿತು. ಗಿಲಗಂಚಿ ಗುರುಸಿದ್ಧಪ್ಪನವರು. ಅರಟಾಳ ರುದ್ರಗೌಡರು ಆ ನಿಟ್ಟಿನಲ್ಲಿ ಚಿಂತನೆ ನಡೆಸಿ, ಆಯಾ ಊರುಗಳಲ್ಲಿ ಸ್ಥಾನಿಕ ನಿಧಿಗಳನ್ನು ಸಂಗ್ರಹಿಸಿ, ಧಾರಾವಾಡದಲ್ಲಿ ‘ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ’ ಸ್ಥಾಪಿಸುವುದರ
ಮೂಲಕ ‘ಅರ್ಥದಾಸೋಹ’ ಪ್ರಾರಂಭಿಸಿದರು.

ಏಳು ಜನ ಲಿಂಗಾಯತ ಪದವೀಧರ ಯುವಕರು ತಮ್ಮ ಸತ್ಯ-ಪ್ರೇಮ-ಸೇವೆ- ಸ್ವಾರ್ಥತ್ಯಾಗಗಳಿಂದ ‘ಕೆ.ಎಲ್.ಇ. ಸಂಸ್ಥೆ’ ಸ್ಥಾಪಿಸುವುದರ ಮೂಲಕ “ಶಿಕ್ಷಣ ದಾಸೋಹ” ಕೈಕೊಂಡು ಆದರ್ಶಪ್ರಾಯರಾದರು.
ಧರ್ಮಜಾಗೃತಿಯಿಂದ ಸಮಾಜೋನ್ನತಿಯಾಗುವುದೆಂದು,
ಬಗೆದು ಧರ್ಮದ ತತ್ವಗಳ ಬಗೆಗೆ ಸರಿಯಾದ ಕಲ್ಪನೆ
ಉಂಟಾಗುವಂತೆ ಶರಣರ ವಚನಗಳನ್ನು, ಮಠ ಮಾನ್ಯರಲ್ಲಿ
ಹುಳುತಿನ್ನುತ್ತ ಬಿದ್ದಿದ್ದ ತಾಡವಾಲೆ ಗ್ರಂಥಗಳನ್ನು ಸಂಗ್ರಹಿಸಿ
ಹೊರತರುವ ಕಾರ್ಯ ಆರಂಭಿಸಿದರು, ಅದಕ್ಕಾಗಿ “ವೀರಶೈವ
ಗ್ರಂಥಮಾಲೆ” ಎಂಬ ಹೆಸರಿನಿಂದ ಮಾಸಿಕ ಪತ್ರಿಕೆಯನ್ನು
ಹೊರಡಿಸಿದರು. ಅವರ ಸ್ವತಂತ್ರ ಪತ್ರಿಕೆಯ ಕನಸು ಅವರ
ಪ್ರಗತಿಪರ ವಿಚಾರಗಳ ದ್ಯೋತಕವಾಗಿದೆ, ಮುಂದುವರೆದು ಎಲ್ಲ
ಭಾಗದ ಲಿಂಗವಂತರು ಪ್ರತಿವರ್ಷ ಒಂದೆಡೆ ಕಲೆತು ಸಮಾಜದ
ವರ್ತಮಾನ ಹಾಗೂ ಭವಿಷತ್ತಿನ ಬಗೆಗೆ ಆಲೋಚನೆ ಮಾಡಲು ಒಂದು ಪ್ರತಿನಿಧಿಕ ಸಂಸ್ಥೆ ಅಗತ್ಯವಿದೆಯೆಂದು ಮನಗಂಡು “ವೀರಶೈವ ಮಹಾಸಭೆ” ಎನ್ನುವ ಸಂಸ್ಥೆಯನ್ನು ಸ್ಥಾಪಿಸಿರುವುದು, ಅವರಿಗೆ ಸಮಾಜದ ಮೇಲಿರುವ ಕಳಕಳಿ ವ್ಯಕ್ತವಾಗುತ್ತದೆ. ನಿಪ್ಪಾಣಿಯಲ್ಲಿ ಜರುಗಿದ ಏಳನೆಯ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಮಾಡಿದ ಭಾಷಣವು ಅವರ ಧಾರ್ಮಿಕ ಚಿಂತನೆಯ ಫಲಶೃತಿಯಾಗಿದೆ. ಸಮಾಜದ ಜನರ ವ್ಯಾಪಾರ-ಉದ್ದಿಮೆಯ ಅಭಿವೃದ್ಧಿಗೆ ಬ್ಯಾಂಕಿನ ಅವಶ್ಯಕತೆಯನ್ನು ಮನಗಂಡು “ಕೆ.ಸಿ.ಸಿ. ಬ್ಯಾಂಕ್”ನ ಸ್ಥಾಪನೆ ಮಾಡಿದರು.

