ಗಜಲ್
ನನ್ನೋಲವ ಹಾಳೆಯಲಿ ಸಿಹಿನೆನಪು ನೀನಾಗಿ ಬರುವೆಯಾ ಒಮ್ಮೆ
ಕಹಿನೆನಪು ಅಳಿಸುತ್ತ ಸಿಹಿಮಾತ್ರ ಉಳಿಸುತ್ತ ಬರುವೆಯಾ ಒಮ್ಮೆ
ಜೊತೆಯಾಗಿ ಜೀವನದ ಜೋಕಾಲಿ ಆಡುವಾ, ಬೀಳದಂತಿರಿಸು ನನ್ನ
ಹಿತವಾಗಿ ಹೆಜ್ಜೆಯನು ಹಾಕುವಾ ಕಾಲಿಗೆ ಗೆಜ್ಜೆಯನು ತರುವೆಯಾ ಒಮ್ಮೆ
ಭವಸಾಗರದಿ ಈಜುತಾ ಆದಡವ ಸುರಕ್ಷದಿ ಸೇರಿಸು ಬಾ ನನ್ನ
ಧೈರ್ಯವಾ ತುಂಬುತಾ ಭುಜಕೆ ಭುಜವಾಗಿ ನನ್ನೊಡನೆ ಇರುವೆಯಾ ಒಮ್ಮೆ
ಬಾಳ ಹಾದಿಯಲಿ ಮುಳ್ಳುಗಳ ಸರಿಸಿ ಸೌಖ್ಯದಿ ನಡೆಸುಬಾ ನನ್ನ
ಭರವಸೆಯ ತಂಗಾಳಿ ತಂಪಾಗಿ ಬೀಸುತಲಿ ಮರೆಸುವೆಯಾ ಒಮ್ಮೆ
ಮಂದಾರ ಪುಷ್ಪದಿ ಹಂದರವ ಹಾಕಿ ಕೂರಿಸುಬಾ ನನ್ನ
ಚಂದಿರನ ತಂದು ಬಾನಿಂದ ನನಗಾಗಿ ಜಾರುವೆಯಾ ಒಮ್ಮೆ
ನಿನಗಾಗಿ ಕಾದಿಹ ಮುಗ್ಧ ಸವಿಮನವನು ಎಂದಗೂ ನೋಯಿಸದಿರು ನನ್ನ
ಕಂಡ ಕನಸಿಗೆ ರೆಕ್ಕೆ ಕಟ್ಟಿ ನನ್ನೊಡನೆ ಮೇಲೆರಿ ಹಾರುವೆಯಾ ಒಮ್ಮೆ
–ಸವಿತಾ ಮಾಟೂರು ಇಳಕಲ್