ಶ್ರೀಯುತ ಎಚ್.ಬಿ. ಮೆಣಸಿನಕಾಯಿಯವರ ಸಹಯೋಗದೊಂದಿಗೆ ಸ್ಥಾಪಿಸಿದ ಬ್ಯಾಂಕ್,
ಬಾಂಬೆ ಸ್ಟೇಟದಲ್ಲಿಯೇ ಪ್ರಥಮದರ್ಜೆ ಬ್ಯಾಂಕ್ ಆಗಿ ನಿಂತಿತು.
ಅವರ ಸರಕಾರಿ ಸೇವೆಯು – ಸಾಮಾಜಿಕ ಸೇವೆಗೆ
ಸೋಪಾನವಾಯಿತು. ಅವರು ಹಳ್ಳಿ ಹಳ್ಳಿಗೆ ಪ್ರವಾಸ ಕೈಕೊಂಡಾಗ
ಪ್ರಜೆಗಳನ್ನು ತುಂಬ ಹತ್ತಿರದಿಂದ ನೋಡುವ ಅವಕಾಶ
ಕೊರಕಿತ್ತು. ಅವರ ಕಷ್ಟಗಳಿಗೆ ಸ್ಪಂದಿಸಿದ ಅರಟಾಳರು ಹಲವಾರು
ನ್ಯಾಯ ತಂಟೆತಕರಾರುಗಳನ್ನು ಪರಿಹರಿಸಿ, ಜನಸಾಮಾನ್ಯರ ಜೀವನ ಶಾಂತಿ ಸುವ್ಯವಸ್ಥಿತವಾಗಿರುವಂತೆ ಎಚ್ಚರಿಕೆ ವಹಿಸಿದ್ದರು.
ನಿರ್ಣಯಗಳನ್ನು ಗೈದರು. ಭ್ರಷ್ಟಾಚಾರವನ್ನು ನಿರ್ಮೂಲನೆ
ಮಾಡುವಲ್ಲಿ ಅತ್ಯಂತ ದಕ್ಷತೆ ಪ್ರಾಮಾಣಿಕತೆಯಿಂದ
ಕಾರ್ಯಗೈದರು. ಅನೇಕ ವತನಿ-ಪ್ರಕರಣಗಳನ್ನು
ಬಗೆಹರಿಸುವಲ್ಲಿ, ಚಚಡಿ ಮತ್ತು ಹಂದಿಗನೂರಿನಂಥ ದೇಸಗತಿಗಳು ಉದ್ಧಾರವಾದವು. ಅವನತಿಗೆ ಇಳಿದಿದ್ದ ಚಚಡಿ ದೇಸಗತಿ ಮನೆತನದ ವಾರಸುದಾರರಾಗಿದ್ದ ವೀರಭದ್ರಪ್ಪ ದೇಸಾಯಿಯವರಿಗೆ ತಮ್ಮ ಮಗಳನ್ನು ಮದುವೆ ಮಾಡಿ ಕೊಡುವುದರ ಮೂಲಕ ಚಚಡಿ ದೇಸಗತಿಗೆ ಬೆಂಗಾವಲಾಗಿಅಭಿವೃದ್ಧಿಗೊಳಿಸಿದರು.

ಗ್ರಾಮಸ್ಥರ ಸುವ್ಯವಸ್ಥಿತ ಬದುಕಿಗಾಗಿ ಹಲವಾರು ಸುಧಾರಣೆಗಳನ್ನು ಕೈಕೊಂಡರು. ಕರೆಮಣ್ಣಿನಬರದ ಪ್ರಸಂಗದಲ್ಲೆಲ್ಲ ಅವರು ತೋರಿದ ಮಾನವೀಯತೆ ಸಂಸ್ಮರಣೀಯ. ಬಡವರ ಬಂಧುವಾಗಿದ್ದ
ಅರಟಾಳರು ಅಭಿನಂದನಾರ್ಹರು. ಬಂಧು ಪ್ರೇಮ
ಅಭಿನಂದನಾರ್ಹವಾದದ್ದು.
ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ಬೊಂಬಾಯಿ ಇಲಾಖೆಯ
ವಿದ್ಯಾಖಾತೆಯಲ್ಲಿ ಪ್ರಮುಖ ಅಧಿಕಾರಿಯಾಗಿದ್ದ ರಸೆಲ್‍ರು 1866-67ರ ವರದಿಯಲ್ಲಿ ಹೇಳುವಂತೆ – ಕನ್ನಡ ನಾಡಿನ ಸಾಮಾನ್ಯ ಜನತೆ, ಒಕ್ಕಲುತನ ಮತ್ತು ವ್ಯಾಪಾರಿವರ್ಗ ಇವರಲ್ಲಿ ಲಿಂಗಾಯತರೇ ಆಗಿರುವರು.

ವಿದ್ಯೆಯಲ್ಲಿ ಆದರೆ ಸರಕಾರಿ ಶಾಲೆಯಲ್ಲಿ ಅವರ
ಭಾಷೆಯಾದ “ಕನ್ನಡಕ್ಕೆ ತಕ್ಕ ಪ್ರೋತ್ಸಾಹವನ್ನು ಕೊಟ್ಟರೆ
ಕ್ರಮೇಣ ನಮ್ಮ ಶಾಲೆಗಳಲ್ಲೆಲ್ಲಾ (ಬಹುಜನಸಮಾಜವಾದುದರಿಂದ)

ಅವರೇ ಬಹು ಸಂಖ್ಯಾತರಾಗುವದರಲ್ಲಿದೆ ಸರಕಾರದ
ಕಛೇರಿಯೊಳಗಿನ ಸ್ಥಾಪನೆಗಳಲ್ಲಿಯೂ ಬ್ರಾಹ್ಮಣರೊಡನೆ
ಸರಿಸಮಾನ ಸ್ಪರ್ಧಿಸಬಹುದೆಂದು ನಾನು ತಿಳಿಯುತ್ತೇನೆ.” ಎಂದಿರುವ ಮಾತಿಗೆ ಅರಟಾಳ ರುದ್ರಗೌಡರು ಕೈಕೊಂಡ
ಮಹತ್ಕಾರ್ಯಗಳು ನಿಜವಾಗಿಯೂ ದೇಶದ ಹಿತಕ್ಕೆ ಕನ್ನಡದ
ಕಟ್ಟುವಿಕೆಗೆ ಹೆಚ್ಚು ಹೆಚ್ಚು ಪೂರಕವಾದವುಗಳು. ಒಂದು
ದೇಶದ ಬಹುಸಂಖ್ಯಾತ ಸಮಾಜದ ಹಿತಾಹಿತಗಳಿಗೂ ನಾಡಿನ
ಸುಖದುಃಖಗಳಿಗೂ ನಿಕಟ ಸಂಬಂಧವುಂಟೆಂದು ಹೇಳಿದ ರಸೆಲ್ಲರ ಮಾತು ಸರ್ವಕಾಲಿಕವಾದುದು.

ಅವರು ಕೈಕೊಂಡ ಸಾಮಾಜಿಕ ಸಾಧನೆಗಳು, ಹಣ
ಸಂಗ್ರಹಿಸುವಲ್ಲಿ ಅರಟಾಳ ರುದ್ರಗೌಡರು ತೋರುವ
ಮುತ್ಸದ್ಧಿತನ ಅದು ಎಲ್ಲರಿಗೂ ಸಾಧ್ಯವಿಲ್ಲ, ಮಹಾತ್ಮಾಗಾಂಧಿ, ಪಂಡಿತ  ಮಾಳವೀಯ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಇವರಿಗೆ ಮಾತ್ರ ಸಂಗ್ರಹಿಸುವ ಸಾಮಥ್ರ್ಯವಿತ್ತು. ಜನಸಾಮಾನ್ಯರಲ್ಲಿ ಪೂಜ್ಯ ಭಾವನೆ
ಉಳ್ಳವರಿಗೆ, ಆದರ – ಗೌರವ ಉಳ್ಳವರಿಗೆ, ಮಾತ್ರ ಇದು
ಸಾಧ್ಯವಾಗುವಂಥದ್ದು ಅವರು ಸಂಗ್ರಹಿಸಿದ ವರ್ಗಣಿಯ ಮೊತ್ತ
ಒಟ್ಟು 25 ಲಕ್ಷ ರೂಪಾಯಿಗಳು. ಕರ್ನಾಟಕದ ಕನ್ನಡದ, ಲಿಂಗಾಯತ ಸಮಾಜದ ಭಾಗ್ಯೋದಯದ ಹರಿಕಾರರು, ಯಾವ ತಾಯ್ನಾಡಿನ ಅನ್ನವನ್ನುಂಡು ಗಾಳಿಯನ್ನು ಉಸಿರಾಡಿ ಬದುಕಿದರೋ ಆ ನುಡಿಗೆ, ಆ ನಾಡಿನ ಸಮಾಜದ
ಸೇವೆಯ ಮೂಲಕ ಋಣವನ್ನು ತೀರಿಸಲು ತಮ್ಮ ಸಮಗ್ರ
ಜೀವನವನ್ನು ಸಮರ್ಪಿಸಿಕೊಂಡರು. ಅಖಂಡ ಎಂಭತ್ತೊಂದು
ವರ್ಷಗಳ ತುಂಬಿದ ಬಾಳನ್ನು ಬದುಕಿ, ಸಾರ್ಥಕವಾದ ಜೀವನವನ್ನು ಜೀವಿಸಿ, ಬಾಳಿನ ಕಣಕಣವನ್ನು, ಬಡವರ ಹಿಂದುಳಿದವರ, ಅಶಿಕ್ಷಿತರ ಶ್ರೇಯಸ್ಸಿಗೆ ಗಂಧದ ಕೊರಡಿನಂತೆ ಸಮೆಸಿ 1932ನೇ ಇಸ್ವಿ ಅಕ್ಟೋಬರ್ 4ನೇ ದಿನಾಂಕದಂದು ಲಿಂಗೈಕ್ಯರಾದರು. ಎಪ್ಪತ್ತು ವರ್ಷದ ವೃದ್ಧಾಪ್ಯದಲ್ಲೂ ದಕ್ಷತೆಯಿಂದ ಉತ್ಸಾಹಿಗಳಾಗಿ ಕರ್ನಾಟಕ
ಕಾಲೇಜು ಸ್ಥಾಪನೆ ಮಾಡಿದರು. ಲಿಂಗಾಯತ ಸಮಾಜ ಮಾಹಿತಿಯ ದಿಕ್ಕನ್ನೆ ಬದಲಿಸಿದರು.
ಸಂತಾನವಿಲ್ಲದೆ ಶಿವಾಧೀನರಾಗಿ ಲಿಂಗವಂತರ ಮಕ್ಕಳೆಲ್ಲರೂ
ತಮ್ಮ ಸಂತಾನವಾಗುವಂತೆ ಇಡೀ ಸಂಪತ್ತನ್ನು ಮಹಾದಾನಗೈದ
ಸಿರಸಂಗಿಯ ಲಿಂಗರಾಜ ಪ್ರಭುಗಳ ದತ್ತಿಗೆ ಬಂದ ವಿಘ್ನಗಳನ್ನು
ಅದರ ವಿರುದ್ಧ ಹೂಡಿದ ವಾಜ್ಯ ಅಂದು ಪ್ರಿ.ವಇ. ಕೌನ್ಸಿಲವರೆಗೂ ಬೆಳೆದು ನಿಂತಾಗ, ಅರಟಾಳದಂಥ ಗಟ್ಟಿಗರು ಸಮಾಜದ ಬೆಂಗಾವಲಾಗಿ ಇರದಿದ್ದರೆ ಯಜಮಾನರ ಆಸೆ ಫಲಿಸದೆ ಹೋಗಬಹುದಿತ್ತೋ ಏನೋ! ಹೋರಾಟದಲ್ಲಿ ಗೆದ್ದು ಶಿರಸಂಗಿ ಟ್ರಸ್ಟ್ ಮೂಲಕ ಲಿಂಗವಂತ ಬಡಮಕ್ಕಳಿಗೆ ನಿರಂತರ ಕಲ್ಯಾಣವಾಗುವಂಥ, ಕೆ.ಎಲ್.ಇ. ಯಂಥ ಬೃಹತ್
ಸಂಸ್ಥೆ ತಲೆಯೆತ್ತಿ ನಿಲ್ಲುವಂತೆ ಮಾಡುವಲ್ಲಿ ಅರಟಾಳರು
ಕಾರಣಕರ್ತರಾದರು.
ಭಾರತೀಯರಲ್ಲಿ ಐತಿಹಾಸಿಕ ಪ್ರಜ್ಞೆ ಅತಿಕಡಿಮೆ ಎನ್ನುವ
ಆರೋಪದ ಮಧ್ಯೆ ಆ ಪ್ರಜ್ಞೆಯನ್ನು ಉಳಿಸಿ ಬೆಳೆಸಿಕೊಂಡ
ರಾವಬಹುದ್ದೂರರು ಸತತ ಅಭ್ಯಾಸಿಗಳು. ಅರಟಾಳರ ಎಲ್ಲ
ಲೇಖನಗಳು ಬಾಂಬೆ ರಾಯಲ್ ಏಶಿಯಾಟಿಕ ಜರ್ನಲಿನಲ್ಲಿ ಪ್ರಕಟಗೊಂಡಿವೆ. ಸ್ವತಃ ಅರಟಾಳರು ಬಾಂಬೆ ರೊಯಲ್ ಏಶಿಯಾಟಿಕ ಸೋಸೈಟಿಯ ಸದಸ್ಯರಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಕಿತ್ತೂರ ಕನ್ನಡ ಶಾಲೆಯ
ನಿವೃತ್ತಿ ಶಿಕ್ಷಕರಾಗಿದ್ದ ಬಸಯ್ಯ ಚೆನ್ನಬಸಯ್ಯ ಹಿರೇಮಠರಿಗೆ
ಟಿಪ್ಪಣಿಗಳನ್ನು ಕೊಟ್ಟು ತಮ್ಮ ಆತ್ಮಚರಿತ್ರೆಯನ್ನು ಬರೆಯಿಸಿದ್ದು
ಅದು ಲಿಂಗವಂತ ಸಮಾಜದ ಅಥವಾ ಒಟ್ಟು ಉತ್ತರ ಕರ್ನಾಟಕದ
ಇತಿಹಾಸವೆನ್ನಬಹುದಾದಷ್ಟು ವಿವರಗಳನ್ನೊಳಗೊಂಡಿದೆ.
ಕನ್ನಡ ನಾಡು, ಕನ್ನಡ ನುಡಿ, ಕನ್ನಡ ಧರ್ಮವಾದ
ಲಿಂಗಾಯತ ಧರ್ಮದ ವಾರಸುದಾರರಾಗಿ ಶ್ರೀ ಅರಟಾಳ
ರುದ್ರಗೌಡರು ಕನ್ನಡದ ಕಟ್ಟಾಳು ಎಂಬ ಮಾತಿಗೆ
ಸಾಕ್ಷಿಯಾಗಿದ್ದಾರೆ. ಎಲ್ಲ ವಿಷಯಗಳಲ್ಲಿ ಮಾದರಿಯಾಗುವಂತೆ,
ಅನುಕರಣೀಯವಾಗುವಂತೆ ಕಾರ್ಯಸಾಧನೆಗೈದರು. ಸಮಾಜ
ನನಗೇನು ಕೊಟ್ಟಿತು ಎನ್ನುವದಕ್ಕಿಂತ ಸಮಾಜಕ್ಕೆ ನಾನೇನು
ಮಾಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದಂತೆ ಬದುಕಿ ಬಾಳಿದವರು
ರುದ್ರಗೌಡರು. ಅವರ ಬದುಕಿನಿಂದ ಇಂದಿನ-ಮುಂದಿನ ಜನಾಂಗ
ಅರಿಯಬೇಕಾದ್ದು, ಕಲಿಯಬೇಕಾದ್ದು ಬಹಳವಿದೆ.
ಶ್ರೇಷ್ಟಪುರುಷರಾದವರು ಜಾತಿಮತಗಳನ್ನು ದಾಟಿ
ಎತ್ತರಕ್ಕೇರುತ್ತಾರೆ.“A self made man in an undying spring of hope, and
coverage and life to the world” ಎನ್ನುವಂತೆ ಎಲ್ಲರ ಬದುಕಿಗೆ ವೈಚಾರಿಕ
ಕಿರಣವಾಗುತ್ತಾರೆ.“The study of the work of Rao Bahadur R. C. Artal (I.S.O) is
the study of the work of a man eminent in the possession of all qualities of head and
heart that go to make a men a fit being in life”. (I.S.O) is
ಹೋರಾಟಮಯವಾದ ಜೀವನದಲ್ಲಿ ಇಚ್ಛಾಶಕ್ತಿಯುಳ್ಳ ಮನುಷ್ಯ ಏನನ್ನಾದರು
ಸಾಧಿಸಬಹುದೆನ್ನುವುದಕ್ಕೆ, ಬದುಕಿನ ಬೆಂಕಿಯಿಂದ ಬೆಳಕನ್ನು
ಪಡೆದ ಅವರ ಜೀವನ ಮುಂದಿನವರಿಗೆ ಮಾದರಿಯಾಗಬಲ್ಲದು.
“ಶ್ರೀ ಅರಟಾಳ ರುದ್ರಗೌಡರು ಲಿಂಗಾಯತ ಎತಿಹಾಸದಲ್ಲಿ
ಮರೆಯಲಾಗದ ಮಹಾಪುರುಷರು ತಮ್ಮ ಕಾಲಾವಧಿಯಲ್ಲಿ
‘ತೇನವಿನಃ ತೃಣಮಪಿನ ಚಲತಿ” ಎಂಬಂತೆ ಲಿಂಗಾಯತ ಸಮಾಜವನ್ನು
ಸೇನಾಪತಿಯಾಗಿ ಸಂರಕ್ಷಿಸಿದ, ತಂದೆಯಾಗಿ ಸಲುಹಿದ ರೀತಿ
ಅತ್ಯಪೂರ್ವವಾಗಿದೆ. ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹೀಗೆ
ಸರ್ವಕ್ಷೇತ್ರಗಳಲ್ಲಿ ಲಿಂಗಾಯತ ಆತ್ಮಗೌರವದಿಂದ ತಲೆಯೆತ್ತಿ
ನಿಲ್ಲುವಂತೆ ಮಾಡಿದ ಇವರು ಆಧುನಿಕ ಲಿಂಗಾಯತ ಸಮಾಜ ನಿರ್ಮಾಣದ
ಶಿಲ್ಪಿಯೇ ಆಗಿದ್ದರು; ವಿರೋಚಿತ ಕಾರ್ಯಗಳನ್ನು ನಿರ್ವಹಿಸುವಲ್ಲಿ
‘ಉಕ್ಕಿನ ಮನುಷ್ಯರು’ ಮತ್ತು “ಕನ್ನಡದ ಕಟ್ಟಾಳು”ಗಳು
ಎನಿಸಿದ್ದಾರೆ. ಇಂತಹ ಪ್ರಾತಃ ಸ್ಮರಣೀಯರ ಬದುಕು ಮುಂದಿನ
ಪೀಳಿಗೆಗೆ ದಾರಿದೀಪವೂ ಹೌದು, ತೋರುಬೆರಳು ಹೌದು ಕಾರಣ ಅಂತವರ
ಸಾಧನೆಗಳನ್ನು ಕುರಿತು ಚಿಂತನ ಮನನ-ಅಧ್ಯಯನ
ಮಾಡುವುದು ಅತ್ಯಂತ ಅವಶ್ಯಕವೂ, ನಮ್ಮೆಲ್ಲರ ಕರ್ತವ್ಯವೂ
ಆಗಿದೆ.

ಡಾ. ವೀಣಾ ಹೂಗಾರ,
ಮುಖ್ಯಸ್ಥರು, ಕನ್ನಡ ವಿಭಾಗ,
ಕೆ.ಎಲ್.ಇ. ಸಂಸ್ಥೆಯ,
ಶ್ರೀ ಮೃತ್ಯುಂಜಯ ಕಲಾ ಹಾಗೂ
ವಾಣಿಜ್ಯ ಮಹಾವಿದ್ಯಾಲಯ,
ಧಾರವಾಡ-580008

Don`t copy text!